Search
  • Follow NativePlanet
Share
» »ಅಹೋಬಿಲಂ : ಓ....ಅಗಾಧ ಶಕ್ತಿಯೆ

ಅಹೋಬಿಲಂ : ಓ....ಅಗಾಧ ಶಕ್ತಿಯೆ

By Vijay

"ಅಹೋ" ಅನ್ನುವುದು ಒಂದು ಉದ್ಗಾರವಾಚಕ ಪದವಾಗಿದ್ದು ಬಿಲಂ (ಬಲಂ) ಅಂದರೆ ಶಕ್ತಿ ಎಂದಾಗುತ್ತದೆ. ಆದ್ದರಿಂದ ಅಹೋಬಿಲಂ ಎಂಬ ಹೆಸರು ಅಗಾಧ ಶಕ್ತಿಯು ನೆಲೆಸಿರುವ ಪ್ರದೇಶವಾಗಿದೆ. ಪೌರಾಣಿಕ ಹಿನ್ನಿಲೆಯ ಪ್ರಕಾರ, ಭಗವಂತ ವಿಷ್ಣು ಅಸುರನಾದ ಹಿರಣ್ಯಕಶಿಪುವಿನನ್ನು ಸಂಹರಿಸಲು ಅರ್ಧ ಮನುಷ್ಯ ಅರ್ಧ ಸಿಂಹದ ರೂಪ ಪಡೆದು ನರಸಿಂಹನಾಗಿ ಅವತರಿಸಿದ್ದು ಈ ಸ್ಥಳದಲ್ಲಿಯೆ.

ವಿಷ್ಣುವಿನ ಈ ಭಯಂಕರ ರೂಪ ಕಂಡು ಸಕಲ ದೇವತೆಗಳು ಅವನನ್ನು ಕುರಿತು "ಅಹೋ ಬಲಂ" (ಓ...ಅಗಾಧ ಶಕ್ತಿಯೆ) ಎಂದು ಜೈಕಾರ ಹೇಳಿದರು. ಅದರಂತೆ ಕ್ರಮೇಣವಾಗಿ ಈ ಕ್ಷೇತ್ರಕ್ಕೆ ಅಹೋಬಿಲಂ/ಅಹೋಬಲಂ ಎಂಬ ಹೆಸರು ಬಂದಿತು. ಪ್ರಸ್ತುತ ಅಹೋಬಿಲಂ ಕ್ಷೇತ್ರವು ಸೀಮಾಂಧ್ರದ ಕರ್ನೂಲ್ ಜಿಲ್ಲೆಯ ಅಲ್ಲಾಗಡ್ಡಾ ಮಂಡಲ (ತಾಲೂಕು) ದಲ್ಲಿ ನೆಲೆಸಿದೆ.

ಈ ಕ್ಷೇತ್ರಕ್ಕೆ ತೆರಳಲು ಕರ್ನೂಲ್, ನಾಂದ್ಯಾಲ್ ಹಾಗೂ ಹೈದರಾಬಾದ ನಗರಗಳಿಂದ ಸುಲಭವಾಗಿ ಬಸ್ಸುಗಳು ದೊರೆಯುತ್ತವೆ. ಈ ಕ್ಷೇತ್ರದಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ ಹಾಗೂ ಹತ್ತಿರದ ರೈಲು ನಿಲ್ದಾಣವು ನಾಂದ್ಯಾಲ್ ನಲ್ಲಿದೆ. ಇದು ಬೆಂಗಳೂರು - ವೈಜಾಗ್ ರೈಲು ಮಾರ್ಗದಲ್ಲಿ ಲಭಿಸುತ್ತದೆ.

ಅಹೋಬಿಲಂ:

ಅಹೋಬಿಲಂ:

ದಂತಕಥೆಯ ಪ್ರಕಾರ, ಈ ಒಂದು ಸ್ಥಳದಲ್ಲಿಯೆ ನರಸಿಂಹನು ಹಿರಣ್ಯಕಶಿಪು ರಾಕ್ಷಸನನ್ನು ಸಂಹರಿಸಿ, ರಕ್ಕಸನ ಮಗನಾದ ಪ್ರಹ್ಲಾದನನ್ನು ಅಶೀರ್ವದಿಸಿದ್ದನು.

ಚಿತ್ರಕೃಪೆ: Ashwin Kumar

ಅಹೋಬಿಲಂ:

ಅಹೋಬಿಲಂ:

ಪುರಾತನ ನಾಲಯಿರಾ (ಅಂದರೆ ನಾಲ್ಕು ಸಾವಿರ) ದಿವ್ಯ ಪ್ರಬಂಧಂ ಎಂಬ ತಮಿಳಿನ ಕವಿತೆಗಳ ಸಂಗ್ರಹಗಳಲ್ಲಿ ಹತ್ತು ಕವಿತೆಗಳು ಅಹೋಬಿಲಂನ ದೇವತೆಯಾದ ನರಸಿಂಹನಿಗೆ ಸಮರ್ಪಿತವಾಗಿರುವುದನ್ನು ಕಾಣಬಹುದು.
ಅಹೋಬಿಲಂನ ಹೆಸರಿನ ಕುರಿತು ವಿವರಿಸುವ ಒಂದು ಪುರಾತನ ಸುಂದರ ಶ್ಲೋಕ ಇಂತಿದೆ :

ಅಹೋ ವೀರ್ಯಂ, ಅಹೋ ಶೌರ್ಯಂ, ಅಹೋ ಬಾಹು ಪರಾಕ್ರಮ!
ನರಸಿಂಹಂ ಪರಮ ದೈವಂ ಅಹೋ ಬಿಲಂ! ಅಹೋ ಬಲಂ

ಚಿತ್ರಕೃಪೆ: RameshSharma1

ಅಹೋಬಿಲಂ:

ಅಹೋಬಿಲಂ:

ಅಹೋಬಿಲಂ ಕ್ಷೇತ್ರದಲ್ಲಿ ವಿವಿಧ ದಿಕ್ಕುಗಳಲ್ಲಿ ನಿರ್ಮಿಸಲಾಗಿರುವ ನರಸಿಂಹ ದೇವರಿಗೆ ಸಮರ್ಪಿತವಾಗಿರುವ ಒಂಭತ್ತು ದೇವಾಲಯಗಳಿವೆ. ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿರುವ ಈ ದೇವಾಲಯಗಳು ಅತ್ಯದ್ಭುತ ಶಿಲ್ಪಕಲೆಗೆ ಉದಾಹರಣೆಯಾಗಿದ್ದು ಸ್ತಪತಿಯರ ಕೈಚಳಕಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಚಿತ್ರಕೃಪೆ: Gopal Venkatesan

ಅಹೋಬಿಲಂ:

ಅಹೋಬಿಲಂ:

ಇಲ್ಲಿನ ಕೆಲವು ದೇವಾಲಯಗಳು ಗುಹೆಗಳೊಳಗಿದ್ದರೆ ಇನ್ನಿತರೆ ದೇವಾಲಯಗಳನ್ನು ಟ್ರೆಕ್ ಮಾಡಿ ತಲುಪಬಹುದಾಗಿದೆ. ಟ್ರೆಕ್ ಸಮಯದಲ್ಲಿ ಪ್ರದೇಶದ ಸುಂದರ ಪರಿಸರವನ್ನು ಕಣ್ತುಂಬ ಸವಿಯುತ್ತ ಸಾಗಬಹುದು. ಆದರೆ ಗಮನವಿರಲಿ ಕೆಲವು ಟ್ರೆಕ್ ಗಳು ಕಠಿಣವಾಗಿವೆ.

ಚಿತ್ರಕೃಪೆ: RameshSharma1

ಅಹೋಬಿಲಂ:

ಅಹೋಬಿಲಂ:

ಮನುಷ್ಯನ ಜೀವನ ನಿರ್ಧರಿಸುವ 9 ಗೃಹಗಳು ತಮಗಂಟಿದ ಶಾಪಗಳು ಹಾಗೂ ಶತ್ರುಗಳಿಂದ ಮುಕ್ತಿ ಪಡೆಯಲು ಇಲ್ಲಿನ ಈ ಒಂಭತ್ತು ನರಸಿಂಹ ಸ್ಥಾನಗಳನ್ನು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ.

ಚಿತ್ರಕೃಪೆ: RameshSharma1

ಅಹೋಬಿಲಂ:

ಅಹೋಬಿಲಂ:

ಪ್ರದೇಶದ ಸುತ್ತಮುತ್ತಲಿರುವ ನಲ್ಲಮಲ್ಲ ಬೆಟ್ಟಗಳನ್ನು ವಿಷ್ಣುವಿನ ಆಸನವಾದ ಆದಿಶೇಷ ಸರ್ಪಕ್ಕೆ ವ್ಯಾಖ್ಯಾನಿಸಲಾಗಿದೆ. ಅಂದರೆ ಸರ್ಪದ ಹೆಡೆಯು ತಿರುಪತಿ ತಿರುಮಲ ಪ್ರದೇಶವಾಗಿದ್ದು, ಅಹೋಬಿಲಂ ಮಧ್ಯ ಭಾಗವಾಗಿದ್ದು, ಬಾಲವನ್ನು ಶ್ರೀಶೈಲಂ ಎಂದು ಸಾಂಕೇತಿಕವಾಗಿ ಬಿಂಬಿಸಲಾಗಿದೆ.

ಚಿತ್ರಕೃಪೆ: RameshSharma1

ಅಹೋಬಿಲಂ:

ಅಹೋಬಿಲಂ:

ಅರ್ಧ ಸಿಂಹ, ಅರ್ಧ ಮನುಷ್ಯನಾಕಾರನಾಗಿ ವಿಷ್ಣುವು ಖಂಬ ಸೀಳಿ ಹೊರಬಂದಾಗ, ಎಲ್ಲ ದೇವತೆಗಳು "ಅಹೋ ಬಲಂ" ಅಥವಾ "ಅಹೋ ಬಿಲಂ" ಎಂದು ಕೂಗಿಕೊಂಡರು. ಅದರಂತೆ ಆ ಖಂಬವನ್ನು ಇಂದಿಗೂ ಸಹ ಇಲ್ಲಿ ಕಾಣಬಹುದಾಗಿದ್ದು ಅದನ್ನು "ಉಗ್ರಸ್ಥಂಬ" ಅಥವಾ ತೆಲುಗಿನಲ್ಲಿ "ಉಕ್ಕು ಸ್ಥಂಬ" ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: Gopal Venkatesan

ಅಹೋಬಿಲಂ:

ಅಹೋಬಿಲಂ:

ಅಹೋಬಿಲಂ ಪ್ರದೇಶವು ಕೆಳಭಾಗದ ಅಹೋಬಿಲಂ ಹಾಗೂ ಮೇಲ್ಭಾಗದ ಅಹೋಬಿಲಂ ಎಂಬ ಎರಡು ಭಾಗವಾಗಿ ವಿಂಗಡನೆಗೊಂಡಿದೆ. ಮೇಲ್ಭಾಗದ ನರಸಿಂಹನ ವಿಗ್ರಹವು ಉಗ್ರ ರೂಪಿಯಾಗಿದ್ದರೆ ಕೆಳಭಾಗದ ಅಹೋಬಿಲಂನಲ್ಲಿರುವ ನರಸಿಂಹನು ಶಾಂತರೂಪಿಯಾಗಿದ್ದಾನೆ.

ಚಿತ್ರಕೃಪೆ: Gopal Venkatesan

ಅಹೋಬಿಲಂ:

ಅಹೋಬಿಲಂ:

ದಂತಕಥೆಯ ಪ್ರಕಾರ, ಸ್ವತಃ ಭಗವಂತ ಶ್ರೀನಿವಾಸನು ತನ್ನ ಕಲ್ಯಾಣ (ವಿವಾಹ)ದ ಸಮಯದಲ್ಲಿ ನರಸಿಂಹನ ದರುಶನ ಪಡೆದು ಆಶೀರ್ವಾದ ಪಡೆದುಕೊಂಡಿದ್ದನಂತೆ. ನರಸಿಂಹನು ಉಗ್ರರೂಪದಲ್ಲಿರುವುದನ್ನು ಕಂಡು ಸಾಮಾನ್ಯ ಮನುಷ್ಯರು ಭಯ ಪಡದ ರೀತಿಯಲ್ಲಿ ಶಾಂತ ರೂಪದ ನರಸಿಂಹನನ್ನು ಸ್ವತಃ ಶ್ರೀನಿವಾಸನೆ ಕೆಳಭಾಗದ ಅಹೋಬಿಲಂನಲ್ಲಿ ಪ್ರತಿಷ್ಠಾಪಿಸಿದನಂತೆ.

ಚಿತ್ರಕೃಪೆ: Gopal Venkatesan

ಅಹೋಬಿಲಂ:

ಅಹೋಬಿಲಂ:

ಆಚರಣೆಯಲ್ಲಿರುವ ರೂಢಿಯಂತೆ ಇಂದಿಗೂ ಸಹ ಭಕ್ತರು ಶಾಂತರೂಪದ ನರಸಿಂಹನನ್ನು ದರುಶಿಸಿದ ನಂತರ ಇಲ್ಲಿಂದ 8 ಕಿ.ಮೀ ದೂರದಲ್ಲಿ ಗುಡ್ಡದ ತುದಿಯಲ್ಲಿ ಗುಹೆಯಲ್ಲಿರುವ ಉಗ್ರನರಸಿಂಹನನ್ನು ದರುಶಿಸುತ್ತಾರೆ.

ಚಿತ್ರಕೃಪೆ: Gopal Venkatesan

ಅಹೋಬಿಲಂ:

ಅಹೋಬಿಲಂ:

ಆಚರಣೆಯಲ್ಲಿರುವ ಮತ್ತೊಂದು ರೂಢಿಯೆಂದರೆ ಶಾಂತ ರೂಪಿ ನರಸಿಂಹನ ದರ್ಶನದ ನಂತರ ಕಡ್ಡಾಯವಾಗಿ ಪ್ರದೇಶದ ಒಂಭತ್ತೂ ನರಸಿಂಹರ ದೇಗುಲಗಳ ದರ್ಶನ ಪಡೆಯಬೇಕು.

ಚಿತ್ರಕೃಪೆ: sai sreekanth mulagaleti

ಅಹೋಬಿಲಂ:

ಅಹೋಬಿಲಂ:

ಸ್ಥಳೀಯ ಪುರಾಣದ ಪ್ರಕಾರ, ರಕ್ಕಸ ಹಿರಣ್ಯಕಶಿಪುವನ್ನು ಕೊಂದ ಬಳಿಕ ನರಸಿಂಹನು ನಲ್ಲಮಲ್ಲ ಅರಣ್ಯದ ತುಂಬೆಲ್ಲ ಘರ್ಜನೆಯ ನಗುವಿನೊಂದಿಗೆ ಸುತ್ತಾಡುತ್ತ ಒಂಭತ್ತು ಸ್ಥಳಗಳಲ್ಲಿ ವಿಶ್ರಮಿಸಿ ಭಕ್ತರನ್ನು ಆಶೀರ್ವದಿಸಿದ್ದನಂತೆ. ಅದರಂತೆ ಆ ಸ್ಥಳಗಳಲ್ಲಿ ಇಂದು ಒಂಭತ್ತು ನರಸಿಂಹನ ದೇವಾಲಯಗಳನ್ನು ಕಾಣಬಹುದು.

ಚಿತ್ರಕೃಪೆ: sai sreekanth mulagaleti

ಅಹೋಬಿಲಂ:

ಅಹೋಬಿಲಂ:

ಇನ್ನೂ ಕೆಲವು ಸ್ಥಳೀಯ ಪುರಾಣಗಳ ಪ್ರಕಾರ, ಪ್ರಖ್ಯಾತ ಪುರಾತನ ಕವಿ ಅಣ್ಣಮ್ಮಾಚಾರ್ಯರು ಇಲ್ಲಿ ಕೆಲ ಸಮಯ ತಂಗಿ ನರಸಿಂಹ ಸ್ವಾಮಿಯ ಕುರಿತು ಹಲವು ಗೀತೆಗಳನ್ನು ರಚಿಸಿದ್ದಾರೆ. ಅಲ್ಲದೆ, ಪೋತುಲುರಿ ವೀರಬ್ರಹ್ಮೇಂದ್ರ ಸ್ವಾಮಿ ಎಂಬ ಮುನಿಗಳು ಇಲ್ಲಿ ಕೆಲ ಕಾಲ ತಪಸ್ಸನ್ನಾಚರಿಸಿ ಕಾಲಜ್ಞಾನ ಎಂಬ ಗ್ರಂಥ ಬರೆದಿದ್ದಾರೆ.

ಚಿತ್ರಕೃಪೆ: sai sreekanth mulagaleti

ಅಹೋಬಿಲಂ:

ಅಹೋಬಿಲಂ:

ಬನ್ನಿ ಒಂಭತ್ತು ನರಸಿಂಹ ದೇವಾಲಯಗಳ ಹೆಸರು ತಿಳಿಯೋಣ. ಮೊದಲನೇಯದಾಗಿ ಭಾರ್ಗವ ನರಸಿಂಹ ಸ್ವಾಮಿ ದೇವಾಲಯ. ಕೆಳ ಅಹೋಬಿಲಂ ನಿಂದ 2.5 ಕಿ.ಮೀ ದೂರದಲ್ಲಿದೆ. ಪರಶುರಾಮರು ನರಸಿಂಹನನ್ನು ಕುರಿತು ಇಲ್ಲಿ ತಪಸ್ಸನ್ನಾಚರಿಸಿದ್ದರು ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Harsha Vardhan Durugadda

ಅಹೋಬಿಲಂ:

ಅಹೋಬಿಲಂ:

ಎರಡನೇಯದಾಗಿ, ಯೋಗಾನಂದ ನರಸಿಂಹ ಸ್ವಾಮಿ ದೇವಾಲಯ. ಧ್ಯಾನಕ್ಕೆ ಯೋಗ್ಯವಾದ ಸ್ಥಳ ಇದಾಗಿದೆ. ಪ್ರಹ್ಲಾದನು ಈ ಒಂದು ಸ್ಥಳದಲ್ಲೆ ಧ್ಯಾನ ಮಾಡಿ ವರವನ್ನು ಪಡೆದನು ಎನ್ನುತ್ತದೆ ಇಲ್ಲಿನ ಪುರಾಣ.

ಚಿತ್ರಕೃಪೆ: Harsha Vardhan Durugadda

ಅಹೋಬಿಲಂ:

ಅಹೋಬಿಲಂ:

ಮೂರನೇಯದಾಗಿ, ಚತ್ರವತ ನರಸಿಂಹ ಸ್ವಾಮಿ ದೇವಾಲಯ. ಕೇತು ಗೃಹವು ಈ ಒಂದು ಸ್ಥಳದಲ್ಲಿ ನರಸಿಂಹನ ಕುರಿತು ಪ್ರಾರ್ಥಿಸಿ ಆಶೀರ್ವಾದ ಪಡೆದನು. ಲಲಿತಕಲೆ, ಕಲೆಗಳಲ್ಲಿ ಆಸಕ್ತಿಯಿದ್ದವರು ಈ ಸ್ಥಳದ ದರುಶನ ಮಾಡಿದರೆ ಲಾಭವಾಗುತ್ತದೆ ಎನ್ನಲಾಗಿದೆ.

ಚಿತ್ರಕೃಪೆ: Harsha Vardhan Durugad

ಅಹೋಬಿಲಂ:

ಅಹೋಬಿಲಂ:

ನಾಲ್ಕನೇಯದಾಗಿ, ಅಹೋಬಿಲ ನರಸಿಂಹ (ಉಗ್ರ) ಸ್ವಾಮಿ ದೇವಾಲಯ. ಅಹೋಬಿಲದ ಪ್ರಮುಖ ದೇವಾಲಯ ಇದಾಗಿದೆ. ಮೇಲ್ಭಾಗದ ಅಹೋಬಿಲಂನಲ್ಲಿ ಈ ದೇವಾಲಯ ಸ್ಥಿತವಿದೆ. ಚೆಂಚು ಲಕ್ಷ್ಮಿಯೊಂದಿಗಿರುವ ನರಸಿಂಹನನ್ನು ಇಲ್ಲಿ ದರ್ಶಿಸಬಹುದು. ಈ ಸ್ವಾಮಿಯ ದರುಶನದಿಂದ ಭಯ, ಹೆದರಿಕೆಗಳು ಮಾಯವಾಗುತ್ತವೆ ಎಂದು ನಂಬಲಾಗಿದೆ.

ಚಿತ್ರಕೃಪೆ: Harsha Vardhan Durugadda

ಅಹೋಬಿಲಂ:

ಅಹೋಬಿಲಂ:

ಐದನೇಯದಾಗಿ, ವರಾಹ ನರಸಿಂಹ ಸ್ವಾಮಿ ದೇವಾಲಯ. ಮೇಲ್ಭಾಗದ ಅಹೋಬಿಲಂ ದೇವಾಲಯದಿಂದ ಒಂದು ಕಿ.ಮೀ ದೂರದಲ್ಲಿರುವ ನರಸಿಂಹ ಸ್ವಾಮಿಯ ಈ ದೇವಾಲಯವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತದೆ ಎನ್ನಲಾಗಿದೆ. ಇದನ್ನು ಕ್ರೋಧ ನರಸಿಂಹ ಸ್ವಾಮಿ ಎಂತಲೂ ಸಹ ಕರೆಯಲಾಗುತ್ತದೆ. ಮೂಲ ವಿಗ್ರಹವು ಕೆತ್ತಿದ ಬಂಡೆಯೊಂದರಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದು, ನೀರಿನ ತೊರೆಯೊಂದಕ್ಕೆ ಅಭಿಮುಖವಾಗಿ ನೆಲೆಸಿದೆ.

ಚಿತ್ರಕೃಪೆ: Harsha Vardhan Durugadda

ಅಹೋಬಿಲಂ:

ಅಹೋಬಿಲಂ:

ಆರನೇಯದಾಗಿ, ಮಾಲೋಲ ನರಸಿಂಹ ಸ್ವಾಮಿ ದೇವಾಲಯ. ಈ ದೇವಾಲಯವು ಇಲ್ಲಿನ ಲಕ್ಷ್ಮಿ ಪರ್ವತ ಎಂಬ ಗುಡ್ಡದ ಮೇಲಿದೆ. ಈ ನರಸಿಂಹ ಸ್ವಾಮಿಯನ್ನು ಪೂಜಿಸುವುದರಿಂದ ಬ್ರಹ್ಮಾನಂದವನ್ನು ಹೊಂದಬಹುದೆಂದು ಹೇಳುತ್ತದೆ ಇಲ್ಲಿನ ಸ್ಥಳೀಯ ಪುರಾಣ.

ಚಿತ್ರಕೃಪೆ: Harsha Vardhan Durugadda

ಅಹೋಬಿಲಂ:

ಅಹೋಬಿಲಂ:

ಏಳನೇಯದಾಗಿ, ಜ್ವಾಲಾ ನರಸಿಂಹ ಸ್ವಾಮಿ ದೇವಾಲಯ. ಹಿರಣ್ಯಕಶಿಪುವಿನ ಹೊಟ್ಟೆಯನ್ನು ತನ್ನ ಉಗುರುಗಳಿಂದ ಬಗೆಯುತ್ತಿರುವ ನರಸಿಂಹ ಸ್ವಾಮಿಯನ್ನು ಇಲ್ಲಿ ಕಾಣಬಹುದು. ಈ ಸ್ವಾಮಿಯನ್ನು ಪೂಜಿಸುವುದರಿಂದ ಎಲ್ಲ ಕಷ್ಟ ಕಾರ್ಪಣ್ಯಗಳು ಮಾಯವಾಗಿ ಯಶಸ್ಸು ಲಭಿಸುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಮಾಸದಲ್ಲಿ ತುಪ್ಪದ ಬತ್ತಿ ಬೆಳಗಿ ಶೃದ್ಧೆಯಿಂದ ಪ್ರಾರ್ಥಿಸಿದರೆ ಯಶಸ್ಸು ಸಿಗುವುದು ಖಂಡಿತ ಎಂದು ನಂಬಲಾಗಿದೆ.

ಚಿತ್ರಕೃಪೆ: Harsha Vardhan Durugadd

ಅಹೋಬಿಲಂ:

ಅಹೋಬಿಲಂ:

ಎಂಟನೇಯದಾಗಿ, ಪಾವನ ನರಸಿಂಹ ಸ್ವಾಮಿ ದೇವಾಲಯ. ನವ ನರಸಿಂಹರ ದೇವಸ್ಥಾನಗಳಲ್ಲೆ ಈ ದೇಗುಲದ ನರ್ಸಿಂಹ ಸ್ವಾಮಿಯು ಅತ್ಯಂತ ಶಾಂತರೂಪಿ ಎಂದು ಹೇಳಲಾಗುತ್ತದೆ. ಒಂಭತ್ತು ಕ್ಷೇತ್ರಗಳ ರತ್ನ ಎಂದೆ ಬಿಂಬಿತವಾಗಿರುವ ಈ ದೇವಾಲಯದಲ್ಲಿ ನರಸಿಂಹನನ್ನು ಭಕ್ತಿ, ಶೃದ್ಧೆಗಳಿಂದ ಪೂಜಿಸಿದರೆ, ಹಿಂದಿನ, ಇಂದಿನ ಎಲ್ಲ ಪಾಪ, ಕರ್ಮಗಳು ನಾಶವಾಗುತ್ತವೆ ಎಂದು ಹಲವು ಋಷಿ ಮುನಿಗಳು ಈ ಕ್ಷೇತ್ರದ ಕುರಿತು ಹೇಳಿದ್ದಾರೆ ಎನ್ನಲಾಗುತ್ತದೆ.

ಚಿತ್ರಕೃಪೆ: sai sreekanth mulagaleti

ಅಹೋಬಿಲಂ:

ಅಹೋಬಿಲಂ:

ಒಂಭತ್ತನೇಯ ಹಾಗೂ ಕೊನೆಯದಾಗಿ ಕಾರಂಜ ನರಸಿಂಹ ಸ್ವಾಮಿ ದೇವಾಲಯ. ಭಾವ, ಶಬ್ದ ಹಾಗೂ ಕ್ರೀಯೆಗಳಿಂದ ಯಾರು ಈ ನರಸಿಂಹನನ್ನು ಪೂಜಿಸುವರೊ ಅವರಿಗೆ ಸರ್ವವು ಒಳಿತಾಗುತ್ತದೆ ಎಂದು ನಂಬಲಾಗಿದೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಬ್ರಹ್ಮೋತ್ಸವವನ್ನು ಅತಿ ವಿಜ್ರ್‍ಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೆ ಪ್ರತಿ ತಿಂಗಳು ಭಗವಂತನ ನಕ್ಷತ್ರವಾದ ಸ್ವಾತಿ ನಕ್ಷತ್ರದ ದಿನದಂದು ಗ್ರಾಮೋತ್ಸವವನ್ನು ಆಚರಿಸಲಾಗುತ್ತದೆ.

ಚಿತ್ರಕೃಪೆ: sai sreekanth mulagaleti

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X