Search
  • Follow NativePlanet
Share
» »ಕೇವಲ ಎರಡೂವರೆ ದಿನಗಳಲ್ಲಿ ನಿರ್ಮಾಣವಾದ ಅಜ್ಮೀರ್‌ನ ‘ಅದೈ ದಿನ್ ಕಾ ಜೋಪ್ರಾ’ ಹೇಗಿದೆ ನೋಡಿ…

ಕೇವಲ ಎರಡೂವರೆ ದಿನಗಳಲ್ಲಿ ನಿರ್ಮಾಣವಾದ ಅಜ್ಮೀರ್‌ನ ‘ಅದೈ ದಿನ್ ಕಾ ಜೋಪ್ರಾ’ ಹೇಗಿದೆ ನೋಡಿ…

ಪ್ರಪಂಚದಾದ್ಯಂತ ಅನೇಕ ಸುಂದರವಾದ ಅರಮನೆಗಳು ಮತ್ತು ಸ್ಮಾರಕಗಳಿವೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇವುಗಳನ್ನೆಲ್ಲಾ ನಿರ್ಮಿಸಲು ಅವರಿಗೆ ಬರೋಬ್ಬರಿ 15 ರಿಂದ 20 ವರ್ಷಗಳು ಸಮಯ ಬೇಕಾಗಿದೆ. ಇನ್ನು ಕೆಲವರು 30 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಕೇವಲ ಎರಡೂವರೆ ದಿನಗಳಲ್ಲಿ ನಿರ್ಮಾಣವಾದ ಕಟ್ಟಡವನ್ನು ನೋಡಿದ್ದೀರಾ?.

ಹೌದು, ನಮ್ಮ ದೇಶದ ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಅಧೈ ದಿನ್ ಕಾ ಜೋಪ್ರಾ ಮಸೀದಿಯನ್ನು ಕೇವಲ ಎರಡೂವರೆ ದಿನಗಳಲ್ಲಿ ಕಟ್ಟಿಸಲಾಗಿದೆ. ಅದೈ ದಿನ್ ಕಾ ಜೋಪ್ರಾ ಹಿಂದೂ ಮತ್ತು ಜೈನ ದೇವಾಲಯಗಳ ಅವಶೇಷಗಳೊಂದಿಗೆ ನಿರ್ಮಿಸಲಾದ ಸುಂದರವಾದ ಮಸೀದಿಯಾಗಿದೆ.

ಅತ್ಯಂತ ಹಳೆಯ ಸ್ಮಾರಕ

ಅತ್ಯಂತ ಹಳೆಯ ಸ್ಮಾರಕ

ಈ ಕಟ್ಟಡವು ಮೂಲತಃ ಸಂಸ್ಕೃತ ಶಾಲೆಯಾಗಿತ್ತು. ಹೆರಾತ್‌ನ ಅಬು ಬಕರ್ ವಿನ್ಯಾಸಗೊಳಿಸಿದ ಈ ಮಸೀದಿಯು ಭಾರತೀಯ ಮುಸ್ಲಿಂ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ಇದರ ಇತಿಹಾಸವು 800 ವರ್ಷಗಳಷ್ಟು ಹಳೆಯದು. ಅಜ್ಮೀರ್ ದರ್ಗಾ ಶರೀಫ್‌ನಿಂದ 500 ಮೀ ಮತ್ತು ಅಜ್ಮೀರ್ ಜಂಕ್ಷನ್ ರೈಲು ನಿಲ್ದಾಣದಿಂದ 1.5 ಕಿಮೀ ದೂರದಲ್ಲಿರುವ ಅದೈ ದಿನ್ ಕಾ ಜೋಪ್ರಾ, ರಾಜಸ್ಥಾನದ ಅಜ್ಮೀರ್ ಪಟ್ಟಣದ ದರ್ಗಾ ಶರೀಫ್ ಬಳಿ ಇರುವ ಪುರಾತನ ಮಸೀದಿಯಾಗಿದೆ. ಇದು ಭಾರತದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಾಗಿದೆ ಮತ್ತು ಅಜ್ಮೀರ್‌ನಲ್ಲಿ ಉಳಿದಿರುವ ಅತ್ಯಂತ ಹಳೆಯ ಸ್ಮಾರಕವಾಗಿದೆ. ಈ ಸ್ಥಳವನ್ನು ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿದೆ.

ಅದೈ ದಿನ್ ಕಾ ಜೋಪ್ರಾ ಎಂದು ಕರೆಯಲು ಕಾರಣ

ಅದೈ ದಿನ್ ಕಾ ಜೋಪ್ರಾ ಎಂದು ಕರೆಯಲು ಕಾರಣ

ಈ ಮಸೀದಿಯನ್ನು ಅದೈ ದಿನ್ ಕಾ ಜೋಪ್ರಾ ಎಂದು ಏಕೆ ಕರೆಯುತ್ತಾರೆ ಎಂಬುದರ ಹಿಂದಿನ ಕಥೆಯು ತುಂಬಾ ಆಸಕ್ತಿದಾಯಕವಾಗಿದೆ. ಅದೈ ದಿನ್ ಕಾ ಜೋಪ್ರಾ, ಎಂದರೆ 'ಎರಡೂವರೆ ದಿನಗಳ ಗುಡಿಸಲು' ಎಂದರ್ಥ. ಇದನ್ನು ದೆಹಲಿಯ ಮೊದಲ ಸುಲ್ತಾನ ಕುತುಬುದ್ದೀನ್ ಐಬಕ್ ನಿರ್ಮಿಸಿದ. ಈ ಮಸೀದಿಯನ್ನು ನಿರ್ಮಿಸಲು ಕೇವಲ ಎರಡೂವರೆ ದಿನಗಳು ಅಂದರೆ 60 ಗಂಟೆಗಳು ಬೇಕಾಯಿತು ಎಂದು ಹೇಳಲಾಗಿದೆ, ಆದ್ದರಿಂದ ಇದನ್ನು ಅದೈ ದಿನ್ ಕಾ ಜೋಪ್ರಾ ಎಂದು ಕರೆಯಲಾಗುತ್ತದೆ. ಆದರೆ ಜೋಪ್ರಾದ ಎಡಭಾಗದಲ್ಲಿ ಒಂದು ಶಾಸನವನ್ನು ಇರಿಸಲಾಗಿದೆ. ಶಾಸನವು ಇದು ಮೊದಲು ಸಂಸ್ಕೃತ ಪಾಠಶಾಲೆಯಾಗಿತ್ತು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.

ಪೂರ್ಣಗೊಂಡಿದ್ದು ಹೀಗೆ…

ಪೂರ್ಣಗೊಂಡಿದ್ದು ಹೀಗೆ…

ಅದೈ ದಿನ್ ಕಾ ಜೋಪ್ರಾದ ಸ್ಥಳವು ಮೂಲತಃ ಶಾಕಾಂಬರಿ ಚೌಹಾಣ್ ರಾಜವಂಶದ ರಾಜ ವಿಗ್ರಹರಾಜ IV ಸ್ಥಾಪಿಸಿದ ಸಂಸ್ಕೃತ ಕಾಲೇಜು. ಈ ಸ್ಥಳದಲ್ಲಿ ಕಂಡುಬರುವ ಶಾಸನದ ಆಧಾರದ ಮೇಲೆ, ಮೂಲ ಕಟ್ಟಡವನ್ನು 1153 ಸಿಇ ಗಿಂತ ಮೊದಲು ನಿರ್ಮಿಸಿರಬೇಕು. ಇದನ್ನು 1192 ಸಿಇ ನಲ್ಲಿ ಮುಹಮ್ಮದ್ ಘೋರಿಯ ಆದೇಶದ ಮೇರೆಗೆ ಕುತುಬುದ್ದೀನ್ ಐಬಕ್ ಭಾಗಶಃ ನಾಶಪಡಿಸಿ ನಂತರ ಮಸೀದಿಯಾಗಿ ಪರಿವರ್ತಿಸಿದನು. ಇದನ್ನು 1199 ಸಿಇ ಯಲ್ಲಿ ಪೂರ್ಣಗೊಳಿಸಲಾಯಿತು. 1213 ಸಿಇ ನಲ್ಲಿ ದೆಹಲಿಯ ಇಲ್ತುಟ್ಮಿಶ್ ಅವರು ಮತ್ತಷ್ಟು ಸುಂದರಗೊಳಿಸಿದರು.

ಹೀಗಿದೆ ನೋಡಿ ಮಸೀದಿಯ ವಿನ್ಯಾಸ

ಹೀಗಿದೆ ನೋಡಿ ಮಸೀದಿಯ ವಿನ್ಯಾಸ

ಅದೈ ದಿನ್ ಕಾ ಜೋಪ್ರಾ ಇಂಡೋ ಇಸ್ಲಾಮಿಕ್ ವಾಸ್ತುಶಿಲ್ಪದ ಆರಂಭಿಕ ಉದಾಹರಣೆಯಾಗಿದೆ. ಇದನ್ನು ಹೆರಾತ್‌ನ ಅಬು ಬಕರ್ ವಿನ್ಯಾಸಗೊಳಿಸಿದ್ದಾರೆ. ಭಗ್ನಗೊಂಡ ಹಿಂದೂ ಮತ್ತು ಜೈನ ದೇವಾಲಯಗಳಿಂದ ತೆಗೆದ ಕಲ್ಲಿನಿಂದ ನಿರ್ಮಿಸಲಾದ ಮಸೀದಿಯು ಏಳು ಕಮಾನಿನ ಗೋಡೆಯಿಂದ ಸುತ್ತುವರೆದಿದೆ. ಇಲ್ಲಿ ಕುರಾನ್‌ನ ಪದ್ಯಗಳನ್ನು ಕೆತ್ತಲಾಗಿದೆ. ಉತ್ತರದಲ್ಲಿರುವ ಸರಳ ದ್ವಾರದ ಮೂಲಕ ಮಸೀದಿಯನ್ನು ಪ್ರವೇಶಿಸಬಹುದು. ಬಲಭಾಗದಲ್ಲಿ ಪಾಳುಬಿದ್ದ ಮಿನಾರೆಟ್ ನಿಂತಿದೆ. ಮುಂಭಾಗವು ಹಳದಿ ಸುಣ್ಣದ ಕಲ್ಲಿನಿಂದ ನಿರ್ಮಿಸಲಾದ ಹಲವಾರು ಸಣ್ಣ ಕಮಾನುಗಳನ್ನು ಒಳಗೊಂಡಿದೆ. ಮುಖ್ಯ ಕಮಾನು ಅರಬ್ ಮೂಲದ ಆರು ಸಣ್ಣ ಕಮಾನುಗಳಿಂದ ಸುತ್ತುವರಿದಿದೆ. ಇದರಲ್ಲಿ ಸಣ್ಣ ಆಯತಾಕಾರದ ಫಲಕಗಳನ್ನು ಬೆಳಕಿನ ವ್ಯವಸ್ಥೆಗೆ ಅನುಮತಿಸಲಾಗಿದೆ. ಇದು ಪ್ರಾಚೀನ ಅರೇಬಿಯನ್ ಮಸೀದಿಗಳಲ್ಲಿ ಕಂಡುಬರುತ್ತದೆ.

ಮಸೀದಿಯ ಒಳಭಾಗ ಹೇಗಿದೆ ?

ಮಸೀದಿಯ ಒಳಭಾಗ ಹೇಗಿದೆ ?

ಮಸೀದಿಯು 124 ಕಂಬಗಳು ಮತ್ತು 10 ಗುಮ್ಮಟಗಳನ್ನು ಹೊಂದಿದೆ. ಮುಖ್ಯ ಸಭಾಂಗಣದ ಗೋಡೆಗಳನ್ನು ಸೂರ್ಯನ ಬೆಳಕು ಪ್ರವೇಶಿಸಲು ಸಣ್ಣ ಪರದೆಗಳಾಗಿ ವಿನ್ಯಾಸಗೊಳಿಸಲಾಗಿದೆ. ಮಸೀದಿಯ ಒಳಭಾಗವು ಹಲವಾರು ಸ್ತಂಭಗಳಿಂದ ಬೆಂಬಲಿತವಾದ ಮುಖ್ಯ ಸಭಾಂಗಣವನ್ನು ಹೊಂದಿರುವ ಹಿಂದೂ ದೇವಾಲಯದಂತಿದೆ. ಮೂರು ಕಂಬಗಳನ್ನು ಒಂದರ ಮೇಲೊಂದು ಇರಿಸಲಾಗಿದ್ದು, ಚದರ ಕೊಲ್ಲಿಗಳ ಮೇಲೆ ಛಾವಣಿಯನ್ನು ಬೆಂಬಲಿಸಲಾಗುತ್ತದೆ. ಸ್ತಂಭಗಳು ಅಸಾಮಾನ್ಯ ವಿನ್ಯಾಸವನ್ನು ಹೊಂದಿದ್ದು, ಚೆನ್ನಾಗಿ ಅಲಂಕರಿಸಲಾಗಿದೆ. ಇವು ಹಿಂದೂ ಮತ್ತು ಜೈನ ಕಲ್ಲಿನ ದೇವಾಲಯಗಳಿಗೆ ಹೋಲುತ್ತವೆ. ಅವುಗಳ ತಳಗಳು ದೊಡ್ಡದಾಗಿರುತ್ತವೆ ಮತ್ತು ಗೋಳಾಕರದಲ್ಲಿವೆ. ಎತ್ತರಕ್ಕೆ ಹೋದಂತೆ ಮೊನಚಾಗಿವೆ. ಮುಖ್ಯ ದ್ವಾರದ ಮೇಲೆ ಒಂದು ಸಂಸ್ಕೃತ ಶಾಸನವಿದೆ. ಅದು ಈ ಐತಿಹಾಸಿಕ ಸ್ಮಾರಕದ ನಿಜವಾದ ಮೂಲವನ್ನು ನೆನಪಿಸುತ್ತದೆ. ಮಸೀದಿ ವೀಕ್ಷಣೆ ಸಮಯ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ. ಪ್ರವೇಶ ಶುಲ್ಕ ಉಚಿತ.

ಹೋಗುವುದು ಹೇಗೆ?

ಹೋಗುವುದು ಹೇಗೆ?

ವಿಮಾನ: ಅಜ್ಮೀರ್ ನಲ್ಲಿ ವಿಮಾನ ನಿಲ್ದಾಣವಿಲ್ಲ, ಆದರೆ ಜೈಪುರದ ಸಂಗನೇರ್ ವಿಮಾನ ನಿಲ್ದಾಣವು ಅಜ್ಮೀರ್‌ನಿಂದ 130 ಕಿಮೀ ದೂರದಲ್ಲಿದೆ. ಆದ್ದರಿಂದ ನೀವು ಬೇಕಾದರೆ ಜೈಪುರ ವಿಮಾನ ನಿಲ್ದಾಣ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ರೈಲು: ನೀವು ರೈಲಿನಲ್ಲಿ ಅಜ್ಮೀರ್ ನಿಲ್ದಾಣವನ್ನು ಸುಲಭವಾಗಿ ತಲುಪಬಹುದು. ಇಲ್ಲಿಂದ ಮಸೀದಿಗೆ ಹೋಗಲು ಸ್ಥಳೀಯ ಸಾರಿಗೆಯನ್ನು ತೆಗೆದುಕೊಳ್ಳಬಹುದು.

ಬಸ್: ನೀವು ರೈಲು ಅಥವಾ ವಿಮಾನದಲ್ಲಿ ಹೋಗಲು ಬಯಸದಿದ್ದರೆ, ಅಜ್ಮೀರ್‌ಗೆ ಅನೇಕ ಡೀಲಕ್ಸ್ ಮತ್ತು ಸೆಮಿ ಡೀಲಕ್ಸ್ ಎಸಿ ಬಸ್ಸುಗಳು ಸಂಚರಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X