» »ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

Written By:

ನಮ್ಮ ನಾಡಿನ ಪ್ರಾಚೀನ ದೇವಾಲಯಗಳು ಅದೆಷ್ಟೊ ವಿಚಿತ್ರ ಕಥೆಗಳನ್ನು, ದಂತಕಥೆಗಳನ್ನು ಹುದುಗಿಸಿಟ್ಟುಕೊಂಡಿವೆ ಗೊತ್ತಿಲ್ಲ, ಆದರೆ ಅವುಗಳ ಕುರಿತು ಕಥೆಗಳನ್ನು ಕೇಳಿದಾಗ ಮಾತ್ರ ರೋಮ ರೋಮಗಳು ಸೆಟೆದೆದ್ದು ನಿಲ್ಲುತ್ತವೆ. ನಮ್ಮ ವಿಜ್ಞಾನವನ್ನೂ ಮೀರಿದ ಸಾಕಷ್ಟು ವಿಚಾರಗಳು ನಮ್ಮನ್ನು ವಿಸ್ಮಯಗೊಳ್ಳುವಂತೆ ಮಾಡುತ್ತವೆ.

ಹೀಗೊಂದು ಕ್ಷೇತ್ರದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಇದು ಕರ್ನಾಟಕದಲ್ಲೆ ಇರುವ ಪವಿತ್ರ ಕ್ಷೇತ್ರ. ಸಾಕಷ್ಟು ಮಹತ್ವ ಹಾಗೂ ವಿಶೇಷತೆಯನ್ನು ಹೊಂದಿದೆ. ಆದರೆ ದುರದೃಷ್ಟವಶಾತ್ ಬಹುತೇಕ ಜನರಿಗೆ ಈ ಕ್ಷೇತ್ರದ ಕುರಿತು ಸ್ವಲ್ಪವೂ ತಿಳಿದಿಲ್ಲ. ಇದರ ಕುರಿತು ತಿಳಿದಿರುವ ಕೆಲ ಜನರು ತಮಗೆ ಸಮಯ ಸಿಕ್ಕಾಗ ಇಲ್ಲಿಗೆ ಬಂದು ಭಗವಂತನ ದರ್ಶನ ಪಡೆದು ಮರಳುತ್ತಾರೆ.

ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ಚಿತ್ರಕೃಪೆ: Bshankar31

ತ್ರೇತಾ ಯುಗ ಕಾಲದಿಂದಲೂ ಸಹ ಈ ದೇವಾಲಯ ಹಾಗೂ ಕ್ಷೇತ್ರದ ಕುರಿತು ಉಲ್ಲೇಖವಿದೆ ಎಂದು ತಿಳಿದುಬರುತ್ತದೆ. ಏಕೆಂದರೆ ಆ ಸಮಯದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತೊಂದು ಪ್ರಚಲಿತದಲ್ಲಿತ್ತು. ಅದೆನೆಂದರೆ ಈ ಒಂದು ಕ್ಷೇತ್ರಕ್ಕೆ ಭೇಟಿ ನೀಡಿ ಇಲ್ಲಿರುವ ಸ್ವಾಮಿಯ ದರ್ಶನ ಪಡೆದರೆ ಅದು ಹದಿನೈದು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದಷ್ಟೆ ಪುಣ್ಯ ದೊರೆಯುವಂತೆ ಮಾಡುತ್ತದೆಂದು.

ಈ ನಂಬಿಕೆಯೊಂದು ಇಂದಿಗೂ ಸಹ ಪ್ರಚಲಿತದಲ್ಲಿದೆ ಹಾಗೂ ಕೆಲವು ಜನರಿಗೆ ಮಾತ್ರ ಇದರ ಕುರಿತು ತಿಳಿದಿದೆ. ನಿಮಗೂ ಸಹ ಪ್ರಾಚೀನ ದೇವಲಾಯಗಳನ್ನು ಅನ್ವೇಷಿಸುವುದು, ಅಂದಿನ ಕಲಾ ಶ್ರೀಮಂತಿಕೆಯನ್ನು ಆಸ್ವಾದಿಸುವುದು ಇಲ್ಲವೆ ಸುಮ್ಮನೆ ಆ ಕಾಲದ ಸ್ಥಿತಿಗತಿಗಳನ್ನು ನಿಮ್ಮದೆ ಆದ ಕಾಲ್ಪನಿಕ ಲೋಕದಲ್ಲಿ ಚಿತ್ರಿಸಿಕೊಂಡು ಅನುಭವಿಸುವ ಆಸೆಗಳಿದ್ದಲ್ಲಿ ಈ ಕ್ಷೇತ್ರಕ್ಕೊಮ್ಮೆ ಭೇಟಿ ನೀಡಿ.

ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ಚಿತ್ರಕೃಪೆ: Brunda Nagaraj

ವಾರಾಂತ್ಯದ ರಜೆಗಳಲ್ಲಿ ಬರೀ ಮಾಲುಗಳು, ಶಾಪಿಂಗ್, ಮೂವಿಗಳು ಎಂದು ಅಲೆದಾಡಿ, ನಲಿದಾಡಿ ಬೇಸತ್ತಿದ್ದರೆ, ಒಂದೊಮ್ಮೆ ಗದ್ದಲ, ಕಿರಿ ಕಿರಿಗಳಿಲ್ಲದ ಗ್ರಾಮದಂತಹ ಸ್ಥಳಗಳಿಗೆ ಭೇಟಿ ನೀಡಲು ಮನ ಬಯಸಿದ್ದರೆ ಅದರಲ್ಲೂ ವಿಶೇಷವಾಗಿ ಅಲ್ಲಲ್ಲಿ ಕಂಡುಬರುವ ಚಿಕ್ಕ ಪುಟ್ಟ ಪ್ರಾಚೀನ ದೇವಾಲಯಗಳಿಗೆ ಭೇಟಿ ನೀಡುವ ಮನಸ್ಸಿದ್ದರೆ ಈ ದೇವಾಲಯಕ್ಕೆ ಭೇಟಿ ನೀಡಿ.

ಇದು ಬೆಂಗಳೂರಿನಿಂದ ಒಟ್ಟಾರೆಯಾಗಿ 150 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ಹೋಗುವ ಮಾರ್ಗವೂ ಸಹ ಮೈಸೂರು ಹೆದ್ದಾರಿಯ ಮೂಲಕವೆ. ಹಾಗಾಗಿ ನೀವು ಮೊದಲೆ ಯೋಜಿಸಿ ಬೆಂಗಳೂರನ್ನು ಬೆಳಿಗ್ಗೆ ಬೇಗನೆ ತೊರೆದು ಮೈಸೂರು ರಸ್ತೆ ಹಿಡಿದು ನೇರವಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಮಾಂಬಳ್ಳಿ ಗ್ರಾಮಕ್ಕೆ ನಿಮ್ಮ ಪ್ರಯಾಣ ಬೆಳೆಸಿ ಬಿಡಿ.

ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ಚಿತ್ರಕೃಪೆ: Pratheepps

ಮಾಂಬಳ್ಳಿ ಗ್ರಾಮವನ್ನು ಬೆಂಗಳೂರು-ರಾಮನಗರ-ಮದ್ದೂರು-ಕೆ ಎಂ ದೊಡ್ಡಿ-ಮಳವಳ್ಳಿ-ಶಿವನಸಮುದ್ರ-ಮಾಂಬಳ್ಳಿ ಈ ರೀತಿಯಾಗಿ ತಲುಪಬಹುದಾಗಿದೆ. ಬೆಳಿಗ್ಗೆ ಬೇಗನೆ ಎದ್ದು ಹೊರಟಿರುವ ಕಾರಣ ತಿಂಡಿ ತಿನಬೇಕೆನಿಸಿದ್ದಲ್ಲಿ ಮೈಸೂರು ರಸ್ತೆಯ ಕಾಮತ್ ಲೋಕರುಚಿ ಇಲ್ಲವೆ ಅಡಿಗಾಸ್ ಅಥವಾ ಕದಂಬಂ ಹೋಟೆಲುಗಳಿಗೆ ಭೇಟಿ ನೀಡಿ ರುಚಿ ರುಚಿ, ಬಿಸಿ ಬಿಸಿ ಹಾಗೂ ಗರಿ ಗರಿಯಾದ ಇಡ್ಲಿ-ವಡೆಗಳನ್ನು ಸವಿಯಬಹುದು.

ಒಂದೊಮ್ಮೆ ಕೊಳ್ಳೆಗಾಲದ ಮಾಂಬಳ್ಳಿ ತಲುಪಿದರೆ ಸಾಕು ಅಲ್ಲಿಂದ ನೇರವಾಗಿ ಬಸವನಗುಡಿ ಬೀದಿ ರಸ್ತೆಯ ಕುರಿತು ಸ್ಥಳೀಯವಾಗಿ ವಿಚಾರಿಸಿ ಹೊರಟು ಬಿಡಿ. ಈ ಬೀದಿಯಲ್ಲೆ ನೆಲೆಸಿದೆ ಅಗರ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ. ಈ ಬೀದಿಯಲ್ಲಿರುವ ಬಹುತೇಕ ಕುಟುಂಬಗಳು ಬ್ರಾಹ್ಮಣ ಸಮುದಾಯಕ್ಕೆ ಸೇರಿರುವುದರಿಂದ ಇದಕ್ಕೆ ಅಗರ ಲಕ್ಷ್ಮಿ ನರಸಿಂಹಸ್ವಾಮಿ ಎಂದು ಕರೆಯುತ್ತಾರೆ.

ಇಲ್ಲಿರುವ ಪುರಾತನ ರಚನೆಯ ಮನೆಗಳು ನಿಮ್ಮನ್ನು ನೆನಪಿನಾಳಕ್ಕೆ ಕರೆದೊಯ್ಯುತ್ತವೆ. ಅಗರ ಲಕ್ಷ್ಮಿ ನರಸಿಂಹಸ್ವಾಮಿಯ ದೇವಾಲಯವು ಒಂದು ಪ್ರಾಚೀನ ದೇವಾಲಯವಾಗಿದ್ದು ಚೋಳರ ಕಾಲದಲ್ಲಿ ನಿರ್ಮಿತ ರಚನೆಯಾಗಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ. ದೇವಾಲಯದ ಗೋಡೆಗಳ ಮೇಲೆ ನಾರಾಯಣನ ಹತ್ತು ಅವತಾರಗಳನ್ನು ಸುಂದರವಾಗಿ ಕೆತ್ತಲಾಗಿರುವುದನ್ನು ಕಾಣಬಹುದು.

ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ಚಿತ್ರಕೃಪೆ: Brunda Nagaraj

ಈ ನರಸಿಂಹಸ್ವಾಮಿಯ ವಿಗ್ರಹವೆ ವಿಶೇಷವಾಗಿದೆ. ಗರುಡನ ಮೇಲೆ ಕುಳಿತು ನಾಲಿಗೆಯನ್ನು ಹೊರಚಾಚಿ, ಶಿವನ ಹಾಗೆ ಹಣೆಯ ಮೇಲೊಂದು ಕಣ್ಣನ್ನು ಹೊಂದಿರುವ ವಿಗ್ರಹ ಇದಾಗಿದೆ. ಬಹುಶಃ ಈ ರೀತಿಯ ವಿಗ್ರಹ ಇದೊಂದೆ ಆಗಿರಬಹುದು. ಅಲ್ಲದೆ ಎಡಕ್ಕೆ ನಾರದರು ಹಾಗೂ ಬಲಕ್ಕೆ ಪ್ರಹ್ಲಾದನು ಶ್ರೀಹರಿಯನ್ನು ಸ್ತುತಿಸುತ್ತಿರುವ ವಿಗ್ರಹಗಳಿರುವುದನ್ನು ನೋಡಬಹುದು.

ಸ್ಥಳ ಪುರಾಣದ ಪ್ರಕಾರ, ವಸಿಷ್ಠ ಮಹಾಮುನಿಗಳು ಇಲ್ಲೊಂದು ಕಲ್ಯಾಣಿಯನ್ನು ನಿರ್ಮಿಸಿದರಂತೆ. ಏಕೆಂದರೆ ನರಸಿಂಹನ ಮೂರನೇಯ ಕಣ್ಣಿನ ಅಗ್ನಿಜ್ವಾಲೆಯಿಂದ ಬೆಳೆಗಳು ಸುಡುತ್ತಿದ್ದ ಕಾರಣ ಅವನ್ನು ತಂಪಾಗಿಡಲು ಈ ಕಲ್ಯಾಣಿಯ ರಚನೆ ಮಾಡಿ ನಂತರ ಮುಂದೆ ಬಿಳಿಗಿರಿ ರಂಗನ ದರ್ಶನಕ್ಕೆಂದು ತೆರಳಿದರಂತೆ. ಲಕ್ಷ್ಮಿ ದೇವಿಯ ಸನ್ನಿಧಾನವೂ ಇಲ್ಲಿದ್ದು ಸರ್ಪಗಳ ಕಾಟದಿಂದ ಅದನ್ನಿಂದು ಮುಚ್ಚಲಾಗಿದೆ.

ಹೀಗೊಂದು ತಲಕಾಡು ಪ್ರವಾಸ ಮಾಡಬಯಸುವಿರಾ?

ನಿಮ್ಮ ಬಳಿ ಸಮಯವಿದ್ದಲ್ಲಿ ಈ ಪ್ರಶಾಂತ ದೇವಾಲಯದ ಬಳಿ ಪೂರ್ಣ ದಿನ ಕಳೆಯಬಹುದು ಇಲ್ಲವೆಂದಾದಲ್ಲಿ ಇನ್ನೂ ನೋಡಬೇಕೆಂದಿದ್ದಲ್ಲಿ ಮರಳುವಾಗ ತಲಕಾಡು ಹಾಗೂ ಶೊಇವನಸಮುದ್ರಕ್ಕೆ ಭೇಟಿ ನೀಡಿ ಮರಳ ಬಹುದು. ಈ ಒಂದು ದಿನದ ಪ್ರವಾಸವು ಕೊಂಚ ಆಯಾಸ ಎಂತೆನಿಸದರೂ ಕಡೆಯಲ್ಲಿ ಆತ್ಮ ಸಂತೃಪ್ತಿ ಉಂಟು ಮಾಡುವುದರಲ್ಲಿ ಸಂಶಯವಿಲ್ಲ.

Please Wait while comments are loading...