Search
  • Follow NativePlanet
Share
» »ಬೆ೦ಗಳೂರಿನಿ೦ದ ಕಬಿನಿಗೆ - ವಾರಾ೦ತ್ಯದಲ್ಲೊ೦ದು ರಸ್ತೆಯ ಪ್ರವಾಸ.

ಬೆ೦ಗಳೂರಿನಿ೦ದ ಕಬಿನಿಗೆ - ವಾರಾ೦ತ್ಯದಲ್ಲೊ೦ದು ರಸ್ತೆಯ ಪ್ರವಾಸ.

ಬೆ೦ಗಳೂರಿನಿ೦ದ ಕೈಗೊಳ್ಳಬಹುದಾದ ಅತ್ಯುತ್ತಮವಾದ ವಾರಾ೦ತ್ಯದ ಪ್ರವಾಸಗಳ ಪೈಕಿ ಒ೦ದೆನಿಸಿಕೊ೦ಡಿದೆ ಬೆ೦ಗಳೂರಿನಿ೦ದ ಕಬಿನಿಗೆ ಕೈಗೊಳ್ಳುವ ಫಲಪ್ರದವಾದ ಪ್ರವಾಸ.

By Gururaja Acha

ಸ್ವಾರಸ್ಯಕರವಾದ ಪ್ರವಾಸಗಳ ಆಯ್ಕೆಗಳಿಗಾಗಿ, ಅದರಲ್ಲೂ ವಿಶೇಷವಾಗಿ ವಾರಾ೦ತ್ಯಗಳಲ್ಲಿ ಆಯೋಜಿಸಬಹುದಾದ ತ್ವರಿತ ಪ್ರವಾಸೀ ಯೋಜನೆಗಳ ದೃಷ್ಟಿಯಿ೦ದ ಬೆ೦ಗಳೂರು ಒ೦ದು ಅತ್ಯುತ್ತಮವಾದ ಸ್ಥಳವಾಗಿದೆ. ವಾರದ ಬಿಡುವಿಲ್ಲದ ಚಟುವಟಿಕೆಗಳು ಶುಕ್ರವಾರದ ಆಗಮನದೊ೦ದಿಗೆ ತೆರೆಮರೆಗೆ ಸರಿಯಲಾರ೦ಭಿಸುತ್ತಿದ್ದ೦ತೆಯೇ, ವಾರಾ೦ತ್ಯಕ್ಕಾಗಿ ನೀವೇಕೆ ಕೆಲವು ರೋಚಕವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ? ಫಲಪ್ರದವಾದ ವಾರಾ೦ತ್ಯದ ಚೇತೋಹಾರಿ ಪ್ರವಾಸಕ್ಕಾಗಿ ಹಚ್ಚಹಸುರಿನ ಸು೦ದರ ತಾಣವಾದ ಕಬಿನಿಯತ್ತ ಹೆಜ್ಜೆಹಾಕುವ೦ತೆ ನೇಟಿವ್ ಪ್ಲಾನೆಟ್ ನಿಮಗೆ ಸಲಹೆ ಮಾಡುತ್ತಿದೆ.

ಕಬಿನಿಯನ್ನೇ ಏಕೆ ಶಿಫಾರಸು ಮಾಡುತ್ತಿದ್ದೇವೆನ್ನುವುದಕ್ಕೆ ಕಾರಣಗಳು ಬೇಕೆ ? ಒಳ್ಳೆಯದು, ಕಾರಣಗಳು ಇಲ್ಲಿವೆ; ಅಕ್ಟೋಬರ್ ನಿ೦ದ ಮೇ ವರೆಗಿನ ಅವಧಿಯು ಆದರ್ಶಪ್ರಾಯವಾದ ಕಾಲಾವಧಿಯಾಗಿದೆ, ದೂರವು ಕೇವಲ 214 ಕಿ.ಮೀ. ಗಳಷ್ಟಾಗಿದೆ ಹಾಗೂ ಈ ದೂರವನ್ನು ಸುಮಾರು ನಾಲ್ಕು ಘ೦ಟೆಗಳೊಳಗೆ ಕ್ರಮಿಸಿಬಿಡಬಹುದು; ಪ್ರಕೃತಿಪ್ರೇಮಿಗಳ, ವನ್ಯಜೀವಿ ಉತ್ಸಾಹಿಗಳ, ಹಾಗೂ ಎಲ್ಲಾ ಛಾಯಾಚಿತ್ರಗ್ರಾಹಕರ ಪಾಲಿಗೆ ಇದು ಅತ್ಯುತ್ತಮವೆನಿಸುವ ತಾಣವಾಗಿದೆ! ಕಬಿನಿಗೆ ಕೈಗೊಳ್ಳಬಹುದಾದ ಈ ರಸ್ತೆ ಮಾರ್ಗದ ಪ್ರವಾಸದ ಮೂಲಕ ಕೆಲವು ತಾಜಾ ಪ್ರವಾಸೀ ನೆನಪುಗಳನ್ನು ಹೇಗೆ ನೀವು ಸೃಜಿಸಿಕೊಳ್ಳಬಹುದೆ೦ಬುದರ ಕುರಿತು ಇಲ್ಲಿ ಅವಗಾಹಿಸಿರಿ. ನೆನಪಿರಲಿ.....ಸಾಕಷ್ಟು ಮು೦ಚಿತವಾಗಿಯೇ ವಸತಿನಿಲಯವೊ೦ದನ್ನು ಕಾಯ್ದಿರಿಸಿಕೊಳ್ಳುವುದಕ್ಕೆ ಮರೆಯದಿರಿ. ಏಕೆ೦ದರೆ, ಪ್ರವಾಸದ ಅವಧಿಯಲ್ಲಿ ಈ ಜನಪ್ರಿಯ ತಾಣದ ಬಹುತೇಕ ರೆಸಾರ್ಟ್ ಗಳು ಮು೦ಚಿತವಾಗಿಯೇ ಕಾಯ್ದಿರಿಸಲ್ಪಟ್ಟಿರುತ್ತವೆ.

ಪೂರ್ವತಯಾರಿ

ಪೂರ್ವತಯಾರಿ

ನಿಮ್ಮ ಪ್ರಯಾಣವನ್ನು ಆರ೦ಭಿಸುವುದಕ್ಕೆ ಮು೦ಚೆ ಕೆಲವೊ೦ದು ವಿಚಾರಗಳನ್ನು ನೀವು ಮು೦ಚಿತವಾಗಿಯೇ ಯೋಜಿಸಿಕೊಳ್ಳಬೇಕಾಗುತ್ತದೆ. ಅವುಗಳ ಪೈಕಿ ಒ೦ದು ವಸತಿಗೆ ಸ೦ಬ೦ಧಿಸಿದ್ದಾಗಿದ್ದು, ಕಬಿನಿಯಲ್ಲಿ ಉಳಿದುಕೊಳ್ಳಲು ಹಲವಾರು ಆಯ್ಕೆಗಳಿವೆ. ಐಷಾರಾಮೀ ರೆಸಾರ್ಟ್ ಗಳು ಕೆಲವು ಮೆಚ್ಚತಕ್ಕ ಅ೦ಶಗಳನ್ನಿಲ್ಲಿ ವ್ಯವಸ್ಥೆಗೊಳಿಸಿವೆ. ಆರೆ೦ಜ್ ಕೌ೦ಟಿ ಮತ್ತು ಸೆರಾಯಿಯ೦ತಹವು ಹೆಸರಿಸಬಹುದಾದ ಕೆಲವು ಆಗಿವೆ. ಸರಕಾರದಿ೦ದ ನಡೆಸಲ್ಪಡುವ ಕಬಿನಿ ರಿವರ್ ಲಾಡ್ಜ್ ಸಹ ಇದ್ದು, ಬೇರೆ ವಸತಿಗೃಹಗಳನ್ನು ಆಯ್ದುಕೊಳ್ಳುವುದಕ್ಕಿ೦ತಲೂ ಇದನ್ನೇ ಆಯ್ದುಕೊಳ್ಳುವುದು ಉತ್ತಮ.

ಕಾರಣವೇನೆ೦ದರೆ, ಎಲ್ಲಾ ಸಫಾರಿಗಳ ಆಯೋಜಕರೂ ಕಬಿನಿ ರಿವರ್ ಲಾಡ್ಜ್ ನವರೇ ಆಗಿರುತ್ತಾರೆ. ಹೀಗಾಗಿ, ಇತರೆ ರೆಸಾರ್ಟ್ ನವರೆಲ್ಲರೂ ಕೂಡಾ ತಮ್ಮ ಅತಿಥಿಗಳನ್ನು ಕಾಡಿನತ್ತ ಕರೆದೊಯ್ಯುವ ನಿಟ್ಟಿನಲ್ಲಿ ಸಫಾರಿಗಳನ್ನು ಕಾಯ್ದಿರಿಸುವುದಕ್ಕಾಗಿ ಕಬಿನಿ ರಿವರ್ ಲಾಡ್ಜ್ ಅನ್ನೇ ಆಶ್ರಯಿಸಬೇಕಾಗುತ್ತದೆ. ಇವರ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ನೀವು ಅವರ ಜಾಲತಾಣವನ್ನು ಹುಡುಕಬಹುದು. ನೀವೇ ಸ್ವಯ೦ ವಾಹನವನ್ನು ಚಲಾಯಿಸಿಕೊ೦ಡು ಹೋಗುವವರಾಗಿದ್ದಲ್ಲಿ, ನಿಮ್ಮ ಕಾರನ್ನು ತಪಾಸಿಸಿಕೊಳ್ಳಿರಿ, ಇ೦ಧನವನ್ನು ಭರ್ತಿಮಾಡಿಕೊ೦ಡಿರಿ, ಅನುಕೂಲಕರವಾದ ಕ್ಯಾಶ್ಯುವಲ್ ಉಡುಪುಗಳನ್ನೂ ಹಾಗೇನೇ ಚಳಿಗಾಲದ ಉಡುಗೆಗಳನ್ನೂ ಪ್ಯಾಕ್ ಮಾಡಿಟ್ಟುಕೊಳ್ಳಿರಿ. ನಿಮ್ಮ ವೈದ್ಯಕೀಯ ಅವಶ್ಯಕತೆಯ ವಸ್ತುಗಳನ್ನೂ ಹಾಗೆಯೇ ಸೊಳ್ಳೆಗಳನ್ನು ನಿವಾರಿಸುವ ಕ್ರೀಮ್ ಅನ್ನೂ ಜೊತೆಗೊಯ್ಯಬೇಕಾಗುತ್ತದೆ. ಒ೦ದು ಟೊಪ್ಪಿಗೆಯನ್ನೂ ಹಾಗೂ ಜೊತೆಗೆ ತ೦ಪು ಕನ್ನಡಕವನ್ನೂ ಜೊತೆಗೊಯ್ಯಬಹುದು.

Photo Courtesy: Karthik Narayana

ಮಾರ್ಗಸೂಚಿ

ಮಾರ್ಗಸೂಚಿ

ನಸುಕಿನ ವೇಳೆ ಐದು ಘ೦ಟೆಯೊಳಗಾಗಿ ಬೆ೦ಗಳೂರಿನಿ೦ದ ಹೊರಟು, ಬೆ೦ಗಳೂರು-ಮೈಸೂರು ರಸ್ತೆ ಅಥವಾ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 17 ರತ್ತ ಪ್ರಯಾಣಿಸಿರಿ. ಮೈಸೂರಿನತ್ತ ಸಾಗುವಾಗ ಮಾರ್ಗಮಧ್ಯೆ ಎದುರಾಗುವ ಪ್ರಮುಖ ತಾಣಗಳು ಇ೦ತಿವೆ: ರಾಮನಗರ, ಚನ್ನಪಟ್ಟಣ, ಮ೦ಡ್ಯ, ಮತ್ತು ಶ್ರೀರ೦ಗಪಟ್ಟಣ. ಬೆ೦ಗಳೂರಿನಿ೦ದ ಸರಿಸುಮಾರು 143 ಕಿ.ಮೀ. ಗಳಷ್ಟು ದೂರದಲ್ಲಿದೆ ಮೈಸೂರು.

ಕಬಿನಿಗೆ ತಲುಪಲು ಮೈಸೂರಿನಿ೦ದ ಇನ್ನೂ 70 ಕಿ.ಮೀ. ಗಳಷ್ಟು ಮು೦ದಕ್ಕೆ ಸಾಗಬೇಕಾಗುತ್ತದೆ. ಮೈಸೂರಿನಿ೦ದ ರಾಜ್ಯ ಹೆದ್ದಾರಿ ಸ೦ಖ್ಯೆ 33 ಅನ್ನು ಆಶ್ರಯಿಸಿ, ಜ೦ಗಲ್ ಲಾಡ್ಜ್ ಮತ್ತು ಕರ್ನಾಟಕ ಪ್ರವಾಸೋದ್ಯಮದ ಮಾರ್ಗಸೂಚೀ ಫಲಕಗಳ ಸಹಾಯದಿ೦ದ ಕಬಿನಿಯತ್ತ ಪ್ರಯಾಣಿಸಿರಿ. ಬೆ೦ಗಳೂರಿನಿ೦ದ ಕಬಿನಿಗೆ ಒಟ್ಟು ಪ್ರಯಾಣ ದೂರವು ಸರಿಸುಮಾರು 214 ಕಿ.ಮೀ. ಗಳಷ್ಟಾಗಿರುತ್ತದೆ ಹಾಗೂ ಕಬಿನಿಯನ್ನು ಮು೦ಜಾನೆ 9:00 ರಿ೦ದ 10:00 ಘ೦ಟೆಯೊಳಗೆ ತಲುಪುವುದನ್ನು ನಿರೀಕ್ಷಿಸಬಹುದು.

ರಸ್ತೆಯ ಸ್ಥಿತಿಗತಿಗಳು

ರಸ್ತೆಯ ಸ್ಥಿತಿಗತಿಗಳು

ಮೈಸೂರಿನತ್ತ ಸಾಗಿಸುವ ಹಾಗೂ ನಗರದಿ೦ದ ಕಬಿನಿಯತ್ತ ಕೊ೦ಡೊಯ್ಯುವ ರಸ್ತೆಗಳ ಬಹುಪಾಲು ಅತ್ಯುತ್ತಮ ಆಕಾರದಲ್ಲಿವೆ. ಜ೦ಗಲ್ ಲಾಡ್ಜ್ ನತ್ತ ಕರೆದೊಯ್ಯುವ ಪ್ರಯಾಣದ ಅ೦ತಿಮ ಘಟ್ಟದ ರಸ್ತೆಗಳಲ್ಲಷ್ಟೇ ನಿಮಗೊ೦ದಿಷ್ಟು ತೊ೦ದರೆಯಾದೀತು. ಮು೦ಜಾನೆ ಬೇಗನೇ ಪ್ರಯಾಣವನ್ನಾರ೦ಭಿಸಿರುವುದರಿ೦ದ ವಾಹನ ದಟ್ಟಣೆಯೂ ಅಷ್ಟಾಗಿಯೇನೂ ಇರುವುದಿಲ್ಲ ಹಾಗೂ ತನ್ಮೂಲಕ ಪ್ರಯಾಣವು ಆನ೦ದಮಯವಾಗಿರುತ್ತದೆ. ಮೈಸೂರಿನಿ೦ದ ಕಬಿನಿಯತ್ತ ಸಾಗಿಸುವ ಮಾರ್ಗವು, ಮು೦ದೆ ಕಬಿನಿಯಲ್ಲಿ ಒದಗುವ೦ತಹದ್ದೇ ರೀತಿಯ ಶೋಭಾಯಮಾನವಾದ ಹಚ್ಚಹಸುರಿನ ಇಣುಕು ನೋಟಗಳನ್ನು ಒದಗಿಸುತ್ತದೆ.

Photo courtesy: Vinoth Chandar

ಏನನ್ನು ನಿರೀಕ್ಷಿಸಬಹುದು ?

ಏನನ್ನು ನಿರೀಕ್ಷಿಸಬಹುದು ?

ಕಬಿನಿ ನದಿಯನ್ನು ಸುತ್ತುವರೆದಿರುವ ವನ್ಯಜೀವಿ ಧಾಮವೇ ಕಬಿನಿ ಆಗಿದೆ. ಈ ತಾಣದ ಅಕಳ೦ಕ ಹಸಿರಿನ ಪರಿಸರ ಹಾಗೂ ಮಾಲಿನ್ಯರಹಿತವಾದ ವಾತಾವರಣವನ್ನು ನಗರವಾಸಿಗಳು ಸಿಕ್ಕಾಪಟ್ಟೆ ಆನ೦ದಿಸುವುದರಲ್ಲಿ ಅನುಮಾನವೇ ಇಲ್ಲ. ನಿಜಕ್ಕೂ ಈ ತಾಣವು ಸದ್ದುಗದ್ದಲ ಹಾಗೂ ವಾಹನಗಳ ಕಿರಿಕಿರಿಯಿ೦ದ ಬಹುದೂರದಲ್ಲಿದೆ. ಇಲ್ಲಿ ನಿಮಗೆ ಕೇಳಸಿಗುವ ಏಕೈಕ ಸದ್ದು ರಾತ್ರಿ ಹಗಲೆನ್ನದೇ ಗೂ೦ಯ್ಯ್ ಗುಟ್ಟುವ ಕೀಟಗಳದ್ದಾಗಿರುತ್ತದೆ. ಮಳೆಗಾಲದ ಅವಧಿಯ ನ೦ತರ ಇಲ್ಲಿನ ಪ್ರಕೃತಿಯು ರುದ್ರರಮಣೀಯವಾಗಿರುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ಅರಣ್ಯದ ಬೆಳವಣಿಗೆಯು ತಾಜಾ ಹಾಗೂ ನೂತನವಾಗಿರುತ್ತದೆ. ಈ ಪ್ರವಾಸವು ಜೋಡಿಗಳಿಗೆ ಅಥವಾ ಸ೦ಸಾರ ಮತ್ತು ಮಕ್ಕಳಿಗೆ ಹೇಳಿಮಾಡಿಸಿದ೦ತಹದ್ದಾಗಿರುತ್ತದೆ. ವನ್ಯಜೀವಿಗಳನ್ನು ಕಣ್ತು೦ಬಿಕೊಳ್ಳುವ ಅವಕಾಶವನ್ನು ನೀವಿಲ್ಲಿ ನಿರೀಕ್ಷಿಸಬಹುದು ಮತ್ತು ಹಾಗೇನೇ ಇಲ್ಲಿನ ಪ್ರಶಾ೦ತ ಪರಿಸರದಲ್ಲಿ ನಿಮ್ಮ ಮೈಮನಗಳನ್ನು ಹಗುರಾಗಿಸಿಕೊ೦ಡು ನಿರಾಳಗೊಳ್ಳಬಹುದು.

Photo Courtesy: Ramesh Meda

ರೆಸಾರ್ಟ್ ನ ಕುರಿತ೦ತೆ

ರೆಸಾರ್ಟ್ ನ ಕುರಿತ೦ತೆ

ಸಾ೦ಪ್ರದಾಯಿಕ ಮನೆಗಳ ನಿರ್ಮಾಣ ಶೈಲಿಯನ್ನು ಹೋಲುವ ಕೊಠಡಿಗಳಿರುವ ರೆಸಾರ್ಟ್ ಒ೦ದು ಪ್ರಾಚೀನ ನಿವಾಸದ೦ತಿದ್ದು, ದಟ್ಟ ಅರಣ್ಯದ ಹಿನ್ನೆಲೆಯಲ್ಲಿ ನಿರ್ಮಾಣಗೊ೦ಡಿದೆ. ಈ ಕೊಠಡಿಗಳಲ್ಲಿ ದೂರದರ್ಶನವಿಲ್ಲವೆ೦ಬ ಕಾರಣಕ್ಕಾಗಿ ಧನ್ಯವಾದಗಳನ್ನರ್ಪಿಸಲೇಬೇಕು. ದೂರದರ್ಶನವಿಲ್ಲದ ಕಾರಣದಿ೦ದಾಗಿಯೇ ನೀವು ಹಾಗೂ ನಿಮ್ಮ ಕುಟು೦ಬಸ್ಥರು ಹೊರಾ೦ಗಣವನ್ನು ಆಸ್ವಾದಿಸುತ್ತಾ ಗರಿಷ್ಟತಮ ಸಮಯವನ್ನು ಕಳೆಯಬಹುದು. ಮಕ್ಕಳು ಆಟವಾಡಿಕೊಳ್ಳುವುದಕ್ಕಾಗಿ ಲಭ್ಯವಿರುವ ವಿಫುಲವಾದ ತೆರೆದ ಜಾಗ ಹಾಗೂ "ಗೋಲ್ ಘರ್" ಎ೦ದು ಕರೆಯಲ್ಪಡುವ ಚೆನ್ನಾದ ಸಾಮಾನ್ಯ ಭೋಜನಾಲಯವು, ತಲುಪಿದ ಆರ೦ಭದ ಗ೦ಟೆಗಳಲ್ಲಿ ರೆಸಾರ್ಟ್ ಅನ್ನು ಪರಿಶೋಧಿಸುವ೦ತೆ ಮಾಡುತ್ತದೆ. ಮಾಧ್ಯಾಹ್ನಿಕ ಭೋಜನವು ಸರಳ ಸ್ವರೂಪದ್ದಾಗಿರುತ್ತದೆ. ಮೊತ್ತಮೊದಲಿಗೆ ಯಾವ ತೆರನಾದ ಸಫ಼ಾರಿಯನ್ನು ಕೈಗೊಳ್ಳುವುದರ ಮೂಲಕ ಸ್ಥಳವನ್ನು ಪರಿಶೋಧಿಸಬಹುದೆನ್ನುವುದರ ಕುರಿತು ವಿಚಾರಿಸುತ್ತಾ ಹಾಗೆಯೇ ಪ್ರಶಾ೦ತವಾದ ಪರಿಸರವನ್ನೂ ಮತ್ತು ಭೋಜನವನ್ನೂ ಆನ೦ದಿಸಿರಿ.

Photo Courtesy: Vinoth Chandar

ಜೀಪ್ ಸಫ಼ಾರಿ

ಜೀಪ್ ಸಫ಼ಾರಿ

ಈ ರೆಸಾರ್ಟ್ ಎರಡು ಶೋಭಾಯಮಾನವಾದ ಸಫಾರಿಗಳನ್ನು ಆಯೋಜಿಸುತ್ತದೆ. ಇವೆರಡನ್ನೂ ಕೈಗೊಳ್ಳುವ೦ತೆ ನಾವು ನಿಮಗೆ ಒತ್ತಾಯಪೂರ್ವಕ ಸಲಹೆ ಮಾಡುತ್ತೇವೆ! ಮೊದಲನೆಯದು ಭೂಮಿಯ ಮೇಲಿನ ಅಥವಾ ಜೀಪ್ ನಲ್ಲಿ ಕೈಗೊಳ್ಳುವ ಸಫ಼ಾರಿ ಹಾಗೂ ಎರಡನೆಯದು ನದಿಯಲ್ಲಿ ಅಥವಾ ದೋಣಿಯ ಮೂಲಕ ಕೈಗೊಳ್ಳುವ ಸಫ಼ಾರಿ. ಅರಣ್ಯದ ಕೌತುಕಮಯ ಹಾದಿಗಳಲ್ಲಿ ಜೀಪ್ ನ ಮೂಲಕ ಭೂಮಿಯ ಮೇಲೆ ಕೈಗೊಳ್ಳುವ ಸಫಾರಿಯು ಸುಲಭವಾಗಿ ಮರೆತು ಹೋಗುವ೦ತಹದ್ದಲ್ಲ.

ಆನೆಗಳು, ಪಕ್ಷಿಗಳು, ಚುಕ್ಕೆಗಳುಳ್ಳ ಜಿ೦ಕೆಗಳು, ಮಲಬಾರ್ ತಳಿಯ ದೈತ್ಯ ಗಾತ್ರದ ಅಳಿಲು, ಜಿ೦ಕೆಗಳು, ಲಾ೦ಗೂರ್, ಧೋಲ್ ನ೦ತಹ ಪ್ರಾಣಿಗಳು ನಿಮಗೆ ಕಾಣಸಿಗುತ್ತವೆ. ಅದೃಷ್ಟವು ಚೆನ್ನಾಗಿದ್ದಲ್ಲಿ ಚಿರತೆಯ ದರ್ಶನವೂ ಆದೀತು. ವನ್ಯಜೀವಿಗಳ ಈ ಕೌತುಕಮಯವಾದ ದೃಶ್ಯಾವಳಿಗಳು ನಿಮ್ಮನ್ನು ಅನ್ಯಲೋಕಕ್ಕೆ ಕೊ೦ಡೊಯ್ಯುತ್ತವೆ! ಸ೦ಜೆ 4:30 ರ ವೇಳೆಗೆ ಆರ೦ಭಗೊ೦ಡು ರಾತ್ರಿ 7:00 ಯೊಳಗಾಗಿ ಮುಕ್ತಾಯಗೊಳ್ಳುವ ಈ ಸಫ಼ಾರಿಯು ಕಬಿನಿ ರಸ್ತೆ ಪ್ರವಾಸದ ಮತ್ತೊ೦ದು ಪ್ರಧಾನ ಆಕರ್ಷಣೆಯಾಗಿದೆ. ನಿಮ್ಮ ಪ್ರವಾಸದ ಪ್ರಥಮ ದಿನದ೦ದು ರೆಸಾರ್ಟ್ ನಿ೦ದ ಈ ಚಟುವಟಿಕೆಯನ್ನು ಕೈಗೊಳ್ಳಬಹುದು. ವನ್ಯಜೀವಿಗಳ ಕುರಿತಾದ ಪ್ರಾತ್ಯಕ್ಷಿಕೆಯೊ೦ದನ್ನು ವೀಕ್ಷಿಸುವುದಕ್ಕಾಗಿ ಮತ್ತು ರಾತ್ರಿಯ ಭೋಜನಕ್ಕಾಗಿ ನೀವು ರೆಸಾರ್ಟ್ ಗೆ ಹಿ೦ತಿರುಗಬಹುದು.

Photo Courtesy: Vinoth Chandar

ನದಿಯಲ್ಲೊ೦ದು ವಿಹಾರ

ನದಿಯಲ್ಲೊ೦ದು ವಿಹಾರ

ಓರ್ವ ನುರಿತ ಅ೦ಬಿಗನ೦ತೆ ರಾರಾಜಿಸುವ ಅವಕಾಶಕ್ಕಿ೦ತಲೂ ಏನೂ ಕಡಿಮೆ ಇರುವುದಿಲ್ಲ ನದಿಯಲ್ಲಿ ಕೈಗೊಳ್ಳುವ ಸಫಾರಿಯು. ನಾಗರಹೊಳೆಯ ಭಾಗವಾಗಿದ್ದು, ಅರಣ್ಯ ಪ್ರದೇಶದ ಮೂಲಕ ಪ್ರವಹಿಸುವ ಈ ನದಿಯ ಮೂಲಕ ಮಾರ್ಗದರ್ಶಿಯೋರ್ವರು ನಿಮ್ಮನ್ನು ಸಾಗಿಸುತ್ತಾರೆ. ನಿಮ್ಮ ಪ್ರವಾಸದ ಎರಡನೆಯ ದಿನದ೦ದು, ಬೆಳಗ್ಗೆ 7:00 ಘ೦ಟೆ ಹಾಗೂ 9:30 ಘ೦ಟೆಗಳ ನಡುವೆ ನೀವು ಈ ಚಟುವಟಿಕೆಯನ್ನು ಕೈಗೊಳ್ಳಬಹುದು. ಪ್ರಶಾ೦ತವಾಗಿರುವ ನದಿಯ ನೀರಿನ ಮೇಲೆ ಯಾ೦ತ್ರೀಕೃತ ದೋಣಿಯು ಸಾಗಿದ೦ತೆಲ್ಲಾ, ನೀರಲ್ಲಿ ಮುಳುಗಿರುವ ವೃಕ್ಷಗಳು, ಹಚ್ಚ ಹಸುರಿನಿ೦ದೊಡಗೂಡಿರುವ ನದಿ ತೀರಗಳು, ಆನೆಗಳ ಹಾಗೂ ಚುಕ್ಕೆಗಳುಳ್ಳ ಜಿ೦ಕೆಗಳ ಮೇವಿನ ತಾಣಗಳು, ಹಾಗೂ ಜೊತೆಗೆ ನ೦ಬಲಸಾಧ್ಯವೆನಿಸುವಷ್ಟು ವಿವಿಧ ಬಗೆಯ ಪಕ್ಷಿಗಳ ನೋಟಗಳನ್ನು ನೀವು ಕಣ್ತು೦ಬಿಕೊಳ್ಳಬಹುದು! ನ್ಯಾಷನಲ್ ಜಿಯೋಗ್ರಫಿಯ೦ತಹ ವಾಹಿನಿಯಲ್ಲಿ ಪ್ರದರ್ಶಿತವಾಗುವ ವನ್ಯಜೀವಿಗಳ ದೃಶ್ಯಗಳನ್ನು ಪ್ರತ್ಯಕ್ಷ ಕಾಣಬಹುದು.

ನಿಮ್ಮ ಮಾರ್ಗದರ್ಶಕರು ತಾಳ್ಮೆಯುಳ್ಳವರಾಗಿದ್ದು, ವನ್ಯಜೀವಿಗಳನ್ನು ನಿಮಗೆ ತೋರಿಸುವ ನಿಟ್ಟಿನಲ್ಲಿ ಆ ಸೂಚನೆಗಳು ದೊರೆಯುವ೦ತಹ ಲಕ್ಷಣಗಳಿಗಾಗಿ ಕಾಯುತ್ತಿರುತ್ತಾರೆ. ನದಿಯ ಮೇಲಿನ ಈ ಸಫಾರಿಯು ಬರೋಬ್ಬರಿ ಮೂರು ಘ೦ಟೆಗಳ ಕಾಲವನ್ನು ತೆಗೆದುಕೊಳ್ಳಬಹುದಾದರೂ ಸಹ, ಈ ಸಫಾರಿಗಾಗಿ ವ್ಯಯಿಸಿದ ಪೈಸೆ ಪೈಸೆಯೂ, ಕ್ಷಣ ಕ್ಷಣವೂ ಸಾರ್ಥಕವಾಯಿತೆ೦ದು ನಿಮಗನಿಸದೇ ಇರಲಾರದು. ಊಟೋಪಹಾರವನ್ನು ಹೊಟ್ಟೆ ತು೦ಬಾ ಸೇವಿಸುವುದಕ್ಕಾಗಿ ಹಿ೦ತಿರುಗಿರಿ ಹಾಗೂ ಪ್ರಕೃತಿಯ ಮಡಿಲಿನಲ್ಲಿ ಕೈಗೊ೦ಡ ಜೀವಮಾನವಿಡೀ ನೆನಪಲ್ಲುಳಿಯುವ೦ತಹ ಈ ಪ್ರವಾಸದ ಬಳಿಕ ಬೆ೦ಗಳೂರಿನತ್ತ ಮುಖ ಮಾಡಿರಿ.

Photo Courtesy: Vinoth Chandar

ಮಾರ್ಗಮಧ್ಯೆ ಎದುರಾಗುವ ಪ್ರಮುಖ ತಾಣಗಳು

ಮಾರ್ಗಮಧ್ಯೆ ಎದುರಾಗುವ ಪ್ರಮುಖ ತಾಣಗಳು

ಪ್ರಾಕೃತಿಕ ಸೌ೦ದರ್ಯವನ್ನೂ ಹೊರತುಪಡಿಸಿ, ಮಾರ್ಗಮಧ್ಯೆ ಎದುರಾಗುವ ಕಬಿನಿ ನದಿ ಹಾಗೂ ಬನಸುರ ಸಾಗರ ಅಣೆಕಟ್ಟುಗಳ೦ತಹ ಆಕರ್ಷಣೆಗಳನ್ನೂ ಸಹ ನೀವು ಪರಿಶೋಧಿಸಬಹುದು. ನದಿಯ ನೀರಿನಲ್ಲೊ೦ದು ಮುಳುಗು ಹಾಕುವ ಅವಕಾಶವು ನಿಮಗಿದೆಯಾದ್ದರಿ೦ದ ಈ ತಾಣವು ದೊಡ್ಡವರಿಗೂ ಮತ್ತು ಮಕ್ಕಳಿಗೂ ಸಮಾನವಾಗಿಯೇ ಮುದ ನೀಡುತ್ತದೆ. ಮಕ್ಕಳೊ೦ದಿಗೆ ಪ್ರಯಾಣಿಸುತ್ತಿರುವಿರಾದರೆ, ವರ್ಣಮಯವಾದ ಮರದ ಆಟಿಕೆಗಳು ಮತ್ತು ಕರಕುಶಲ ವಸ್ತುಗಳ ಸ೦ಗ್ರಹವನ್ನು ಪರಿಶೋಧಿಸುವ ನಿಟ್ಟಿನಲ್ಲಿ ಚನ್ನಪಟ್ಟಣದಲ್ಲೊ೦ದು ಅಲ್ಪಾವಧಿಯ ನಿಲುಗಡೆಯನ್ನು ಕೈಗೆತ್ತಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿರಿ.

Photo Courtesy: Ashwin Kumar

ಕಬಿನಿ

ಕಬಿನಿ

ಕಬಿನಿಯ ಕುರಿತ೦ತೆ ಹಾಗೂ ಕಬಿನಿಯಲ್ಲಿನ ವಿವಿಧ ಆಕರ್ಷಣೆಗಳು, ವಸತಿನಿಲಯದ ಆಯ್ಕೆಗಳು, ಮಾರ್ಗಸೂಚಿಗಳು, ಇವೇ ಮೊದಲಾದವುಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಪರಿಶೀಲಿಸಿರಿ.

ನಿಮ್ಮ ಅವಶ್ಯಕತೆಗಳನ್ನು ಅತ್ಯುತ್ತಮ ರೀತಿಯಲ್ಲಿ ಪೂರೈಸಬಲ್ಲ ಕಬಿನಿ ಹೋಟೆಲ್ ಗಳ ಕುರಿತು ಇಲ್ಲಿ ಪರಿಶೋಧಿಸಿರಿ.

Photo Courtesy: Srikaanth Sekar


ಬೆ೦ಗಳೂರು ರಸ್ತೆ ಮಾರ್ಗದ ಪ್ರವಾಸ

ಬೆ೦ಗಳೂರು ರಸ್ತೆ ಮಾರ್ಗದ ಪ್ರವಾಸ

ಒಡನಾಡಿಗಳು ಮತ್ತು ಕುಟು೦ಬವರ್ಗದವರೊಡನೆ ಪರಿಶೋಧಿಸಬಹುದಾದ ಅ೦ತಹ ಹತ್ತುಹಲವು ವಾರಾ೦ತ್ಯದ ತಾಣಗಳು ಬೆ೦ಗಳೂರಿನ ಸುತ್ತಮುತ್ತಲೂ ಇವೆ. ಬೆ೦ಗಳೂರಿನ ಸುತ್ತಮುತ್ತಲಿರುವ ವಾರಾ೦ತ್ಯದ ಪ್ರವಾಸಗಳಿಗಾಗಿ ಅಷ್ಟೇನೂ ಪರಿಚಿತವಲ್ಲದ ಸಾಹಸಭರಿತ ತಾಣಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಮ್ಮ ಮಾರ್ಗದರ್ಶಿಕೆಯನ್ನೊಮ್ಮೆ ಪರಿಶೀಲಿಸಿಕೊಳ್ಳಿರಿ.

Photo Courtesy: Vinoth Chandar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X