Search
  • Follow NativePlanet
Share
» »ಇವೆ ಚಿತ್ರೀಕರಣಕ್ಕೆ ಹೆಸರುವಾಸಿಯಾದ ಸ್ಥಳಗಳು!

ಇವೆ ಚಿತ್ರೀಕರಣಕ್ಕೆ ಹೆಸರುವಾಸಿಯಾದ ಸ್ಥಳಗಳು!

By Vijay

ಒಮ್ಮೊಮ್ಮೆ ಚಲನ ಚಿತ್ರಗಳನ್ನು ವೀಕ್ಷಿಸುವಾಗ ಪರದೆಯ ಮೇಲೆ ನಟಿಸುತ್ತಿರುವ ನಾಯಕ, ನಾಯಕಿಯರಿಗಿಂತಲೂ ಹೆಚ್ಚಾಗಿ ಅವರ ಹಿನ್ನಿಲೆಯಲ್ಲಿರುವ ಸನ್ನಿವೇಷಗಳು, ಸ್ಥಳಗಳ ಅಪ್ರತಿಮ ಸೌಂದರ್ಯತೆ ಕಣ್ಣಿಗೆ ಕಟ್ಟಿಬಿಡುತ್ತವೆ. ಉದಾಹರಣೆಗೆ ಮುಂಗಾರು ಮಳೆ ಎಂಬ ಚಿತ್ರದ ಒಂದು ಸನ್ನಿವೇಷವು ಜೋಗದ ಮೈಸಿರಿಯನ್ನು ಅತ್ಯದ್ಭುತವಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದನ್ನು ಕಾಣಬಹುದಲ್ಲವೆ?

ಹಾಗಾಗಿ ಸ್ಥಳಗಳ ನಯನಮನೋಹರ ಸೌಂದರ್ಯ, ತನ್ನಲ್ಲೆ ಸೂಪ್ತವಾಗಿ ಅಡಗಿದ್ದು ಅದನ್ನು ನಿಖರವಾದ ದೃಷ್ಟಿಕೋನದಲ್ಲಿ ನೋಡಿದಾಗ ಎದ್ದು ಕಾಣಿಸುತ್ತದೆ. ಇಂತಹ ಸೌಂದರ್ಯರಾಶಿಯಿಂದ ಕೂಡಿದ ಸ್ಥಳಗಳ ಹುಡುಕಾಟದಲ್ಲಿ ಚಲನಚಿತ್ರಗಳ ನಿರ್ದೇಶಕರು ನಿರ್ಮಾಪಕರು ಸದಾ ನಿರತರಾಗಿರುತ್ತಾರೆ.

ಅದಾಗ್ಯೂ ದಕ್ಷಿಣ ಭಾರತದಲ್ಲಿರುವ ಕೆಲವು ಸ್ಥಳಗಳು ತಮ್ಮ ಅದ್ವಿತೀಯ ಪ್ರಾಕೃತಿಕ ಸೊಂದರ್ಯದಿಂದ, ಆಕರ್ಷಣೆಗಳಿಂದ ಇಂದಿಗೂ ಸಾಕಷ್ಟು ನಿರ್ದೇಶಕ, ನಿರ್ಮಾಪಕರ ಬಲು ನೆಚ್ಚಿನ ಸ್ಥಳಗಳಾಗಿ ಹೆಸರುವಾಸಿಯಾಗಿವೆ. ಪ್ರತಿ ಬಾರಿಯೂ ಇಲ್ಲಿ ಚಿತ್ರೀಕರಣಗೊಂಡಾಗ ಆ ಸ್ಥಳಗಳ ಕಾಣದ ಸುಂದರತೆಯು ಮತ್ತೆ ಮತ್ತೆ ಅನಾವರಣಗೊಳ್ಳುತ್ತಲೆ ಇರುತ್ತದೆ.

ಪ್ರಸ್ತುತ ಲೇಖನದ ಮೂಲಕ ಅಂತಹ ಕೆಲವು ಆಯ್ದ ದಕ್ಷಿಣ ಭಾರತದ ಅತಿ ಸುಂದರ ಸ್ಥಳಗಳು ಹಾಗೂ ವರ್ಷಪೂರ್ತಿ ಯಾವುದಾದರೊಂದು ಚಲನಚಿತ್ರಕ್ಕೆ ಆಶ್ರಯ ನೀಡುತ್ತಲೆ ಇರುವ ಸ್ಥಳಗಳ ಕುರಿತು ತಿಳಿಯಿರಿ. ಇವು ದಕ್ಷಿಣ ಭಾರತದ ನೆಚ್ಚಿನ "ಶೂಟಿಂಗ್ ಲೊಕೇಷನ್ಸ್" ಎಂಬ ಅಭಿದಾನಕ್ಕೆ ಪಾತ್ರವಾಗಿವೆ.

ಕೇರಳ

ಕೇರಳ

ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ನಿಜಕ್ಕೂ ಒಂದೊಮ್ಮೆ ಭೇಟಿ ನೀಡಿದರೆ ನಿಮ್ಮ ಹೃದಯವನ್ನೆ ಕದಿಯಬಲ್ಲ ಸಾಮರ್ಥ್ಯವಿರುವ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಇಲ್ಲಿನ ದಟ್ಟ ಹಸಿರಿನ ಸುಂದರ ಕಾಡು-ಮೇಡುಗಳ, ಬೆಟ್ಟ-ಗುಡ್ಡಗಳ ನಯನ ಮನೋಹರ ದೃಶ್ಯಾವಳಿಗಳು ಬೆರಗುಗೊಳ್ಳುವಂತೆ ಮಾಡುತ್ತದೆ. ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರ ನಿರ್ದೇಶಕರ ಬಲು ಅಚ್ಚುಮೆಚ್ಚಿನ ತಾಣವಾಗಿ ಮುನ್ನಾರ್ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Bimal KC

ಕೊಲ್ಲಂ ಜಿಲ್ಲೆ

ಕೊಲ್ಲಂ ಜಿಲ್ಲೆ

ಕೇರಳದ ಇನ್ನೊಂದು ಆಕರ್ಷಕ ಚಿತ್ರೀಕರಣದ ತಾಣವಾಗಿ ಹೆಸರುವಾಸಿಯಾಗಿದೆ ಕೊಲ್ಲಂ ಜಿಲ್ಲೆಯಲ್ಲಿರುವ ಅಷ್ಟಮುಡಿ ಹಿನ್ನೀರು ಕೆರೆ. ಪಾಮ್ ಎಲೆಯ ಆಕಾರದಲ್ಲಿರುವ ಈ ಅದ್ಭುತ ಕೆರೆ ಎಂಟು ಮೂಲೆಗಳನ್ನು ಹೊಂದಿರುವುದರಿಂದ ಅಷ್ಟಮುಡಿ ಎಂಬ ಹೆಸರನ್ನು ಪಡೆದಿದೆ. ಅಲ್ಲದೆ ಆಕಾರದಲ್ಲಿ ಕೇರಳದ ಎರಡನೇಯ ಅತಿ ದೊಡ್ಡ ಕೆರೆಯಾಗಿ ಅಷ್ಟಮುಡಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Arunvrparavur

ವಿಶಾಲವಾಗಿ ಹರಡಿದ ಕಾಡು

ವಿಶಾಲವಾಗಿ ಹರಡಿದ ಕಾಡು

ಕೇರಳದ ಪಥನಾಂತಿಟ್ಟ, ಕೊಟ್ಟಾಯಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಅದ್ಭುತ ರಾಷ್ಟ್ರೀಯ ಕಾಡು ನಿರ್ದೇಶಕರ, ನಿರ್ಮಾಪಕರ ಬಲು ನೆಚ್ಚಿ ಚಿತ್ರೀಕರಣದ ತಾಣವಾಗಿದೆ. ಶ್ರೀಮಂತ ಜೀವ ಸಂಕುಲ, ಹಿತಕರವಾದ ವಾತಾವರಣ, ಮನಮೋಹಕ ಸೃಷ್ಟಿ ಸೌಂದರ್ಯ, ತಂಪನ್ನೀಯುವ ಕೆರೆಗಳು ಈ ತಾಣದ ಪ್ರಮುಖ ಆಕರ್ಷಣೆಗಳು. ಇನ್ನೊಂದು ವಿಷಯವೆಂದರೆ ಪ್ರವಾಸಿಗರಲ್ಲಿ ಇದು ತೆಕ್ಕಡಿ ಎಂಬ ಹೆಸರಿನಿಂದಲೆ ಹೆಚ್ಚು ಚಿರಪರಿಚಿತವಾಗಿದೆ. ಈ ಚಿತ್ರ ಗಮನಿಸಿದಾಗ ಯಾವುದಾದರೂ ಚಿತ್ರಗಳ ಹಾಡಿನ ಸನ್ನಿವೇಷಗಳು ನಿಮಗೆ ನೆನಪಾಗಿರಬೇಕಲ್ಲವೆ?

ಚಿತ್ರಕೃಪೆ: Girlxplorer

ತ್ರಿಶ್ಶುರ್‍ ಜಿಲ್ಲೆ

ತ್ರಿಶ್ಶುರ್‍ ಜಿಲ್ಲೆ

ಕೇರಳದ ತ್ರಿಶ್ಶೂರ್ ಜಿಲ್ಲೆಯ ಚಾಲಕುಡಿ ತಾಲೂಕಿನ ಅತಿರಪಲ್ಲಿ ಪಟ್ಟಣದ ಬಳಿಯ ಅದ್ಭುತ ಕಾಡು ಪರಿಸರದಲ್ಲಿರುವ ಅತಿ ಸುಂದರ ಹಾಗೂ ನಯನಮನೋಹರವಾದ ಜಲಪಾತ ತಾಣವಾಗಿದೆ ಈ ಅತಿರಪಲ್ಲಿ ಜಲಪಾತ. ಈ ಸುಂದರ ಜಲಪಾತ ಕೇಂದ್ರ ಎಷ್ಟೊಂದು ಜನಪ್ರೀಯವಾಗಿದೆ ಎಂದರೆ ದಕ್ಷಿಣ ಭಾರತದ ಬಹುತೇಕ ಎಲ್ಲ ಭಾಷೆಗಳ ಚಿತ್ರಗಳ ಕೆಲ ಸನ್ನಿವೇಷಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Dilshad Raushan

ಕಾಸರಗೋಡು

ಕಾಸರಗೋಡು

ಪ್ರಸಿದ್ಧ ಹಿಂದಿ ಚಿತ್ರವಾದ ಬಾಂಬೆ ನೆನಪಿರಬೇಕಲ್ಲವೆ? ಅದರಲ್ಲೂ "ತೂ ಹಿರೇ" ಎಂಬ ಇಂಪಾದ ಹಾಡು ಬಹುತೇಕ ಎಲ್ಲರಿಗೂ ಗೊತ್ತಿದೆ. ಆ ಅದ್ಭುತ ಹಾಡನ್ನು ಚಿತ್ರೀಕರಿಸಿದ್ದು ಇದೆ ಸುಂದರ ಕೋಟೆಯಲ್ಲಿ ಎಂಬುದು ನಿಮಗೆ ಗೊತ್ತೆ? ಹೌದು ಒಂದೆಡೆ ಸಮುದ್ರ ಇನ್ನೊಂದೆಡೆ ವಿಶಾಲವಾದ ಕೋಟೆ ಈ ಹಾಡಿಗೆ ಹಿನ್ನಿಲೆ ಒದಗಿಸಿತ್ತು. ಈ ಒಂದು ಕೋಟೆ ತಾಣವು ನೋಡಲು ಬಲು ವಿಶೆಷವಾಗಿದ್ದು ಕ್ಷಣದಲ್ಲೆ ಗಮನಸೆಳೆಯುತ್ತದೆ. ಇದೆ ಬೇಕಲ್ ಕೋಟೆ. ಇದು ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ್ ಎಂಬ ಕರಾವಳಿ ಗ್ರಾಮದಲ್ಲಿ ಸ್ಥಿತವಿದೆ.

ಚಿತ್ರಕೃಪೆ: Hari Prasad Nadig

ಕೊಚ್ಚಿ, ಕೇರಳ

ಕೊಚ್ಚಿ, ಕೇರಳ

ಕೇರಳ ಕೊಚ್ಚಿ ಆಡಳಿತಕ್ಕೆ ಒಳಪಟ್ಟಿರುವ ತ್ರಿಪ್ಪುನಿತುರಾ ನಗರ ಸಭೆ ಪಟ್ಟಣದಲ್ಲಿರುವ ಹಿಲ್ ಪ್ಯಾಲೇಸ್ ನೆಚ್ಚಿನ ಚಿತ್ರೀಕರಣದ ತಾಣವಾಗಿ ಹೆಸರುವಾಸಿಯಾಗಿದೆ. ಅಲ್ಲದೆ ಇದೊಂದು ಪ್ರವಾಸಿ ಆಕರ್ಷಣೆಯಾಗಿಯೂ ಇತಿಹಾಸಪ್ರಿಯ ಪ್ರವಾಸಿಗರ ಗಮನ ಸೆಳೆಯುತ್ತದೆ, ಕಾರಣ ಇಲ್ಲಿರುವ ಸಂಗ್ರಹಾಲಯ.

ಚಿತ್ರಕೃಪೆ: Maheshbabu.nair

ಜೋಗ ಜಲಪಾತ

ಜೋಗ ಜಲಪಾತ

ಭಾರತದಲ್ಲಿ ಕಂಡುಬರುವ ಅತಿ ಎತ್ತರದ ಹಾಗೂ ಅತ್ಯದ್ಭುತವಾಗಿ ಜಲಧಾರೆ ಧುಮುಕುವ ಜಲಪಾತಗಳಲ್ಲೊಂದಾಗಿದೆ ಜೋಗದ ಗುಂಡಿ. ವಿಶ್ವ ವಿಖ್ಯಾತಿಗಳಿಸಿರುವ ಈ ಮನಮೋಹಕ ಜೋಗ ಜಲಪಾತವು ಶರಾವತಿ ನದಿಯಿಂದ ರೂಪಗೊಂಡ ಜಲಪಾತವಾಗಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಚಿತ್ರೀಕರಣಕ್ಕೆ ಹೆಸರುವಾಸಿಯಾದ ಆಕರ್ಷಕ ಪ್ರವಾಸಿ ಕೇಂದ್ರವಾಗಿದೆ. ಕನ್ನಡದ ಹಲವಾರು ಚಿತ್ರಗಳ ಸನ್ನಿವೇಷಗಳು ಇಲ್ಲಿ ಚಿತ್ರೀಕರಣಗೊಂಡಿವೆ ಹಾಗೂ ಇಂದಿಗೂ ನಿರ್ದೇಶಕರ ನೆಚ್ಚಿನ ತಾಣವಾಗಿ ಗುರುತಿಸಿಕೊಳ್ಳುತ್ತದೆ.

ಚಿತ್ರಕೃಪೆ: Kiran Sagara

ಕೊಡಗು

ಕೊಡಗು

ಕರ್ನಾಟಕದಲ್ಲಿರುವ ಅತಿ ಸುಂದರ ಗಿರಿಧಾಮಗಳಲೊಂದಾದ ಕೊಡಗು ನಾಡು ಚಿತ್ರೀಕರಣಗಳಿಗೆ ಹೇಳಿ ಮಾಡಿಸಿದಂತಹ ಅಪರೂಪದ ಪ್ರಾಕೃತಿಕ ಸೊಬಗಿನಿಂದ ಕೂಡಿದ್ದು ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಚಲನಚಿತ್ರಗಳು ಈ ಗಿರಿಧಾಮ ಪ್ರದೇಶದಲ್ಲಿ ಈಗಾಗಲೆ ಚಿತ್ರೀಕರಣಗೊಂಡಿವೆ. ಶ್ರೀಮಂತ ಸಸ್ಯರಾಶಿ, ಆಕರ್ಷಕ ಕಣಿವೆ, ಮನಮೋಹಕ ಕೆರೆಗಳು, ಚುಂಬಕದಂತೆ ಸೆಳೆವ ಜಲಪಾತಗಳನ್ನು ಹೊಂದಿರುವ ಈ ನಯನಮನೋಹರ ಗಿರಿಧಾಮ ಇಂದಿಗೂ ಸಹ ತನ್ನ "ಮ್ಯಾಜಿಕ್" ಉಳಿಸಿಕೊಂಡಿದ್ದು ಬಹುತೇಕ ನಿರ್ದೇಶಕರ ನೆಚ್ಚಿನ ಸ್ಥಳವಾಗಿದೆ.

ಚಿತ್ರಕೃಪೆ: Kalidas Pavithran

ಹಂಪಿ

ಹಂಪಿ

ಐತಿಹಾಸಿಕ ಸನ್ನಿವೇಷಗಳಿದ್ದಲ್ಲಿ, ಒಂದಿಷ್ಟು ಬಯಲು ಪ್ರದೇಶ, ಒಂದಿಷ್ಟು ಬಂಡೆಗಲ್ಲುಗಳಿಂದ ಕೂಡಿದ ಗುಡ್ಡ ಪ್ರದೇಶ ಇವುಗಳ ಮಧ್ಯೆ ಹರಿಯುವ ನದಿ ಹಾಗೂ ರಾಜ ಕಾಲದ ಅವಶೇಷಗಳನ್ನು ತೋರಿಸುವ ಇಚ್ಛೆ ನಿರ್ದೇಶಕರಿಗಿದ್ದಲ್ಲಿ, ನಿಸ್ಸಂಶಯವಾಗಿ ಹಂಪಿಗೊಮ್ಮೆ ಭೇಟಿ ನಿಡಬಹುದು. ಈಗಾಗಲೆ ಸಾಕಷ್ಟು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಆದರೆ ಇಂದು ಹಮ್ಪಿಯ ಪ್ರಮುಖ ಐತಿಹಾಸಿಕ ಸ್ಥಳಗಳು ಯುನೆಸ್ಕೊದಿಂದ ಮಾನ್ಯತೆ ಪಡೆದಿದ್ದು ಮೂಲ ರಚನೆಗಳ ಬಳಿ ಚಿತ್ರೀಕರಣ ಮಾಡಲಾಗುವುದಿಲ್ಲವಾದರೂ ಸುತ್ತ ಮುತ್ತಲಿನ ಅದ್ಭುತ ಪರಿಸರವು ಚಿತ್ರೀಕರಣಕ್ಕೆ ಎಲ್ಲ ರೀತಿಯಿಂದಲೂ ಆದರ್ಶಮಯವಾಗಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ ಒಂದು ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: Aleksandr Zykov

ಬೆಂಗಳೂರು

ಬೆಂಗಳೂರು

ದೇಶದ ಐಟಿ ರಾಜಧಾನಿ, ಸಿಲಿಕಾನ್ ಕಣಿವೆ, ಉದ್ಯಾನ ನಗರಿ ಎಂಬೆಲ್ಲ ಬಿರುದುಗಳನ್ನು ಹೊಂದಿರುವ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಮೊದಲಿನಿಂದಲೂ ಕನ್ನಡ ಚಲನಚಿತ್ರಗಳಿಗೆ ಸಾಕಷ್ಟು ಆಶ್ರಯ ಹಾಗೂ ಶ್ರೀಮಂತಿಕೆ ನೀಡಿದ ತಾಣವಾಗಿದೆ. ಇಲ್ಲಿರುವ ಲಾಲ್ ಬಾಗ್ ಆಗಲಿ, ಕಬ್ಬನ್ ಪಾರ್ಕ್ ಆಗಲಿ ಅಥವಾ ವಿಧಾನಸೌಧವೆ ಆಗಲಿ, ಹಿಂದೆ ಅನೇಕ ಕನ್ನಡ ಸಹಿತ ಹಲವಾರು ಇತರೆ ಭಾಷೆಗಳ ಚಿತ್ರಗಳಿಗೂ ಸಹ ಹಿನ್ನಿಲೆಯನ್ನು ಒದಗಿಸಿವೆ. ಇಂದಿಗೂ ಸಾಕಷ್ಟು ನಯನಮನೋಹರವಾಗಿ ಈ ಸ್ಥಳಗಳು ನೆಲೆಸಿದ್ದು ಸಾಕಷ್ಟು ಗಮನಸೆಳೆಯುತ್ತವೆ.

ಚಿತ್ರಕೃಪೆ: prashantby

ಚಿತ್ರೀಕರಣಕ್ಕೂ ಸೈ

ಚಿತ್ರೀಕರಣಕ್ಕೂ ಸೈ

ತುಳು ಭಾಷೆಯಲ್ಲಿ ಒಡಿಪು ಎಂದು ಕರೆಯಲ್ಪಡುವ ಉಡುಪಿ ನಗರವು ಕರ್ನಾಟಕದಲ್ಲಿರುವ ಒಂದು ಪ್ರಸಿದ್ಧ ಕರಾವಳಿ ನಗರವಾಗಿದೆ. ಸುಂದರ ಕರಾವಳಿ ತೀರ ಹೊಂದಿರುವ ಈ ನಗರ ಚಿತ್ರೀಕರಣಗಳಿಗೆ ಹೇಳು ಮಾಡಿಸಿದಂತಹ ತಾಣವಾಗಿರುವುದೂ ಅಲ್ಲದೆ ದೇಶದ ಪ್ರಖ್ಯಾತ ಶ್ರೀಕೃಷ್ಣಮಠ ಹೊಂದಿರುವ ಆಕರ್ಷಕ ಪ್ರವಾಸಿ ಕೇಂದ್ರವೂ ಸಹ ಅನೇಕ ಪ್ರವಾಸಿಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: vivek raj

ಬಲು ಆಕರ್ಷಕ!

ಬಲು ಆಕರ್ಷಕ!

ಮೈಸೂರು ಬಳಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಚೆಕ್ ಡ್ಯಾಂ ನಿಂದ ರೂಪಿತವಾದ ಆಕರ್ಷಕ ಮಾನವ ನಿರ್ಮಿತ ಜಲಪಾತ ಇದಾಗಿದೆ. ಇದರ ಎತ್ತರ ಆರು ಅಡಿಗಿಂತ ಜಾಸ್ತಿ ಇಲ್ಲ, ಆದರೆ ಇದರ ಅಗಲ ಮಾತ್ರ ಆಕರ್ಷಕ. ಹಲವಾರು ಚಿತ್ರಗಳ ಹಾಡಿನ ಸನ್ನಿವೇಷಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಕಾವೇರಿ ನದಿಯು ಈ ಜಲಪಾತದಿಂದ ಕೆಳಗಿಳಿಯುತ್ತಿದ್ದಂತೆ ಮೊನಚಾದ ಬಲ ತಿರುವು ಪಡೆಯುವುದರಿಂದಾಗಿ ಇದಕ್ಕೆ ಬಲಮುರಿ ಜಲಪಾತ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Mahesh Telkar

ಮಂಡ್ಯ

ಮಂಡ್ಯ

ಕರ್ನಾಟಕದಲ್ಲಿರುವ ಮಂಡ್ಯ ಜಿಲ್ಲೆಯೂ ಸಹ ಸಾಕಷ್ಟು ಪಾರಂಪರಿಕ ಹಾಗೂ ಐತಿಹಾಸಿಕ ಕ್ಷೇತ್ರಗಳನೊಳಗೊಂಡಿರುವ ಅದ್ಭುತ ಜಿಲ್ಲೆಯಾಗಿದ್ದು ಕರ್ನಾಟಕದ ಸಕ್ಕರೆ ನಾಡು ಎಂದೆ ಕರೆಸಿಕೊಳ್ಳುತ್ತದೆ. ಇಲ್ಲಿರುವ ಅನೇಕ ಪ್ರವಾಸಿ ಆಕರ್ಷಣೆಗಳು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿವೆ. ಪಾಂಡವಪುರ ಕುಂತಿ ಬೆಟ್ಟವಾಗಿರಬಹುದು, ಬೃಂದಾವನ ಜಲಾಶಯವಾಗಿರಬಹುದು ಇಲ್ಲವೆ ಮೇಲುಕೋಟೆಯ ದೇಗುಲಗಳಾಗಿರಬಹುದು ಎಲ್ಲವೂ ಚಿತ್ರೀಕರಣಕ್ಕೆ ಆದರ್ಶಮಯವಾದ ಸ್ಥಳಗಳಾಗಿ ಆಕರ್ಷಿಸುತ್ತವೆ.

ಚಿತ್ರಕೃಪೆ: Nishanth Jois

ನಂದಿಬೆಟ್ಟ

ನಂದಿಬೆಟ್ಟ

ಕನ್ನಡದ ಹಳೆಯ ಚಿತ್ರಗಳನ್ನೊಮ್ಮೆ ನೋಡಿ. ಸಾಕಷ್ಟು ಸನ್ನಿವೇಷಗಳು ಅದರಲ್ಲೂ ವಿಶೇಷವಾಗಿ ಸಾಹಸ ದೃಷ್ಯಾವಳಿಗಳುನಂದಿ ಬೆಟ್ಟದ ಅದ್ಭುತ ರಸ್ತೆಗಳಲ್ಲಿ ಚಿತ್ರೀಕರಣಗೊಂಡಿರುವುದನ್ನು ಗಮನಿಸಬಹುದು. ಹೌದು, ಬೆಂಗಳೂರಿಗೆ ಬಲು ಹತ್ತಿರದಲ್ಲಿರುವ ನಂದಿಬೆಟ್ಟ ಸಾಕಷ್ಟು ಗಮನ ಸೆಳೆವ ಚಿತ್ರೀಕರಣದ ಸ್ಥಳವಾಗಿದೆ. ಇಂದಿಗೂ ಈ ಸ್ಥಳದ ಸುಂದರವಾದ ಜಾಗಗಳಲ್ಲಿ ಆವಾಗಾವಾಗ ಚಿತ್ರೀಕರಣಗಳು ನಡೇಯುತ್ತಲೆ ಇರುತ್ತವೆ.

ಚಿತ್ರಕೃಪೆ: Harsha K R

ರಾಜಾರಮನೆ

ರಾಜಾರಮನೆ

ಮೈಸೂರು ರಾಜಾ ಒಡೆತನವನ್ನು ಹೊಂದಿರುವ ಆದರೆ ಪ್ರಸ್ತುತ ಬೆಂಗಳೂರು ನಗರದಲ್ಲಿರುವ ಬೆಂಗಳೂರು ಅರಮನೆ ಇಂದು ನೆಚ್ಚಿನ ಚಿತ್ರೀಕರಣದ ಸ್ಥಳವಾಗಿದೆ. ಶ್ರೀಮಂತಮಯ ರಚನೆಗಳು, ಶ್ರೀಮಂತಿಕೆ ವೈಭವ ತೋರಿಸುವ ಸನ್ನಿವೇಷಗಳಿಗೆ ಸಾಕಷ್ಟು ಹೆಸರುವಾಸಿಯಾಗಿದೆ ಬೆಂಗಳೂರು ಅರಮನೆ.

ಚಿತ್ರಕೃಪೆ: Brian Evans

ಮತ್ತೊಂದು ಬಂಗಲೆ

ಮತ್ತೊಂದು ಬಂಗಲೆ

ಮೈಸೂರಿನಲ್ಲೆ ಇರುವ ಈ ಅದ್ಭುತ ಅರಮನೆಯು ಬೃಂದಾವನ ಉದ್ಯಾನಕ್ಕೆ ಬಲು ಹತ್ತಿರದಲ್ಲಿದ್ದು ಚಿತ್ರೀಕರಣಗಳಿಗೆ ಸಾಕಷ್ಟು ವಿಶೇಷ ಎನ್ನುವಂತಹ ಸ್ಥಳವಾಗಿ ಪರಿವರ್ತಿತವಾಗಿದೆ. ಪ್ರಸ್ತುತ ಇದೊಂದು ಪಂಚತಾರಾ ಐಷಾರಾಮು ಹೋಟೆಲ್ ಆಗಿದ್ದು ಚಿತ್ರೀಕರಣಕ್ಕೂ ಸಹ ಸೈ ಅನಿಸಿಕೊಂಡಿದೆ.

ಚಿತ್ರಕೃಪೆ: Chase Venters

ವೈಭವ ಮೆರೆವ ರಚನೆ

ವೈಭವ ಮೆರೆವ ರಚನೆ

ಈ ಅರಮನೆಯ ಕುರಿತು ಹೆಚ್ಚಿಗೇನೂ ವಿವರಿಸುವ ಅವಶ್ಯಕತೆಯೆ ಇಲ್ಲ. ಸಾಂಸ್ಕೃತಿಕ ನಗರ ಮೈಸೂರಿನ ವಿಶೇಷ ಹಾಗೂ ಗುರುತರವಾದ ಲ್ಯಾಂಡ್ ಮಾರ್ಕ್ ಇದೆ ಮೈಸೂರು ಅರಮನೆ. ಸಾಕಷ್ಟು ಚಿತ್ರಗಳು ಇಲ್ಲಿ ಹಿಂದೆ ಚಿತ್ರೀಕರಣಗೊಂಡಿವೆ. ಇಂದಿಗೂ ಇದು ನಿರ್ಮಾಪಕ-ನಿರ್ದೇಶಕರ ನೆಚ್ಚಿನ ತಾಣವಾಗಿ ಗಮನಸೆಳೆಯುತ್ತದೆ. ದಸರಾ ಸಂದರ್ಭದಲ್ಲಂತೂ ಈ ವಿಶೇಷ ಅರಮನೆ ಮದುವಣಗಿತ್ತಿಯ ರೀತಿಯಲ್ಲಿ ಸಿಂಗರಿಸಿಕೊಂಡಿರುತ್ತದೆ.

ಚಿತ್ರಕೃಪೆ: Ashwin Kumar

ರಾಮನಗರ

ರಾಮನಗರ

ನಿಮಗೆ ಹಿಂದಿಯ ಹಳೆಯದಾದ ಹಾಗೂ ಸಾಕಷ್ಟು ಯಶಸ್ವಿ ಪಡೆದ ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರ ನಟಿಸಿದ್ದ ಶೋಲೆ ಚಿತ್ರ ನೆನಪಿದೆಯೆ? ಅದರಲ್ಲೂ ವಿಶೇಷವಾಗಿ ಆ ಗಬ್ಬರ್ ಸಿಂಗ್ ನ ಅಡುಗು ತಾಣ ನೋಡಿದ್ದೀರಾ? ಹೌದು ಆ ಅದ್ಭುತ ಸ್ಥಳವೆ ಕರ್ನಾಟಕದ ರಾಮನಗರ ಜಿಲ್ಲೆಯ ರಾಮನಗರ ಪಟ್ಟಣದಲ್ಲಿರುವ ಅದ್ಭುತ ಬೆಟ್ಟ-ಗುಡ್ಡದ ಪ್ರದೇಶಗಳು, ಬೆಟ್ಟ ಹತ್ತುವಿಕೆ ಅಥವಾ ರ್ಯಾಪೆಲ್ಲಿಂಗ್ ನಂತಹ ಚಟುವಟಿಕೆಗಳಿಗಾಗಿ ಸಾಕಷ್ಟು ಹೆಸರುವಾಸಿಯಾಗಿದೆ ರಾಮನಗರ. ಸಾಹಸಮಯ ದೃಶ್ಯಾವಳಿಗಳಿಗೆ ಹೇಳಿ ಮಾಡಿಸಿದ ಹಾಗಿದೆ ಇಲ್ಲಿನ ಪರಿಸರ.

ಚಿತ್ರಕೃಪೆ: L. Shyamal

ಮಡಿಕೇರಿ

ಮಡಿಕೇರಿ

ಕರ್ನಾಟಕದ ಸುಂದರ ಗಿರಿಧಾಮವಾದ ಕೊಡಗು ಜಿಲ್ಲೆಯ ಕೇಂದ್ರಾಡಳಿತ ನಗರವಾಗಿದೆ ಮಡಿಕೇರಿ. ಇಲ್ಲಿರುವ ಶಿವನಿಗೆ ಮುಡಿಪಾದ ಓಂಕಾರೇಶ್ವರ ದೇವಾಲಯದಾವರಣವು ಅದರಲ್ಲೂ ವಿಶೇಷವಾಗಿ ಕಲ್ಯಾಣಿಯು ಸಾಕಷ್ಟು ಆಕರ್ಷಕವಾಗಿದ್ದು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ.

ಚಿತ್ರಕೃಪೆ: Pratheepps

ಬಾದಾಮಿ

ಬಾದಾಮಿ

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಸ್ಥಳವಾದ ಬಾದಾಮಿ ತನ್ನಲ್ಲಿರುವ ಅತ್ಯದ್ಭುತ ಬಂಡೆಯಲ್ಲಿ ಕೆತ್ತಲಾದ ಗುಹಾ ದೇವಾಲಯಗಳಿಂದಾಗಿ ಹಾಗೂ ಪ್ರಸಿದ್ಧ ಬನಶಂಕರಿ ಅಮ್ಮನವರ ದೇವಸ್ಥಾನದಿಂದಾಗಿ ಸಾಕಷ್ಟು ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಇಲ್ಲಿನ ಪರಿಸರವು ಚಿತ್ರೀಕರಣಗಳನ್ನು ನಡೆಸಲು ಸ್ನೇಹಮಯಿ ಆಗಿದ್ದು ಹಿಂದೆ ಕೆಲವು ಚಿತ್ರಗಳ ಚಿತ್ರೀಕರಣಗಳು ಇಲ್ಲಿನ ಪರಿಸರದಲ್ಲಿ ನಡೆದಿವೆ.

ಚಿತ್ರಕೃಪೆ: Sanyam Bahga

ಕನ್ಯಾಕುಮಾರಿ

ಕನ್ಯಾಕುಮಾರಿ

ತಮಿಳುನಾಡು ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರವಾದ ಕನ್ಯಾಕುಮಾರಿಯಲ್ಲಿರುವ ಸಮುದ್ರ ತೀರದಿಂದ ಕೊಂಚ ದೂರದಲ್ಲಿ ಒಡ ಮೂಡಿರುವ ಬಂಡೆಯಲ್ಲಿ ನಿರ್ಮಿಸಲಾದ ವಿವೇಕಾನಂದ ಶಿಲಾ ಅಥವಾ ಬಂಡೆ ಸ್ಮಾರಕವು ಆಕರ್ಷಕವಾದ ಚಿತ್ರೀಕರಣದ ಸ್ಥಳವಾಗಿ ಸರ್ವರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Lazylum

ಕೊಡೈಕೆನಾಲ್

ಕೊಡೈಕೆನಾಲ್

ಕೊಡೈಕೆನಾಲ್ ಕೂಡ ಒಂದು ವಿಶಿಷ್ಟವಾದ ಗಿರಿಧಾಮವಾಗಿದೆ. ಬೇಸಿಗೆ ಹಾಗೂ ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಆದರ್ಶ ಸಮಯ ಎಂದಿದ್ದರೂ ಮಳೆಗಾಲದ ಆಕರ್ಷಣೆಯೂ ಕೂಡ ಏನೂ ಕಮ್ಮಿ ಇಲ್ಲ. ತಮಿಳುನಾಡು ರಾಜ್ಯದ ದಿಂಡುಕ್ಕಲ್ ಜಿಲ್ಲೆಯಲ್ಲಿರುವ ಕೊಡೈಕೆನಾಲ್ ತಾಣವನ್ನು ಅಕ್ಕರೆಯಿಂದ "ಗಿರಿಧಾಮಗಳ ರಾಜಕುಮಾರಿ" ಎಂದೆ ಬಣ್ಣಿಸಲಾಗಿದೆ. ಅಲ್ಲದೆ ಹಿಂದಿನಿಂದಲೂ ಈ ಪ್ರದೇಶ ಒಂದು ಉತ್ಕೃಷ್ಟ ಪ್ರವಾಸಿ ತಾಣವಾಗಿ ಖ್ಯಾತಿ ಗಳಿಸಿದೆ ಚಿತ್ರೀಕರಣಕ್ಕಾಗಿಯೂ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Ramkumar

ಊಟಿ

ಊಟಿ

ಊಟಿ ಗಿರಿಧಾಮದ ಹೆಸರನ್ನು ಕೇಳದವರು ಪ್ರಾಯಶಃ ಯಾರು ಇರಲಿಕ್ಕಿಲ್ಲ. ದಕ್ಷಿಣ ಭಾರತದ ಅಷ್ಟೊಂದು ಸುಪ್ರಸಿದ್ಧವಾದ ಗಿರಿಧಾಮ ಪ್ರದೇಶವಾಗಿದೆ ಊಟಿ. ಅಧಿಕೃತವಾಗಿ ಉದಕಮಂಡಲಂ ಎಂದು ಕರೆಯಲ್ಪಡುವ ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದ ಈ ಸುಂದರ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿ. ಸಾಕಷ್ಟು ಬೇರೆ ಬೇರೆ ಭಾಷೆಗಳ ಚಲನಚಿತ್ರಗಳು ಇದರ ಮನಮೋಹಕತೆಗೆ ತಲೆ ಬಾಗಿ ಇಲ್ಲಿ ಚಿತ್ರೀಕರಣಗೊಂಡಿವೆ. ಶಾಂತ ಪರಿಸರ, ಹಿತಕರವಾದ ವಾತಾವರಣ, ಪರಿಶುದ್ಧವಾದ ಗಾಳಿ, ತಾಜಾ ತನದ ಅನುಭವ ಎಲ್ಲವೂ ಇರುವ ಈ ಗಿರಿಧಾಮ ತಾಣವು ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಚಿತ್ರಕೃಪೆ: Jeff Peterson

ಕಾರೈಕುಡಿ

ಕಾರೈಕುಡಿ

ತಮಿಳುನಾಡಿನ ಚೆಟ್ಟಿನಾಡ್ ಮೊದಲೆ ಖಾರಯುಕ್ತ ಹಾಗೂ ಬಾಯಲ್ಲಿ ನೀರೂರಿಸುವಂತಹ ಮಾಂಸಾಹಾರ ಖಾದ್ಯಗಳಿಗೆ ವಿಶೇಷವಾಗಿ ಹೆಸರು ಪಡೆದ ಸ್ಥಳ. ಕಾರೈಕುಡಿಯಲ್ಲಿರುವ ಚೆಟ್ಟಿನಾಡ್ ಅರಮನೆಯೂ ಸಹ ಚಲನ ಚಿತ್ರಗಳ ಚಿತ್ರೀಕರಣಗಳಿಗೆ ಸಾಕಷ್ಟು ಆದರ್ಶಪ್ರಾಯವಾದ ಸ್ಥಳವಾಗಿದೆ. ಈಗಾಗಲೆ ಸಾಕಷ್ಟು ಚಲನಚಿತ್ರಗಳು ಈ ಸುಂದರ ಪುರಾತನ ಸಂಸ್ಕೃತಿ ಸಾರುವ ಅರಮನೆಯಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Joelsuganth

ಚೆನ್ನೈನ ಗುರುತು

ಚೆನ್ನೈನ ಗುರುತು

ತಮಿಳುನಾಡು ರಾಜಧಾನಿ ನಗರವಾದ ಚೆನ್ನೈನಲ್ಲಿರುವ ಚೆನ್ನೈ ಸೆಂಟ್ರಲ್ ಕಟ್ಟಡವು ಅತ್ಯಂತ ಪುರಾತನ ಹಾಗೂ ಪ್ರಮುಖವಾದ ಹೆಗ್ಗುರುತುಗಲಲ್ಲಿ ಒಂದಾದ ಕಟ್ಟಡವಾಗಿದೆ. ಸಾಕಷ್ಟು ತಮಿಳು ಚಿತ್ರಗಳ ಚಿತ್ರೀಕರಣಗಳು ಈ ಬ್ರಿಟೀಷ್ ಕಾಲದ ಕಟ್ಟಡ ಸ್ಥಳದಲ್ಲಿ ನಡೆದಿವೆ.

ಚಿತ್ರಕೃಪೆ: Jamal Haider

ನೆಚ್ಚಿನ ಜಾಗ

ನೆಚ್ಚಿನ ಜಾಗ

ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯ ಊಟಿಯ ಬಳಿ ಸ್ಥಿತವಿರುವ ಕುಣ್ಣೂರು ಎಂಬ ನೀಲ್ಗಿರಿ ಜಿಲ್ಲೆಯ ಎರಡನೆಯ ದೊಡ್ಡ ಗಿರಿಧಾಮ ಭೇಟಿ ನೀಡುವ ಪ್ರತಿಯೊಬ್ಬ ಸಂದರ್ಶನಕಾರನಿಗೆ ಅಥವಾ ಪ್ರವಾಸಿಗನಿಗೆ ಮನಸ್ಸು ಪುಳಕಿತಗೊಳ್ಳುವ ಬಾಲ್ಯದ ಮುಗ್ಧತೆ, ಅಚ್ಚರಿಯನ್ನೊಳಗೊಂಡ ನೆನಪುಗಳನ್ನು ತರುತ್ತದೆ. ಅಲ್ಲದೆ ದಕ್ಷಿಣ ಭಾರತದ ಸಾಕಷ್ಟು ನಿರ್ಮಾಪಕ-ನಿರ್ದೇಶಕರ ಬಲು ನೆಚ್ಚಿನ ತಾಣವಾಗಿ ಗಮನ ಸೆಳೆಯುತ್ತದೆ ಕುಣ್ಣೂರು.

ಚಿತ್ರಕೃಪೆ: Thangaraj Kumaravel

ಗೋಲ್ಕೊಂಡಾ ಕೋಟೆ

ಗೋಲ್ಕೊಂಡಾ ಕೋಟೆ

ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರದ ಬಳಿಯಿರುವ ಪ್ರಸಿದ್ಧ ಗೋಲ್ಕೊಂಡಾ ಕೋಟೆ ಸಂಕೀರ್ಣವೂ ಸಹ ಚಿತ್ರೀಕರಣ ನಡೆಸಲು ಯೋಗ್ಯವಾಗಿದ್ದು ಸಾಕಷ್ಟು ತೆಲುಗು ಚಿತ್ರಗಳು ಈಗಾಗಲೆ ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Samsat83

ಸುಂದರ ಕೆರೆ

ಸುಂದರ ಕೆರೆ

ಹಜರತ್ ಹುಸೈನ್ ಶಾ ವಾಲಿ ಎಂಬಾತನಿಂದ 1563 ರಲ್ಲಿ ನಿರ್ಮಿಸಲ್ಪಟ್ಟ ಹುಸೈನ್ ಸಾಗರ್ ಕೆರೆಯು ಹೈದರಾಬಾದ್ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ. ಚಿತ್ರೀಕರಣಗಳಿಗೂ ಸಹ ಸಾಕಷ್ಟು ಹೆಸರುವಾಸಿಯಾಗಿದೆ ಈ ಸುಂದರ ನಯನ ಮನೋಹರ ಕೆರೆ.

ಚಿತ್ರಕೃಪೆ: Nikhilb239

ಅಮೋಘ

ಅಮೋಘ

ಬಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ ಯಾವುದೆ ಇರಲಿ ವರ್ಷಪೂರ್ತಿ ಒಂದಿಲ್ಲೊಂದು ಚಿತ್ರಗಳ ಚಿತ್ರೀಕರಣಗಳು ನಡೆಯುತ್ತಲೆ ಇರುತ್ತವೆ ಈ ಅದ್ಭುತ ಚಿತ್ರ ನಗರಿಯಲ್ಲಿ. ದೇಶದಲ್ಲೆ ಅತ್ಯಂತ ಪ್ರತಿಷ್ಠಿತ ಚಿತ್ರ ನಗರ ಎಂತೆಲ್ಲ ಕರೆಸಿಕೊಳ್ಳುವ ರಾಮೋಜಿ ಚಿತ್ರ ನಗರಿ ಸಾಕಷ್ಟು ದೊಡ್ಡದಾಗಿದ್ದು ಪ್ರವಾಸಿ ಆಕರ್ಷಣೆಯಾಗಿಯೂ ಜನರನ್ನು ಸೆಳೆಯುತ್ತದೆ.

ಚಿತ್ರಕೃಪೆ: Vinayaraj

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X