Search
  • Follow NativePlanet
Share
» »ಗದಗ ನಿಂದ ಪಂಢರಾಪುರ ಸದಾ ಆನಂದ

ಗದಗ ನಿಂದ ಪಂಢರಾಪುರ ಸದಾ ಆನಂದ

By Vijay

ಕೇಂದ್ರ ರೈಲು ಮಂತ್ರಿ ಹಾಗೂ ನಮ್ಮವರೆ ಆದ ಮಾನ್ಯ ಸದಾನಂದಗೌಡರು 2014 -15 ನೇಯ ಸಾಲಿನ ತಮ್ಮ ರೈಲು ಮುಂಗಡ ಪತ್ರದಲ್ಲಿ ಹಲವು ಹೊಸ ರೈಲು ಯೋಜನೆಗಳನ್ನು ಪ್ರಕಟಿಸಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿರುವುದು ತುಂಬ ಆಶಾದಾಯಕವಾಗಿದೆ.

ಎರಡು ರಾಜ್ಯಗಳ ಧಾರ್ಮಿಕ ಕ್ಷೇತ್ರಗಳನ್ನು ಒಂದೆ ಜಾಲದಲ್ಲೆ ಬೆಸೆಯುವ ಗದಗ ನಿಂದ ಪಂಢರಾಪುರ ಹೊಸ ರೈಲು ಯೋಜನೆಯು ಕರ್ನಾಟಕದ ಪಾಲಿಗೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದವರ ಪಾಲಿಗೆ ಅತಿ ಸಂತಸದ ಸಂಗತಿಯಾಗಿದೆ. ಏಕೆಂದರೆ ಕರ್ನಾಟಕದ ಗದಗ, ಬಾಗಲಕೋಟೆ ಹಾಗೂ ಬಿಜಾಪುರ ಮತ್ತು ಮಹಾರಾಷ್ಟ್ರದ ಸೋಲಾಪುರ ಹಾಗೂ ಪಂಢರಾಪುರ, ಈ ಭಾಗದ ಪ್ರಖ್ಯಾತ ಪ್ರವಾಸಿ ಸ್ಥಳಗಳಲ್ಲದೆ, ಧಾರ್ಮಿಕ ಆಕರ್ಷಣೆಗಳನ್ನೂ ಸಹ ಒಳಗೊಂಡಿದೆ.

ಈ ಹೊಸ ರೈಲು ಅನುಷ್ಠಾನಗೊಂಡಾಗ, ಗದಗ ನಿಂದ ಪ್ರಾರಂಭವಾಗಿ ಬಾಗಲಕೋಟೆ ಮಾರ್ಗವಾಗಿ ಬಿಜಾಪುರ, ಮಹಾರಾಷ್ಟ್ರದ ಸೋಲಾಪುರ ಹಾಗೂ ಕೊನೆಯದಾಗಿ ಪಂಢರಾಪುರಕ್ಕೆ ತಲುಪುತ್ತದೆ. ಹಾಗಾದರೆ ಬನ್ನಿ ಪ್ರಸ್ತುತ ಲೇಖನದ ಮೂಲಕ ಈ ಸ್ಥಳಗಳ ವಿಶೇಷತೆಗಳ ಕುರಿತು ತಿಳಿದುಕೊಳ್ಳೋಣ.

ಗದಗ್:

ಗದಗ್:

ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಜಿಲ್ಲೆಯ ಸ್ಥಾನ ಮಾನ ಪಡೆದ ಗದಗ್ ಒಂದು ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಪ್ರಖ್ಯಾತಿ ಪಡೆದ ಜಿಲ್ಲೆಯಾಗಿದೆ. ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯ ತುಂಬೆಲ್ಲ ಕಾಣಬಹುದು. ಅಲ್ಲದೆ ಗದಗ್ ಪಟ್ಟಣದಲ್ಲಿ 11, 12 ನೇಯ ಶತಮಾನಗಳ ಅದ್ಭುತ ಸ್ಮಾರಕಗಳು ಹಾಗೂ ರಚನೆಗಳು ಐತಿಹಾಸಿಕ ಪ್ರಾಮುಖ್ಯತೆ ಪಡೆದಿವೆ. ಇಲ್ಲಿರುವ ಪ್ರಮುಖ ದೇವಾಲಯ ತ್ರಿಕೂಟೇಶ್ವರ ದೇವಾಲಯ ಸಂಕೀರ್ಣ. ಅತ್ಯದ್ಭುತ ಶಿಲ್ಪ ಕಲೆಗೆ ಇದು ಪ್ರಸಿದ್ಧಿ ಪಡೆದಿದೆ.

ಲಕ್ಷ್ಮೇಶ್ವರ:

ಲಕ್ಷ್ಮೇಶ್ವರ:

ಗದಗ್ ಜಿಲ್ಲೆಯಲ್ಲಿರುವ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಒಂದು ಐತಿಹಾಸಿಕ ಪ್ರಸಿದ್ಧ ಪಟ್ಟಣವಾಗಿದ್ದು ಸೋಮೇಶ್ವರ ದೇವಸ್ಥಾನ ಸಂಕೀರ್ಣದಿಂದಾಗಿ ಹೆಸರುವಾಸಿಯಾಗಿದೆ. ಅಲ್ಲದೆ ಇತರೆ ಪುರಾತನ ಜೈನ ದೇವಾಲಯಗಳನ್ನೂ ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: Manjunath Doddamani

ಸೂಡಿ:

ಸೂಡಿ:

ಗದಗ್ ಜಿಲ್ಲೆಯಲ್ಲಿರುವ ಸೂಡಿ ಐತಿಹಾಸಿಕ ಪ್ರಮುಖ ಸ್ಥಳವಾಗಿದೆ. ಪ್ರಖ್ಯಾತ ಬಾದಾಮಿಯಿಂದ 30 ಕಿ.ಮೀ, ಗಜೇಂದ್ರಗಡ್‍ನಿಂದ 12 ಕಿ.ಮೀ ಹಾಗೂ ಇಟಗಿ ಭೀಮಾಂಬಿಕಾ ದೇವಸ್ಥಾನದಿಂದ ಕೇವಲ 3 ಕಿ.ಮೀ ದೂರದಲ್ಲಿ ನೆಲೆಸಿದೆ. ಜೋಡು ಕಳಸವುಳ್ಳ ದೇವಸ್ಥಾನಕ್ಕೆ ಸೂಡಿ ಹೆಸರುವಾಸಿಯಾಗಿದೆ.

ಲಕ್ಕುಂಡಿ:

ಲಕ್ಕುಂಡಿ:

ಲಕ್ಕುಂಡಿ ಗದಗ್ ಜಿಲ್ಲೆಯಲ್ಲಿರುವ ಒಂದು ಗುರುತರವಾದ ಹಳ್ಳಿಯಾಗಿದ್ದು, ಹುಬ್ಬಳ್ಳಿಯಿಂದ ಹಂಪಿಗೆ ಹೋಗುಅವ ಮಾರ್ಗದಲ್ಲಿ ನೆಲೆಸಿದೆ. ಗದಗ್ ಪಟ್ಟಣದಿಂದ 11 ಕಿ.ಮೀ ದೂರವಿರುವ ಲಕ್ಕುಂಡಿ ಕಾಶಿವಿಶ್ವೇಶ್ವರ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Dineshkannambadi

ಡಂಬಳ:

ಡಂಬಳ:

ಗದಗ್ ಪಟ್ಟಣದಿಂದ 24 ಕಿ.ಮೀ ದೂರವಿರುವ ಡಂಬಳ ಹಳ್ಳಿಯು ಪಶ್ಚಿಮ ಚಾಲುಕ್ಯರಿಂದ ನಿರ್ಮಿಸಲಾದ ದೊಡ್ಡಬಸಪ್ಪನ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ. ಶಿವನಿಗೆ ಮುಡಿಪಾದ ದೇವಸ್ಥಾನ ಇದಾಗಿದ್ದು, ಶಿಲ್ಪಕಲೆಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Dineshkannambadi

ಗಜೇಂದ್ರಗಡ್:

ಗಜೇಂದ್ರಗಡ್:

ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡ್ ತಾಲೂಕು ತನ್ನಲ್ಲಿರುವ ಅದ್ಭುತವಾದ ಕಾಲಕಾಲೇಶ್ವರ ದೇವಸ್ಥಾನದಿಂದಾಗಿ ಹೆಸರುವಾಸಿಯಾಗಿದೆ. ಗಜೇಂದ್ರಗಡ್ ಕುರಿತು ಹೆಚ್ಚಿಗೆ ತಿಳಿಯಿರಿ.

ಬಾಗಲಕೋಟೆ:

ಬಾಗಲಕೋಟೆ:

ಗದಗ್ ನಂತರದಲ್ಲಿ ಸಿಗುವ ಜಿಲ್ಲೆ ಬಾಗಲಕೋಟೆ. ಈ ಜಿಲ್ಲೆಯೂ ಕೂಡ ಸಾಕಷ್ಟು ಪ್ರವಾಸಿ ಆಕರ್ಷಣೆಗಳನೊಳಗೊಂಡ ಜಿಲ್ಲೆಯಾಗಿದೆ.

ಚಿತ್ರಕೃಪೆ: Jonas Buchholz

ಪಟ್ಟದಕಲ್ಲು:

ಪಟ್ಟದಕಲ್ಲು:

ಮಲಪ್ರಭಾ ನದಿ ತೀರದಲ್ಲಿ ನೆಲೆಸಿರುವ ಐತಿಹಾಸಿಕ ಪ್ರವಾಸಿ ತಾಣ ಪಟ್ಟದಕಲ್ಲು ಬಾಗಲಕೋಟೆ ಜಿಲ್ಲೆಯಲ್ಲಿದೆ. ಬಾದಾಮಿಯಿಂದ 22 ಹಾಗೂ ಐಹೊಳೆಯಿಂದ 10 ಕಿ.ಮೀ ಅಂತರದಲ್ಲಿ ನೆಲೆಸಿರುವ ಪಟ್ಟದಕಲ್ಲು ಚಾಲುಕ್ಯರಿಂದ ನಿರ್ಮಿಸಲಾದ ಹಲವು ಸುಂದರ ಶಿಲ್ಪಕಲೆಯುಳ್ಳ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Jean-Pierre Dalbéra

ಐಹೊಳೆ:

ಐಹೊಳೆ:

ಬಾಗಲಕೋಟೆ ಜಿಲ್ಲೆಯಲ್ಲಿನ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಮತ್ತೊಂದು ಪ್ರವಾಸಿ ತಾಣ ಐಹೊಳೆ. ಮೂಲತಃ ಪಟ್ಟದಕಲ್ಲು, ಐಹೊಳೆ, ಮಹಾಕೂಟ ಹಾಗೂ ಬಾದಾಮಿಗಳು ಅಕ್ಕ ಪಕ್ಕದಲ್ಲೆ ನೆಲೆಸಿದ್ದು ಪ್ರವಾಸಿಗರಿಗೆ ಸೀಮಿತ ಸಮಯದಲ್ಲಿ ಭೇಟಿ ನೀಡಲು ಯೋಗ್ಯವಾಗಿವೆ. ಐಹೊಳೆ ಒಂದು ದೇವಾಲಯಗಳ ಸಂಕೀರ್ಣವಾಗಿದ್ದು ಅದ್ಭುತ ಶಿಲ್ಪ ಕಲೆಗೆ ಹಿಡಿದ ಕೈಗನ್ನಡಿಯಾಗಿದೆ.

ಚಿತ್ರಕೃಪೆ: NAGARAJ

ಕೂಡಲಸಂಗಮ:

ಕೂಡಲಸಂಗಮ:

ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮ ಲಿಂಗಾಯತ ಸಮುದಾಯದವರ ಒಂದು ಪುಣ್ಯ ಕ್ಷೇತ್ರವಾಗಿದ್ದು, ವಚನಕವಿ ಹಾಗೂ ಸಂತರಾಗಿದ್ದ ಬಸವಣ್ಣನವರು ಲಿಂಗೈಕ್ಯರಾದ ಸ್ಥಳವಾಗಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಶ್ರೀಕ್ಷೇತ್ರಕ್ಕೆ ಬರುತ್ತಿರುತ್ತಾರೆ.

ಬಾದಾಮಿ:

ಬಾದಾಮಿ:

ಬಾಗಲಕೋಟೆ ಜಿಲ್ಲೆಯ ಬದಾಮಿ ಎಂದ ತಕ್ಷಣ ನೆನಪಾಗುವುದು ಬನಶಂಕರಿ ಅಮ್ಮನವರ ದೇವಸ್ಥಾನ. ಬೆಂಗಳೂರಿನಿಂದ 463 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಪಟ್ಟಣವು ಬಾಗಲಕೋಟೆಯಿಂದ ಕೇವಲ 39 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: Nvvchar

ಮಹಾಕೂಟ:

ಮಹಾಕೂಟ:

ಬಾಗಲಕೋಟೆ ಜಿಲ್ಲೆಯಲ್ಲಿರುವ ಮಹಾಕೂಟ ಎಂಬ ಐತಿಹಾಸಿಕ ಪ್ರಸಿದ್ಧ ಪಟ್ಟಣವು ಬಾದಾಮಿಯ ಚಾಲೂಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾದ ಸುಮಾರು ಆರನೆ ಹಾಗು ಏಳನೆಯ ಶತಮಾನದ ಶೈವ ಸಮುದಾಯದ ದೇಗುಲಗಳಿಗೆ ಅತಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Dineshkannambadi

ಬಿಜಾಪುರ:

ಬಿಜಾಪುರ:

ಬಾಗಲಕೋಟೆಯ ನಂತರ ಬರುವ ತಾಣ ಬಿಜಾಪುರ. ಬಿಜಾಪುರ ಪಟ್ಟಣವು ಐತಿಹಾಸಿಕವಾಗಿ ಪ್ರಮುಖ ಸ್ಥಳವಾಗಿದ್ದು ಆದಿಲ್ ಶಾಹಿ ಕಾಲದ ಅನೇಕ ಪುರಾತನ ಸ್ಮಾರಕಗಳನ್ನು ಹೊಂದಿದೆ. ಅವುಗಳಲ್ಲಿ ಅತಿ ಪ್ರಮುಖ ಆಕರ್ಷಣೆಯೆಂದರೆ ಗೋಲ ಗುಮ್ಮಟ ಅಥವಾ ಗೋಲ ಗುಂಬಜ.

ಚಿತ್ರಕೃಪೆ: fraboof

ಗೋಲ ಗುಮ್ಮಟ/ಗುಂಬಜ:

ಗೋಲ ಗುಮ್ಮಟ/ಗುಂಬಜ:

ಬಿಜಾಪುರಿನ ವಿಶ್ವ ಪ್ರಖ್ಯಾತ ಹೆಗ್ಗುರುತಾಗಿದೆ ಈ ಭವ್ಯ ಬೃಹತ್ ಸ್ಮಾರಕ. 1659 ರಲ್ಲಿ ಮೊಹಮ್ಮದ್ ಆದಿಲ್ ಶಾಹ್ ಹಾಗು ಕುಟುಂಬದವರಿಂದ ನಿರ್ಮಿಸಲ್ಪಟ್ಟ ಈ ಅದ್ಭುತ ರಚನೆಯು ಅರ್ಧ ಗೋಲಾಕಾರದ ಬೃಹತ್ ಗುಮ್ಮಟವನ್ನು ಹೊಂದಿದ್ದು, ಜಗತ್ತಿನಲ್ಲೆ ಎರಡನೇಯ ದೊಡ್ಡ ಖಂಬಗಳ ಆಧಾರವಿಲ್ಲದ ಗುಮ್ಮಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೊದಲನೆಯದು ವ್ಯಾಟಿಕನ್ ಸಿಟಿಯಲ್ಲಿರುವ ಸೇಂಟ್ ಪೀಟರ್ಸ್. ಈ ರಚನೆಯು ಎಷ್ಟೊಂದು ಅದ್ಭುತವಾಗಿದೆಯೆಂದರೆ ಸುಮಾರು 38 ಮೀ ಗಳಷ್ಟು ದೂರದಲ್ಲೂ ಕೂಡ ಒಂದು ಸೂಜಿಯು ಬಿದ್ದ ಸಪ್ಪಳವನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ ಇಲ್ಲಿನ ವ್ಹಿಸ್ಪರಿಂಗ್ ಗ್ಯಾಲರಿಯಲ್ಲಿ. ಅಲ್ಲದೆ ಒಮ್ಮೆ ಚಪ್ಪಾಳೆಯನ್ನು ಹೊಡೆದರೆ ಹತ್ತು ಬಾರಿ ಅದು ಪ್ರತಿಧನಿಸುತ್ತದೆ.

ಚಿತ್ರಕೃಪೆ: fraboof

ಬಸಂತ ವನ:

ಬಸಂತ ವನ:

ಬಿಜಾಪುರ ನಗರದಿಂದ 3 ಕಿ.ಮೀ ದೂರದಲ್ಲಿ ಉಕ್ಕಲಿ ರಸ್ತೆಯಲ್ಲಿರುವ ರಂಬಾಪುರ ಹಳ್ಳಿಯಲ್ಲಿ ಕಾಣಬಹುದಾಗಿದೆ 85 ಅಡಿಗಳಷ್ಟು ಎತ್ತರದ ಸಿಮೆಂಟ್ ಹಾಗು ಉಕ್ಕಿನಿಂದ ಮಾಡಲಾದ ಈ ಬೃಹತ್ ಶಿವ ಪ್ರತಿಮೆಯನ್ನು. ಇದನ್ನು 26 ನೇಯ ಫೆಬ್ರುವರಿ 2006 ರ ಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಈ ಶಿವ ಪ್ರತಿಮೆಯ ಕೆಳಬದಿಯಲ್ಲಿ ಪುಟ್ಟ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಲಾಗಿದ್ದು ಸುತ್ತಲಿರುವ ಗೋಡೆಗಳ ಮೇಲೆ ಶಿವ ಚರಿತೆಯನ್ನು ಕನ್ನಡದಲ್ಲಿ ಕೆತ್ತಲಾಗಿದೆ.

ಚಿತ್ರಕೃಪೆ: Sissssou2

ಇಬ್ರಾಹಿಮ್ ರೋಜಾ:

ಇಬ್ರಾಹಿಮ್ ರೋಜಾ:

ನಗರದಲ್ಲಿರುವ ಈ ಸ್ಮಾರಕವನ್ನು ಎರಡನೇಯ ಇಬ್ರಾಹಿಮ್ ಆದಿಲ್ ಶಾಹ್ ನಿರ್ಮಿಸಿದ್ದಾನೆ. ಆಕರ್ಷಕವಾದ ವಾಸ್ತುಶಿಲ್ಪವನ್ನು ಹೊಂದಿರುವ ಈ ಸ್ಮಾರಕದಲ್ಲಿ ಆಯತಾಕಾರದ ಪ್ರಾರ್ಥನಾ ಮಂದಿರವಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Sanyam Bahga

ಬಾರಾಕಮಾನ:

ಬಾರಾಕಮಾನ:

ಇದೊಂದು ಸಂಪೂರ್ಣಗೊಳ್ಳದ ಎರಡನೇಯ ಅಲಿ ಆದಿಲ್ ಶಾಹನ ಭವ್ಯ ಸಮಾಧಿ. ಅಲಿ ಆದಿಲ್ ಶಾಹನು ಹೋಲಿಸಲಸಾಧ್ಯವಾದಂತಹ ಭವ್ಯ ರಚನೆಯನ್ನು ನಿರ್ಮಿಸಲು ಆಶಿಸಿದ್ದನು. ಯೋಜನೆಯ ಪ್ರಕಾರ, 12 (ಹಿಂದಿಯಲ್ಲಿ ಬಾರಾ ಎಂದರೆ 12) ಕಮಾನುಗಳನ್ನು ಉದ್ದವಾಗಿಯೂ ಅಗಲವಾಗಿಯೂ ನಿರ್ಮಿಸಬೇಕಾಗಿತ್ತು. ಆದರೆ ಇದರ ನಿರ್ಮಾಣ ಕಾರ್ಯವು ಏತಕ್ಕೆ ಸಂಪೂರ್ಣಗೊಳ್ಳಲಿಲ್ಲ ಎಂಬುದು ತಿಳಿದು ಬಂದಿಲ್ಲ.

ಚಿತ್ರಕೃಪೆ: fraboof

ಸೋಲಾಪುರ:

ಸೋಲಾಪುರ:

ಈ ರೈಲು ಕರ್ನಾಟಕದ ಬಿಜಾಪುರದಿಂದ ನಿರ್ಗಮಿಸುತ್ತ ಮುಂದೆ ಬಂದು ಸೇರುವ ಸ್ಥಳವೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ. ಕನ್ನಡಿಗರೂ ಸಾಕಷ್ಟು ಸಂಖ್ಯೆಯಲ್ಲಿರುವ ಸೋಲಾಪುರ ಜಿಲ್ಲೆಯಲ್ಲೂ ಸಾಕಷ್ಟು ಪುಣ್ಯ ಕ್ಷೇತ್ರಗಳು ಕಂಡುಬರುತ್ತವೆ.

ಚಿತ್ರಕೃಪೆ: Coolgama

ಸಿದ್ಧೇಶ್ವರ ದೇವಸ್ಥಾನ:

ಸಿದ್ಧೇಶ್ವರ ದೇವಸ್ಥಾನ:

ಸೋಲಾಪುರ ನಗರದಲ್ಲಿರುವ ಅತಿ ಪ್ರಮುಖ ದೇವಾಲಯ ಇದಾಗಿದೆ. ವಾರ್ಷಿಕವಾಗಿ 35 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Uddhavghodake

ಅಕ್ಕಲಕೋಟೆ:

ಅಕ್ಕಲಕೋಟೆ:

19 ನೇಯ ಶತಮಾನದ ಸಂತರಾದ ಶ್ರೀ ಸಮರ್ಥ ಮಹಾರಾಜರು ನೆಲೆಸಿದ್ದ ಈ ತಾಣವು ಇಂದು ಅತಿ ಜನಪ್ರಿಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಸಮರ್ಥ ಮಹಾರಾಜರು ದತ್ತಾತ್ರೇಯ ಸ್ವಾಮಿಗಳ ಮರು ಅವತಾರ ಎಂದು ನಂಬಲಾಗಿದೆ. ಈ ತಾಣವು ಸೋಲಾಪುರ ಪಟ್ಟಣದ ಆಗ್ನೇಯ ದಿಕ್ಕಿಗೆ 40 ಕಿ.ಮೀ ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Vishwasrao

ಪಂಢರಪುರ:

ಪಂಢರಪುರ:

ಕೊನೆಯದಾಗಿ ಈ ರೈಲು ಮುಟ್ಟುವ ಸ್ಥಳ ಸೋಲಾಪುರ ಜಿಲ್ಲೆಯ, ಪ್ರಸಿದ್ಧ ಶ್ರೀಕ್ಷೇತ್ರ ಪಂಢರಪುರ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಉತ್ತರ ಕರ್ನಾಟಕ ಭಾಗ ಹಾಗೂ ಮಹಾರಾಷ್ಟ್ರದ ಎಲ್ಲೆಡೆಯಿಂದ ಈ ಕ್ಷೇತ್ರಕ್ಕೆ ಶ್ರೀ ವಿಠ್ಠಲನ ದರುಶನ ಕೋರಿ ಬರುತ್ತಿರುತ್ತಾರೆ. ಜುಲೈ - ಅಗಸ್ಟ್ (ಆಶಾಡ)ತಿಂಗಳಿನಲ್ಲಿ ಈ ಕ್ಷೇತ್ರವು ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.

ಚಿತ್ರಕೃಪೆ: SuSanA Secretariat

ಪಂಢರಪುರ:

ಪಂಢರಪುರ:

ಭೀಮಾ ನದಿ ತೀರದಲ್ಲಿ ನೆಲೆಸಿರುವ ಈ ಶ್ರೀ ಕ್ಷೇತ್ರವು ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: SuSanA Secretariat

ಪಂಢರಪುರ:

ಪಂಢರಪುರ:

ಆಶಾಡ ಮಾಸ (ಜೂನ್,ಜುಲೈ) ದ ಸಮಯದಲ್ಲಿ ಭಕ್ತ ಜನರ ಮಹಾಪೂರವೆ ಈ ಶ್ರೀ ಕ್ಷೇತ್ರಕ್ಕೆ ವಿಠಲನ ದರುಶನ ಕೋರಿ ಹರಿದು ಬರುತ್ತದೆ. ಸೋಲಾಪುರ ಪಟ್ಟಣದಿಂದ ಈ ಕ್ಷೇತ್ರವು ಕೇವಲ 25 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Shubhi Shrivastava

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X