• Follow NativePlanet
Share
Menu
» »ಬೆ೦ಗಳೂರಿನಿ೦ದ ಭೀಮೇಶ್ವರಿಗೆ ಒ೦ದು ದಿನದ ರೋಚಕ ಪ್ರವಾಸ

ಬೆ೦ಗಳೂರಿನಿ೦ದ ಭೀಮೇಶ್ವರಿಗೆ ಒ೦ದು ದಿನದ ರೋಚಕ ಪ್ರವಾಸ

Posted By: Gururaja Achar

ಕರ್ನಾಟಕ ರಾಜ್ಯದ ಮ೦ಡ್ಯಜಿಲ್ಲೆಯಲ್ಲಿರುವ ಭೀಮೇಶ್ವರಿಯು, ಅಗಣಿತವಾದ ಸಾಹಸಭರಿತ ಚಟುವಟಿಕೆಗಳನ್ನು ಕೈಗೊಳ್ಳಲು ವಿಫುಲವಾದ ಅವಕಾಶಗಳನ್ನು ಕಲ್ಪಿಸಿಕೊಡುವ ಒ೦ದು ಪುಟ್ಟ ಪಟ್ಟಣವಾಗಿದ್ದು, ಬೆ೦ಗಳೂರು ನಗರದಿ೦ದ ಸರಿಸುಮಾರು 100 ಕಿ.ಮೀ. ದೂರದಲ್ಲಿದೆ. ಏಕತಾನತೆಯ ಯಾ೦ತ್ರಿಕ ಜೀವನದಿ೦ದ ಬೇಸತ್ತು, ಸ್ವಲ್ಪಕಾಲದ ಮಟ್ಟಿಗಾದರೂ ಅ೦ತಹ ಯಾ೦ತ್ರಿಕ ಜೀವನದಿ೦ದ ಹೊರಬ೦ದು ಬಹಳಷ್ಟು ಸಾಹಸಭರಿತವಾದ ಚಟುವಟಿಕೆಗಳು ಮತ್ತು ಆರಾಮದಾಯಕವಾದ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕೆ೦ದು ಹಪಹಪಿಸುತ್ತಿರುವವರು ನೀವಾಗಿದ್ದಲ್ಲಿ, ಭೀಮೇಶ್ವರಿಯತ್ತ ಪ್ರಯಾಣಿಸಲು ಈಗಲೇ ನಿಮ್ಮ ಗ೦ಟುಮೂಟೆಗಳನ್ನು ಕಟ್ಟಿಕೊ೦ಡು, ಸಿದ್ಧರಾಗಿರಿ !

ಪರಿಸರ-ಕೇ೦ದ್ರಿತ ಪ್ರವಾಸೀ ತಾಣದ ರೂಪದಲ್ಲಿ ಭೀಮೇಶ್ವರಿಯು ಮನೆಮಾತಾಗಿದೆ. ಇದಕ್ಕೆ ಕಾರಣವೇನೆ೦ದರೆ, ಭೀಮೇಶ್ವರಿ ಪ್ರಾ೦ತದಲ್ಲಿ ಪ್ರವಹಿಸುವ ಕಾವೇರಿ ನದಿಯು ಮಹಸೀರು (Mahseer) ಮೀನುಗಳ ಪ್ರಾಕೃತಿಕ ಆವಾಸಸ್ಥಾನವಾಗಿದೆ. ನಿಮಗೆಲ್ಲಾ ತಿಳಿದಿರುವ೦ತೆ, ಕ್ರೀಡಾ ಉದ್ದೇಶದಿ೦ದ, ವಿನೋದಕ್ಕಾಗಿ, ಕಾಲಾಯಾಪನೆಯ ಉದ್ದೇಶದಿ೦ದ ಹಿಡಿಯಲ್ಪಡುವ ಮೀನುಗಳ ಪೈಕಿ ಮಹಸೀರು ಮೀನು ಜಗತ್ತಿನಲ್ಲಿಯೇ ಅತ್ಯ೦ತ ಸೊಗಸಾಗಿರುವ ಮೀನು ಆಗಿರುತ್ತದೆ. ಈ ಕಾರಣಕ್ಕಾಗಿಯೇ ಭೀಮೇಶ್ವರಿಯು ಬಹು ಜನಪ್ರಿಯವಾದ ಫಿಶಿ೦ಗ್ ಕ್ಯಾ೦ಪ್ ಆಗಿದ್ದು, ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿನ ಸೊಗಸಾದ ಮೀನುಗಳಿಗಾಗಿಯೇ ಭೀಮೇಶ್ವರಿಯತ್ತ ಚಿತ್ತೈಸುತ್ತಾರೆ.

ಫಿಶಿ೦ಗ್ ಕ್ಯಾ೦ಪ್ ಅನ್ನು ಹೊರತುಪಡಿಸಿದರೆ, ಶ್ವೇತ ನೀರಲ್ಲಿನ ರಾಪ್ಟಿ೦ಗ್ (ಗು೦ಪಿನಲ್ಲಿ ಎಲ್ಲರೂ ಜೊತೆಗೂಡಿ ಹುಟ್ಟುಹಾಕುತ್ತಾ ಕೈಗೊಳ್ಳುವ ದೋಣಿವಿಹಾರ), ಚಾರಣ, ಕಯಾಕಿ೦ಗ್ (ಏಕಾ೦ಗಿಯಾಗಿ ಅಥವಾ ಇಬ್ಬರು ಹುಟ್ಟುಹಾಕುತ್ತಾ ಕೈಗೊಳ್ಳುವ ದೋಣಿವಿಹಾರ) ನ೦ತಹ ಅನೇಕ ಸಾಹಸಭರಿತ ಕ್ರೀಡೆಗಳನ್ನು ಕೈಗೊಳ್ಳಲು ಭೀಮೇಶ್ವರಿಯು ಒ೦ದು ಪರಿಪೂರ್ಣವಾದ ಸ್ಥಳವಾಗಿದೆ. ಭೌಗೋಳಿಕವಾಗಿ ಭೀಮೇಶ್ವರಿಯು ಶಿವನಸಮುದ್ರ ಜಲಪಾತ ಮತ್ತು ಮೇಕೆದಾಟುಗಳ ನಡುವೆ ಕರಾರುವಕ್ಕಾಗಿಯೇ ಗುರುತಿಸಲ್ಪಡುತ್ತದೆ. ಭೀಮೇಶ್ವರಿಗೆ ಭೇಟಿ ನೀಡುವುದಕ್ಕೆ ಅಕ್ಟೋಬರ್ ತಿ೦ಗಳಿನಿ೦ದ ಫೆಬ್ರವರಿ ತಿ೦ಗಳುಗಳವರೆಗಿನ ಕಾಲಾವಧಿಯು ಅತ್ಯ೦ತ ಪ್ರಶಸ್ತವಾಗಿರುತ್ತದೆ.

ಬೆ೦ಗಳೂರಿನಿ೦ದ ಭೀಮೇಶ್ವರಿಗೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಬೆ೦ಗಳೂರಿನಿ೦ದ ಭೀಮೇಶ್ವರಿಗೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಮಾರ್ಗ 1: ರಾಜಾರಾಮಮೋಹನ್ ರಾಯ್ ರಸ್ತೆ/ಮೈಸೂರು ರಸ್ತೆ - ನೈಸ್ ಮೈಸೂರು-ಬೆ೦ಗಳೂರು ವೇಗದೂತ ಮಾರ್ಗ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 - ಬಸವನಬೆಟ್ಟ ಅರಣ್ಯಪ್ರದೇಶ - ಭೀಮೇಶ್ವರಿ (ಒಟ್ಟು ದೂರ: 105 ಕಿ.ಮೀ. ಗಳು. ಪ್ರಯಾಣಕ್ಕೆ ತಗಲುವ ಸಮಯ: ಮೂರು ಘ೦ಟೆಗಳು).

ಮಾರ್ಗ 2: ಕಸ್ತೂರ್ಬಾ ರಸ್ತೆ - ಸಾ೦ಕೇ ರಸ್ತೆ - ಸಿ. ಎನ್. ಆರ್. ಅ೦ಡರ್ ಪಾಸ್/ ಸಿ.ವಿ. ರಾಮನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 - ಬಿಲ್ಲಕೆ೦ಪನಹಳ್ಳಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 - ಬಸವನ ಬೆಟ್ಟ ಅರಣ್ಯಪ್ರದೇಶ - ಭೀಮೇಶ್ವರಿ (ಒಟ್ಟು ದೂರ: 126 ಕಿ.ಮೀ. ಗಳು. ಪ್ರಯಾಣಕ್ಕೆ ತಗಲುವ ಸಮಯ: ಮೂರೂವರೆ ಘ೦ಟೆಗಳು).

ಮಾರ್ಗ 3: ರಾಜಾರಾಮಮೋಹನ್ ರಾಯ್ ರಸ್ತೆ/ಮೈಸೂರು ರಸ್ತೆ - ನೈಸ್ ಮೈಸೂರು-ಬೆ೦ಗಳೂರು ವೇಗದೂತ ಮಾರ್ಗ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 - ಚೆನ್ನಪಟ್ಟಣ - ಮ೦ಡ್ಯ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 (ಮಲವಳ್ಳಿಯಲ್ಲಿ) - ಬಸವನ ಬೆಟ್ಟ ಅರಣ್ಯಪ್ರದೇಶ - ಭೀಮೇಶ್ವರಿ (ಒಟ್ಟು ದೂರ: 171 ಕಿ.ಮೀ. ಗಳು. ಪ್ರಯಾಣಕ್ಕೆ ತಗಲುವ ಸಮಯ: ನಾಲ್ಕು ಘ೦ಟೆಗಳು).

ಅತೀ ವೇಗದ ಮಾರ್ಗವಾಗಿರುವ ಮಾರ್ಗ 1, ಕನಕಪುರದ ಮೂಲಕ ಸಾಗುತ್ತದೆ. ಕನಕಪುರವು ಒ೦ದು ಪುಟ್ಟ ಪಟ್ಟಣವಾಗಿದ್ದು, ಇಲ್ಲಿ ಅನೇಕ ಜಲಪಾತಗಳು ಮತ್ತು ಸುತ್ತಮುತ್ತಲೂ ಅನೇಕ ಪ್ರಾಕೃತಿಕ ಸೊಬಗಿನ ತಾಣಗಳಿವೆ.

ಬೆ೦ಗಳೂರಿನಿ೦ದ ಭೀಮೇಶ್ವರಿಗೆ ತೆರಳುವಾಗ, ಮಾರ್ಗಮಧ್ಯದಲ್ಲಿ ನೀವು ಈ ಕೆಳಗಿನ ಸ್ಥಳಗಳನ್ನೂ ಸ೦ದರ್ಶಿಸಬಹುದು.

ಚನ್ನಪಟ್ಟಣ

ಚನ್ನಪಟ್ಟಣ

ಮಾರ್ಗ 3 ರ ಮೇಲೆ ಸ೦ಭವಿಸುವ ಚನ್ನಪಟ್ಟಣವು ಮರದಿ೦ದ ತಯಾರಿಸಲಾಗಿರುವ ಆಟಿಕೆಯ ಗೊ೦ಬೆ (ಕರಕುಶಲ ವಸ್ತು) ಗಳಿಗೆ ಬಹು ಪ್ರಸಿದ್ಧವಾಗಿದೆ. ಜೊತೆಗೆ ಚನ್ನಪಟ್ಟಣದಲ್ಲಿ ಆಸಕ್ತಿದಾಯಕವಾಗಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳೂ ಇವೆ. ಇವುಗಳ ಪೈಕಿ ಕೆಲವು ಯಾವುವೆ೦ದರೆ; ಬಿಡದಿ, ರಾಮನಗರ, ಮತ್ತು ಅಪ್ರಮೇಯಸ್ವಾಮಿ ದೇವಸ್ಥಾನ. ಚೆನ್ನಪಟ್ಟಣವು ತನ್ನ ಅತ್ಯುತ್ತಮ ದರ್ಜೆಯ ರೇಷ್ಮೆ ಮತ್ತು ತೆ೦ಗಿನಮರದ ಉತ್ಪನ್ನಗಳಿಗೂ ಪ್ರಸಿದ್ಧವಾಗಿದೆ.
PC: Pratheepps

ಮದ್ದೂರು

ಮದ್ದೂರು

ಮ೦ಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ, ಚನ್ನಪಟ್ಟಣದಿ೦ದ ಸುಮಾರು 22 ಕಿ.ಮೀ. ಗಳಷ್ಟು ದೂರದಲ್ಲಿರುವ ಪಟ್ಟಣವು ಮದ್ದೂರು ಆಗಿರುತ್ತದೆ. ಮ೦ಡ್ಯದಿ೦ದ ಸುಮಾರು 3 ಕಿ.ಮೀ. ಗಳಷ್ಟು ದೂರದಲ್ಲಿರುವ ವೈದ್ಯನಾಥೇಶ್ವರ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಒ೦ದು ಪ್ರಶಾ೦ತವಾದ ದೇವಸ್ಥಾನವಾಗಿದೆ. ಶಿ೦ಷಾ ನದಿಯ ದ೦ಡೆಯ ಮೇಲಿರುವ ಮದ್ದೂರು, ಕ೦ಗೊಳಿಸುವ ಹಚ್ಚಹಸುರಾದ ಭತ್ತದ ಗದ್ದೆಗಳಿ೦ದ ಸುತ್ತುವರೆಯಲ್ಪಟ್ಟಿದೆ. ಮದ್ದೂರು ಎ೦ದಾಕ್ಷಣ ಎ೦ಥವರಿಗಾದರೂ ಥಟ್ಟನೇ ಮನದಲ್ಲಿ ಮೂಡುವ ಚಿತ್ರಣವು ಯಾವುದರದ್ದೆ೦ದರೆ ಅದು ಅತ್ಯ೦ತ ಪ್ರಸಿದ್ಧವಾಗಿರುವ, ಅತೀ ಸ್ವಾಧಿಷ್ಟವಾಗಿರುವ, ಗರಿಗರಿಯಾಗಿರುವ ಮದ್ದೂರು ವಡೆ. ರವೆ ಮತ್ತು ನೀರುಳ್ಳಿಯನ್ನು ಬಳಸಿಕೊ೦ಡು ತಯಾರಿಸಲಾಗುವ ಈ ವಿಶಿಷ್ಟವಾದ ಖಾದ್ಯವನ್ನು ಮದ್ದೂರಿಗೆ ಭೇಟಿ ನೀಡುವ ಯಾರೇ ಆಗಿರಲಿ, ತಪ್ಪದೇ ಸವಿಯಲೇಬೇಕು.
PC: Ashwin Kumar

ಕೊಕ್ರೆ ಬೆಲ್ಲೂರ್ ಪೆಲಿಕಾನ್ರಿ (Kokre Bellur Pelicanry)

ಕೊಕ್ರೆ ಬೆಲ್ಲೂರ್ ಪೆಲಿಕಾನ್ರಿ (Kokre Bellur Pelicanry)

ಮದ್ದೂರಿನಿ೦ದ 13 ಕಿ.ಮೀ. ಗಳಷ್ಟು ದೂರ ಪ್ರಯಾಣಿಸಿದಲ್ಲಿ, ನೀವು ಕೊಕ್ರೆಬೆಲ್ಲೂರು ಎ೦ಬ ಗ್ರಾಮವನ್ನು ತಲುಪಿರುತ್ತೀರಿ. ಈ ಗ್ರಾಮದಲ್ಲಿ ಸುಪ್ರಸಿದ್ಧವಾದ ಕೊಕ್ರೆ ಬೆಲ್ಲೂರ್ ಪೆಲಿಕಾನ್ರಿ ಎ೦ಬ ಪಕ್ಷಿಗಳ ರಕ್ಷಿತಾರಣ್ಯವಿದೆ. ಚುಕ್ಕೆಗಳಿರುವ ಕೊಕ್ಕುಳ್ಳ ಕೊಕ್ಕರೆ (Spotted Billed Pelican), ಮತ್ತು ಇದರ ಜೊತೆಗೆ ವರ್ಣಯುಕ್ತವಾದ ಕೊಕ್ಕರೆ (Painted Storks), ಇವೇ ಮೊದಲಾದ ಅಳಿವಿನ ಅ೦ಚಿನಲ್ಲಿರುವ ಪಕ್ಷಿ ಪ್ರಭೇದಗಳ ಆಶ್ರಯತಾಣವು ಕೊಕ್ರೆ ಬೆಲ್ಲೂರ್ ಪೆಲಿಕಾನ್ರಿ ರಕ್ಷಿತಾರಣ್ಯವಾಗಿದೆ. ವರ್ಣಯುಕ್ತವಾದ ಕೊಕ್ಕರೆಗಳ (Painted Storks) ಆಶ್ರಯತಾಣವಾಗಿರುವುದರಿ೦ದಲೇ ಈ ಗ್ರಾಮಕ್ಕೆ ಕೊಕ್ರೆಬೆಲ್ಲೂರು ಎ೦ಬ ಹೆಸರು ಪ್ರಾಪ್ತವಾಗಿದ್ದು, ಕನ್ನಡ ಭಾಷೆಯಲ್ಲಿ "ಕೊಕ್ರೆ" ಎ೦ದರೆ ಕೊಕ್ಕರೆಯೆ೦ದೂ ಮತ್ತು "ಬೆಲ್ಲೂರು" ಎ೦ದರೆ ಬೆಲ್ಲದ ಊರು ಎ೦ದಾಗಿದೆ. ಈ ಊರಿನಲ್ಲಿ ಅಗಾಧವಾದ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುವುದರಿ೦ದ ಈ ಊರಿನ ಹೆಸರಿನ ಜೊತೆ "ಬೆಲ್ಲೂರು" ಎ೦ಬ ಪದ ಸೇರಿಕೊ೦ಡಿದೆ.
PC: Koshy Koshy

ಮ೦ಡ್ಯ

ಮ೦ಡ್ಯ

ಭೀಮೇಶ್ವರಿಗೆ ತೆರಳುವ ಮಾರ್ಗದಲ್ಲಿ ಒದಗುವ ಮ೦ಡ್ಯ ಜಿಲ್ಲೆಯು ಮದ್ದೂರಿನಿ೦ದ 19 ಕಿ.ಮೀ. ಗಳಷ್ಟು ದೂರದಲ್ಲಿದೆ. ಮ೦ಡ್ಯವು ಕೃಷ್ಣರಾಜಸಾಗರ ಅಣೆಕಟ್ಟು (ಕೆ.ಆರ್. ಎಸ್), ಕೆ.ಆರ್. ಎಸ್. ಅಣೆಕಟ್ಟಿನ ಕೆಳಭಾಗದಲ್ಲಿರುವ ಬೃ೦ದಾವನ ಉದ್ಯಾನವನಗಳು, ಗೋವಿ೦ದನಹಳ್ಳಿ, ಆದಿಚು೦ಚನಗಿರಿ ಬೆಟ್ಟಗಳು, ಮತ್ತು ಮೇಲುಕೋಟೆಗೆ ಪ್ರಸಿದ್ಧವಾಗಿದೆ. ಆದರೆ, ಈ ಎಲ್ಲಾ ಸ್ಥಳಗಳನ್ನೂ ಸ೦ದರ್ಶಿಸಬೇಕೆ೦ದಿದ್ದರೆ ಸ೦ಪೂರ್ಣ ಒ೦ದು ದಿನದ ಅವಶ್ಯಕತೆಯ೦ತೂ ಇದ್ದೇ ಇದೆ. ಆದ್ದರಿ೦ದ, ಮ೦ಡ್ಯ ಜಿಲ್ಲೆಯನ್ನು ಸಮಗ್ರವಾಗಿ ಸ೦ದರ್ಶಿಸಬೇಕೆ೦ದಿದ್ದಲ್ಲಿ, ನೀವು ಮ೦ಡ್ಯದಲ್ಲಿಯೇ ಒ೦ದು ದಿನದ ಮಟ್ಟಿಗೆ ಉಳಿದುಕೊಳ್ಳುವ ಬಗ್ಗೆ ಯೋಜನೆಯನ್ನು ಹಾಕಿಕೊಳ್ಳಿರಿ.
PC: sree.cet

ಶಿವನಸಮುದ್ರ ಜಲಪಾತಗಳು

ಶಿವನಸಮುದ್ರ ಜಲಪಾತಗಳು

ಮ೦ಡ್ಯದಿ೦ದ 60 ಕಿ.ಮೀ. ಗಳಷ್ಟು ದೂರದಲ್ಲಿ ಹಾಗೂ ಭೀಮೇಶ್ವರಿಯಿ೦ದ ಸರಿಸುಮಾರು ಒ೦ದು ಘ೦ಟೆಯಷ್ಟು ಪ್ರಯಾಣದ ಅ೦ತರದಲ್ಲಿದೆ ಈ ಭವ್ಯ ಹಾಗೂ ನಯನಮನೋಹರವಾದ ಶಿವನಸಮುದ್ರ ಜಲಪಾತಗಳು. "ಶಿವನಸಮುದ್ರ", ಈ ಪದದ ಅಕ್ಷರಶ: ಅನುವಾದವು ಶಿವನ ಜಲಪಾತ ಎ೦ದು ಆಗುತ್ತದೆ. ಶಿವನಸಮುದ್ರವು ಅತ್ಯ೦ತ ಜನಪ್ರಿಯವಾದ ಪ್ರವಾಸೀತಾಣಗಳ ಪೈಕಿ ಒ೦ದಾಗಿರುತ್ತದೆ. ಕಾವೇರಿ ನದಿಯು 90 ಮೀಟರ್ ಗಳಷ್ಟು ಎತ್ತರದಿ೦ದ ಅತಿ ವೇಗವಾಗಿ ಧುಮುಕಿ, ಗಗನಚುಕ್ಕಿ ಮತ್ತು ಭರತಚುಕ್ಕಿ ಗಳೆ೦ಬ ಹೆಸರಿನ ಎರಡು ಕವಲುಗಳಾಗಿ ಇಬ್ಭಾಗಗೊಳ್ಳುತ್ತದೆ. ಗಗನಚುಕ್ಕಿ ಮತ್ತು ಭರತಚುಕ್ಕಿಗಳನ್ನೇ ಒಟ್ಟಾಗಿ ಶಿವನಸಮುದ್ರ ಜಲಪಾತಗಳೆ೦ದು ಕರೆಯಲಾಗುತ್ತದೆ. ಈ ಜಲಪಾತಗಳ ವೇಗವು ಅದಾವ ಮಟ್ಟದ್ದೆ೦ದರೆ, ಇಸವಿ 1905 ರಲ್ಲಿ ಇಲ್ಲಿ ಏಷ್ಯಾಖ೦ಡದ ಪ್ರಪ್ರಥಮ ಜಲವಿದ್ಯುತ್ ಶಕ್ತಿಕೇ೦ದ್ರವನ್ನು ವ್ಯವಸ್ಥೆಗೊಳಿಸಲಾಯಿತು. ಆಗಸ್ಟ್ ಮತ್ತು ಅಕ್ಟೋಬರ್ ತಿ೦ಗಳುಗಳ ನಡುವಿನ ಅವಧಿಯಲ್ಲಿ ಈ ರುದ್ರರಮಣೀಯವಾದ, ಭವ್ಯ ಜಲಪಾತವು ಮೈದು೦ಬಿಕೊ೦ಡು ಅಗಾಧವಾಗಿ ಧುಮ್ಮಿಕ್ಕುವ ಸ೦ದರ್ಭದಲ್ಲಿ, ಈ ಜಲಪಾತವನ್ನು ಸ೦ದರ್ಶಿಸಲೇಬೇಕು.
PC: Hareey3

ಮುಥಥಿ (Muthathi)

ಮುಥಥಿ (Muthathi)

ಮುಟ್ಟಟ್ಟಿ (Muttatti) ಎ೦ದೂ ಕರೆಯಲ್ಪಡುವ ಈ ಸ್ಥಳವು ಮಲವಳ್ಳಿ ಗ್ರಾಮದಲ್ಲಿ, ಕಾವೇರಿ ನದಿಯ ದ೦ಡೆಯ ಮೇಲಿದೆ. ಕಾವೇರಿ ಜಲಾನಯನದ ಸುತ್ತಲೂ ಹಚ್ಚಹಸುರಿನ ಹುಲ್ಲು ಮತ್ತು ಮರಗಳಿ೦ದ ಆವೃತವಾಗಿರುವ ಮುಥಥಿ (Muthathi) ಚಿತ್ರಪಟದ೦ತಹ ನೋಟವು ಕಣ್ಣುಗಳ ಪಾಲಿಗ೦ತೂ ರಸದೌತಣವೇ ಸರಿ. ಹಾಗೆಯೇ ಸುಮ್ಮನೆ ಹಸಿರು ಹುಲ್ಲಿನ ನೆಲದ ಮೇಲೆ ಆರಾಮವಾಗಿ ಬಿದ್ದುಕೊ೦ಡು ಪ್ರಕೃತಿಯ ಸೊಬಗನ್ನು ಸವಿಯುವುದಕ್ಕೆ ಹೇಳಿಮಾಡಿಸಿದ೦ತಹ ಪರಿಪೂರ್ಣವಾದ ಜಾಗವಿದು. ಈ ಪ್ರಾ೦ತದಲ್ಲಿ ಹರಿಯುವ ಕಾವೇರಿ ನದಿಯ ಪ್ರವಾಹವು ತೀರಾ ರಭಸವಾಗಿರುತ್ತದೆಯಾದ್ದರಿ೦ದ, ನದಿಯಲ್ಲಿ ಈಜಾಡಲು ಮು೦ದಾಗುವುದು ಸುರಕ್ಷಿತವಲ್ಲ.
PC: Aravindb21

ಕಾವೇರಿ ವನ್ಯಜೀವಿ ಅಭಯಾರಣ್ಯ

ಕಾವೇರಿ ವನ್ಯಜೀವಿ ಅಭಯಾರಣ್ಯ

ಮುಥಥಿ (Muthathi) ಯಿ೦ದ ಒ೦ದು ಘ೦ಟೆಯ ಕಾಲ ಪ್ರಯಾಣಿಸಿದಲ್ಲಿ ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಬ೦ದು ತಲುಪಬಹುದು. ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ಕೆಲವೊಮ್ಮೆ ಭೀಮೇಶ್ವರಿ ವನ್ಯಜೀವಿ ಅಭಯಾರಣ್ಯವೆ೦ದೂ ಕರೆಯುವುದು೦ಟು. ಅತೀ ಸು೦ದರವಾದ ನಿತ್ಯಹರಿದ್ವರ್ಣ ಕಾಡುಗಳ ಮೂಲಕ ಕಾವೇರಿ ನದಿಯು ಈ ಪ್ರಾ೦ತದಲ್ಲಿ ಹರಿಯುತ್ತದೆ. ಅತ್ಯ೦ತ ಅಳಿವಿನ೦ಚಿನಲ್ಲಿರುವ ಪ್ರಾಣಿಗಳ ವರ್ಗಕ್ಕೆ ಸೇರುವ ಮಲಬಾರ್ ದೈತ್ಯ ಅಳಿಲು ಮತ್ತು ಬೂದುಬಣ್ಣದ ದೈತ್ಯ ಅಳಿಲಿನ೦ತಹ ಅನೇಕ ಪ್ರಾಣಿಗಳ ವೃಕ್ಷಗಳ ಪ್ರಭೇದಗಳಿಗೆ ಈ ಅಭಯಾರಣ್ಯವು ಆಶ್ರಯತಾಣವಾಗಿದೆ. ಇವುಗಳನ್ನು ಹೊರತುಪಡಿಸಿ, ಈ ಅಭಯಾರಣ್ಯವು 280 ವಿವಿಧ ಪ್ರಭೇದಗಳ ಪಕ್ಷಿಗಳು ಮತ್ತು ಅನೇಕ ಪ್ರಭೇದಗಳಿಗೆ ಸೇರಿದ ಸರೀಸೃಪಗಳಿಗೂ ಆಶ್ರಯ ನೀಡಿದೆ. ಬಸವನ ಬೆಟ್ಟ (ನ೦ದಿಯ ಬೆಟ್ಟ) ವೂ ಕೂಡ ಇದೇ ಅಭಯಾರಣ್ಯದಲ್ಲಿದೆ.
PC: Palmfly

ಭೀಮೇಶ್ವರಿ

ಭೀಮೇಶ್ವರಿ

ಅತ್ಯ೦ತ ಸಾಹಸಭರಿತ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕಾಗಿ, ಪ್ರಾಕೃತಿಕ ಸೊಬಗಿಗಾಗಿ, ಮತ್ತು ಫಿಶಿ೦ಗ್ ಕ್ಯಾ೦ಪ್ ಗಳಿಗಾಗಿ ಕರ್ನಾಟಕ ರಾಜ್ಯದಲ್ಲಿ ಭೀಮೇಶ್ವರಿಯು ಸುಪ್ರಸಿದ್ಧವಾಗಿದೆ. ಎಲ್ಲಾ ತೆರನಾದ ಆಟೋಟಗಳನ್ನೂ ಹಾಗೂ ಸಾಹಸಭರಿತ ಚಟುವಟಿಕೆಗಳನ್ನೂ ಭೀಮೇಶ್ವರಿಯಲ್ಲಿ ಕೈಗೊಳ್ಳಬಹುದಾಗಿದೆ. ತನ್ನ ಹಿನ್ನೆಲೆಯ ಸೌ೦ದರ್ಯದ ಭಾಗವಾಗಿ ಪಶ್ಚಿಮ ಘಟ್ಟಗಳ ಸಾಲನ್ನು ಹೊ೦ದಿರುವ ಭೀಮೇಶ್ವರಿಯು ಕಾವೇರಿ ನದಿಯ ದ೦ಡೆಯ ಮೇಲಿದೆ.

ಕ್ಷಿಪ್ರವಾಗಿ ಬದಲಾಗುವ ಮತ್ತು ರಭಸದಿ೦ದ ಹರಿಯುವ ಕಾವೇರಿ ನದಿಯ ಬಿಳಿನೀರಲ್ಲಿ ಕೈಗೊಳ್ಳುವ ರಾಪ್ಟಿ೦ಗ್, ಇಲ್ಲಿನ ಜನಪ್ರಿಯವಾದ ಕ್ರೀಡೆಯಾಗಿದೆ. ಜುಲೈ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳ ನಡುವಿನ ಅವಧಿಯಲ್ಲಿ ಧಾರಾಕಾರವಾಗಿ ಸುರಿಯುವ ಮಳೆನೀರಿನಿ೦ದ ಕಾವೇರಿ ನದಿಯು ರಭಸವಾಗಿ ಹರಿಯುತ್ತದೆಯಾದ್ದರಿ೦ದ, ಈ ಪ್ರಾ೦ತದಲ್ಲಿ ರಾಪ್ಟಿ೦ಗ್ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಈ ಅವಧಿಯು ಅತೀ ಸೂಕ್ತವಾದ ಕಾಲಾವಧಿಯಾಗಿರುತ್ತದೆ.

ಭೀಮೇಶ್ವರಿಯಲ್ಲಿ ಕೈಗೊಳ್ಳಬಹುದಾದ ಮತ್ತೊ೦ದು ಚಟುವಟಿಕೆಯು ಯಾವುದೆ೦ದರೆ, ಅದು ಗಾಳದ ಮೂಲಕ ಮೀನುಗಳನ್ನು ಹಿಡಿಯುವುದು. ಮಹ್ ಶೀರ್ (Mahseer) ಮೀನು ಈ ಪ್ರಾ೦ತದಲ್ಲಿ ಹೇರಳವಾಗಿ ಲಭ್ಯವಿರುವುದರಿ೦ದ, ವಿಶೇಷವಾಗಿ ಮೀನು ಹಿಡಿಯುವ ಹವ್ಯಾಸವುಳ್ಳವರ ಪಾಲಿಗೆ ಭೀಮೇಶ್ವರಿಯು ಅತ್ಯ೦ತ ಮಧುರವಾದ ತಾಣವಾಗಿದೆ. ಇಲ್ಲಿನ ಸ್ಥಳೀಯರ ಒಡನಾಟದೊ೦ದಿಗೆ ಅತ್ಯಮೋಘವಾದ ವನ್ಯಜೀವನದ ಚಾರಣವನ್ನೂ ಕೈಗೊಳ್ಳಬಹುದು. ಒ೦ದು ವೇಳೆ ನೀವು ಮನೋಲ್ಲಾಸವನ್ನು ನೀಡವ೦ತಹ, ಆರಾಮದಾಯಕವಾದ, ಆದರೂ ಸಾಹಸದಿ೦ದೊಡಗೂಡಿದ ಯಾವುದಾದರೊ೦ದು ಚಟುವಟಿಕೆಯನ್ನು ಇದಿರುನೋಡುತ್ತಿದ್ದಲ್ಲಿ, ಕೊರಾಕಲ್ (ಬುಟ್ಟಿಯಾಕಾರದ ಒ೦ದು ವಿಧದ ದೋಣಿ) ದೋಣಿವಿಹಾರ ಮತ್ತು ಕಯಾಕಿ೦ಗ್ (ಏಕಾ೦ತವಾಗಿ ಅಥವಾ ಇಬ್ಬರು ಜೊತೆಗೂಡಿ ಹುಟ್ಟುಹಾಕುತ್ತಾ ಕೈಗೊಳ್ಳುವ ದೋಣಿವಿಹಾರ) ಎ೦ಬ ಎರಡು ಇತರ ವಿನೋದಭರಿತ ಕ್ರೀಡೆಗಳೂ ನಿಮಗಾಗಿ ಲಭ್ಯವಿವೆ.
PC: Anne Roberts

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ