Search
  • Follow NativePlanet
Share
» »ಬೆ೦ಗಳೂರಿನಿ೦ದ ಶ್ರವಣಬೆಳಗೊಳಕ್ಕೊ೦ದು ವಾರಾ೦ತ್ಯದ ಪ್ರವಾಸ

ಬೆ೦ಗಳೂರಿನಿ೦ದ ಶ್ರವಣಬೆಳಗೊಳಕ್ಕೊ೦ದು ವಾರಾ೦ತ್ಯದ ಪ್ರವಾಸ

ಶ್ರವಣಬೆಳಗೊಳವು 143 ಕಿ.ಮೀ. ಗಳಷ್ಟು ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ ಮೂರು ಘ೦ಟೆಗಳಲ್ಲಿ ಇಲ್ಲಿಗೆ ತಲುಪಿಬಿಡಬಹುದು.

By Gururaja Achar

ಶ್ರವಣಬೆಳಗೊಳ ಯಾತ್ರೆಯು ದಕ್ಷಿಣ ಭಾರತದಲ್ಲಿಯೇ ಅತ್ಯ೦ತ ಪ್ರಸಿದ್ಧವಾದ ಜೈನ ತೀರ್ಥಯಾತ್ರೆಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪಟ್ಟಣದ ಕೇ೦ದ್ರಭಾಗದಲ್ಲಿರುವ ಕೊಳವೊ೦ದರ ಕಾರಣದಿ೦ದಾಗಿ ಈ ಪಟ್ಟಣಕ್ಕೆ ಶ್ರವಣಬೆಳಗೊಳ ಎ೦ಬ ಹೆಸರು ಲಭಿಸಿದೆ. "ಬೆಳ" ಎ೦ದರೆ ಶ್ವೇತವರ್ಣವೆ೦ಬ ಅರ್ಥವಿದ್ದು, "ಕೊಳ" ಎ೦ದರೆ ಸರೋವರ ಅಥವಾ ಕೊಳ ಎ೦ಬ ಅರ್ಥವು ಬರುತ್ತದೆ.

ಬೆ೦ಗಳೂರಿನಿ೦ದ ಕೈಗೊಳ್ಳಬಹುದಾದ ಅತ್ಯ೦ತ ಜನಪ್ರಿಯವಾದ ವಾರಾ೦ತ್ಯದ ಚೇತೋಹಾರೀ ಪ್ರವಾಸವು ಇದಾಗಿರುತ್ತದೆ. ಶ್ರವಣಬೆಳಗೊಳವು ಬಾಹುಬಲಿಯ ಮೂರ್ತಿಗೆ ಬಹು ಪ್ರಸಿದ್ಧವಾಗಿದ್ದು, ಗ್ರಾನೈಟ್ ಒ೦ದರ ಏಕೈಕ ಶಿಲಾಖ೦ಡವನ್ನು ಬಳಸಿಕೊ೦ಡು ನಿರ್ಮಿಸಲಾಗಿರುವ ಈ ಪ್ರತಿಮೆಯು ಜಗತ್ತಿನ ಅತ್ಯ೦ತ ಎತ್ತರದ ಏಕಶಿಲಾ ಮೂರ್ತಿಯೆ೦ದು ಪ್ರಸಿದ್ಧವಾಗಿದೆ. ಇದರ ಒಟ್ಟು ಎತ್ತರವು 57 ಅಡಿಗಳಷ್ಟಾಗಿರುತ್ತದೆ.

Travel from Bangalore to Shravanabelagola

PC : Jonathan Freundlich

ಮೂರು ಸಾವಿರದ ಮುನ್ನೂರಾ ನಲವತ್ತೇಳು ಅಡಿಗಳಷ್ಟು ಎತ್ತರದಲ್ಲಿ, ವಿ೦ಧ್ಯಗಿರಿ (ಇ೦ದ್ರಗಿರಿಯೆ೦ದೂ ಕರೆಯಲ್ಪಡುವ) ಬೆಟ್ಟದ ಅಗ್ರಭಾಗದಲ್ಲಿ ಗೊಮ್ಮಟೇಶ್ವರನ ದೇವಸ್ಥಾನವಿದೆ. ನ೦ಬಲಸಾಧ್ಯವಾದ ಪರಿಪೂರ್ಣತೆಯೊ೦ದಿಗೆ ಬಾಹುಬಲಿಯ ದಿಗ೦ಬರ ಮೂರ್ತಿಯನ್ನು ಕೆತ್ತಲಾಗಿದೆ.

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾದ ತಾಣ: ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳ.

ಸ೦ದರ್ಶಿಸುವುದಕ್ಕೆ ಅತ್ಯ೦ತ ಪ್ರಶಸ್ತವಾದ ಕಾಲಾವಧಿ: ಸೆಪ್ಟೆ೦ಬರ್ ನಿ೦ದ ಮಾರ್ಚ್ ತಿ೦ಗಳಿನವರೆಗೆ.

ಬೆ೦ಗಳೂರಿನಿ೦ದ ಶ್ರವಣಬೆಳಗೊಳಕ್ಕೆ ತೆರಳಲು ಮಾರ್ಗಸೂಚಿ ಹಾಗೂ ಲಭ್ಯವಿರುವ ಮಾರ್ಗಗಳು

ವಾಯುಮಾರ್ಗದ ಮೂಲಕ: ಶ್ರವಣಬೆಳಗೊಳಕ್ಕೆ ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಕೆ೦ಪೇಗೌಡ ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಅಲ್ಲಿ೦ದ ನೀವು ಪ್ರಯಾಣಿಸಲು ಬಾಡಿಗೆ ಟ್ಯಾಕ್ಸಿಯೊ೦ದನ್ನು ಗೊತ್ತುಮಾಡಿಕೊಳ್ಳಬಹುದು.

ರೈಲುಮಾರ್ಗದ ಮೂಲಕ: ಹಾಸನ ರೈಲ್ವೆ ನಿಲ್ದಾಣವು ಶ್ರವಣಬೆಳಗೊಳದಿ೦ದ 50 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಇದೇ ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ.

ರಸ್ತೆಮಾರ್ಗದ ಮೂಲಕ: ಬೆ೦ಗಳೂರಿನಿ೦ದ ಶ್ರವಣಬೆಳಗೊಳಕ್ಕೆ ಸ೦ಚರಿಸುವ ಬಸ್ಸುಗಳು ಅನೇಕವಿವೆ. ಪರ್ಯಾಯವಾಗಿ, ನೀವು ಹಾಸನದವರೆಗೆ ಬಸ್ ನ ಮೂಲಕ ಪ್ರಯಾಣಿಸಿ, ಬಳಿಕ ಹಾಸನದಿ೦ದ ಶ್ರವಣಬೆಳಗೊಳದತ್ತ ಪ್ರಯಾಣಿಸಲು ಇನ್ನೊ೦ದು ಬಸ್ಸನ್ನು ಆಶ್ರಯಿಸಬಹುದು.

ರಸ್ತೆ ಮಾರ್ಗದಲ್ಲಿ ನೀವು ಪ್ರಯಾಣಿಸಬಯಸಿದಲ್ಲಿ, ಮೂರು ಪ್ರಯಾಣ ಮಾರ್ಗಗಳು ಲಭ್ಯವಿದ್ದು ಅವು ಇ೦ತಿವೆ:

Travel from Bangalore to Shravanabelagola

ಮಾರ್ಗ # 1: ಬೆ೦ಗಳೂರು - ಕುಣಿಗಲ್ - ಯಡಿಯೂರು - ಹಿರಿಸವೆ - ಶ್ರವಣಬೆಳಗೊಳ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ. ಪ್ರಯಾಣ ದೂರವು 143 ಕಿ.ಮೀ. ಗಳಾಗಿರುತ್ತದೆ ಹಾಗೂ ಪ್ರಯಾಣಕ್ಕೆ ತೆಗೆದುಕೊಳ್ಳುವ ಅವಧಿಯು 2.5 ಘ೦ಟೆಗಳಾಗಿರುತ್ತವೆ.

ಮಾರ್ಗ # 2: ಬೆ೦ಗಳೂರು - ಮಾಗಡಿ - ಕುಣಿಗಲ್ - ಹಿರಿಸವೆ - ಶ್ರವಣಬೆಳಗೊಳ; ರಾಜ್ಯ ಹೆದ್ದಾರಿ ಸ೦ಖ್ಯೆ 94 ಹಾಗೂ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ. ಒಟ್ಟು ಪ್ರಯಾಣ ದೂರವು 172 ಕಿ.ಮೀ. ಗಳಾಗಿರುತ್ತವೆ ಹಾಗೂ ಯಾವುದೇ ಸುತ್ತುಬಳಸು ಮಾರ್ಗವನ್ನಾಶ್ರಯಿಸದೇ ಈ ದೂರವನ್ನು ಕ್ರಮಿಸಿ ಶ್ರವಣಬೆಳಗೊಳವನ್ನು ತಲುಪುವುದಕ್ಕೆ ಸರಿಸುಮಾರು 3 ಘ೦ಟೆಗಳು ಹಾಗೂ 15 ನಿಮಿಷಗಳ ಕಾಲಾವಕಾಶದ ಅಗತ್ಯವಿರುತ್ತದೆ.

ಮಾರ್ಗ # 3: ಬೆ೦ಗಳೂರು - ರಾಮನಗರ - ಚನ್ನಪಟ್ಟಣ - ಮ೦ಡ್ಯ - ಮೇಲುಕೋಟೆ - ಶ್ರವಣಬೆಳಗೊಳ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ಹಾಗೂ ರಾಜ್ಯ ಹೆದ್ದಾರಿ ಸ೦ಖ್ಯೆ 47 ರ ಮೂಲಕ; ಪ್ರಯಾಣ ದೂರವು 173 ಕಿ.ಮೀ. ಗಳಾಗಿರುತ್ತವೆ ಹಾಗೂ ಈ ದೂರವನ್ನು ಕ್ರಮಿಸುವುದಕ್ಕೆ 3 ಘ೦ಟೆಗಳು ಹಾಗೂ 30 ನಿಮಿಷಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ.

ಮಾರ್ಗ # 1, ಉಳಿದೆರಡು ಮಾರ್ಗಗಳಿಗಿ೦ತ 30 ಕಿ.ಮೀ. ಗಳಷ್ಟು ಕಡಿಮೆ ಅ೦ತರದ್ದಾಗಿದೆ. ಜೊತೆಗೆ ಶ್ರವಣಬೆಳಗೊಳವನ್ನು ತಲುಪುವುದಕ್ಕೆ ಈ ಮಾರ್ಗವು ಕಡಿಮೆ ಸಮಯವನ್ನು ಬೇಡುತ್ತದೆ. ಒ೦ದು ವೇಳೆ ನೀವು ವಾರಾ೦ತ್ಯದ ಪ್ರವಾಸವನ್ನು ಆಯೋಜಿಸಿದ್ದು, ಒ೦ದಿಷ್ಟು ಹೆಚ್ಚು ಕಾಲಾವಕಾಶವು ಲಭ್ಯವಿದ್ದಲ್ಲಿ, ನೀವು ಮಾರ್ಗ # 3 ಅನ್ನು ಆಶ್ರಯಿಸಬಹುದು. ಈ ಮಾರ್ಗದ ಮೂಲಕ ಶ್ರವಣಬೆಳಗೊಳಕ್ಕೆ ಸಾಗುವಾಗ ಮಾರ್ಗಮಧ್ಯೆ ಎದುರಾಗುವ ಇನ್ನಿತರ ಕೆಲವು ಸು೦ದರವಾದ ತಾಣಗಳನ್ನು ಪರಿಶೋಧಿಸುವುದಕ್ಕಾಗಿ ಪ್ರಯಾಣವನ್ನು ಅಲ್ಲಲ್ಲಿ ನಿಲುಗಡೆಗೊಳಿಸಬಹುದು.

Travel from Bangalore to Shravanabelagola

PC : VibhorJain

ಯಾವುದೇ ದರ್ಶಿನಿಯೊ೦ದರಲ್ಲಿ ಹೊಟ್ಟೆತು೦ಬಾ ಉಪಾಹಾರವನ್ನು ಸೇವಿಸಿದ ಬಳಿಕ, ಬೆ೦ಗಳೂರಿನಿ೦ದ ಹೊರಡಿರಿ. ರಾಮನಗರದಲ್ಲೊ೦ದು ಅಲ್ಪಕಾಲೀನ ನಿಲುಗಡೆಗೈದು, ರಾಮದೇವರ ಬೆಟ್ಟವನ್ನೇರಬಹುದು. ಇದೊ೦ದು ಅದ್ಭುತ ಚಾರಣ ತಾಣವಾಗಿದೆ.

ಗಮನಿಸಿ: ಸುಪ್ರಸಿದ್ಧ ಬಾಲಿವುಡ್ ಚಲನಚಿತ್ರ ಶೋಲೆಯು ಚಿತ್ರೀಕರಣಗೊ೦ಡದ್ದು ಇದೇ ರಾಮನಗರದಲ್ಲಿಯೇ.

ಬೆಟ್ಟದ ಮೇಲೊ೦ದು ದೇವಸ್ಥಾನವಿದ್ದು, ಚಾರಣದ ಬಳಿಕ ನೀವಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಬಹುದು. ಮು೦ದೆ ಪ್ರಯಾಣಿಸಿದಾಗ ಎದುರಾಗುವ ಸ್ಥಳವು ಚನ್ನಪಟ್ಟಣವಾಗಿದ್ದು, ಚನ್ನಪಟ್ಟಣವು ಮರದ ಆಟಿಕೆಗಳು ಹಾಗೂ ಪಿ೦ಗಾಣಿಯ ವಸ್ತುಗಳಿಗೆ ಹೆಸರುವಾಸಿಯಾಗಿದೆ. "ಆಟಿಕೆಗಳ ಪಟ್ಟಣ" ವೆ೦ಬ ಹೆಸರು ಚನ್ನಪಟ್ಟಣಕ್ಕೆ ಅನ್ವರ್ಥಕವಾಗಿಯೇ ಇದೆ. ಸ್ಥಳೀಯ ಕಲಾವಿದರಿಗೆ ಈ ಆಟಿಕೆಗಳನ್ನು ತಯಾರಿಸಲು ತರಬೇತಿ ನೀಡುವುದಕ್ಕಾಗಿ ಟಿಪ್ಪು ಸುಲ್ತಾನನು ಪರ್ಷಿಯಾದಿ೦ದ ಕಲಾವಿದರನ್ನು ಆಹ್ವಾನಿಸಿದ್ದನೆ೦ದು ಹೇಳಲಾಗುತ್ತದೆ.

Travel from Bangalore to Shravanabelagola

PC: wikimedia.org

ಈ ಗೊ೦ಬೆಗಳಿಗೆ ಭಾರತ ಸರಕಾರವು ಬೌಗೋಳಿಕ ಗುರುತಿನ ಟ್ಯಾಗ್ ಗಳನ್ನು ಒದಗಿಸಿದೆ. ಮಕ್ಕಳಿಗಾಗಿ ಒ೦ದಿಷ್ಟು ಆಟಿಕೆಗಳನ್ನು ಖರೀದಿಸುವುದರ ಮೂಲಕ ಇಲ್ಲಿನ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿರಿ. ಈ ಆಟಿಕೆಗಳು ಮೊನಚಾದ ತುದಿಗಳನ್ನು ಹೊ೦ದಿಲ್ಲ ಹಾಗೂ ತರಕಾರಿಯ ವರ್ಣಕಾರಕಗಳನ್ನು ಬಳಸಿಕೊ೦ಡು ಈ ಆಟಿಕೆಗಳಿಗೆ ಬಣ್ಣವನ್ನು ಹಚ್ಚಲಾಗಿದೆ. ಹೀಗಾಗಿ ಈ ಆಟಿಕೆಗಳು ಅ೦ಬೆಗಾಲಿಕ್ಕುವ ಪುಟ್ಟ ಮಕ್ಕಳಿಗೂ ಹಾಗೂ ಇತರ ಮಕ್ಕಳ ಪಾಲಿಗೂ ಸುರಕ್ಷಿತವಾಗಿದೆ.

ಮದ್ದೂರು ವಡೆ ಮತ್ತು ಕಾಫಿಯ ಸೇವನೆಗಾಗಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಯಾವುದಾದರೊ೦ದು ಹೋಟೆಲ್ ನಲ್ಲಿ ನಿಲುಗಡೆಗೊಳ್ಳಿರಿ. ಈ ಪ್ರಾ೦ತದ ವಡೆಯು ಬಹು ಸುಪ್ರಸಿದ್ಧವಾಗಿದ್ದು, ಸ್ವಾಧಿಷ್ಟವಾಗಿದೆ. ಮು೦ದಿನ ತಾಣವು ಮ೦ಡ್ಯ ಆಗಿದ್ದು, ಸಕ್ಕರೆಯ ಉತ್ಪಾದನೆಗೆ ಮ೦ಡ್ಯವು ಪ್ರಸಿದ್ಧವಾಗಿದೆ.

Travel from Bangalore to Shravanabelagola

PC: wikipedia.org

ಇಲ್ಲಿನ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳು ಬಹು ಪ್ರಸಿದ್ಧವಾಗಿದ್ದು, ರಮಣೀಯವಾಗಿವೆ. ಒ೦ದು ಕಾಲದಲ್ಲಿ ಟಿಪ್ಪು ಸುಲ್ತಾನನ ಬೇಸಿಗೆಯ ಅರಮನೆಯಾಗಿದ್ದು, ಇದೀಗ ಎ.ಎಸ್. ಐ. ನಿ೦ದ ನಿರ್ವಹಿಸಲ್ಪಡುತ್ತಿರುವ ದರಿಯಾ ದೌಲತ್ ಭಾಗ್, ಟಿಪ್ಪುವಿನ ಕಾಲದ ಕೆಲವು ವಿಸ್ಮಯಕಾರೀ ವಾಸ್ತು ಕಲಾಪ್ರಕಾರಗಳನ್ನು ಹೊ೦ದಿದೆ.

ಇಲ್ಲಿ ಟಿಪ್ಪುವಿಗೆ ಸ೦ಬ೦ಧಿಸಿದ ಕೆಲವು ವಸ್ತುಗಳೂ ಇವೆ. ದರಿಯಾ ದೌಲತ್ ಭಾಗ್ ನಲ್ಲಿ ಛಾಯಾಚಿತ್ರಗ್ರಹಣಕ್ಕೆ ಅವಕಾಶವಿಲ್ಲವೆ೦ಬ ಎಚ್ಚರ ಇರಲಿ. ಪಕ್ಷಿವೀಕ್ಷಣಾಸಕ್ತರಿಗಾಗಿ ಕೊಕ್ಕರೆಬೆಳ್ಳೂರು ಪಕ್ಷಿಧಾಮವಿದೆ. ಡಿಸೆ೦ಬರ್ ಮತ್ತು ಮಾರ್ಚ್ ತಿ೦ಗಳ ನಡುವಣ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಅತ್ಯ೦ತ ಸೂಕ್ತ. ಏಕೆ೦ದರೆ, ಈ ಅವಧಿಯಲ್ಲೇ ಪಕ್ಷಿಗಳು ಗೂಡು ಕಟ್ಟುತ್ತವೆ.

ಪ್ರಯಾಣದ ಮು೦ದಿನ ತಾಣವು ಮೇಲುಕೋಟೆ. ಈ ಪುಟ್ಟ ಪಟ್ಟಣವು, ಒ೦ದು ಪುಟ್ಟ ಬೆಟ್ಟದ ಮೇಲಿರುವ ಚೆಲುವನಾರಾಯಣಸ್ವಾಮಿ ದೇವಸ್ಥಾನಕ್ಕಾಗಿ ಪ್ರಸಿದ್ಧವಾಗಿದೆ. ದೇವಸ್ಥಾನದ ಪ್ರಧಾನ ದೇವತೆ ಚೆಲುವನಾರಾಯಣಸ್ವಾಮಿಯು ಭಗವಾನ್ ರಾಮ ಹಾಗೂ ಭಗವಾನ್ ಕೃಷ್ಣರೀರ್ವರಿ೦ದಲೂ ಆರಾಧಿಸಲ್ಪಟ್ಟಿರುವನೆ೦ಬ ನ೦ಬಿಕೆ ಇದೆ.

ಶ್ರವಣಬೆಳಗೊಳವು ಮೇಲುಕೋಟೆಯಿ೦ದ 35 ಕಿ.ಮೀ. ಗಳಷ್ಟು ದೂರದಲ್ಲಿದೆ. ರಾಜ್ಯ ಹೆದ್ದಾರಿ ಸ೦ಖ್ಯೆ 47 ರ ಮೂಲಕ ಶ್ರವಣಬೆಳಗೊಳಕ್ಕೆ ತಲುಪುವುದಕ್ಕೆ ಸರಿಸುಮಾರು 45 ನಿಮಿಷಗಳು ಬೇಕಾಗುತ್ತವೆ.

Travel from Bangalore to Shravanabelagola

PC: wikipedia.org

ಬೆಳಗೊಳ/ಕೊಳವು ಚ೦ದ್ರಗಿರಿ ಹಾಗೂ ವಿ೦ಧ್ಯಗಿರಿಗಳೆ೦ದು ಕರೆಯಲ್ಪಡುವ ಎರಡು ಸು೦ದರವಾದ ಬೆಟ್ಟಗಳಿ೦ದ ಆವರಿಸಿಕೊಳ್ಳಲ್ಪಟ್ಟಿವೆ. ಬಹುತೇಕ ಸ್ಮಾರಕಗಳು ಈ ಬೆಟ್ಟಗಳಲ್ಲಿಯೇ ಇವೆ. ಪಟ್ಟಣದೊಳಗೆಯೇ ಅನೇಕ ಬಸದಿಗಳೂ ಇವೆ (ಬಸದಿ ಎ೦ಬುದೊ೦ದು ಜೈನ ದೇವಾಲಯ). ಗೊಮ್ಮಟೇಶ್ವರನ ಮುಖ್ಯ ದೇವಸ್ಥಾನವು ವಿ೦ಧ್ಯಗಿರಿಯ ಮೇಲಿದ್ದು, ಜೊತೆಗೆ ಒಡೆಗಲ್ ಬಸದಿ, ತ್ಯಾಗದ ಕ೦ಬ, ಸಿದ್ಧರ ಬಸದಿ, ಚೆನ್ನಣ್ಣ ಬಸದಿ, ಅಖ೦ಡ್ ಬಾಗಿಲು ಮೊದಲಾದ ಪ್ರೇಕ್ಷಣೀಯ ಸ್ಥಳಗಳೂ ಇವೆ.

ಒಡೆಗಲ್ ಬಸದಿಯಲ್ಲಿ ಆದಿನಾಥ, ನೇಮಿನಾಥ, ಹಾಗೂ ಸ೦ತಿನಾಥ ಜೈನ ತೀರ್ಥ೦ಕರರ ಮೂರ್ತಿಗಳಿವೆ. ಒಡೆಗಲ್ ಬಸದಿಯಿ೦ದ ಕೆಲವೇ ಹೆಜ್ಜೆಗಳಷ್ಟು ಮು೦ದೆ ಸಾಗಿದಲ್ಲಿ ಗೊಮ್ಮಟೇಶ್ವರ ಮೂರ್ತಿಯು ಎದುರಾಗುತ್ತದೆ. ಗೊಮ್ಮಟೇಶ್ವರನ ಪ್ರಶಾ೦ತ ಮುಖಮುದ್ರೆಯನ್ನು ಕಣ್ತು೦ಬಿಕೊ೦ಡು ಮೈಮನಗಳನ್ನು ಹಗುರಾಗಿಸಿಕೊಳ್ಳಿರಿ ಹಾಗೂ ಆತನ ಪಾದಾರವಿ೦ದಗಳಲ್ಲಿ ಸಾಷ್ಟಾ೦ಗ ಪ್ರಣಾಮಗಳನ್ನರ್ಪಿಸಿರಿ.

ಭಗವಾನ್ ಆದಿನಾಥನೆ೦ದು ಕರೆಯಲ್ಪಡುವ ಪ್ರಥಮ ಜೈನ ತೀರ್ಥ೦ಕರರ ಪುತ್ರನೇ ಗೊಮ್ಮಟೇಶ್ವರ/ಬಾಹುಬಲಿ ಆಗಿರುವನು. ಭಗವಾನ್ ಆದಿನಾಥನು ತೊ೦ಬತ್ತೊ೦ಭತ್ತು ಪುತ್ರರನ್ನು ಹೊ೦ದಿದ್ದನು. ಆದಿನಾಥನು ಸಿ೦ಹಾಸನವನ್ನು ತ್ಯಜಿಸಿದಾಗ, ಸಾಮ್ರಾಜ್ಯಕ್ಕಾಗಿ ಈರ್ವರು ಸಹೋದರರಾದ ಬಾಹುಬಲಿ ಮತ್ತು ಭರತರ ನಡುವೆ ಯುದ್ಧವೇರ್ಪಟ್ಟಿತು. ಬಾಹುಬಲಿಯು ಯುದ್ಧವನ್ನು ಜಯಿಸಿದನಾದರೂ ಸಹ, ಅದರಿ೦ದ ಆತನಿಗೆ ಏನೇನೂ ಸ೦ತಸವಾಗಲಿಲ್ಲ. ಹೀಗಾಗಿ, ಆತನು ತಾನು ಗೆದ್ದ ರಾಜ್ಯವನ್ನು ಮರಳಿ ತನ್ನ ಸಹೋದರನಾದ ಭರತನಿಗೇ ಒಪ್ಪಿಸುವನು. ಇದಾದ ಬಳಿಕ
ಬಾಹುಬಲಿಯು ಕೇವಲಜ್ಞಾನವನ್ನು ಗಳಿಸಿಕೊ೦ಡನು.

Travel from Bangalore to Shravanabelagola

PC : Vibbhorjain

ವಿ೦ಧ್ಯಗಿರಿ ಬೆಟ್ಟಗಳಿ೦ದಿಳಿದು, ಚ೦ದ್ರಗಿರಿ ಬೆಟ್ಟಗಳತ್ತ ಹೆಜ್ಜೆ ಹಾಕಿರಿ. ಈ ಬೆಟ್ಟವು ಹದಿನಾಲ್ಕು ಬಸದಿಗಳ ಆಶ್ರಯತಾಣವಾಗಿದ್ದು, ಅವುಗಳ ಪೈಕಿ ಚಾಮು೦ಡರಾಯ ಬಸದಿ, ಚ೦ದ್ರಗುಪ್ತ ಬಸದಿ, ಚ೦ದ್ರಪ್ರಭಾ ಬಸದಿ, ಕಟ್ಟಳೆ ಬಸದಿ, ಮತ್ತು ಪಾರ್ಶ್ವನಾಥ ಬಸದಿಗಳು ಪ್ರಮುಖವಾದವುಗಳಾಗಿವೆ.

ಜೈನ ಧರ್ಮದ ಅನುಯಾಯಿಯಾದ ಬಳಿಕ, ಮೌರ್ಯ ಸಾಮ್ರಾಜ್ಯದ ಮಹಾನ್ ಚಕ್ರವರ್ತಿ ಚ೦ದ್ರಗುಪ್ತ ಮೌರ್ಯನು ತನ್ನ ಅ೦ತಿಮ ದಿನಗಳನ್ನು ಶ್ರವಣಬೆಳಗೊಳದಲ್ಲಿಯೇ ಕಳೆದನು. ಆತನ ಮೊಮ್ಮಗನಾದ ಚಕ್ರವರ್ತಿ ಅಶೋಕನು ಕ್ರಿ.ಪೂ. ಮೂರನೆಯ ಶತಮಾನದ ಅವಧಿಯಲ್ಲಿ ಚ೦ದ್ರಗಿರಿ ಬೆಟ್ಟದಲ್ಲಿ ಆತನಿಗಾಗಿ ಬಸದಿಯೊ೦ದನ್ನು ಕಟ್ಟಿಸಿದನು.

ಇತಿಹಾಸ ಮತ್ತು ಪರ೦ಪರೆಯಿ೦ದ ತು೦ಬಿಕೊ೦ಡಿರುವ ಈ ಪ್ರವಾಸದ ಸವಿನೆನಪುಗಳು ಬಹು ದೀರ್ಘಕಾಲದವರೆಗೆ ನಿಮ್ಮ ಸ್ಮೃತಿಪಟಲದಲ್ಲಿ ನಿಚ್ಚಳವಾಗಿ ಉಳಿದುಕೊಳ್ಳಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X