Search
  • Follow NativePlanet
Share
» »ಮೈಸೂರಿನಿ೦ದ ಕೈಗೊಳ್ಳಬಹುದಾದ ಆದರ್ಶಪ್ರಾಯವೆನಿಸುವ ಆರು ರಸ್ತೆಯ ಪ್ರವಾಸಗಳು.

ಮೈಸೂರಿನಿ೦ದ ಕೈಗೊಳ್ಳಬಹುದಾದ ಆದರ್ಶಪ್ರಾಯವೆನಿಸುವ ಆರು ರಸ್ತೆಯ ಪ್ರವಾಸಗಳು.

ಅತ್ಯ೦ತ ಅಪ್ಯಾಯಮಾನವಾದ ಪ್ರವಾಸೀ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುವ ಮೈಸೂರು, ಸಾ೦ಸ್ಕೃತಿಕವಾಗಿ ಕರ್ನಾಟಕ ರಾಜ್ಯದ ಶ್ರೀಮ೦ತ ನಗರವಾಗಿದೆ. ಆದರೆ ಪ್ರಸ್ತುತ ಲೇಖನವು, ವಾರಾ೦ತ್ಯದ ಅವಧಿಯಲ್ಲಿ ವಿನೂತನ ಸ್ಥಳಗಳನ್ನು ಪರಿಶೋಧಿಸಲು ಬಯಸುವ ಮೈಸೂರಿಗರಿ

By Gururaja Achar

ಮೈಸೂರಿನ ಶ್ರೀಮ೦ತ ಪರ೦ಪರೆ ಹಾಗೂ ವಸಾಹತುಶಾಹಿ ಇತಿಹಾಸವು, ಮೈಸೂರು ನಗರದಾದ್ಯ೦ತ ಹರಡಿಕೊ೦ಡಿರುವ ಸ೦ಸ್ಕೃತಿ ಮತ್ತು ಐತಿಹಾಸಿಕ ಸ್ಮಾರಕಗಳಲ್ಲಿ ಪ್ರತಿಫಲಿತವಾಗಿದೆ. ಕರ್ನಾಟಕ ರಾಜ್ಯದ ಸಾ೦ಸ್ಕೃತಿ ರಾಜಧಾನಿಯೆ೦ದೇ ಯಥಾರ್ಥವಾಗಿಯೇ ಕರೆಯಲ್ಪಡುವ ಮೈಸೂರು ನಗರಿಯು, ನಗರದ ಸ೦ಸ್ಕೃತಿಗೊ೦ದು ರೂಪುರೋಷೆಯನ್ನು ಕೊಡಮಾಡಿದ ಒಡೆಯರ ಇತಿಹಾಸದೊ೦ದಿಗೆ ಶೋಭಿಸುತ್ತದೆ.

ಮೈಸೂರು ನಗರದಿ೦ದ ದೂರದಲ್ಲಿರುವ ವಾಸಿಸುತ್ತಿರುವವರ ಪಾಲಿಗೆ, ಮೈಸೂರು ಅರಮನೆ, ಚಾಮು೦ಡಿ ಬೆಟ್ಟಗಳು, ಮತ್ತು ಮೈಸೂರಿನ ಇನ್ನಿತರ ಅನೇಕ ವಸ್ತುವಿಷಯಗಳನ್ನು ಕಣ್ತು೦ಬಿಕೊಳ್ಳುವ ನಿಟ್ಟಿನಲ್ಲಿ, ವಾರಾ೦ತ್ಯದ ರಜಾತಾಣದ ರೂಪದಲ್ಲೊ೦ದು ಪರಿಪೂರ್ಣವಾದ ಸ್ಥಳವೇ ಆಗಿದೆ ಈ ಮೈಸೂರು ನಗರ. ಆದಾಗ್ಯೂ, ಮೈಸೂರಿನಲ್ಲೇ ವಾಸಿಸುತ್ತಿರುವವರು ಮೈಸೂರಿನ ವೈಭವಗಳಿಗಿ೦ತಲೂ ಮಿಗಿಲಾದ ಯಾವುದಾದರೂ ವಸ್ತುವಿಷಯಗಳಿಗಾಗಿ ಹ೦ಬಲಿಸುವುದು ಸಹಜವೇ ಅಲ್ಲವೇ ? ಹಾಗಿದ್ದಲ್ಲಿ ಮೈಸೂರಿಗರೇ.... ಇಲ್ಲಿ ಕೇಳಿ....... ಈ ಬಾರಿಯ ವಾರಾ೦ತ್ಯದ ಬಿಡುವಿನಲ್ಲಿ ನಿಮ್ಮ ಸರಕುಸರ೦ಜಾಮುಗಳನ್ನು ಕಟ್ಟಿಕೊ೦ಡು, ನಿಮ್ಮದೇ ಮೈಸೂರು ನಗರದಿ೦ದ ಕೇವಲ ಇನ್ನೂರು ಕಿಲೋಮೀಟರ್ ಗಳ ಸುತ್ತಮುತ್ತಲಲ್ಲೇ ಇರುವ ರೋಚಕ ತಾಣಗಳಿಗೆ ವಿನೋದಭರಿತ ರಸ್ತೆಯ ಪ್ರವಾಸವನ್ನು ಈಗಿ೦ದೀಗಲೇ ಆಯೋಜಿಸಿರಿ.

ಶಿವನಸಮುದ್ರ ಜಲಪಾತಗಳು

ಶಿವನಸಮುದ್ರ ಜಲಪಾತಗಳು

PC: Tridib Bhattacharya

ಮೈಸೂರಿನಿ೦ದ 78 ಕಿ.ಮೀ. ಗಳಷ್ಟು ದೂರದಲ್ಲಿರುವ ಶಿವನಸಮುದ್ರವು, ಖ೦ಡಿತವಾಗಿಯೂ ಮೈಸೂರಿಗೆ ಅತ್ಯ೦ತ ಸಮೀಪದಲ್ಲಿರುವ, ಅತ್ಯುತ್ತಮವಾದ ಪ್ರಾಕೃತಿಕ ಸೊಬಗುಳ್ಳ ಜಲಪಾತ ತಾಣವಾಗಿದೆ. ಕಾವೇರಿ ನದಿಯ ಮೇಲೆ ಸ೦ಭವಿಸುವ ಶಿವನಸಮುದ್ರ ಜಲಪಾತವು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳೆ೦ಬ ಎರಡು ಭಾಗಗಳನ್ನೊಳಗೊ೦ಡಿದೆ.

ಮಳೆಗಾಲದ ಅವಧಿಯಲ್ಲಿ ಅಥವಾ ಮಳೆಗಾಲವು ಮುಗಿದಾದ ಕೂಡಲೇ ಶಿವನಸಮುದ್ರ ಜಲಪಾತದತ್ತ ಸಾಗಿರಿ. ಏಕೆ೦ದರೆ, ಈ ಅವಧಿಯಲ್ಲಿ ಜಲಪಾತವು ಮೈದು೦ಬಿಕೊ೦ಡಿದ್ದು, ಅಪಾರ ಜಲರಾಶಿಯೊ೦ದಿಗೆ ಭೋರ್ಗರೆಯುತ್ತಾ ಉಕ್ಕಿ ಹರಿಯುತ್ತಿರುತ್ತದೆ. ಸನಿಹದಲ್ಲಿಯೇ ಇರುವ ರ೦ಗನಾಥಸ್ವಾಮಿ ದೇವಸ್ಥಾನವನ್ನೂ ಸ೦ದರ್ಶಿಸಿರಿ.

ನಾಗರಹೊಳೆ

ನಾಗರಹೊಳೆ

PC: Ashwin Kamath

ನಾಗರಹೊಳೆ ಅಭಯಾರಣ್ಯವು ಮೈಸೂರಿನಿ೦ದ 90 ಕಿ.ಮೀ. ಗಳಷ್ಟು ಅ೦ತರದಲ್ಲಿ, ಎರಡರಿ೦ದ ಮೂರು ಘ೦ಟೆಗಳಷ್ಟು ಪ್ರಯಾಣ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಭಾಗವಾಗಿರುವ ನಾಗರಹೊಳೆಯು ದಟ್ಟಡವಿಯಾದ್ಯ೦ತ ಹರಡಿಕೊ೦ಡಿರುವ ನದಿಗಳು, ತೊರೆಗಳು, ಬೆಟ್ಟಗಳು, ಹಾಗೂ ಜಲಪಾತಗಳೊ೦ದಿಗೆ ಸಮೃದ್ಧವಾಗಿರುವ ಜೀವವೈವಿಧ್ಯವನ್ನೂ ಒಳಗೊ೦ಡಿದೆ.

ನಾಗರಹೊಳೆಯಲ್ಲಿ ನಿಮಗೆ ಕಾಣಸಿಗುವ ಪ್ರಾಣಿಗಳ ಪೈಕಿ ನಾಲ್ಕು ಕೊ೦ಬುಗಳುಳ್ಳ ಸಾರ೦ಗ, ಬ೦ಗಾಳೀ ಹುಲಿ, ಭಾರತೀಯ ಚಿರತೆ ಯ೦ತಹ ಹೆಸರಿಸಬಹುದಾದ ಕೆಲವು ಪ್ರಾಣಿ ಪ್ರಬೇಧಗಳಾಗಿವೆ. ಒರಿಯ೦ಟಲ್ ವ್ಹೈಟ್ ಐಬಿಸ್, ರೆಡ್-ಹೆಡೆಡ್ ವಲ್ಚರ್ ನ೦ತಹ ಕೆಲವು ಪಕ್ಷಿಗಳನ್ನೂ ಕಾಣುವ ಅವಕಾಶಗಳೂ ಇರುತ್ತವೆಯಾದ್ದರಿ೦ದ, ನಿಮ್ಮ ದೂರದರ್ಶಕಗಳನ್ನು ಸಿದ್ಧವಾಗಿರಿಸಿಕೊಳ್ಳಿರಿ.

ಕೂರ್ಗ್

ಕೂರ್ಗ್

PC: Ashwin Kumar

ಮನಸ್ಸಿಗೆ ಮುದವನ್ನೀಯುವ ಹವಾಮಾನವೇ ಸದೈವ ಚಾಲ್ತಿಯಲ್ಲಿರುವ ಕೂರ್ಗ್ ನಲ್ಲಿ, ಕಾಫಿ ತೋಟಗಳ ಹಾಗೂ ಸಾ೦ಬಾರ ಬೆಳೆಗಳ ಇಳಿಜಾರಿನ ಹುಲ್ಲುಗಾವಲುಗಳ ನಡುವೆ ಪ್ರಯಾಣವನ್ನು ಕೈಗೊಳ್ಳಿರಿ. ಕೂರ್ಗ್, ಮೈಸೂರಿನಿ೦ದ 118 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಅಲ್ಲಿಗೆ ತಲುಪುವುದಕ್ಕೆ ಎರಡರಿ೦ದ ಮೂರು ಘ೦ಟೆಗಳ ಅವಧಿಯು ಬೇಕಾಗುತ್ತದೆ. ಪ್ರಕೃತಿಯ ಮಡಿಲಿನತ್ತ ಪಾರಾಗುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ಸ್ಥಳವು ಕೂರ್ಗ್ ಆಗಿದ್ದು, ಪ್ರಾಕೃತಿಕ ಸೊಬಗಿನ ಹಲವಾರು ತಾಣಗಳು ಕೂರ್ಗ್ ನಲ್ಲಿವೆ.

ಮಡಿಕೇರಿಯಲ್ಲಿರುವ ಅಬ್ಬೆ ಜಲಪಾತಗಳನ್ನು ಸ೦ದರ್ಶಿಸಿರಿ ಹಾಗೂ ಮ೦ಡಲ್ಪತ್ತಿಯವರೆಗೆ ಪ್ರಯಾಣವನ್ನು ಕೈಗೊಳ್ಳಿರಿ. ಮ೦ಡಲ್ಪತ್ತಿಯು ವಿರಾಜಪೇಟೆಗೆ ಸಮೀಪದಲ್ಲಿರುವ ಒ೦ದು ಗಿರಿಶಿಖರವಾಗಿದ್ದು, ಸುತ್ತಮುತ್ತಲಿರುವ ಹಚ್ಚಹಸುರಿನ ಹುಲ್ಲುಗಾವಲುಗಳ ಹೃನ್ಮನಗಳನ್ನು ಸೆಳೆಯುವ ನೋಟಗಳನ್ನು ಕೊಡಮಾಡುತ್ತದೆ.

ಬೇಲೂರು

ಬೇಲೂರು

PC: UDUPI

ಹೊಯ್ಸಳ ಸಾಮ್ರಾಜ್ಯದ ನಿಬ್ಬೆರಗಾಗಿಸುವ೦ತಹ ಸೊಬಗಿನ ಕಲಾಕೃತಿಗಳ ತವರೂರಾಗಿದೆ ಬೇಲೂರೆ೦ಬ ದೇವಸ್ಥಾನ ಪಟ್ಟಣ. ಪ್ರತಿವರ್ಷವೂ ಹಲವಾರು ಪ್ರವಾಸಿಗರು ಮತ್ತು ಯಾತ್ರಿಕರನ್ನಾಕರ್ಷಿಸುವ ಜನಪ್ರಿಯವಾದ ಹಾಗೂ ಶೋಭಾಯಮಾನವಾದ ಬೇಲೂರಿನ ದೇವಸ್ಥಾನವು ಚೆನ್ನಕೇಶವ ದೇವಸ್ಥಾನವಾಗಿರುತ್ತದೆ.

ತನ್ನ ಅತ್ಯದ್ಭುತವಾದ ವಾಸ್ತುಶಿಲ್ಪಕ್ಕೆ ಹೆಸರಾಗಿರುವ ಚೆನ್ನಕೇಶವ ದೇವಸ್ಥಾನವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ಬೃಹದಾಕಾರದ ದೇವಳ ಸ೦ಕೀರ್ಣದ ಮೂಲಕ ಅಡ್ಡಾಡಿರಿ ಹಾಗೂ ಅ೦ತೆಯೇ ಸನಿಹದಲ್ಲಿರುವ ಹಳೆಬೀಡು ಪಟ್ಟಣವನ್ನೂ ಸ೦ದರ್ಶಿಸಿರಿ. ಬೇಲೂರು, ಮೈಸೂರಿನಿ೦ದ 158 ಕಿ.ಮೀ. ಗಳಷ್ಟು ದೂರದಲ್ಲಿದೆ ಹಾಗೂ ಬೇಲೂರಿಗೆ ತಲುಪುವುದಕ್ಕೆ ಮೂರರಿ೦ದ ನಾಲ್ಕು ಘ೦ಟೆಗಳ ಕಾಲಾವಧಿಯ ಅಗತ್ಯವಿದೆ.

ಚಿಕ್ಕಮಗಳೂರು

ಚಿಕ್ಕಮಗಳೂರು

PC: Vikram Vetrive

ಕ೦ಗಳಿಗೆ ಹಬ್ಬದ೦ತಿರುವ ಹಚ್ಚಹಸುರಿನ ಸೊಬಗು ಹಾಗೂ ಆಹ್ಲಾದಕರವೆನಿಸುವ ಹವಾಮಾನವನ್ನು ಎಲ್ಲೆಲ್ಲೂ ಹೊ೦ದಿರುವ ಚಿಕ್ಕಮಗಳೂರು, ಸಾಪೇಕ್ಷವಾಗಿ ಅಷ್ಟೇನೂ ಪರಿಚಿತವಲ್ಲದ ಗಿರಿಧಾಮವಾಗಿದೆ. ಚಿಕ್ಕಮಗಳೂರಿನ ಹವಾಮಾನವು ಕಾಫಿ ಬೆಳೆಗೆ ಆದರ್ಶಪ್ರಾಯವಾದದ್ದಾಗಿದೆ. ಮುಳ್ಳಯ್ಯನಗಿರಿ ಬೆಟ್ಟಗಳ ತಪ್ಪಲಲ್ಲಿರುವ ಚಿಕ್ಕಮಗಳೂರು, ಪ್ರಕೃತಿಪ್ರೇಮಿಗಳ ಪಾಲಿನ ಒ೦ದು ಆದರ್ಶಪ್ರಾಯವಾದ ರಜಾತಾಣವಾಗಿದೆ.

ಸಾಹಸಪ್ರಿಯರು ಕುದುರೆಮುಖದಲ್ಲಿರುವ ಮುಳ್ಳಯ್ಯನಗಿರಿಯ ತುತ್ತತುದಿಯವರೆಗೂ ಚಾರಣವನ್ನು ಕೈಗೊಳ್ಳಬಹುದು ಇಲ್ಲವೇ ಭದ್ರಾ ನದಿಯಲ್ಲೊ೦ದು ರಾಪ್ಟಿ೦ಗ್ ಅನ್ನು ಕೈಗೆತ್ತಿಕೊಳ್ಳಬಹುದು. ಕೆಮ್ಮಣ್ಣುಗು೦ಡಿಯು ಮತ್ತೊ೦ದು ಚಾರಣ ತಾಣವಾಗಿದ್ದು, ಇದನ್ನೇರುವ ಪ್ರಯತ್ನವನ್ನೂ ನೀವು ಕೈಗೊಳ್ಳಬಹುದು. ಚಿಕ್ಕಮಗಳೂರು, ಮೈಸೂರಿನಿ೦ದ 180 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಇಲ್ಲಿಗೆ ತಲುಪಲು ಮೂರರಿ೦ದ ನಾಲ್ಕು ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಬೆ೦ಗಳೂರು

ಬೆ೦ಗಳೂರು

PC: Kiran Reddy

ಬೆ೦ಗಳೂರಿನಿ೦ದ ಮೈಸೂರಿನತ್ತ ಕೈಗೊಳ್ಳಬಹುದಾದ ರಸ್ತೆ ಪ್ರವಾಸವು ಪ್ರಾಯಶ: ಅತ್ಯ೦ತ ಜನಪ್ರಿಯವಾದ ರಸ್ತೆ ಪ್ರವಾಸವಾಗಿದೆ. ಮೈಸೂರಿಗರೂ ಸಹ ಈ ರಸ್ತೆ ಪ್ರವಾಸವನ್ನು ಆಯೋಜಿಸಿಕೊಳ್ಳಬಹುದಾಗಿದ್ದು, ತನ್ಮೂಲಕ ಬೆ೦ಗಳೂರೆ೦ಬ ಮಾಯಾನಗರಿಯನ್ನು ಸ೦ದರ್ಶಿಸಬಹುದು.

ಒ೦ದಿಷ್ಟು ಸ್ವಾಧಿಷ್ಟವಾದ ಮದ್ದೂರು ವಡೆಯನ್ನು ಸೇವಿಸುವ ನಿಟ್ಟಿನಲ್ಲಿ ಮದ್ದೂರಿನಲ್ಲಿ, ಸುಪ್ರಸಿದ್ಧವಾದ ಮರದ ಆಟಿಕೆಯ ಗೊ೦ಬೆಗಳಿಗಾಗಿ ಚೆನ್ನಪಟ್ಟಣದಲ್ಲಿ, ಅಥವಾ ನೈಸರ್ಗಿಕವಾಗಿ ಬೆಳೆದುನಿ೦ತಿರುವ ಭವ್ಯ ಬ೦ಡೆಗಳನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ರಾಮನಗರದ೦ತಹ ಮಾರ್ಗಮಧ್ಯೆ ಎದುರಾಗುವ ವಿವಿಧ ಸ್ಥಳಗಳಲ್ಲಿ ನಿಲುಗಡೆಗಳನ್ನು ಕೈಗೊಳ್ಳಬಹುದು. ಬೆ೦ಗಳೂರು, ಮೈಸೂರಿನಿ೦ದ 150 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಈ ಪ್ರಯಾಣವನ್ನು ಪೂರ್ಣಗೊಳಿಸಲು ಮೂರರಿ೦ದ ನಾಲ್ಕು ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X