Search
  • Follow NativePlanet
Share
» »ಮೋಹಕ ಸೂರ್ಯೋದಯ ಹಾಗು ಸೂರ್ಯಾಸ್ತಗಳು

ಮೋಹಕ ಸೂರ್ಯೋದಯ ಹಾಗು ಸೂರ್ಯಾಸ್ತಗಳು

By Vijay

ಸೂರ್ಯೋದಯವೇ ಆಗಿರಲಿ ಅಥವಾ ಸೂರ್ಯಾಸ್ತವೆ ಆಗಿರಲಿ ನೋಡಲು ಬಲು ಚೆಂದ. ಚಿತ್ರಕಾರನೊಬ್ಬ ತನ್ನ ಕುಂಚದಿಂದ ವಿವಿಧ ಬಣ್ಣ ಚಿತ್ತಾರಗಳ ಕಲಾಕೃತಿಯನ್ನು ಸೃಷ್ಟಿಸುವ ಹಾಗೆ ಬಾನಿನ ಅಂಗಳದಲ್ಲಿ ವಿಶೀಷ್ಟ ವಿನ್ಯಾಸ, ಹೊಳಪು ಝಳಪಿನೊಂದಿಗೆ ಮನವನ್ನು ಮೋಹಕತೆಯ ಪರವಶದಲ್ಲಿ ಬಿಗಿದು ಚುಂಬಕದಂತೆ ಸೆಳೆಯುತ್ತದೆ ಸೂರ್ಯನ ಉದಯ ಹಾಗು ಅಸ್ತಗಳು. ಇನ್ನೂ ಸೂರ್ಯೋದಯ, ಸೂರ್ಯಾಸ್ತಗಳಿಗೆಂದೆ ಹೆಸರುವಾಸಿಯಾದ ಸಾಕಷ್ಟು ಸ್ಥಳಗಳನ್ನು ಭಾರತದಲ್ಲಿ ಕಾಣಬಹುದು.

ಕೆಲವು ಸ್ಥಳಗಳಲ್ಲಿ ಸೂರ್ಯೋದಯ ಅಥವಾ ಸೂರ್ಯಾಸ್ತಗಳೇ ನೋಡಲು ವಿಶೇಷವಾಗಿರುತ್ತದೆ. ಆದ್ದರಿಂದಲೆ ಇವು ಪ್ರವಾಸಿ ಆಕರ್ಷಣೆಗಳಾಗಿಯೂ ಮೆರೆಯುತ್ತವೆ. ಪ್ರಸ್ತುತ, ಲೇಖನದಲ್ಲಿ ಸೂರ್ಯೋದಯ ಹಾಗು ಸೂರ್ಯಾಸ್ತಗಳಿಗೆ ಹೆಸರುವಾಸಿಯಾದ ಕೆಲವು ಆಯ್ದ ಸ್ಥಳಗಳ ಪರಿಚಯ ನೀಡಲಾಗಿದೆ. ಇದರಲ್ಲಿನ ಕೆಲವು ಸ್ಥಳಗಳು ಸೂರ್ಯೋದಯ ಹಾಗು ಸೂರ್ಯಾಸ್ತಗಳಿಗೂ ಹೆಸರುವಾಸಿಯಾಗಿವೆ.

ಕನ್ಯಾಕುಮಾರಿ:

ಕನ್ಯಾಕುಮಾರಿ:

ತಮಿಳುನಾಡು ರಾಜ್ಯದ ದಕ್ಷಿಣದ ತುದಿ ಕನ್ಯಾಕುಮಾರಿ ಪಟ್ಟಣದ ಸೂರ್ಯಾಸ್ತವು ನೋಡಲು ಅತ್ಯಂತ ಮನಮೋಹಕ. ಪಶ್ಚಿಮದಲ್ಲಿ ಅಸ್ತಂಗತನಾಗುವ ಸೂರ್ಯ ಮನಸ್ಸಿನ ಒತ್ತಡವನ್ನು ನಿವಾರಿಸುತ್ತ ಹಗುರವಾದ ಭಾವನೆಯನ್ನು ಮೂಡಿಸುತ್ತ "ಮತ್ತೆ ಭೇಟಿಯಾಗೋಣ" ಎನ್ನುವ ರೀತಿಯಲ್ಲಿ ಜಾರಿ ಹೋಗುತ್ತಾನೆ.

ಚಿತ್ರಕೃಪೆ: Senthil.elt

ಅಲೆಪಿ:

ಅಲೆಪಿ:

ಕೇರಳ ರಾಜ್ಯದಲ್ಲಿರುವ ಅಲೆಪಿಯು ಒಂದು ಗಮ್ಯ ಪ್ರವಾಸಿ ತಾಣ. ಇಲ್ಲಿನ ಸುಮಧುರ ಹಿನ್ನೀರಿನ ಪ್ರದೇಶದಲ್ಲಿ ನೋಡಲು ಲಭಿಸುವ ಸೂರ್ಯಾಸ್ತದ ಅಂದ ಚೆಂದವೆ ವಿಶೇಷ.

ಚಿತ್ರಕೃಪೆ: Arian Zwegers

ಮಂಗಳೂರು:

ಮಂಗಳೂರು:

ಕರ್ನಾಟಕದ ಮಂಗಳೂರು ಅಥವಾ ದಕ್ಷಿಣ ಕನ್ನಡ ಜಿಲ್ಲೆಯು ಒಂದು ನೆಚ್ಚಿನ ಪ್ರವಾಸಿ ತಾಣ. ಇಲ್ಲಿನ ಕಡಲ ತೀರಗಳು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತವೆ. ಉಲ್ಲಾಳ ಸೇತುವೆಯ ಸೂರ್ಯಾಸ್ತದ ನೋಟವು ಎಂತಹವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ.

ಚಿತ್ರಕೃಪೆ: Nithin Bolar k

ಆಗುಂಬೆ:

ಆಗುಂಬೆ:

"ಆಗುಂಬೆಯ....ಪ್ರೇಮ ಸಂಜೆಯ.... " ಎಂಬ ಅಣ್ಣಾವ್ರ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ಆಗುಂಬೆಯ ಸೂರ್ಯಾಸ್ತದ ನೋಟವೆ ಹಾಗೆ. ದೂರವಿರುವ ಎರಡು ಹೃದಯಗಳನು ಒಂದು ಮಾಡುವ ನೋಟವದು.

ಚಿತ್ರಕೃಪೆ: ಪ್ರಶಾಂತ ಸೊರಟೂರ

ಗೋವಾ:

ಗೋವಾ:

ಭವ್ಯ ಕಡಲ ತೀರಗಳು, ಪಾರ್ಟಿಗಳು, ಉಲ್ಲಾಸ, ಉತ್ಸಾಹ ಇವೆಲ್ಲವು ಸೇರಿದಾಗ ಗೋವಾ ಎಂಬ ಹದಿಹರೆಯದವರ ನೆಚ್ಚಿನ ಪ್ರವಾಸಿ ತಾಣ ನೆನಪಾಗುವುದು ಸಹಜ. ಸೂರ್ಯಾಸ್ತದ ವಿಹಂಗಮ ನೋಟವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಲು ಸಾಕಷ್ಟು ಕಡಲ ತೀರಗಳಿವೆ ಗೋವಾದಲ್ಲಿ.


ಚಿತ್ರಕೃಪೆ: Mark Sheffield

ಭೀಗವನ್:

ಭೀಗವನ್:

ಮಹಾರಾಷ್ಟ್ರದ ಪುಣೆ ನಗರದಿಂದ 95 ಕಿ.ಮೀ ದೂರದಲ್ಲಿರುವ ಭೀಗವನ್ ಎಂಬ ಉಜನಿ ಜಲಾಶಯದ ಜಲಾನಯನ ಪ್ರದೇಶವು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Sunder Iyer

ರಣ್ ಆಫ್ ಕಚ್:

ರಣ್ ಆಫ್ ಕಚ್:

ಗುಜರಾತ್ ರಾಜ್ಯದಲ್ಲಿರುವ ಕಚ್ ನ ರಣ್ ಪ್ರದೇಶವು ಲವಣ ಪ್ರದೇಶಕ್ಕೆ ಭಾರತದಲ್ಲೆ ಹೆಸರುವಾಸಿಯಾಗಿದೆ. ಹಿಮ ಪ್ರದೇಶದಂತೆ ಗೋಚರಿಸುವ ಈ ಲವಣ ಮರಳುಗಾಡಿನಲ್ಲಿ ಸೂರ್ಯಾಸ್ತದ ಸುಂದರ ನೋಟವು ವಿಶೇಷವಾದ ಮೆರುಗನ್ನು ನೀಡುತ್ತದೆ.

ಚಿತ್ರಕೃಪೆ: Bhargavinf

ಮೌಂಟ್ ಅಬು:

ಮೌಂಟ್ ಅಬು:

ಮರಭೂಮಿ ರಾಜ್ಯ ರಾಜಸ್ಥಾನದಲ್ಲಿ ಕಂಡುಬರುವ ಸುಂದರವಾದ ಗಿರಿಧಾಮ ಪ್ರದೇಶ ಮೌಂಟ್ ಅಬು. ಇದು ರಾಜ್ಯದ ಇತರೆ ಸ್ಥಳಗಳ ಜೊತೆಯಾಗಿ ನೆಚ್ಚಿನ ಪ್ರವಾಸಿ ಸ್ಥಳವಾಗಿರುವುದೂ ನಿಜ. ಇಲ್ಲಿ ಕಂಡುಬರುವ ಸೂರ್ಯಾಸ್ತದ ನೋಟವು ಅವಿಸ್ಮರಣೀಯವಾದ ಅನುಭವವನ್ನು ಒದಗಿಸುತ್ತದೆ.

ಚಿತ್ರಕೃಪೆ: T.sujatha

ಪುಷ್ಕರ್:

ಪುಷ್ಕರ್:

ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿರುವ ಪುಷ್ಕರ್ ಪಟ್ಟಣವು ಒಂದು ಗಮ್ಯ ಪ್ರವಾಸಿ ಸ್ಥಳವಾಗಿದೆ. ಇಲ್ಲಿರುವ ಪುಷ್ಕರ್ ಕೆರೆಯಿಂದಾಗಿ ಪ್ರಖ್ಯಾತಿಯನ್ನು ಪಡೆದಿದೆ. ಈ ಕೆರೆಯ ಹಿನ್ನಿಲೆಯಲ್ಲಿ ಕಂಡುಬರುವ ಸೂರ್ಯಾಸ್ತದ ನೋಟವು ನೋಡಲು ಬಲು ಚೆಂದವಾಗಿರುತ್ತದೆ.

ಚಿತ್ರಕೃಪೆ: Nicholas Kenrick

ದಿಬ್ರುಗಡ್:

ದಿಬ್ರುಗಡ್:

ಅಸ್ಸಾಂ ರಾಜ್ಯದಲ್ಲಿರುವ ದಿಬ್ರುಗಡ್ ನಗರವನ್ನು "ಭಾರತದ ಚಹಾ ನಗರ" ಎಂತಲೂ ಕೂಡ ಸಂಬೋಧಿಸಲಾಗುತ್ತದೆ. ಈ ಸುಂದರ ಚಹಾ ನಗರವು ತನ್ನ ಮೋಹಕ ಸೂರ್ಯಾಸ್ತದ ನೋಟಕ್ಕೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Iampartha

ಉಮಿಯಮ್ ಕೆರೆ, ಮೇಘಾಲಯ:

ಉಮಿಯಮ್ ಕೆರೆ, ಮೇಘಾಲಯ:

ವಿವಿಧ ಬಣ್ಣ ಚಿತ್ತಾರಗಳಿಂದ ಕಂಗೊಳಿಸುತ್ತದೆ ಉಮಿಯಮ್ ಕೆರೆಯ ಸೂರ್ಯಾಸ್ತದ ನೋಟ. ಮೇಘಾಲಯದ ಶಿಲಾಂಗ್ ನಗರದ ಉತ್ತರಕ್ಕೆ 15 ಕಿ.ಮೀ ದೂರದಲ್ಲಿದೆ ಈ ಸುಂದರ ತಾಣ. ಇಲ್ಲಿ ಸಾಕಷ್ಟು ಜಲಕ್ರೀಡೆಗಳೂ ಕೂಡ ಲಭ್ಯವಿದೆ.

ಚಿತ್ರಕೃಪೆ: Vikramjit Kakati

ತಾಜ್ ಮಹಲ್, ಆಗ್ರಾ:

ತಾಜ್ ಮಹಲ್, ಆಗ್ರಾ:

ಆಗ್ರಾ ನಗರದಲ್ಲಿ ಕಂಡುಬರುವ ಅತಿ ಶ್ರೇಷ್ಠ ಪ್ರವಾಸಿ ಸ್ಮಾರಕವೆಂದರೆ ತಾಜ್ ಮಹಲ್. ತಾಜ್ ಮಹಲ್ ಜೊತೆಗಿನ ಬೆಳಿಗ್ಗೆಯ ಸೂರ್ಯೋದಯ ನೋಟವೂ ಕೂಡ ಮನಸ್ಸಾಳದಿಂದ ಮರೆಯಾಗುವುದು ಕಷ್ಟ.

ಚಿತ್ರಕೃಪೆ: Ekabhishek

ಟೈಗರ್ ಹಿಲ್, ದಾರ್ಜೀಲಿಂಗ್:

ಟೈಗರ್ ಹಿಲ್, ದಾರ್ಜೀಲಿಂಗ್:

ದಾರ್ಜೀಲಿಂಗ ಪಟ್ಟಣದಿಂದ 11 ಕಿ.ಮೀ ದೂರದಲ್ಲಿರುವ ಟೈಗರ್ ಹಿಲ್ಲ್ ಬೆಟ್ಟವು ಕಂಚನಜುಂಗಾ ಬೆಟ್ಟದ ಭವ್ಯ ನೋಟವನ್ನು ಕರುಣಿಸುತ್ತದೆ. ಅದರಲ್ಲೂ ಸೂರ್ಯೋದಯದ ನೋಟವಂತೂ ಮನದಾಳದಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಚಿತ್ರಕೃಪೆ: Shizhao

ಅರೂರ್:

ಅರೂರ್:

ಕೇರಳದ ಅಲಪುಳಾ ಜಿಲ್ಲೆಯಲ್ಲಿರುವ ಒಂದು ಪುಟ್ಟ ಪಟ್ಟಣವೆ ಅರೂರ್. ಇಲ್ಲಿನ ಅರೂರ್ ಸೇತುವೆಯ ಸೂರ್ಯೋದಯದ ನೋಟವು ಚುಂಬಕದಂತೆ ಸೆಳೆಯುತ್ತದೆ.

ಚಿತ್ರಕೃಪೆ: Augustus Binu

ನರಸಾಪುರ್, ಪಶ್ಚಿಮ ಗೋದಾವರಿ:

ನರಸಾಪುರ್, ಪಶ್ಚಿಮ ಗೋದಾವರಿ:

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರ್ ಪಟ್ಟಣವು ಸುಂದರವಾದ ಸೂರ್ಯೋದಯದ ನೋಟವನ್ನು ಕರುಣಿಸುತ್ತದೆ.

ಚಿತ್ರಕೃಪೆ: Anna Frodesiak

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X