Search
  • Follow NativePlanet
Share
» »ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

By Vijay

ರಾಮಾಯಣದಲ್ಲಿ ಸೀತೆಯನ್ನು ಮರಳಿ ಪಡೆದ ನಂತರ ರಾಮನು ಲೋಕಾಪಾದನೆಯ ಪ್ರಭಾವದಲ್ಲಿ ಸೀತೆಯನ್ನು ಮತ್ತೆ ತ್ಯಜಿಸುವನೆಂಬುದು ಬಹುತೇಕರಿಗೆ ಗೊತ್ತಿದೆ. ಹೀಗೆ ಎರಡನೆಯ ಬಾರಿಗೆ ವನವಾಸ ಅನುಭವಿಸುವ ಸೀತೆಯು ಆ ಸಂದರ್ಭದಲ್ಲಿ ಗರ್ಭವತಿಯಾಗಿರುತ್ತಾಳೆ. ಮುಂದೆನೆಂಬುದು ಗೊತ್ತಾಗದೆ ವಾಲ್ಮಿಕಿ ಮಹಾಮುನಿಗಳ ಆಶ್ರಯದಲ್ಲೆ ನೆಲೆಸುತ್ತಾಳೆ.

ಹೀಗೆ ಹಲವು ಸಮಯ ಕಳೆದ ನಂತರ ಸೀತೆಯು ರಾಮಚಂದ್ರನ ಮಕ್ಕಳಾದ ಲವ ಹಾಗೂ ಕುಶರಿಗೆ ಜನ್ಮ ನೀಡುತ್ತಾಳೆ. ಮುಂದೆ ತಮ್ಮೆಲ್ಲರಿಗೂ ಗೊತ್ತಿರುವಂತೆ ಲವ-ಕುಶರೊಡನೆ ಹೋರಾಡಲು ಸ್ವತಃ ರಾಮನೆ ಬಂದಾಗ ನಾಟಕೀಯವಾದ ತಿರುವು ಪಡೆದು ಸೀತೆಯು ಅಂತಿಮವಾಗಿ ಭೂತಾಯಿಯ ಒಡಲಿನಲ್ಲಿ ಸೇರಿ ಹೋಗುತ್ತಾಳೆ. ಹಾಗೆ ಭೂಮಿಯನ್ನು ಸೇರಿದ ಸ್ಥಳವೆ ಈ ಲೇಖನದಲ್ಲಿ ತಿಳಿಸಲಾದ ಸ್ಥಳ!

ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ಚಿತ್ರಕೃಪೆ: Sreejith K

ಹೀಗೆ ಸೀತೆಯು ಹಿಂದು ಸಂಸ್ಕೃತಿಯಲ್ಲಿ ಪವಿತ್ರ ಸ್ತ್ರೀಯಾಗಿಯೂ, ಪರಮ ಪತಿವೃತೆಯಾಗಿಯೂ, ಆದರ್ಶ ಮಾತೆಯಾಗಿಯೂ ಸ್ತ್ರೀತನದ ದೈವತ್ವವನ್ನು ಸಾರಿ ಸಾರಿ ಹೇಳುತ್ತಾಳೆ. ಅದರಂತೆ ಸೀತಾ ಮಾತೆಯ ಮಕ್ಕಳಾದ ಲವ ಹಾಗೂ ಕುಶರೂ ಸಹ ಚಿಕ್ಕ ವಯಸ್ಸಿನಲ್ಲೆ ಅಪ್ರತಿಮ ಶೂರರಾಗಿಯೂ, ಆದರ್ಶ ಮಕ್ಕಳಾಗಿಯೂ, ಧರ್ಮದ ಪರರಾಗಿಯೂ ಗಮನಸೆಳೆಯುತ್ತಾರೆ.

ಇಂತಹ ಆದರ್ಶ ತಾಯಿ ಹಾಗೂ ಆದರ್ಶ ಮಕ್ಕಳಿಗೆಂದೆ ಮುಡಿಪಾದ ದೇವಾಲಯವೊಂದಿದೆ. ಅದನ್ನೆ ಸೀತಾ ದೇವಿ ದೇವಾಲಯ ಅಥವಾ ಸೀತಾ ಲವಕುಶ ದೇವಾಲಯ ಎಂದು ಕರೆಯುತ್ತಾರೆ. ಇದು ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ವಯನಾಡ್ ಜಿಲ್ಲೆಯಲ್ಲಿದೆ.

ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ಚಿತ್ರಕೃಪೆ: Rameshng

ವಯನಾಡ್ ಜಿಲ್ಲೆಯ ಆಡಳಿತ ಪಟ್ಟಣವಾದ ಕಲ್ಪೆಟ್ಟಾದಿಂದ 35 ಕಿ.ಮೀ ಗಳಷ್ಟು ದೂರದಲ್ಲಿರುವ ಪುಲ್ಪಲ್ಲಿ ಎಂಬ ಗ್ರಾಮದಲ್ಲಿ ಈ ಪ್ರವಾಸಿ ವಿಶೇಷತೆಯುಳ್ಳ ದೇವಾಲಯವಿದೆ. ಪುಲ್ಪಲ್ಲಿ ನಿಜ ಹೇಲಬೇಕೆಂದರೆ ಕರ್ನಾಟಕದ ಗಡಿಗೆ ಬಲು ಹತ್ತಿರದಲ್ಲಿದೆ. ಅಂದರೆ ಕೇವಲ ಹತ್ತು ಕಿ.ಮೀ ಅಂತರದಲ್ಲಿ ಮಾತ್ರ.

ಏನಾದರೂ, ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಜಂಟಿಯಾಗಿ ಇಚ್ಛಾಶಕ್ತಿ ತೋರಿ ಇಲ್ಲಿ ಹರಿದಿರುವ ಕಬಿನಿ ನದಿಗೆ ಅಡ್ಡಲಾಗಿ ಸೇತುವೆಯೊಂದನ್ನು ನಿರ್ಮಿಸಿದರೆ ಕೇರಳ ರಾಜ್ಯವನ್ನು ಕರ್ನಾಟಕದವರೂ ಹಾಗೂ ಕರ್ನಾಟವನ್ನು ಕೇರಳದವರೂ ಮೈಸೂರಿನ ಅತಿ ಕಡಿಮೆ ದೂರ ಹಾಗೂ ಸಮಯದಲ್ಲಿ ಪ್ರವೇಶಿಸಬಹುದು.

ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ಚಿತ್ರಕೃಪೆ: Rameshng

ಆದಾಗ್ಯೂ ಈ ವಿಶೇಷ ದೇವಾಲಯವನ್ನು ನೋಡಬಯಸುವವರು ವಯನಾಡಿನ ಕಲ್ಪೆಟ್ಟಾ ತಲುಪಿ ಅಲ್ಲಿಂದ ದೊರೆಯುವ ಬಸ್ಸುಗಳ ಮೂಲಕವಾಗಿಯೂ ಅಥವಾ ಬಾಡಿಗೆ ಟ್ಯಾಕ್ಸಿಗಳಿಂದ ಪುಲ್ಪಲ್ಲಿ ಗ್ರಾಮವನ್ನು ತಲುಪಬಹುದು ಹಾಗೂ ಈ ವಿಶಿಷ್ಟ ಸೀತಾ ಲವಕುಶ ದೇವಾಲಯದ ದರ್ಶನ ಮಾಡಬಹುದು. ಜನವರಿ ಸಂದರ್ಭದಲ್ಲಿ ವಿಶೇಷ ಉತ್ಸವವನ್ನು ಈ ದೇವಾಲಯದಲ್ಲಿ ಆಚರಿಸಲಾಗುತ್ತದೆ.

ಈ ಸಮಯದಲ್ಲಿ ವಯನಾಡ್ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಕೇರಳ ರಾಜ್ಯದ ಅತಿರಥ ಮಹಾರಥ ರಾಜನೆಂದು ಕರೆಯಲ್ಪಡುವ ಕೇರಳ ವರ್ಮ ಪಾಳಸ್ಸಿ ರಾಜನ ಆಡಳಿತ ಸಂದರ್ಭದಲ್ಲಿ ಈ ದೇವಾಲಯದ ನಿರ್ಮಾಣವಾಯಿತೆಂಬ ಪ್ರತೀತಿಯಿದೆ.

ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ಪುಲ್ಪಲ್ಲಿ ಪರಿಸರ, ಚಿತ್ರಕೃಪೆ: Shibin pv

ಟಿಪ್ಪು ಸುಲ್ತಾನನು ತನ್ನ ದಂಡೆತ್ತಿ ಬಂದಾಗ ಈ ದೇವಾಲಯವನ್ನು ನಾಶಪಡಿಸುವ ಉದ್ದೇಶ ಹೊಂದಿದ್ದ. ಆದರೆ ಆತ ಈ ದೇವಾಲಯದ ಬಳಿ ಬರುತ್ತಿದ್ದಂತೆಯೆ ಮಾತೆ ಸೀತೆಯ ಪ್ರಭಾವದಿಂದ ಮಧ್ಯಾಹ್ನದ ಸಮಯದಲ್ಲೆ ಕಡು ಅಂಧಕಾರ ಉಂಟಾಯಿತಂತೆ! ಇದರಿಂದ ದಿಗ್ಭ್ರಮೆಗೊಂಡ ಸುಲ್ತಾನ ತನ್ನ ವಿಚಾರ ಕೈಬಿಟ್ಟು ಹಾಗೆ ಹೊರಡಬೇಕಾಯಿತಂತೆ! ಎಂದು ಇಲ್ಲಿನ ಸ್ಥಳಪುರಾಣ ಹೇಳುತ್ತದೆ.

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಇನ್ನೂ ಪುಲ್ಪಲ್ಲಿ ಗ್ರಾಮವು ದಟ್ಟ ಹಸಿರಿನ ಮಧ್ಯದಲ್ಲಿ ನೆಲೆಸಿರುವ ಆಕರ್ಷಕ ಗ್ರಾಮವಾಗಿ ಪ್ರವಾಸಿಗರ ಮನ ಕದಿಯದೆ ಇರಲಾರದು. ಗದ್ದೆಗಳು, ಹಸಿರಿನಿಂದ ಕೂಡಿದ ಗಿರಿ-ಪರ್ವತಗಳು, ಪ್ರಶಾಂತ ಪರಿಸರ, ಕಲ್ಮಶರಹಿತ ವಾತಾವರಣ ಎಲ್ಲವೂ ಸೇರಿ ಈ ಪುಟ್ಟ ಗ್ರಾಮವು ಮನಸ್ಸಿಗೆ ನೆಮ್ಮದಿ ನೀಡುವ ದೃಷ್ಟಿಯಿಂದ ದೊಡ್ಡ ಗ್ರಾಮವಾಗಿ ಮನಸೆಳೆಯುತ್ತದೆ. ಅಲ್ಲದೆ ಈ ದೇವಾಲಯದ ಕಲ್ಯಾಣಿಯು ವಯನಾಡ್ ಜಿಲ್ಲೆಯಲ್ಲೆ ನೋಡಬಹುದಾದ ದೊಡ್ಡ ಕಲ್ಯಾಣಿಯಾಗಿ ಗಮನಸೆಳೆಯುತ್ತದೆ. ಇನ್ನೇಕೆ ತಡ, ಆದಷ್ಟು ಶೀಘ್ರ ಸೀತೆಯ ದರ್ಶನ ಪಡೆಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X