Search
  • Follow NativePlanet
Share
» »ಭಾರತದ ಕೆಲವು ಸುಂದರ ಕೆರೆಗಳು

ಭಾರತದ ಕೆಲವು ಸುಂದರ ಕೆರೆಗಳು

By Vijay

ಕೇವಲ ನದಿಗಳಲ್ಲದೆ, ಕೆರೆಗಳು ಕೂಡ ನೀರಿನ ಮೂಲವಾಗಿದ್ದು ಭೂಮಿಯ ಕೆಲ ನಿರ್ದಿಷ್ಟ ತೆಗ್ಗು ಪ್ರದೇಶದಲ್ಲಿ ಶೇಖರಣೆಗೊಂಡ ಜಲವಾಗಿರುತ್ತದೆ. ನದಿಗಳು, ತೊರೆ, ನೀರಿನ ಸೆಲೆ ಮುಂತಾದವುಗಳು ಈ ಕೆರೆಗಳ ನಿರ್ಮಾಣಕ್ಕೆ ಸಹಾಯವಾಗಿರುತ್ತವೆ. ನಮಗೆ ಅಲ್ಲಲ್ಲಿ ಕಂಡುಬರುವ ಚಿಕ್ಕ ಪುಟ್ಟ ಹಳ್ಳ, ಹೊಂಡಗಳಿಗಿಂತಲೂ ದೊಡ್ಡದಾಗಿಯೂ, ಆಳವಾಗಿಯೂ ಇರುತ್ತದೆ ಕೆರೆಗಳು ಅಥವಾ ಸರೋವರಗಳು. ಬಹು ಸಂಖ್ಯೆಯಲ್ಲಿ ನಗರಗಳ, ಪಟ್ಟಣಗಳ, ಹಳ್ಳಿಗಳ ಕುಡಿಯುವ ನೀರಿನ ಮೂಲವು ಈ ಕೆರೆಗಳೆ ಆಗಿವೆ. ಆದ್ದರಿಂದ ಕೆರೆಗಳು ಕೂಡ ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ. ಅದು ಕೂಡ ನಮಗೆ ಕುಡಿಯುವ ನೀರು ಒದಗಿಸುವುದರಿಂದ ಹಿಡಿದು ಸುತ್ತಮುತ್ತಲಿನ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳುವವರೆಗೆ.

ಭಾರತದಲ್ಲಿ ಅದೆಷ್ಟೊ ಸಾವಿರಾರು ಸಂಖ್ಯೆಗಳಲ್ಲಿ ಕೆರೆಗಳನ್ನು ಕಾಣಬಹುದು. ಆದರೆ ಎಲ್ಲ ಕೆರೆಗಳನ್ನು ಚಿತ್ರಸಹಿತ ಮಾಹಿತಿಯೊಂದಿಗೆ ಒಂದೆ ಲೇಖನದಲ್ಲಿ ಉಲ್ಲೇಖಿಸುವುದು ಅಸಾಧ್ಯಮಯವಾಗಿರುವುದರಿಂದ ಕೆಲವು ಆಯ್ದ ಕೆರೆಗಳನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ. ಪ್ರೀಯ ಓದುಗರು ಈ ಲೇಖನದಲ್ಲಿ ಕಂಡುಬರದಂತಹ ಯಾವುದಾದರೂ ಕೆರೆಗಳ ಕುರಿತು ಸಮಂಜಸ ಮಾಹಿತಿ ಹಾಗು ಚಿತ್ರವಿದ್ದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಬಹುದು.

ದಾಲ್ ಸರೋವರ:

ದಾಲ್ ಸರೋವರ:

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬೇಸಿಗೆಯ ರಾಜಧಾನಿ ಎಂದೆ ಹೆಸರುವಾಸಿಯಾದ ಶ್ರೀನಗರದಲ್ಲಿದೆ ಈ ಸುಂದರ ದಾಲ್ ಸರೋವರ. ರಾಜ್ಯದಲ್ಲೆ ಎರಡನೆಯ ಬೃಹತ್ ಸರೋವರವಾದ ಇದನ್ನು "ಶ್ರೀನಗರದ ರತ್ನ", "ಕಾಶ್ಮೀರ ಕಿರೀಟ ಮುಕುಟದ ರತ್ನ" ಎಂಬೆಲ್ಲ ಬಿರುದುಗಳಿಂದ ಸನ್ಮಾನಿಸಲಾಗಿದ್ದು, ರಾಜ್ಯದ ಪ್ರವಾಸೋದ್ಯಮ ದೃಷ್ಟಿಯಿಂದ ಬಹು ಮುಖ್ಯ ಪಾತ್ರವಹಿಸುತ್ತದೆ. 22 ಚ.ಕಿ.ಮೀಗಳಷ್ಟು ವಿಸ್ತೀರ್ಣವಿದ್ದು, ಗರಿಷ್ಠ 20 ಅಡಿಗಳಷ್ಟು ಆಳವನ್ನು ಹೊಂದಿದೆ.

ಚಿತ್ರಕೃಪೆ: Vineetmbbs

ಸೊಮೊರಿರಿ/ಮೊರಿರಿ ಸರೋವರ:

ಸೊಮೊರಿರಿ/ಮೊರಿರಿ ಸರೋವರ:

ಈ ಭವ್ಯ ಕೆರೆಯು ಜಮ್ಮು ಮತ್ತು ಕ್ಜಾಶ್ಮೀರದ ಚಾಣ್ಗ್‍ತಾಂಗ್ (ಉತ್ತರದ ಭೂಮಿ) ಪ್ರದೇಶದಲ್ಲಿ ನೆಲೆಸಿದೆ. ಭಾರತದಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ಕೆರೆ ಇದಾಗಿದೆ (15,075 ಅಡಿಗಳಷ್ಟು). ಹಿಮ ಪರ್ವತಗಳು, ಇತರೆ ನೀರಿನ ಸೆಲೆಗಳು ಇದರ ಮೂಲವಾಗಿದೆ. ಒಂದೊಮ್ಮೆ ದಕ್ಷಿಣದಲ್ಲಿ ಹರಿಯುವಿಕೆಯನ್ನು ಹೊಂದಿದ್ದ ಈ ಕೆರೆ ಇಂದು ಅದು ಕೂಡ ಮುಚ್ಚಿಹೋಗಿದ್ದು ನೀರು ಲವಣಯುಕ್ತವಾಗುತ್ತಿದೆ.

ಚಿತ್ರಕೃಪೆ: Jochen Westermann

ವೂಲಾರ್ ಸರೋವರ:

ವೂಲಾರ್ ಸರೋವರ:

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಂಡಿಪೋರ ಜಿಲ್ಲೆಯಲ್ಲಿದೆ ಏಷಿಯಾ ಖಂಡದಲ್ಲೆ ಕಂಡುಬರುವ ದೊಡ್ಡ ಸರೋವರಗಳಲ್ಲಿ ಒಂದಾದ ತಾಜಾ ನೀರಿನ ಈ ಕೆರೆ. ಇದರ ಮೂಲ ಝೀಲಮ್ ನದಿ. ಋತುಮಾನಗಳಿಗನುಗುಣವಗಿ ಇದರ ನೀರಿನ ಮಟ್ಟ ಹಾಗು ವ್ಯಾಪ್ತಿ ಬದಲಾವಣೆಯಾಗುತ್ತಿರುತ್ತದೆ. ಕನಿಷ್ಠ 30 ಹಾಗು ಗರಿಷ್ಠ 260 ಚ.ಕಿ.ಮೀಗಳಷ್ಟು ವಿಸ್ತಾರವಾಗಿದೆ ಈ ಸರೋವರ. ಭಾರತೀಯ ಪ್ರವಾಸೋದ್ಯಮ ಇಲಾಖೆಯು ಜಮ್ಮು ಮತ್ತು ಕಾಶ್ಮೀರ ಹಾಗು ಕೇರಳ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಇಲ್ಲಿ ವಿವಿಧ ಜಲಕ್ರೀಡೆಗಳನ್ನು ಅಭಿವೃದ್ಧಿಗೊಳಿಸಿದೆ.

ಚಿತ್ರಕೃಪೆ: Maxx786

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಹಿಮಾಲಯ ಪರ್ವತಗಳಲ್ಲಿ ನೆಲೆಸಿರುವ ಈ ಸುಂದರ ಪ್ಯಾಂಗಾಂಗ್ ಸರೋವರವು ಒಂದು ಸ್ಥಿರ ಕೆರೆಯಾಗಿದೆ. ಕ್ಷಾರ ಅಥವಾ ಲವಣಯುಕ್ತ ನೀರನ್ನು ಹೊಂದಿರುವ ಈ ಕೆರೆಯು ಚಳಿಗಾಲದ ಸಮಯದಲ್ಲಿ ಘನಿರ್ಭವಿಸುತ್ತದೆ.

ಚಿತ್ರಕೃಪೆ: Amareshwara Sainadh

ಶೇಷನಾಗ ಸರೋವರ:

ಶೇಷನಾಗ ಸರೋವರ:

ಕಾಶ್ಮೀರದ, ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಿಂದ 23 ಕಿ.ಮೀ ದೂರದಲ್ಲಿ ಅಮರನಾಥ ಗುಹೆಗೆ ತೆರಳುವ ಮಾರಗದಲ್ಲಿ ಈ ಸರೋವರವು ಕಾಣಸಿಗುತ್ತದೆ. 1.1 ಕಿ.ಮೀ ಉದ್ದ ಹಾಗು 0.7 ಕಿ.ಮೀ ಗಳಷ್ಟು ಅಗಲವಾಗಿರುವ ಈ ಕೆರೆಯು ಒಂದು ಆಲಿಗೊಟ್ರೋಫಿಕ್ ಕೆರೆಯಾಗಿದೆ. ಅಂದರೆ ಹೆಚ್ಚಿನ ಮಟ್ಟದ ಆಮ್ಲಜನಕವಿದ್ದು ಉತ್ತಮ ಗುಣಮಟ್ಟದ ಕುಡಿಯುವ ನೀರಾಗಿರುತ್ತದೆ.

ಚಿತ್ರಕೃಪೆ: Akhilesh Dasgupta

ಸೂರಜ್ ತಲ್:

ಸೂರಜ್ ತಲ್:

ಸೂರ್ಯ ದೇವರ ಕೆರೆ ಅಥವಾ ಸರೋವರ ಎಂಬ ಅಕ್ಷರಶಃ ಅರ್ಥ ಕೊಡುವ ಈ ಸರೋವರವು ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಕಣಿವೆ ಪ್ರದೇಶದಲ್ಲಿ ನೆಲೆಸಿದೆ. ಜನರಿಂದ ಪವಿತ್ರವೆಂದು ಪರಿಗಣಿಸಲಾಗಿರುವ ಈ ಕೆರೆಯು ಭಾಗಾ ನದಿಯ ಮೂಲವಾಗಿದೆ. ಇದೆ ನದಿಯು ಮುಂದೆ ಚಂದ್ರಾ ನದಿಯೊಂದಿಗೆ ಸೇರಿ ಚಂದ್ರಭಾಗ ನದಿಯಾಗಿ ಹರಿಯುತ್ತದೆ. ಮಂಜುಗಡ್ಡೆ ಹಾಗು ನೀರಿನ ಸೆಲೆಗಳು ಈ ಕೆರೆಗೆ ನೀರಿನ ಮೂಲವಾಗಿದ್ದು, ಭಾರತದಲ್ಲೆ ಮೂರನೆಯ ಅತಿ ಎತ್ತರದಲ್ಲಿ ನೆಲೆಸಿರುವ ಕೆರೆ ಇದಾಗಿದೆ.

ಚಿತ್ರಕೃಪೆ: Ankit Solanki

ಹುಸೈನ್ ಸಾಗರ್ ಕೆರೆ:

ಹುಸೈನ್ ಸಾಗರ್ ಕೆರೆ:

ಆಂಧ್ರದ ಹೈದರಾಬಾದ್ ನಲ್ಲಿದೆ ಈ ಭವ್ಯ ಕೆರೆ. 5.7 ಚ.ಕಿ.ಮೀ ವಿಶಾಲವಾಗಿ ಹರಡಿರುವ ಈ ಕೆರೆಗೆ ಮೂಸಿ ನದಿಯು ಮೂಲವಾಗಿದೆ. ಈ ಕೆರೆಯ ಮತ್ತೊಂದು ಆಕರ್ಷಣೆಯೆಂದರೆ 32 ಅಡಿಗಳಷ್ಟು ಉದ್ದದ ಬುದ್ಧನ ಏಕಶಿಲಾ ಪ್ರತಿಮೆಯನ್ನು ಕೆರೆಯ ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಚಿತ್ರಕೃಪೆ: aloshbennett

ದುರ್ಗಂ ಚೆರುವು:

ದುರ್ಗಂ ಚೆರುವು:

ಆಂಧ್ರ ಪ್ರದೇಶದ ರಂಗಾರೆಡ್ಡಿ ಜಿಲ್ಲೆಯಲ್ಲಿದೆ ಈ ಕೆರೆ. ಹೈದರಾಬಾದ್ ನಗರಕ್ಕೆ ಹತ್ತಿರವಿರುವ ಈ ಕೆರೆಯು ಹೈಟೆಕ್ ನಗರದ ಜನರಿಗೆ ನೆಚ್ಚಿನ ವಿಕೆಂಡ್ ಸ್ಪಾಟ್ ಆಗಿದೆ ಕೂಡ. ಜುಬಿಲಿ ಹಿಲ್ಸ್ ಮತ್ತು ಮಾಧಾಪುರ್ ಪ್ರದೇಶಗಳ ಮಧ್ಯದಲ್ಲಿ ನೆಲೆಸಿರುವ ಈ ಕೆರೆಯನ್ನು ರಹಸ್ಯ ಕೆರೆ ಎಂದೂ ಕೂಡ ಕರೆಯಲಾಗುತ್ತದೆ. ಪ್ರಸ್ತುತ ಈ ಕೆರೆ ಪ್ರದೇಶವನ್ನು ಪ್ರವಾಸಿ ದೃಷ್ಟಿಯಿಂದ ಅಭಿವೃದ್ಧಿಗೊಳಿಸಲಾಗಿದ್ದು ಉದ್ಯಾನ, ಜಲಪಾತ ಹಾಗು ರಾಕ್ ಗಾರ್ಡನ್ ಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Nishantshah

ಚಾಂದುಬಿ ಸರೋವರ:

ಚಾಂದುಬಿ ಸರೋವರ:

ಅಸ್ಸಾಂ ನಲ್ಲಿರುವ ಈ ಸರೋವರವು ಶಾಂತಮಯ ಪ್ರಕೃತಿಯ ಮಡಿಲಲ್ಲಿ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿರುವಂತೆ ಕಂಗೊಳಿಸುತ್ತದೆ. ಗುವಾಹಟಿ ನಗರದಿಂದ 64 ಕಿ.ಮೀ ಗಳಷ್ಟು ದೂರವಿದ್ದು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 37 ರ ಮೂಲಕ ಇದನ್ನು ತಲುಪಬಹುದು. ಅಲ್ಲದೆ ಇಲ್ಲಿ ವಲಸೆ ಬರುವ ಹಕ್ಕಿಗಳನ್ನು ಸಹ ಕಾಣಬಹುದು. ಈ ನೈಸರ್ಗಿಕ ಕೆರೆಯ ಸುತ್ತಮುತ್ತಲಿನ ವಾತಾವರಣವು ಮನಸಿಗೆ ಆನಂದವನ್ನು ಕರುಣಿಸುತ್ತದೆ.

ಚಿತ್ರಕೃಪೆ: Saptarshi Chowdhury

ರೇಣುಕಾ ಸರೋವರ:

ರೇಣುಕಾ ಸರೋವರ:

ಹಿಮಾಚಲ ಪ್ರದೇಶದ ದೊಡ್ಡ ಕೆರೆ ಇದಾಗಿದೆ. ಸಮುದ್ರ ಮಟ್ಟದಿಂದ 672 ಮೀ ಎತ್ತರವಿರುವ ಈ ಸರೋವರವು ಇರುವುದು ಸಿರ್ಮೌರ್ ಜಿಲ್ಲೆಯಲ್ಲಿ. ರೇಣುಕಾ ದೇವಿಯಿಂದಾಗಿ ಕೆರೆಗೆ ಈ ಹೆಸರು ಬಂದಿದೆ. ಇದೊಂದು ಆಕರ್ಷಕ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: CC-BY

ಮಾನಸ್‍ಬಲ್ ಸರೋವರ:

ಮಾನಸ್‍ಬಲ್ ಸರೋವರ:

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಗಾಂದೇರ್ಬಲ್ ಜಿಲ್ಲೆಯ ಸಫಾಪೋರಾ ಪ್ರದೇಶದಲ್ಲಿ ಈ ಕೆರೆಯು ನೆಲೆಸಿದೆ. ವೃತ್ತಾಕಾರದಲ್ಲಿ ಸುತ್ತಲು ಮೂರು ಹಳ್ಳಿಗಳಿಂದ ಸುತ್ತುವರೆದಿದೆ. ಗಾಂದೇರ್ಬಲ್ ಬಳಿಯಲ್ಲಿರುವ ಕೆರೆಯ ಭಾಗವು ಅತ್ಯಂತ ಆಳವಾಗಿದೆ ಅದು ಸುಮಾರು 43 ಅಡಿಗಳಷ್ಟು. ನೀಲಗಿರಿ ಮರಗಳನ್ನು ಇದರ ಸುತ್ತಮುತ್ತಲು ನೋಡಬಹುದಾಗಿದ್ದು, ಸ್ವಚ್ಛ ನೀರಿನ ಈ ಕೆರೆಗೆ ಅವು ಇಂಬು ತಂದಿಕೊಟ್ಟಿವೆ ಎಂದರೆ ತಪ್ಪಾಗಲಾರದು.

ಚಿತ್ರಕೃಪೆ: Mehrajmir13

ವೆಂಬನಾಡ್ ಸರೋವರ:

ವೆಂಬನಾಡ್ ಸರೋವರ:

ಕೇರಳದ ಈ ಕೆರೆಯು ಭಾರತದಲ್ಲೆ ಅತಿ ಉದ್ದವಾದ ಕೆರೆಯಾಗಿರುವುದು ಅಲ್ಲದೆ ಕೇರಳ ರಾಜ್ಯದ ಅತಿ ದೊಡ್ಡದಾದ ಕೆರೆ ಎಂಬ ಅಭಿದಾನಕ್ಕೂ ಪಾತ್ರವಾಗಿದೆ. ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಕೆರೆ ಆಯಾ ಜಿಲ್ಲೆಗಳಲ್ಲಿ ವಿವಿಧ ನಾಮಧೇಯಗಳನ್ನು ಹೊಂದಿದೆ. ಉದಾಹರಣೆಗೆ ಕುಟ್ಟನಾಡ್ ನಲ್ಲಿ ಇದನ್ನು ಪುನ್ನಮಡಾ ಕೆರೆ ಎಂದು ಕರೆಯಲಾದರೆ, ಕೊಚ್ಚಿಯಲ್ಲಿ ಕೊಚ್ಚಿ ಕೆರೆ ಎಂಬ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ. ಪ್ರತಿಷ್ಠಿತ ನೆಹರು ದೋಣಿ ಸ್ಪರ್ಧೆಯನ್ನು ಈ ಕೆರೆಯ ಒಂದು ಭಾಗದಲ್ಲಿ ಆಯೋಜಿಸಲಾಗುತ್ತದೆ.

ಚಿತ್ರಕೃಪೆ

ಫತೇಹ್ ಸಾಗರ್ ಸರೋವರ:

ಫತೇಹ್ ಸಾಗರ್ ಸರೋವರ:

ರಾಜಸ್ಥಾನದ ಸರೋವರ ನಗರಿ ಉದೈಪುರ್ ನಲ್ಲಿ ನೆಲೆಸಿದೆ ಈ ಸುಂದರ ಕೆರೆ. ಉದೈಪುರ್ ನಲ್ಲಿರುವ ನಾಲ್ಕು ಕೆರೆಗಳಲ್ಲಿ ಇದೂ ಕೂಡ ಒಂದು. ಈ ಕೆರೆಯಲ್ಲಿ ನಾಲ್ಕು ಚಿಕ್ಕ ದ್ವೀಪಗಳನ್ನು ಸಹ ಕಾಣಬಹುದು. ನಗರದ ವಿವಿಧೊದ್ದೇಶಗಳಿಗೆ ಕೆರೆಯ ನೀರು ಬಳಕೆಯಾಗುತ್ತದೆ.

ಚಿತ್ರಕೃಪೆ

ನೈನಿತಾಲ್ ಕೆರೆ:

ನೈನಿತಾಲ್ ಕೆರೆ:

ಇದೊಂದು ತಾಜಾ ನೀರಿನ ಕೆರೆಯಾಗಿದ್ದು, ಉತ್ತರಾಖಂಡ್ ರಾಜ್ಯದ ನೈನಿತಾಲ್ ಪಟ್ಟಣದಲ್ಲಿದೆ. ಸುತ್ತಮುತ್ತಲು ಅದ್ಭುತವಾದ ಪ್ರಕೃತಿ ನೋಟವನ್ನು ಹಿನ್ನಿಲೆಯಾಗಿ ಹೊಂದಿರುವ ಈ ಕೆರೆಯಲ್ಲಿ ದೋಣಿ ವಿಹಾರವನ್ನು ಆನಂದಮಯವಾಗಿ ಆಸ್ವಾದಿಸಬಹುದು.

ಚಿತ್ರಕೃಪೆ

ಕೊಡೈಕೆನಲ್ ಕೆರೆ:

ಕೊಡೈಕೆನಲ್ ಕೆರೆ:

ಕೊಡೈ ಕೆರೆ ಎಂತಲೂ ಕರೆಯಲ್ಪಡುವ ಈ ಕೆರೆಯು ಒಂದು ಕೃತಕ ಕೆರೆಯಾಗಿದ್ದು ತಮಿಳುನಾಡಿನ, ದಿಂಡುಕ್ಕಲ್ ಜಿಲ್ಲೆಯ ಕೊಡೈಕೆನಲ್ ನಗರದಲ್ಲಿದೆ. ಈ ಗಿರಿಧಾಮ ಪ್ರದೇಶವು ದಕ್ಷಿಣ ಭಾರತದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದ್ದು ಇಲ್ಲಿನ ಕೆರೆಯಲ್ಲಿ ಮನೋಹರವಾದ ದೋಣಿ ವಿಹಾರವನ್ನು ಅನುಭವಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X