Search
  • Follow NativePlanet
Share
» »ಅದ್ಭುತಮಯ ಆಲಮಟ್ಟಿ ಜಲಾಶಯ ಉದ್ಯಾನ!

ಅದ್ಭುತಮಯ ಆಲಮಟ್ಟಿ ಜಲಾಶಯ ಉದ್ಯಾನ!

By Vijay

ಸಾಮಾನ್ಯವಾಗಿ ಜಲಾಶಯಗಳಿರುವೆಡೆ ಉದ್ಯಾನಗಳನ್ನು ನಿರ್ಮಿಸುವುದು ಮೊದಲಿನಿಂದಲೂ ರೂಢಿಸಿಕೊಂಡು ಬರಲಾಗಿರುವುದನ್ನು ಭಾರತದಲ್ಲಿ ಕಾಣಬಹುದು. ಹಾಗಾಗಿ ಜಲಾಶಯ ಉದ್ಯಾನಗಳು ಒಂದು ಅದ್ಭುತ ಪ್ರವಾಸಿ ತಾಣವಾಗಿ ಜನರ ಗಮನಸೆಳೆಯುತ್ತವೆ.

ವಿಶೇಷವೆಂದರೆ, ಬಂಧು-ಮಿತ್ರರೊಡನೆ, ಕುಟುಂಬದವರೊಡನೆ ಪ್ರವಾಸ ಮಾಡಲು ಜಲಾಶಯ ಉದ್ಯಾನಗಳು ಹೇಳಿ ಮಾಡಿಸಿದಂತಿರುತ್ತವೆ ಎಂದರೂ ತಪ್ಪಾಗಲಾರದು. ಉದಾಹರಣೆಗೆ ಮೈಸೂರು ನಗರದ ಬಳಿ ಇರುವ ಕೃಷ್ಣರಾಜ ಸಾಗರ ಅಥವಾ ಜನಪ್ರೀಯವಾಗಿ ಕರೆಯಲಾಗುವ ಬೃಂದಾವನ ಉದ್ಯಾನವನ್ನೆ ತೆಗೆದುಕೊಳ್ಳಿ.

ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ, ಅದರಲ್ಲೂ ವಿಶೇಷವಾಗಿ ಚಳಿಗಾಲದ ಪ್ರಶಸ್ತವಾದ ಸಮಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೌಟುಂಬಿಕ ಪ್ರವಾಸಿಗರು ಈ ಸುಂದರ ಜಲಾಶಯಕ್ಕೆ ಭೇಟಿ ನೀಡುತ್ತಾರೆ. ಆದರೆ ನಿಮಗೆ ಉತ್ತರ ಕರ್ನಾಟಕದ ಭಾಗದಲ್ಲೂ ಸಹ ಒಂದು ಸುಂದರ ಜಲಾಶಯ ಉದ್ಯಾನವಿದ್ದು ಇತ್ತೀಚಿನ ಕೆಲ ಸಮಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಅದ್ಭುತ ಐತಿಹಾಸಿಕ ಆಕರ್ಷಣೆಗಳ ಬಾಗಲಕೋಟೆ!

ಬಯಲು ಸೀಮೆಯ ಈ ಭಾಗದಲ್ಲಿ ನೀರು ಲಭಿಸುವುದೆ ತುಸು ಕಷ್ಟ. ಅಂಥದ್ದರಲ್ಲೂ ನದಿಯೊಂದಕ್ಕೆ ಅಡ್ಡಲಾಗಿ ವಿಶಾಲವಾದ ಆಣೆಕಟ್ಟು ನಿರ್ಮಿಸಿ, ತದನಂತರ ಆ ಆಣೆಕಟ್ಟೆಯ ಸುತ್ತಲಿನ ಸ್ಥಳದಲ್ಲಿ ವಿಸ್ತಾರವಾದ ಉದ್ಯಾನವನ್ನು ವ್ಯವಸ್ಥಿತವಾಗಿ ನಿರ್ಮಿಸಿರುವುದನ್ನು ನೋಡಿದಾಗ ಒಂದು ಕ್ಷಣ ಅಚ್ಚರಿ ಆಗದೆ ಇರಲಾರದು. ಹೌದು, ಆ ಜಲಾಶಯವೆ ಆಲಮಟ್ಟಿ ಜಲಾಶಯ ಹಾಗೂ ಉದ್ಯಾನ.

ಪ್ರಸ್ತುತ ಲೇಖನದ ಮೂಲಕ ಆಲಮಟ್ಟಿ ತಾಣ ಹಾಗೂ ಜಲಾಶಯದ ಕುರಿತು ಸಮಗ್ರ ಪ್ರವಾಸಿ ಮಾಹಿತಿ ತಿಳಿಯಿರಿ. ಸಮಯ ಸಿಕ್ಕರೆ ಒಂದೊಮ್ಮೆ ಈ ಸುಂದರ ತಾಣಕ್ಕೆ ಭೇಟಿ ನೀಡಲು ಪ್ರಯತ್ನಿಸಿ.

ವಿಶಾಲಕಾಯ

ವಿಶಾಲಕಾಯ

ಎರಡು ಹಳ್ಳಿಗಳ ಮಧ್ಯೆ ಹರಿದಿರುವ ಸುಂದರವಾದ ಕೃಷ್ಣಾ ನದಿಗೆ ಅಡ್ಡಲಾಗಿ ಈ ಆಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಆ ಎರಡು ಹಳ್ಳಿಗಳೆಂದರೆ ವಿಜಯಪುರ ಜಿಲ್ಲೆಯ ಬಸವನಬಾಗೆವಾಡಿ ತಾಲೂಕಿನ ಆಲಮಟ್ಟಿ ಹಾಳಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಸಿತಿಮನಿ ಹಳ್ಳಿ.

ಚಿತ್ರಕೃಪೆ: Murughendra

ರಾಷ್ಟ್ರಿಯ ಮಹತ್ವ

ರಾಷ್ಟ್ರಿಯ ಮಹತ್ವ

ಕರ್ನಾಟಕ ಸರ್ಕಾರದ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಈ ಅದ್ಭುತವಾದ ಆಣೆಕಟ್ಟೆಯ ಯೋಜನೆ ಹಾಗೂ ಅನುಷ್ಠಾನ ಮಾಡಲಾಗಿದ್ದು ರಾಷ್ಟ್ರೀಯ ಮಹತ್ವ ಪಡೆದಿರುವ ವಿವಿಧೋದ್ದೇಶಗಳ ಅದ್ಭುತ ಆಣೆಕಟ್ಟೆಯಾಗಿ ಆಲಮಟ್ಟಿ ಆಣೆಕಟ್ಟು ಗಮನಸೆಳೆಯುತ್ತದೆ.

ಚಿತ್ರಕೃಪೆ: Ravi Aparanji

2005 ರಲ್ಲಿ!

2005 ರಲ್ಲಿ!

ಕೇವಲ ದಶಕದ ಹಿಂದಷ್ಟೆ ಅಂದರೆ 2005 ರಲ್ಲಷ್ಟೆ ನಿರ್ಮಾಣಗೊಂಡಿರುವ ಆಲಮಟ್ಟಿ ಜಲಾಶಯ ಹೆಚ್ಚು ಕಮ್ಮಿ ಹೊಸದಾದ ಜಲಾಶಯವೆ ಆಗಿದ್ದು ಅಪ್ಪರ್ ಕೃಷ್ಣಾ ಇರಿಗೇಷನ್ ಪ್ರಾಜೆಕ್ಟ್ ನ ಪ್ರಮುಖ ಜಲಾಶಯವಾಗಿ ಮಹತ್ವ ಪಡೆದಿದೆ.

ಚಿತ್ರಕೃಪೆ: Nvvchar

ಎಷ್ಟು ಎತ್ತರ?

ಎಷ್ಟು ಎತ್ತರ?

1565.15 ಮೀ. (ಒಂದುವರೆ ಕಿ.ಮೀ ಗೂ ಅಧಿಕ) ಉದ್ದ, 23.31 ಮೀ. ಗಳಷ್ಟು ಎತ್ತರ (76 ಅಡಿಗಳಷ್ಟು) ಹೊಂದಿರುವ ಈ ಭವ್ಯ ಆಣೆಕಟ್ಟು ಸುಮಾರು 26 ಕ್ರಸ್ಟ್ ಗೇಟುಗಳನ್ನು (ನೀರನ್ನು ಹೊರ ಹಾಕುವ ದ್ವಾರಗಳು) ಹೊಂದಿದೆ.

ಚಿತ್ರಕೃಪೆ: Nvvchar

ಪರಿಗಣಿಸಲಾಗಿದೆ

ಪರಿಗಣಿಸಲಾಗಿದೆ

ಆಲಮಟ್ಟಿ ಜಲಾಶಯವನ್ನು ಒಂದು ರೀತಿಯಲ್ಲಿ ಪ್ರವಾಸೋದ್ಯಮವನ್ನೂ ಸಹ ಪರಿಗಣಿಸಿ ವಿನ್ಯಾಸ ಮಾಡಲಾಗಿದೆ. ಅಗಾಧ ಕಾಯದ ಆಣೆಕಟ್ಟೆಯಿಂದ ನೀರು ಭೋರ್ಗೆರೆದು ಹೊರ ಹೋಗುವುದನ್ನು ನೋಡಿದಾಗ ರೋಮಾಂಚನವಾಗದೆ ಇರಲಾರದು. ಪ್ರವಾಸಿಗರಿಗೆ ಮತ್ತೆ ಮತ್ತೆ ಭೇಟಿ ನೀಡಬೇಕೆನಿಸುವಂತೆ ಮೋಹಗೊಳಿಸುತ್ತದೆ.

ಚಿತ್ರಕೃಪೆ: Ravi Aparanji

ವರ್ಣಿಸಲಸಾಧ್ಯ!

ವರ್ಣಿಸಲಸಾಧ್ಯ!

ಇನ್ನೂ ಜಲಾಶಯದ ಸುತ್ತಲಿರುವ ಏಳು ಸ್ತರಗಳಲ್ಲಿ ನಿರ್ಮಿಸಲಾದ ಉದ್ಯಾನವಂತೂ ವರ್ಣಿಸಲಸಾಧ್ಯ ಎನ್ನುವಷ್ಟು ಸುಂದರವಾಗಿ ಕಂಡುಬರುತ್ತದೆ. ಸುಮಾರು 77 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನ್ನು ಕೆಲವು ನಿರ್ದಿಷ್ಟ ಆಕರ್ಷಣೆಗಳಾಗಿ ವಿಂಗಡಿಸಿದ್ದಾರೆ.

ಚಿತ್ರಕೃಪೆ: Ravi Aparanji

ಆಕರ್ಷಣೆಗಳಿವೆ?

ಆಕರ್ಷಣೆಗಳಿವೆ?

ಒಟ್ಟಾರೆ ಉದ್ಯಾನದಲ್ಲಿ ಮುಘಲ್ ಉದ್ಯಾನ, ರಾಕ್ ಹಿಲ್ ಉದ್ಯಾನ, ಕೃಷ್ಣಾ ಉದ್ಯಾನ, ಮೊದಲಿನ ಶೈಲಿಯ ಇಟಾಲಿಯನ್ ಉದ್ಯಾನ, ನಂತರದ ಶೈಲಿಯ ಇಟಾಲಿಯನ್ ಉದ್ಯಾನ, ಫ್ರೆಂಚ್ ಉದ್ಯಾನ, ಗೋಪಾಲ-ಕೃಷ್ಣ ಉದ್ಯಾನ ಹಾಗೂ ಲವಕುಶ ಉದ್ಯಾನಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Ravi Aparanji

ಬೃಂದಾವನ

ಬೃಂದಾವನ

ಮೈಸೂರು ಬಳಿ ಇರುವ ಬೃಂದಾವನ ಉದ್ಯಾನದಲ್ಲಿರುವಂತೆಯೆ ಇಲ್ಲಿಯೂ ಸಹ ದೋಣಿ ವಿಹಾರದ ಸೌಲಭ್ಯವಿದೆ. ಅಲ್ಲದೆ ಕರ್ನಾಟಕದಲ್ಲೆ ಉತ್ತಮ ಎನ್ನಬಹುದಾದ ಸಂಗೀತಮಯ ಕಾರಂಜೀಗಳು ಇಲ್ಲಿವೆ. ಇವು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿತ್ರಕೃಪೆ: Ravi Aparanji

ಹೆಚ್ಚು ಜನಪ್ರೀಯ

ಹೆಚ್ಚು ಜನಪ್ರೀಯ

ಮುಘಲ್ ಉದ್ಯಾನ ಹಾಗೂ ರಾಕ್ ಉದ್ಯಾನಗಳು ಅತಿ ಹೆಚ್ಚಾಗಿ ಜನರ ಗಮನಸೆಳೆಯುತ್ತವೆ. ಕಾಶ್ಮೀರದಲ್ಲಿ ಕಂಡುಬರುವ ಮುಘಲ್ ಶೈಲಿಯ ಉದ್ಯಾನಗಳಂತೆಯೆ ಇಲ್ಲಿನ ಮುಘಲ್ ಉದ್ಯಾನವನ್ನು ವಿನ್ಯಾಸಗೊಳಿಸಲಾಗಿದೆ. ಚೌಕಾಕಾರದಲ್ಲಿರುವ ಹಚ್ಚ ಹಸಿರಾದ ಸಮತಟ್ಟಾದ ಹುಲ್ಲು ಹಾಸಿಗೆಗಳು ಮಧ್ಯದಲ್ಲಿ ನಡೆಯಲು ಪಾದಚಾರಿ ಮಾರ್ಗಗಳು ಮನಸ್ಸು ಪ್ರಸನ್ನಗೊಳ್ಳುವಂತೆ ಮಾಡುತ್ತವೆ.

ಚಿತ್ರಕೃಪೆ: Ravi Aparanji

ಸೆಳೆಯುತ್ತದೆ

ಸೆಳೆಯುತ್ತದೆ

ಇನ್ನೂ ರಾಕ್ ಉದ್ಯಾನವಂತೂ ಅನೇಕ ವಿಶೇಷತೆಗಳಿಂದ ಕೂಡಿದೆ. ಮನುಷ್ಯ ಗಾತ್ರದ ವಿವಿಧ ಪ್ರಾಣಿಗಳ ಪ್ರತಿಕೃತಿಗಳು, ಹಳ್ಳಿ ಜೀವನ ಶೈಲಿಯ ಪುತ್ಥಳಿಗಳು, ಮಕ್ಕಳನ್ನು ಮನರಂಜಿಸುವ ಸರಿಸೃಪ, ಪಕ್ಷಿ, ಪ್ರಾಣಿ ವಿಭಾಗಗಳು ರಾಕ್ ಉದ್ಯಾನದ ಹಲವಾರು ವಿಶೇಷತೆಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Ravi Aparanji

ಲವಕುಶ ಕುಂಡ

ಲವಕುಶ ಕುಂಡ

ಜಲಾಶಯದ ಹತ್ತಿರದಲ್ಲಿರುವ ಸಿತಿಮನಿ ಹಳ್ಳಿಯ ಒಂದು ಗುಡ್ಡದ ಮೇಲೆ ಸೀತಾ ಮಾತೆಯ ವಿಗ್ರಹವಿದ್ದು ಅದರ ಮುಂದೆ ಎರಡು ಕೊಳಗಳಿವೆ. ಜನರು ಆ ಕೊಳಗಳಲ್ಲಿರುವ ನೀರು ಎಂದಿಗೂ ಬತ್ತುವುದಿಲ್ಲವೆಂದು ನಂಬುತ್ತಾರೆ ಹಾಗೂ ಅವನ್ನು ಲವ-ಕುಶ ಕೊಳಗಳೆಂದು ಕರೆಯುತ್ತಾರೆ. ಈ ಪ್ರಸಂಗವನ್ನೆ ಯಥವತ್ತಾಗಿ ಇಲ್ಲಿನ ಲವ-ಕುಶ ಉದ್ಯಾನದಲ್ಲಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Ravi Aparanji

ಹಸಿರು ಹಾಸಿಗೆ

ಹಸಿರು ಹಾಸಿಗೆ

ಉದ್ಯಾನವನ್ನು ಸ್ವಚ್ಛತೆಯಿಂದ ನಿರ್ವಹಿಸಲಾಗುತ್ತಿರುವುದು ಇನ್ನೊಂದು ವಿಶೇಷ. ಎಲ್ಲೆಡೆ ಹಸಿರು ಹುಲ್ಲಿನ ಹಾಸಿಗೆಯು ಸಾಕಷ್ಟು ಮೆರುಗು ನೀಡುತ್ತದೆ.

ಚಿತ್ರಕೃಪೆ: Ravi Aparanji

ವಿವಿಧ ಸಸಿಗಳು

ವಿವಿಧ ಸಸಿಗಳು

ಮುಘಲ್ ಉದ್ಯಾನದಲ್ಲಿ ಬಣ್ಣ ಬಣ್ಣದ ಹೂವು ಬಿಡುವ ಸಸಿಗಳನ್ನು ಹಾಗೂ ಅದ್ಭುತವಾಗಿ ಕತ್ತರಿಸಿರುವ ಬೇಲಿಗಲನ್ನು ಕಾಣಬಹುದು. ಅಲ್ಲಲ್ಲಿ ದೊಡ್ಡ ದೊಡ್ಡ ಹೆಚ್ಚು ಪ್ರಕಾಶವಿರುವ ಬಲ್ಬುಗಳ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು ರಾತ್ರಿಯ ಮತ್ತಷ್ಟು ವಿಶೇಷವಾಗಿ ಕಾಣುತ್ತದೆ.

ಚಿತ್ರಕೃಪೆ: Ravi Aparanji

ಮನಮೋಹಕ

ಮನಮೋಹಕ

ಪ್ರವಾಸಿಗರ ಮನಸೂರೆಗೊಳ್ಳುವ ಕೃಷ್ಣನ ವಿವಿಧ ನೃತ್ಯ ಭಂಗಿಗಳನ್ನು ಅನಾವರಣಗೊಳಿಸುವ ಸುಂದರ ಶಿಲ್ಪ್ ಮೂರ್ತಿಗಳು.

ಚಿತ್ರಕೃಪೆ: Nvvchar

ಆಕರ್ಷಕ

ಆಕರ್ಷಕ

ರಾಕ್ ಹಿಲ್ ಉದ್ಯಾನಕ್ಕೆ ಪ್ರವೇಶ ದ್ವಾರ. ಸಾಕಷ್ಟು ಆಕರ್ಷಕವಾಗಿದೆ ಇದು.

ಚಿತ್ರಕೃಪೆ: Murughendra

ಎಷ್ಟು ದೂರ?

ಎಷ್ಟು ದೂರ?

ಆಲಮಟ್ಟಿಯು ಬೆಂಗಳೂರಿನಿಂದ 470 ಕಿ.ಮೀ ಹಾಗೂ ವಿಜಯಪುರದಿಂದ 66 ಕಿ.ಮೀ ಗಳಷ್ಟು ದೂರದಲ್ಲಿದೆ. ವಿಜಯಪುರ ನಗರ ಕೇಂದ್ರ ಬಸ್ಸು ನಿಲ್ದಾಣದಿಂದ ಆಲಮಟ್ಟಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಬೆಂಗಳೂರಿನಿಂದಲೂ ಸಹ ಕೆಲವು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಆಲಮಟ್ಟಿಯವರೆಗೆ ಲಭ್ಯವಿದೆ. ಆಲಮಟ್ಟಿ ಉದ್ಯಾನಕ್ಕೆ ಪ್ರವೇಶ ದ್ವಾರ.

ಚಿತ್ರಕೃಪೆ: Ravi Aparanji

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X