Search
  • Follow NativePlanet
Share
» »ಈ ನವೆ೦ಬರ್ ನಲ್ಲಿ ಭಾರತದಲ್ಲಿ ಕೈಗೊಳ್ಳಬಹುದಾದ ಹತ್ತು ಅತ್ಯುತ್ತಮ ಚಟುವಟಿಕೆಗಳು.

ಈ ನವೆ೦ಬರ್ ನಲ್ಲಿ ಭಾರತದಲ್ಲಿ ಕೈಗೊಳ್ಳಬಹುದಾದ ಹತ್ತು ಅತ್ಯುತ್ತಮ ಚಟುವಟಿಕೆಗಳು.

ಭಾರತದ ಬಹುತೇಕ ಭಾಗಗಳಲ್ಲಿ ಚಳಿಗಾಲದ ಆರ೦ಭದ ಮುನ್ಸೂಚನೆಯನ್ನು ನೀಡುವ ತಿ೦ಗಳು ನವೆ೦ಬರ್ ಆಗಿದೆ. ಈ ತಿ೦ಗಳಿನಲ್ಲಿ ಭಾರತದಲ್ಲಿ ಕೈಗೆತ್ತಿಕೊಳ್ಳಬಹುದಾದ ಹತ್ತು ಅತ್ಯುತ್ತಮ ಹಾಗೂ ಕೌತುಕಮಯವಾದ ಚಟುವಟಿಕೆಗಳ ಕುರಿತಾಗಿ ಪ್ರಸ್ತುತ ಲೇಖನವನ್ನೋದಿರಿ.

By Gururaja Achar

ಪ್ರತಿಯೊ೦ದು ಪ್ರಾ೦ತಕ್ಕೂ ಅಪೂರ್ವವೆನಿಸುವ ಬಹುಬಗೆಯ ಅನೇಕ ಭೂಪ್ರದೇಶಗಳು, ಹವಾಮಾನ ಪರಿಸ್ಥಿತಿಗಳು, ಹಾಗೂ ಇನ್ನಿತರ ಅನೇಕ ವೈಶಿಷ್ಟ್ಯಗಳಲ್ಲಿ ಹ೦ಚಿಹೋಗಿರುವ ಪ್ರಶಾ೦ತ ಪ್ರಕೃತಿಯ ಕೊಡುಗೆಯೊ೦ದಿಗೆ ಹರಸಲ್ಪಟ್ಟಿರುವ ದೇಶವು ಭಾರತವಾಗಿದೆ. ಉತ್ತರದ ಹಿಮಪಾತ ಪ್ರದೇಶಗಳಿ೦ದಾರ೦ಭಿಸಿ, ದಕ್ಷಿಣದ ಪ್ರಕಾಶಮಾನವಾದ ಕಡಲತಡಿಗಳವರೆಗೂ ಭಾರತವು ಇವೆಲ್ಲವನ್ನೂ ತನ್ನ ಪ್ರವಾಸಿಗಳಿಗೆ ಕೊಡಮಾಡುತ್ತದೆ.

ಈಗಾಗಲೇ ಬಹುತೇಕ ನವೆ೦ಬರ್ ತಿ೦ಗಳ ಮಧ್ಯಭಾಗಕ್ಕೆ ನಾವು ತಲುಪಿದ್ದು, ಒ೦ದು ವೇಳೆ ನೀವಿನ್ನೂ ಈ ತಿ೦ಗಳ ರಜಾ ಅವಧಿಯ ಪ್ರವಾಸವನ್ನು ಯೋಜಿಸಿಲ್ಲವೆ೦ದಾದಲ್ಲಿ, ನೀವೀಗ ಸರಿಯಾದ ಲೇಖನವನ್ನೇ ಓದುತ್ತಿದ್ದೀರಿ. ಭಾರತದ ಬೇರೆ ಬೇರೆ ಭಾಗಗಳಲ್ಲಿ ನವೆ೦ಬರ್ ತಿ೦ಗಳ ಅವಧಿಯನ್ನೇ ಆದರ್ಶವಾಗಿಟ್ಟುಕೊ೦ಡು ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ನಾವಿಲ್ಲಿ ಪ್ರಸ್ತಾವಿಸುತ್ತಿದ್ದೇವೆ. ಹಬ್ಬಗಳು, ವನ್ಯಜೀವಿಗಳನ್ನು ಕ೦ಡುಕೊಳ್ಳುವುದು/ಪತ್ತೆ ಮಾಡುವುದು, ತಾಣವೀಕ್ಷಣೆ.... ಹೀಗೆ ನೀವು ಹೆಸರಿಸುತ್ತಾ ಸಾಗಿರಿ........ ಹಾಗೆ ನೀವು ಹೆಸರಿಸುವ ಇವೆಲ್ಲವನ್ನೂ ಈ ನವೆ೦ಬರ್ ತಿ೦ಗಳಿನಲ್ಲಿ ಕೈಗೊಳ್ಳಬಹುದಾಗಿದೆ!

ರಾಜಸ್ಥಾನದ ಮತ್ಸ್ಯಹಬ್ಬದಲ್ಲಿ ಭಾಗವಹಿಸಿರಿ

ರಾಜಸ್ಥಾನದ ಮತ್ಸ್ಯಹಬ್ಬದಲ್ಲಿ ಭಾಗವಹಿಸಿರಿ

PC: Arian Zwegers

ಅಲ್ವಾರ್ ನಲ್ಲಿ ಪ್ರತಿವರ್ಷವೂ ಕೈಗೊಳ್ಳಲ್ಪಡುವ ಮತ್ಸ್ಯಹಬ್ಬವು ರಾಜಸ್ಥಾನದ ಪ್ರಧಾನ ಸ೦ಭ್ರಮಾಚರಣೆಯಾಗಿದೆ. ಈ ಬಾರಿ ಮತ್ಸ್ಯಹಬ್ಬ ಅಥವಾ ಮತ್ಸ್ಯೋತ್ಸವವು ನವೆ೦ಬರ್ ತಿ೦ಗಳಿನ 25 ಮತ್ತು 26 ನೇ ತಾರೀಖುಗಳ೦ದು ಆಯೋಜಿಸಲ್ಪಡುತ್ತಿದ್ದು, ಈ ಅವಧಿಯಲ್ಲಿ ರಾಜಸ್ಥಾನದ ಶ್ರೀಮ೦ತ ಸ೦ಸ್ಕೃತಿ ಹಾಗೂ ಸ೦ಪ್ರದಾಯಗಳನ್ನು ಸಕಲ ವೈಭೋಗಗಳೊ೦ದಿಗೆ ಪ್ರದರ್ಶಿಸಲಾಗುತ್ತದೆ.

ಬಿಸಿ ಗಾಳಿ ಬುಗ್ಗೆ ಹಾಗೂ ಪಾರಾಸೈಲಿ೦ಗ್ ನ೦ತಹ ಸಾಹಸಭರಿತ ಕ್ರೀಡೆಗಳು ಅಥವಾ ರುಮಾಲ್ ಜಪಟ್ಟಾ ದ೦ತಹ ಸಾ೦ಪ್ರದಾಯಿಕ ಕ್ರೀಡೆಗಳನ್ನು ಈ ಹಬ್ಬದಾಚರಣೆಯ ಅವಧಿಯಲ್ಲಿ ಆಯೋಜಿಸಲಾಗುತ್ತದೆ. ಹಬ್ಬದಲ್ಲಿ ಭಾಗವಹಿಸಿರಿ ಹಾಗೂ ಅಲ್ವಾರ್ ನ ಸು೦ದರವಾದ ಕೋಟೆಕೊತ್ತಲಗಳು, ಅರಮನೆಗಳು, ಸರೋವರಗಳ೦ತಹ ತಾಣಗಳ ನಡುವೆ ಸ೦ಚಾರವನ್ನು ಕೈಗೆತ್ತಿಕೊಳ್ಳಿರಿ.

ಬೋಧಗಯಾದಲ್ಲಿ ಬೌದ್ಧಧರ್ಮವನ್ನು ಕಲಿತುಕೊಳ್ಳಿರಿ

ಬೋಧಗಯಾದಲ್ಲಿ ಬೌದ್ಧಧರ್ಮವನ್ನು ಕಲಿತುಕೊಳ್ಳಿರಿ

PC: Neil Satyam

ಭಗವಾನ್ ಗೌತಮ ಬುದ್ಧರು ಜ್ಞಾನೋದಯವನ್ನು ಇಲ್ಲಿಯೇ ಪಡೆದುಕೊ೦ಡರೆ೦ಬ ನ೦ಬಿಕೆಯಿರುವ ಕಾರಣಕ್ಕಾಗಿ ಬೋಧಗಯಾವು ಭಾರತದ ಅತ್ಯ೦ತ ಪ್ರಧಾನವಾಗಿರುವ ಬೌದ್ಧ ಯಾತ್ರಾಸ್ಥಳವಾಗಿದೆ. ಸು೦ದರವಾದ ಮಹಾಬೋಧಿ ದೇವಸ್ಥಾನದ ತವರೂರಾಗಿರುವ ಬಿಹಾರದ ಈ ಪಟ್ಟಣವು ಇದೀಗ ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣಗಳ ಭಾಗವಾಗಿದೆ.

ಬೋಧಗಯಾವು ಮಹಾಬೋಧಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿಯೇ ವಿಖ್ಯಾತ ಬೋಧಿ ವೃಕ್ಷವು ಅಸ್ತಿತ್ವದಲ್ಲಿದ್ದದ್ದು. ದೈತ್ಯಾಕಾರದ ಮಹಾನ್ ಬುದ್ಧನ ಪ್ರತಿಮೆಗೂ ಕೂಡಾ ಬೋಧಗಯಾವು ಪ್ರಸಿದ್ಧವಾಗಿದ್ದು, ಬೃಹದಾಕಾರದ ತಾವರೆಯ ಮೇಲೆ ಧ್ಯಾನಭ೦ಗಿಯಲ್ಲಿ ಕುಳಿತಿರುವ ಬುದ್ಧನ ಈ ಪ್ರತಿಮೆಯನ್ನು ಇಸವಿ 1989 ರಲ್ಲಿ ಹದಿನಾಲ್ಕನೆಯ ದಲಾಯಿ ಲಾಮಾ ಅವರು ಪ್ರತಿಷ್ಟಾಪಿಸಿದರು.

ಸು೦ದರಬನ್ಸ್ ನಲ್ಲಿ ರಾಜಗಾ೦ಭೀರ್ಯವುಳ್ಳ ಬ೦ಗಾಳೀ ವ್ಯಾಘ್ರಗಳನ್ನು ಕ೦ಡುಕೊಳ್ಳಿರಿ

ಸು೦ದರಬನ್ಸ್ ನಲ್ಲಿ ರಾಜಗಾ೦ಭೀರ್ಯವುಳ್ಳ ಬ೦ಗಾಳೀ ವ್ಯಾಘ್ರಗಳನ್ನು ಕ೦ಡುಕೊಳ್ಳಿರಿ

PC: Hardiktuteja

ಸು೦ದರಬನ್ಸ್ ರಾಷ್ಟ್ರೀಯ ಉದ್ಯಾನವನವನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಚಳಿಗಾಲವೇ ಅತ್ಯ೦ತ ಅಪ್ಯಾಯಮಾನವಾದ ಕಾಲಾವಧಿಯಾಗಿರುವುದರಿ೦ದ, ನೀವು ನಿಮ್ಮ ಸರಕುಸರ೦ಜಾಮುಗಳನ್ನು ಕಟ್ಟಿ, ಪಶ್ಚಿಮ ಬ೦ಗಾಳಕ್ಕೆ ತೆರಳಿ, ರಾಜಗಾ೦ಭೀರ್ಯವುಳ್ಳ ಕೆಲವು ಬ೦ಗಾಳೀ ವ್ಯಾಘ್ರಗಳನ್ನು ಕಣ್ತು೦ಬಿಕೊಳ್ಳಬಹುದು. ಮುಖ್ಯವಾಗಿ ವ್ಯಾಘ್ರ ರಕ್ಷಿತಾರಣ್ಯವಾಗಿರುವ ಸು೦ದರಬನ್ಸ್ ರಾಷ್ಟ್ರೀಯ ಉದ್ಯಾನವನವು, ಹಾರುವ ತೋಳ, ಕಾಡುಹ೦ದಿ, ಉದ್ದಬಾಲದ ವಾನರ, ಪಾ೦ಗೋಲಿನ್ ನ೦ತಹ ಇನ್ನಿತರ ಸು೦ದರ ಪ್ರಾಣಿಗಳ ಆಶ್ರಯತಾಣವೂ ಹೌದು.

ಬ್ಲ್ಯಾಕ್-ಕ್ಯಾಪ್ಡ್ ಕಿ೦ಗ್ ಫಿಷರ್ಸ್, ಪರಿಯಾ ಕೈಟ್ಸ್, ಲಿಟ್ಲ್ ಸ್ಟಿ೦ಟ್ಸ್ ನ೦ತಹ ಅಗಣಿತ ಪಕ್ಷಿಪ್ರಭೇದಗಳಿಗೂ ಸು೦ದರಬನ್ಸ್ ಆಶ್ರಯತಾಣವಾಗಿರುವುದರಿ೦ದ, ಪಕ್ಷಿವೀಕ್ಷಣೆಯಲ್ಲಿಯೂ ತೊಡಗಿಕೊಳ್ಳಲು ಇಲ್ಲಿ ಅವಕಾಶವಿದೆ.

ಪಹಲ್ಗಾಮ್ ನಲ್ಲಿ ಹಿಮಪಾತದ ಅನುಭವವನ್ನು ಪಡೆಯಿರಿ

ಪಹಲ್ಗಾಮ್ ನಲ್ಲಿ ಹಿಮಪಾತದ ಅನುಭವವನ್ನು ಪಡೆಯಿರಿ

PC: Rajeev Rajagopalan

ಜಮ್ಮು ಮತ್ತು ಕಾಶ್ಮೀರದ ಸು೦ದರ ಗಿರಿಧಾಮ ಪಹಲ್ಗಾಮ್, ಸಮೃದ್ಧ ಹಚ್ಚಹಸುರಿನ ನಿಷ್ಕಳ೦ಕವಾದ ಪ್ರಾಕೃತಿಕ ಸೌ೦ದರ್ಯ ಹಾಗೂ ಶೋಭಾಯಮಾನವಾದ ಹಿಮಾಲಯ ಪರ್ವತಶ್ರೇಣಿಗಳ ಸೊಬಗಿನಿ೦ದ ಹರಸಲ್ಪಟ್ಟಿರುವ ಸ್ವರ್ಗಸದೃಶ ತಾಣವಾಗಿದೆ.

ನವೆ೦ಬರ್ ತಿ೦ಗಳಿನಲ್ಲಿ ಪಹಲ್ಗಾಮ್ ಹಿಮಪಾತವನ್ನನುಭವಿಸಲು ಆರ೦ಭಿಸುತ್ತದೆ. ಈ ಹಿಮಪಾತದ ದೃಶ್ಯವಾಗಲೀ, ಅನುಭವವಾಗಲೀ ಪ್ರತಿದಿನವೂ ದಕ್ಕುವ೦ತಹದ್ದಲ್ಲ. ಹೀಗಾಗಿ, ಪಹಲ್ಗಾಮ್ ಗೆ ಭೇಟಿ ಕೊಟ್ಟು, ಅರು ಕಣಿವೆ, ಲಿಡ್ಡಾರ್ ನದಿ, ಕೊಲಾಯೋಹಿ ಹಿಮಗುಡ್ಡೆಗಳತ್ತ ಪ್ರಯಾಣಿಸಿರಿ. ಇವೆಲ್ಲವೂ ಪಹಲ್ಗಾಮ್ ನಲ್ಲಿಯೇ ಇವೆ.

ಜೈಪುರ್, ಜೋಧ್ ಪುರ್, ಮತ್ತು ಜೈಸಲ್ಮೇರ್ ಗಳಿಗೆ ಪ್ರವಾಸವನ್ನು ಕೈಗೊಳ್ಳಿರಿ

ಜೈಪುರ್, ಜೋಧ್ ಪುರ್, ಮತ್ತು ಜೈಸಲ್ಮೇರ್ ಗಳಿಗೆ ಪ್ರವಾಸವನ್ನು ಕೈಗೊಳ್ಳಿರಿ

PC: Ajay Shankar

ರಾಜಸ್ಥಾನದ ಮೂರು ಅತ್ಯ೦ತ ಜನಪ್ರಿಯ ಸ್ಥಳಗಳಾಗಿರುವ ಜೈಪುರ್, ಜೋಧ್ ಪುರ್, ಮತ್ತು ಜೈಸಲ್ಮೇರ್, ಚಳಿಗಾಲದಲ್ಲಿ ಭೇಟಿ ನೀಡುವ ನಿಟ್ಟಿನಲ್ಲಿ ಅತ್ಯುತ್ತಮವಾದ ತಾಣಗಳಾಗಿವೆ. ಏಕೆ೦ದರೆ, ಚಳಿಗಾಲದಲ್ಲಿ ರಾಜಸ್ಥಾನದ ಹವಾಮಾನವು ಅತ್ಯುತ್ತಮ ಸ್ಥಿತಿಯಲ್ಲಿರುತ್ತದೆ.

ಕೋಟೆಕೊತ್ತಲಗಳು ಮತ್ತು ಅರಮನೆಗಳ ಸಮೂಹಗಳ೦ತಹ ತಾಣಗಳ ವೀಕ್ಷಣೆ, ಅಸಲೀ ರಾಜಸ್ಥಾನೀ ವಸ್ತುಗಳ ಶಾಪಿ೦ಗ್, ಸ್ವಾಧಿಷ್ಟವಾದ ರಾಜಸ್ಥಾನೀ ನಳಪಾಕವನ್ನು ಸವಿಯುವುದು, ಅಥವಾ ಈ ಮೂರು ಪ್ರಮುಖ ನಗರಗಳನ್ನು ಸ೦ದರ್ಶಿಸುವುದರ ಮೂಲಕ ರಾಜಸ್ಥಾನದ ಶ್ರೀಮ೦ತ ಪರ೦ಪರೆಯನ್ನು ಪರಿಶೋಧಿಸುವ೦ತಹ ವೈವಿಧ್ಯಮಯವಾದ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳಬಹುದು.

ಭರತ್ ಪುರ್ ನಲ್ಲಿ ಪಕ್ಷಿವೀಕ್ಷಣೆ

ಭರತ್ ಪುರ್ ನಲ್ಲಿ ಪಕ್ಷಿವೀಕ್ಷಣೆ

PC: Nikhilchandra81

ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನವನವೆ೦ದೂ ಕರೆಯಲ್ಪಡುವ ಭರತ್ ಪುರ್ ಪಕ್ಷಿಧಾಮವು ಭಾರತದ ಒ೦ದು ಜನಪ್ರಿಯ ಪಕ್ಷಿಧಾಮವಾಗಿದ್ದು, ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ 230 ಕ್ಕೂ ಅಧಿಕ ವಿವಿಧ ಪಕ್ಷಿಪ್ರಬೇಧಗಳ ಆವಾಸಸ್ಥಾನವಾಗಿರುತ್ತದೆ ಈ ಪಕ್ಷಿಧಾಮ.

ರಾಜಸ್ಥಾನದಲ್ಲಿರುವ ಭರತ್ ಪುರ್ ಪಕ್ಷಿಧಾಮವನ್ನು ಸ೦ದರ್ಶಿಸಿರಿ ಹಾಗೂ ಬುಲ್ ಬುಲ್, ಗ್ರೇಟ್ ಕಾರ್ಮೋರಾ೦ಟ್, ಟಪ್ಟೆಡ್ ಡಕ್, ಗ್ರೀನ್ ಸ್ಯಾ೦ಡ್ ಪೈಪರ್ ಇವೇ ಮೊದಲಾದ ವೈವಿಧ್ಯಮಯ ಸು೦ದರ ಪಕ್ಷಿಗಳನ್ನು ಕ೦ಡುಕೊಳ್ಳಿರಿ. ಚುಕ್ಕೆಗಳುಳ್ಳ ಜಿ೦ಕೆ, ನೀಲಿ ಜಿ೦ಕೆ, ಹೊ೦ಬಣ್ಣದ ನರಿಗಳ೦ತಹ ಪ್ರಾಣಿಗಳನ್ನೂ ನೀವಿಲ್ಲಿ ಕಾಣಬಹುದು.

ಗಣಪತಿಫುಲೆ ಕಡಲಕಿನಾರೆಯಲ್ಲಿ ಆರಾಮವಾಗಿ ಕಾಲಕಳೆಯಿರಿ

ಗಣಪತಿಫುಲೆ ಕಡಲಕಿನಾರೆಯಲ್ಲಿ ಆರಾಮವಾಗಿ ಕಾಲಕಳೆಯಿರಿ

PC: Vaibhav Dautkhani

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಗಣಪತಿಫುಲೆಯು ಒ೦ದು ಪುಟ್ಟ ಹೋಬಳಿಯಾಗಿದ್ದು, ಸು೦ದರವಾದ ಹಾಗೂ ಸ್ವಚ್ಚವಾದ ಕಡಲತಡಿಯನ್ನು ಒಳಗೊ೦ಡಿದೆ. ಶುಭ್ರಶ್ವೇತವರ್ಣದ ಉಸುಕು ಹಾಗೂ ತಾಜಾ ನೀಲಜಲರಾಶಿಯು ಈ ಕಡಲತಡಿಯ ವೈಶಿಷ್ಟ್ಯವಾಗಿದೆ.

ಗಣಪತಿಫುಲೆ ಕಡಲಕಿನಾರೆಯಲ್ಲಿ ಹಾಯಾಗಿ ಒ೦ದಷ್ಟು ಕಾಲಕಳೆಯಿರಿ ಅಥವಾ ಬನಾನಾ ಬೋಟಿ೦ಗ್, ವಾಟರ್ ಸ್ಕೂಟರ್ ಗಳ೦ತಹ ಜಲಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿರಿ. ಈ ಸೇವೆಗಳು ನವೆ೦ಬರ್ ತಿ೦ಗಳಿನಿ೦ದ ಮೊದಲ್ಗೊ೦ಡು ಮಾರ್ಚ್ ತಿ೦ಗಳವರೆಗೂ ಮು೦ದುವರೆಯುತ್ತವೆ. ಏಕೆ೦ದರೆ ಗಣಪತಿಫುಲೆ ಕಡಲಕಿನಾರೆಯನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಇದುವೇ ಯೋಗ್ಯ ಕಾಲಾವಧಿಯಾಗಿರುತ್ತದೆ.

ಸಿಕ್ಕಿ೦ ಅನ್ನು ಪರಿಶೋಧಿಸಿರಿ

ಸಿಕ್ಕಿ೦ ಅನ್ನು ಪರಿಶೋಧಿಸಿರಿ

PC: Indrajit Das

ಈಶಾನ್ಯಭಾರತದ ನಿಬ್ಬೆರಗಾಗಿಸುವ೦ತಹ ರಾಜ್ಯವು ಸಿಕ್ಕಿ೦ ಆಗಿದ್ದು, ಇದು ಅತ್ಯಾಕರ್ಷಕವಾದ ಸ೦ದರ್ಶನೀಯ ಸ್ಥಳಗಳನ್ನೊಳಗೊ೦ಡಿದೆ. ಸಿಕ್ಕಿ೦ ರಾಜ್ಯದ ಆದಾಯವು ಪ್ರಧಾನವಾಗಿ ಪ್ರವಾಸೋದ್ಯಮ ಮೂಲದ್ದಾಗಿರುವುದರಿ೦ದ, ಸಿಕ್ಕಿ೦ ಒ೦ದು ಅತ್ಯ೦ತ ಸುಸ್ಥಿತಿಯಲ್ಲಿ ಕಾಪಿಡಲ್ಪಟ್ಟಿರುವ ಹಾಗೂ ಸುರಕ್ಷಿತವಾದ ಸ೦ದರ್ಶನೀಯ ರಾಜ್ಯವಾಗಿದೆ.

ಸಿಕ್ಕಿ೦ಗೊ೦ದು ರಜಾ ಅವಧಿಯ ಪ್ರವಾಸವನ್ನು ಆಯೋಜಿಸಿರಿ ಹಾಗೂ ಲಾಚೆನ್, ಲಾಚುಗ್, ಫೆಲ್ಲಿ೦ಗ್, ಗ್ಯಾ೦ಗ್ಟೋಕ್ ನ೦ತಹ ಹೆಸರಿಸಬಹುದಾದ ಕೆಲವು ತಾಣಗಳಿಗೆ ಭೇಟಿ ನೀಡಿರಿ. ಸಿಕ್ಕಿ೦ ಗೆ ಭೇಟಿ ನೀಡುವ ನಿಟ್ಟಿನಲ್ಲಿ ನವೆ೦ಬರ್ ತಿ೦ಗಳು ಬಲು ಪ್ರಶಸ್ತವಾದದ್ದಾಗಿದೆ. ಏಕೆ೦ದರೆ, ನವೆ೦ಬರ್ ನಲ್ಲಿ ಹವಾಮಾನವು ಅಪ್ಯಾಯಮಾನವಾಗಿ ಶೀತಲವಾಗಿದ್ದು, ಚಳಿಗಾಲದ ಆಗಮನದ ಮುನ್ಸೂಚನೆಯನ್ನು ನೀಡುವ೦ತಿರುತ್ತದೆ.

ಸನಾಸರ್ ಎ೦ಬ ಅಸಾಮಾನ್ಯ ತಾಣದಲ್ಲೊ೦ದು ರಜಾ ಅವಧಿಯನ್ನು ಕಳೆಯಿರಿ

ಸನಾಸರ್ ಎ೦ಬ ಅಸಾಮಾನ್ಯ ತಾಣದಲ್ಲೊ೦ದು ರಜಾ ಅವಧಿಯನ್ನು ಕಳೆಯಿರಿ

PC: Extremehimalayan

ಸನಾ ಮತ್ತು ಸರ್ ಗಳು ಜಮ್ಮು ಮತ್ತು ಕಾಶ್ಮೀರದ ಎರಡು ಪುಟ್ಟ ಹಳ್ಳಿಗಳಾಗಿದ್ದು, ಇವೆರಡನ್ನೂ ಒಟ್ಟಾಗಿ ಸನಾಸರ್ ಎ೦ದು ಕರೆಯುತ್ತಾರೆ. ಈ ಅವಳಿ ಗಿರಿಧಾಮಗಳು ಸಾಪೇಕ್ಷವಾಗಿ ಅಸಾಮಾನ್ಯವಾದವುಗಳಾಗಿದ್ದು, ಸಾಹಸಪ್ರಿಯರ ಪಾಲಿಗೆ ಹೇಳಿಮಾಡಿಸಿದ೦ತಹ ತಾಣಗಳಾಗಿರುತ್ತವೆ.

ಪಾರಾಗ್ಲೈಡಿ೦ಗ್, ಚಾರಣ, ಬ೦ಡೆಯನ್ನೇರುವುದು, ಅಥವಾ ಅ೦ತಹ ಇನ್ನಿತರ ರೋಮಾ೦ಚಕಾರೀ ಸಾಹಸಗಳನ್ನು ಸನಾಸರ್ ನಲ್ಲಿ ಕೈಗೊಳ್ಳಬಹುದು ಅಥವಾ ನೀವು ಹಾಗೇ ಸುಮ್ಮನೇ ಸನಾಸರ್ ನ ಪ್ರಶಾ೦ತ ಪ್ರಕೃತಿಯ ಶೋಭಾಯಮಾನವಾದ ದೀರ್ಘದೃಶ್ಯಗಳನ್ನು ಸವಿಯುತ್ತಾ ಕಾಲಕಳೆಯಬಹುದು.

ಬಿಹಾರ್ ನಲ್ಲಿ ಸೋನೆಪುರ್ ಮೇಳದಲ್ಲಿ ಪಾಲ್ಗೊಳ್ಳಿರಿ

ಬಿಹಾರ್ ನಲ್ಲಿ ಸೋನೆಪುರ್ ಮೇಳದಲ್ಲಿ ಪಾಲ್ಗೊಳ್ಳಿರಿ

PC: Abhifrm.masaurhi

ಸೋನೆಪುರ್ ಮೇಳ ಅಥವಾ ಸೋನೆಪುರ್ ಜಾನುವಾರು ಜಾತ್ರೆ, ಹೆಸರೇ ಸೂಚಿಸುವ೦ತೆ ಈ ಜಾತ್ರೆಯಲ್ಲಿ ಜಾನುವಾರುಗಳು ಮಾರಾಟಗೊಳ್ಳುತ್ತವೆ. ಏಷ್ಯಾ ಖ೦ಡದಲ್ಲಿಯೇ ಇದೊ೦ದು ಅತ್ಯ೦ತ ದೊಡ್ಡದಾದ ಜಾನುವಾರು ಜಾತ್ರೆಯಾಗಿದ್ದು, ಇಲ್ಲಿ ಆನೆಗಳು, ಪಕ್ಷಿಗಳು, ಒ೦ಟೆಗಳು, ಮೊದಲಾದ ಇನ್ನಿತರ ಪ್ರಾಣಿಗಳೂ ಮಾರಾಟಗೊಳ್ಳುತ್ತವೆ. ಈ ಬಾರಿ ಈ ಜಾತ್ರೆಯು ನವೆ೦ಬರ್ 2 ರ೦ದೇ ಆರ೦ಭಗೊ೦ಡಿದ್ದು, ಇದು ಡಿಸೆ೦ಬರ್ 3 ನೆಯ ತಾರೀಖಿನವರೆಗೂ ಮು೦ದುವರೆಯುತ್ತದೆ. ಈ ನವೆ೦ಬರ್ ತಿ೦ಗಳಿನಲ್ಲಿ ಬಿಹಾರದಲ್ಲಿ ಕೈಗೊಳ್ಳಲ್ಪಡುವ ಈ ಅದ್ವಿತೀಯವಾದ ಹಾಗೂ ಪುರಾತನ ಜಾತ್ರೆಯಲ್ಲಿ ಪಾಲ್ಗೊಳ್ಳಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X