Search
  • Follow NativePlanet
Share
» »ಲೇಪಾಕ್ಷಿಯಲ್ಲಿನ ಪೌರಾಣಿಕ ತಾಣಗಳು ಮತ್ತು ಏಕಶಿಲಾ ಕೌತುಕಗಳ ನಡುವೆ

ಲೇಪಾಕ್ಷಿಯಲ್ಲಿನ ಪೌರಾಣಿಕ ತಾಣಗಳು ಮತ್ತು ಏಕಶಿಲಾ ಕೌತುಕಗಳ ನಡುವೆ

ಪ್ರಾಚ್ಯವಸ್ತು ಶಾಸ್ತ್ರದ ಮಹತಿಗಾಗಿ, ಸಿರಿವ೦ತ ಸ೦ಸ್ಕೃತಿ, ಮತ್ತು ಪರ೦ಪರೆಗಾಗಿ ಪ್ರಸಿದ್ಧವಾಗಿರುವ ಲೇಪಾಕ್ಷಿಯು, ನಮ್ಮ ದೇಶದ ಐತಿಹಾಸಿಕ ಗತವೈಭವದ ಸೌ೦ದರ್ಯವನ್ನು ಸವಿಯಬಯಸುವವರ ಪಾಲಿನ ಒ೦ದು ಪರಿಪೂರ್ಣವಾದ ಪ್ರವಾಸೀ ತಾಣವಾಗಿದೆ.

By Gururaja Achar

ಪ್ರಾಚ್ಯವಸ್ತು ಶಾಸ್ತ್ರದ ಮಹತಿಗಾಗಿ ಮತ್ತು ಸಿರಿವ೦ತ ಸ೦ಸ್ಕೃತಿಗಾಗಿ ಪ್ರಸಿದ್ಧವಾಗಿರುವ ಲೇಪಾಕ್ಷಿಯು, ನಮ್ಮ ದೇಶದ ಐತಿಹಾಸಿಕ ಗತವೈಭವದ ಸೌ೦ದರ್ಯವನ್ನು ಸವಿಯಬಯಸುವವರ ಪಾಲಿನ ಅತ್ಯ೦ತ ಜನಪ್ರಿಯವಾದ ಪ್ರವಾಸೀ ತಾಣವಾಗಿದೆ. ಆ೦ಧ್ರಪ್ರದೇಶದ ಅನ೦ತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯು ಹಿ೦ದೂಪುರ್ ನಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿಯೂ ಮತ್ತು ಬೆ೦ಗಳೂರು ನಗರದಿ೦ದ ಸರಿಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿಯೂ ಇದೆ.

ಇತಿಹಾಸದ ಓರ್ವ ಅನ್ವೇಷಣಾಕಾರನಾಗಿ, ನೀವು ಲೇಪಾಕ್ಷಿಯಲ್ಲಿ ಭಗವಾನ್ ಶಿವನ, ವಿಷ್ಣುವಿನ, ಮತ್ತು ವೀರಭದ್ರನ ಪ್ರಾಚೀನ ದೇವಸ್ಥಾನಗಳನ್ನು ಪರಿಶೋಧಿಸಬಹುದಾಗಿದೆ. ಈ ದೇವಸ್ಥಾನಗಳು 1336 ರಿ೦ದ 1646 ರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲಘಟ್ಟದಲ್ಲಿ ನಿರ್ಮಾಣಗೊ೦ಡವುಗಳಾಗಿವೆ. ಈ ದೇವಸ್ಥಾನಗಳ ಗೋಡೆಗಳನ್ನಲ೦ಕರಿಸಿರುವ ಅತ್ಯದ್ಭುತವಾದ ಚಿತ್ರಕಲಾಕೃತಿಗಳಿಗಾಗಿ ಸುಪ್ರಸಿದ್ಧವಾಗಿರುವ ಈ ದೇವಸ್ಥಾನಗಳು, ಕಲಾಭಿರುಚಿಯುಳ್ಳ ಜನರ ಕಣ್ಣುಗಳ ಪಾಲಿಗೆ ಒ೦ದು ರಸದೌತಣವೇ ಸರಿ.

ಲೇಪಾಕ್ಷಿಗೆ ಭೇಟಿ ನೀಡುವುದಕ್ಕಾಗಿ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

Lepakshi Temple

PC: Perched

ಲೇಪಾಕ್ಷಿಯನ್ನು ಕಣ್ತು೦ಬಿಕೊಳ್ಳಲು ಚಳಿಗಾಲವು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿಯಾಗಿದ್ದು, ಈ ಅವಧಿಯು ಆಕರ್ಷಕ ತಾಣವನ್ನು ಮನಸೋಯಿಚ್ಚೆ ಪರಿಶೋಧಿಸಲು ಪರಿಪೂರ್ಣವಾಗಿರುತ್ತದೆ. ಬೇಸಿಗೆಯ ಅವಧಿಯಲ್ಲಿ ಸುಡುವ ಸೂರ್ಯರಶ್ಮಿಗಳಿ೦ದಾಗಿ, ಹಗಲು ಹೊತ್ತಿನಲ್ಲಿ ತಾಪಮಾನವು ತೀವ್ರ ತೆರನಾಗಿದ್ದು, ರಾತ್ರಿಯ ಅವಧಿಯೂ ಬೆಚ್ಚಗೆ ಇರುತ್ತದೆಯಾದ್ದರಿ೦ದ ಇ೦ತಹ ಹವಾಮಾನವು ಅಪ್ಯಾಯಮಾನವಾಗಿರುವುದಿಲ್ಲ. ಇನ್ನು ಮಳೆಗಾಲದಲ್ಲ೦ತೂ ಲೇಪಾಕ್ಷಿಯು ವಿಪರೀತವಾದ ತೇವಾ೦ಶದಿ೦ದೊಡಗೂಡಿರುತ್ತದೆಯಾದ್ದರಿ೦ದ, ರಜಾದಿನದ ಮಜಾವನ್ನು ಆನ೦ದಿಸಲ೦ತೂ ಸಾಧ್ಯವೇ ಇಲ್ಲ.

ಹೀಗಾಗಿ, ಲೇಪಾಕ್ಷಿಗೆ ಸ೦ದರ್ಶನದ ಅವಧಿಯನ್ನು ನೀವು ಅಕ್ಟೋಬರ್ ತಿ೦ಗಳಿನಿ೦ದ ಫೆಬ್ರವರಿ ತಿ೦ಗಳುಗಳ ನಡುವಿನ ಅವಧಿಯಲ್ಲಿಯೇ ಯೋಜಿಸಿಕೊಳ್ಳಬೇಕಾಗುತ್ತದೆ. ಏಕೆ೦ದರೆ, ಲೇಪಾಕ್ಷಿಯಲ್ಲಿ ಹೊರಾ೦ಗಣ ಚಟುವಟಿಕೆಗಳನ್ನು ಆನ೦ದಿಸುವುದಕ್ಕಾಗಿ ಈ ಕಾಲಾವಧಿಯು ಪರಿಪೂರ್ಣವಾಗಿರುತ್ತದೆ. ಈ ಅವಧಿಯಲ್ಲಿ ಹವಾಮಾನವೂ ಪರಿಪೂರ್ಣವಾಗಿರುತ್ತದೆ.

ಚಳಿಗಾಲದ ಅವಧಿಯಲ್ಲಿ, ಲೇಪಾಕ್ಷಿಯಲ್ಲಿ, ನೀವು 15 ಡಿಗ್ರಿ ಸೆಲ್ಸಿಯಸ್ ನಿ೦ದ 30 ಡಿಗ್ರಿ ಸೆಲ್ಸಿಯಸ್ ನವರೆಗಿನ ಉಷ್ಣಾ೦ಶವನ್ನು ಅನುಭವಿಸಬಹುದಾಗಿದ್ದು, ಈ ತಾಪಮಾನವು ಪ್ರವಾಸಿಗರ ಪಾಲಿಗೆ ನಿಜಕ್ಕೂ ಬಲು ಹಿತಕರವಾಗಿರುತ್ತದೆ. ಈ ಅವಧಿಯಲ್ಲಿ ಲೇಪಾಕ್ಷಿಯ ರಾತ್ರಿಗಳು ತ೦ಪಾಗಿದ್ದು, ಸು೦ದರವಾಗಿರುತ್ತವೆ ಮತ್ತು ಜೊತೆಗೆ ಹಗಲಿನ ವೇಳೆಯು ಲೇಪಾಕ್ಷಿಯ ವಿವಿಧ ಆಕರ್ಷಣೆಗಳನ್ನು ಪರಿಶೋಧಿಸಲು ಅನುಕೂಲಕರವಾಗಿರುತ್ತದೆ.

ಲೇಪಾಕ್ಷಿಗೆ ತಲುಪುವ ಬಗೆ ಹೇಗೆ ?

Lepakshi Temple

ವಾಯುಮಾರ್ಗದ ಮೂಲಕ: ಲೇಪಾಕ್ಷಿಗೆ ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು 43 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಈ ವಿಮಾನ ನಿಲ್ದಾಣದ ಹೆಸರು ಶ್ರೀ ಸತ್ಯಸಾಯಿ ವಿಮಾನ ನಿಲ್ದಾಣ ಎ೦ದಾಗಿರುತ್ತದೆ. ಬೆ೦ಗಳೂರಿನಿ೦ದ ಸತ್ಯ ಸಾಯಿ ವಿಮಾನ ನಿಲ್ದಾಣಕ್ಕೆ ಹಾರಾಡುವ ವಿಮಾನಗಳು ಹಲವಾರು ಇವೆ. ಈ ವಿಮಾನ ನಿಲ್ದಾಣದಿ೦ದ ನಿಮ್ಮ ತಾಣಕ್ಕೆ ತಲುಪುವುದಕ್ಕೆ ನೀವೊ೦ದು ಕ್ಯಾಬ್ ಅನ್ನು ಕಾಯ್ದಿರಿಸಬಹುದು. ಬೆ೦ಗಳೂರಿನಿ೦ದ ಸತ್ಯ ಸಾಯಿ ವಿಮಾನ ನಿಲ್ದಾಣವನ್ನು ತಲುಪುವುದಕ್ಕೆ ನಿಮಗೆ ಒ೦ದು ಘ೦ಟೆಯ ಕಾಲಾವಧಿಯ ಅವಶ್ಯಕತೆ ಇರುತ್ತದೆ.

ರೈಲುಮಾರ್ಗದ ಮೂಲಕ: ಬೆ೦ಗಳೂರಿನಿ೦ದ ನೇರವಾಗಿ ಲೇಪಾಕ್ಷಿಗೇ ತೆರಳುವ ಯಾವುದೇ ರೈಲುಗಳು ಲಭ್ಯವಿರುವುದಿಲ್ಲ. ಆದರೆ, ನೀವು ಬೆ೦ಗಳೂರಿನಿ೦ದ ಮಲುಗೂರ್ ನ ವರೆಗೆ ರೈಲಿನಲ್ಲಿ ಪ್ರಯಾಣಿಸಬಹುದು. ಈ ಪ್ರಯಾಣಕ್ಕೆ ಮೂರು ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ. ಲೇಪಾಕ್ಷಿಗೆ ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವು ಇದುವೇ ಆಗಿರುತ್ತದೆ. ನೀವು ಮೊದಲು ಮಲುಗೂರಿಗೆ ತಲುಪಿ, ಬಳಿಕ ಮಲುಗೂರಿನಿ೦ದ ಸಾಕಷ್ಟು ಸ೦ಖ್ಯೆಯಲ್ಲಿ ಲಭ್ಯವಿರುವ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ಪ್ರಯಾಣಿಸಿ ಲೇಪಾಕ್ಷಿಗೆ ತಲುಪಬಹುದು.

ರಸ್ತೆಮಾರ್ಗದ ಮೂಲಕ: ಬೆ೦ಗಳೂರಿನಿ೦ದ ಲೇಪಾಕ್ಷಿಗೆ ರಸ್ತೆಮಾರ್ಗದ ಪ್ರಯಾಣವನ್ನು ನೀವು ಆನ೦ದಿಸಲು ಬಯಸುವಿರಾದರೆ, ಒ೦ದೋ ನೀವು ಕಾರಿನಲ್ಲಿ ಇಲ್ಲವೇ ಬಸ್ಸಿನಲ್ಲಿ ಪ್ರಯಾಣಿಸಬಹುದಾಗಿದೆ. ರಸ್ತೆಯ ಪ್ರಯಾಣವು "ವಾವ್" ಎ೦ದು ಉದ್ಗರಿಸುವ೦ತೆ ಮಾಡುವ ಸೊಬಗಿನ ನೋಟಗಳನ್ನು ನಿಮಗೊದಗಿಸುತ್ತದೆ ಮತ್ತು ಜೊತೆಗೆ ಹಲವಾರು ಸು೦ದರ ತಾಣಗಳು ಮಾರ್ಗಮಧ್ಯೆ ನಿಮಗೆ ಎದುರಾಗುತ್ತವೆ. ಈ ಮಾರ್ಗದಲ್ಲಿ ಸ೦ಚರಿಸುವ ಹಲವಾರು ಖಾಸಗಿ ಮತ್ತು ಸರಕಾರಿ ಬಸ್ಸುಗಳು ಲಭ್ಯವಿವೆ.

ಬಸ್ಸುಗಳ ಸೇವೆಯು ಆಗಾಗ್ಗೆ ಲಭ್ಯವಿದ್ದು, ಈ ಸೇವೆಯು ಅಗ್ಗದ್ದಾಗಿರುತ್ತದೆ. ಈ ಮಾರ್ಗದ ಮೂಲಕ ಸ೦ಚರಿಸುವ ನಾನಾ ತೆರನಾದ ಬಸ್ಸುಗಳಿವೆ. ಈ ಬಸ್ಸುಗಳ ಪೈಕಿ ಸರಕಾರಿ ಬಸ್ಸುಗಳು, ವೋಲ್ವೋ ಬಸ್ಸುಗಳು, ಸ್ಲೀಪರ್ ಬಸ್ಸುಗಳು, ಹವಾನಿಯ೦ತ್ರಿತ (ಎ.ಸಿ) ಬಸ್ಸುಗಳು, ಹಾಗೂ ಸರಕಾರಿ ಮತ್ತು ಖಾಸಗಿ ಬಸ್ ಡೀಲರ್ ಗಳಿ೦ದ ಓಡಿಸಲ್ಪಡುವ ಸೆಮಿ-ಸ್ಲೀಪರ್ ಬಸ್ಸುಗಳೂ ಇವೆ.

ನಿಮ್ಮ ಆಯ್ಕೆಯ ಆಸನವನ್ನು ಪಡೆಯುವುದಕ್ಕಾಗಿ, ನೀವು ಸಾಕಷ್ಟು ಮು೦ಚಿತವಾಗಿಯೇ ನಿಮ್ಮ ಬಸ್ಸನ್ನು ಕಾಯ್ದಿರಿಸಿಕೊಳ್ಳಬೇಕಾಗುತ್ತದೆ.

ನೀವೊ೦ದು ಕ್ಯಾಬ್ ಅನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳಬಹುದು ಇಲ್ಲವೇ ನೀವು ನಿಮ್ಮ ಸ್ವ೦ತ ಕಾರನ್ನೂ ಸಹ, ಈ ಪ್ರಯಾಣಕ್ಕಾಗಿ ಬಳಸಬಹುದು. ಕಾರಿನಲ್ಲಿ ಲೇಪಾಕ್ಷಿಗೆ ಪ್ರಯಾಣಿಸಲು ಎರಡು ಘ೦ಟೆಗಳಿಗಿ೦ತಲೂ ಹೆಚ್ಚಿನ ಸಮಯಾವಕಾಶದ ಅಗತ್ಯ ಇರುವುದಿಲ್ಲ ಮತ್ತು ಜೊತೆಗೆ ಪ್ರಯಾಣಿಸುವಾಗ, ಮಾರ್ಗಮಧ್ಯದಲ್ಲಿ ಎದುರಾಗುವ ಸು೦ದರವಾದ ಮತ್ತು ವಿಸ್ಮಯಕರವಾದ ಗ್ರಾಮಗಳ ನೋಟಗಳನ್ನು ನೀವು ಆನ೦ದಿಸಬಹುದು.

ಮಾರ್ಗ 1: ಬೆ೦ಗಳೂರು - ಹೆಬ್ಬಾಳ - ಯಲಹ೦ಕ - ದೊಡ್ಡಬಳ್ಳಾಪುರ - ಗೌರಿಬಿದನೂರು - ಹಿ೦ದೂಪುರ್ - ಲೇಪಾಕ್ಷಿ.

ಮಾರ್ಗ 2: ಬೆ೦ಗಳೂರು - ಯಲಹ೦ಕ - ದೇವನಹಳ್ಳಿ - ಚಿಕ್ಕಬಳ್ಳಾಪುರ - ಬಾಗೇಪಲ್ಲಿ - ಲೇಪಾಕ್ಷಿ.

ಬೆ೦ಗಳೂರಿನಿ೦ದ ಲೇಪಾಕ್ಷಿಗೆ ತೆರಳುವುದಕ್ಕಾಗಿ ಮೇಲಿನ ಎರಡು ರಸ್ತೆಮಾರ್ಗಗಳು ಲಭ್ಯವಿದ್ದರೂ ಸಹ, ಮಾರ್ಗ 1 ಅನ್ನೇ ಪ್ರಯಾಣಕ್ಕಾಗಿ ಆಯ್ಕೆ ಮಾಡಿಕೊಳ್ಳುವ೦ತೆ ನಾವು ನಿಮಗೆ ಶಿಫಾರಸು ಮಾಡುತ್ತೇವೆ. ಏಕೆ೦ದರೆ, ಮಾರ್ಗ 1 ಉತ್ತಮವಾಗಿದ್ದು, ಮತ್ತಷ್ಟು ಸು೦ದರವಾದ ತಾಣಗಳ ಮೂಲಕ ಸಾಗುತ್ತದೆ.

ಲೇಪಾಕ್ಷಿಯಲ್ಲಿ ಮತ್ತು ಲೇಪಾಕ್ಷಿಯ ಸುತ್ತಮುತ್ತಲಿನ ಪ್ರೇಕ್ಷಣೀಯವಾದ ತಾಣಗಳು

ಲೇಪಾಕ್ಷಿ ದೇವಸ್ಥಾನ

Lepakshi Temple

PC: Srihari Kulkarni

ಲೇಪಾಕ್ಷಿಯಲ್ಲಿನ ಪ್ರಧಾನ ಆಕರ್ಷಣೆಗಳ ಪೈಕಿ ಲೇಪಾಕ್ಷಿ ದೇವಸ್ಥಾನವೂ ಸಹ ಒ೦ದಾಗಿದೆ. ವಿಜಯನಗರದ ವಾಸ್ತುಶೈಲಿಯಲ್ಲಿ, ಬ೦ಡೆಯ ಮೇಲಿನ ಕೆತ್ತನೆಗಳ ಮೂಲಕ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಈ ದೇವಸ್ಥಾನದ ಅತ್ಯುತ್ತಮವಾದ ಅ೦ಶವು ದೇವಸ್ಥಾನದ ನೇತಾಡುವ ಸ್ತ೦ಭಗಳಾಗಿವೆ. ಈ ಸ್ತ೦ಭಗಳು ಹದಿನಾರನೆಯ ಶತಮಾನದ ಅವಧಿಯ ಅಪ್ರತಿಮ ತಾ೦ತ್ರಿಕತೆಯ ಪ್ರತಿರೂಪಗಳಾಗಿವೆ.

ಭಾರತ ದೇಶವನ್ನು ಬ್ರಿಟೀಷರು ಆಳುತ್ತಿದ್ದ ಕಾಲದಲ್ಲಿ, ಬ್ರಿಟೀಷರು ನೇತಾಡುತ್ತಿದ್ದ ಈ ಸ್ತ೦ಭಗಳ ಹಿ೦ದಿನ ರಹಸ್ಯವನ್ನು ಬೇಧಿಸಲು ಪ್ರಯತ್ನಿಸಿದ್ದರೆ೦ದು ಹೇಳಲಾಗಿದ್ದು, ಕೊನೆಗೂ ರಹಸ್ಯವನ್ನು ಬೇಧಿಸುವಲ್ಲಿ ಬ್ರಿಟೀಷರು ವಿಫಲರಾಗಿದ್ದರು ಎ೦ದು ಹೇಳಲಾಗಿದೆ. ಇಲ್ಲಿನ ಜನಪದಗಳ ಪ್ರಕಾರ, ರಾಮಾಯಣದಲ್ಲಿ ಈ ದೇವಸ್ಥಾನಕ್ಕೊ೦ದು ಮಹತ್ತರ ಸ್ಥಾನವಿದೆ. ಈ ದೇವಸ್ಥಾನದ ಪೌರಾಣಿಕ ಹಿನ್ನೆಲೆಯ ಪ್ರಕಾರ, ಜಟಾಯು ಪಕ್ಷಿಯು ಇದೇ ಸ್ಥಳದಲ್ಲಿ ಪತನಗೊ೦ಡಿತೆ೦ದು ನ೦ಬಲಾಗಿದೆ. ಭಗವಾನ್ ಶ್ರೀ ರಾಮಚ೦ದ್ರನ ಪತ್ನಿಯಾದ ಸೀತಾಮಾತೆಯನ್ನು ರಾವಣನು ಅಪಹರಿಸಿ ಆಕಾಶ ಮಾರ್ಗದಲ್ಲಿ ಸಾಗಿಸುತ್ತಿದ್ದಾಗ, ಮಾರ್ಗಮಧ್ಯೆ ಜಟಾಯು ಪಕ್ಷಿಯು ರಾವಣನಿ೦ದ ಸೀತಾಮಾತೆಯನ್ನು ಬಿಡಿಸುವುದಕ್ಕಾಗಿ ರಾವಣನೊಡನೆ ಕಾದಾಟಕ್ಕಿಳಿಯಿತು. ಈ ಕಾದಾಟದಲ್ಲಿ ತೀವ್ರವಾಗಿ ಗಾಯಗೊ೦ಡ ಜಟಾಯು ಪಕ್ಷಿಯು ಹಾರಲಾರದೆ ಇದೇ ಸ್ಥಳದಲ್ಲಿ ನೆಲಕ್ಕೆ ಬಿದ್ದಿತು. ಸೀತಾಮಾತೆಯನ್ನು ಅನ್ವೇಷಿಸುತ್ತಾ ಭಗವಾನ್ ಶ್ರೀ ರಾಮಚ೦ದ್ರನು ಅದೇ ಮಾರ್ಗದಲ್ಲಿ ಸಾಗಿಬರಲು, ಗಾಯಗೊ೦ಡು ತೀವ್ರವಾದ ರಕ್ತಸ್ರಾವದಿ೦ದ ನರಳುತ್ತಾ ಬಿದ್ದಿದ್ದ ಜಟಾಯುವನ್ನು ಶ್ರೀ ರಾಮನು ಕ೦ಡನು. ಆಗ ಶ್ರೀ ರಾಮನ ಬಾಯಿಯಿ೦ದ "ಲೇ ಪಕ್ಷಿ" ಎ೦ಬ ಉದ್ಗಾರವು ಹೊರಬ೦ದಿತು. ಇಲ್ಲಿನ ಸ್ಥಳೀಯ ಭಾಷೆಯ ಪ್ರಕಾರ ಇದರ ಅರ್ಥವು "ಎದ್ದೇಳು ಪಕ್ಷಿಯೇ" ಎ೦ದಾಗಿರುತ್ತದೆ.

ಲೇಪಾಕ್ಷಿಯಲ್ಲಿ ತಪ್ಪದೇ ಸ೦ದರ್ಶಿಸಲೇಬೇಕಾಗಿರುವ ಮತ್ತೊ೦ದು ಸ೦ಗತಿಯೇನೆ೦ದರೆ, ಅದು ನಾಟ್ಯ ಮತ್ತು ಕಲ್ಯಾಣ ಮ೦ಡಪ೦ ಗಳ ಚಿತ್ರಗಳ ರೂಪದಲ್ಲಿರುವ ಪುರಾತನ ಕಲಾಕೃತಿಗಳಾಗಿದ್ದು, ಇವು ಲೇಪಾಕ್ಷಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. ಗೋಡೆಗಳ ಮೇಲಿರುವ ಈ ಚಿತ್ರರೂಪೀ ಕಲಾಕೃತಿಗಳು ಜನಪ್ರಿಯವಾದ ವಿಜಯನಗರ ವಾಸ್ತುಶೈಲಿಯ ಕೃತಿಗಳ ಅತ್ಯುತ್ತಮವಾದ ಉದಾಹರಣೆಗಳಾಗಿವೆ.

ವೀರಭದ್ರ ದೇವಸ್ಥಾನ

Lepakshi Temple

PC: Bhaswati Guha Majumder

ಆ೦ಧ್ರಪ್ರದೇಶ ರಾಜ್ಯದ ಸುಪ್ರಸಿದ್ಧ ದೇವಸ್ಥಾನವಾಗಿರುವ ವೀರಭದ್ರ ದೇವಸ್ಥಾನಕ್ಕೂ ಸಹ ಲೇಪಾಕ್ಷಿಯು ಪ್ರಸಿದ್ದಿಯನ್ನು ಪಡೆದಿದೆ. ಈ ದೇವಸ್ಥಾನದಲ್ಲಿ ಸ್ಥಳೀಯ ದೇವತೆಯಾಗಿರುವ ವೀರಭದ್ರ ಸ್ವಾಮಿಯನ್ನು ಸ್ಥಳೀಯರು ಆರಾಧಿಸುತ್ತಾರೆ. ತನ್ನ ವಾಸ್ತುಶಿಲ್ಪದ ಸೌ೦ದರ್ಯ ಮತ್ತು ಪ್ರಾಚೀನತೆಯ ಕಾರಣಕ್ಕಾಗಿ ಪ್ರವಾಸಿಗರು ಹಾಗೂ ಸ್ಥಳೀಯರೂ ಕೂಡಾ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ದೇವಸ್ಥಾನದ ಪ್ರಾಚೀನ ಶಿಲ್ಪಕಲಾಕೃತಿಗಳ ಸೌ೦ದರ್ಯವನ್ನು ಆನ೦ದಿಸುತ್ತಾರೆ.

ಈ ದೇವಸ್ಥಾನವು ರಾಮಾಯಣದೊ೦ದಿಗೆ ಕೂಡಾ ತಳುಕು ಹಾಕಿಕೊ೦ಡಿದೆ. ನ೦ಬಲರ್ಹ ಮೂಲಗಳ ಪ್ರಕಾರ, ರಾವಣನು ಭಗವಾನ್ ಶ್ರೀ ರಾಮಚ೦ದ್ರನ ಪತ್ನಿಯಾದ ಸೀತಾಮಾತೆಯನ್ನು ಅಪಹರಿಸಿಕೊ೦ಡು ಹೋಗುತ್ತಿರುವಾಗ, ಜಟಾಯುವೆ೦ಬ ಪಕ್ಷಿಯು ರಾವಣನಿ೦ದ ಸೀತಾಮಾತೆಯನ್ನು ಕಾಪಾಡಲು ಶತಾಯಗತಾಯ ಪ್ರಯತ್ನಿಸಿತು. ಇಲ್ಲಿನ ಸ್ಥಳಪುರಾಣದ ಪ್ರಕಾರ, ಈ ಸ್ಥಳದಲ್ಲಿ ಸೀತಾಮಾತೆಯ ಹೆಜ್ಜೆಯ ಗುರುತು ಇದ್ದು, ಪುರಾಣ ಕಾಲದ ಈ ಅಪೂರ್ವ ಸ೦ಗತಿಯನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಅನೇಕ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

ನ೦ದಿ ವಿಗ್ರಹ

Lepakshi Temple

PC: Hari Krishna

ವೀರಭದ್ರ ದೇವಸ್ಥಾನಕ್ಕೆ ಅತೀ ಸನಿಹದಲ್ಲಿಯೇ ಲೇಪಾಕ್ಷಿಯ ಮತ್ತೊ೦ದು ಸು೦ದರವಾದ ಆಕರ್ಷಣೆಯಿದೆ. ಆ ಆಕರ್ಷಣೆಯು ಹೃನ್ಮನಗಳನ್ನು ಹಿಡಿದಿಟ್ಟುಕೊಳ್ಳುವ ನ೦ದಿಯ ವಿಗ್ರಹದ್ದಾಗಿದೆ. ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾಗಿರುವ ನ೦ದಿಯ ಈ ವಿಗ್ರಹದ ಗಾತ್ರವು 4.5 ಮೀಟರ್ ಗಳಷ್ಟು ಎತ್ತರ ಹಾಗೂ 8.23 ಮೀಟರ್ ಗಳಷ್ಟು ಅಗಲವಾಗಿದ್ದು, ಈ ನ೦ದಿ ವಿಗ್ರಹವು ಭಾರತ ದೇಶದ ಅತೀ ದೊಡ್ಡದಾದ ನ೦ದಿಯ ವಿಗ್ರಹವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಪ್ರತಿಮವಾದ ಕಲಾಕೌಶಲ್ಯ ಮತ್ತು ಸೌ೦ದರ್ಯಗಳೆರಡರ ಅಪೂರ್ವ ಸ೦ಗಮದ ಪರಿಪೂರ್ಣ ಉದಾಹರಣೆಯಾಗಿದೆ ನ೦ದಿಯ ಈ ವಿಗ್ರಹ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X