
ವಿಜಯಪುರದಲ್ಲಿರುವ ಬಬಲಾದಿ ಸದಾಶಿವ ಮಠಕ್ಕೆ ಹೋಗಿರುವವರಿಗೆ ಅಲ್ಲಿನ ವಿಶೇಷತೆ ಏನು? ಈ ಸ್ಥಳ ಯಾಕೆ ಇಷ್ಟೊಂದು ಫೇಮಸ್ ಆಗಿದೆ ಅನ್ನೋದು ಗೊತ್ತೇ ಇರುತ್ತದೆ. ವಿಜಯಪುರ, ಬೆಳಗಾವಿ, ಬೀದರ್, ಗುಲ್ಬರ್ಗ ಜಿಲ್ಲೆಯವರಿಗಂತೂ, ಬಬಲಾದಿ ಮಠದ ವೈಶಿಷ್ಠ್ಯತೆ ಗೊತ್ತೇ ಇದೆ. ಆದರೆ ಬಹಳಷ್ಟು ಮಂದಿಗೆ ಬಬಲಾದಿ ಮಠದ ವಿಶೇಷತೆ ಏನು ಅನ್ನೋದು ಗೊತ್ತೇ ಇಲ್ಲ. ಕಾಲಜ್ಞಾನವನ್ನು ತಿಳಿಸುವ ಬಬಲಾದಿ ಮಠದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಸ್ಥಾನ
PC: youtube
ಬಬಲಾದಿ ಅಥವಾ ಮುತ್ತನ ಬಾಬಲಾಡ್ ಭಾರತದ ದಕ್ಷಿಣ ರಾಜ್ಯವಾದ ಕರ್ನಾಟಕದ ಒಂದು ಹಳ್ಳಿ. ಇದು ಕರ್ನಾಟಕದ ಬಿಜಾಪುರ ಜಿಲ್ಲೆಯ ಬಿಜಾಪುರ ತಾಲ್ಲೂಕಿನಲ್ಲಿದೆ. ಇದು ಜಿಲ್ಲಾ ಕೇಂದ್ರವಾದ ಬಿಜಾಪುರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಇದು ಬಿಜಾಪುರದ ಸಮೀಪವಿರುವ ಹಲವಾರು ಸಣ್ಣ ಹಳ್ಳಿಗಳಲ್ಲಿ ಒಂದಾಗಿದೆ. ಬಬಲಿ ಎಂಬ ಗಿಡಗಳು ಆವರಿಸಿ ದಟ್ಟ ಅರಣ್ಯಪ್ರದೇಶವಾಗಿದ್ದ ಗ್ರಾಮವು, ಕಾಲಾನಂತರ ಬಬಲಾದಿ ಎಂದು ಕರೆಯಲ್ಪಟ್ಟಿತು.
ಮಧ್ಯವೇ ನೈವೇದ್ಯ
ಇಲ್ಲಿ ನೀವು ಸಾಲು ಸಾಲು ಭಕ್ತರು ಕೈಯಲ್ಲಿ ಮಧ್ಯದ ಬಾಟಲಿಗಳನ್ನು ಹಿಡಿದುಕೊಂಡು ದೇವರ ಮೂರ್ತಿಗೆ ಅಭಿಷೇಕ ಮಾಡುವುದನ್ನು ನೋಡಬಹುದು. ದೇವರಿಗೆ ಮಧ್ಯ ಅರ್ಪಣೆಯೇ ಎಂದು ನೀವು ಬೆರಗಾಗುವುದು ಸಹಜ. ಆದರೆ ಇಲ್ಲಿ ಅದುವೇ ವಾಸ್ತವ. ಇಲ್ಲಿ ಭಕ್ತರಿಗೂ ಮಧ್ಯವೇ ಪ್ರಸಾದ. ಹೆಣ್ಣಾಗಲೀ, ಗಂಡಾಗಲೀ ಇಲ್ಲಿನ ಮಧ್ಯದ ಪ್ರಸಾದ ಸ್ವೀಕರಿಸಲೇ ಬೇಕು.

10 ಪವಾಡ ಪುರುಷರ ಗದ್ದುಗೆಗಳು
ದೇವಾಲಯದಲ್ಲಿ ಸಿದ್ದರಾಮೇಶ್ವರರು, ಚಂದ್ರಗಿರಿದೇವಿ, ಓಂಕಾರಯ್ಯ ಸ್ವಾಮಿಗಳು, ಗಂಗಾಧರಯ್ಯ ಸ್ವಾಮಿಗಳು, ಶಂಕ್ರಯ್ಯ ಸ್ವಾಮಿಗಳು, ಸದಾಶಿವ ಸ್ವಾಮಿಗಳು, ಶಿವಲಿಂಗ ಸ್ವಾಮಿಗಳು, ಓಂಕಾರಯ್ಯ ಸ್ವಾಮಿಗಳು, ಗಂಗಾಧರಯ್ಯ ಸ್ವಾಮಿಗಳು ಹಾಗೂ ಶಿವರುದ್ರಯ್ಯ ಸ್ವಾಮಿಗಳು ಹೀಗೆ 10 ಪವಾಡ ಪುರುಷರ ಗದ್ದುಗೆಗಳು ಸಾಲಾಗಿ ಪೂಜೆಗೊಳ್ಳುತ್ತವೆ.
ಕೋರಿಕೆ ಈಡೇರಿದರೆ ಮಧ್ಯ ಅರ್ಪಣೆ
ಭಕ್ತರು ಯಾವುದೇ ಕೋರಿಕೆ ಈಡೇರಬೇಕಾರರೆ ಇಲ್ಲಿನ ಸದಾಶಿವನಿಗೆ ಮಧ್ಯವನ್ನು ಅರ್ಪಿಸುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಅದರಂತೆಯೇ ತಮ್ಮ ಬೇಡಿಕೆ ಈಡೇರಿದ ನಂತರ ಮಧ್ಯವನ್ನು ನೈವೇದ್ಯವನ್ನಾಗಿ ದೇವರಿಗೆ ಅರ್ಪಿಸುತ್ತಾರೆ. ಇಲ್ಲಿನ ಶ್ರೀಗಳು ಕಾಲಜ್ಞಾನವನ್ನು ಬಲ್ಲವರಾಗಿದ್ದಾರೆ, ಮುಂದೆ ನಡೆಯುವಂತಹ ಘಟನೆಗಳ ಭವಿಷ್ಯ ಹೇಳಲಿದ್ದಾರೆ, ಹಾಗಾಗಿ ಬಬಲಾದಿ ಮಠವು ಕಾಲಜ್ಞಾನಕ್ಕೆ ಪ್ರಸಿದ್ಧಿ ಹೊಂದಿದೆ.

ಶಕ್ತಿಗನುಗುಣವಾಗಿ ಅರ್ಪಣೆ
ಬೆಳಗಾವಿ, ಬೀದರ್, ಗುಲ್ಬರ್ಗ, ಮಹಾರಾಷ್ಟ್ರದಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಬಡವರು ಕಡಿಮೆ ಬೆಲೆಯ ಮಧ್ಯವನ್ನು ಅರ್ಪಿಸಿದರೆ , ಶ್ರೀಮಂತರು ಹೆಚ್ಚು ಬೆಲೆಯ ಮಧ್ಯವನ್ನು ಅರ್ಪಿಸುತ್ತಾರೆ. ಹೀಗೆ ಪ್ರತಿಯೊಬ್ಬರು ತಮ್ಮ ಭಕ್ತಿ, ಶಕ್ತಿಗನುಗುಣವಾಗಿ ಮಧ್ಯವನ್ನು ಅರ್ಪಿಸುತ್ತಾರೆ.
ಜುಟ್ಟು ಇಲ್ಲದ ತೆಂಗಿನಕಾಯಿ
ಈ ಮಠದಲ್ಲಿ ಇನ್ನೊಂದು ವಿಶಿಷ್ಠ ಸಂಪ್ರದಾಯವಿದೆ. ಬಹುತೇಕ ಎಲ್ಲ ಮಠ ಮಂದಿರಗಳಲ್ಲಿ ತೆಂಗಿನಕಾಯಿ ಒಡೆಯುವುದು ಸಾಮಾನ್ಯ. ಜನರೂ ಸಾಮಾನ್ಯವಾಗಿ ಜುಟ್ಟು ಇರುವ ತೆಂಗಿನಕಾಯಿಯನ್ನೇ ಒಡೆಯುತ್ತಾರೆ. ಆದರೆ, ಇಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ. ಇಲ್ಲಿ ಜುಟ್ಟು ಇಲ್ಲದ ಬೋಳ ತೆಂಗಿನಕಾಯಿ ಒಡೆಯುತ್ತಾರೆ. ಯಾಕೆಂದರೆ ಹೊಳೆ ಬಬಲಾದಿ ಮಠದವರ ಜುಟ್ಟು ಯಾರ ಕೈಗೂ ಸಿಕ್ಕಿಲ್ಲ ಎಂಬುದು ಇದರ ಪ್ರತೀಕ.

ಶಿವಯ್ಯ ಶ್ರೀಗಳ ಕಾಲಜ್ಞಾನ
ಇಲ್ಲಿನ ಶಿವಯ್ಯ ಶ್ರೀ ಗಳು ಹೇಳಿರುವ ಕಾಲಜ್ಞಾನ ಎಂದಿಗೂ ತಪ್ಪಾಗಿಲ್ಲ. ಯಾವುದೇ ಭವಿಷ್ಯವನ್ನು ಶ್ರೀಗಳು ನೇರವಾಗಿ ಹೇಳೋದಿಲ್ಲ, ಒಗಟಿನ ರೂಪದಲ್ಲಿ ಹೇಳುತ್ತಾರೆ. ಶಿವಯ್ಯ ಶ್ರೀಗಳ ಗುರುಗಳು ಸದಾಶಿವಯ್ಯ ಶ್ರೀಗಳು, ಇವರೂ ಕಾಲಜ್ಞಾನವನ್ನು ತಿಳಿಸುತ್ತಿದ್ದರು. ಇಲ್ಲಿನ ಶ್ರೀ ಗಳಿಗೆ ಭವಿಷ್ಯ ನುಡಿಯುವ ಕಲೆ ತನ್ನಿಂದತಾನೇ ಒಲಿದು ಬಂದಿದೆ. ಇದಕ್ಕೆಲ್ಲಾ ಇಲ್ಲಿನ ಚಂದ್ರಮ್ಮ ದೇವಿಯ ಕೃಪೆಯೇ ಕಾರಣ ಎನ್ನಲಾಗುತ್ತದೆ.

ಬಬಲಾದಿ ಜಾತ್ರೆ
PC: youtube
ವರ್ಷಕ್ಕೊಮ್ಮೆ ಶಿವರಾತ್ರಿ ಅಮವಾಸ್ಯೆಯಂದು ಬಬಲಾದಿ ಜಾತ್ರೆ ನಡೆಯುತ್ತದೆ, ಇದನ್ನು ಚಂದ್ರಗಿರಿ ತಾಯಿ ಜಾತ್ರೆ ಎಂದೂ ಕರೆಯುತ್ತಾರೆ. ಚಹಾ ಮಾರುವ ಹುಡುಗ ಪ್ರಧಾನಿ ಆಗುತ್ತಾನೆ ಎಂದೂ ಭವಿಷ್ಯ ನುಡಿದಿದ್ದರಂತೆ ಶ್ರೀ ಗಳು. ಅದರಂತೆಯೇ ಮೋದಿ ದೇಶದ ಪ್ರಧಾನಿಯಾದರು ಎನ್ನುತ್ತಾರೆ ಸ್ಥಳೀಯರಯ. ಶ್ರೀ ಗಳು ಸಾಕಷ್ಟು ಭಕ್ತರಿಗೆ ಸಹಾಯ ಮಾಡಿದ್ದಾರೆ. ಬೆಳಗಾವಿಯ ಅರಬಾವಿಯಿಂದ 2 ಕಿ.ಮೀ ದೂರ ಸಾಗಿದರೆ ಅಲ್ಲಿರುವ ಕೃಷಿ ಭೂಮಿಯಲ್ಲಿ ನಿಂತು ಶ್ರೀ ಗಳು ಭವಿಷ್ಯ ನುಡಿಯುತ್ತಾರಂತೆ.
ತಲುಪುವುದು ಹೇಗೆ?
ಬಿಜಾಪುರಕ್ಕೆ ವಿಮಾನ ನಿಲ್ದಾಣವಿಲ್ಲ. ಹತ್ತಿರದ ವಿಮಾನ ನಿಲ್ದಾಣವೆಂದರೆ ಸಾಂಬ್ರೆ ವಿಮಾನ ನಿಲ್ದಾಣ,ಬೆಳಗಾವಿಯಲ್ಲಿದೆ. ಇದು ಬಿಜಾಪುರದಿಂದ 164 ಕಿ.ಮೀ ದೂರದಲ್ಲಿದೆ. ಇನ್ನು ಬಿಜಾಪುರದಿಂದ 167 ಕಿ.ಮೀ ದೂರದಲ್ಲಿ ಹುಬ್ಳಿ ವಿಮಾನ ನಿಲ್ದಾಣ (ಎಚ್‌ಬಿಎಕ್ಸ್)ವಿದೆ. ಇನ್ನು ರಸ್ತೆ ಮೂಲಕ ಪ್ರಯಾಣಿಸುವುದಾದರೆ ಬಿಜಾಪುರಕ್ಕೆ ಸಾಕಷ್ಟು ಬಸ್‌ಗಳು ಲಭ್ಯವಿದೆ.