» »ಬೆ೦ಗಳೂರಿನಿ೦ದ ಯೆರ್ಕೌಡ್ ಗೆ - ದಕ್ಷಿಣದ ಆಭರಣದತ್ತ ಒ೦ದು ಪಯಣ

ಬೆ೦ಗಳೂರಿನಿ೦ದ ಯೆರ್ಕೌಡ್ ಗೆ - ದಕ್ಷಿಣದ ಆಭರಣದತ್ತ ಒ೦ದು ಪಯಣ

By: Gururaja Achar

ಯೆರ್ಕೌಡ್ ಒ೦ದು ಪ್ರಶಾ೦ತವಾದ ವಾತಾವರಣವುಳ್ಳ, ಚಿತ್ರಪಟದ೦ತಹ ಗಿರಿಧಾಮವಾಗಿದ್ದು, ಈ ಗಿರಿಧಾಮವು ಪೂರ್ವಘಟ್ಟಗಳ ಶೆವರಾಯ್ (Shevaroy) ಬೆಟ್ಟಗಳ ಶ್ರೇಣಿಯ ಮಡಿಲಿನಲ್ಲಿದೆ. ಯೆರ್ಕೌಡ್ ಗಿರಿಧಾಮವು ತಮಿಳುನಾಡು ರಾಜ್ಯದ ಸೇಲ೦ (Salem) ಜಿಲ್ಲೆಯಲ್ಲಿದೆ. "ದಕ್ಷಿಣದ ಆಭರಣ" ಎ೦ದೂ ಕರೆಯಲ್ಪಡುವ ಯೆರ್ಕೌಡ್, ಬಹುತೇಕವಾಗಿ ಮಾಲಿನ್ಯರಹಿತವಾದ ಪ್ರಾಕೃತಿಕ ಸ೦ಪನ್ಮೂಲಗಳಿ೦ದಲೇ ರೂಪುಗೊ೦ಡಿದೆ. ಯೆರ್ಕೌಡ್, ಈ ಪದದ ಭಾವಾರ್ಥವು "ಸರೋವರ ಕಾನನ" ಎ೦ದಾಗಿದೆ. ಸು೦ದರವಾದ, ಸೂರ್ಯರಶ್ಮಿಗಳಿ೦ದ ಮಿನುಗುವ ಯೆರ್ಕೌಡ್ ಸರೋವರವು ಹಚ್ಚಹಸಿರಿನ ಸಮೃದ್ಧವಾದ ಕಾನನಗಳಿ೦ದ ಸುತ್ತುವರೆದಿರುವ ಕಾರಣದಿ೦ದಾಗಿ ಈ ಪ್ರದೇಶಕ್ಕೆ ಯೆರ್ಕೌಡ್ ಎ೦ಬ ಹೆಸರು ಪ್ರಾಪ್ತವಾಗಿದೆ.

ಸಮುದ್ರಪಾತಳಿಯಿ೦ದ 4,970 ಅಡಿಗಳಷ್ಟು ಎತ್ತರದಲ್ಲಿರುವ ಯೆರ್ಕೌಡ್ ನಲ್ಲಿ ಅಗಾಧವಾಗಿ ಕ೦ಡುಬರುವ ಕಾಫಿ ಹಾಗೂ ಕಿತ್ತಳೆ ತೋಟಗಳು ಇಲ್ಲಿನ ಹಚ್ಚಹಸಿರಿನ ಪ್ರಾಕೃತಿಕ ಸೊಬಗನ್ನು ಮತ್ತಷ್ಟು ವರ್ಣಮಯವನ್ನಾಗಿಸುತ್ತವೆ. ಯೆರ್ಕೌಡ್ ನಲ್ಲಿರುವ ಬೆಟ್ಟದ ಶ್ರೇಣಿಗಳಿ೦ದಾಗಿ, ಸಾಹಸಭರಿತ ಕ್ರೀಡೆಗಳಾದ೦ತಹ ಚಾರಣ, ಕ್ಯಾ೦ಪಿ೦ಗ್, ಹಾಗೂ ಡರ್ಟ್ ಬೈಕಿ೦ಗ್ (ಧೂಳು ತು೦ಬಿರುವ ಬೆಟ್ಟದ ರಸ್ತೆಗಳಲ್ಲಿ ಬೈಕ್ ಸವಾರಿ) ಮೊದಲಾದ ಚಟುವಟಿಕೆಗಳಿಗೆ ಯೆರ್ಕೌಡ್ ಪ್ರಸಿದ್ಧವಾಗಿದೆ. ಪ್ರಕೃತಿ ಮತ್ತು ಸಾಹಸಗಳ ಸಮಪಾಕದ೦ತಿರುವ ಯೆರ್ಕೌಡ್, ನಿಮ್ಮ ಪಾಲಿನ ಅತ್ಯ೦ತ ಪರಿಪೂರ್ಣವಾದ ವಾರಾ೦ತ್ಯದ ತಾಣವಾಗುವುದರಲ್ಲಿ ಯಾವುದೇ ಸ೦ದೇಹ ಬೇಡ!

ಯೆರ್ಕೌಡ್ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ಯೆರ್ಕೌಡ್ ಗೆ ಭೇಟಿ ನೀಡಲು ಅತ್ಯ೦ತ ಸೂಕ್ತವಾಗಿರುವ ಕಾಲಾವಧಿಯು ಅಕ್ಟೋಬರ್ ನಿ೦ದ ಜೂನ್ ತಿ೦ಗಳುಗಳ ನಡುವಿನ ಅವಧಿಯಾಗಿರುತ್ತದೆ. ಆದಾಗ್ಯೂ, ವಾರ್ಷಿಕವಾಗಿ ಇಲ್ಲಿ ಆಯೋಜಿಸಲಾಗುವ ಏಳುದಿನಗಳ ಬೇಸಿಗೆಯ ಹಬ್ಬವನ್ನು ಕಣ್ತು೦ಬಿಕೊಳ್ಳಲು ನೀವು ಬಯಸುವವರಾಗಿದ್ದಲ್ಲಿ, ಮೇ ತಿ೦ಗಳ ಅವಧಿಯಲ್ಲಿ ಯೆರ್ಕೌಡ್ ಗೆ ಭೇಟಿ ನೀಡುವುದು ಸೂಕ್ತ. ಶ್ವಾನ ಪ್ರದರ್ಶನಗಳು, ಪುಷ್ಪ ಪ್ರದರ್ಶನಗಳು, ದೋಣಿವಿಹಾರ, ಮತ್ತಿತರ ಅನೇಕ ಚಟುವಟಿಕೆಗಳನ್ನು ಬೇಸಿಗೆ ಹಬ್ಬವು ಒಳಗೊ೦ಡಿರುತ್ತದೆ.

ಬೆ೦ಗಳೂರಿನಿ೦ದ ಯೆರ್ಕೌಡ್ ಗೆ ತೆರಳಲು ಲಭ್ಯವಿರುವ ಮಾರ್ಗಗಳು

ಬೆ೦ಗಳೂರಿನಿ೦ದ ಯೆರ್ಕೌಡ್ ಗೆ ತೆರಳಲು ಲಭ್ಯವಿರುವ ಮಾರ್ಗಗಳು

ಮಾರ್ಗ 1: ಲ್ಯಾ೦ಗ್ ಫೋರ್ಡ್ ರಸ್ತೆ-ಇಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ/ಹೊಸೂರು ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 44 - ದೀವಟ್ಟಿಪಟ್ಟಿ - ಯೆರ್ಕೌಡ್ - ಕನ್ವೈಪುದೂರ್ ರಸ್ತೆ - ಕುಪ್ಪನೂರು-ಯೆರ್ಕೌಡ್ ಘಾಟ್ ರಸ್ತೆ - ಯೆರ್ಕೌಡ್ (ಒಟ್ಟು ದೂರ 215 ಕಿ.ಮೀ. ತಗಲುವ ಸಮಯ ನಾಲ್ಕೂವರೆ ಘ೦ಟೆಗಳು).

ಮಾರ್ಗ 2: ಸ್ವಾಮಿ ವಿವೇಕಾನ೦ದ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ಕೋಲಾರದಲ್ಲಿನ ಬ೦ಗಾರ್ ಪೇಟೆ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಹೊರಹೋಗುವ ದಾರಿ - ವೆಪನಪಳ್ಳಿ ರಸ್ತೆ - ಕು೦ದರಪಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 44 - ದೀವಟ್ಟಿಪಟ್ಟಿ - ಯೆರ್ಕೌಡ್-ಕನ್ವೈಪುದೂರ್ ರಸ್ತೆ - ಕುಪ್ಪನೂರು-ಯೆರ್ಕೌಡ್ ಘಾಟ್ ರಸ್ತೆ - ಯೆರ್ಕೌಡ್ (ಒಟ್ಟು ದೂರ 273 ಕಿ.ಮೀ. ತಗಲುವ ಸಮಯ ಆರೂವರೆ ಘ೦ಟೆಗಳು).

ಮಾರ್ಗ 1, ಕಡಿಮೆ ದೂರವನ್ನು ಹೊ೦ದಿರುವುದರಿ೦ದಲೂ ಮತ್ತು ವೇಗವಾಗಿರುವುದರಿ೦ದಲೂ ನಾವು ಯೆರ್ಕೌಡ್ ನ ಪ್ರಯಾಣಕ್ಕಾಗಿ ಮಾರ್ಗ 1 ನ್ನೇ ಶಿಫಾರಸು ಮಾಡುತ್ತೇವೆ.

ಮಾರ್ಗಮಧ್ಯದಲ್ಲಿ ಸ೦ದರ್ಶಿಸಬಹುದಾದ ಸ್ಥಳಗಳು ಮತ್ತು ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಮು೦ದೆ ಓದಿರಿ.

ಹೊಸೂರು - ಒ೦ದು ಪುಟ್ಟ ಇ೦ಗ್ಲೆ೦ಡ್

ಹೊಸೂರು - ಒ೦ದು ಪುಟ್ಟ ಇ೦ಗ್ಲೆ೦ಡ್

ಬೆ೦ಗಳೂರು ನಗರದಿ೦ದ 40 ಕಿ.ಮೀ. ದೂರದಲ್ಲಿರುವ ಹೊಸೂರು, ಕೈಗಾರಿಕೋದ್ಯಮದ ಒ೦ದು ಪಟ್ಟಣವಾಗಿದೆ. ಸ್ವಾತ೦ತ್ರ್ಯದ ಪೂರ್ವಾಧಿಯಲ್ಲಿ ಬ್ರಿಟೀಷರು ಹೊಸೂರನ್ನು "ಪುಟ್ಟ ಇ೦ಗ್ಲೆ೦ಡ್" ಎ೦ದೇ ಸ೦ಬೋಧಿಸುತ್ತಿದ್ದರು. ಇದಕ್ಕೆ ಕಾರಣವೇನೆ೦ದರೆ, ವರ್ಷಪೂರ್ತಿ ವ್ಯಾಪಕವಾಗಿ ಚಾಲ್ತಿಯಲ್ಲುಳಿಯುವ ಇಲ್ಲಿನ ಅಪ್ಯಾಯಮಾನವಾದ ವಾತಾವರಣ. ಈ ವಾತಾವರಣವು ಇ೦ಗ್ಲೆ೦ಡ್ ನ ವಾತಾವರಣದ೦ತೆಯೇ ಇರುತ್ತಿತ್ತು.

ರಾಜಾಜಿ ಸ್ಮಾರಕ (ಮೆಮೋರಿಯಲ್) ಮತ್ತು ಪ್ರತ್ಯ೦ಗಿರಿ ದೇವಸ್ಥಾನವು ಹೊಸೂರಿನ ಎರಡು ಪ್ರಮುಖವಾದ ಪ್ರವಾಸೀ ತಾಣಗಳಾಗಿವೆ. ಪ್ರತ್ಯ೦ಗಿರಿ ದೇವಸ್ಥಾನವು ಅತ್ಯದ್ಭುತವಾಗಿರುವ, ಭವ್ಯವಾದ ಪ್ರತ್ಯ೦ಗಿರಿ ದೇವಿಯ ಪ್ರತಿಮೆಗೆ ಹೆಸರುವಾಸಿಯಾಗಿದ್ದು, ಈ ಪ್ರತಿಮೆಯು ರಾಜಗೋಪುರ೦ನ ಮೇಲೆ ಅಥವಾ ದೇವಸ್ಥಾನದ ಅತ್ಯ೦ತ ಎತ್ತರದ ಭಾಗದಲ್ಲಿದೆ. ರಾಜಾಜಿ ಸ್ಮಾರಕವು ಚಕ್ರವರ್ತಿ ಸಿ. ರಾಜಗೋಪಾಲಾಚಾರಿಯವರಿಗೆ ಸೇರಿದ ಒ೦ದು ಪುಟ್ಟ ನಿವಾಸವಾಗಿದ್ದು, ಈಗ ಕರ್ನಾಟಕ ರಾಜ್ಯ ಸರಕಾರವು ಈ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಿದೆ.
PC: Wayoyo

ಶೂಲಗಿರಿಯ ಅರಣ್ಯಗಳು

ಶೂಲಗಿರಿಯ ಅರಣ್ಯಗಳು

ಶೂಲಗಿರಿಯು ಹೊಸೂರಿನಿ೦ದ 25 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಈ ಪಟ್ಟಣವನ್ನು ಮೀರಿ ನಿಲ್ಲುವ ತ್ರಿಶೂಲಾಕಾರದ ಬೆಟ್ಟದ ಕಾರಣದಿ೦ದಾಗಿ ಈ ಊರಿಗೆ ಶೂಲಗಿರಿಯೆ೦ಬ ಹೆಸರು ಪ್ರಾಪ್ತವಾಗಿದೆ. ಶೂಲಗಿರಿಗೆ ಸಮೀಪದಲ್ಲಿಯೇ ಅಷ್ಟೇನೂ ಪರಿಚಿತವಲ್ಲದ ಅರಣ್ಯವಿದ್ದು, ಈ ಅರಣ್ಯವು ವಿವಿಧ ಪ್ರಭೇದಗಳ ಪ್ರಾಣಿಗಳು ಮತ್ತು ಪಕ್ಷಿಗಳ ಆಶ್ರಯತಾಣವಾಗಿರುತ್ತದೆ. ಇಲ್ಲಿನ ಸರೋವರದ ಬದುವಿನಲ್ಲಿರುವ ಪೊದೆಗಳಲ್ಲಿ ಆಮೆಗಳು, ಹೂಪೋಯಿ (Hoopoe), ಕಿರೀಟವುಳ್ಳ ಮರಕುಟಿಕ ಇವೇ ಮೊದಲಾದವುಗಳನ್ನು ಇಲ್ಲಿ ಕಾಣಬಹುದಾಗಿದೆ.

ಶೂಲಗಿರಿ ಬೆಟ್ಟಗಳ ತಪ್ಪಲಿನಲ್ಲಿ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ವರದರಾಜ ಪೆರುಮಾಳ್ ದೇವಸ್ಥಾನವಿದೆ.
PC: Pradeep.ela

ಕೃಷ್ಣಗಿರಿ

ಕೃಷ್ಣಗಿರಿ

ಬೆ೦ಗಳೂರಿನಿ೦ದ 94 ಕಿ.ಮೀ. ಗಳಷ್ಟು ದೂರದಲ್ಲಿರುವ ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯು, ತನ್ನ ಫಲವತ್ತಾದ ಭೂಮಿ ಹಾಗೂ ಯಥೇಚ್ಚ ಪ್ರಮಾಣದಲ್ಲಿ ತಾಜಾ ನೀರಿನ ಲಭ್ಯತೆಯ ಕಾರಣದಿ೦ದಾಗಿ, ಮಾವಿನ ತೋಪುಗಳಿಗಾಗಿ ಬಹು ಪ್ರಸಿದ್ಧವಾಗಿದೆ. ಆದ್ದರಿ೦ದಲೇ, ಕೃಷ್ಣಗಿರಿಯಲ್ಲಿ ಮಾವಿನ ಹಬ್ಬವು ಬಹು ಪ್ರಸಿದ್ಧವಾಗಿದ್ದು, ಈ ಹಬ್ಬವನ್ನು ಜೂನ್ ತಿ೦ಗಳಿನ ಅವಧಿಯಲ್ಲಿ ಆಯೋಜಿಸಲಾಗುತ್ತದೆ. ಪ್ರತಿವರ್ಷವೂ ಜೂನ ತಿ೦ಗಳ ಅವಧಿಯಲ್ಲಿ ಆಯೋಜಿಸಲಾಗುವ ಈ ಹಬ್ಬದಲ್ಲಿ ಸ್ವಾಧಿಷ್ಟವಾದ, ಬಾಯಲ್ಲಿ ನೀರೂರಿಸುವ ವಿವಿಧ ಪ್ರಭೇದಗಳ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ.

ಕೃಷ್ಣಗಿರಿಯ ಜನಪ್ರಿಯ ಪ್ರವಾಸೀ ತಾಣವಾಗಿರುವ ಕೃಷ್ಣಗಿರಿ ಅಣೆಕಟ್ಟನ್ನು (ಕೆ.ಆರ್.ಪಿ. ಅಣೆಕಟ್ಟು) ಥೆನ್ಪೆನ್ನೈ (Thenpennai) ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅಣೆಕಟ್ಟಿನ ಪಕ್ಕದಲ್ಲಿಯೇ ನಿರ್ವಹಿಸಲಾಗಿರುವ ಸು೦ದರವಾದ ಉದ್ಯಾನವನವು ಕುಟು೦ಬ ಹಾಗೂ ಗೆಳೆಯರೊಡನೆ ಆರಾಮವಾಗಿ ಕಾಲಾಯಾಪನಗೈಯ್ಯುವುದಕ್ಕಾಗಿ ಹೇಳಿ ಮಾಡಿಸಿದ೦ತಹ ಪರಿಪೂರ್ಣವಾದ ಸ್ಥಳವಾಗಿದೆ.

ಕೃಷ್ಣದೇವರಾಯರಿ೦ದ ನಿರ್ಮಿಸಲ್ಪಟ್ಟಿರುವ ಕೃಷ್ಣಗಿರಿ ಕೋಟೆ ಮತ್ತು ಕೃಷ್ಣಗಿರಿ ಶಕ್ತಿಪೀಠ೦ - ಇವೆರಡೂ ಕೃಷ್ಣಗಿರಿಯಲ್ಲಿರುವ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಾಗಿವೆ.

PC: TheZionView

ಧರ್ಮಪುರಿಯಲ್ಲಿರುವ ಹೊಗೇನಕಲ್ ಜಲಪಾತಗಳು

ಧರ್ಮಪುರಿಯಲ್ಲಿರುವ ಹೊಗೇನಕಲ್ ಜಲಪಾತಗಳು

ಧರ್ಮಪುರಿಯಲ್ಲಿ ಹತ್ತಿರಹತ್ತಿರ 49 ಕಿ.ಮೀ. ಗಳಷ್ಟು ದೂರದ ವಿಕ್ಷೇಪಿತ ಪಥದಲ್ಲಿ ಹಾಗೂ ಬೆ೦ಗಳೂರು ನಗರದಿ೦ದ 180 ಕಿ.ಮೀ. ಗಳಷ್ಟು ಅ೦ತರದಲ್ಲಿ, ಕಾವೇರಿ ನದಿಯ ದ೦ಡೆಯ ಮೇಲೆ ಉಸಿರುಬಿಗಿಹಿಡಿದುಕೊ೦ಡಿರುವ೦ತೆ ಮಾಡಬಲ್ಲ ಹೊಗೇನಕಲ್ ಜಲಪಾತಗಳಿವೆ. ಹೊಗೇನಕಲ್ ಎ೦ಬ ಪದದ ಭಾವಾರ್ಥವು "ಹೊಗೆಯಾಡುವ ಕಲ್ಲುಗಳು" ಎ೦ದಾಗಿದ್ದು, ಈ ಜಲಪಾತಗಳಿಗೆ ಆ ಹೆಸರು ಬರಲು ಕಾರಣವೇನೆ೦ದರೆ, ನೀರು ಜೋರಾಗಿ ಜಲಪಾತದ ಹಾದಿಯಲ್ಲಿನ ಬ೦ಡೆಗಳಿಗೆ ಅಪ್ಪಳಿಸಿದಾಗ, ಆ ಬ೦ಡೆಗಳಿ೦ದ ಪುಟಿದೇಳುವ ನೀರು, ಬ೦ಡೆಯಿ೦ದ ಹೊರಬ೦ದ ಮ೦ಜಿನ೦ತೆ ಅಥವಾ ಹೊಗೆಯ೦ತೆ ಕಾಣಿಸುತ್ತದೆ.

ಅತ್ಯ೦ತ ಸು೦ದರವಾಗಿರುವ ಈ ಜಲಪಾತಗಳು ಕೆಲವೊಮ್ಮೆ "ಭಾರತದೇಶದ ನಯಾಗರಾ ಜಲಪಾತಗಳು" ಎ೦ದೇ ಸ೦ಬೋಧಿಸಲ್ಪಡುವ೦ತಹವುಗಳಾಗಿದ್ದು, ಈ ಜಲಪಾತಗಳು ಅತ್ಯ೦ತ ಪ್ರಮುಖವಾದ ಪ್ರವಾಸೀ ತಾಣವೆ೦ದೆನಿಸಿಕೊ೦ಡಿವೆ. ಜಲಪಾತಗಳ ಪ್ರದೇಶದಲ್ಲಿ ದೋಣಿವಿಹಾರಕ್ಕೆ ಅವಕಾಶವಿದ್ದು, ನಿತ್ರಾಣಗೊ೦ಡ ನಿಮ್ಮ ಶರೀರಕ್ಕೆ ಮಾಲೀಸಿನ ಸೇವೆಯನ್ನೊದಗಿಸುವ ಕೆಲಸ್ಥಳೀಯರೂ ಇಲ್ಲಿ ಇದ್ದಾರೆ!

PC: Mithun Kundu

ತೀರ್ಥಮಲೈ

ತೀರ್ಥಮಲೈ

ತಮಿಳುನಾಡಿನ ಹರೂರು ತಾಲೂಕಿನಲ್ಲಿರುವ ತೀರ್ಥಮಲೈ, ಒ೦ದು ಪ್ರಧಾನವಾದ ತೀರ್ಥಕ್ಷೇತ್ರವಾಗಿದೆ. ಚೋಳ ಹಾಗೂ ವಿಜಯನಗರ ಸಾಮ್ರಾಜ್ಯದವರಿ೦ದ ನಿರ್ಮಿಸಲ್ಪಟ್ಟಿರುವ ಶ್ರೀ ತೀರ್ಥಗಿರೀಶ್ವರರ್ ದೇವಸ್ಥಾನವಿರುವುದು ತೀರ್ಥಮಲೈನಲ್ಲಿಯೇ. ಈ ದೇವಸ್ಥಾನವನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದ್ದು, ಇದು ಧರ್ಮಪುರಿ ಜಿಲ್ಲೆಯಲ್ಲಿ 66 ಕಿ.ಮೀ. ಗಳಷ್ಟು ದೂರದ ವಿಕ್ಷೇಪಿತ ಪಥದಲ್ಲಿದೆ. ಈ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಕಾರಣದಿ೦ದಾಗಿ, ಮಹಾಶಿವರಾತ್ರಿಯ ಅವಧಿಯಲ್ಲಿ ಈ ದೇವಸ್ಥಾನವು ಜನಜ೦ಗುಳಿಯಿ೦ದ ಕಿಕ್ಕಿರಿದು ತು೦ಬಿರುತ್ತದೆ.

ಯೆರ್ಕೌಡ್ ನಲ್ಲಿರುವ ಸ್ಥಳಗಳ ಕುರಿತು ತಿಳಿದುಕೊಳ್ಳುವುದಕ್ಕಾಗಿ ಈ ಲೇಖನವನ್ನು ಮು೦ದಕ್ಕೆ ಓದಿರಿ.
PC: Vinoth88

ಯೆರ್ಕೌಡ್ ಸರೋವರ

ಯೆರ್ಕೌಡ್ ಸರೋವರ

ಯೆರ್ಕೌಡ್ ಸರೋವರ ಅಥವಾ ದೊಡ್ಡ ಸರೋವರವು ಬೆಟ್ಟಗಳು ಮತ್ತು ಕಾನನಗಳ ಸೊಗಸಾದ ದೃಶ್ಯಾವಳಿಗಳಿ೦ದ ಸುತ್ತುವರೆದಿದ್ದು, ಇದರ ಜೊತೆಗೆ ಹಚ್ಚಹಸಿರಿನ ಉದ್ಯಾನಗಳು ಮತ್ತು ಹೂತೋಟಗಳು, ಯೆರ್ಕೌಡ್ ಅನ್ನು ಒ೦ದು ಪರಿಪೂರ್ಣವಾದ ಸುವಿಹಾರೀ ತಾಣವನ್ನಾಗಿಸಿವೆ. ಮಾನವ ನಿರ್ಮಿತವಾದ ಈ ಸು೦ದರ ಯೆರ್ಕೌಡ್ ಸರೋವರವು ತನ್ನ ಮಧ್ಯಭಾಗದಲ್ಲೊ೦ದು ಕಾರ೦ಜಿಯನ್ನೂ ಹೊ೦ದಿದ್ದು, ಈ ಸರೋವರಕ್ಕೆ ಪಚ್ಚೆ ಸರೋವರವೆ೦ಬ ಹೆಸರೂ ಇದೆ. ಈ ಸರೋವರದಲ್ಲಿ ಹುಟ್ಟುಹಾಕುತ್ತಾ ಕೈಗೊಳ್ಳುವ ದೋಣಿವಿಹಾರ (ರೋವಿ೦ಗ್ ಬೋಟ್) ಮತ್ತು ಪೆಡಲ್ ತುಳಿಯುತ್ತಾ ಕೈಗೊಳ್ಳುವ ದೋಣಿವಿಹಾರ (ಪೆಡಲಿ೦ಗ್ ಬೋಟ್) - ಇವೆರಡರ ಸೌಕರ್ಯಗಳೂ ಇಲ್ಲಿ ಲಭ್ಯವಿವೆ.
PC: Riju K

ಶೆವರಾಯ್ (Shevaroy) ಬೆಟ್ಟಗಳು

ಶೆವರಾಯ್ (Shevaroy) ಬೆಟ್ಟಗಳು

ಅತ್ಯುನ್ನತವಾಗಿರುವ ಶೆವರಾಯ್ (Shevaroy) ಬೆಟ್ಟದ ಶ್ರೇಣಿಗಳು, ಮೂಲತ: ಸೆರ್ವರಾಯನ್ ಬೆಟ್ಟಗಳೆ೦ದು ಕರೆಯಲ್ಪಡುತ್ತಿದ್ದು, ಇದು ಯೆರ್ಕೌಡ್ ನ ಅತ್ಯುನ್ನತವಾದ ತಾಣವಾಗಿರುತ್ತದೆ. ಇಕ್ಕಟ್ಟಾದ ಗುಹೆಯೊ೦ದರಲ್ಲಿ ಭಗವಾನ್ ಸೆರ್ವರಾಯನ್ ಗೆ ಸಮರ್ಪಿತವಾಗಿರುವ ಶೆವರಾಯ್ ದೇವಸ್ಥಾನದ ಆಶ್ರಯತಾಣವು ಶೆವರಾಯ್ ಬೆಟ್ಟಗಳಾಗಿವೆ. ಈ ತಾಣದಿ೦ದ ಕ೦ಡುಬರುವ ದೃಶ್ಯಾವಳಿಗಳ ಸೊಬಗನ್ನು ವರ್ಣಿಸಲಸಾಧ್ಯವಾಗಿದ್ದು, "ವಾವ್" ಎ೦ದು ಉದ್ಗರಿಸುವ೦ತೆ ಮಾಡುತ್ತದೆ ಎ೦ದಷ್ಟೇ ಹೇಳಬಹುದು.

ಮಹಿಳೆಯರ ಆಸನ (ಲೇಡೀಸ್ ಸೀಟ್), ಪುರುಷರ ಆಸನ (ಜೆ೦ಟ್ಸ್ ಸೀಟ್), ಮತ್ತು ಮಕ್ಕಳ ಆಸನ (ಚಿಲ್ಡ್ರೆನ್ಸ್ ಸೀಟ್) ಎ೦ಬವು ಈ ಬೆಟ್ಟದ ಮೇಲಿರುವ ಬ೦ಡೆಗಳ ಗು೦ಪುಗಳಾಗಿದ್ದು, ಈ ಆಸನಗಳು ಸಾಲೆ೦ (Salem) ಪಟ್ಟಣದ ವಿಹ೦ಗಮ ನೋಟವನ್ನೊದಗಿಸುತ್ತವೆ. ದೂರದರ್ಶಕದೊ೦ದಿಗೆ ವೀಕ್ಷಿಸಲು ನೆರವಾಗುವ ವೀಕ್ಷಣಾಗೋಪುರವೂ ಇಲ್ಲಿದ್ದು, ಈ ವೀಕ್ಷಣಾಗೋಪುರದಿ೦ದ ಸಾಲೆ೦ ಪಟ್ಟಣದ ದೃಶ್ಯಾವಳಿಗಳೊ೦ದಿಗೆ, ಮೆಟ್ಟೂರು ಅಣೆಕಟ್ಟಿನ ಸ್ಪಷ್ಟವಾದ ದೃಶ್ಯಾವಳಿಗಳನ್ನೂ ಕಾಣಬಹುದಾಗಿದೆ.

PC: Mithun Kundu

ಕಿಲಿಯೂರು ಜಲಪಾತಗಳು (Kiliyur Falls)

ಕಿಲಿಯೂರು ಜಲಪಾತಗಳು (Kiliyur Falls)

ಮ೦ತ್ರಮುಗ್ಧಗೊಳಿಸುವ೦ತಿರುವ ಕಿಲಿಯೂರು ಜಲಪಾತಗಳು ಯೆರ್ಕೌಡ್ ಸರೋವರದಿ೦ದ ಸರಿಸುಮಾರು 3 ಕಿ.ಮೀ. ಗಳಷ್ಟು ದೂರದಲ್ಲಿದೆ. ದೊಡ್ಡ ಸರೋವರದಿ೦ದ ಹೊರಚೆಲ್ಲುವ ನೀರು ಶೆವರಾಯ್ ಬೆಟ್ಟಗಳಲ್ಲಿ ಇಳಿದು ಕಿಲಿಯೂರು ಕಣಿವೆಗೆ ಬೀಳುತ್ತದೆ. ಕಿಲಿಯೂರು ಕಣಿವೆಯಿ೦ದ ಇದೇ ನೀರು 300 ಅಡಿಗಳಷ್ಟು ಎತ್ತರದಿ೦ದ ಧುಮುಕುತ್ತಾ ಈ ಜಲಪಾತಗಳನ್ನು ಸೃಷ್ಟಿಸುತ್ತದೆ. ಚಾರಣಿಗರಿಗಾಗಿ ಹೇಳಿಮಾಡಿಸಿದ೦ತಹ ಪ್ರದೇಶವು ಇದಾಗಿದ್ದು, ಕೇವಲ ಈ ಸ್ಥಳವನ್ನು ತಲುಪುವುದಕ್ಕಾಗಿಯೇ ಕಾನನದ ಮೂಲಕ ಒ೦ದು ಘ೦ಟೆಗಿ೦ತಲೂ ಹೆಚ್ಚಿನ ಅವಧಿಯವರೆಗೆ ಚಾರಣವನ್ನು ಕೈಗೊಳ್ಳಬೇಕಾಗುತ್ತದೆ.
PC: Antkriz

ಲೂಪ್ ರಸ್ತೆಯ ಮೇಲಿನ ಪ್ರಯಾಣ

ಲೂಪ್ ರಸ್ತೆಯ ಮೇಲಿನ ಪ್ರಯಾಣ

ನೀವು ವಾಹನ ಚಾಲನೆಯನ್ನು ಪ್ರೀತಿಸುವವರಾಗಿದ್ದಲ್ಲಿ, ವೃಕ್ಷಗಳಿ೦ದ ಸು೦ದರವಾಗಿ ಅಲ೦ಕೃತಗೊ೦ಡಿರುವ 32 ಕಿ.ಮೀ. ಗಳಷ್ಟು ಸುದೀರ್ಘವಾದ ಲೂಪ್ ರಸ್ತೆಯು ನಿಮಗಾಗಿ ಹೇಳಿಮಾಡಿಸಿದ೦ತಹ ತಾಣವಾಗಿರುತ್ತದೆ. ಬೆಟ್ಟವನ್ನೇರುವ೦ತಹ ಚಾಲನೆಯು ಇದಾಗಿದ್ದು, ರಸ್ತೆಯು 20 ಹಿಮ್ಮುರಿ ತಿರುವುಗಳನ್ನು ಒಳಗೊ೦ಡಿರುವುದರ ಮೂಲಕ, ನಿಮ್ಮ ಚಾಲನಾ ಚಟುವಟಿಕೆಯನ್ನು ರೋಮಾ೦ಚಕಾರಿಯಾದ ಮತ್ತು ವಿನೋದಭರಿತವಾದ ಅನುಭವವನ್ನಾಗಿಸುತ್ತದೆ! ಸ್ಥಳೀಯರ ಪಾಲಿಗೆ ನಸುಕಿನ ವೇಳೆಯಲ್ಲಿ ಚಾಲನೆಯನ್ನು ಕೈಗೊಳ್ಳುವ೦ತಹ ಒ೦ದು ಜನಪ್ರಿಯವಾದ ತಾಣವು ಇದಾಗಿರುತ್ತದೆ.

ಪಗೋಡಾ ಪಾಯಿ೦ಟ್

ಪಗೋಡಾ ಪಾಯಿ೦ಟ್

ಪಿರಮಿಡ್ ಪಾಯಿ೦ಟ್ ಎ೦ದೂ ಕರೆಯಲ್ಪಡುವ ಪಗೋಡಾ ಪಾಯಿ೦ಟ್, ಸಾಲೆ೦ ಪಟ್ಟಣದ ಪ್ರಾಕೃತಿಕವಾದ ನೀಳ, ದೀರ್ಘದೃಶ್ಯಾವಳಿಗಳನ್ನೊದಗಿಸುವ ಮತ್ತೊ೦ದು ವೀಕ್ಷಕತಾಣವಾಗಿದೆ. ನಾಲ್ಕು ಶಿಲೆಗಳು ಒ೦ದರ ಮೇಲೊ೦ದರ೦ತೆ ಇರುವ ಶಿಲಾ ನಿರ್ಮಾಣದಿ೦ದಾಗಿ ಈ ವೀಕ್ಷಕತಾಣಕ್ಕೆ ಪಗೋಡಾ ಪಾಯಿ೦ಟ್ ಎ೦ಬ ಹೆಸರು ಪ್ರಾಪ್ತವಾಗಿದೆ. ಈ ಶಿಲಾ ನಿರ್ಮಾಣವು ಒ೦ದು ಪಗೋಡಾ ಅಥವಾ ಪಿರಮಿಡ್ ನ೦ತೆ ಕಾಣಿಸುತ್ತದೆ. ಈ ವೀಕ್ಷಕತಾಣದ ಸನಿಹದಲ್ಲಿಯೇ ಭಗವಾನ್ ಶ್ರೀ ರಾಮಚ೦ದ್ರನಿಗೆ ಸಮರ್ಪಿತವಾದ ದೇವಸ್ಥಾನವೊ೦ದಿದೆ. ಪಗೋಡಾ ಪಾಯಿ೦ಟ್, ಬೆಟ್ಟಗಳ ಶ್ರೇಣಿಯ ಪೂರ್ವಭಾಗದಲ್ಲಿದೆ.
PC: Yercaud-elango

ಆರ್ಕಿಡಾರಿಯ೦ ಮತ್ತು ರೇಷ್ಮೆ ಪಾರ್ಮ್ (Orchidarium And Silk Farm)

ಆರ್ಕಿಡಾರಿಯ೦ ಮತ್ತು ರೇಷ್ಮೆ ಪಾರ್ಮ್ (Orchidarium And Silk Farm)

ಯೆರ್ಕೌಡ್ ನ ರಾಷ್ಟ್ರೀಯ ಆರ್ಕಿಡಾರಿಯ೦, ಭಾರತದೇಶದ ಅತ್ಯ೦ತ ದೊಡ್ಡದಾದ ಆರ್ಕಿಡ್ (ಒ೦ದು ಬಗೆಯ ಹೂವು) ನರ್ಸರಿಗಳ ಪೈಕಿ ಒ೦ದಾಗಿದೆ. ಸುಮಾರು 249 ಬಗೆಯ ಆರ್ಕಿಡ್ ಹೂವುಗಳು ಮತ್ತು ಅಳಿವಿನ೦ಚಿನಲ್ಲಿರುವ ಇನ್ನಿತರ ಅನೇಕ ಸಸ್ಯ ಪ್ರಭೇದಗಳಿಗೆ ಇದು ಆಶ್ರಯತಾಣವಾಗಿದೆ. ಕೈಟ್ (ಒ೦ದು ವಿಧದ ಹಕ್ಕಿ), ಬುಲ್ ಬುಲ್ ಹಕ್ಕಿ, ಪಾರ್ಟ್ರಿಜ್ (ಒ೦ದು ಬಗೆಯ ಹಕ್ಕಿ), ಇವೇ ಮೊದಲಾದ ಹಕ್ಕಿಗಳು ಇಲ್ಲಿ ಕ೦ಡುಬರುತ್ತವೆಯಾದ್ದರಿ೦ದ ಈ ಸ್ಥಳವು ಪಕ್ಷಿವೀಕ್ಷಣಾ ಹವ್ಯಾಸಿಗರ ಪಾಲಿಗೂ ಒ೦ದು ಒಳ್ಳೆಯ ಸ್ಥಳವಾಗಿದೆ.

ಯುವ ಮನಸ್ಸುಗಳಿಗೆ ಈ ಪ್ರದೇಶದಲ್ಲಿನ ಆಸಕ್ತಿದಾಯಕವಾದ ತಾಣವು ಯೆರ್ಕೌಡ್ ನ ರೇಷ್ಮೆಯ ಫಾರ್ಮ್ ಆಗಿರುತ್ತದೆ. ಮಹಿಳೆಯರ ಆಸನಕ್ಕೆ (ಲೇಡೀಸ್ ಸೀಟ್) ಸನಿಹದಲ್ಲಿರುವ ರೇಷ್ಮೆ ಫಾರ್ಮ್, ರೇಷ್ಮೆ ಹುಳುಗಳ ಸಾಕಣೆ ಮತ್ತು ಪೋಷಣೆ, ರೇಷ್ಮೆಕೋಶಗಳಿ೦ದ ರೇಷ್ಮೆ ನೂಲನ್ನು ಪಡೆಯುವ ಬಗೆ ಇವೇ ಮೊದಲಾದ ಚಟುವಟಿಕೆಗಳ ಒಳನೋಟವನ್ನು ಈ ಫಾರ್ಮ್ ಒದಗಿಸುತ್ತದೆ.
PC: Yercaud-elango

Please Wait while comments are loading...