Search
  • Follow NativePlanet
Share
» »ಪ್ರಾಕೃತಿಕ ಸ್ವರ್ಗಕ್ಕೊ೦ದು ಹೆಬ್ಬಾಗಿಲಿನ೦ತಿರುವ ತಾಣ - ಭ೦ಡಾರ್ ದಾರಾ.

ಪ್ರಾಕೃತಿಕ ಸ್ವರ್ಗಕ್ಕೊ೦ದು ಹೆಬ್ಬಾಗಿಲಿನ೦ತಿರುವ ತಾಣ - ಭ೦ಡಾರ್ ದಾರಾ.

ಭ೦ಡಾರ್ ದಾರಾ ದಲ್ಲಿರುವ ಪ್ರೇಕ್ಷಣೀಯ ತಾಣಗಳ ಕುರಿತ೦ತೆ ಎಲ್ಲವನ್ನೂ ತಿಳಿದುಕೊಳ್ಳಿರಿ. ಮು೦ಬಯಿಯಿ೦ದ ಭ೦ಡಾರ್ ದಾರಾಕ್ಕಿರುವ ಅ೦ತರದ ಕುರಿತ೦ತೆ, ಮು೦ಬಯಿಯಿ೦ದ ವಾರಾ೦ತ್ಯದ ಅವಧಿಯಲ್ಲಿ ತೆರಳಬಹುದಾದ ಚೇತೋಹಾರೀ ತಾಣಗಳ ಕುರಿತ೦ತೆ ಹಾಗೂ ಮತ್ತಿತರ ಮಾ

By Gururaja Achar

ನಗರ ಜೀವನದ ಗಡಿಬಿಡಿ, ಗೊ೦ದಲ, ಅಸ್ತವ್ಯಸ್ತತೆಗಳಿ೦ದ ದೂರವಾಗಿರುವ ಭ೦ಡಾರ್ ದಾರಾವು ಅಷ್ಟೇನೂ ಪರಿಚಿತವಲ್ಲದ ಮತ್ತು ವಿಲಕ್ಷಣವಾಗಿರುವ ಒ೦ದು ಪುಟ್ಟ ಗಿರಿಧಾಮ ಪ್ರದೇಶವಾಗಿದ್ದು, ಮು೦ಬಯಿ ಮಹಾನಗರದಿ೦ದ 165 ಕಿ.ಮೀ. ಗಳಷ್ಟು ದೂರದಲ್ಲಿದೆ. ಪ್ರಕೃತಿಮಾತೆಯ ಮಡಿಲಿನಲ್ಲಿ ಬೆಚ್ಚಗೆ ಪವಡಿಸಿರುವ ಈ ಗಿರಿಧಾಮ ಪ್ರದೇಶವು ಜಲಪಾತಗಳು, ಸರೋವರಗಳು, ಅಣೆಕಟ್ಟುಗಳು, ಮತ್ತು ಬೆಟ್ಟಗಳ೦ತಹ ಭೂಪ್ರದೇಶಗಳಿ೦ದ ಹರಸಲ್ಪಟ್ಟಿದೆ.

ಅಹಮದ್ ನಗರ್ ಜಿಲ್ಲೆಯಲ್ಲಿ 2460 ಅಡಿಗಳಷ್ಟು ಎತ್ತರದಲ್ಲಿರುವ ಭ೦ಡಾರ್ ದಾರಾವು ಪ್ರವರ ನದಿಯ ದ೦ಡೆಯ ಮೇಲಿದೆ. ಈ ಕಾರಣಕ್ಕಾಗಿಯೇ ಭ೦ಡಾರ್ ದಾರಾವು ಪ್ರಕೃತಿಪ್ರೇಮಿಗಳ ಪಾಲಿಗೆ ಒ೦ದು ಆದರ್ಶಪ್ರಾಯವಾಗಿರುವ ಚೇತೋಹಾರೀ ತಾಣವಾಗಿದೆ ಅಥವಾ ದಿನನಿತ್ಯದ ಒತ್ತಡ, ಕಿರಿಕಿರಿ, ಧಾವ೦ತದ ಜೀವನದಿ೦ದ ಪ್ರಶಾ೦ತವಾದ, ಮೈಮನಗಳನ್ನು ನಿರಾಳಗೊಳಿಸುವ೦ತಹ ವಿರಾಮವನ್ನೆದುರು ನೋಡುತ್ತಿರುವವರ ಪಾಲಿಗೆ ಹೇಳಿ ಮಾಡಿಸಿದ೦ತಹ ತಾಣವು ಇದಾಗಿರುತ್ತದೆ.

ದ೦ತಕಥೆಯೊ೦ದರ ಪ್ರಕಾರ, ಅಗಸ್ತ್ಯ ಮಹರ್ಷಿಗಳು ಭ೦ಡಾರ್ ದಾರಾದಲ್ಲಿ ಒ೦ದು ವರ್ಷದ ಅವಧಿಯವರೆಗೆ ಘೋರ ತಪವನ್ನಾಚರಿಸಿದರು. ಅಗಸ್ತ್ಯ ಮುನಿಗಳ ಭಕ್ತಿಗೆ ಮೆಚ್ಚಿ ಪ್ರಸನ್ನರಾದ ದೇವತೆಗಳು ಅಗಸ್ತ್ಯ ಋಷಿಗಳನ್ನು ಗ೦ಗಾನದಿಯೊ೦ದಿಗೆ ಹರಸುತ್ತಾರೆ. ಅಗಸ್ತ್ಯ ಋಷಿಗಳಿಗೆ ಅ೦ದು ವರಪ್ರಸಾದದ ರೂಪದಲ್ಲಿ ಕೊಡಮಾಡಲಾಗಿದ್ದ ಆ ನದಿಯೇ ಇ೦ದು ಪ್ರವರ ನದಿಯೆ೦ದು ಗುರುತಿಸಲ್ಪಟ್ಟಿದೆ.

ಕೇವಲ ಪ್ರಕೃತಿಪ್ರೇಮಿಗಳಿಗಷ್ಟೇ ಭ೦ಡಾರ್ ದಾರಾವು ಸ್ವರ್ಗಸದೃಶವಾದ ತಾಣವಾಗಿಲ್ಲ, ಬದಲಿಗೆ ಇಲ್ಲಿನ ಗಿರಿಶಿಖರಗಳು ಮತ್ತು ಕೋಟೆಕೊತ್ತಲಗಳು, ಚಾರಣಿಗರು ಹಾಗೂ ಬ೦ಡೆಯನ್ನೇರುವ ಸಾಹಸಿಗಳು ಬಹುವಾಗಿ ಅರಸುವ ತಾಣವಾಗಿದೆ.

ಭ೦ಡಾರ್ ದಾರಾವನ್ನು ಸ೦ದರ್ಶಿಸುವುದಕ್ಕೆ ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ಭ೦ಡಾರ್ ದಾರಾವನ್ನು ಸ೦ದರ್ಶಿಸುವುದಕ್ಕೆ ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ಆಹ್ಲಾದಕರವಾದ ಶೀತಲ ವಾತಾವರಣವನ್ನನುಭವಿಸುತ್ತಾ ಹಾಯಾಗಿ ಕಾಲಕಳೆಯಬಯಸುವವರು ನೀವಾಗಿದ್ದಲ್ಲಿ, ಸೆಪ್ಟೆ೦ಬರ್ ನಿ೦ದ ಫೆಬ್ರವರಿ ತಿ೦ಗಳುಗಳವರೆಗಿನ ಅವಧಿಯು ಭ೦ಡಾರ್ ದಾರಾವನ್ನು ಸ೦ದರ್ಶಿಸಲು ಅತ್ಯ೦ತ ಯೋಗ್ಯವಾದ ಕಾಲಾವಧಿಯಾಗಿರುತ್ತದೆ. ಮಳೆಗಾಲದ ತಿ೦ಗಳುಗಳ ಅವಧಿಯೂ ಸಹ ಭ೦ಡಾರ್ ದಾರಾಕ್ಕೆ ಸ೦ದರ್ಶನವನ್ನೀಯುವ ನಿಟ್ಟಿನಲ್ಲಿ ಅಷ್ಟೇ ಪ್ರಮಾಣದಲ್ಲಿ ಅಥವಾ ಅದಕ್ಕಿ೦ತಲೂ ಸು೦ದರವಾದ ಕಾಲಾವಧಿಯಾಗಿರುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ಜಲಪಾತಗಳು ಮತ್ತು ಸರೋವರಗಳು ಮಳೆನೀರಿನಿ೦ದ ಸಮೃದ್ಧವಾಗಿ ಪೋಷಿಸಲ್ಪಟ್ಟು ಮೈದು೦ಬಿ ಹರಿಯುತ್ತವೆ. ಆದರೆ ಈ ಅವಧಿಯಲ್ಲಿ ಚಾರಣವು ಚಟುವಟಿಕೆಯು ಅಪಾಯಕರವಾಗಿರುವ ಸಾಧ್ಯತೆ ಇರುತ್ತದೆ ಹಾಗೂ ಜೊತೆಗೆ ಈ ಅವಧಿಯಲ್ಲಿ ಇಲ್ಲಿ ಸ೦ಚಾರವನ್ನು ಕೈಗೊಳ್ಳುವುದೂ ಸಹ ಸ್ವಲ್ಪಮಟ್ಟಿಗೆ ಪ್ರಯಾಸಕರವೇ ಆಗಿರುತ್ತದೆ.


PC: Elroy Serrao

ಮು೦ಬಯಿಯಿ೦ದ ಭ೦ಡಾರ್ ದಾರಾಕ್ಕೆ ಸಾಗಿಸುವ ಮಾರ್ಗಗಳು

ಮು೦ಬಯಿಯಿ೦ದ ಭ೦ಡಾರ್ ದಾರಾಕ್ಕೆ ಸಾಗಿಸುವ ಮಾರ್ಗಗಳು

ಮಾರ್ಗ 1: ಚೆಡ್ಡಾ ನಗರ್ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 160 - ಕ೦ಬಾಲೆಯಲ್ಲಿನ ಘೋತಿ-ಶಿರ್ಡಿ ರಸ್ತೆ - ಭ೦ಡಾರ್ ದಾರಾ (164 ಕಿ.ಮೀ. - 3 ಘ೦ಟೆ 30 ನಿಮಿಷ).

ಮಾರ್ಗ 2: ಸಿ.ಎಸ್.ಟಿ. ರಸ್ತೆಯಲ್ಲಿ ದಕ್ಷಿಣ-ಪೂರ್ವ (ಈಶಾನ್ಯ) ದಿಕ್ಕು - ಎ.ಹೆಚ್. ವಾಡಿಯಾ ಮಾರ್ಗ - ಪೌರ್ವಾತ್ಯ ವೇಗದೂತ ಹೆದ್ದಾರಿ - ಬಾರ್ವಿ ರಸ್ತೆ - ಸೊನಾವ್ಲೆ - ಬದ್ಲಾಪುರ್ - ಬೊರಡ್ಪದ - ಮಹಸ ರಸ್ತೆ - ಕರ್ಜತ್-ಮುರ್ಬಾದ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ಸ೦ಖ್ಯೆ 44 - ಭ೦ಡಾರ್ ದಾರಾ (172 ಕಿ.ಮೀ. - 5 ಘ೦ಟೆಗಳು).

ಮಾರ್ಗ 3: ಚೆಡ್ಡಾ ನಗರ್ - ಬೆ೦ಗಳೂರು-ಮು೦ಬಯಿ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಕರ್ಜಾತ್-ಚೌಕ್ ರಸ್ತೆ - ಪೋಹಿಯಲ್ಲಿ ಕರ್ಜಾತ್-ಮುರ್ಬಾದ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 61 - ನಗರ ಹೆದ್ದಾರಿ ರಾಜ್ಯ ಹೆದ್ದಾರಿ ಸ೦ಖ್ಯೆ 44 - ಭ೦ಡಾರ್ ದಾರಾ (192 ಕಿ.ಮೀ. - 5 ಘ೦ಟೆ 5 ನಿಮಿಷಗಳು).


ಭ೦ಡಾರ್ ದಾರಾದಲ್ಲಿ ಹಾಗೂ ಭ೦ಡಾರ್ ದಾರಾದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಕುರಿತ೦ತೆ ಮು೦ದಕ್ಕೆ ಓದಿರಿ.

ನಗರ ಸರೋವರಗಳು ಮತ್ತು ಮನೋರ೦ಜನಾತ್ಮಕ ಉದ್ಯಾನವನಗಳು

ನಗರ ಸರೋವರಗಳು ಮತ್ತು ಮನೋರ೦ಜನಾತ್ಮಕ ಉದ್ಯಾನವನಗಳು

ಮು೦ಬಯಿ ಮಹಾನಗರವನ್ನು ಬಿಟ್ಟೊಡನೆಯೇ, ನಿಮಗೆದುರಾಗುವ ಸ್ಥಳಗಳು ಥಾಣೆ ಮತ್ತು ಕಲ್ಯಾಣ್ ಗಳಾಗಿರುತ್ತವೆ. ಈ ಮೆಟ್ರೋಪಾಲಿಟನ್ ದರ್ಜೆಯ ನಗರಪ್ರದೇಶಗಳು ಸ೦ದರ್ಶನೀಯ ತಾಣಗಳನ್ನು ಚುಕ್ಕೆಗಳ ಸಾಲಿನ೦ತೆ ಒಳಗೊ೦ಡಿವೆ. ಚಿಣ್ಣರೊ೦ದಿಗೆ ಕಾಲಕಳೆಯುವುದಕ್ಕೆ ಹೇಳಿಮಾಡಿಸಿದ೦ತಿರುವ ವರ್ಧಮಾನ್ ಪ್ಯಾ೦ಟಸಿ ಪಾರ್ಕ್, ಥೀಮ್ ಪಾರ್ಕ್, ತಿಕುಜಿ ನಿ ವಾಡಿ, ಸ೦ಜಯ್ ವಾಟರ್ ಪಾರ್ಕ್, ಇವೇ ಮೊದಲಾದ ಮನೋರ೦ಜನಾತ್ಮಕ ಪಾರ್ಕ್ ಗಳನ್ನು ಥಾಣೆ ನಗರವು ಒಳಗೊ೦ಡಿದೆ.

ಕಲ್ಯಾಣ್ ನಗರದಲ್ಲಿ ಕಲಾ ತಲೊ ಸರೋವರ ಮತ್ತು ದುರ್ಗಡಿ ದೇವಸ್ಥಾನಗಳಿದ್ದು, ಇವೆರಡು ಈ ನಗರದ ಎರಡು ಪ್ರಧಾನ ಆಕರ್ಷಣೆಗಳಾಗಿವೆ.

PC: Verma a k

ಮಹುಲಿ ಕೋಟೆ

ಮಹುಲಿ ಕೋಟೆ

ಎರಡು ಅಥವಾ ಅದಕ್ಕಿ೦ತ ಹೆಚ್ಚು ಬೆಟ್ಟಗಳಿ೦ದ ರೂಪುಗೊ೦ಡಿರುವ ಮಹುಲಿ ಕೋಟೆಯು ಈ ಬೆಟ್ಟಗಳು ಸಾಮಾನ್ಯವಾದ ಮೇಲ್ಭಾಗವನ್ನು ಹ೦ಚಿಕೊ೦ಡಿವೆ. ಥಾಣೆ ಜಿಲ್ಲೆಯ ಅತ್ಯುನ್ನತ ತಾಣವಾಗಿರುವುದರಿ೦ದ ಈ ಕೋಟೆಯು ಚಾರಣಿಗರ ಪಾಲಿನ ಸ್ವರ್ಗವೆ೦ದೇ ಹೇಳಬಹುದು. ಮೂಲತ: ಈ ಕೋಟೆಯು ಮೊಘಲರಿ೦ದ ನಿರ್ಮಿಸಲ್ಪಟ್ಟಿದ್ದು, ಇದೀಗ ಈ ಕೋಟೆಯು ಶಿಥಿಲಾವಸ್ಥೆಯಲ್ಲಿದೆ. ಶಿಥಿಲಗೊ೦ಡಿರುವ ಈ ಕೋಟೆಯನ್ನು ಇದೀಗ ಸಮೃದ್ಧ ಹಚ್ಚಹಸಿರು ಸು೦ದರವಾಗಿ ಆವರಿಸಿಕೊ೦ಡಿದೆ.

ಕಲ್ಯಾಣ್ ನಿ೦ದ 48 ಕಿ.ಮೀ. ಗಳಷ್ಟು ದೂರದಲ್ಲಿರುವ ಅಸನ್ಗಾ೦ವ್ ನಲ್ಲಿ 2,815 ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿದೆ ಈ ಮಹುಲಿ ಕೋಟೆ. ಈ ಸು೦ದರವಾದ, ಏಕಾ೦ತ ತಾಣದ೦ತಿರುವ ಕೋಟೆಗೆ ಚಾರಣ ಕ್ಲಬ್ ಗಳು ನಿಯಮಿತವಾಗಿ ಪ್ರಯಾಣವನ್ನೇರ್ಪಡಿಸುತ್ತವೆ.


PC: Sanmukh.putran

ಲಘಾಟ್ ಪುರಿಯ (Igatpuri) ಗಿರಿಧಾಮ

ಲಘಾಟ್ ಪುರಿಯ (Igatpuri) ಗಿರಿಧಾಮ

ಏಕಾ೦ತತಾಣದ೦ತಿದ್ದು, ಅಷ್ಟೇನೂ ಪರಿಚಿತವಲ್ಲದ೦ತಿರುವ ಈ ಪುಟ್ಟ ಗಿರಿಧಾಮವು ಅಸನ್ಗಾ೦ವ್ ನಿ೦ದ 58 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ಪುಟ್ಟದಾದ ಸ್ವರ್ಗಸದೃಶ ಗಿರಿಧಾಮ ಪ್ರದೇಶವು ಭಟ್ಸಾ ನದಿ ಕಣಿವೆ, ಒ೦ಟೆ ಕಣಿವೆ, ಮತ್ತು ಅನೇಕ ಗಿರಿಶಿಖರಗಳ ಆಶ್ರಯತಾಣವಾಗಿದ್ದು, ಈ ಗಿರಿಶಿಖರಗಳು ಇಡಿಯ ಗಿರಿಧಾಮ ಪ್ರದೇಶದ ರೋಚಕವಾದ ಪಕ್ಷಿನೋಟವನ್ನು ಒದಗಿಸುತ್ತದೆ.

ತಮ್ಮ ದೈನ೦ದಿನ ಜೀವನದ ಜ೦ಜಡಗಳಿ೦ದ ದೂರವಾಗುವುದರ ಮೂಲಕ ಪ್ರಶಾ೦ತವಾಗಿರುವ ಮತ್ತು ಹೊಸ ಚೈತನ್ಯೋತ್ಸಾಹಗಳನ್ನು ತು೦ಬಬಲ್ಲ೦ತಹ ಬಿಡುವಿನ ವೇಳೆಗಾಗಿ ಚಾರಣಿಗರು ಮತ್ತು ಪ್ರಕೃತಿಪ್ರಿಯರು ಸರ್ವೇಸಾಮಾನ್ಯವಾಗಿ ಈ ಸ್ಥಳಕ್ಕೆ ಆದ್ಯತೆ ನೀಡುತ್ತಾರೆ.

ಭ೦ಡಾರ್ ದಾರಾ ದಲ್ಲಿರುವ ಹಾಗೂ ಭ೦ಡಾರ್ ದಾರಾ ದ ಸುತ್ತಮುತ್ತಲಿನ ಸ್ಥಳಗಳ ಕುರಿತ೦ತೆ ಮತ್ತಷ್ಟು ತಿಳಿದುಕೊಳ್ಳುವುದಕ್ಕಾಗಿ ಈ ಲೇಖನವನ್ನು ಮು೦ದಕ್ಕೆ ಓದಿರಿ.

PC: Jsdevgan

ಅರ್ಥರ್ ಸರೋವರ ಮತ್ತು ವಿಲ್ಸನ್ ಅಣೆಕಟ್ಟು

ಅರ್ಥರ್ ಸರೋವರ ಮತ್ತು ವಿಲ್ಸನ್ ಅಣೆಕಟ್ಟು

ಲೇಕ್ ಅರ್ಥರ್ ಬೆಟ್ಟವೆ೦ದೂ ಕರೆಯಲ್ಪಡುವ ಅರ್ಥರ್ ಸರೋವರವು ಭ೦ಡಾರ್ ದಾರಾದಲ್ಲಿನ ಸಹ್ಯಾದ್ರಿ ಪರ್ವತ ಶ್ರೇಣಿಯ ದಟ್ಟವಾದ ಅರಣ್ಯಗಳ ಮಡಿಲಿನಲ್ಲಡಗಿದೆ. ಮೂವತ್ತನಾಲ್ಕು ಕಿಲೋಮೀಟರ್ ಗಳಷ್ಟು ವಿಸ್ತಾರವಾಗಿರುವ ಈ ಸರೋವರಕ್ಕೆಯೇ ವಿಲ್ಸನ್ ಅಣೆಕಟ್ಟನ್ನು ನಿರ್ಮಾಣಗೊಳಿಸಲಾಗಿದೆ.

ಇಸವಿ 1910 ರಲ್ಲಿ ಈ ಅಣೆಕಟ್ಟಿನ ನಿರ್ಮಾಣವು ಆರ೦ಭಗೊ೦ಡು ಇಸವಿ 1926 ರಲ್ಲಿ ಬ್ರಿಟೀಷರಿ೦ದ ಈ ಅಣೆಕಟ್ಟಿನ ನಿರ್ಮಾಣವು ಪೂರ್ಣಗೊ೦ಡಿತು. ಹೀಗಾಗಿ ಈ ಅಣೆಕಟ್ಟು ಭಾರತ ದೇಶದ ಅತ್ಯ೦ತ ಪ್ರಾಚೀನವಾದ ಅಣೆಕಟ್ಟು ಎ೦ದೆನಿಸಿಕೊ೦ಡಿದೆ.

ಪ್ರಶಾ೦ತವಾಗಿರುವ ಹಾಗೂ ಚಿತ್ರಪಟಸದೃಶ ಸರೋವರವು ಭ೦ಡಾರ್ ದಾರಾ ದ ಅತ್ಯ೦ತ ಬೇಡಿಕೆಯ ಪ್ರವಾಸೀ ತಾಣವಾಗಿದೆ. ಈ ಸರೋವರದಲ್ಲಿ ದೋಣಿವಿಹಾರದ ಸವಲತ್ತುಗಳೂ ಇದ್ದು, ದೋಣಿವಿಹಾರದ ಮೂಲಕವೇ ಸುತ್ತಲಿನ ಪರಿಸರದ ಪರಿಶುಭ್ರವಾದ ನಯನಮನೋಹರ ಸೊಬಗನ್ನು ಆನ೦ದಿಸಬಹುದು.

PC: Kashif Pathan

ಅ೦ಬ್ರೆಲ್ಲಾ ಜಲಪಾತಗಳು

ಅ೦ಬ್ರೆಲ್ಲಾ ಜಲಪಾತಗಳು

ಮಳೆಗಾಲದ ಅವಧಿಯಲ್ಲಿ ಉತ್ತರದ ತುದಿಭಾಗದಿ೦ದ ಅಣೆಕಟ್ಟಿನತ್ತ ಪ್ರವಹಿಸುವ ನೀರಿನಿ೦ದ ವಿಲ್ಸನ್ ಅಣೆಕಟ್ಟು ತು೦ಬಿ, ಉಕ್ಕಿ ಹರಿದು, ಅಣೆಕಟ್ಟಿನ ಕೆಳಸ್ತರದಲ್ಲಿರುವ ಬ೦ಡೆಗಳ ಮೇಲೆ ಕೊಡೆಯಾಕಾರದಲ್ಲಿ (ಛತ್ರಿಯಾಕಾರದಲ್ಲಿ) ಬೀಳುತ್ತದೆ. ಈ ಕಾರಣಕ್ಕಾಗಿ ಈ ಜಲಪಾತಕ್ಕೆ ಅ೦ಬ್ರೆಲ್ಲಾ ಜಲಪಾತವೆ೦ಬ ಹೆಸರು ಬ೦ತು.

ಜಲಪಾತದ ತಪ್ಪಲಲ್ಲಿಯೇ ಇರುವಾಗ ಸೇತುವೆಯು ಮೈದು೦ಬಿಕೊ೦ಡು ರಭಸವಾಗಿ ಧುಮ್ಮಿಕ್ಕುವ ಈ ಜಲಪಾತದ ರಮಣೀಯ ನೋಟವನ್ನು ಕೊಡಮಾಡುತ್ತದೆ. ಅ೦ಬ್ರೆಲ್ಲಾ ಜಲಪಾತಗಳನ್ನು ಮಳೆಗಾಲದ ಅವಧಿಯಲ್ಲಷ್ಟೇ ಕಣ್ತು೦ಬಿಕೊಳ್ಳಬಹುದು.

PC: Desktopwallpapers

ಮೌ೦ಟ್ ಕಲ್ಸುಬಾಯಿ

ಮೌ೦ಟ್ ಕಲ್ಸುಬಾಯಿ

ಚಾರಣಿಗರ ನಡುವೆ ಅಪ್ಯಾಯಮಾನವಾದ ಸ್ಥಳವಾಗಿರುವ ಮೌ೦ಟ್ ಕಲ್ಸುಬಾಯಿಯು ಪಶ್ಚಿಮ ಘಟ್ಟಗಳ ಅತ್ಯುನ್ನತವಾದ ಶಿಖರವೆ೦ದು ಪರಿಗಣಿತವಾಗಿದ್ದು, ಕಲ್ಸುಬಾಯಿಯು 5400 ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿದೆ. ಈ ಶಿಖರವು ಕೋಟೆಗಳಿ೦ದ ಸುತ್ತುವರೆಯಲ್ಪಟ್ಟಿದ್ದು, ದೇವಸ್ಥಾನವೊ೦ದರ ಆಶ್ರಯತಾಣವೂ ಆಗಿದೆ.

ಈ ಕೋಟೆಗಳೆಲ್ಲವೂ ಮರಾಠಾ ಸಾಮ್ರಾಜ್ಯಕ್ಕೆ ಸೇರಿದವುಗಳಾಗಿದ್ದು, ನೆರೆಯ ಶತ್ರುರಾಜ್ಯಗಳ ಮೇಲೆ ಮರಾಠಾ ಸಾಮ್ರಾಜ್ಯವು ಕಲ್ಸುಬಾಯಿ ಔನ್ನತ್ಯದಿ೦ದಲೇ ಹದ್ದಿನ ಕಣ್ಣಿಡುತ್ತಿತ್ತು ಎ೦ದು ಹೇಳಲಾಗುತ್ತದೆ.


ಮೌ೦ಟ್ ಕಲ್ಸುಬಾಯಿಯನ್ನೇರಲು ಅನೇಕ ಚಾರಣ ಹಾದಿಗಳು ಲಭ್ಯವಿವೆ. ಆದರೂ ಸಹ, ಈ ಸ್ಥಳದ ಉಸ್ತುವಾರಿ ನೋಡಿಕೊಳ್ಳುವವರು, ಮೌ೦ಟ್ ಕಲ್ಸುಬಾಯಿಯನ್ನು ಸುರಕ್ಷಿತವಾಗಿ ಏರುವ೦ತಾಗುವ ನಿಟ್ಟಿನಲ್ಲಿ ಮೂರು ಉಕ್ಕಿನ ಏಣಿಗಳನ್ನು ನಿರ್ಮಾಣಗೊಳಿಸಿದ್ದಾರೆ.

PC: Elroy Serrao

ರತನ್ ಗಢ್ ಕೋಟೆ

ರತನ್ ಗಢ್ ಕೋಟೆ

ಭ೦ಡಾರ್ ದಾರಾದಿ೦ದ 13 ಕಿ.ಮೀ. ಗಳಷ್ಟು ದೂರದಲ್ಲಿರುವ ರತನ್ ಗಢ್ ಕೋಟೆಯು ಮತ್ತೊ೦ದು ಜನಪ್ರಿಯವಾದ ಪ್ರವಾಸೀ ಆಕರ್ಷಣೆಯಾಗಿದೆ. ಈ ಕೋಟೆಯು 4250 ಅಡಿಗಳಷ್ಟು ಎತ್ತರದಲ್ಲಿದ್ದು, ಚಾರಣಿಗರ ಪಾಲಿನ ಅತ್ಯ೦ತ ಅಪ್ಯಾಯಮಾನವಾದ ತಾಣವಾಗಿದೆ.

ಪೂರ್ವದಲ್ಲಿ ಮೊಘಲರಿ೦ದ ಬಳಸಲ್ಪಡುತ್ತಿದ್ದ ಈ ಕೋಟೆಯು ಬಳಿಕ ಶಿವಾಜಿ ಮಹಾರಾಜ್ ರವರಿ೦ದ ಗೆಲ್ಲಲ್ಪಟ್ಟಿತು. ನಾಲ್ಕುನೂರು ವರ್ಷಗಳಷ್ಟು ಪ್ರಾಚೀನವಾಗಿರುವ ಈ ಕೋಟೆಯು ನಾಲ್ಕು ಪ್ರವೇಶದ್ವಾರಗಳು, ಎರಡು ಗುಹೆಗಳು, ಮತ್ತು ಕೋಟೆಯ ಉದ್ದಗಲಕ್ಕೂ ಹರಡಿಕೊ೦ಡಿರುವ ಹಲವಾರು ಬಾವಿಗಳನ್ನೂ ಒಳಗೊ೦ಡಿದೆ. ಎರಡು ಗುಹೆಗಳ ಪೈಕಿ ಒ೦ದು ಗುಹೆಯು ಬಹುತೇಕ 50 ಜನರನ್ನು ಸೇರಿಸಿಕೊಳ್ಳಬಹುದಾದಷ್ಟು ದೊಡ್ಡದಾಗಿದೆ! ಹೀಗಾಗಿ, ಸಾಹಸಿಗರ ಪಾಲಿಗೆ ರತನ್ ಗಢ್ ಕೋಟೆಯು ಸ್ವರ್ಗಸದೃಶ ತಾಣವಾಗಿದೆ!


PC: VinayakPhadatare

ಅಮೃತೇಶ್ವರ್ ದೇವಸ್ಥಾನ

ಅಮೃತೇಶ್ವರ್ ದೇವಸ್ಥಾನ

ಅಮೃತೇಶ್ವರ್ ದೇವಸ್ಥಾನವು ಭಗವಾನ್ ಶಿವನಿಗೆ ಅರ್ಪಿತವಾದುದಾಗಿದ್ದು, ಈ ದೇವಸ್ಥಾನವು ಭ೦ಡಾರ್ ದಾರಾದಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿರುವ ರತನ್ವಾಡಿ ಗ್ರಾಮದಲ್ಲಿದೆ. ಆರ್ಕೆಯಾಲಾಜಿಕಲ್ ಸರ್ವೇ ಆಫ್ ಇ೦ಡಿಯಾದ ಯಾದಿಯಲ್ಲಿ ಬರುವ ಈ ದೇವಸ್ಥಾನವು 1200 ವರ್ಷಗಳಷ್ಟು ಪ್ರಾಚೀನವಾದುದಾಗಿದೆ.

ಹೇಮದ್ ಪ೦ಥಿ ವಾಸ್ತುಶೈಲಿಯಲ್ಲಿ ಕೆ೦ಪು ಮತ್ತು ಕಪ್ಪು ಶಿಲೆಗಳನ್ನು ಬಳಸಿಕೊ೦ಡು ನಿರ್ಮಾಣಗೊಳಿಸಿದ ಈ ಭವ್ಯವಾದ ದೇವಸ್ಥಾನವು ಅತ್ಯ೦ತ ಸೊಗಸಾದ ಮ್ಯೂರಲ್ ಗಳು (ಗೋಡೆಗಳ ಮೇಲೆ ನೇರವಾಗಿ ರಚಿಸಲಾದ ಚಿತ್ರಕಲಾಕೃತಿಗಳು), ಸ್ತ೦ಭಗಳು, ಮತ್ತು ಬ೦ಡೆಯ ಮೇಲಿನ ಕೆತ್ತನೆಯ ಕೆಲಸಗಳನ್ನೊಳಗೊ೦ಡಿದೆ.


PC: www.win7wallpapers.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X