ಡಿಯು - ಡಿಯುನಲ್ಲಿನ ಸೂರ್ಯ, ಮರಳು ಮತ್ತು ಕಡಲು

ಮುಖಪುಟ » ಸ್ಥಳಗಳು » ದೀವ್ » ಮುನ್ನೋಟ

ಡಿಯು ಗುಜರಾತ್‍ನ ಸೌರಾಷ್ಟ್ರ ಪರ್ಯಾಯ ದ್ವೀಪದಲ್ಲಿನ ಒಂದು ಸಣ್ಣ ದ್ವೀಪವಾಗಿದೆ.ಅರಬ್ಬಿ ಸಮುದ್ರ ತೀರದಲ್ಲಿರುವ ಈ ದ್ವೀಪದಲ್ಲಿ ಸೂರ್ಯ,ಮರಳು ಹಾಗು ಕಡಲಿನ ಅದ್ಭುತವಾದ ಸೌಂದರ್ಯವನ್ನು ಕಣ್ಣಾರೆ ಕಂಡು ಅಸ್ವಾಧಿಸಬಹುದು.ಸಮುದ್ರದ ಗಾಳಿಗೆ ಮೆಲ್ಲನೆ ವಾಲಾಡುವ ತಾಳೆ ಮರಗಳು,ತೀರವನ್ನು ಬಡಿದಪ್ಪುವ ಅರಬ್ಬಿ ಸಮುದ್ರದ ಅಲೆಗಳು ಆಹಾ...ಸ್ವರ್ಗಕ್ಕೆ ಸರಿಸಮವಾಗಿಸುತ್ತದೆ.ಹಳೆಯ ಹಾಗೂ ಮಧ್ಯಯುಗದಲ್ಲಿ ಡಿಯು ಹಲವಾರು ರಾಜರ ಆಳ್ವಿಕೆಯನ್ನು ನೋಡಿದೆ.ಅನಂತರ ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಡಿಯು, 1961 ರಲ್ಲಿ ಗೋವಾದ ಜೊತೆ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟಿತು.ತದನಂತರ 1987ರಲ್ಲಿ ಡಿಯು ಗೋವಾದಿಂದ ಬೇರ್ಪಟ್ಟಿತು.

ಡಿಯುನಲ್ಲಿ ಆಕರ್ಷಣೆಗಳು

ಪ್ರಶಾಂತವಾದ ವಾತಾವರಣ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಡಿಯು ಭಾರತ ದೇಶದಲ್ಲಿ ಪ್ರಮುಖವಾದ ಬೀಚ್‍ಗಳಲ್ಲಿ ಒಂದಾಗಿದೆ.ಎಲ್ಲಾ ಜಂಜಾಟಗಳಿಂದ ದೂರದಲ್ಲಿದ್ದು,ಪ್ರಶಾಂತವಾದ ಹಾಗು ಪರಿಶುದ್ಧವಾದ ತನ್ನತನವನ್ನು ಉಳಿಸಿಕೊಂಡಿರುವ ಈ ಸಮುದ್ರ ತೀರವು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.ಡಿಯುನಿಂದ ಕೇವಲ 20 ನಿಮಿಷ ಕ್ರಮಿಸಿದ ನಂತರ ಸಿಗುವ ನಗೊವ ಎಂಬ ಬೀಚ್ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.ಅರ್ಧ ವರ್ತುಲಾಕಾರದಲ್ಲಿರುವ ಈ ಸಮುದ್ರತೀರವು, ಕುದುರೆಯ ಲಾಳವನ್ನು ಹೋಲುತ್ತದೆ.ಈ ಸುಂದರವಾದ ಬೀಚ್‍ನಲ್ಲಿ ಈಜು, ಸೈಲಿಂಗ್, ಬೋಟಿಂಗ್, ವಾಟರ್ ಸ್ಕೀಯಿಂಗ್ ಮುಂತಾದ ಸಾಹಸಕರವಾದ ಚಟುವಟಿಕೆಗಳನ್ನು ಕೂಡ ಮಾಡಬಹುದು.

ಘೋಗ್ಲ ಎಂಬ ಹಳ್ಳಿಯಲ್ಲಿರುವ ಘೋಗ್ಲ ಬೀಚ್,ಡಿಯು ಜಿಲ್ಲೆಯ ದೊಡ್ಡ ಹಾಗು ಪ್ರಶಾಂತವಾದ ಬೀಚ್‍ಗಳಲ್ಲಿ ಒಂದಾಗಿದೆ.ಈ ಬೀಚ್‍ನಲ್ಲಿ ಈಜು, ಪ್ಯಾರಸೈಲಿಂಗ್, ಸರ್ಫಿಂಗ್ ಹಾಗು ಇನ್ನಿತರ ಸಾಹಸಕರವಾದ ಕ್ರೀಡೆಗಳಿಗೆ ಯೋಗ್ಯವಾಗಿದೆ.

ಡಿಯು ನಗರದಿಂದ ಕೇವಲ 1 ಕಿ.ಮೀ ದೂರದಲ್ಲಿರುವ ಜಲ್ಲಂಧರ್ ಬೀಚ್ ಇಲ್ಲಿನ ಸೌಂದರ್ಯ ಹಾಗು ಪ್ರಶಾಂತತೆಯ ಪ್ರತೀಕವಾಗಿದೆ.ಈ ಸ್ಥಳದ ಹೆಸರು ಪುರಾಣದಲ್ಲಿನ ರಾಕ್ಷಸನ ಹೆಸರಿನಿಂದ ಉಗಮವಾಗಿದ್ದು,ಆ ರಾಕ್ಷಸನ ದೇವಾಲಯವೊಂದು ಹತ್ತಿರದಲ್ಲಿಯೇ ಇರುವ ಬೆಟ್ಟದ ತಪ್ಪಲಿನಲ್ಲಿದೆ.

ಡಿಯು ಇಲ್ಲಿನ ದೇವಾಲಯ ಹಾಗು ಚರ್ಚ್‍ಗಳಿಗೂ ಪ್ರಸಿದ್ಧವಾಗಿದೆ.ಡಿಯುನಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಫಾದುಂ ಹಳ್ಳಿಯಲ್ಲಿ ಶಿವನ ಗಂಗೇಶ್ವರ ದೇವಾಲಯ ಕೂಡ ಇದೆ.ಇದಲ್ಲದೆ,ಏಸು ಕ್ರಿಸ್ತನ ಧರ್ಮ ಪ್ರಚಾರಕನಾದ ಸಂತ ಪಾಲ್‍ನ ನಾಮಾಂಕಿತವಾದ ಸಂತ ಪಾಲ್ ಚರ್ಚ್,ಡಿಯುನ ಪುರಾತನವಾದ ಚರ್ಚ್‍ಗಳಲ್ಲಿ ಒಂದಾಗಿದೆ.ಸಂತ ಫಾನ್ಸಿಸ್ ಚರ್ಚ್ ಹಾಗು 1598 ರಲ್ಲಿ ಪೋರ್ಚುಗೀಸರಿಂದ ನಿರ್ಮಾಣ ಮಾಡಲ್ಪಟ್ಟ ಸಂತ ಥಾಮಸ್ ಚರ್ಚ್‍ಗಳಿಗೂ ಭೇಟಿ ನೀಡಬಹುದು.

ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ.ಸೀ ಶೆಲ್ ಮ್ಯೂಸಿಯಂ ನಂತಹ ಹಲವಾರು ವಸ್ತು ಸಂಗ್ರಹಾಲಗಳು ಕೂಡ ಇಲ್ಲಿವೆ.ಇದಲ್ಲದೆ ಡಿಯು ಫೋರ್ಟ್ ಪಾಣಿ ಕೊತ ಎಂಬ ಮುಂತಾದ ಕೋಟೆಗಳನ್ನು ಇಲ್ಲಿ ಕಾಣಬಹುದು.

Please Wait while comments are loading...