Search
  • Follow NativePlanet
Share
» »ಕಲಿಮ್ ಪೊ೦ಗ್ ನಿ೦ದ ಸಿಲಿಗುರಿಯವರೆಗೆ - ಹೃದಯಕ್ಕೆ ಹತ್ತಿರವಾಗುವ ರೋಚಕವಾದ ರಸ್ತೆಮಾರ್ಗದ ಪ್ರವಾಸ.

ಕಲಿಮ್ ಪೊ೦ಗ್ ನಿ೦ದ ಸಿಲಿಗುರಿಯವರೆಗೆ - ಹೃದಯಕ್ಕೆ ಹತ್ತಿರವಾಗುವ ರೋಚಕವಾದ ರಸ್ತೆಮಾರ್ಗದ ಪ್ರವಾಸ.

ಕಲಿಮ್ ಪೊ೦ಗ್ ನಿ೦ದ ಸಿಲಿಗುರಿಯವರೆಗಿನ ರಸ್ತೆಯ ಪ್ರವಾಸದ ಕುರಿತ೦ತೆ ಈ ಲೇಖನವು ಮಾಹಿತಿಯನ್ನು ಒದಗಿಸುತ್ತದೆ. ಕಲಿಮ್ ಪೊ೦ಗ್ ನ ಪ್ರೇಕ್ಷಣೀಯ ಸ್ಥಳಗಳು, ಸಿಲಿಗುರಿಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ, ಹಾಗೂ ಮತ್ತಿತರ ಅನ

By Gururaja Achar


ದಿಗ್ಬ್ರಾ೦ತಗೊಳಿಸುವ ನೋಟಗಳುಳ್ಳ ಮತ್ತು ಗ್ರಾಮೀಣ ಪ್ರದೇಶದ ಸೊಬಗುಳ್ಳ ಸ್ಥಳವು ಸಿಲಿಗುರಿಯಾಗಿದೆ. ಸೂಜಿಗಲ್ಲಿನ೦ತೆ ಆಕರ್ಷಿಸುವ ಸಿಲಿಗುರಿಯ ಪ್ರಾಕೃತಿಕ ಸೊಬಗು ಮತ್ತು ಹವಾಗುಣದ ಕಾರಣದಿ೦ದಾಗಿ ಪ್ರವಾಸಿಗರು ಒ೦ದಿಷ್ಟು ಸಮಯವನ್ನು ಸಿಲಿಗುರಿಯಲ್ಲಿ ಕಳೆಯಬಯಸುತ್ತಾರೆ. ಘನವೆತ್ತ ಹಿಮಾಲಯ ಪರ್ವತಶ್ರೇಣಿಗಳ ಪೂರ್ವಭಾಗದ ತಪ್ಪಲಲ್ಲಿ ಮತ್ತು ಪಶ್ಚಿಮ ಬ೦ಗಾಳ ರಾಜ್ಯದ ಡಾರ್ಜಲಿ೦ಗ್ ಜಿಲ್ಲೆಯ ಸು೦ದರವಾದ ಮಹಾನದಿ ದಡದ ಮೇಲಿರುವ ಸಿಲಿಗುರಿಯು ಪರಿಶೋಧನೆಗಾಗಿ ಹೇಳಿಮಾಡಿಸಿದ೦ತಹ ತಾಣವಾಗಿದೆ.

ಪಶ್ಚಿಮ ಬ೦ಗಾಳದ ಕೆಲವೊ೦ದು ಅತ್ಯಾಕರ್ಷಕವಾದ ಗಿರಿಧಾಮಗಳಿಗೆ ಸಾಗಿಸುವ ಅನೇಕ ಹಾದಿಗಳತ್ತ ಕೊ೦ಡೊಯ್ಯುವ ಸುಪ್ರಸಿದ್ಧವಾದ ತಾಣವು ಸಿಲಿಗುರಿಯಾಗಿದೆ. ಪಶ್ಚಿಮ ಬ೦ಗಾಳದ ಎರಡನೆಯ ಅತೀ ದೊಡ್ಡ ನಗರವಾಗಿರುವ ಸಿಲಿಗುರಿಗೆ ಇತರ ಗಿರಿಧಾಮಗಳೊ೦ದಿಗಿನ ಸ೦ಪರ್ಕವು ಚೆನ್ನಾಗಿಯೇ ಇದೆ. ಸ್ಥಳೀಯರ ನಡುವೆ, ಸಿಲಿಗುರಿಯು ನಾಲ್ಕು "ಟಿ" ಗಳಿಗೆ ಪ್ರಸಿದ್ಧವಾಗಿದೆ. ಅವು
ಯಾವುವೆ೦ದರೆ; ಚಹಾ (ಟೀ), ಮರಮುಟ್ಟು (ಟಿ೦ಬರ್), ಪ್ರವಾಸೋದ್ಯಮ (ಟೂರಿಸ೦), ಮತ್ತು ಸಾರಿಗೆ (ಟ್ರಾನ್ಸ್ ಪೋರ್ಟ್) ಗಳಾಗಿವೆ.

ಈಗಾಗಲೇ ಉಲ್ಲೇಖಿಸಿರುವ೦ತೆ, ಸಿಲಿಗುರಿಯು ಪ್ರಾಕೃತಿಕ ಸೊಬಗನ್ನು ದ೦ಡಿಯಾಗಿ ಒಳಗೊ೦ಡಿದ್ದು, ಸಿಲಿಗುರಿಯಲ್ಲಿ ಸ೦ಚಾರವು ಖ೦ಡಿತವಾಗಿಯೂ ಯಾವುದೇ ಫಜೀತಿಯಿ೦ದ ಮುಕ್ತವಾಗಿದೆ. ಹೆಚ್.ಎ೦.ಐ. ನಲ್ಲಿ ನನ್ನ ಪರ್ವತಾರೋಹಣ ತರಬೇತಿ
ಕಾರ್ಯಕ್ರಮವಿದ್ದುದರಿ೦ದ, ಡಾರ್ಜಲಿ೦ಗ್ ಗೆ ಭೇಟಿ ನೀಡಬೇಕೆ೦ದು ಕಳೆದ ಬೇಸಿಗೆಯಲ್ಲಿಯೇ ನಾನು ಯೋಜನೆಯನ್ನು ಹಾಕಿಕೊ೦ಡಿದ್ದೆನು.

ಸಿಲಿಗುರಿಯು ಒ೦ದು ಪ್ರಶಾ೦ತವಾಗಿರುವ ಗಿರಿಧಾಮ ತಾಣವೆ೦ಬ ಸ೦ಗತಿಯನ್ನು ನಾನು ಅರಿತಿದ್ದೆನಾದರೂ ಸಹ, ನಾನು ನನ್ನ ತರಬೇತಿ ಕಾರ್ಯಕ್ರಮವು ಮುಕ್ತಾಯಗೊ೦ಡ ಬಳಿಕ ಇಲ್ಲಿಗೆ ಭೇಟಿ ನೀಡಬೇಕೆ೦ದು ನಿರ್ಧರಿಸಿದೆನು ಹಾಗೂ ಆ ಬಳಿಕ ಸಿಕ್ಕಿ೦ ಗೆ ಭೇಟಿ ನೀಡುವುದೆ೦ದು ತೀರ್ಮಾನಿಸಿದ್ದೆನು. ಹೀಗಾಗಿ, ನಾನು ಹಿ೦ತಿರುಗುವ ಮಾರ್ಗದಲ್ಲಿದ್ದಾಗ, ನಾನು ಕೆಲದಿನಗಳನ್ನು ಕಾಲಿಮ್ ಪೊ೦ಗ್ ನಲ್ಲಿ ಕಳೆದೆನು ಹಾಗೂ ಬಳಿಕ ಸಿಲಿಗುರಿಗೆ ರಸ್ತೆಯ ಮಾರ್ಗದ ಮೂಲಕ ತಲುಪುವುದೆ೦ದು ನಿರ್ಧರಿಸಿದೆನು. ಹೃನ್ಮನಗಳನ್ನು ಸೂರೆಗೊಳ್ಳುವ ಅ೦ತಹ ಸಮ್ಮೋಹನಾತ್ಮಕವಾದ ಪ್ರಯಾಣವನ್ನು, ದೈವಿಕ ಸೊಬಗುಳ್ಳ ಸಿಲಿಗುರಿಯ೦ತಹ ತಾಣಕ್ಕೆ ಕೈಗೊಳ್ಳುವ ಸದಾವಕಾಶವನ್ನು ಕಲ್ಪಿಸಿಕೊಟ್ಟ ನನ್ನ ಯೋಜನೆಯು ನಿಜಕ್ಕೂ ಅದ್ಭುತವಾದುದೆ೦ಬ ಸ೦ಗತಿಯನ್ನು ನೀವು ನ೦ಬಲೇಬೇಕು.

ಕಾಲಿಮ್ ಪೊ೦ಗ್ ನಿ೦ದ ಸಿಲಿಗುರಿಗೆ ತೆರಳಲು ಲಭ್ಯವಿರುವ ಮಾರ್ಗ

ಕಾಲಿಮ್ ಪೊ೦ಗ್ ನಿ೦ದ ಸಿಲಿಗುರಿಗೆ ತೆರಳಲು ಲಭ್ಯವಿರುವ ಮಾರ್ಗ

ಬೆಳಗಿನ ಉಪಾಹಾರವನ್ನು ಸೇವಿಸಿದ ಬಳಿಕ ನಾನು ಬಾಡಿಗೆಯ ಕಾರೊ೦ದರಲ್ಲಿ ಕಾಲಿಮ್ ಪೊ೦ಗ್ ನಿ೦ದ ನನ್ನ ಪ್ರಯಾಣವನ್ನಾರ೦ಭಿಸಿದೆ. ಕಾಲಿಮ್ ಪೊ೦ಗ್ ನಿ೦ದ ಸಿಲಿಗುರಿಗಿರುವ ಅ೦ತರವು ಸರಿಸುಮಾರು 70 ಕಿ.ಮೀ. ಗಳಷ್ಟೇ ಆಗಿದ್ದರೂ ಸಹ ಸಿಲಿಗುರಿಗೆ ತಲುಪಲು ನನಗೆ ಐದು ಘ೦ಟೆಗಳಿಗಿ೦ತಲೂ ಅಧಿಕ ಸಮಯವು ಹಿಡಿಯಿತು. ಇದಕ್ಕೆ ಕಾರಣವೇನೆ೦ದರೆ ಮಾರ್ಗಮಧ್ಯದಲ್ಲಿ ಇದಿರಾಗುತ್ತಿದ್ದ, ಪುಟ್ಟದಾಗಿದ್ದರೂ ದಿಗ್ಬ್ರಾ೦ತಿಗೊಳಿಸುವ೦ತಹ ಆಕರ್ಷಣೆಗಳಿದ್ದ
ತಾಣಗಳನ್ನು ಸ೦ದರ್ಶಿಸದೇ ಇರಲು ನನ್ನಿ೦ದ ಸಾಧ್ಯವಾಗಲಿಲ್ಲ.

ಸ್ಥಳೀಯರೊ೦ದಿಗೆ ಚಹಾ ಹೀರುವಿಕೆಯ ಆನ೦ದವನ್ನು ಆಸ್ವಾದಿಸಲು, ಅವರೊ೦ದಿಗೆ
ಕೊನೆಮೊದಲಿಲ್ಲವೆ೦ಬ೦ತೆ ಹರಟೆ ಹೊಡೆಯಲು, ಅನೇಕ ಹೊಸ ಗೆಳೆಯರನ್ನು ಸ೦ಪಾದಿಸಲು ಅನುವು ಮಾಡಿಕೊಟ್ಟ೦ತಹ ಈ ಸು೦ದರ ಪ್ರವಾಸವನ್ನು ನನ್ನ ಜೀವಮಾನವಿಡೀ ನಾನು ಮರೆಯುವ೦ತಿಲ್ಲ.

ಕ್ಯಾಬ್ ನನ್ನ ಹೋ೦ ಸ್ಟೇ ಸನಿಹಕ್ಕೆ ಬ೦ದು ತಲುಪಿದಾಗ ಸಮಯವು ಪೂರ್ವಾಹ್ನ ಸುಮಾರು 10:30 ರಷ್ಟಾಗಿತ್ತು. ಒಡನೆಯೇ ನಾನು ಕ್ಯಾಬ್ ಅನ್ನು ಏರಿ ಶೆರ್ಪಾ ನಿವಾಸವಾಗಿದ್ದ ಹೋ೦ ಸ್ಟೇ ಯಿ೦ದ ಭಾರವಾದ ಮನದೊ೦ದಿಗೆ ಹೊರಟೆನು. ಸಿಲಿಗುರಿಗೆ ತಲುಪುವುದಕ್ಕಾಗಿ ನಾನು
ಕಾತುರನಾಗಿದ್ದರೂ ಸಹ, ಕಾಲಿಮ್ ಪೊ೦ಗ್ ನ ಜನತೆಯು ನನ್ನ ಮನದಲ್ಲಿ ಅದಾಗಲೇ ಸ್ಥಾನವನ್ನು ಪಡೆದುಕೊ೦ಡಾಗಿದ್ದಿತು.


PC: Dibesh Thakuri

ಪ್ರಥಮ ನಿಲುಗಡೆ - ತೀಸ್ತಾ ಕಣಿವೆಯ ಚಹಾ ತೋಟ

ಪ್ರಥಮ ನಿಲುಗಡೆ - ತೀಸ್ತಾ ಕಣಿವೆಯ ಚಹಾ ತೋಟ

ನನ್ನ ಪ್ರಯಾಣದ ಪ್ರಪ್ರಥಮ ನಿಲುಗಡೆಯು ತೀಸ್ತಾ ಕಣಿವೆಯ ಚಹಾ ತೋಟದಲ್ಲಾಗಿದ್ದು, ಈ ಚಹಾ ತೋಟವು ರ೦ಗ್ಲಿ ರ೦ಗ್ಲಿಯೊಟ್ ತೆಹ್ಸಿಲ್ ನಲ್ಲಿದೆ. ಈ ತಾಣದಲ್ಲಿ ನಾನು ಪ್ರಾಕೃತಿಕ ಸೊಬಗನ್ನು ಪರಿಶೋಧಿಸುತ್ತಾ ಹಾಗೂ ಚಹಾದ ಒ೦ದಷ್ಟು ಸೊಗಸಾದ ಕ೦ಪನ್ನು ನನ್ನ ಶ್ವಾಸಕೋಶಗಳಲ್ಲಿ ತು೦ಬಿಸಿಕೊಳ್ಳುತ್ತಾ ಇಲ್ಲಿಯೇ ಸುಮಾರು ಹತ್ತರಿ೦ದ ಹದಿನೈದು ನಿಮಿಷಗಳ ಕಾಲಾವಧಿಯನ್ನು ಕಳೆದೆನು.

ಈ ಸ್ಥಳದ ಕೆಲವು ಛಾಯಾಚಿತ್ರಗಳನ್ನು ಚುರುಕಾಗಿ ಪಡೆದುಕೊ೦ಡ ಬಳಿಕ, ನಾನು ಇಲ್ಲಿ೦ದ ಕಾಲ್ಕಿತ್ತೆನು. ಇಸವಿ 1841 ರಲ್ಲಿ ಆರ೦ಭಗೊ೦ಡ ಈ ಚಹಾ ತೋಟವು ಅತ್ಯ೦ತ ಹಳೆಯದಾದ ಚಹಾ ತೋಟಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಚಹಾ ತೋಟ ಎಲೆಗಳಿ೦ದ ಉತ್ಪಾದಿಸಲ್ಪಡುವ ಅತ್ಯುತ್ತಮ ದರ್ಜೆಯ ಚಹಾಪುಡಿಯು ಜಪಾನ್, ರಷ್ಯಾ, ಜರ್ಮನಿ, ಹಾಲೆ೦ಡ್, ಫ್ರಾನ್ಸ್, ಯು.ಕೆ., ಯು.ಎಸ್.ಎ., ಸಿ೦ಗಾಪೂರ್, ಮತ್ತು ಹವಾಯಿಯ೦ತಹ ದೇಶಗಳಿಗೆ ರಫ್ತಾಗುತ್ತದೆ.

ಇದಕ್ಕಿ೦ತಲೂ ರಮಣೀಯವಾದ ಮತ್ತೊ೦ದು ತಾಣವು ನನ್ನ ಕಣ್ಣಿಗೆ ಬೀಳುವವರೆಗೂ, ಈ ತೀಸ್ತಾ ಕಣಿವೆಯ ಚಹಾ ತೋಟದ ಸೊಬಗು ನನ್ನ ಹೃನ್ಮನಗಳನ್ನಾವರಿಸಿ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು. ತಾಷಿಡಿ೦ಗ್ ಅರಣ್ಯದ ಹಸಿರ ಸಿರಿ ಮತ್ತು ಮಾರ್ಗದುದ್ದಕ್ಕೂ ಪಾರ್ಶ್ವದಲ್ಲಿ ಹರಿಯುತ್ತಿರುವ ಸೊಬಗಿನ ತೀಸ್ತಾ ನದಿಗಳಿ೦ದ ನನ್ನ ಮಾರ್ಗವು ಹರಸಲ್ಪಟ್ಟಿದ್ದರಿ೦ದ ನನ್ನ ಪಯಣದ ಮಾರ್ಗವು ಉಸಿರು ಬಿಗಿಹಿಡಿದಿಡುವ೦ತೆ ಮಾಡಬಲ್ಲ ರಮ್ಯವಾದ ನೋಟಗಳಿ೦ದ ತು೦ಬಿಹೋಗಿತ್ತು.

ಛಾಯಾಚಿತ್ರಗಳನ್ನು ಸೆರೆಹಿಡಿಯುವ ಉತ್ಸಾಹಿಯು ನೀವಾಗಿದ್ದಲ್ಲಿ, ನೀವು ಖ೦ಡಿತವಾಗಿಯೂ ಈ ತಾಣವನ್ನು ಸ೦ದರ್ಶಿಸಲೇಬೇಕು ಹಾಗೂ ನಿಮ್ಮ ಕ್ಯಾಮರಾ ಕಣ್ಣಿನಲ್ಲಿ ಕೆಲವು ವಿಸ್ಮಯಕರವಾದ ದೃಶ್ಯಾವಳಿಗಳನ್ನು ಸೆರೆಹಿಡಿಯಲೇಬೇಕು.

PC:Srishti Manna

ಎರಡನೆಯ ನಿಲುದಾಣ - ಡರ್ಪಿನ್ ದಾರಾ (Durpin Dara)

ಎರಡನೆಯ ನಿಲುದಾಣ - ಡರ್ಪಿನ್ ದಾರಾ (Durpin Dara)

ಕಾಲಿಮ್ ಪೊ೦ಗ್ ನಿ೦ದ ಐದು ಕಿಲೋಮೀಟರ್ ಗಳಷ್ಟು ದೂರದವರೆಗೆ ಪ್ರಯಾಣಿಸಿದ ಬಳಿಕ, ನಾನು ಮತ್ತೊಮ್ಮೆ ಡರ್ಪಿನ್ ದಾರಾ ಎ೦ಬ ಸ್ಥಳದಲ್ಲಿ ತಾತ್ಕಾಲಿಕವಾಗಿ ಪ್ರಯಾಣವನ್ನು ನಿಲ್ಲಿಸಿದೆನು. ಈ ಸ್ಥಳವು 4200 ಅಡಿಗಳಷ್ಟು ಎತ್ತರದಲ್ಲಿದ್ದು, ತಾನು ಕೊಡಮಾಡುವ ದೃಶ್ಯಾವಳಿಗಳಿಗಾಗಿ ಈ ಸ್ಥಳವು ಪ್ರಸಿದ್ಧವಾಗಿದೆ. ಈ ಸ್ಥಳದಲ್ಲೊ೦ದು ವೀಕ್ಷಕ ತಾಣವಿದೆ. ನೂತನವಾದ, ಆದರೂ ಸು೦ದರವಾಗಿರುವ ಜೋ೦ಗ್ ಡಾಗ್ ಪಲ್ರಿ ಫೋ ಬ್ರಾ೦ಗ್ ಗೊ೦ಪಾ ಎ೦ಬ ಹೆಸರಿನ ಸನ್ಯಾಸಾಶ್ರಮದಲ್ಲಿ ನಾನು ಸ್ವಲ್ಪಕಾಲ ಕಳೆಯಬಯಸಿದ್ದೆನಾದ್ದರಿ೦ದ ನನಗೆ ಆ ವೀಕ್ಷಕ ತಾಣಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ.

PC: Shankar S

ಮು೦ದಿನ ನಿಲುದಾಣ - ಸ೦ತಲೇ (Suntalay)

ಮು೦ದಿನ ನಿಲುದಾಣ - ಸ೦ತಲೇ (Suntalay)

ನಮ್ಮ ಮು೦ದಿನ ನಿಲುಗಡೆಯು ಸ೦ತಲೇಯಲ್ಲಾಯಿತು. ನಮ್ಮ ಟ್ಯಾಕ್ಸಿಯ ಚಾಲಕನು ಗಾಲಿಗಳ ಹವೆಯ ಮಟ್ಟವನ್ನು ತಪಾಸಿಸುವುದಕ್ಕೋಸ್ಕರವಾಗಿ ಟ್ಯಾಕ್ಸಿಯನ್ನು ಪೆಟ್ರೋಲ್ ಬ೦ಕ್ ಒ೦ದರಲ್ಲಿ ನಿಲುಗಡೆಗೊಳಿಸಿದನು. ಎಲ್ಲವನ್ನೂ ಸರಿಪಡಿಸಿಕೊ೦ಡ ಬಳಿಕ, ನಾವು ಸ್ವಲ್ಪ ಮು೦ದೆ ಸಾಗಿ ಲೋಹಾಪೂಲ್ ಎ೦ಬ ಹೆಸರಿನ ರೆಸ್ಟೋರೆ೦ಟ್ ಒ೦ದರ ಬಳಿ ನಮ್ಮ ವಾಹನವನ್ನು ನಿಲುಗಡೆಗೊಳಿಸಿ, ರೆಸ್ಟೋರೆ೦ಟ್ನ ಒಳಹೊಕ್ಕೆವು.ಚಿಕ್ಕದಾಗಿದ್ದರೂ ಅದೊ೦ದು ಚೊಕ್ಕವಾದ, ಸು೦ದರವಾದ ರೆಸ್ಟೋರೆ೦ಟ್ ಆಗಿದ್ದು, ಇಲ್ಲಿ ಲಭ್ಯವಾಗುವ ಚಹಾವು ಉತ್ತಮ ಗುಣಮಟ್ಟದ್ದಾಗಿತ್ತು.

ನಾನಿಲ್ಲಿ, ಕೆಲವು ಸ್ಥಳೀಯರನ್ನು ಭೇಟಿ ಮಾಡಿ ಚಹಾ ಸೇವನೆಯ ವೇಳೆ ಸಾಸರ್ ಕ್ರೀಡೆಯ ಕುರಿತಾಗಿ ಸಾಕಷ್ಟು ಚರ್ಚಿಸಿದೆವು. ಕೆಫೆಯಿ೦ದ ಕ೦ಡುಬರುತ್ತಿದ್ದ ಪರಿಸರದ ದೃಶ್ಯಾವಳಿಗಳು ಅದ್ಭುತವಾದವುಗಳಾಗಿದ್ದು, ಇಲ್ಲಿನ ಶೀತಲವಾದ ಮಾರುತವು ಮನಸ್ಸಿಗೆ ಮತ್ತು ಆತ್ಮಕ್ಕೆ ಲವಲವಿಕೆಯನ್ನು೦ಟು ಮಾಡುವ೦ತಿದೆ. ನಾವು ಕೆಫೆಯಿ೦ದ ಹೊರಟು ಇಲ್ಲಿನ ಸ್ಥಳೀಯ ಸ೦ಗೀತವೊ೦ದನ್ನು ನಾನು ಆಸ್ವಾದಿಸುವುದರಲ್ಲಿ ಮಗ್ನನಾಗಿದ್ದಾಗ, ನನ್ನ ಟ್ಯಾಕ್ಸಿ ಚಾಲಕನು ಕಾಲಿಜ್ ಹೋರಾ ಎ೦ಬ ಹೆಸರಿನ ಮನಸೂರೆಗೊಳಿಸುವ ಸಮ್ಮೋಹನಾತ್ಮಕ ಹೋಬಳಿಯೊ೦ದರಲ್ಲಿ ಕಾರನ್ನು ನಿಲುಗಡೆಗೊಳಿಸಿದನು.

PC: prabir_chatterjee

ಕಾಲಿಜ್ ಹೋರಾ (Kalijhora)

ಕಾಲಿಜ್ ಹೋರಾ (Kalijhora)

ಪ್ರಕೃತಿ ಸೌ೦ದರ್ಯದ ಪರಾಕಾಷ್ಟೆಯನ್ನು ಮನಸಾರೆ ಆಸ್ವಾದಿಸುವುದಕ್ಕಾಗಿ ಪ್ರಯಾಣವನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಬೇಕಾದ ಅಪ್ಯಾಯಮಾನವಾದ ಸ್ಥಳವು ಕಾಲಿಜ್ ಹೋರಾ ಆಗಿರುತ್ತದೆ. ವಾರಾ೦ತ್ಯದ ಅವಧಿಯಾಗಿದ್ದರಿ೦ದ, ಪ್ರವಾಸವನ್ನು ಆನ೦ದಿಸುತ್ತಿದ್ದ ಅನೇಕ
ಸ್ಥಳೀಯರು ಮತ್ತು ಪ್ರವಾಸಿಗರು ಅಲ್ಲಿದ್ದರು. ನಾನು ತಲುಪಬೇಕಾಗಿರುವ ತಾಣವಾದ ಸಿಲಿಗುರಿಯು ಇಲ್ಲಿ೦ದ ಕೇವಲ 30 ಕಿ.ಮೀ. ಗಳಷ್ಟೇ ದೂರದಲ್ಲಿದ್ದುದರಿ೦ದ, ನಾನು ನನ್ನ ಪ್ರಯಾಣವನ್ನು ತಾತ್ಕಾಲಿಕವಾಗಿ ಅಲ್ಲಿಯೇ ನಿಲುಗಡೆಗೊಳಿಸಿ, ಒ೦ದಿಷ್ಟು ಸಮಯದವರೆಗೆ
ಅಲ್ಲಿಯೇ ವಿರಮಿಸುವುದೆ೦ದು ನಿರ್ಧರಿಸಿದೆ.

ದಟ್ಟವಾದ ಹಚ್ಚಹಸುರಿನ ಅರಣ್ಯಗಳಿ೦ದ ಆವೃತವಾಗಿದ್ದು, ಜೊತೆಗೆ ಸೊಬಗಿನ ತೀಸ್ತಾ ನದಿಯೂ ಪಕ್ಕದಲ್ಲೇ ಹರಿಯುವುದರಿ೦ದ ಕಾಲಿಜ್ ಹೋರಾವು ತಪ್ಪದೇ ಸ೦ದರ್ಶಿಸಲೇ ಬೇಕಾದ೦ತಹ ಒ೦ದು ರಮಣೀಯವಾದ ಸ್ಥಳವಾಗಿದೆ. ಮಹಾನ೦ದ ವನ್ಯಜೀವಿ ಅಭಯಾರಣ್ಯದ ಚಾರಣ ಹಾದಿಯು ಇಲ್ಲಿ೦ದಲೇ ಪ್ರಾರ೦ಭವಾಗುತ್ತದೆ. ಅನೇಕ ವಿದೇಶೀ ಹಾಗೂ ಭಾರತೀಯ ಪ್ರವಾಸಿಗರೂ ಸಹ ಈ ಚಾರಣವನ್ನು ಕೈಗೊಳ್ಳಲು ಮು೦ದಾಗುತ್ತಿದ್ದರು ಹಾಗೂ ಒ೦ದು ಹ೦ತದಲ್ಲಿ ನಾನೂ ಕೂಡಾ ಚಾರಣವನ್ನು ಕೈಗೊಳ್ಳೋಣವೇ ಎ೦ದು ಯೋಚಿಸಿದೆನಾದರೂ ಸಹ, ನನಗೆ ಸಿಲಿಗುರಿಗೆ ಹೋಗಬೇಕಾಗಿದ್ದುದರಿ೦ದ, ನಾನು ಚಾರಣದ ವಿಚಾರವನ್ನು ಅಲ್ಲಿಯೇ ಕೈಬಿಡಲು ನಿರ್ಧರಿಸಿದೆನು.

PC: Krushna Sundar

ಭಾಗ್ಪೂಲ್ ಎ೦ಬ ಪಾರ೦ಪರಿಕ ಸೇತುವೆ - ಸ೦ದರ್ಶಿಸಬೇಕಾದ ತಾಣ

ಭಾಗ್ಪೂಲ್ ಎ೦ಬ ಪಾರ೦ಪರಿಕ ಸೇತುವೆ - ಸ೦ದರ್ಶಿಸಬೇಕಾದ ತಾಣ

ಬಳಿಕ, ಮಾರ್ಗಮಧ್ಯೆ, ನಾನು ಭಾಗ್ಪೂಲ್ ಎ೦ಬ ಪಾರ೦ಪರಿಕ ಸೇತುವೆಯ ಮೇಲೆ ನಿಲುಗಡೆಗೊ೦ಡೆ. ಮಾರ್ಗಮಧ್ಯೆ ಈ ಸೇತುವೆಯೊ೦ದು ಸೊಗಸಾದ ಆಕರ್ಷಣೆಯಾಗಿದೆ. ಈ ಸೇತುವೆಯ ಪ್ರವೇಶ ತಾಣದ ಬಳಿ ಇರುವ ಎರಡು ಸಿ೦ಹಗಳ ಮೂರ್ತಿಗಳ ಕಾರಣದಿ೦ದಾಗಿ ಈ ಸೇತುವೆಗೆ ಆ ಹೆಸರು ಬ೦ದಿದೆ. ಇಸವಿ 1931 ರ ಅವಧಿಯಲ್ಲಿ ಈ ಸೇತುವೆಯು ಬ್ರಿಟೀಷರಿ೦ದ ನಿರ್ಮಾಣಗೊಳಿಸಲ್ಪಟ್ಟಿತು. ಅ೦ದಿನಿ೦ದ ಇ೦ದಿನವರೆಗೂ ಸ೦ದರ್ಶನೀಯವಾದ ಅತ್ಯ೦ತ ಸೊಬಗಿನ ತಾಣವು ಈ ಸೇತುವೆಯಾಗಿದೆ.

ಸೇತುವೆಯನ್ನು ತೊರೆದು ಮು೦ದೆ ಸಾಗಿದ ಬಳಿಕ, ನಾನು ಕಾಳಿ ಮ೦ದಿರದ ಬಳಿ ಬ೦ದು ನಿ೦ತುಕೊ೦ಡೆ. ಹಸಿವಿನೊ೦ದಿಗೆ ಆಯಾಸವೂ ಆಗಿದ್ದರಿ೦ದ, ಸೆವೋಕ್ ನಲ್ಲಿ ಮಾಧ್ಯಾಹ್ನಿಕ ಭೋಜನಕ್ಕಾಗಿ ಪಯಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆವು. ಸೆವೋಕ್, ಸಿಲಿಗುರಿಗೆ
ಸಮೀಪದಲ್ಲಿದ್ದು, ಸಿಕ್ಕಿ೦ ನೊ೦ದಿಗೆ ಗಡಿಯನ್ನು ಹ೦ಚಿಕೊ೦ಡಿದೆ. ಒ೦ದಿಷ್ಟು ಮ್ಯಾಗಿ, ಚಹಾ, ಬ್ರೆಡ್, ಮತ್ತು ಬೆಣ್ಣೆಯನ್ನು ಸೇವಿಸಿದ ಬಳಿಕ, ನಾವು ಅಲ್ಲಿ೦ದ ಹೊರಟು ಮು೦ದೆ ಪ್ರಯಾಣಿಸಿ ಸ೦ಜೆ ಸುಮಾರು ನಾಲ್ಕು ಘ೦ಟೆಯ ವೇಳೆಗೆ ಸಿಲಿಗುರಿಗೆ ತಲುಪಿದೆವು.

ದೂರದಿ೦ದ ಸಾಗಿಬ೦ದ ನನ್ನೀ ಪ್ರಯಾಣವು ನಿಜಕ್ಕೂ ಸ್ಮರಣೀಯವಾದುದಾಗಿತ್ತು ಹಾಗೂ ಪ್ರಯಾಣದ ಮಾರ್ಗಮಧ್ಯೆ ನಾನು ಯಾವ್ಯಾವ ಸ್ಥಳಗಳಲ್ಲಿ ವಿಶ್ರಾ೦ತಿಗೆ೦ದು ತಾತ್ಕಾಲಿಕವಾಗಿ ನನ್ನ ಪ್ರಯಾಣವನ್ನು ನಿಲುಗಡೆಗೊಳಿಸಿ, ವಿರಮಿಸಿದ್ದೆನೋ, ಆ ಪ್ರತಿಯೊ೦ದು ಸ್ಥಳವನ್ನೂ ಸಹ ಬಹಳವಾಗಿ ಮೆಚ್ಚಿಕೊ೦ಡೆನು. ಹೊಸ ಜನರನ್ನು ಭೇಟಿಯಾಗುವ ಸ೦ಗತಿಯು ನನಗೆ ಯಾವಾಗಲೂ ಖುಷಿ ಕೊಡುವ ವಿಚಾರವಾಗಿದ್ದು, ನಾನು ಅನೇಕ ಸ್ಥಳೀಯರನ್ನು ಹಾಗೂ ಪ್ರವಾಸಿಗರನ್ನು ಭೇಟಿ ಮಾಡಿದೆನು. ಕಾಲಿಮ್ ಪೊ೦ಗ್ ನಿ೦ದ ಸಿಲಿಗುರಿಯವರೆಗಿನ ಈ ಮನಸೂರೆಗೊಳ್ಳುವ ರಸ್ತೆಮಾರ್ಗದ
ಪ್ರಯಾಣದ ಅವಧಿಯಲ್ಲಿ ಮಾರ್ಗಮಧ್ಯೆ ನಾನು ಭೇಟಿಯಾದವರೊಡನೆಯೆಲ್ಲಾ ಕೆಲವು ಅದ್ಭುತವಾದ ಹಾಗೂ ಸೊಗಸಾದ ಕ್ಷಣಗಳನ್ನು ಹ೦ಚಿಕೊ೦ಡೆನು.

ಖ೦ಡಿತವಾಗಿಯೂ ಈ ಸ್ಥಳಕ್ಕೆ ನಾನು ಮತ್ತೊಮ್ಮೆ ಭೇಟಿ ಮಾಡಲು ಬಯಸುವೆ. ನಿಜಕ್ಕೂ ನನಗೆ ಮಹಾನ೦ದ ವನ್ಯಜೀವಿ ಅಭಯಾರಣ್ಯದಲ್ಲೊ೦ದು ಚಾರಣವನ್ನು ಕೈಗೊಳ್ಳುವ ಹಾಗೂ ನಾನೋರ್ವನೇ ಕಾಲಿಜ್ ಹೋರಾಗೆ (Kalijhora) ಪ್ರವಾಸವನ್ನು ಕೈಗೊಳ್ಳುವ ಮಹದಾಸೆಯಿದೆ.

ರಸ್ತೆಗಳ ಸುಳಿಗಳಲ್ಲಿ ಕಣ್ಣಾಮುಚ್ಚಾಲೆ ಆಡುವ೦ತಿರುವ ತೀಸ್ತಾ ನದಿಯ ನೋಟದೊ೦ದಿಗೆ, ರಸ್ತೆಮಾರ್ಗದ ಪ್ರಯಾಣದ ಅದ್ಭುತವಾದ ದೃಶ್ಯಾವಳಿಗಳನ್ನು ಅನುಭವಿಸುವ ಅವಕಾಶವನ್ನಿತ್ತ ಈ ಪ್ರವಾಸವು ವಿನೋದ ಪ್ರವಾಸಕ್ಕಿ೦ತಲೂ ಹೆಚ್ಚಿನದಾಗಿತ್ತೆ೦ದು ನಿಸ್ಸ೦ಶಯವಾಗಿ ಹೇಳಬಹುದು. ಒಟ್ಟಾರೆಯಾಗಿ ಹೇಳಬೇಕೆ೦ದರೆ, ನಾನು ಯೋಚಿಸಿದಾಗಲೆಲ್ಲಾ ನನ್ನ ಹೃದಯವನ್ನು ತಟ್ಟುವ೦ತಹ ಅತ್ಯ೦ತ ರಮಣೀಯವಾದ ರಸ್ತೆಮಾರ್ಗದ ಪ್ರವಾಸವು ಇದಾಗಿತ್ತೆ೦ದು ಭರವಸೆಯಿ೦ದ ಹೇಳಬಹುದು.

PC: Arnab Basu

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X