Search
  • Follow NativePlanet
Share
» »ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!

ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!

ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ನಗರದ ಪ್ರಧಾನ ದೇವಿ ಎಂದು ಪರಿಗಣಿಸಲಾಗುವ ಚತುರ್ಶೃಂಗಿ ದೇವಾಲಯವು ನಗರದ ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿ ಗಮನಸೆಳೆಯುತ್ತದೆ

By Vijay

ರಾಜ್ಯ - ಮಹಾರಾಷ್ಟ್ರ
ನಗರ - ಪುಣೆ

ವಿಶೇಷತೆ : ಜನಪ್ರೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ಪ್ರಮುಖ ಧಾರ್ಮಿಕ ರಚನೆಗಳನ್ನು ಹೊಂದಿರುವ ಪುಣ್ಯ ನಗರ!

ಪುಣೆ ನಗರ ಪರಿಚಯ

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಕೆಲವೆ ಕೆಲವು ಮುಖ್ಯ ನಗರಗಳಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆ (ಪೂನಾ) ನಗರವೂ ಸಹ ಒಂದು. ರಾಜಧಾನಿ ಮುಂಬೈ ನಂತರ ಅತಿ ದೊಡ್ಡ ನಗರ ಎಂದು ಪರಿಗಣಿಸಲ್ಪಡುವ ಪುಣೆ ರಭಸವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪಟ್ಟಣ.

ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!

ಚಿತ್ರಕೃಪೆ: ಶ್ರೀ ಶಿಲ್ಪಿ ಸಿದ್ದನ್ತಿ ಸಿದ್ದಲಿಂಗ ಸ್ವಾಮಿ

ಸಾಮಾನ್ಯವಾಗಿ ಮಹಾನಗರಗಳಲ್ಲಿ ಕಂಡುಬರುವಂತೆ ಪುಣೆ ನಗರದಲ್ಲಿಯೂ ಸಹ ಆಧುನಿಕ ಕಟ್ಟಡಗಳು, ವಿದೇಶಿ ಐಟಿ ಕಂಪನಿಗಳು, ಐಷಾರಾಮಿ ಹೋಟೆಲುಗಳು ಹಾಗೂ ಜಗಮಗಿಸುವ ಶಾಪಿಂಗ್ ಮಾಲುಗಳು ಕಂಡುಬರುತ್ತವೆ. ಅದಾಗ್ಯೂ ಇಲ್ಲಿ ಸ್ಥಳೀಯವಾದ ಮರಾಠಿ ಸಂಸ್ಕೃತಿ-ಸಂಪ್ರದಾಯವನ್ನು ಬಿಂಬಿಸುವ ಅನೇಕ ದೇವಾಲಯಗಳು, ಸ್ಮಾರಕ ರಚನೆಗಳೂ ಸಹ ಕಂಡುಬರುತ್ತವೆ.

ಕೇವಲ ಆಧುನಿಕತೆಗಳಿಂದ ಮಾತ್ರವಲ್ಲದೆ ಪುಣೆ ನಗರವೂ ಕೆಲವು ಮಹತ್ತರವಾದ ಧಾರ್ಮಿಕ ರಚನೆಗಳಿಂದಲೂ ಸಾಕಷ್ಟು ಪ್ರಾಮುಖ್ಯತೆಗಳಿಸಿದೆ. ಇದರ ಮೂಲ ಹೆಸರೆ ಪುಣ್ಯ ನಗರಿ ಎಂದಿರುವಾಗ ಗುಡಿ-ಗುಂಡಾರಗಳು ಇಲ್ಲಿರಲಾರವೆ? ಹೌದು, ಸಾಕಷ್ಟು ದೇವಾಲಯಗಳನ್ನು ಇಲ್ಲಿ ಕಾಣಬಹುದು ಅದರಲ್ಲೊಂದಾಗಿದೆ ಚತುಶೃಂಗಿ ಅಥವಾ ಚತುರ್ಶೃಂಗಿ ದೇವಾಲಯ.

ಚತುಶೃಂಗಿ ದೇವಾಲಯ

ಪುಣೆ ನಗರದಲ್ಲಿ ಸ್ಥಿತವಿರುವ ನಾಲ್ಕು ಶಿಖರ ಶೃಂಗಗಳುಳ್ಳ ಚಿಕ್ಕ ಗುಡ್ಡ ಶ್ರೇಣಿಯೊಂದರಲ್ಲಿ ದೇವಿಯ ಈ ದೇವಾಲಯವಿದೆ. ಚತುರ್ ಅಂದರ ನಾಲ್ಕು ಶೃಂಗಗಳ ಮಧ್ಯೆ ನಲೆಸಿರುವ ಕಾರಣ ಚತುರ್ಶೃಂಗಿ ಅಥವಾ ಚತುಶೃಂಗಿ ದೇವಿ ಎಂಬ ಹೆಸರು ಬಂದಿದೆ. ಅಲ್ಲದೆ ಈಕೆಯನ್ನು ಪುಣೆ ನಗರದ ಅಧಿದೇವಿ ಎಂದೂ ಸಹ ಪರಿಗಣಿಸಲಾಗುತ್ತದೆ.

ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!

ಚಿತ್ರಕೃಪೆ: Umesh Kale

ದೇವಾಲಯದ ಸ್ಥಳ ಪುರಾಣದಂತೆ, ಹಿಂದೆ ಈ ಪ್ರದೇಶದಲ್ಲಿ ದುರ್ಲಭ್ ಸೇಟ್ ಪಿತಾಂಬರದಾಸ ಮಹಾಜನ್ ಎಂಬ ವ್ಯಾಪಾಯೋರ್ವನಿದ್ದನು. ಅವನು ಸಪ್ತಶೃಂಗಿ ದೇವಿಯ ಪರಮ ಭಕ್ತನಾಗಿದ್ದನು, ದೇವಿಯ ಎಲ್ಲ ದೇವಾಲಯಗಳಿಗೂ ವರ್ಷಕ್ಕೊಂದು ಬಾರಿ ತಪ್ಪದೆ ಭೇಟಿ ನೀಡುತ್ತಿದ್ದನು.

ಕಾಲ ಕಳೆದಂತೆ ಅವನಿಗೆ ದೇಹಬಲವು ಕುಗ್ಗಿ ಹೋಗಿ ಮೊದಲಿನಂತೆ ದೂರದ ದೇವಾಲಯಗಳಿಗೆ ಪಯಣಿಸಲಾಗಲಿಲ್ಲ. ಇದರಿಂದ ತುಂಬ ನೊಂದುಕೊಂಡು ದೇವಿಯನ್ನು ಹಗಲಿರುಳು ನೆನೆಯುತ್ತಿದ್ದ. ಒಂದೊಮ್ಮ ಅವನಿಗೆ ಬಿದ್ದ ಕನಸಿನಲ್ಲಿ ಸಪ್ತಶೃಂಗಿ ದೇವಿಯು ಕಂಡು ಅವನ ಮನೆಯ ಬಳಿ ಇದ್ದ ಒಂದು ಸ್ಥಳದಲ್ಲಿ ತಾನು ಇನ್ನೂ ನೆಲೆಸುವುದಾಗಿಯೂ ಹೇಳಿದಳು.

ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!

ಚಿತ್ರಕೃಪೆ: Ketaki Pole

ಅದರಂತೆ ಅವನು ಮರುದಿನ ತನ್ನ ಸೇವಕರೊಡಗೂಡಿ ಆ ಸ್ಥಳ ಪತ್ತೆ ಹಚ್ಚಿ ಅಲ್ಲಿ ಅಗೆದಾಗ ದೇವಿಯ ಸ್ವಯಂಭು ವಿಗ್ರಹವು ಪತ್ತೆಯಾಯಿತು. ಇದರಿಂದ ಸಂತಸಗೊಂಡ ವ್ಯಾಪಾರಿ ಅಲ್ಲಿ ದೇವಾಲಯವನ್ನು ನಿರ್ಮಿಸಿ ದೇವಿಯನ್ನು ಪ್ರತಿಷ್ಠಾಪಿಸಿದ. ಹೀಗೆ ಕಾಲಕ್ಕೆ ತಕ್ಕಂತೆ ಈ ದೇವಾಲಯ ಹೆಚ್ಚು ಹೆಚ್ಚು ನವೀಕರಣಕ್ಕೊಳಪಟ್ಟಿತು.

ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ

ಇಂದು ಈ ದೇವಿಯ ದೇವಾಲಯವನ್ನು ಬಲು ಜಾಗೃತ ಸ್ಥಳವೆಂದು ನಂಬಲಾಗಿದೆ. ನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಮುಖ್ಯ ದೇವಾಲಯ ತಲುಪಲು ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ದೇವಿಯಲ್ಲದೆ ಗಣೇಶ ಹಾಗೂ ದುರ್ಗೆಯರ ಸನ್ನಿಧಿಗಳೂ ಇಲ್ಲಿವೆ. ಈ ದೇಗುಲಗಳು ಇತರೆ ಶಿಖರ ಶೃಂಗಗಳಲ್ಲಿ ನಿರ್ಮಿಸಲ್ಪಟ್ಟಿವೆ.

ತಲುಪುವ ಬಗೆ

ಪುಣೆ ನಗರವನ್ನು ದೇಶದ ಎಲ್ಲ ಮೂಲೆಗಳಿಂದಲೂ ಸಹ ತಲುಪ್ಬಹುದಾಗಿದೆ. ರೈಲಾಗಲಿ, ಬಸ್ಸಾಗಲಿ ಅಥವಾ ವಿಮಾನ ಮುಲಕವೂ ಉತ್ತಮ ಸಂಪರ್ಕ ಜಾಲವನ್ನು ಪುಣೆ ಹೊಂದಿದೆ. ಹಾಗಾಗಿ ಒಂದೊಮ್ಮೆ ಪುಣೆ ತಲುಪಿದರೆ ಅಲ್ಲಿಂದ ರಿಕ್ಷಾ ಅಥವಾ ಬಾಡಿಗೆ ಕಾರುಗಳ ಮೂಲಕ ಸೇನಾಪತಿ ಬಾಪಟ್ ರಸ್ತೆಯಲ್ಲಿರುವ ಈ ದೇವಾಲಯಕ್ಕೆ ಸುಲಭವಾಗಿ ತಲುಪಬಹುದು.

ಪುಣೆ ಜಿಲ್ಲೆಯ ಅದ್ಭುತ ಪ್ರೇಕ್ಷಣೀಯ ಸ್ಥಳಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X