Search
  • Follow NativePlanet
Share
» »ಭಾರತದಲ್ಲಿರುವ ಸುಂದರ ಉದ್ಯಾನಗಳು

ಭಾರತದಲ್ಲಿರುವ ಸುಂದರ ಉದ್ಯಾನಗಳು

"ಏನೊಂದ್ರೆ...ನಂಗಂತ್ರೂ ಕೆಲ್ಸಾ ಮಾಡಿ ಮಾಡಿ ತುಂಬಾ ಬೋರ್ ಹೊಡೆದಿದೆ. ಮಕ್ಳೂ ಕೂಡ ಹೋಮ್ ವರ್ಕು, ಸ್ಟಡಿ, ಟ್ಯೂಷನ್ ಅಂತೆಲ್ಲ ಫುಲ್ ಸುಸ್ತು ಹೊಡ್ದಿದಾರೆ. ಇನ್ನೆನು ವಿಕೆಂಡ್ ಬಂತಲ್ವಾ ಬನ್ನಿ ಎಲ್ಲಾದ್ರೂ ಹಾಯಾಗಿ ಪಾರ್ಕಿಗೆ ಹೋಗ್ಬರೋಣ". ಈ ತರಹದ ವಾಕ್ಯಗಳು ಪ್ರತಿ ನಗರವಾಸಿಗಳ ಮನೆಗಳಲ್ಲಿ ಆಗಾಗ ಕೇಳಿ ಬರುವುದು ಸಾಮಾನ್ಯ. ಹೌದು ಇಂಗ್ಲೀಷಿನಲ್ಲಿ ಸುಲಭವಾಗಿ ಹೇಳಿಬಿಡಬಹುದಾದ ಪಾರ್ಕ್ ಅರ್ಥಾತ್ ಉದ್ಯಾನಗಳ ಆಕರ್ಷಣೆಯೆ ಹಾಗೆ. ಸುಂದರ ಹಸಿರುಮಯ ವಾತಾವರಣ, ಹಕ್ಕಿಗಳ ಕಲರವ, ಸೇವಿಸಲು ಪರಿಶುದ್ಧವಾದ ಗಾಳಿ, ತಾಜಾತನದ ಅನುಭವ, ಮಕ್ಕಳ ಮನರಂಜನೆಗೆಂದು ಆಟೋಪಕರಣಗಳು, ವಾಯು ವಿಹಾರ ಮಾಡಲು ವಿಶಾಲವಾದ ಸ್ಥಳ, ಅಲ್ಲಲ್ಲಿ ಕುಳಿತು ಹರಟೆ ಹೊಡೆಯಲು ಬೆಂಚುಗಳು ಒಂದೆ, ಎರಡೆ ಬಸವಳಿದ ಮನವನ್ನು ಪ್ರಸನ್ನಗೊಳಿಸಲು ಹಲವಾರು ಅಂಶಗಳು ಉದ್ಯಾನದಲ್ಲಿ ಸಿಗುತ್ತವೆ.

ಪ್ರಸ್ತುತ ನಗರಗಳಲ್ಲಿ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಪರಿಸರ ಮಾಲಿನ್ಯ, ಉಷ್ಣತೆ, ತಾಪಮಾನಗಳು ದೇಹಗಳಿಗೆ ದಣಿವನ್ನುಂಟು ಮಾಡುತ್ತಿರುವುದು ಅಲ್ಲದೆ ಮನಸ್ಸಿನ ಶಾಂತಿಯನ್ನು ಸಹ ಭಂಗಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಎಲ್ಲೆಲ್ಲೂ ಹಸಿರು ಗಿಡ ಮರಗಳು, ಬಣ್ಣಬಣ್ಣದ ಹೂವುಗಳು, ಕೊಳಗಳು ಮೂತಾದವುಗಳಿಂದ ಕೂಡಿದ ಉದ್ಯಾನಗಳು ಪರಿಣಾಮಕಾರಿಯಾಗಿ ನಮ್ಮ ಮನಗಳಿಗೆ ಪ್ರಫುಲ್ಲತೆಯನ್ನು ಒದಗಿಸುವಲ್ಲಿ ಸಹಕಾರಿಯಾಗಿವೆ. ಅಷ್ಟೆ ಅಲ್ಲ ಮಕ್ಕಳಿಂದ ಹಿಡಿದು ವೃದ್ಧರೂ ಸಹ ಪ್ರಕೃತಿಯೊಂದಿಗೆ ಬೆರೆಯುವ ಅವಕಾಶಗಳನ್ನು ಈ ಉದ್ಯಾನಗಳು ಕರುಣಿಸುತ್ತವೆ. ಹಾಗಾದರೆ ಬನ್ನಿ ಈ ಲೇಖನದ ಮೂಲಕ ಭಾರತದಲ್ಲಿ ಕಂಡುಬರುವ ಕೆಲವು ನಯನ ಮನೋಹರ ಉದ್ಯಾನಗಳ ಕುರಿತು ತಿಳಿಯೋಣ ಹಾಗು ಒಂದೊಮ್ಮೆ ಈ ಉದ್ಯಾನಗಳಿಗೆ ಭೇಟಿ ನೀಡಲು ಯೋಜಿಸೋಣ.

ಬೃಂದಾವನ ಉದ್ಯಾನ, ಮೈಸೂರು

ಬೃಂದಾವನ ಉದ್ಯಾನ, ಮೈಸೂರು

ಕರ್ನಾಟಕ ರಾಜ್ಯದ ಮೈಸೂರಿನಲ್ಲಿ ಈ ಉದ್ಯಾನವಿದೆ. ಕೃಷ್ಣರಾಜಸಾಗರ ಜಲಾಶಯದ ಪಕ್ಕದಲ್ಲೆ ನೆಲೆಸಿರುವ ಈ ಉದ್ಯಾನಕ್ಕೆ ಏನಿಲ್ಲವೆಂದರೂ ಸುಮಾರು 20 ಲಕ್ಷಗಳಷ್ಟು ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಈ ಉದ್ಯಾನವು 60 ಎಕರೆಗಳಷ್ಟು ಪ್ರದೇಶದಲ್ಲಿ ವಿಶಾಲವಾಗಿ ಹರಡಿದೆ. ಇದರ ಪಕ್ಕದಲ್ಲೆ 75 ಎಕರೆಗಳಷ್ಟು ವಿಶಾಲವಾದ ಹಣ್ಣಿನ ತೋಟ, ತೋಟಗಾರಿಕೆ ಇಲಾಖೆಯ 30 ಎಕರೆಗಳಷ್ಟು ವಿಶಾಲವಾದ ನಾಗವನ ಹಾಗು ಐದು ಎಕರೆಗಳಷ್ಟು ವಿಶಾಲವಾದ ಚಂದ್ರವನಗಳನ್ನು ಕಾಣಬಹುದು. ಶನಿವಾರ ಮತ್ತು ರವಿವಾರಗಳನ್ನು ಹೊರತುಪಡಿಸಿ ವಾರದ ಎಲ್ಲ ದಿನಗಳಲಿ ಬೆಳಿಗ್ಗೆ 6 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಸಾರ್ವಜನಿಕರಿಗಾಗಿ ಈ ಉದ್ಯಾನ ತೆರೆದಿರುತ್ತದೆ. ಶನಿವಾರ ಹಾಗು ರವಿವಾರಗಳಂದು ಬೆಳಿಗ್ಗೆ 6 ಘಂಟೆಯಿಂದ ರಾತ್ರಿ 8.30 ಘಂಟೆಯವರೆಗೆ ತೆರೆದಿರುತ್ತದೆ. ನಗರದಿಂದ ಟ್ಯಾಕ್ಸಿ ಅಥವಾ ಆಟೊ ಮೂಲಕ ಸುಲಭವಾಗಿ ತಲುಪಬಹುದಾದ ಈ ಉದ್ಯಾನವು ರಾತ್ರಿ ಸಮಯದಲ್ಲಿ ಬಣ್ಣದ ಕಾರಂಜಿಗಳಿಂದ ಕಂಗೊಳಿಸುತ್ತದೆ.

ಚಿತ್ರಕೃಪೆ: YVSREDDY

ಮುಘಲ್ ಉದ್ಯಾನ, ದೆಹಲಿ

ಮುಘಲ್ ಉದ್ಯಾನ, ದೆಹಲಿ

ಉತ್ತರ ಭಾರತದಲ್ಲಿ ಕಂಡುಬರುವ ಮುಘಲ್ ಶೈಲಿಯ ಉದ್ಯಾನಗಳಲ್ಲಿ ಒಂದಾಗಿದೆ ದೆಹಲಿಯ ಈ ಉದ್ಯಾನ. ಆರು ಹೆಕ್ಟೇರ್ ಗಳಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವು ರಾಷ್ಟ್ರಪತಿ ಭವನದ ಭಾಗವಾಗಿರುವುದು ವಿಶೇಷ. ಆಯತಾಕಾರದ ಉದ್ಯಾನ, ಉದ್ದವಾದ ಉದ್ಯಾನ ಹಾಗು ವೃತ್ತಾಕಾರದ ಉದ್ಯಾನ ಎಂಬ ಮೂರು ಭಾಗಗಳಲ್ಲಿ ಇದನ್ನು ವಿಂಗಡಿಸಲಾಗಿದ್ದು 250 ಕ್ಕೂ ಅಧಿಕ ಬಗೆಯ ಗುಲಾಬಿ ಹೂಗಳ ತಳಿಗಳನ್ನು ಇಲ್ಲಿ ಕಾಣಬಹುದಾಗಿದೆ. ವರ್ಷದಲ್ಲಿ ಫೆಬ್ರುವರಿ ಹಾಗು ಮಾರ್ಚ್ ತಿಂಗಳುಗಳಲ್ಲಿ ಮಾತ್ರ ಈ ಉದ್ಯಾನಕ್ಕೆ ಸಾರ್ವಜನಿಕರಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗುತ್ತದೆ.

ಚಿತ್ರಕೃಪೆ: sach1tb

ತೂಗುವ ಉದ್ಯಾನ, ಮುಂಬೈ

ತೂಗುವ ಉದ್ಯಾನ, ಮುಂಬೈ

ಮುಂಬೈನ ಮಲಬಾರ್ ಹಿಲ್ ಪ್ರದೇಶದ ಪಶ್ಚಿಮ ಭಾಗದ ತುತ್ತ ತುದಿಯಲ್ಲಿ ಈ ಉದ್ಯಾನವನ್ನು ಕಾಣಬಹುದು. ಫಿರೋಜ್ ಶಾ ಮೆಹತಾ ಉದ್ಯಾನ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ಉದ್ಯಾನದಲ್ಲಿ ವಿವಿಧ ಪ್ರಾಣಿಗಳ ಆಕಾರಗಳಂತೆ ಬೇಲಿ, ಕಂಟಿಗಳನ್ನು ವ್ಯವಸ್ಥಿತವಾಗಿ ಕತ್ತರಿಸಲಾಗಿದೆ. ಅರೇಬಿಯನ್ ಸಮುದ್ರದ ಮನಮೋಹಕ ಸೂರ್ಯಾಸ್ತ ನೋಟವನ್ನು ಈ ಗಮ್ಯ ತಾಣದಿಂದ ಸವಿಯಬಹುದು.

ಚಿತ್ರಕೃಪೆ: Nichalp

ಆಚಾರ್ಯ ಜಗದೀಶ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಉದ್ಯಾನ, ಹೌರಾ

ಆಚಾರ್ಯ ಜಗದೀಶ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಉದ್ಯಾನ, ಹೌರಾ

ಕೊಲ್ಕತ್ತಾ ಬಳಿಯ ಹೌರಾದ ಶಿಬಪುರ್ ಎಂಬಲ್ಲಿದೆ ಈ ಸಸ್ಯಶಾಸ್ತ್ರೀಯ ಉದ್ಯಾನ. ಜನಪ್ರಿಯವಾಗಿ ಕಲ್ಕತ್ತಾ ಬೊಟಾನಿಕಲ್ ಗಾರ್ಡನ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಉದ್ಯಾನದಲ್ಲಿ ವಿರಳವಾಗಿ ದೊರಕುವ ಸಸ್ಯಗಳಲ್ಲದೆ 12000 ಕ್ಕೂ ಅಧಿಕ ಬಗೆಯ ಸಸ್ಯಗಳ ಸಂಗ್ರಹವಿದೆ. ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಡಿಯಲ್ಲಿ ಬರುವ ಈ ಉದ್ಯಾನವು 109 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿದೆ.

ಚಿತ್ರಕೃಪೆ: Jeroje

ಲಾಲ್ ಬಾಗ್ ಸಸ್ಯತೋಟ, ಬೆಂಗಳೂರು

ಲಾಲ್ ಬಾಗ್ ಸಸ್ಯತೋಟ, ಬೆಂಗಳೂರು

ಕೆಂಪು ತೋಟ ಎಂಬ ಅರ್ಥ ಕೊಡುವ ಲಾಲ್ ಬಾಗ್ ಉದ್ಯಾನವು ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ ನೆಲೆಸಿರುವ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. ಉಷ್ಣವಲಯ ಸಸ್ಯಗಳ ಬೃಹತ್ ಸಂಗ್ರಹಾಲಯವಾಗಿರುವ ಈ ಬೊಟಾನಿಕಲ್ ಉದ್ಯಾನವು ಕೃತಕ ಕೊಳವಲ್ಲದೆ, ಗಾಜಿನ ಮನೆ ಹಾಗು ಅಕ್ವೇರಿಯಂ ಅನ್ನು ಸಹ ಹೊಂದಿದೆ. 100 ಕ್ಕಿಂತಲೂ ಹೆಚ್ಚು ವರ್ಷಗಳಾಗಿರುವ ಮರಗಳು ಹಾಗು 1000 ಕ್ಕೂ ಅಧಿಕ ಬಗೆಯ ಸಸ್ಯಗಳನ್ನು ಸುಮಾರು 240 ಎಕರೆಗಳಷ್ಟು ವಿಶಾಲವಾದ ಈ ಉದ್ಯಾನದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Sujay.P.S

ರಾಕ್ ಗಾರ್ಡನ್, ದಾರ್ಜೀಲಿಂಗ್

ರಾಕ್ ಗಾರ್ಡನ್, ದಾರ್ಜೀಲಿಂಗ್

ಪಶ್ಚಿಮ ಬಂಗಾಳದ ಪ್ರವಾಸಿ ಆಕರ್ಷಣೆ ದಾರ್ಜೀಲಿಂಗ್ ನಲ್ಲಿ ನೆಲೆಸಿದೆ ಈ ಸುಂದರ ಕಲ್ಲಿನ ಉದ್ಯಾನ. ದಾರ್ಜೀಲಿಂಗ್ ಪಟ್ಟಣದಿಂದ ಸುಮಾರು 10 ಕಿ.ಮೀ ದೂರವಿರುವ ಈ ಉದ್ಯಾನವು ಇತರೆ ಉದ್ಯಾನಗಳಂತಿರದೆ ಹಲವು ಸ್ತರಗಳಲ್ಲಿ ನಿರ್ಮಾಣವಾಗಿದ್ದು ಕಾಣಲು ವಿಶೇಷವಾಗಿದೆ.

ಚಿತ್ರಕೃಪೆ: Shahnoor Habib Munmun

ರಾಕ್ ಗಾರ್ಡನ್, ಚಂಡೀಗಡ್

ರಾಕ್ ಗಾರ್ಡನ್, ಚಂಡೀಗಡ್

ಪ್ಲ್ಯಾನ್ಡ್ ಸಿಟಿಯಾದ ಚಂಡೀಗಡ್ ನಲ್ಲಿ ಈ ಉದ್ಯಾನವನ್ನು ಕಾಣಬಹುದು. ಕಸದಿಂದ ರಸ ಎಂಬಂತೆ ಎಸೆಯಲಾದ ಪಾಳು ವಸ್ತುಗಳಿಂದ ಹಾಗು ಶಿಲೆಗಳಿಂದ ರಚಿಸಲಾಗಿರುವ ಕಲಾಕೃತಿಗಳ ವಿಶೀಷ್ಟವಾದ ಉದ್ಯಾನವಾಗಿದೆ ಇದು. ಸರ್ಕಾರಿ ಅಧಿಕಾರಿಯಾದ ನೇಕ್ ಚೆಂದ್ ಎಂಬುವರೊಬ್ಬರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ಹವ್ಯಾಸಕ್ಕಾಗಿ ಪ್ರಾರಂಭಿಸಿದ ಈ ಉದ್ಯಾನ ಇಂದು 40 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿದೆ. ವಿವಿಧ ಬಗೆಯ ವಿಶೀಷ್ಟವಾದ ಕಲಾಕೃತಿಗಳನ್ನು ಈ ಉದ್ಯಾನದಲ್ಲಿ ಕಾಣಬಹುದು.

ಚಿತ್ರಕೃಪೆ: Giridhar Appaji Nag Y

ನಿಶಾತ ಉದ್ಯಾನ, ಶ್ರೀನಗರ

ನಿಶಾತ ಉದ್ಯಾನ, ಶ್ರೀನಗರ

ಜಮ್ಮು ಕಾಶ್ಮೀರ ರಾಜ್ಯದಲ್ಲಿರುವ ಶ್ರೀನಗರದ ದಾಲ್ ಸರೋವರದ ಪೂರ್ವ ಭಾಗದಲ್ಲಿ ಈ ಸುಂದರವಾದ ಉದ್ಯಾನವನ್ನು ಕಾಣಬಹುದು. ಕಾಶ್ಮೀರ ಕಣಿವೆಯಲ್ಲೆ ಎರಡನೆಯ ಅತಿ ದೊಡ್ಡ ಮುಘಲ್ ಶೈಲಿಯ ಉದ್ಯಾನ ಇದಾಗಿದೆ. "ಸಂತೋಷದ ಉದ್ಯಾನ" ಎಂಬ ಅರ್ಥ ಕೊಡುವ ಈ ಉದ್ಯಾನದಲ್ಲಿ 12 ರಾಶಿಗಳನ್ನು ಪ್ರತಿನಿಧಿಸುವ ಹನ್ನೆರಡು ಸ್ಥಳಗಳನ್ನು ಕಾಣಬಹುದು. ಇದೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: McKay Savage

ಪಿಂಜೋರ್ ಉದ್ಯಾನ, ಹರಿಯಾಣ

ಪಿಂಜೋರ್ ಉದ್ಯಾನ, ಹರಿಯಾಣ

ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯಲ್ಲಿ ಈ ಸುಂದರ ಉದ್ಯಾನವಿದೆ. ಪಟಿಯಾಲಾ ರಾಜವಂಶಸ್ಥರಿಂದ ನಿರ್ಮಿಸಲಾದ ಈ ಉದ್ಯಾನವು ಮುಘಲ್ ಶೈಲಿಯ ಉದ್ಯಾನವಾಗಿದೆ. ಚಂಡೀಗಡ್ ನಿಂದ 22 ಕಿ.ಮೀ ದೂರವಿರುವ ಪಿಂಜೋರ್ ಎಂಬ ಗ್ರಾಮದಲ್ಲಿ ನೆಲೆಸಿರುವ ಈ ಉದ್ಯಾನಕ್ಕೆ ಇತ್ತೀಚಿಗಷ್ಟೆ ಯದವಿಂದ್ರ ಉದ್ಯಾನ ಎಂಬ ಹೆಸರನ್ನಿಡಲಾಗಿದೆ. ಪಾಳು ಬಿದ್ದಿದ್ದ ಈ ಉದ್ಯಾನವನ್ನು ಪಟಿಯಾಲದ ಮಹಾರಾಜ ಯದವಿಂದ್ರರು ನವೀಕರಿಸಿದ್ದರು. ಇಲ್ಲಿ ಶೀಷ್ ಮಹಲ್, ಹವಾ ಮಹಲ್ ಹಾಗು ರಂಗಮಹಲ್ ಗಳೆಂಬ ರಾಜಸ್ಥಾನಿ-ಮುಘಲ್ ಶೈಲಿಯ ಸ್ಮಾರಕಗಳನ್ನು ಕಾಣಬಹುದು.

ಚಿತ್ರಕೃಪೆ: Esben Agersnap

ಶಾಲಿಮಾರ್ ಉದ್ಯಾನ, ಶ್ರೀನಗರ

ಶಾಲಿಮಾರ್ ಉದ್ಯಾನ, ಶ್ರೀನಗರ

ಜಮ್ಮು-ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿರುವ ದಾಲ್ ಸರೋವರದ ಈಶಾನ್ಯ ಭಾಗಕ್ಕೆ ಈ ಉದ್ಯಾನವಿದೆ. ಮುಘಲ್ ಶೈಲಿಯ ಉನ್ನತ ಮಟ್ಟದ ನಿರ್ಮಾಣವಾಗಿರುವ ಈ ಉದ್ಯಾನವು ಜಮ್ಮು-ಕಾಶ್ಮೀರ ರಾಜ್ಯದ ಅತಿ ದೊಡ್ಡ ಉದ್ಯಾನವಾಗಿದೆ. ಅತಿ ಸುಂದರ ದಾಲ್ ಕೆರೆಯನ್ನು ಹಿನ್ನಿಲೆಯನ್ನಾಗಿ ಹೊಂದಿರುವ ಈ ಉದ್ಯಾನದ ಇನ್ನೊಂದೆಡೆ ಮತ್ತೊಂದು ಪ್ರಖ್ಯಾತವಾದ ನಿಶಾತ ಉದ್ಯನವನ್ನೂ ಸಹ ಕಾಣಬಹುದು.

ಚಿತ್ರಕೃಪೆ: Vinayaraj

ಟುಲಿಪ್ ಉದ್ಯಾನ, ಶ್ರೀನಗರ

ಟುಲಿಪ್ ಉದ್ಯಾನ, ಶ್ರೀನಗರ

ಜಮ್ಮು-ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿರುವ ಟುಲಿಪ್ (ಒಂದು ಬಗೆಯ ಹೂವಿನ ಗಿಡ) ಉದ್ಯಾನವು ಏಷಿಯಾ ಖಂಡದ ಅತಿ ದೊಡ್ಡ ಟುಲಿಪ್ ಉದ್ಯಾನವಾಗಿದೆ. 12 ಹೆಕ್ಟೇರ್ ಗಳಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನ್ನು ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಅಂದಿನ ಅಂದರೆ 2006-07 ರ ಸಂದರ್ಭದ ಜಮ್ಮು ಕಾಶ್ಮೀರ ರಾಜ್ಯದ ಮುಖ್ಯ ಮಂತ್ರಿ ಗುಲಾಮ್ ನಬಿ ಅಜಾದ್ ಅವರ ಕನಸಿನ ಫಲವಾಗಿದೆ.

ಚಿತ್ರಕೃಪೆ: wikitravel

ಸರ್ಕಾರಿ ಬೊಟಾನಿಕಲ್ ಉದ್ಯಾನ, ಊಟಿ

ಸರ್ಕಾರಿ ಬೊಟಾನಿಕಲ್ ಉದ್ಯಾನ, ಊಟಿ

ತಮಿಳುನಾಡಿನ ಉದಕಮಂಡಲಂ ಅಥವಾ ಊಟಿಯಲ್ಲಿರುವ ಈ ಉದ್ಯಾನವು ಒಂದು ಸರ್ಕಾರಿ ಸಸ್ಯಶಾಸ್ತ್ರೀಯ ತೋಟವಾಗಿದೆ. ಹಲವು ವಿಭಾಗಗಳಲ್ಲಿ ವಿಂಗಡನೆಗೊಂಡಿರುವ ಈ ಉದ್ಯಾನವು 22 ಹೆಕ್ಟೇರ್ ಪ್ರದೇಶದಷ್ಟು ವ್ಯಾಪಿಸಿದ್ದು, ದೊಡ್ಡ ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ಸ್ಥಿತವಾಗಿದೆ. ಸುಮಾರು ಸಾವಿರ ಬಗೆಯ ವಿವಿಧ ಸಸ್ಯಗಳು, ಪೊದೆಗಳು ಹಾಗು ಗಿಡ ಮರಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X