Search
  • Follow NativePlanet
Share
» »ಆರಣ್ಮೂಲ ಪಾರ್ಥಸಾರಥಿ ದೇವಾಲಯ!

ಆರಣ್ಮೂಲ ಪಾರ್ಥಸಾರಥಿ ದೇವಾಲಯ!

ಕೇರಳದ ಪಥನಾಂತಿಟ್ಟ ಜಿಲ್ಲೆಯಲ್ಲಿರುವ ಆರಣ್ಮೂಲವು ಒಂದು ವಿಶೇಷ ಧಾರ್ಮಿಕ ಕ್ಷೇತ್ರವಾಗಿದ್ದು ಅರ್ಜುನ ನಿರ್ಮಿತ ಪಾರ್ಥಸಾರಥಿ ದೇವಾಲಯಕ್ಕೆ ಬಲು ಹೆಸರುವಾಸಿಯಾಗಿದೆ

By Vijay

ಮೂಲ ಎಂದರೆ ಮಲಯ್ಯಾಳಂನಲ್ಲಿ ಬಿದಿರು ಎಂಬರ್ಥವಿದೆ. ಐತಿಹ್ಯದಂತೆ ಈ ಪಾರ್ಥಸಾರಥಿಯ ದೇವಾಲಯದ ಚಿತ್ರಣವನ್ನು ಬಿದಿರಿನ ಆರು ಭಾಗಗಳಲ್ಲಿ ಪ್ರತ್ಯೇಕವಾಗಿ ತಂದು ತದನಂತರ ನಿರ್ಮಾಣ ಮಾಡಿದರೆಂದು ಹೇಳಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಇದು ಪಂಚ ಪಾಂಡವರ ಪೈಕಿ ಅರ್ಜುನನಿಂದ ನಿರ್ಮಿತವಾದ ಕೃಷ್ಣನ ದೇವಾಲಯ.

ಮಹಾಭಾರತ ಯುದ್ಧದ ನಂತರ ಪಾಂಡವರು ಪರಿಕ್ಷಿತನನ್ನು ಹಸ್ತಿನಾಪುರದ ರಾಜನನ್ನಾಗಿ ಪಟ್ಟಾಭಿಷೇಕ ಮಾಡಿ ತಾವು ತಮ್ಮ ಪಾಪ-ಕರ್ಮಾದಿಗಳನ್ನು ತೊಳೆಯುವುದಕ್ಕೆಂದು ತೀರ್ಥ ಯಾತ್ರೆಗೆ ತೆರಳುತ್ತಾರೆ. ಹೀಗೆ ಪಾಂಡಾರು ತೀರ್ಥ ಯಾತ್ರೆಯ ಸಂದರ್ಭದಲ್ಲಿ ಪಂಬಾ ನದಿಯ ತಟಕ್ಕೆ ಬಂದು ಅಲ್ಲಿ ಕೃಷ್ಣನಿಗೆ ಮುಡಿಪಾದ ದೇವಾಲಯಗಳನ್ನು ನಿರ್ಮಿಸುವ ಆದೇಶ ಪಡೆಯುತ್ತಾರೆ.

ಆರಣ್ಮೂಲ ಪಾರ್ಥಸಾರಥಿ ದೇವಾಲಯ!

ಚಿತ್ರಕೃಪೆ: Akhilan

ಅದರಂತೆ ಐದೂ ಜನ ಪಾಂಡವರು ತಮ್ಮದೆ ಆದ ಕೃಷ್ಣನ ದೇವಾಲಯವನ್ನು ನಿರ್ಮಿಸುತ್ತಾರೆ. ಅವುಗಳಲ್ಲಿ ಅರ್ಜುನ ನಿರ್ಮಿಸಿದ ದೇವಾಲಯವೆ ಆರಣ್ಮೂಲದ ಪಾರ್ಥಸಾರಥಿ ದೇವಾಲಯ. ಆರು ಬಿದಿರು ಭಾಗಗಳಲ್ಲಿ ದೇವಾಲಯ ಚಿತ್ರಣವಿದ್ದು ಅದರಿಂದ ಈ ದೇವಾಲಯದ ನಿರ್ಮಾಣವಾಗಿರುವುದರಿಂದ ಇದಕ್ಕೆ ಆರಣ್ಮೂಲ ದೇವಾಲಯ ಎಂದು ಕರೆಯಲಾಗಿದೆ.

ಕೃಷ್ಣನು ಮಹಾಭಾರತದಲ್ಲಿ ಪಾರ್ಥ ಅಂದರೆ ಅರ್ಜುನನಿಗೆ ಸಾರಥಿಯಾದ ಕಾರಣದಿಂದಾಗಿ ಪಾರ್ಥಸಾರಥಿ ಎಂದೂ ಸಹ ಕರೆಯಲ್ಪಡುತ್ತಾನೆ. ಆ ರೂಪದಲ್ಲಿನ ಕೃಷ್ಣನನ್ನೆ ಇಲ್ಲಿ ಆರಾಧಿಸಲಾಗುವುದರಿಂದ ಇದು ಕೇರಳದ ಪ್ರಖ್ಯಾತ ಐದು ಕೃಷ್ಣನ ದೇವಾಲಯಗಳ ಪೈಕಿ ಒಂದಾಗಿ ಗಮನಸೆಳೆಯುತ್ತದೆ.

ಆರಣ್ಮೂಲ ಪಾರ್ಥಸಾರಥಿ ದೇವಾಲಯ!

ಚಿತ್ರಕೃಪೆ: Pradeep717

ಅಲ್ಲದೆ ಇನ್ನೂ ಹಲವು ವಿಶೇಷತೆಗಳನ್ನು ಈ ದೇವಾಲಯ ಹೊಂದಿದೆ. ತಿರುವಾಂಕೂರಿನ ಮಹಾರಾಜರು ಅಯ್ಯಪ್ಪ ಸ್ವಾಮಿಗೆ ಕಾಣಿಕೆಯಾಗಿ ನೀಡಿರುವ ಥಂಕ ಅಂಕಿ (ಸುವರ್ಣ ವಸ್ತ್ರ)ಯನ್ನು ಇಲ್ಲಿಯೆ ಸಂರಕ್ಷಿಸಿ ಇಡಲಾಗಿರುತ್ತದೆ. ಪ್ರತಿ ವರ್ಷ ಅಯ್ಯಪ್ಪನ ಮಂಡಲ ಪೂಜೆಯ ಸಂದರ್ಭದಲ್ಲಿ ಆ ವಸ್ತ್ರವನ್ನು ಇಲ್ಲಿಂದಲೆ ತೆಗೆದುಕೊಂಡು ಹೋಗಲಾಗುತ್ತದೆ.

ಅಲ್ಲದೆ ಅಯ್ಯಪ್ಪನ ಆಭರಣಗಳನ್ನು ಪಂದಲಂ ಎಂಬ ಸ್ಥಳದಲ್ಲಿ ಸಂರಕ್ಷಿಸಿಟ್ಟಿರಲಾಗುತ್ತದೆ. ಅದನ್ನು ಪ್ರತಿ ವರ್ಷ ಶಬರಿಮಲೆಗೆ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಹೀಗೆ ಆಭರಣಗಳನ್ನು ಅದ್ದೂರಿಯಾಗಿ ತೆಗೆದುಕೊಂಡು ಹೋಗುವ ಮಾರ್ಗದಲ್ಲಿ ಕೆಲವು ವಿಶೇಷ ದೈವಿ ಸನ್ನಿಧಾನಗಳಲ್ಲಿ ನಿಂತು ಗೌರವಾರ್ಪಣೆ ಸಲ್ಲಿಸಲಾಗುತ್ತದೆ. ಅದರಲ್ಲಿ ಆರಣ್ಮೂಲ ಪಾರ್ಥಸಾರಥಿ ದೇವಾಲಯವೂ ಸಹ ಒಂದು.

ಆರಣ್ಮೂಲ ಪಾರ್ಥಸಾರಥಿ ದೇವಾಲಯ!

ಅರಣ್ಮೂಲ ಕನ್ನಡಿಗಳು, ಚಿತ್ರಕೃಪೆ: Binu Mathew

ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ತಮಿಳಿನ ಪ್ರಸಿದ್ಧ ಅಳ್ವಾರ್ ಸಂತರು ಪಟ್ಟಿ ಮಾಡಿರುವ ವಿಷ್ಣುವಿನ 108 ದೇವಾಲಯಗಳ ದಿವ್ಯ ದೇಸಂ ಪಟ್ಟಿಯಲ್ಲಿ ಆರಣ್ಮೂಲ ದೇವಾಲಯವೂ ಸಹ ಒಂದಾಗಿದೆ. ಇನ್ನೂ ಮಿಕ್ಕಂತೆ ಆರಣ್ಮೂಲ ಕ್ಷೇತ್ರವು ವಿಶೇಷವಾದ ಪಾರಂಪರಿಕ ಐತಿಹಾಸಿಕ ಶ್ರೀಮಂತಿಕೆಯನ್ನೂ ಸಹ ಹೊಂದಿದೆ.

ಇಲ್ಲಿಯೆ ವಿಶೇಷವಾಗಿ ತಯಾರಿಸಲಾಗುವ ಆರಣ್ಮೂಲ ಕನ್ನಡಿಗಳು ಬಹಳವೆ ವಿಶೇಷ ಅನ್ನಿಸಿವೆ. ಎಲ್ಲ ಶುಭಕಾರ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮದುವೆಯಾದ ನವ ವಧುವಿಗೆ ಅಷ್ಟ ಮಾಂಗಲ್ಯ ಸಂಕೇತಗಳಲ್ಲಿ ಒಂದಾಗಿ ಈ ಕನ್ನಡಿಯನ್ನು ನೀಡಲಾಗುತ್ತದೆ. ಇದನ್ನು ವಿಶೇಷವಾಗಿ ಲೋಹಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ.

ಆರಣ್ಮೂಲ ಪಾರ್ಥಸಾರಥಿ ದೇವಾಲಯ!

ಚಿತ್ರಕೃಪೆ: Dvellakat

ಕೇವಲ ಒಂದೆ ಕುಟುಂಬದವರಿಂದ ಈ ಪಾರಂಪರಿಕ ವಿದ್ಯೆಯು ಇಂದಿಗೂ ಚಾಲ್ತಿಯಲ್ಲಿದೆ. ಇದು ಯಾವ ಯಾವ ವಸ್ತುಗಳಿಂದ, ಹೇಗೆ ತಯಾರಿಸಲಾಗುತ್ತದೆ ಎಂಬುದರ ಕುರಿತು ಆ ಕುಟುಂಬದವರು ರಹಸ್ಯವನ್ನು ಬಹು ಕಾಲ ಕಾಪಾಡಿದ್ದರಂತೆ! ಸ್ಥಳಪುರಾಣದಂತೆ ಹಿಂದೆ ಈ ವಿಶೇಷ ತಯಾರಿಕೆ ವಿಧಾನದಲ್ಲಿ ಪರಿಣಿತರಾದ ಕಲಾಕಾರರನ್ನು ತಿರುನೆಲ್ವೇಲಿಯಿಂದ ಈ ಪ್ರದೇಶದ ರಾಜಮನೆತನದವರು ದೇವಾಲಯಕ್ಕೆ ಸಂಬಂಧಿಸಿದ ಕಾರ್ಯಗಳಿಗೆಂದು ಕರೆತಂದಿದ್ದರಂತೆ!

ಅರಣ್ಮೂಲ್ ದೋಣಿ ಸ್ಪರ್ಧೆ ಇಲ್ಲಿನ ಉತ್ಸವಗಳ ಪೈಕಿ ಹೆಚ್ಚು ಆರಕರ್ಷಣೀಯವಾಗಿದ್ದು ಅಪಾರ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಇದಕ್ಕೆ ಸಂಬಂಧಿಸಿದ ಕಥೆಯೊಂದರ ಪ್ರಕಾರ, ಒಂದೊಮ್ಮೆ ಅರ್ಜುನನು ಕೃಷ್ಣ ವಿಗ್ರಹದ ಜೊತೆ ಇಲ್ಲಿಂದ ಸಾಗುವಾಗ ಪಂಬಾ ನದಿಯಲ್ಲಿ ಅತಿ ಉಗ್ರ ಪ್ರವಾಹ ಉಂಟಾಗಿ ಅದರ ಮೂಲಕ ಸಾಗುವುದು ಅರ್ಜುನನಿಗೆ ಸಾಧ್ಯವಾಗಲಿಲ್ಲ.

ಆರಣ್ಮೂಲ ಪಾರ್ಥಸಾರಥಿ ದೇವಾಲಯ!

ಚಿತ್ರಕೃಪೆ: Arun Sinha

ಆಗ ಅಲ್ಲಿದ್ದ ಬಡ ಅಂಬಿಗನೊಬ್ಬ ತನ್ನ ಆರು ಬಿದಿರು ಕಂಬಗಳಿಂದ ಮಾಡಿದ ಹರಿಗೋಲನ್ನು ಬಳಸಿ ದೋಣಿಯ ಮೂಲಕ ಅರ್ಜುನನ್ನು ನದಿ ದಾಟಿಸಿದ್ದನಂತೆ. ಆ ಅಂಬಿಗನ ಗೌರವಾರ್ಥವಾಗಿ ಇಂದಿಗೂ ಇಲ್ಲಿ ವರ್ಷಕ್ಕೊಮ್ಮೆ ದೋಣಿ ಸ್ಪರ್ಧೆಯು ನಡೆಯುತ್ತದೆ. ಈ ಸ್ಪರ್ಧೆ ನೋಡಲು ಅಪಾರ ಪ್ರಮಾಣದಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಪ್ರತಿ ವರ್ಷ ಓಣಂ ಹಬ್ಬದ ಕೊನೆಯ ದಿನದಂದು ಈ ಸ್ಪರ್ಧೆ ನಡೆಯುತ್ತದೆ.

ಅಂಬಲಪುಳ ಕೃಷ್ಣನ ಕುತೂಹಲಕಾರಿ ಸತ್ಯಗಳು!

ಪಥನಾಂತಿಟ್ಟ ಜಿಲ್ಲೆಯಲ್ಲಿರುವ ಅರಣ್ಮೂಲವು ಅಲಪುಳ ಜಿಲ್ಲೆಯ ಚೆಂಗಣ್ಣೂರಿಗೆ ಬಲು ಹತ್ತಿರ ಅಂದರೆ ಕೇವಲ ಹತ್ತು ಕಿ.ಮೀ ಗಳಷ್ಟು ದೂರದಲ್ಲಿದೆ. ಚೆಂಗಣ್ಣೂರು ಕೊಟ್ಟಾಯಂ ಹಾಗೂ ತಿರುವನಂತಪುರಂಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಒಮ್ಮೆ ಚೆಂಗಣ್ಣೂರಿಗೆ ತಲುಪಿದರೆ ಅಲ್ಲಿಂದ ದೊರೆಯುವ ಬಾಸು ಅಥವಾ ಬಾಡಿಗೆ ಕಾರುಗಳ ಮೂಲಕ ಅರಣ್ಮೂಲವನ್ನು 30 ನಿಮಿಷಗಳಲ್ಲೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X