ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅವಲಾಂಚೆ(ಹಿಮಪಾತ) ಕೆರೆಯು ಊಟಿಯಿಂದ 28 ಕಿ.ಮೀ ದೂರದಲ್ಲಿದೆ. ಈ ಕೆರೆಗೆ ಈ ಹೆಸರು ಬರಲು ಕಾರಣ 19 ನೇ ಶತಮಾನದಲ್ಲಿ ಈ ಸ್ಥಳದಲ್ಲಿ ಮಂಜಿನ ಗಡ್ಡೆಗಳು ಸುರಿದ ಅನುಭವವಾಗಿತ್ತಂತೆ.
ಈ ಕೆರೆಯು ಪ್ರವಾಸಿಗರ ಮತ್ತು ಸ್ಥಳೀಯರ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಕೆರೆಯ ಸುತ್ತಮುತ್ತಲ ಪ್ರದೇಶವು ಮಂತ್ರ ಮುಗ್ಧಗೊಳಿಸುವಂತಿದೆ. ಈ ಕೆರೆಯ ಸುತ್ತಲು ಮುಗಿಲೆತ್ತರಕ್ಕೆ ನಿಂತಿರುವ ಬೆಟ್ಟಗಳಲ್ಲಿ ಮ್ಯಾಗ್ನೋಲಿಯ, ರೋಡೊಡೆಂಡ್ರನ್ಸ್ ಮತ್ತು ಆರ್ಕಿಡ್ಗಳಿದ್ದು, ನೋಡುಗರನ್ನು ಸಮ್ಮೋಹಿತಗೊಳಿಸುತ್ತವೆ. ಹಲವಾರು ಪ್ರವಾಸಿಗರು ಈ ಕೆರೆಯ ಸುತ್ತ ಮುತ್ತ ಏಕಾಂತದಲ್ಲಿ ವಿಹರಿಸುತ್ತಿರುವುದನ್ನು ನೋಡುವುದೇ ಒಂದು ಚಂದ.
ಇನ್ನು ಕೆಲವರು ಕೆರೆಯಲ್ಲಿ ಮೀನು ಹಿಡಿಯುತ್ತ ಕಾಲ ಕಳೆಯುತ್ತಾರೆ. ಈ ಕೆರೆಯಲ್ಲಿ ಸಿಹಿ ನೀರಿನ ಟ್ರೌಟ್ ಮೀನುಗಳು ಅಧಿಕವಾಗಿವೆ. ಮೀನು ಹಿಡಿಯಲು ಬಯಸುವವರಿಗಾಗಿ ಮೀನು ಹಿಡಿಯುವ ಗಾಳ, ಕೋಲು, ಮೀನಿಗೆ ಹಾಕುವ ಎರೆಗಳನ್ನು ಮತ್ತು ಇನ್ನಿತರ ಉಪಕರಣಗಳನ್ನು ಒದಗಿಸುವ ಅಂಗಡಿಯನ್ನು ಸಹ ಇಲ್ಲಿ ತೆರೆಯಲಾಗಿದೆ.
ಸಾಹಸ ಮನೋಭಾವವನ್ನು ಹೊಂದಿರುವ ಪ್ರವಾಸಿಗರು ಈ ಕೆರೆಯ ಬಳಿಯಲ್ಲಿ ಶಿಬಿರವನ್ನು ಹಾಕಬಹುದು. ಇಲ್ಲಿಯೇ ಶಿಬಿರವನ್ನು ಹಾಕಿ ಹಾಯಾಗಿ ಕಾಲ ಕಳೆಯಬಹುದು. ಕೆಲವರು ಇಲ್ಲಿ ಚಾರಣವನ್ನು ಮಾಡಿದರೆ, ಇನ್ನೂ ಕೆಲವರು ರೋಮಾಂಚಕಾರಿ ಎನಿಸುವ ರಾಫ್ಟಿಂಗ್ನಲ್ಲಿ ಪಾಲ್ಗೊಳ್ಳುತ್ತಾರೆ.