Search
  • Follow NativePlanet
Share
» »ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ

By Vijay

ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ ಎತ್ತರದ ಬಾಹುಬಲಿಯ ಪ್ರತಿಮೆಯೂ ಕೂಡ ಧರ್ಮಸ್ಥಳದಲ್ಲಿದೆ. [ಕರ್ನಾಟಕದ ಐದು ಬಾಹಬಲಿ ಪ್ರತಿಮೆಗಳು]

ಸರಿ ಸುಮಾರು 700 ವರ್ಷಗಳಷ್ಟು ಶ್ರೀಮಂತ ಇತಿಹಾಸ ಹೊಂದಿರುವ ಧರ್ಮಸ್ಥಳವು ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ. ಇಲ್ಲಿನ ದೇವಸ್ಥಾನದಲ್ಲಿರುವ ಆರಾಧ್ಯ ದೈವ ಮಂಜುನಾಧ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು ಎಂದು ಹೇಳುತ್ತದೆ ಇಲ್ಲಿನ ಸ್ಥಳ ಪುರಾಣ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದಲ್ಲದೆ, ಭಕ್ತರಿಗೆ ನೈತಿಕ - ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ.

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ


ಧರ್ಮಸ್ಥಳ ಶ್ರೀ ಮಂಜುನಾಥನ ದೇವಸ್ಥಾನದ ಮುಂಭಾಗ
ಚಿತ್ರಕೃಪೆ: Naveenbm

ಧರ್ಮಸ್ಥಳವು ರೋಚಕವಾದ ಹಿನ್ನಿಲೆಯನ್ನು ಹೊಂದಿದೆ. ಅದರ ಅನುಸಾರ, ಹಿಂದೆ ಧರ್ಮಸ್ಥಳವನ್ನು "ಕುಡುಮ" ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಪ್ರಾಂತ್ಯದಲ್ಲಿರುವ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧಾರ್ಮಿಕ ಮನೋಭಾವವುಳ್ಳ ದಂಪತಿಗಳು ವಾಸಿಸುತ್ತಿದ್ದರು. ಹೀಗಿರುವಾಗ ಒಂದೊಮ್ಮೆ ಇವರ ಮನೆಗೆ ನಾಲ್ಕು ಜನ ಅತಿಥಿಗಳು ಬಂದರು. ಬಂದ ಅತಿಥಿಗಳಿಗೆ ಯಾವುದೆ ರೀತಿಯ ಚಿಕ್ಕ ಪುಟ್ಟ ಅನಾನುಕೂಲತೆಗಳೂ ಸಹ ಉಂಟಾಗದ ಹಾಗೆ ದಂಪತಿಗಳು ಅತಿಥಿ ಸತ್ಕಾರ ಮಾಡಿದರು.

ಅದೆ ದಿನ ರಾತ್ರಿಯಲ್ಲಿ ಆ ನಾಲ್ವರು ಅತಿಥಿಗಳು ದೈವದ ರೂಪದ ಮೂಲಕ ಭೀಮಣ್ಣನವರ ಕನಸಿನಲ್ಲಿ ಬಂದು ತಾವು ಇಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ತಿಳಿಸಿದರು. ಅದರಂತೆ ಭೀಮಣ್ಣನವರು ಆ ಮನೆಯನ್ನು ತ್ಯಜಿಸಿ ಆ ನಾಲ್ವರು ದೇವತೆಗಳಿಗೆ ಬಿಟ್ಟು ಕೊಟ್ಟರು ಹಾಗೂ ಅವರ ಅಣತಿಯಂತೆ ದೇವಾಲಯ ನಿರ್ಮಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು. ಆ ನಾಲ್ಕು ದೈವವೆಂದರೆ ಕಾಳರಾಹು - ಪುರುಷ ದೈವ, ಕಳರ್ಕಾಯಿ - ಸ್ತ್ರೀ ದೈವ, ಕುಮಾರಸ್ವಾಮಿ - ಪುರುಷ ದೈವ, ಹಾಗೂ ಕನ್ಯಾಕುಮಾರಿ - ಸ್ತ್ರೀ ದೈವ.

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ


ಧರ್ಮಸ್ಥಳದಲ್ಲಿರುವ ರಥ
ಚಿತ್ರಕೃಪೆ: Gopal Venkatesan

ದಿನ ಕಳೆದಂತೆ ಅರ್ಚಕರು ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಭೀಮಣ್ಣನವರಿಗೆ ಸಲಹೆಯಿತ್ತರು. ಇದರಂತೆ ಧರ್ಮದೇವತೆಗಳೂ ಕೂಡ ಕದ್ರಿಯಲ್ಲಿರುವ ಶ್ರೀಮಂಜುನಾಥನ ಲಿಂಗವನ್ನು ತಂದು ಪ್ರತಿಷ್ಠಾಪಿಸುವಂತೆ ತಿಳಿಸಿದರು ಹಾಗೂ ಈ ಕಾರ್ಯ ಸಂಪನ್ನಗೊಳಿಸಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಅಣ್ಣಪ್ಪಸ್ವಾಮಿಯವರು ಕದ್ರಿಗೆ ತೆರಳಿ ಅಲ್ಲಿಂದ ಶಿವಲಿಂಗವನ್ನು ಇಲ್ಲಿಗೆ ತರುವುದರೊಳಗೆ ಧರ್ಮಸ್ಥಳದ ಶ್ರೀಮಂಜುನಾಥನ ದೇವಾಲಯ ನಿರ್ಮಾಣವಾಗಿತ್ತೆಂದು ಹೇಳುತ್ತದೆ ಇಲ್ಲಿನ ಪ್ರತೀತಿ.

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ

ಶಿವಲಿಂಗ ತಂದ ದೈವ ಪ್ರತಿನಿಧಿ ಅಣ್ಣಪ್ಪ ಸ್ವಾಮಿ ವಿಗ್ರಹ

ಚಿತ್ರಕೃಪೆ: Maheshshogun

ಮತ್ತೊಂದು ದಂತಕಥೆಯ ಪ್ರಕಾರ, 16 ನೇಯ ಶತಮಾನದಲ್ಲಿ ದೇವಾರಜ ಹೆಗ್ಗಡೆಯವರು ಉಡುಪಿಯ ವಾದಿರಾಜರಿಗೆ ಇಲ್ಲಿಗೆ ಭೇಟಿ ನೀಡಲು ಅಹ್ವಾನಿಸಿದ್ದರು. ಮೊದಲೆ ದಾನ ಧರ್ಮಗಳಿಗೆ ಹೆಸರಾಗಿದ್ದ ಕುಡುಮ ಕ್ಷೇತ್ರಕ್ಕೆ ವಾದಿರಾಜರು ಭೇಟಿ ನೀಡಲು ಸಂತೋಷದಿಂದ ಒಪ್ಪಿದರು ಹಾಗೂ ಭೇಟಿಯೂ ನೀಡಿದರು. ನಂತರ ಧರ್ಮದೂಟ ಸ್ವೀಕರಿಸಲು ಒಪ್ಪಲಿಲ್ಲ. ಕಾರಣವೆಂದರೆ ಅಲ್ಲಿರುವ ಶಿವಲಿಂಗವು ವೈದಿಕ ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಗಿರಲಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ

ಧರ್ಮಸ್ಥಳದಲ್ಲಿರುವ ಒಂದು ದೇವಾಲಯ
ಚಿತ್ರಕೃಪೆ: Gnanapiti

ಈ ಸಂದರ್ಭದಲ್ಲಿ ಸ್ವತಃ ದೇವರಾಜ ಹೆಗ್ಗಡೆಯವರೆ ವಾದಿರಾಜರನ್ನು ಕುರಿತು ನಿಯಮಗಳಿಗನುಸಾರವಾಗಿ ಲಿಂಗವನ್ನು ತಾವೆ ಮರುಪ್ರತಿಷ್ಠಾಪಿಸಬೇಕೆಂದು ವಿನಂತಿಸಿಕೊಂಡರು. ಅವರ ವಿನಯತೆ, ದಾನ ಧಾರ್ಮಗಳ ಮನೋಭಾವದಿಂದ ಪ್ರಸನ್ನರಾದ ಯತಿಗಳು ಸ್ವತಃ ತಾವೆ ದೈವಿಕ ವಿಧಿ ವಿಧಾನಗಳ ಮೂಲಕ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು ಹಾಗೂ ನೈತಿಕತೆ, ಸರಳತೆ, ಧರ್ಮ ನೆಲೆಯೂರಿರುವ ಈ ಕ್ಷೇತ್ರಕ್ಕೆ ಧರ್ಮಸ್ಥಳ ಎಂಬ ನಾಮಕರಣ ಮಾಡಿದರು. ಅಂದಿನಿಂದ ಈ ಕ್ಷೇತ್ರವು ಶ್ರೀಕ್ಷೇತ್ರ ಧರ್ಮಸ್ಥಳವಾಗಿ ಜನಪ್ರಿಯವಾಗಿದೆ.

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ


ಧರ್ಮಸ್ಥಳದಲ್ಲಿರುವ ಚಂದ್ರನಾಥ ಬಸದಿ
ಚಿತ್ರಕೃಪೆ: Naveenbm

ವಿಶೇಷವೆಂದರೆ ಈ ದೇವಸ್ಥಾನವು ಮೊದಲಿನಿಂದಲೂ ಜೈನ ಸಮುದಾಯದವರಿಂದ ನಡೆಸಲ್ಪಡುತ್ತಿದೆ. ಆಡಳಿತ ಮಂಡಳಿಯು ಜೈನ ಸಮುದಾಯವಾಗಿದ್ದರೂ ಸಹ ಇಲ್ಲಿನ ಪೂಜೆ ವಿಧಿ ವಿಧಾನಗಳು ಬ್ರಾಹ್ಮಣ ಸಮುದಾಯದಂತೆ ಬ್ರಹ್ಮಣ ಅರ್ಚಕರಿಂದ ನಡೆಯುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಹಳೆಯ ಕಾಲದಿಂದಲೂ ಹೆಗ್ಗಡೆ ಮನೆತನದವರು ಇಲ್ಲಿ ಧರ್ಮದರ್ಶಿಗಳಾಗಿ ತಮ್ಮ ಅಮೂಲ್ಯ ಸೇವೆಯನ್ನು ದೇವಾಲಯಕ್ಕೆ ನೀಡುತ್ತ ಬಂದಿದ್ದಾರೆ.

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ

ಧರ್ಮಸ್ಥಳದಲ್ಲಿರುವ ಬಾಹುಬಲಿ ಪ್ರತಿಮೆ
ಚಿತ್ರಕೃಪೆ: Abdulla Al Muhairi

ಇನ್ನುಳಿದಂತೆ ಧರ್ಮಸ್ಥಳದಲ್ಲಿ ಚಂದ್ರನಾಥ ಬಸದಿ, ಬಾಹುಬಲಿ ಪ್ರತಿಮೆ, ಜಮಾ ಉಗ್ರಾಣ, ವಿಮಾನ ವೀಕ್ಷಣಾ ಸ್ಥಳ, ಅನ್ನಪೂರ್ಣ ಭೋಜನಾಲಯ, ಮಂಜೂಷ ಸಂಗ್ರಹಾಲಯ, ಲಲಿತೋದ್ಯಾನ ಹೀಗೆ ಹಲವು ಆಕರ್ಷಣೆಗಳಿಗೆ ಭೇಟಿ ನೀಡಬಹುದಾಗಿದೆ. ಬೆಂಗಳೂರು ಹಾಗೂ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಲು ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಇದಕ್ಕೆ ಹತ್ತಿರದಲ್ಲಿರುವ ಪ್ರಮುಖ ರೈಲು ನಿಲ್ದಾಣ ಮಂಗಳೂರು. ಧರ್ಮಸ್ಥಳವು ಬೆಂಗಳೂರಿನಿಂದ 298 ಕಿ.ಮೀ ಹಾಗೂ ಮಂಗಳೂರಿನಿಂದ 75 ಕಿ.ಮೀ ಗಳಷ್ಟು ದೂರದಲ್ಲಿದೆ.

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ

ಮಂಜೂಷ ಕಾರು ಸಂಗ್ರಹಾಲಯ
ಚಿತ್ರಕೃಪೆ: Gowthami k

ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮಂಜುನಾಥನ ದರುಶನವನ್ನು ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 2 ಘಂಟೆಯವರೆಗೆ ಹಾಗೂ ಸಾಯಂಕಾಲ 7 ಘಂಟೆಯಿಂದ ರಾತ್ರಿ 8:30 ರ ವರೆಗೆ ಪಡೆಯಬಹುದು. ಇಲ್ಲಿ ತಂಗಲು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಕೋಣೆಗಳು ದೊರೆಯುತ್ತವೆ. ಆದರೆ ಮುಂಗಡವಾಗಿ ಕಾಯ್ದಿರಿಸುವುದು ಒಳಿತು. ಅಲ್ಲದೆ ಖಾಸಗಿ ವಸತಿ ಗೃಹಗಳೂ ಕೂಡ ದೊರೆಯುತ್ತವೆ.

ಇದಕ್ಕೆ ಅತಿ ಹತ್ತಿರದಲ್ಲಿರುವ ಮತ್ತೊಂದು ಪ್ರಸಿದ್ಧ ಕ್ಷೇತ್ರ ಶ್ರೀಕುಕ್ಕೆ ಸುಬ್ರಹ್ಮಣ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X