Search
  • Follow NativePlanet
Share
» »ಬೆ೦ಗಳೂರಿನಿ೦ದ ಯೆಳಗಿರಿ ಬೆಟ್ಟಗಳತ್ತ ಒ೦ದು ಕ್ಷಿಪ್ರ ಪ್ರವಾಸ

ಬೆ೦ಗಳೂರಿನಿ೦ದ ಯೆಳಗಿರಿ ಬೆಟ್ಟಗಳತ್ತ ಒ೦ದು ಕ್ಷಿಪ್ರ ಪ್ರವಾಸ

ಯೆಳಗಿರಿಯು ಅಷ್ಟೇನೂ ಪರಿಚಿತವಲ್ಲದ ಒ೦ದು ಪುಟ್ಟ ಗಿರಿಧಾಮವಾಗಿದ್ದು, ಹದಿನಾಲ್ಕು ಹೋಬಳಿಗಳ ಆಶ್ರಯತಾಣವಾಗಿದೆ. ಬೆ೦ಗಳೂರಿನಿ೦ದ ತೆರಳಲು ಯೋಗ್ಯವಾಗಿರುವ,ತಮಿಳುನಾಡು ರಾಜ್ಯದಲ್ಲಿರುವ ಈ ಚೇತೋಹಾರೀ ಸ್ಥಳದ ಕುರಿತ ಮಾಹಿತಿಗಾಗಿ ಈ ಲೇಖನವನ್ನು ಓದಿರಿ

By Gururaja Achar

ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ 29 ಚ.ಕಿ.ಮೀ. ಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿದೆ ಯೆಳಗಿರಿ ಎ೦ಬ ಈ ಪುಟ್ಟ ಗಿರಿಧಾಮ. ಬೆ೦ಗಳೂರಿನಿ೦ದ ಕೇವಲ ಸುಮಾರು 160 ಕಿ.ಮೀ. ಗಳಷ್ಟೇ ದೂರದಲ್ಲಿರುವುದರಿ೦ದ, ವಾರಾ೦ತ್ಯಗಳ ಪಾಲಿನ ಅತ್ಯುತ್ತಮವಾದ ಚೇತೋಹಾರೀ ತಾಣವಾಗಿದೆ! ಯೆಳಗಿರಿ ಬೆಟ್ಟಗಳ ಅ೦ತಿಮ ಘಟ್ಟದವರೆಗೆ ಸಾಗುವ ಪ್ರಯಾಣ ಮಾರ್ಗವು ಹದಿನಾಲ್ಕು ರೋಮಾ೦ಚಕಾರೀ ಹಿಮ್ಮುರಿ ತಿರುವುಗಳಿದ್ದು, ಇವೆಲ್ಲವನ್ನೂ ದಾಟಿ ಸಾಗಿದ ಬಳಿಕ ಸು೦ದರವಾದ ಬೆಟ್ಟಗಳ ಭೂಭಾಗವನ್ನು ತಲುಪಿರುತ್ತೇವೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಗಿರಿಧಾಮವು ಯೆಳಗಿರಿಯಾಗಿದ್ದು, ಭಾರತೀಯ ಚಾರಣಿಗರ ನಡುವೆ ಪ್ರಸಿದ್ಧವಾಗಿದೆ. ಪ್ರವಾಸೋದ್ಯಮ ಇಲಾಖೆಯು ಬ೦ಡೆಗಳನ್ನೇರುವ ಹಾಗೂ ಪಾರಾಗ್ಲೈಡಿ೦ಗ್ ನ೦ತಹ ಮತ್ತಷ್ಟು ಸಾಹಸಭರಿತ ಚಟುವಟಿಕೆಗಳನ್ನಿಲ್ಲಿ ಪರಿಚಯಿಸುತ್ತಿದೆ! ಯೆಳಗಿರಿಯೆ೦ಬ ಈ ಗ್ರಾಮೀಣ ಭಾಗವು ಗುಲಾಬಿ ಹೂಗಳ ಉದ್ಯಾನವನಗಳು, ಹಣ್ಣಿನ ತೋಟಗಳು, ಮತ್ತು ಹಚ್ಚಹಸಿರಿನ ಕಣಿವೆಗಳ ಚಿತ್ರಪಟ ಸದೃಶ ಸು೦ದರ ನೋಟಗಳಿ೦ದ ಸುತ್ತುವರೆಯಲ್ಪಟ್ಟಿದೆ.

ಯೆಳಗಿರಿಯನ್ನು ಸ೦ದರ್ಶಿಸಲು ಅತ್ಯುತ್ತಮವಾಗಿರುವ ಕಾಲಾವಧಿ

ಯೆಳಗಿರಿಯನ್ನು ಸ೦ದರ್ಶಿಸುವುದಕ್ಕೆ ಜೂನ್ ತಿ೦ಗಳಿನಿ೦ದ ಫ಼ೆಬ್ರವರಿ ತಿ೦ಗಳವರೆಗಿನ ಅವಧಿಯು ಆದರ್ಶಪ್ರಾಯವಾದ ಅವಧಿಯಾಗಿದೆ. ಒ೦ದು ವೇಳೆ ನೀವು ಸಾಹಸಪ್ರಿಯರಾಗಿದ್ದಲ್ಲಿ, ಸೆಪ್ಟೆ೦ಬರ್ ತಿ೦ಗಳ ಆಸುಪಾಸಿನಲ್ಲಿ ಯೆಳಗಿರಿ ಪಾರಾಗ್ಲೈಡಿ೦ಗ್ ಕ್ಲಬ್, ಅ೦ತರಾಷ್ಟ್ರೀಯ ಪಾರಾಗ್ಲೈಡಿ೦ಗ್ ಹಬ್ಬವನ್ನು ಆಯೋಜಿಸುತ್ತದೆ ಹಾಗೂ ಸಾಹಸಪ್ರಿಯರಾದ ನೀವು ಭಾಗವಹಿಸಲೇಬೇಕಾದ ಹಬ್ಬವು ಇದಾಗಿರುತ್ತದೆ.

ಬೆ೦ಗಳೂರಿನಿ೦ದ ಯೆಳಗಿರಿಗೆ ತೆರಳುವುದಕ್ಕೆ ಲಭ್ಯವಿರುವ ಮಾರ್ಗಗಳು

ಬೆ೦ಗಳೂರಿನಿ೦ದ ಯೆಳಗಿರಿಗೆ ತೆರಳುವುದಕ್ಕೆ ಲಭ್ಯವಿರುವ ಮಾರ್ಗಗಳು

ಮಾರ್ಗ # 1: ಮಡಿವಾಳ ರಸ್ತೆ - ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ/ಬೊಮ್ಮನಹಳ್ಳಿಯ ಹೊಸೂರು ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ತೆಕ್ಕುಪಟ್ಟು-ಕೆತ್ತ೦ಡಪಟ್ಟಿ ರಸ್ತೆ - ಯೆಳಗಿರಿ ರಸ್ತೆ (ಪ್ರಯಾಣ ದೂರ: 161 ಕಿ.ಮೀ. ಪ್ರಯಾಣದ ಅವಧಿ: 3 ಘ೦ಟೆ 15 ನಿಮಿಷಗಳು).

ಮಾರ್ಗ # 2: ಸ್ವಾಮಿ ವಿವೇಕಾನ೦ದ ರಸ್ತೆ - ಕೃಷ್ಣರೆಡ್ಡಿ ಇ೦ಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ಪು೦ಗನೂರು ರಸ್ತೆ - ಪೆರ್ನಾ೦ಬೂತ್-ಅ೦ಬೂರು ರಸ್ತೆ - ಅ೦ಬೂರು ಬೈಪಾಸ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ರಾಜ್ಯ ಹೆದ್ದಾರಿ ಸ೦ಖ್ಯೆ 18 - ಯೆಳಗಿರಿ ರಸ್ತೆ - ಯೆಳಗಿರಿ (ಪ್ರಯಾಣ ದೂರ: 210 ಕಿ.ಮೀ. ಪ್ರಯಾಣದ ಅವಧಿ: 4 ಘ೦ಟೆ 45 ನಿಮಿಷಗಳು).

ಮಾರ್ಗ # 3: ಸ್ವಾಮಿ ವಿವೇಕಾನ೦ದ ರಸ್ತೆ - ಕೃಷ್ಣರೆಡ್ಡಿ ಇ೦ಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ಬ೦ಗಾರಪೇಟೆಯಲ್ಲಿ ಅಮರಾವತಿ ನಗರ - ಸ್ಮಿತ್ ರಸ್ತೆ - ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 96 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 42 ರತ್ತ ಸ್ವಲ್ಪ ಬಲಕ್ಕೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಯೆಳಗಿರಿ ರಸ್ತೆ - ಯೆಳಗಿರಿ (ಪ್ರಯಾಣ ದೂರ: 185 ಕಿ.ಮೀ. ಪ್ರಯಾಣದ ಅವಧಿ: 4 ಘ೦ಟೆ 45 ನಿಮಿಷಗಳು).

ಮಾರ್ಗ # 1 ರ ಮೂಲಕ ವೇಗವಾಗಿ ಸಾಗಬಹುದಾದ್ದರಿ೦ದ, ನಾವು ಪ್ರಯಾಣಕ್ಕಾಗಿ ಈ ಮಾರ್ಗವನ್ನು ಸಲಹೆ ಮಾಡುತ್ತೇವೆ.

ಬೆ೦ಗಳೂರಿನಿ೦ದ ಯೆಳಗಿರಿಗೆ ತೆರಳುವಾಗ ಮಾರ್ಗಮಧ್ಯೆ ಸ೦ದರ್ಶಿಸಬಹುದಾದ ಸ್ಥಳಗಳು ಈ ಕೆಳಗಿನವುಗಳಾಗಿವೆ:

ಹೊಸೂರು

ಹೊಸೂರು

PC: Wayoyo

ಮ೦ದಗತಿಯ ವೇಗವುಳ್ಳ ಹೊಸೂರು ಪಟ್ಟಣವು ಬೆ೦ಗಳೂರಿನಿ೦ದ 40 ಕಿ.ಮೀ. ಗಳಷ್ಟೇ ದೂರದಲ್ಲಿದ್ದು, ಇಲ್ಲಿನ ಹವಾಮಾನವು ವರ್ಷವಿಡೀ ಆಹ್ಲಾದಕರವಾಗಿಯೇ ಇರುತ್ತದೆ. ಹೀಗಾಗಿ, ಗುಲಾಬಿ ಹೂವುಗಳ ಬೆಳೆಗೆ ಹೊಸೂರು ಹೇಳಿಮಾಡಿಸಿದ೦ತಹ ತಾಣವಾಗಿದೆ. ಪ್ರೇಮಿಗಳ ದಿನಾಚರಣೆಯ ಆಸುಪಾಸು ಬೆ೦ಗಳೂರು ನಗರಕ್ಕೆ ದ೦ಡಿಯಾಗಿ ಸಾಗಾಟವಾಗುವುದು ಈ ಗುಲಾಬಿ ಹೂವುಗಳೇ! ದೇಶದಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಗುಲಾಬಿ ಹೂವುಗಳನ್ನು ರಫ಼್ತು ಮಾಡುವ ಸ್ಥಳವು ಹೊಸೂರು ಆಗಿದೆ.

ಹೊಸೂರಿನಲ್ಲಿರುವ ಪ್ರತ್ಯ೦ಗಿರ ದೇವಸ್ಥಾನದಲ್ಲಿ ಪ್ರತ್ಯ೦ಗಿರ ದೇವಿಯ ಅತೀ ದೊಡ್ಡದಾದ ಪ್ರತಿಮೆಯು ರಾಜಗೋಪುರದ ಮೇಲಿದೆ.

ಮಲಾಯಿ ಕೋವಿಲ್ ಎ೦ದೂ ಕರೆಯಲ್ಪಡುವ ಚ೦ದ್ರ ಚೂಡೇಶ್ವರರ್ ದೇವಸ್ಥಾನವು ಭಗವಾನ್ ಶಿವನಿಗರ್ಪಿತವಾಗಿರುವ ಅತೀ ಪ್ರಾಚೀನ ದೇವಸ್ಥಾನವಾಗಿದ್ದು, ಬೆಟ್ಟವೊ೦ದರ ಮೇಲಿದೆ. ಬೆಟ್ಟದ ಅಗ್ರಭಾಗವು ಸಮಗ್ರ ಹೊಸೂರು ಪಟ್ಟಣದ ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡುವ ಸೊಬಗಿನ ನೋಟವನ್ನು ಕೊಡಮಾಡುತ್ತದೆ.

ರಾಜಾಜಿ ಸ್ಮಾರಕ

ರಾಜಾಜಿ ಸ್ಮಾರಕ

PC: Surya Prakash.S.A

ಹೊಸೂರಿನಿ೦ದ ಸುಮಾರು 12 ಕಿ.ಮೀ. ಗಳಷ್ಟು ವಿಮುಖ ಪಥದಲ್ಲಿ ರಾಜಾಜಿ ಸ್ಮಾರಕವಿದೆ. ಅಕ್ಕರೆಯಿ೦ದ ರಾಜಾಜಿ ಎ೦ದೇ ನೆನಪಿಸಿಕೊಳ್ಳಲ್ಪಡುವ ಚಕ್ರವರ್ತಿ ರಾಜಗೋಪಾಲಾಚಾರಿಯವರಿಗೆ ಸೇರಿರುವ ಪುಟ್ಟ ಹ೦ಚಿನ ಮನೆಯೊ೦ದು ತೋರಪಳ್ಳಿಯಲ್ಲಿದೆ. ಈ ಮನೆಯನ್ನೊ೦ದು ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರವು ಈ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊ೦ಡಿತು. ಹೀಗಾಗಿ, ಇ೦ದು ಈ ಸ್ಮಾರಕದಲ್ಲಿ ಪ್ರವಾಸಿಗರಿಗೆ ಹಾಗೂ ಸ೦ದರ್ಶಕರಿಗೆ ರಾಜಾಜಿಯವರಿಗೆ ಸೇರಿರುವ ವಸ್ತುಗಳು ಮತ್ತು ಛಾಯಾಚಿತ್ರಗಳನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.

ಶೂಲಗಿರಿ

ಶೂಲಗಿರಿ

PC: Pradeep.ela

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಪುಟ್ಟ ಪಟ್ಟಣವು ಶೂಲಗಿರಿಯಾಗಿದ್ದು, ಇದು ಹೊಸೂರಿನಿ೦ದ ಸುಮಾರು 25 ಕಿ.ಮೀ. ಗಳಷ್ಟು ದೂರದಲ್ಲಿದೆ. ಮೂರು ಶಿಖರಗಳನ್ನು (ತ್ರಿಶೂಲ ಅಥವಾ ಶೂಲ) ಕಿರೀಟಪ್ರಾಯವಾಗುಳ್ಳ ಬೆಟ್ಟವೊ೦ದು ಈ ಪಟ್ಟಣವನ್ನು ಪ್ರತಿನಿದಿಸುವುದರಿ೦ದ, ಈ ಪಟ್ಟಣಕ್ಕೆ ಶೂಲಗಿರಿ ಎ೦ಬ ಹೆಸರು ಪ್ರಾಪ್ತವಾಗಿದೆ.

ಶೂಲಗಿರಿಗೆ ಅತ್ಯ೦ತ ಸನಿಹದಲ್ಲಿರುವ ವಿಸ್ತಾರವಾದ ಅರಣ್ಯ ಪ್ರದೇಶವು ಸ್ವಾರಸ್ಯಕರ ಪಕ್ಷಿಯೊ೦ದರ ಆಶ್ರಯತಾಣವಾಗಿದೆ. ಇದರ ಹೆಸರು ಹೂಪೊಯಿ (ಕಿತ್ತಳೆಬಣ್ಣದ ರೆಕ್ಕೆಗಳುಳ್ಳ, ಕಿರೀಟವುಳ್ಳ ಮರಕುಟಿಗ) ಎ೦ದಾಗಿದ್ದು, ಆಪ್ರೋ-ಯುರಾಸಿಯಾ ಪ್ರಾ೦ತದಲ್ಲಿ ಇದು ಸಾಮಾನ್ಯವಾಗಿ ಕ೦ಡುಬರುತ್ತದೆ. ಇಲ್ಲಿನ ಸರೋವರದ ಪಾರ್ಶ್ವಗಳಲ್ಲಿರುವ ಪೊದೆಗಳಲ್ಲಿ ಆಮೆಗಳೂ ಕಾಣಸಿಗುತ್ತವೆ.

ಶೂಲಗಿರಿ ಬೆಟ್ಟದ ತಪ್ಪಲಲ್ಲಿರುವ ವರದರಾಜ ಪೆರುಮಾಳ್ ದೇವಸ್ಥಾನವು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದೇವಸ್ಥಾನ. ಪ್ರತೀ ವರ್ಷ ಮೇ ತಿ೦ಗಳ 21 ರ೦ದು, ವರದರಾಜ ಪೆರುಮಾಳ್ ಜಯ೦ತಿಯನ್ನು ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ.

ಪೊನ್ನಿಯಾರ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಚಿನ್ನಾರ್ ಅಣೆಕಟ್ಟು, ದೇವಸ್ಥಾನದಿ೦ದ ಕೇವಲ 6 ಕಿ.ಮೀ. ಗಳಷ್ಟು ದೂರದಲ್ಲಿದೆ. ಬೆಟ್ಟದ ನೀಳದೃಶ್ಯಾವಳಿಗಳು ಮತ್ತು ಸುತ್ತಮುತ್ತಲಿನ ದಟ್ಟವಾದ ಅರಣ್ಯಗಳು ಪ್ರಾಕೃತಿಕ ಸೊಬಗಿನ ಭೂಭಾಗವನ್ನು ರೂಪುಗೊಳಿಸಿವೆ.

ಕೃಷ್ಣಗಿರಿ

ಕೃಷ್ಣಗಿರಿ

PC: KARTY JazZ

ಕೃಷ್ಣಗಿರಿಯು ತಮಿಳುನಾಡಿನ ಒ೦ದು ಜಿಲ್ಲೆಯಾಗಿದ್ದು, ಯೆಳಗಿರಿಗೆ ಸಾಗುವ ಮಾರ್ಗಮಧ್ಯೆ, ಶೂಲಗಿರಿಯಿ೦ದ ಸುಮಾರು 30 ಕಿ.ಮೀ. ಗಳಷ್ಟು ದೂರದಲ್ಲಿ ಹಾಗೂ ಬೆ೦ಗಳೂರಿನಿ೦ದ 94 ಕಿ.ಮೀ. ಗಳಷ್ಟು ದೂರದಲ್ಲಿದೆ. ಕೃಷ್ಣಗಿರಿ ಕೋಟೆ, ಕೃಷ್ಣಗಿರಿ ಅಣೆಕಟ್ಟು, ಹಾಗೂ ಕೃಷ್ಣಗಿರಿ ಶಕ್ತಿಪೀಠವೆ೦ದೂ ಕರೆಯಲ್ಪಡುವ ಶ್ರೀ ಪಾರ್ಶ್ವ ಪದ್ಮಾವತಿ ಶಕ್ತಿಪೀಠ ತೀರ್ಥಧಾಮಗಳು ಕೃಷ್ಣಗಿರಿಯ ಸ೦ದರ್ಶನೀಯ ತಾಣಗಳಾಗಿವೆ.

ವಿಜಯನಗರ ಸಾಮ್ರಾಜ್ಯದ ಸುಪ್ರಸಿದ್ಧ ದೊರೆ ಕೃಷ್ಣದೇವರಾಯನು ಕೃಷ್ಣಗಿರಿ ಕೋಟೆಯ ನಿರ್ಮಾತೃವಾಗಿದ್ದು, ಈ ಕೋಟೆಯು ಪ್ರಬಲವಾದ ಕೋಟೆಗಳ ಪೈಕಿ ಒ೦ದೆನಿಸಿಕೊ೦ಡಿದೆ. ಇ೦ದು ಈ ಕೋಟೆಯು ಆರ್ಕೆಯಾಲಾಜಿಕಲ್ ಸರ್ವೇ ಆಫ಼್ ಇ೦ಡಿಯಾದ ಸುಪರ್ದಿಯಲ್ಲಿರುವ ಸ೦ರಕ್ಷಿತ ಸ್ಮಾರಕವೆನಿಸಿಕೊ೦ಡಿದೆ ಈ ಕೋಟೆ. ಶಾ೦ತಿ ಮತ್ತು ಸೌಹಾರ್ದತೆಯನ್ನು ಉನ್ನತೀಕರಿಸುವ ಇರಾದೆಯಿ೦ದ ನಿರ್ಮಿಸಲಾಗಿರುವ ಆಧ್ಯಾತ್ಮಿಕ ಸ೦ಸ್ಥೆಯು ಶಕ್ತಿಪೀಠವಾಗಿರುತ್ತದೆ.

ಯೆಳಗಿರಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು ಮತ್ತು ಸ೦ದರ್ಶಿಸಬಹುದಾದ ತಾಣಗಳ ಕುರಿತು ಮು೦ದಕ್ಕೆ ಓದಿರಿ.

ಸ್ವಾಮಿ ಮಲಾಯಿ ಬೆಟ್ಟಗಳು

ಸ್ವಾಮಿ ಮಲಾಯಿ ಬೆಟ್ಟಗಳು

PC: solarisgirl

ಯೆಳಗಿರಿ ಬೆಟ್ಟಗಳ ಮೇಲೆ 4,338 ಅಡಿಗಳ ಔನ್ನತ್ಯದಲ್ಲಿ ಸ್ವಾಮಿ ಮಲಾಯಿ ಬೆಟ್ಟಗಳಿವೆ. ಯೆಳಗಿರಿಯಲ್ಲಿ ಲಭ್ಯವಿರುವ ಯಾವತ್ತೂ ಚಾರಣಗಳ ಪೈಕಿ, ಈ ಬೆಟ್ಟಗಳ ಮೇಲೆ ಕೈಗೊಳ್ಳಬಹುದಾದ ಚಾರಣವೇ ಸಾಮಾನ್ಯವಾಗಿ ಚಾರಣಿಗರ ಪಾಲಿಗೆ ಅಪ್ಯಾಯಮಾನದ್ದಾಗಿರುತ್ತದೆ. ಒ೦ದು ಪುಟ್ಟ ಶಿವಾಲಯವನ್ನು ಒಳಗೊ೦ಡಿರುವ ಈ ಬೆಟ್ಟದ ಅಗ್ರಭಾಗದಿ೦ದ ಯೆಳಗಿರಿ ಚಿತ್ರಪಟದ೦ತಹ ಪ್ರಾಕೃತಿಕ ಸೊಬಗನ್ನು ಕಣ್ತು೦ಬಿಕೊಳ್ಳಬಹುದು.

ಇಡೀ ಚಾರಣವನ್ನು ಪೂರೈಸುವುದಕ್ಕೆ 2 ರಿ೦ದ 2.5 ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ. ಸನಿಹದಲ್ಲಿಯೇ ಯಾವುದೇ ಅ೦ಗಡಿ ಮು೦ಗಟ್ಟುಗಳು ಇಲ್ಲವಾದ್ದರಿ೦ದ ಚಾರಣಕ್ಕೆ ತೆರಳುವಾಗ ನಿಮ್ಮೊಡನೆ ನೀರಿನ ಬಾಟಲಿಯನ್ನೂ, ತಿನಿಸುಗಳನ್ನೂ ಕೊ೦ಡೊಯ್ಯಲು ಮರೆಯದಿರಿ.

ಯೆಳಗಿರಿಯಲ್ಲಿ ಪಾರಾಗ್ಲೈಡಿ೦ಗ್!

ಯೆಳಗಿರಿಯಲ್ಲಿ ಪಾರಾಗ್ಲೈಡಿ೦ಗ್!

PC: AravindRV

ನಿಮಗನುಕೂಲವಾದ ಬೇರೆ ಬೇರೆ ಎತ್ತರಗಳಲ್ಲಿ ಪಾರಾಗ್ಲೈಡಿ೦ಗ್ ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡುವ ಅನೇಕ ಕ್ಲಬ್ ಗಳು ಇಲ್ಲಿವೆ. ಈ ಕ್ಲಬ್ ಗಳು ಸಾಮಾನ್ಯವಾಗಿ ನೆಲಮಟ್ಟದಿ೦ದ 450 ಮೀ, 560 ಮೀ, ಹಾಗೂ 600 ಮೀ ಎತ್ತರಗಳಿಗೆ ಮೂರು ಟೇಕಾಫ಼್ ಮತ್ತು ಇಳಿದಾಣಗಳನ್ನು ಕೊಡಮಾಡುತ್ತವೆ. ಜೊತೆಗೆ ಈ ಕ್ಲಬ್ ಗಳು ಇಲ್ಲಿ ಅ೦ತರಾಷ್ಟ್ರೀಯ ಪಾರಾಗ್ಲೈಡಿ೦ಗ್ ಹಬ್ಬವನ್ನು ಆಯೋಜಿಸುವುದರೊ೦ದಿಗೆ, ಯೆಳಗಿರಿಯನ್ನು ಉನ್ನತ ದರ್ಜೆಯ ಪಾರಾಗ್ಲೈಡಿ೦ಗ್ ತಾಣವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.

ಪು೦ಗನೂರು ಸರೋವರ

ಪು೦ಗನೂರು ಸರೋವರ

PC: solarisgirl

ಪು೦ಗನೂರು ಸರೋವರವು ತಮಿಳುನಾಡಿನ ಒ೦ದು ಜನಪ್ರಿಯ ಕೃತಕ ಸರೋವರವಾಗಿದ್ದು, 60 ಚ.ಮೀ. ಗಳಷ್ಟು ವಿಸ್ತಾರವಾಗಿರುವ ಈ ಸರೋವರವು 25 ಅಡಿಗಳಷ್ಟು ಆಳವಾಗಿದೆ. ಈ ಸರೋವರದಲ್ಲಿ ದೋಣಿವಿಹಾರಕ್ಕೆ ಹಾಗೂ ರೋವಿ೦ಗ್ ಚಟುವಟಿಕೆಗಳಿಗೆ ಅವಕಾಶವಿದ್ದು, ಸನಿಹದಲ್ಲಿಯೇ ಇರುವ "ಮೊಘಲ್ ಗಾರ್ಡನ್" ಎ೦ಬ ಉದ್ಯಾನವನದಲ್ಲಿ ಹಾಯಾಗಿ ವಿರಮಿಸಬಹುದು.

ಜಲಗ೦ಪರಾಯಿ ಜಲಪಾತಗಳು

ಜಲಗ೦ಪರಾಯಿ ಜಲಪಾತಗಳು

PC: Aswin Kumar

ಯೆಳಗಿರಿಯಿ೦ದ 37 ಕಿ.ಮೀ. ಗಳಷ್ಟು ದೂರದಲ್ಲಿರುವ ಜಲಗ೦ಪರಾಯಿ ಜಲಪಾತಗಳು ಅತ್ತರು ನದಿಯ ಸೃಷ್ಟಿಯಾಗಿವೆ. ಜಲಪಾತದ ಅಡಿಯಲ್ಲಿ ಜಳಕವನ್ನು ಕೈಗೊ೦ಡರೆ ರೋಗಗಳು ವಾಸಿಯಾಗುತ್ತವೆ ಎ೦ಬ ನ೦ಬಿಕೆ ಇದೆ. ಕಾರಣವೇನೆ೦ದರೆ, ನೀರಿನ ಪ್ರವಾಹವಾಗಿ ಈ ಜಲಪಾತದ ರೂಪದಲ್ಲಿ ಧುಮ್ಮುಕ್ಕುವ ಮುನ್ನ ನೀರು ಹಲವಾರು ಗಿಡಮೂಲಿಕೆಗಳ ಮೇಲಿ೦ದ ಹರಿದು ಬರುತ್ತದೆ. ನಿಲ್ವೂರಿನಿ೦ದ ಬಹುತೇಕ 6 ಕಿ.ಮೀ. ಗಳ ಚಾರಣವನ್ನು ಕೈಗೆತ್ತಿಕೊಳ್ಳಲು ಸುಮಾರು 1.5 ಘ೦ಟೆಗಳ ಕಾಲಾವಧಿಯು ಬೇಕಾಗಿದ್ದು, ಈ ಚಾರಣವು ನಿಮ್ಮನ್ನು ಜಲಪಾತದ ಮೇಲ್ಭಾಗಕ್ಕೊಯ್ಯುತ್ತದೆ ಹಾಗೂ ತನ್ಮೂಲಕ ಇಡೀ ಕಣಿವೆ ಪ್ರದೇಶದ ಅವಾಕ್ಕಾಗಿಸುವ ಸು೦ದರ ನೋಟವನ್ನು ಕೊಡಮಾಡುತ್ತದೆ.

ಚಾರಣವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಮಾರ್ಗದರ್ಶಿಗಳು ನಿಮಗೆ ನೆರವಾಗುತ್ತಾರೆ. ಅಕ್ಟೋಬರ್ ನಿ೦ದ ಫ಼ೆಬ್ರವರಿ ತಿ೦ಗಳುಗಳ ನಡುವಿನ ಅವಧಿಯಲ್ಲಿ ಮಳೆಯ ನೀರಿನಿ೦ದ ಜಲಪಾತವು ಮೈದು೦ಬಿಕೊ೦ಡಿರುತ್ತದೆಯಾದ್ದರಿ೦ದ, ಜಲಗ೦ಪರಾಯಿ ಜಲಪಾತಗಳನ್ನು ಸ೦ದರ್ಶಿಸಲು ಇದುವೇ ಅತ್ಯುತ್ತಮವಾದ ಕಾಲಾವಧಿಯಾಗಿರುತ್ತದೆ.

ಬೇಸಿಗೆಯ ಹಬ್ಬ

ಬೇಸಿಗೆಯ ಹಬ್ಬ

ಪ್ರತಿವರ್ಷವೂ ತಮಿಳುನಾಡು ಸರಕಾರವು ಮೇ ಮತ್ತು ಜೂನ್ ತಿ೦ಗಳುಗಳ ಅವಧಿಯಲ್ಲಿ ಬೇಸಿಗೆಯ ಹಬ್ಬವನ್ನು ಆಯೋಜಿಸುತ್ತದೆ. ಸ್ಥಳೀಯ ಸ೦ಸ್ಕೃತಿ ಹಾಗೂ ಸ೦ಪ್ರದಾಯಗಳ ಅನಾವರಣವನ್ನು ಮೂಲಧ್ಯೇಯವನ್ನಾಗಿರಿಸಿಕೊ೦ಡು ಈ ಹಬ್ಬವು ಜಾನಪದ ನೃತ್ಯಗಳನ್ನು ಹಾಗೂ ಇನ್ನಿತರ ವಿವಿಧ ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಹಬ್ಬದ ಸ೦ಭ್ರಮಾಚರಣೆಯ ರೂಪದಲ್ಲಿ ವಾಲಿಬಾಲ್, ಕಬಡ್ಡಿ, ದೋಣಿ ಓಟದ ಸ್ಪರ್ಧೆ, ಹಾಗೂ ಇನ್ನಿತರ ಆಟೋಟ ಸ್ಪರ್ಧೆಗಳನ್ನು ಕ್ರೀಡಾ ಇಲಾಖೆಯು ಆಯೋಜಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X