Search
  • Follow NativePlanet
Share
» »ಎಳ್ಳು-ಬೆಲ್ಲದ ಹಬ್ಬ ಮಕರ ಸಂಕ್ರಾತಿ ಹಬ್ಬವನ್ನು ಕರ್ನಾಟಕದಲ್ಲಿ ಹೇಗೆ ಆಚರಿಸಲಾಗುತ್ತದೆ?

ಎಳ್ಳು-ಬೆಲ್ಲದ ಹಬ್ಬ ಮಕರ ಸಂಕ್ರಾತಿ ಹಬ್ಬವನ್ನು ಕರ್ನಾಟಕದಲ್ಲಿ ಹೇಗೆ ಆಚರಿಸಲಾಗುತ್ತದೆ?

"ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡಿ" ಎನ್ನುವ ನಾಣ್ಣುಡಿಯಂತೆ ಕರ್ನಾಟಕದಲ್ಲಿ ಮಕರ ಸಂಕ್ರಾತಿಯ ಈ ಹಬ್ಬವನ್ನು ಎಳ್ಳುಬೆಲ್ಲ ತಿನ್ನುವುದರ ಮೂಲಕ ಆಚರಿಸಲಾಗುತ್ತದೆ.

2019ರ ವರ್ಷ ಮುಗಿಯುತ್ತಿದ್ದಂತೆಯೇ ರಾಜ್ಯದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಡಗರದ ಸಿದ್ದತೆ ಮಾಡಲಾಗುತ್ತದೆ. ಈ ಹಬ್ಬವನ್ನು ಮೊದಲೇ ಹೇಳಿದಂತೆ ಎಳ್ಳು ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ತಿನ್ನುವುದರ ಮೂಲಕ ಆಚರಿಸಲಾಗುತ್ತದೆ.

ಕರ್ನಾಟಕದಲ್ಲಿ ಈ ಹಬ್ಬವು ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ರೈತರು ಸುಗ್ಗಿಯ ಋತುವಿನಲ್ಲಿ ಈ ಹಬ್ಬವನ್ನು ಆಚರಿಸುವುದರಿಂದ ಈ ಹಬ್ಬವನ್ನು 'ಸುಗ್ಗಿಯ ಹಬ್ಬ'ವೆಂದು ಕರೆಯಲಾಗುತ್ತದೆ.

ಸಂಕ್ರಾತಿ ಹಬ್ಬದ ಸಮಯದಲ್ಲಿ ಏನೇನು ಮಾಡಲಾಗುತ್ತದೆ ನೋಡೋಣ

ಸಂಕ್ರಾತಿ ಹಬ್ಬದ ಸಮಯದಲ್ಲಿ ಏನೇನು ಮಾಡಲಾಗುತ್ತದೆ ನೋಡೋಣ

Photo Courtesy: Vinay Shivakumar

ಖಗೋಳ ಶಾಸ್ತ್ರದ ಪ್ರಕಾರ ಸಂಕ್ರಮಣ ಎಂದರೆ ಸೂರ್ಯನು ರಾಶಿ ಚಿಹ್ನೆಗಳಲ್ಲೊಂದಾದ ಮಕರ ರಾಶಿಗೆ ಪ್ರವೇಶ ಮಾಡುವ ಪರ್ವ ಕಾಲ. ಉತ್ತರಾಯಣ ಈ ಶುಭ ದಿನದಿಂದ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಸಂಕ್ರಾಂತಿಯನ್ನು ಜನವರಿ 14 ಅಥವಾ15ರಂದು ಆಚರಿಸಲಾಗುತ್ತದೆ.

ಸಂಕ್ರಾಂತಿಯ ಸಮಯದಲ್ಲಿ ಆಚರಿಸಲಾಗುವ ಸಂಪ್ರದಾಯಗಳು

ಸಂಕ್ರಾಂತಿಯ ಸಮಯದಲ್ಲಿ ಆಚರಿಸಲಾಗುವ ಸಂಪ್ರದಾಯಗಳು

Photo Courtesy: Phaneesh N

ಸಂಕ್ರಾಂತಿ ಹಬ್ಬದ ದಿನ ಮನೆಗಳನ್ನು ಸ್ವಚ್ಚಗೊಳಿಸಿ ಮಾವಿನ ತೋರಣಗಳಿಂದ ಮನೆ ಬಾಗಿಲುಗಳನ್ನು ಅಲಂಕರಿಸಲಾಗುತ್ತದೆ ಮತ್ತು ಜನರು ಹೊಸ ಉಡುಗೆಗಳನ್ನು ತೊಟ್ಟು ದೇವರಿಗೆ ಪೂಜೆಗಳನ್ನು ಮಾಡುತ್ತಾರೆ. ಹಳ್ಳಿಗಳ ಕಡೆ ಈ ಹಬ್ಬದಲ್ಲಿ ತಾವು ಬೆಳೆದ ಬೆಳೆಗಳಿಗೆ ಅಥವಾ ಸುಗ್ಗಿಗೆ ಪ್ರಾರ್ಥನೆ ಸಲ್ಲಿಸುವ ಪದ್ದತಿಯಿದೆ.

ಈ ಹಬ್ಬದ ಒಂದು ಪ್ರಮುಖ ಪದ್ದತಿಯನ್ನು ಕನ್ನಡದಲ್ಲಿ "ಎಳ್ಳು ಬೀರುವುದು" ಎಂದು ಕರೆಯುತ್ತಾರೆ. ಇದು ಈ ಹಬ್ಬದ ಒಂದು ಪ್ರಮುಖ ಭಾಗವಾಗಿದ್ದು ಇದನ್ನು ಮನೆಯ ಮಹಿಳೆಯರು ಅಥವಾ ಮಕ್ಕಳು ಒಂದು ತಟ್ಟೆಯಲ್ಲಿ ಒಂದು ಸಣ್ಣ ತುಂಡು ಕಬ್ಬು , ಒಂದು ಪಾಕೇಟ್ ನಲ್ಲಿ ಎಳ್ಳು ಮತ್ತು ಬೆಲ್ಲದ ಮಿಶ್ರಣಗಳ ಜೊತೆಗೆ ಸಕ್ಕರೆ ಅಚ್ಚು(ಕ್ಯಾರಮಾಲೈಸ್ಡ್ ಸಕ್ಕರೆಯಿಂದ ಮಾಡಿದ ಸಕ್ಕರೆ ಅಚ್ಚು) ಇಟ್ಟುಕೊಂಡು ಮನೆ ಮನೆಗೆ ಹೋಗಿ ಕೊಟ್ಟು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗೆಯೇ , ಅತಿಥೇಯರು ಸಹ ತಮ್ಮ ಕಡೆಯಿಂದ ಅದೇ ವಸ್ತುಗಳನ್ನು ಸಂತೋಷದ ಪ್ರತೀಕವಾಗಿ ಹಿಂತಿರುಗಿಸಬೇಕು. ಈ ರೀತಿ ಸಂತೋಷವನ್ನು ಹರಡುವುದು ಈ ಹಬ್ಬದ ಸಂಪ್ರದಾಯವಾಗಿದೆ.

ಮಕರ ಸಂಕ್ರಾಂತಿಯ ದಿನದಂದು ಮಾಡಲಾಗುವ ಚಟುವಟಿಕೆಗಳು

ಮಕರ ಸಂಕ್ರಾಂತಿಯ ದಿನದಂದು ಮಾಡಲಾಗುವ ಚಟುವಟಿಕೆಗಳು

Photo Courtesy: Harsha K R

ಈ ಹಬ್ಬವು ಕೇವಲ ಸಂಪ್ರದಾಯಿಕ ಪದ್ದತಿಗಳ ಆಚರಣೆ ಮಾತ್ರವಲ್ಲದೆ ಕೆಲವು ವಿನೋದ ಹಾಗೂ ಆಟವಾಡುವುದಕ್ಕೆ ಉತ್ತಮ ಸಮಯವಾಗಿದೆ. ಈ ಹಬ್ಬದ ಸಮಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ರಂಗೋಲಿ ಸ್ಪರ್ಧೆ, ಗಾಳಿಪಟ ಹಾರಿಸುವ ಸ್ಪರ್ಧೆ ಮತ್ತು ಇನ್ನೂ ಹಲವಾರು ಸಾಂಪ್ರದಾಯಿಕ ಕ್ರೀಡೆಗಳಾದ ಕುಸ್ತಿ ಇತ್ಯಾದಿಗಳನ್ನು ಗಳನ್ನು ಹಳ್ಳಿಗಳಲ್ಲಿ ಆಯೋಜಿಸಲಾಗುತ್ತದೆ.

ಜಾನುವಾರುಗಳನ್ನು ಅಲಂಕರಿಸುವುದು ಸಹ ಹಬ್ಬದ ವಿಶೇಷತೆಗಳಲ್ಲಿ ಒಂದಾಗಿದೆ. ರೈತರು ತಮ್ಮ ಹಸುಗಳು ಮತ್ತು ಎತ್ತುಗಳನ್ನು ಜನರಿಗೆ ಪ್ರದರ್ಶನ ಮಾಡಲು ಅಲಂಕರಿಸುತ್ತಾರೆ.

ದನಗಳನ್ನು ಬೆಂಕಿಗೆ ಅಡ್ಡಲಾಗಿ ನೆಗೆಯುವಂತೆ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ ಆಚರಣೆ. ಇದರಲ್ಲಿ ರೈತರು ಬೆಂಕಿಯ ದೊಡ್ಡ ಹಳ್ಳವನ್ನು ದಾಟುವಂತೆ ಮಾಡುತ್ತಾರೆ. ಕನ್ನಡದಲ್ಲಿ ಇದನ್ನು "ಕಿಚ್ಚು ಹಾಯಿಸುವುದು" ಎಂದು ಕರೆಯಲಾಗುತ್ತದೆ. ಇದು ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಮಾಡಲಾಗುವ ಹಳೆಯ ಸಂಪ್ರದಾಯವಾಗಿದೆ.

ಮಕರ ಸಂಕ್ರಾಂತಿಯ ಟೇಸ್ಟಿ ಪಾಕಪದ್ಧತಿಗಳು

ಮಕರ ಸಂಕ್ರಾಂತಿಯ ಟೇಸ್ಟಿ ಪಾಕಪದ್ಧತಿಗಳು

Photo Courtesy: Balamurugan Natarajan

ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಪೊಂಗಲ್ (ಸಿಹಿ ಖಾದ್ಯ) ಅನ್ನು ವಿಶೇಷವಾಗಿ ಮಾಡಲಾಗುತ್ತದೆ. ಇದರ ಜೊತೆಗೆ ನಿಂಬೆ ಚಿತ್ರಾನ್ನ, ತರಕಾರಿಯಿಂದ ಮಾಡಲ್ಪಟ್ಟ ಸಾಂಬಾರುಗಳು, ವಡೆಗಳು, ಪಾಯಸ ಇತ್ಯಾದಿಗಳನ್ನು ಈ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ಹಳ್ಳಿಗಳಲ್ಲಿ ಮಹಿಳೆಯರು ಪೊಂಗಲ್ ಅನ್ನು ತಮ್ಮ ಗದ್ದೆಗಳಲ್ಲಿಯೇ ತಯಾರು ಮಾಡುತ್ತಾರೆ. ಮತ್ತು, ಎಲ್ಲರೂ ಒಟ್ಟಿಗೆ ಸೇರಿ ಕುಳಿತುಕೊಂಡು ಪೊಂಗಲ್ ನ ಸಿಹಿಯನ್ನು ಸವಿಯುತ್ತಾರೆ.

ತಮಿಳು ನಾಡಿನಲ್ಲಿ ಪೊಂಗಲ್, ಗುಜರಾತ್ ನಲ್ಲಿ ಉತ್ತರಾಯಣ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿ ಎಂದೂ ಈ ಹಬ್ಬವು ಭಾರತದ ನಾನಾ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ.

ಈ ಸುಗ್ಗಿಯ ಹಬ್ಬವನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಆಯಾ ಪ್ರದೇಶದ ಸಂಪ್ರದಾಯಳಿಗೆ ಅನುಗುಣವಾಗಿ ಆಚರಿಸಲಾಗುತ್ತದೆ. ಅಲ್ಲದೆ ಹಬ್ಬಗಳು ಯಾವಾಗಲೂ ಜನರನ್ನು ಒಟ್ಟುಗೂಡಿಸಲು ಒಂದು ಸೂಕ್ತವಾದ ಸಂದರ್ಭವಾಗಿರುತದೆ. ಅದರಂತೇ, ಸಂಕ್ರಮಣದ ಈ ಸಮಯವು ಖಂಡಿತವಾಗಿಯೂ ಜನರನ್ನು ಒಟ್ಟುಗೂಡಿಸುವ ಸಮಯ ಮಾತ್ರವಲ್ಲದೆ ನಮಗೆ ಧಾನ್ಯಗಳನ್ನು ಒದಗಿಸುವ ಭೂಮಿ ತಾಯಿಗೆ ಕೃತಜ್ಞತೆಯನ್ನು ಸಲ್ಲಿಸುವ ಒಂದು ಶುಭ ಸಂದರ್ಭವೂ ಆಗಿರುತ್ತದೆ.

ಉಡುಪಿಯ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜಾತ್ರೆ

ಉಡುಪಿಯ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜಾತ್ರೆ

ಮಾರಣಕಟ್ಟೆಯು ಬ್ರಹ್ಮಕುಂಡ ನದಿ ದಡದಲ್ಲಿರುವ ಬ್ರಹ್ಮಲಿಂಗೇಶ್ವರ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ದಂತಕಥೆಯ ಪ್ರಕಾರ, ಮೂಕಾಂಬಿಕಾ ದೇವಿಯಿಂದ ಸೋಲನುಭವಿಸಿದ ನಂತರ, ಮೂಕಾಸುರ ಎಂಬ ರಾಕ್ಷಸನು ದೇವಿಯ ಆಶೀರ್ವಾದದಿಂದ ಬ್ರಹ್ಮಲಲಿಂಗೇಶ್ವರನಾಗಿ ಬದಲಾದನು ಎಂದು ಹೇಳಲಾಗುತ್ತದೆ.

ಇಲ್ಲಿ ಜಾತ್ರೆಯು ಸಂಕ್ರಾಂತಿಯ ದಿನದಿಂದ ಮೂರು ದಿನಗಳ ಕಾಲ ನಡೆಯುತ್ತದೆ. ಹಬ್ಬದ ಈ ಸಮಯದಲ್ಲಿ ಇಲ್ಲಿ ಯಕ್ಷಗಾನ, ಪೌರಾಣಿಕ ನಾಟಕಗಳು ಮುಂತಾದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X