Search
  • Follow NativePlanet
Share
» »ಅಕ್ಟೋಬರ್ ತಿಂಗಳಿನಲ್ಲಿ ಈ ಜಾಗಗಳ ಸೌಂದರ್ಯ ಸವಿಯದಿದ್ದರೆ ಹೇಗೆ?

ಅಕ್ಟೋಬರ್ ತಿಂಗಳಿನಲ್ಲಿ ಈ ಜಾಗಗಳ ಸೌಂದರ್ಯ ಸವಿಯದಿದ್ದರೆ ಹೇಗೆ?

ಬಹುತೇಕರು ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಆಹ್ಲಾದಕರ ವಾತಾವರಣ, ಚಳಿಗಾಲದ ಚಳಿ, ಸಾಕಷ್ಟು ಹಬ್ಬಗಳು ಆರಂಭವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ದಸರಾ ರಜೆ ಕೂಡ ಸಿಗುವುದು ಇದೇ ಸಮಯದಲ್ಲಿ. ಒಟ್ಟಾರೆ ಈ ತಿಂಗಳು ರಜೆಗಳು ಹೆಚ್ಚು ಎಂಬ ಅಂಶವು ಪ್ರವಾಸಕ್ಕೆ ಪ್ಲ್ಯಾನ್ ಮಾಡಲು ಅವಕಾಶಗಳನ್ನು ನೀಡುತ್ತದೆ.

ಆದ್ದರಿಂದ ನೀವು ಶರತ್ಕಾಲದಲ್ಲಿ ಪ್ರವಾಸಕ್ಕೆ ಎಲ್ಲಿ ಹೊರಡುವುದು ಎಂದು ಆಲೋಚಿಸುತ್ತಿದ್ದರೆ ಇಲ್ಲಿ ದಕ್ಷಿಣ ಭಾರತದಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ನೋಡಲೇಬೇಕಾದ ಅತ್ಯುತ್ತಮ ತಾಣಗಳ ಪಟ್ಟಿಗಳನ್ನು ಕೊಡಲಾಗಿದೆ ನೋಡಿ...

ಹಂಪಿ

ಹಂಪಿ

ಸದ್ದು ಗದ್ದಲದಿಂದ ದೂರವಿರುವ ಹಂಪಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ರಾಜಧಾನಿ ಬೆಂಗಳೂರಿನಿಂದ 340 ಕಿಮೀ ಮತ್ತು ಬಳ್ಳಾರಿಯಿಂದ 64 ಕಿಮೀ ದೂರದಲ್ಲಿರುವ ಇದು ತುಂಗಭದ್ರಾ ನದಿಯ ದಡದಲ್ಲಿರುವ ಪುರಾತನ ಗ್ರಾಮವಾಗಿದೆ. ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿರುವ ಹಂಪಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಹಂಪಿಗೆ ಪ್ರವಾಸ ಕೈಗೊಂಡಾಗ ವಿರೂಪಾಕ್ಷ ದೇವಸ್ಥಾನ, ವಿಠ್ಠಲ ದೇವಸ್ಥಾನ ಮತ್ತು ಹಂಪಿ ಬಜಾರ್ ನೋಡುವುದನ್ನು ಮರೆಯದಿರಿ.

ಅನೇಕ ಸೂರ್ಯ ದೇವಾಲಯಗಳಿಗೂ ಹೆಸರುವಾಸಿಯಾಗಿರುವ ಹಂಪಿಗೆ ಅಕ್ಟೋಬರ್ ಸಮಯದಲ್ಲಿ ಭೇಟಿ ನೀಡುವುದರಿಂದ ಹವಾಮಾನವು ಆಹ್ಲಾದಕರವಾಗಿರುತ್ತದೆ. ಜೊತೆಗೆ ನೀವು ರುಚಿಕರವಾದ ಆಹಾರವನ್ನು ಸಹ ಆನಂದಿಸಬಹುದು. ಅಂದಹಾಗೆ ಕರ್ನಾಟಕ ಸರ್ಕಾರವು ಆಯೋಜಿಸುವ ಹಂಪಿ ಉತ್ಸವವು ಕೂಡ ವಿಜಯನಗರದ ಗತವೈಭವವನ್ನು ಸಾರುತ್ತದೆ. ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಈ ಉತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುವುದು.

ತಲುಪುವ ಮಾರ್ಗ

ಹುಬ್ಬಳ್ಳಿ ವಿಮಾನ ನಿಲ್ದಾಣವು ಹಂಪಿಯಿಂದ 166 ಕಿಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ. 13 ಕಿಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹಂಪಿಯನ್ನು ಅನ್ವೇಷಿಸಲು ಉತ್ತಮ ಮಾರ್ಗವೆಂದರೆ ಕಾಲ್ನಡಿಗೆ ಅಥವಾ ಬೈಕ್‌ನಲ್ಲಿ.

ಮೈಸೂರು

ಮೈಸೂರು

‘ಅರಮನೆಗಳ ನಗರಿ' ಮೈಸೂರು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ವಿಶೇಷವಾಗಿ ಅಕ್ಟೋಬರ್ ತಿಂಗಳು ಮೈಸೂರು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ಭಾನುವಾರದಂದು ಮತ್ತು ದಸರಾ ಆಚರಣೆಯ ಸಮಯದಲ್ಲಿ ಮುಸ್ಸಂಜೆಯ ವೇಳೆಗೆ ಅರಮನೆ ನೋಡಲು ಎರಡು ಕಣ್ಣು ಸಾಲದು. ಮೈಸೂರು ಅರಮನೆಯು ಭಾರತದ ಅತ್ಯಂತ ಅದ್ಭುತವಾದ ಅರಮನೆಗಳಲ್ಲಿ ಒಂದಾಗಿದೆ.

ತಂಪಾದ ಗಾಳಿ ಆನಂದಿಸುತ್ತಾ ಅರಮನೆಗಳ ಸುತ್ತಲೂ ನಡೆಯುವುದು ನಿಮಗೆ ಅದ್ಭುತ ಅನುಭವವನ್ನು ನೀಡುತ್ತದೆ. ಮೈಸೂರಿಗೆ ಬಂದಾಗ ಸೇಂಟ್ ಫಿಲೋಮಿನಾ ಚರ್ಚ್, ಕೆಆರ್ ಎಸ್ ಮತ್ತು ಅಂಬಾ ವಿಲಾಸ ಅರಮನೆ, ಕಾರಂಜಿ ಸರೋವರ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು ಮೃಗಾಲಯ ಮತ್ತು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ. ಅಲ್ಲದೆ ಮೈಸೂರಿಗೆ ಬಂದಾಗ ಶ್ರೀಗಂಧದ ಉತ್ಪನ್ನಗಳು ಮತ್ತು ರೇಷ್ಮೆ ಸೀರೆಗಳನ್ನು ಖರೀದಿಸಲು ಮರೆಯದಿರಿ.

ತಲುಪುವ ಮಾರ್ಗ

ಮೈಸೂರಿಗೆ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಪ್ರವೇಶಿಸಬಹುದು. ಮೈಸೂರು ವಿಮಾನ ನಿಲ್ದಾಣವನ್ನು ಹೊಂದಿದ್ದರೂ, ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿಲ್ಲ. ಆದ್ದರಿಂದ ಪ್ರವಾಸಿಗರು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಮೈಸೂರನ್ನು ಪ್ರವೇಶಿಸಬಹುದು. ಇದು 170 ಕಿಮೀ. ದೂರದಲ್ಲಿದೆ. ರೈಲಿನಲ್ಲಿ ಹೋಗುವುದು ಅತ್ಯಂತ ಅನುಕೂಲಕರ ಪ್ರಯಾಣದ ಮಾರ್ಗವಾಗಿದೆ. ಬಸ್ ಸೇವೆಗಳು ಸಹ ಲಭ್ಯವಿದ್ದು, ಎಂದಿಗೂ ಸೀಟು ಹುಡುಕುವ ಸಮಸ್ಯೆ ಬರುವುದಿಲ್ಲ.

ಅಲಪ್ಪುಳ (ಅಲೆಪ್ಪಿ)

ಅಲಪ್ಪುಳ (ಅಲೆಪ್ಪಿ)

ಮೈಸೂರು ಮಾರ್ಗವಾಗಿ ನೀವು ಅಲಪ್ಪುಳಗೆ ತೆರಳಲು ಪ್ಲ್ಯಾನ್ ಮಾಡಿಕೊಳ್ಳಬಹುದು. ಸುಂದರವಾದ ಪಟ್ಟಣವನ್ನು ಅನ್ವೇಷಿಸಲು ಅಕ್ಟೋಬರ್ ತಿಂಗಳು ಸೂಕ್ತವಾಗಿದೆ. ಈ ಸಮಯದಲ್ಲಿ ಅಲೆಪ್ಪಿ ಹಚ್ಚ ಹಸಿರಿನಿಂದ ಕೂಡಿರುತ್ತದೆ. ನೀವು ರುಚಿಕರವಾದ ಸಮುದ್ರಾಹಾರ ಮತ್ತು ಇತರ ಸ್ಥಳೀಯ ಭಕ್ಷ್ಯಗಳನ್ನು ಸೇವಿಸಬೇಕೆಂದರೆ, ನೀರನ್ನು ನೋಡುತ್ತಾ ವಿಶ್ರಾಂತಿ ಕಳೆಯಬೇಕೆಂದರೆ ಹೌಸ್‌ಬೋಟ್ ಅನ್ನು ಆಯ್ಕೆ ಮಾಡಿಕೊಳ್ಳಿ. ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಅಲಪ್ಪುಳಕ್ಕೆ ಸಾಮಾನ್ಯವಾಗಿ ಮಧುಚಂದ್ರಕ್ಕಾಗಿ ಅಥವಾ ಉತ್ತಮ ಕುಟುಂಬ ವಿಹಾರಕ್ಕಾಗಿ ತೆರಳುತ್ತಾರೆ.

ಲೆಕ್ಕವಿಲ್ಲದಷ್ಟು ಹೌಸ್‌ಬೋಟ್‌ಗಳು, ಹೋಮ್‌ಸ್ಟೇಗಳು ಮತ್ತು ಆಯುರ್ವೇದ ರೆಸಾರ್ಟ್‌ಗಳು ಅಲಪ್ಪುಳದಲ್ಲಿ ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಹೌಸ್‌ಬೋಟ್‌'ನಲ್ಲಿ ಹೋಗುವಾಗ ಹಸಿರು ಭತ್ತದ ಗದ್ದೆಗಳು ಮತ್ತು ಕೇರಳದ ಸ್ಥಳೀಯರ ಜೀವನವನ್ನು ವೀಕ್ಷಿಸಬಹುದು.

ತಲುಪುವ ಮಾರ್ಗ

ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಅಲೆಪ್ಪಿ ನಗರದಿಂದ ಸುಮಾರು 80 ರಿಂದ 100 ಕಿಮೀ ದೂರದಲ್ಲಿದೆ. ಪಟ್ಟಣದಲ್ಲಿ ಒಂದೆರಡು ರೈಲು ನಿಲ್ದಾಣಗಳಿವೆ. ಕಲವೂರ್ ಹಾಲ್ಟ್ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಸ್ಥಳೀಯ ಬಸ್ಸುಗಳು, ಆಟೋ ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಹೇರಳವಾಗಿ ಇರುವುದರಿಂದ ಅಲೆಪ್ಪಿಯೊಳಗೆ ಪ್ರಯಾಣಿಸುವುದು ಸಮಸ್ಯೆಯಲ್ಲ.

ಲೋನಾವಾಲಾ ಮತ್ತು ಖಂಡಾಲಾ

ಲೋನಾವಾಲಾ ಮತ್ತು ಖಂಡಾಲಾ

ಅವಳಿ ಗಿರಿಧಾಮಗಳಾದ ಲೋನಾವಾಲಾ ಮತ್ತು ಖಂಡಾಲಾ ಪುಣೆಗೆ ಹೋದಾಗ ಭೇಟಿ ನೀಡಲೇಬೇಕಾದ ತಾಣವಾಗಿದೆ. ಗಿರಿಧಾಮಗಳು ಅಕ್ಟೋಬರ್ ನಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತವೆ. ನೀಲಿ ಆಕಾಶ ನೋಡುತ್ತಾ ಮುಸ್ಸಂಜೆಯ ಸಮಯದಲ್ಲಿ ಒಂದು ಕಪ್ ಚಹಾ ಹೀರುತ್ತಾ ವಿಶ್ರಾಂತಿ ಪಡೆಯಬಹುದು. ಮಹಾರಾಷ್ಟ್ರದ ಈ ಜನಪ್ರಿಯ ಗಿರಿಧಾಮಗಳಿಗೆ ಮುಂಬೈನಿಂದ ರಸ್ತೆ ಪ್ರವಾಸ ಮಾಡಿದರೆ ಚೆನ್ನಾಗಿರುತ್ತದೆ.

ಗಿರಿಧಾಮದ ಸುತ್ತಲೂ ಅಂಕುಡೊಂಕಾಗಿ ಹರಿಯುವ ಜಲಪಾತಗಳು, ಸರೋವರಗಳು ದಟ್ಟವಾದ ಕಾಡುಗಳು ಮತ್ತು ಬೆಟ್ಟಗಳು ಇರುವುದರಿಂದ ಕ್ಯಾಂಪಿಂಗ್, ಟ್ರೆಕ್ಕಿಂಗ್ ಮತ್ತು ಇತರ ಸಾಹಸ ಕ್ರೀಡೆಗಳಿಗೆ ಜನಪ್ರಿಯ ತಾಣವಾಗಿದೆ. ಲೋನಾವಾಲಾದಲ್ಲಿ ರುಚಿಕರವಾದ ಚಿಕ್ಕಿ ಜನಪ್ರಿಯವಾಗಿದೆ.

ತಲುಪುವ ಮಾರ್ಗ

ನಿಮ್ಮ ಬಳಿ ಖಾಸಗಿ ವಾಹನ ಇಲ್ಲದಿದ್ದರೆ ಬಸ್‌ಗಳು, ಆಟೋಗಳು ಮತ್ತು ಬಾಡಿಗೆ ಸೈಕಲ್‌ಗಳು ಇಲ್ಲಿ ಲಭ್ಯವಿದೆ. ಆಟೋಗಳು ಮತ್ತು ಟ್ಯಾಕ್ಸಿಗಳು ಮೀಟರ್‌ ಹಾಕುವುದಿಲ್ಲ. ಆದ್ದರಿಂದ ಮುಂಚಿತವಾಗಿ ದರವನ್ನು ನಿಗದಿಪಡಿಸುವುದು ಒಳ್ಳೆಯದು. ಗಿರಿಧಾಮಗಳ ಸುತ್ತಲೂ ಪ್ರಯಾಣಿಸಲು ಬಸ್ ಅತ್ಯುತ್ತಮ ಆಯ್ಕೆಯಾಗಿದೆ. ಲೋನಾವಾಲಾ ರೈಲು ನಿಲ್ದಾಣವು ಮುಂಬೈ-ಪುಣೆ ರೈಲ್ವೆ ಮಾರ್ಗದ ಪ್ರಮುಖ ಜಂಕ್ಷನ್ ಆಗಿದೆ. ನ್ಯೂ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲೋನಾವಾಲಾದಿಂದ 45 ಕಿ.ಮೀ. ದೂರದಲ್ಲಿದೆ.

ಅಜಂತಾ ಮತ್ತು ಎಲ್ಲೋರಾ ಗುಹೆಗಳು

ಅಜಂತಾ ಮತ್ತು ಎಲ್ಲೋರಾ ಗುಹೆಗಳು

ಅಜಂತಾ ಮತ್ತು ಎಲ್ಲೋರಾ ಗುಹೆಗಳು ಮಹಾರಾಷ್ಟ್ರದ ಔರಂಗಾಬಾದ್ ಬಳಿ ಇದೆ. ಈ ಸುಂದರವಾದ ಸ್ಥಳಕ್ಕೆ ವಿಶೇಷವಾಗಿ ಅಕ್ಟೋಬರ್ ತಿಂಗಳಲ್ಲಿ ಭೇಟಿ ನೀಡುವುದು ಸೂಕ್ತ. ಏಕೆಂದರೆ ಅಕ್ಟೋಬರ್ ನಿಂದ ಮಾರ್ಚ್ ಮತ್ತು ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ನೀವು ಇತಿಹಾಸ ಪ್ರಿಯರಾಗಿದ್ದರೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಎಲ್ಲೋರಾ ಗುಹೆಗಳಿಗೆ ಒಮ್ಮೆ ಭೇಟಿ ನೀಡಲೇಬೇಕು.

ಅಜಂತಾ ಮತ್ತು ಎಲ್ಲೋರಾ ಗುಹೆಗಳ ಸಂಕೀರ್ಣವು ಸುಂದರವಾದ ಶಿಲ್ಪಗಳು, ವರ್ಣಚಿತ್ರಗಳು ಮತ್ತು ಹಸಿಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಬೌದ್ಧ ಮಠಗಳು, ಹಿಂದೂ ಮತ್ತು ಜೈನ ದೇವಾಲಯಗಳನ್ನು ಒಳಗೊಂಡಿದೆ. ಇಡೀ ಅಜಂತಾ ಮತ್ತು ಎಲ್ಲೋರಾ ಗುಹೆಗಳಲ್ಲಿನ ಅತ್ಯಂತ ಪ್ರಸಿದ್ಧ ಸ್ಥಳವೆಂದರೆ ಕೈಲಾಶ್ ದೇವಾಲಯ. ಇದು ಅತ್ಯಂತ ಬೃಹತ್ ಏಕಶಿಲೆಯಾಗಿದೆ.

ತಲುಪುವ ಮಾರ್ಗ

ಗುಹೆಗಳಿಗೆ ಔರಂಗಾಬಾದ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಹತ್ತಿರದಲ್ಲಿರುವ ಜಲಗಾಂವ್ ಮತ್ತು ಔರಂಗಾಬಾದ್ ರೈಲು ನಿಲ್ದಾಣಗಳು ಭಾರತದ ಎಲ್ಲಾ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವ ಎರಡು ರೈಲ್ವೆ ಜಂಕ್ಷನ್‌ಗಳಾಗಿವೆ. ಇಲ್ಲಿಗೆ ಹಲವಾರು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸೌಲಭ್ಯವೂ ಇದ್ದು, ಬಾಡಿಗೆ ಕಾರುಗಳು ಅಥವಾ ಟ್ಯಾಕ್ಸಿಗಳು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯಾಣಿಸಲು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X