Search
  • Follow NativePlanet
Share
» »ಚೀನಾ ನಂತರದ ಜಗತ್ತಿನ ದೊಡ್ಡ ಗೋಡೆ!

ಚೀನಾ ನಂತರದ ಜಗತ್ತಿನ ದೊಡ್ಡ ಗೋಡೆ!

By Vijay

ಚೀನಾ ಗೋಡೆಯ ಹೆಸರನ್ನು ಯಾರು ತಾನೆ ಕೇಳಿಲ್ಲ? ಎಲ್ಲರಿಗೂ ಚೀನಾ ದೇಶವೂ ಗೊತ್ತು ಅದರ ಉದ್ದನೇಯ ಗೋಡೆಯೂ ಗೊತ್ತು. ಆದರೆ ಚೀನಾ ಗೋಡೆಯಾದ ಮೇಲೆ ಬಹು ಉದ್ದ ಅಳತೆ ಹೊಂದಿರುವ ಇನ್ನಾವುದಾದರೂ ಗೋಡೆ ಇದೆಯಾ? ಇದ್ದರೆ ಎಲ್ಲಿದೆ? ಯಾವುದಾ ಗೋಡೆ? ಎಂಬಿತ್ಯಾದಿ ಪ್ರಶ್ನೆಗಳು ಸಾಕಷ್ಟು ಜನರಲ್ಲಿ ಮೂಡಿರಲೂಬಹುದು.

ಚಿತ್ರಕೃಪೆ: Sujay25

ಅದಕ್ಕೆ ಉತ್ತರವಾಗಿ ಇತಿಹಾಸವು ಹೌದು ಎನ್ನುತ್ತದೆ. ಅದೂ ಕೂಡ ಇರುವುದು ಭಾರತದಲ್ಲಿಯೆ ಎಂಬುದು ವಿಶೇಷ ಹಾಗೂ ನಮಗೆಲ್ಲ ಸಂತಸ ತರುವ ಸಂಗತಿ. ರಾಜಸ್ಥಾನ ರಾಜ್ಯದ ಮೇವಾಡ ಪ್ರದೇಶದ ರಾಜ್ಸಾಮಂದ್ ಜಿಲ್ಲೆಯಲ್ಲಿರುವ ಕುಂಭಗಳನ್ನು ಸಾಲು ಸಾಲಾಗಿ ಹೊತ್ತು ನಿಂತ ಕುಂಭಲ್ಗಡ್ ಕೋಟೆಯೆ ಎರಡನೇಯ ಅತಿ ಉದ್ದದ ಗೋಡೆ ಹೊಂದಿರುವ ಕೋಟೆ ಎನ್ನಲಾಗಿದೆ. ಇದರ ಒಟ್ಟು ಉದ್ದ 38 ಕಿ.ಮೀ ಗೂ ಅಧಿಕವಾಗಿದೆ.

ಚಿತ್ರಕೃಪೆ: Aryarakshak

ರಾಜಸ್ಥಾನದ "ಸರೋವರ ನಗರ" ಎಂಬ ಬಿರುದಾವಳಿ ಹೊಂದಿರುವ ಉದೈಪುರಿನ ವಾಯವ್ಯಕ್ಕೆ ಸುಮಾರು 82 ಕಿ.ಮೀ ದೂರದಲ್ಲಿರುವ ಕುಂಭಲ್ಗಡ್ ಕೋಟೆಯನ್ನು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. 15 ನೇಯ ಶತಮಾನದಲ್ಲಿ ರಾಜಾ ಕುಂಭನಿಂದ ನಿರ್ಮಾಣಗೊಂಡಂತಹ ಈ ಅದ್ಭುತ ಕೋಟೆಯಿರುವ ಕುಂಭಲ್ಗಡ್, ಮೇವಾಡದ ಪ್ರಸಿದ್ಧ ಯೋಧ, ದೊರೆ ರಾಣಾ ಪ್ರತಾಪನ ಜನ್ಮ ಸ್ಥಳವೂ ಹೌದು.

ಚಿತ್ರಕೃಪೆ: Sujay25

ಮೇವಾಡ ಪ್ರದೇಶದಲ್ಲಿರುವ ಚಿತ್ತೌರ್ಗಡ್ ನಂತರದ ಅತಿ ಪ್ರಮುಖ ಕೋಟೆಯಾಗಿರುವ ಕುಂಭಲ್ಗಡ್ ಇಂದು ಪ್ರವಾಸಿ ಆಕರ್ಷಣೆಯಾಗಿದ್ದು ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಅಲ್ಲದೆ ಪ್ರತಿದಿನ ಸಂಜೆಯ ವೇಳೆ ಈ ಕೋಟೆಯನ್ನು ಕೆಲ ನಿಮಿಷಗಳ ಕಾಲ ಪ್ರಕಾಶಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಣುವ ದೃಶ್ಯದ ಅಂದ ನೋಡಿದವನೆ ಬಲ್ಲ.

ಚಿತ್ರಕೃಪೆ: Antoine Taveneaux

ಸಮುದ್ರ ಮಟ್ಟದಿಂದ 1100 ಮೀ. ಎತ್ತರದಲ್ಲಿ ನಿರ್ಮಿಸಲಾದ ಈ ಕೋಟೆ ಗೋಡೆಯ ಒಟ್ಟು ಪರೀಧಿಯು 36 ಕಿ.ಮೀ ಗೂ ಅಧಿಕವಾಗಿದೆ. ಕೋಟೆಯ ಮುಂಭಾಗದ ಗೋಡೆಯು ಹದಿನೈದು ಅಡಿಗಳಷ್ಟು ದಪ್ಪವಾಗಿದ್ದು ಒಟ್ಟು ಏಳು ಪ್ರವೇಶ ದ್ವಾರಗಳು ಈ ಕೋಟೆಗಿವೆ. ಕೋಟೆಯ ಒಳಾಂಗಣದಲ್ಲಿ 350 ಕ್ಕೂ ಅಧಿಕ ದೇವಾಲಯಗಳಿದ್ದು ಅವುಗಳಲ್ಲಿ 300 ದೇಗುಲಗಳು ಜೈನ ಧರ್ಮಕ್ಕೆ ಸಂಬಂಧಿಸಿದ್ದಾಗಿವೆ.

ಚಿತ್ರಕೃಪೆ: Eklavya Yadav

ಕೋಟೆಯ ಗೋಡೆಯು ಉದ್ದವಾಗಿದ್ದು ಅಲ್ಲಲ್ಲಿ ಶಿಸ್ತುಬದ್ಧವಾದ ಕುಂಭಗಳನ್ನು ಹೊಂದಿದೆ. ಮಧ್ಯದಲ್ಲಿ ಕಿಂಡಿಗಳಿದ್ದು ಆಕ್ರಮಣಕಾರಾರ ಮೇಲೆ ನಿಗಾ ಇಡಲು ನಿಪುಣತೆಯಿಂದ ನಿರ್ಮಿಸಲಾಗಿದೆ. ಇದು ಅಂದಿನ ರಜಪೂತ ದೊರೆಗಳ ಕೌಶಲ್ಯ, ಯುದ್ಧ ನೀತಿ ಹಾಗೂ ಚಾಣಕ್ಷತೆಯನ್ನು ಅನಾವರಣಗೊಳಿಸುತ್ತದೆ.

ಚಿತ್ರಕೃಪೆ: Shakti

ಕೋಟೆಗೆ ಹೊಂದಿಕೊಂಡಂತೆ ಒಂದು ರೋಚಕಮಯ ದಂತಕಥೆಯು ತಳುಕು ಹಾಕಿ ಕೊಂಡಿದೆ. ಅದರ ಪ್ರಕಾರ, ಹಿಂದೆ ರಾಜಾ ಕುಂಭನು ಈ ಕೋಟೆಯನ್ನು ಕಟ್ಟಲು ಸಾಕಷ್ಟು ಪ್ರಯತ್ನಿಸಿ ಅಸಫಲನಾಗಿದ್ದ. ಕೊನೆಗೆ ಬೇರೆ ದಾರಿ ಕಾಣದೆ ಧರ್ಮ ಗುರುಗಳೊಬ್ಬರ ಮೊರೆ ಹೋದ. ಅದಕ್ಕವರು ಸ್ವಯಂಪ್ರೇರಿತ ಮನುಷ್ಯನೊಬ್ಬ ಬಲಿ ಕೊಟ್ಟಾಗ ಕೋಟೆ ನಿರ್ಮಾಣವಾಗುತ್ತದೆಂದು ಉಪದೇಶಿಸಿದ.

ಚೀನಾ ನಂತರದ ಜಗತ್ತಿನ ದೊಡ್ಡ ಗೋಡೆ!

ಚಿತ್ರಕೃಪೆ: Sujay25

ಅಲ್ಲದೆ ಬಲಿ ಕೊಟ್ಟ ಮನುಷ್ಯನ ರುಂಡ ಬಿದ್ದೆಡೆ ದೇವಾಲಯವನ್ನೂ ಮುಂಡ ಬಿದ್ದೆಡೆ ಗೋಡೆಯನ್ನೂ ಕಟ್ಟಬೇಕೆಂದು ಹೇಳಿದ. ಅದರಂತೆ ರಾಜನು ಈ ವಿಷಯವನ್ನು ತನ್ನ ಸಾಮ್ರಾಜ್ಯದೆಲ್ಲೆಡೆ ಸಾರಿದಾಗ ಯಾವೋಬ್ಬ ಮನುಷ್ಯನು ಬಲಿಗೆಂದು ಮುಂದೆ ಬರಲಿಲ್ಲ. ಇದರಿಂದ ರಾಜ ವಿಚಲಿತನಾಗಿದ್ದಾಗ ಆ ಊರಿಗೆ ಭೇಟಿ ನೀಡಿದ ಸಂದರ್ಶಕನೊಬ್ಬ ತುಂಬು ಮನಸ್ಸಿನಿಂದ ತನ್ನ ಬಲಿ ಅರ್ಪಿಸಲು ಮುಂದೆ ಬಂದ.

ಅದರಂತೆ ಅವನ ಬಲಿ ಪಡೆದ ನಂತರ ಕೋಟೆಯನ್ನು ಯಶಸ್ವಿಯಾಗಿ ನಿರ್ಮಿಸಲಾಯಿತು ಹಾಗೂ ಅವನ ರುಂಡ ಬಿದ್ದೆಡೆ ದೇಗುಲವೂ ಸಹ ನಿರ್ಮಾಣವಾಯಿತು. ಕೆಲವರ ಪ್ರಕಾರ, ಆ ಸಂದರ್ಶಕ ಬೇರಾರೂ ಅಲ್ಲ ಅವನಿಗೆ ಉಪಾಯ ಹೇಲಿದ್ದ ಧರ್ಮಗುರುವೆ ಬಂದಿದ್ದನೆನ್ನಲಾಗಿದೆ. ಇಂದು ಕೋಟೆಯ ಮೇಲಿಂದ ನೋಡಿದಾಗ ಅರಾವಳಿ ಪರ್ವತ ಶ್ರೇಣಿಯ ಅದ್ಭುತ ದೃಶ್ಯದ ಜೊತೆ ಥಾರ್ ಮರಭೂಮಿಯ ಮರಳು ದಿಣ್ಣೆಗಳೂ ಸಹ ಗೋಚರಿಸುತ್ತವೆ.

ಕೋಟೆಗೆ ಪ್ರವೇಶಿಸಲು ರಾಮ್ ಪೋಲ್ ಹಾಗೂ ಹನುಮಾನ್ ಪೋಲ್ ಎಂಬ ಎರಡು ಪ್ರವೇಶ ದ್ವಾರಗಳು ಪ್ರವಾಸಿಗರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತವೆ. ಇನ್ನೇಕೆ ತಡ ರಾಜಸ್ಥಾನಕ್ಕೆ ಪ್ರವಾಸಕ್ಕೆಂದು ತೆರಳಿದರೆ ಭಾರತೀಯ ಚೀನಾ ಗೋಡೆಗೆ ಭೇಟಿ ನೀಡಲು ಮರೆಯದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X