Search
  • Follow NativePlanet
Share
» »2020 ರಲ್ಲಿ ಮಧ್ಯಪ್ರದೇಶದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳು

2020 ರಲ್ಲಿ ಮಧ್ಯಪ್ರದೇಶದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳು

By arsad hussian

ಹೆಸರೇ ಸೂಚಿಸುವಂತೆ ಭಾರತದ ಮಧ್ಯದಲ್ಲಿಯೇ ಇರುವ ಮಧ್ಯಪ್ರದೇಶ ಭವ್ಯ ಸಂಸ್ಕೃತಿಯನ್ನು ಪಡೆದಿದ್ದು ಹೆಚ್ಚಿನ ಪ್ರವಾಸಿಗರು ಸಂದರ್ಶಿಸಲು ಬಯಸುವ ರಾಜ್ಯವಾಗಿದೆ. ಭಾರತದ ’ಹೃದಯ’ ಎಂಬ ಅನ್ವರ್ಥನಾಮವನ್ನು ಪಡೆದುಕೊಂಡಿರುವ ಈ ರಾಜ್ಯದಲ್ಲಿ ಹಲವಾರು ಐತಿಹಾಸಿಕ ಭವ್ಯ ಸ್ಮಾರಕಗಳಿವೆ. ಗತ ಭಾರತದ ಇತಿಹಾಸದ ವೈಭವವನ್ನು ಇವು ಸಾರಿದರೆ ಕೆಲವು ನೈಸರ್ಗಿಕ ಸೌಂದರ್ಯವನ್ನು ಉಣಿಸುವ ತಾಣಗಳು ಭೂಮಿಯನ್ನು ಇನ್ನಷ್ಟು ಪ್ರೀತಿಸುವಂತೆ ಮಾಡುತ್ತವೆ. ಪುರಾತನ ದೇವಾಲಯಗಳು, ವನ್ಯಜೀವಿ ಅಭಯಾರಣ್ಯಗಳು ಒಂದು ಮಗ್ಗುಲನ್ನು ತೋರಿದರೆ ಜನನಿಬಿಡ ನಗರಗಳು ಆಧುನೀಕತೆಯನ್ನು ವೈಭವೀಕರಿಸುತ್ತವೆ. ಎಲ್ಲೂ ಸಾಗರ ತೀರವನ್ನು ಹೊಂದಿರದ ಈ ರಾಜ್ಯದ ಪ್ರತಿ ಭಾಗವೂ ಪ್ರವಾಸಿಗರಿಗೆ ಒಂದಲ್ಲಾ ಒಂದು ಆಯ್ಕೆಯನ್ನು ನಿಡುವ ಮೂಲಕ ತನ್ನಲ್ಲಿ ಆಹ್ವಾನಿಸುತ್ತದೆ. ಒಂಟಿಯಾಗಿ ಪ್ರಯಾಣಿಸುವ ಅಥವಾ ಒಂದು ವಾರದ ಮಟ್ಟಿಗೆ ರಾಜ್ಯವೊಂದನ್ನು ಸಂದರ್ಶಿಸುವ ಇರಾದೆ ನಿಮಗಿದ್ದರೆ ಅಥವಾ ಕುಟುಂಬ ಸಹಿತ ಹೊಸ ಸ್ಥಳವನ್ನು ಸಂದರ್ಶಿಸುವುದಾದರೆ ಮಧ್ಯ ಪ್ರದೇಶ ನಿಮಗೆ ಉತ್ತಮ ಆಯ್ಕೆಯಾಗಿದೆ.

ಈ ವರ್ಷದಲ್ಲಿ ಮಧ್ಯಪ್ರದೇಶ ಸಂದರ್ಶಿಸುವ ಉತ್ಸಾಹ ನಿಮಗಿದ್ದರೆ ಈ ರಾಜ್ಯದಲ್ಲಿನ ಪ್ರಮುಖ ಹತ್ತು ಪ್ರೇಕ್ಷಣೀಯ ತಾಣಗಳ ಬಗ್ಗೆ ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

1. ಭೋಪಾಲ

1. ಭೋಪಾಲ

ಕೆಲವು ದಶಕಗಳ ಹಿಂದೆ ಸಂಭವಿಸಿದ್ದ ಭೋಪಾಲ್ ಗ್ಯಾಸ್ ದುರಂತದ ಶಾಶ್ವತ ಕಪ್ಪು ಚುಕ್ಕೆಯನ್ನು ಹೊರತುಪಡಿಸಿದರೆ ಭೂಪಾಲ್ ಒಂದು ಸುಂದರ ನಗರವಾಗಿದ್ದು ಪ್ರವಾಸಿಗರಿಗೆ ಹಲವಾರು ಪ್ರೇಕ್ಷಣೀಯ ಮತ್ತು ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುತ್ತದೆ. ವಿಶಾಲ, ಸ್ಪಟಿಕಶುಭ್ರ ಕೆರೆಗಳು, ಕುತೂಹಲ ಕೆರಳಿಸುವ ವಸ್ತು ಸಂಗ್ರಹಾಲಯಗಳು, ವಣ್ಯಜೀವಿ ಅಭಯಾರಣ್ಯಗಳು ಮತ್ತು ಪಾರಂಪರಿಕ ತಾಣಗಳಿವೆ. ನಮ್ಮ ಬೆಂಗಳೂರು ಹೇಗೆ ಉದ್ಯಾನ ನಗರಿಯೋ ಅಂತೆಯೇ ಭೋಪಾಲ್ ಕೆರೆಗಳ ನಗರಿಯಾಗಿದೆ.

ಪ್ರಮುಖ ಸ್ಥಳಗಳು: ಅಪ್ಪರ್ ಲೇಕ್, ಗೋಹರ್ ಮಹಲ್, ಭೀಂಬೆಟ್ಕಾ, ಲೋವರ್ ಲೇಕ್, ಬಿರ್ಲಾ ಮ್ಯೂಸಿಯಂ, ಭೋಜ್ಪುರ, ಸ್ಟೇಟ್ ಮ್ಯೂಸಿಯಂ, ಮತ್ತು ವನ್ ವಿಹಾರ್ ರಾಷ್ಟ್ರೀಯ ಉದ್ಯಾನ

2. ಇಂದೋರ್

2. ಇಂದೋರ್

ಪ್ರವಾಸಿಗರ ಆಕರ್ಷಣೆ ಅತಿ ಹೆಚ್ಚಾಗಿರುವ ನಗರವೆಂದರೆ ಇಂದೋರ್. ಇದು ಮಧ್ಯಪ್ರದೇಶದ ಅತಿ ಹೆಚ್ಚು ವೈವಿಧ್ಯತೆಯ ಆಕರ್ಷಣೆಗಳನ್ನು ಹೊಂದಿದೆ. ಸರಸ್ವತೀ ನಗರದ ದಡದಲ್ಲಿರುವ ಈ ಸುಂದರ ನಗರ ಹಲವಾರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಕೆಲವು ಕಟ್ಟಡಗಳ ಸೂಕ್ಷ್ಮ ಕೆತ್ತನೆ ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುತ್ತವೆ. ಅಲ್ಲದೇ ಇಂದೋರ್ ಮಧ್ಯ ಪ್ರದೇಶದ ವಾಣಿಜ್ಯ ಕೇಂದ್ರವೂ ಆಗಿದೆ. ಇದೇ ಕಾರಣಕ್ಕೆ ಮಧ್ಯಪ್ರದೇಶವನ್ನು ಇಂದೋ ಆಳುತ್ತದೆ ಎಂಬ ಮಾತು ವಾಡಿಕೆಯಲ್ಲಿದೆ.

ಪ್ರಮುಖ ಸ್ಥಳಗಳು: ಸೆಂಟ್ರಲ್ ಮ್ಯೂಸಿಯಂ, ಲಾಲ್ ಬಾಗ್ ಪ್ಯಾಲೇಸ್, ತಿಂಚಾ ಜಲಪಾತ, ಪಾಟಲ್ಪಾನಿ ಜಲಪಾತ, ರಾಲಮಂಡಲ್ ವನ್ಯಜೀವಿ ಅಭಯಾರಣ್ಯ, ಮತ್ತು ಇಂದೋರ್ ವೈಟ್ ಚರ್ಚ್

3. ಗ್ವಾಲಿಯರ್

3. ಗ್ವಾಲಿಯರ್

ಇದೊಂದು ಐತಿಹಾಸಿಕ ನಗರವಾಗಿದ್ದು 1857 ರ ದಂಗೆಯಲ್ಲಿ ಭಾಗವಹಿಸದ ಕಾರಣದಿಂದ ಹೆಸರುವಾಸಿಯಾಗಿದೆ. ಅಲ್ಲದೇ ಹಲವಾರು ಐತಿಹಾಸಿಕ ಸ್ಮಾರಕಗಳು ಮತ್ತು ಆಧುನಿಕ ಕಟ್ಟಡಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕಲೆ, ಇತಿಹಾಸ ಮತ್ತು ಸಂಸ್ಕೃತಿ ಎಲ್ಲವನ್ನೂ ಉಣಬಡಿಸುವ ಗ್ವಾಲಿಯರ್ ಮಧ್ಯಪ್ರದೇಶದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ.

ಪ್ರಮುಖ ಸ್ಥಳಗಳು: ಗ್ವಾಲಿಯರ್ ಕೋಟೆ, ತಾನ್ಸೇನನ ಸಮಾಧಿ, ಮಾನ್ಸಿಂಗ್ ಅರಮನೆ, ಗೋಪಾಚಲ್ ಪರ್ವತ್, ಟೈಗರ್ ಅಣೆಕಟ್ಟು, ಜೈ ವಿಲಾಸ್ ಅರಮನೆ, ಸೂರ್ಯ ದೇವಾಲಯ, ಸಾಸ್ ಬಹೂ ದೇವಾಲಯಗಳು, ಮಾಧವ್ ರಾಷ್ಟ್ರೀಯ ಉದ್ಯಾನ ಮತ್ತು ಸಿಂಧಿಯಾ ವಸ್ತುಸಂಗ್ರಹಾಲಯ.

4. ಪೆಂಚ್

4. ಪೆಂಚ್

ಗುಜರಾತ್ ನ ಗೀರ್ ನಲ್ಲಿ ಸಿಂಹಗಳ ತಾಣವನ್ನು ನಿರ್ಮಿಸಿದಂತೆಯೇ ಮಧ್ಯಪ್ರದೇಶದ ಪೆಂಚ್ ನಲ್ಲಿ ಹುಲಿಗಳಿಗೆ ಸೂಕ್ತವಾಗುವಂತರ ಪರಿಸರವನ್ನು ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಿಸಲಾಗಿದೆ. ಮಧ್ಯ ಪ್ರದೇಶ ಪ್ರವಾಸೋದ್ಯಮದಲ್ಲಿ ಪೆಂಚ್ ಹೆಸರು ಪ್ರಮುಖವಾಗಿದೆ. ಸುಮಾರು 760 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ತಾಣ ಜೀವವೈವಿಧ್ಯತೆಗೆ ಹೆಸರಾಗಿದ್ದು ಹಲವಾರು ಸುಂದರ ಮತ್ತು ಅಳಿವಿನ ಅಂಚಿನಲ್ಲಿರುವ ಜೀವಿಗಳನ್ನು ಸಲಹುತ್ತಿದೆ. ವಿಶೇಷವಾಗಿ ರಾಯಲ್ ಬೆಂಗಾಲ್ ಹುಲಿಯ ಸಂರಕ್ಷಣೆಗೆ ಈ ತಾಣದಲ್ಲಿ ಹೆಚ್ಚಿನ ಮಹತ್ವವಿದೆ. ಜನಪ್ರಿಯ ಮಕ್ಕಳ ಕತೆ ಮತ್ತು ಚಲನಚಿತ್ರವಾಗಿರುವ ರುಡ್ಯಾರ್ಡ್ ಕಿಪ್ಲಿಂಗ್ ರವರ ಜಂಗಲ್ ಬುಕ್ ಸಹಾ ಇದೇ ಅರಣ್ಯವನ್ನು ಆಧರಿಸಿದೆ ಎಂದು ಭಾವಿಸಲಾಗಿದೆ.

ಪ್ರಮುಖ ಸ್ಥಳಗಳು: ಬಾಘ್ವನ್ ಜಂಗಲ್ ಲಾಡ್ಜ್ ಮತ್ತು ಕಾಡು ಪ್ರಾಣಿಗಳಾದ ಕಾಡೆಮ್ಮೆ, ಪಟ್ಟೆ ಹಯೆನಾ, ಸಾಂಬಾರ್ ಜಿಂಕೆ, ಚಿರತೆ, ರಾಯಲ್ ಬಂಗಾಳ ಹುಲಿ, ಚಿರತೆ ಮತ್ತು ಕಾಡು ಬೆಕ್ಕು

5. ಜಬಲ್ಪುರ

5. ಜಬಲ್ಪುರ

ಹಲವಾರು ನೈಸರ್ಗಿಕ ತಾಣಗಳನ್ನು ಹೊಂದಿರುವ ಜಬಲ್ಪುರ ಮಧ್ಯಪ್ರದೇಶದಲ್ಲಿ ತಪ್ಪದೇ ಭೇಟಿ ನೀಡಬೇಕಾದ ಸ್ಥಳವಾಗಿದೆ. ನರ್ಮದಾ ನದಿಯ ದಡದಲ್ಲಿರುವ ಈ ನಗರ ಹಲವಾರು ಅದ್ಭುತ ನೈಸರ್ಗಿಕ ನೋಟಗಳನ್ನು ಹೊಂದಿದೆ ಹಾಗೂ ಗ್ರಾನೈಟ್ ಮತ್ತು ಸುಣ್ಣದಕಲ್ಲುಗಳ ಕಲ್ಲುಗುಡ್ಡಗಳಿಂದ ಸುತ್ತುವರೆದಿದೆ. ಅದರಲ್ಲೂ ಮಾರ್ಬಲ್ ರಾಕ್ಸ್ ಎಂಬ ಸ್ಥಳದಲ್ಲಿ ನರ್ಮದಾ ನದಿ ಸುಮಾರು ಎಂಟು ಕಿಲೋಮೀಟರುಗಳಷ್ಟು ದೂರದಲ್ಲಿ ನುಣುಪು ಕಲ್ಲುಗಳನ್ನು ಕೊರೆದು ಅದ್ಭುತವಾದ ಕಣಿವೆಯನ್ನು ಸೃಷ್ಟಿಸಿದೆ. ಈ ಕಲ್ಲುಗಳು ಹಲವಾರು ಕೋಟೆಗಳಿಗೆ ಗೋಡೆಗಳಾಗಿವೆ ಹಾಗೂ ವನ್ಯಜೀವಿ ಅಭಯಾರಣ್ಯಗಳೂ ಇವೆ. ಎಲ್ಲಾ ಸೌಕರ್ಯಗಳನ್ನು ಒಳಗೊಂಡಿರುವ ಜಬಲ್ಪುರ ಎಲ್ಲಾ ವಯಸ್ಸಿನವರಿಗೂ ಒಂದಲ್ಲಾ ಒಂದು ಆಕರ್ಷಣೆಯನ್ನು ನೀಡುತ್ತದೆ.

ಪ್ರಮುಖ ಸ್ಥಳಗಳು: ಭೇದಘಾಟ್, ಧುವಾಂಧರ್ ಜಲಪಾತ, ಬಾರ್ಗಿ ಅಣೆಕಟ್ಟು, ಮಾರ್ಬಲ್ ರಾಕ್ಸ್, ಡುಮ್ನಾ ನೈಸರ್ಗಿಕ ಅಭಯಾರಣ್ಯ, ಮದನ್ ಮಹಲ್ ಕೋಟೆ, ಪಿಸಾನ್ ಹರಿ ಜೈನ ದೇವಾಲಯ ಮತ್ತು ರಾಣಿ ದುರ್ಗಾವತಿ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯ

 6. ಮಾಂಡು

6. ಮಾಂಡು

ಒಂದು ವೇಳೆ ನೀವು ನಿಸರ್ಗಪ್ರಿಯರಾಗಿದ್ದರೆ, ಅದರಲ್ಲೂ ಐತಿಹಾಸಿಕ ಸೌಂದರ್ಯದ ಉಪಾಸಕರಾಗಿದ್ದರೆ ನೀವು ಮಧ್ಯಪ್ರದೇಶದ ಮಾಂಡು ಅಥವಾ ಮಾಂದವಗಢ ಎಂಬ ಸ್ಥಳವನ್ನು ಉಪೇಕ್ಷಿಸಲು ಸಾಧ್ಯವೇ ಇಲ್ಲ. ಇದು ಹಲವಾರು ಐತಿಹಾಸಿಕ ಘಟನೆಗಳ ತಾಣವೂ ಆಗಿದ್ದು ಇದರ ಕುರುಗಳನ್ನು ಭವ್ಯ ಕಟ್ಟಡಗಳ ರೂಪದಲ್ಲಿ ಇಂದಿಗೂ ಕಾಣಬಹುದು. ನೂರಾರು ವರ್ಷ ಹಿಂದಿನ ಕೋಟೆ ಕೊತ್ತಲಗಳು, ಕೆರೆ ನಾಲೆಗಳು ಇಂದಿಗೂ ಸುರಕ್ಷಿತ ಸ್ಥಿತಿಯಲ್ಲಿವೆ. ಅಲ್ಲದೇ ಹಲವಾರು ದೇವಾಲಯಗಳೂ ಈ ಸ್ಥಳದ ಸೌಂದರ್ಯದ ಜೊತೆಗೇ ಪಾವಿತ್ರ್ಯತೆಯನ್ನೂ ಹೆಚ್ಚಿಸಿವೆ. ದೇವಾಲಯಗಳಲ್ಲಿರುವ ಕೆತ್ತನೆಗಳು ನಮ್ಮ ಬೇಲೂರು ಹಳೇಬೀಡಿನಂತೆಯೇ ಅತಿ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡಿದ್ದು ಇವನ್ನೆಲ್ಲಾ ನೋಡಬೇಕಾದರೆ ಹೆಚ್ಚಿನ ಸಮಯ ಬೇಕಾಗುತ್ತದೆ.

ಪ್ರಮುಖ ಸ್ಥಳಗಳು: ಹಿಂಡೋಲಾ ಮಹಲ್, ಶಿಪ್ ಪ್ಯಾಲೇಸ್, ರೂಪಮತಿಯ ಹಜಾರ, ರೇವಾ ಕುಂಡ್, ಬಾಗ್ ಗುಹೆಗಳು, ನೀಲಕಂಠನ ಅರಮನೆ, ರೂಪಾಯನ್ ಮ್ಯೂಸಿಯಂ ಮತ್ತು ಹೋಶಾಂಗ್ ಷಾ ಸಮಾಧಿ.

7. ಚಾಂದೇರಿ

7. ಚಾಂದೇರಿ

ಚಾಂದೇರಿ ಮಧ್ಯಪ್ರದೇಶದ ಇನ್ನೊಂದು ಐತಿಹಾಸಿಕ ಸ್ಥಳವಾಗಿದೆ. ಆದರೆ ಇಲ್ಲಿ ಹೆಲವು ಐತಿಹಾಸಿಕ ಕಟ್ಟಡಗಳು ಧ್ವಂಸಗೊಂಡಿದ್ದು ಇದರ ಅವಶೇಶಗಳನ್ನು ಮಾತ್ರವೇ ಕಾಣಬಹುದು. ಗುರ್ಜಾರಾ ಮತ್ತು ಪ್ರತಿಹಾರ ರಾಜರ ಆಳ್ವಿಕೆಯ ಕಾಲದಲ್ಲಿ ಉತ್ತುಂಗವನ್ನು ಪಡೆದಿದ್ದ ಕುರುಹುಗಳನ್ನು ಇಂದಿಗೂ ಕಾಣಬಹುದು.

ಪ್ರಮುಖ ಸ್ಥಳಗಳು: ಕೋಶಕ್ ಮಹಲ್, ಕತಿ ಘಾಟಿ ಗೇಟ್‌ವೇ, ಶೆಹಜಾದಿ ಕಾ ರೌಜಾ, ಪುರಾನಾ ಮದರಸಾ, ಈದ್ಗಾಹ್, ಜಮಾ ಮಸೀದಿ, ಬಡಾ ಮಹಲ್ ದರ್ವಾಜಾ, ಮತ್ತು ಚಂದ್ರಪ್ರಭ ದೇವಸ್ಥಾನ

8. ಖಜುರಾಹೋ

8. ಖಜುರಾಹೋ

ಹಲವಾರು ಐತಿಹಾಸಿಕ ದೇವಾಲಯ ಹಾಗೂ ಕಟ್ಟಡಗಳಲ್ಲಿರುವ ಸೂಕ್ಷ್ಮ ಕೆತ್ತನೆಯ ಕಲೆ ಖುಜುರಾಹೋವಿನ ಖ್ಯಾತಿಯನ್ನು ಹೆಚ್ಚಿಸಿವೆ. ಅದರಲ್ಲೂ ಅತಿ ಸೂಕ್ಷ್ಮವಾಗಿ ಕೆತ್ತಲಾಗಿರುವ ಮಿಥುನ ಶಿಲ್ಪಗಳು ಜಗತ್ಪ್ರಸಿದ್ಧವಾಗಿವೆ ಹಾಗೂ ಇವು ಭಾರತದ ಏಳು ಅದ್ಭುತಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆಯಲು ನೆರವಾಗಿವೆ.

ಪ್ರಮುಖ ಸ್ಥಳಗಳು: ಅಜಯ್ ಗಢ ಕೋಟೆ, ಪನ್ನಾ ರಾಷ್ಟ್ರೀಯ ಉದ್ಯಾನ, ಬೆನಿ ಸಾಗರ್ ಅಣೆಕಟ್ಟು, ಪುರಾತತ್ವ ವಸ್ತು ಸಂಗ್ರಹಾಲಯ, ದೇವಾಲಯಗಳಾದ ಕಂದರಿಯಾ ಮಹಾದೇವ್, ಪಾರ್ಸ್ವನಾಥ್, ವಿಶ್ವನಾಥ್, ದೇವಿ ಜಗದಂಬ, ವಾಮನ, ದುಲಾಡಿಯೊ, ಚಿತ್ರಗುಪ್ತ ಮತ್ತು ಬಿಜಮಂಡಲ ದೇವಾಲಯಗಳು

9. ಉಜ್ಜಯಿನಿ

9. ಉಜ್ಜಯಿನಿ

ಶಿಪ್ರಾ ನದಿಯ ದಂಡೆಯಲ್ಲಿರುವ ಉಜ್ಜಯಿನಿ ಇತಿಹಾಸ ಪ್ರಸಿದ್ಧ ನಗರವಾಗಿದೆ ಹಾಗೂ ಮಧ್ಯಪ್ರದೇಶದ ಅತಿ ಆಕರ್ಷಕ ನಗರವಾಗಿದೆ. ಭಾರತದ ಹಿಂದೂಗಳ ಪಾಲಿಗೆ ಇದು ಅತಿ ಪವಿತ್ರ ನಗರಗಳಲ್ಲಿ ಒಂದಾಗಿದೆ ಹಾಗೂ ಇಲ್ಲಿರುವ ಬಹುಸಂಖ್ಯೆಯ ದೇವಾಲಯಗಳು ಈ ನಗರಕ್ಕೆ 'ದೇವಾಲಯಗಳ ನಗರ' ಎಂಬ ಅನ್ವರ್ಥನಾಮವನ್ನು ಪಡೆಯಲು ನೆರವಾಗಿವೆ. ಬುಂದೇಲರು ಈ ಸ್ಥಳದಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ದೇವಾಲಯಗಳಿಗೆ ನೀಡಲಾದ ಪ್ರಾಮುಖ್ಯತೆಯಿಂದಾಗಿ ಉಜ್ಜಯಿನಿಗೆ ಈ ಖ್ಯಾತಿ ಲಭಿಸಿದೆ. ಸಾಮಾನ್ಯವಾಗಿ ತೀರ್ಥಯಾತ್ರೆ ಕೈಗೊಳ್ಳುವ ಜನರು ಉಜ್ಜಯಿನಿಯನ್ನೂ ಪವಿತ್ರ ನಗರವನ್ನಾಗಿ ಪರಿಗಣಿಸುತ್ತಾರೆ. ಪ್ರತಿ ವರ್ಷ ನಡೆಸಲಾಗುವ ಕುಂಭ ಮೇಳ ಅಥವಾ ಉಜ್ಜೈನಿ ಕುಂಭಸ್ಥ ಎಂಬ ಮಹಾಮೇಳದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ ಹಾಗೂ ಇದು ವಿಶ್ವದ ಗಮನ ಸೆಳೆಯುವ ಮಹತ್ತರ ಕಾರ್ಯಕ್ರಮವೂ ಆಗಿದೆ.

ಪ್ರಮುಖ ಸ್ಥಳಗಳು: ರಾಮ್ ಘಾಟ್, ಶ್ರೀ ಮಹಾಕಾಳೇಶ್ವರ ದೇವಸ್ಥಾನ, ಜಂತರ್ ಮಂತರ್, ಕಾಲ್ ಭೈರವ್ ದೇವಸ್ಥಾನ, ವಿಕ್ರಮ್ ಕೀರ್ತಿ ಮಂದಿರ ವಸ್ತುಸಂಗ್ರಹಾಲಯ, ಮತ್ತು ಕಾಳಿದೇ ಅರಮನೆ

10. ಕಾನ್ಹಾ

10. ಕಾನ್ಹಾ

ಇದು ಖ್ಯಾತ ರಾಷ್ಟೀಯ ಉದ್ಯಾನವಾಗಿದೆ ಹಾಗೂ ಹಲವಾರು ಅಳಿವಿನಂಚಿನಲ್ಲಿರುವ ಜೀವಪ್ರಬೇಧಗಳನ್ನು ಉಳಿಸಿ ಸಂತತಿಯನ್ನು ಬೆಳೆಸಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ಚುಕ್ಕೆಗಳಿಲ್ಲದ ಜೌಗು ಜಿಂಗೆ ಅಥವಾ ಬಾರಾಸಿಂಗಾ (ಒಟ್ಟು ಹನ್ನೆರಡು ಕವಲುಗಳನ್ನು ಹೊಂದಿರುವ ಕೊಂಬುಗಳಿಂದಾಗಿ ಈ ಹೆಸರು). ನಿಸರ್ಗಪ್ರಿಯರು ಈ ತಾಣವನ್ನು ಉಪೇಕ್ಷಿಸಲು ಸಾಧ್ಯವೇ ಇಲ್ಲ. ಈ ಅಭಯಾರಣ್ಯ ಸಾಲ್ ಮತ್ತು ಮಹುವಾ ಮರಗಳನ್ನು ಸಂರಕ್ಷಿಸಲಾಗಿದೆ ಹಾಗೂ ಇವು ಇರುವೆಡೆ ಹುಲಿಗಳೂ ಇರುತ್ತವಾದ್ದರಿಂದ ಈ ಮರಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಉಳಿದಂತೆ ಕೃಷ್ಣಮೃಗ, ಜಿಂಕೆಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಅರಣ್ಯದಲ್ಲಿ ವಿಹಾರ ಅಥವಾ ಸಫಾರಿಯನ್ನು ನಡೆಸಲು ಹಾಗೂ ಅರಣ್ಯದಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲ್ಲಿನ ಸ್ಥಳೀಯ ಮಾದಕ ಪಾನೀಯಕ್ಕೂ ಈ ಮರದ ಅಥವಾ ಮಹುವಾ ಎಂಬ ಹೆಸರನ್ನೇ ನೀಡಲಾಗಿದೆ.

ಪ್ರಮುಖ ಸ್ಥಳಗಳು: ವನ್ಯಜೀವಿ ರೆಸಾರ್ಟ್, ಜೀಪ್ ಸಫಾರಿ ಮತ್ತು ರಾತ್ರಿ ಸಫಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X