Search
  • Follow NativePlanet
Share
» »ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

By Vijay

ದ್ವೈತ ಪಂಥವನ್ನು ಪರಿಪಾಲಿಸಿದ ಶ್ರೀ ಗುರು ರಾಘವೇಂದ್ರರಿಗೆ ಒಂದೊಮ್ಮೆ ತಪಸ್ಸನ್ನಾಚರಿಸುತ್ತಿರುವಾಗ ಹನುಮನು ಐದು ಮುಖಗಳ ಅವತಾರವನ್ನು ತಾಳಿ ದರ್ಶನ ಕೊಟ್ಟ. ತದನಂತರ ಗುರು ರಾಯರು ಆ ಪಂಚಮುಖಿ ಆಂಜನೇಯನ ವಿಗ್ರಹವನ್ನು ಅವರು ಧ್ಯಾನಿಸುತ್ತಿದ್ದ ಬೆಟ್ಟದ ಗುಹೆಯ ಬಂಡೆಯೊಂದರ ಮೇಲೆ ಚಿತ್ರಿಸಿದರು. ಅದೇ ಕ್ಷೇತ್ರ ಇಂದು ಪಂಚಮುಖಿ ಆಂಜನೇಯ ಕ್ಷೇತ್ರವಾಗಿ ಪ್ರಖ್ಯಾತವಾಗಿದೆ. ಈ ಕ್ಷೇತ್ರವಿರುವುದು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ.

ಹನುಮನ ಪಂಚಮುಖದ ಹಿಂದಿರುವ ಸ್ವಾರಸ್ಯಕರ ಕಥೆ:

ಅಸುರ ರಾಕ್ಷಸ ರಾವಣನು, ರಾಮನನ್ನು ಸೋಲಿಸಬೇಕೆಂದು ತನ್ನ ತಮ್ಮ ಹಾಗು ಪಾತಾಳದ ರಾಜನಾಗಿದ್ದ ಅಹಿರಾವಣನ ಸಹಾಯವನ್ನು ಬೇಡುತ್ತಾನೆ. ಅದಕ್ಕೊಪಿದ ಅಹಿರಾವಣನು ರಾವಣನ ಮೊತ್ತೊಬ್ಬ ತಮ್ಮ ಹಾಗು ಸಾತ್ವಿಕ ಸ್ವಭಾವವುಳ್ಳ ವಿಭೀಷಣನ ರೂಪ ತಳೆದು ರಾಮ ಲಕ್ಷ್ಮಣರು ವಿಶ್ರಮಿಸುತ್ತಿದ್ದ ಸ್ಥಳಕ್ಕೆ ಬರುತ್ತಾನೆ. ಆದರೆ ಅಲ್ಲಿ ಆಂಜನೇಯನಿರುವುದನ್ನು ಗಮನಿಸಿದ ಅಹಿರಾವಣನು ಅವನ ಹತ್ತಿರ ಹೋಗಿ ತಾನು ವಿಭೀಷಣನು ಹಾಗು ರಾವಣನಿಂದ ರಾಮ ಲಕ್ಷ್ಮಣರನ್ನು ರಕ್ಷಿಸುವುದಕ್ಕಾಗಿ ಬಂದಿರುವೆನೆಂದು ಒಪ್ಪಿಸುತ್ತಾನೆ.

ಹೀಗೆ ಅಹಿರಾವಣನು ರಾಮಲಕ್ಷ್ಮಣರನ್ನು ಪಾತಾಳಕ್ಕೆ ತಂದು ಬಚ್ಚಿಡುತ್ತಾನೆ. ನಂತರ ನಿಜವಾದ ವಿಭೀಷಣನು ಬಂದಾಗ ವಾಸ್ತವ ಸಂಗತಿಯ ಅರಿವು ಹಣುಮಂತನಿಗಾಗುತ್ತದೆ. ರಾಮಲಕ್ಷ್ಮಣರನ್ನು ಕ್ಷೇಮವಾಗಿ ಕರೆತರುವ ದಾಯತ್ವವನ್ನು ಹೊತ್ತುಕೊಂಡ ಹನುಮನು ಪಾತಾಳಕ್ಕೆ ಹೋಗಿ ಅಹಿರಾವಣನನ್ನು ಸಂಹರಿಸುವುದರ ಕುರಿತು ಎಲ್ಲ ವಿವರಣೆಯನ್ನು ವಿಭೀಷಣನಿಂದ ಪಡೆಯುತ್ತಾನೆ.

ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

ಅಹಿರಾವಣನನ್ನು ಕೊಲ್ಲಲು ಪಾತಾಳದಲ್ಲಿದ್ದ ಐದು ದೀಪಗಳನ್ನು ಏಕಕಾಲದಲ್ಲಿ ನಂದಿಸಬೇಕಾಗಿರುವುದರಿಂದ, ಹಣುಮಂತನು ಶ್ರೀರಾಮನನ್ನು ಮನಸ್ಸಿನಲ್ಲಿ ಭಕ್ತಿಯಿಂದ ನೆನೆದು ಸ್ವತಃ ಹನುಮನು ಪೂರ್ವಕ್ಕೆ ಮುಖ ಮಾಡಿ, ದಕ್ಷಿಣಾಭಿಮುಖವಾಗಿ ನರಸಿಂಹನ ಮುಖವನ್ನು, ಪಶ್ಚಿಮಾಭಿಮುಖವಾಗಿ ಗರುಡನ ಮುಖವನ್ನು, ಉತ್ತರಾಭಿಮುಖವಾಗಿ ವರಾಹದ ಮುಖವನ್ನು, ಮೇಲ್ಮುಖವಾಗಿ ಹಯಗ್ರೀವ ಮುಖವನ್ನು ಪಡೆದು ಏಕಕಾಲಕ್ಕೆ ಜೋರಾಗಿ ಗಾಳಿಯನ್ನು ಊದಿ ಆ ಐದು ದೀಪಗಳನ್ನು ನಂದಿಸಿ ಅಹಿರಾವಣನನ್ನು ಸಂಹರಿಸಿ ರಾಮಲಕ್ಷ್ಮಣರನ್ನು ಕರೆತರುತ್ತಾನೆ. ಅಂದಿನಿಂದ ಹನುಮನು ಪಂಚಮುಖಿ ಆಂಜನೇಯನಾಗಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಿದ್ದಾನೆ.

ನಿಮಗಿಷ್ಟವಾಗಬಹುದಾದ : ಅಂಜನಾಸುತ ಆಂಜನೇಯನ ಕಿಷ್ಕಿಂಧೆ

ಹಿಂದೆ ಗುರು ರಾಯರು ಮಂಚಾಲೆ (ಇಂದಿನ ಮಂತ್ರಾಲಯ) ಯಲ್ಲಿ ನೆಲೆಸಿದ್ದಾಗ ಪ್ರಮುಖವಾಗಿ ಎರಡು ಸ್ಥಳಗಳಿಗೆ ಆವಾಗಾವಾಗ ಭೇಟಿ ನೀಡುತ್ತಿದ್ದರು. ಒಂದು ಬಿಚಾಲೆಯಾದರೆ ಇನ್ನೊಂದು ಈ ಪಂಚಮುಖಿ ಕ್ಷೇತ್ರ.

ಇಲ್ಲಿನ ಬೆಟ್ಟದ ತಪ್ಪಲಿನಲ್ಲಿರುವ ಗುಹೆಯಲ್ಲಿ ಅವರು ರಾಮನನ್ನು ಪೂಜಿಸಿ ನಂತರ ಧ್ಯಾನ ನಿರತರಾಗುತ್ತಿದ್ದರು. ಅಷ್ಟೊಂದು ಹಿತಕರವಾಗಿದೆ ಇಲ್ಲಿನ ಪರಿಸರ. ಇಲ್ಲಿಯೆ ಅವರು ಪಂಚಮುಖಿ ಆಂಜನೇಯನ ದರ್ಶನವನ್ನು ಪಡೆದಿದ್ದರು. ನಂತರ ಇಲ್ಲಿನ ಬಂಡೆಯೊಂದರ ಮೇಲೆ ಅದರ ಚಿತ್ರವನ್ನು ಬಿಡಿಸಿದ್ದರು.

ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

ಪ್ರಸ್ತುತ, ಈ ಕ್ಷೇತ್ರವು ರಾಯಚೂರು ಜಿಲ್ಲೆಯ ಗಂಧಳ ಅಥವಾ ಗಲಂದಳ ಎಂಬ ಹಳ್ಳಿಯಲ್ಲಿದೆ. ಇದು ಗುರು ರಾಯರ ಸನ್ನಿಧಿಯಾದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಮಂತ್ರಾಲಯದಿಂದ ಕೇವಲ 30 ನಿಮಿಷಗಳ ಪ್ರಯಾಣಾವಧಿಯಷ್ಟು ದೂರದಲ್ಲಿದೆ. ಮಂತ್ರಾಲಯದಿಂದ ರಾಯಚೂರಿನೆಡೆ ಚಲಿಸಿ ಕರ್ನಾಟಕ ರಾಜ್ಯ ಪ್ರವೇಶಿಸಿದ ಮೇಲೆ (ತುಂಗಾ ನದಿ ಸೇತುವೆ ದಾಟಿದ ನಂತರ) ಒಂದು ರಸ್ತೆಗಳ ವಿಭಜನಾ (ಇಂಟರ್ ಸೆಕ್ಷನ್ ಪಾಯಿಂಟ್) ಸ್ಥಳವನ್ನು ಕಾಣುತ್ತಿರಿ. ಇಲ್ಲಿಂದ ಬಲಬದಿಗೆ ತಿರುಗಿ ಪಯಣಿಸಿದಾಗ ಗಂಧಳ ಹಳ್ಳಿ ಅಥವಾ ಈ ಪಂಚಮುಖಿ ಕ್ಷೇತ್ರವನ್ನು ತಲುಪಬಹುದು.

ಆದರೆ ಗಮನದಲ್ಲಿಡಬೇಕಾದ ವಿಷಯವೆಂದರೆ ಇಂಟರ್ ಸೆಕ್ಷನ್ ಪಾಯಿಂಟ್ ನಿಂದ ಬಲಬದಿಗೆ ತಿರುಗಿ ಪಯಣಿಸುವಾಗ ದಾರಿಯು ಕಳಪೆ ಗುಣಮಟ್ಟದ್ದಾಗಿದ್ದು ಎಚ್ಚರಿಕೆಯಿಂದ ನಿಧಾನವಾಗಿ ಚಲಿಸುವುದು ಒಳಿತು. ಭಕ್ತರ ಅನುಕೂಲಕ್ಕೆಂದಿರುವ ಕೆಲವು ಅಂಗಡಿ ಮುಗ್ಗಟ್ಟುಗಳ ಹೊರತಾಗಿ ಅಷ್ಟೊಂದು ಲವಲವಿಕೆ ಇಲ್ಲಿ ಕಂಡುಬರುವುದಿಲ್ಲ.

ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

ಈ ಪಂಚಮುಖಿ ಗುಹಾ ದೇವಾಲಯದ ಸುತ್ತಮುತ್ತಲಿನ ಪರಿಸರವು ಮನೋಹರವಾಗಿದ್ದು ಬೆಟ್ಟಗಳ ನೈಸರ್ಗಿಕ ರಚನೆಯು ಆಕರ್ಷಕವಾಗಿ ಗೋಚರಿಸುತ್ತದೆ. ಗಾದೆ ಹಾಗು ತಲೆದಿಂಬನ್ನು ಹೋಲುವ ಕಲ್ಲು ಬಂಡೆಗಳ ಸಹಜ ರಚನೆಯು ಎಂಥವರ ಮನವನ್ನೂ ಸೆಳೆಯುತ್ತದೆ. ದೇವಾಲಯದ ಧ್ವಜ ಸ್ಥಂಭದ ಬಳಿ ಕಲ್ಲಿನ ದಂಡವೊಂದಿದ್ದು ಅದು ಹನುಮಂತನಿಗೆ ಸೇರಿದ್ದೆನ್ನಲಾಗುತ್ತದೆ.

ಈ ಕಲ್ಲಿನ ದಂಡದ ಪಕ್ಕದಲ್ಲೆ ಪುಟ್ಟ ದೇಗುಲವೊಂದಿದ್ದು ಅಲ್ಲಿ ಆಂಜನೇಯನ ಪಾದುಕೆಗಳನ್ನು ಇಡಲಾಗಿದೆ. ಅಲ್ಲದೆ ಮುಖ್ಯ ದೇಗುಲದ ಉತ್ತರ ದಿಕ್ಕಿಗೆ 500 ಮೀ. ಚಲಿಸಿದಾಗ ದೊರುಕುವುದೆ ಗ್ರಾಮ ದೇವತೆಯಾದ ಯರಕಾಳಮ್ಮನ ದೇಗುಲ. ಪಂಚಮುಖಿ ದೇವಾಲಯಕ್ಕೆ ಭೇಟಿ ನೀಡುವವರು ಈ ದೇವಾಲಯಕ್ಕೂ ಕೂಡ ಭೇಟಿ ನೀಡಬೇಕೆಂಬ ಪರಂಪರೆಯಿದ್ದು, ಇಲ್ಲವಾದಲ್ಲಿ ಪಂಚಮುಖಿ ಪ್ರವಾಸ ಸಂಪೂರ್ಣವಾಗುವುದಿಲ್ಲ ಎಂದು ನಂಬಲಾಗುತ್ತದೆ.

Read more about: raichur panchamukhi mantralayam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X