Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಹವಾಮಾನ

ಚಿರಾಪುಂಜಿ ಹವಾಮಾನ

ಚಿರಾಪುಂಜಿಗೆ ಹೋಗಿ ಇಲ್ಲಿನ ಮಳೆಯನ್ನು ಆಸ್ವಾದಿಸಲಿಲ್ಲವೆಂದರೆ ನಿಮ್ಮ ಪ್ರವಾಸ ಪರಿಪೂರ್ಣವಾಗಲಾರದು. ಹಾಗಾಗಿ ಚಿರಾಪುಂಜಿಗೆ ಅಕ್ಟೋಬರ್ ನಿಂದ ಮೇ ತಿಂಗಳ ನಡುವೆ ಭೇಟಿ ನೀಡುವುದು ಒಳಿತು. ಈ ಸಮಯದಲ್ಲಿ ಇಲ್ಲಿ ಮಳೆಯು ಜೋರಾಗಿ ಸುರಿಯುವುದಿಲ್ಲ. ಜೊತೆಗೆ ಹವಾಮಾನವು ಆಹ್ಲಾದಕರವು ಮತ್ತು ಆರೋಗ್ಯಕರವು ಆಗಿರುತ್ತದೆ. ಉಷ್ಣಾಂಶವು 10 ಡಿಗ್ರಿಯಿಂದ 30 ಡಿಗ್ರಿ ಸೆಲ್ಶಿಯಸ್‍ವರೆಗೆ ಇರುತ್ತದೆ.

ಬೇಸಿಗೆಗಾಲ

ಚಿರಾಪುಂಜಿಯಲ್ಲಿ ಬೇಸಿಗೆಯು ಮಾರ್ಚ್ ನಲ್ಲಿ ಆರಂಭವಾಗಿ ಮೇ ವರೆಗೆ ಇರುತ್ತದೆ. ಈ ತಿಂಗಳುಗಳಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶವು 25 ಡಿಗ್ರಿ ಸೆಲ್ಶಿಯಸ್‍ನಷ್ಟುಇರುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ಮಳೆ ಬಾರದೆ, ಆಕಾಶ ಶುಭ್ರವಾಗಿದ್ದರೆ, ಅಂದು ವಾತಾವರಣದಲ್ಲಿ ಆರ್ದ್ರತೆಯನ್ನು ಕಾಣಬಹುದು. ಮೇ ತಿಂಗಳು ಇಲ್ಲಿ ಬೇಸಿಗೆಯ ಅತ್ಯಂತ ತೇವಭರಿತ ತಿಂಗಳಾಗಿರುತ್ತದೆ.

ಮಳೆಗಾಲ

ಮಳೆಗಾಲವೆಂದರೆ ಚಿರಾಪುಂಜಿಯಲ್ಲಿ ಬಿಡುವಿಲ್ಲದೆ ಸುರಿಯುವ ಮಳೆಯದೇ ನರ್ತನ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಕುಂಭದ್ರೋಣ ಮಳೆಯಿಂದ ಹಿಡಿದು ನಿರಂತರ ಮುಸಲಧಾರೆಯವರೆಗೆ ಮಳೆ, ಮಳೆ ಮತ್ತು ಮಳೆಯೇ ಸುರಿಯುತ್ತಿರುತ್ತದೆ. ಅದರಲ್ಲಿಯೂ ಮಳೆಗಾಲವು ತನ್ನ ಉತ್ತುಂಗಕ್ಕೆ ಏರಿದ ದಿನಗಳಲ್ಲಿ ಚಿರಾಪುಂಜಿಗೆ ಭೇಟಿ ನೀಡುವುದು ಕಡು ಕಷ್ಟ. ಜೂನ್ ತಿಂಗಳಿನಲ್ಲಿ ಇಲ್ಲಿ ಮಳೆ ಹೆಚ್ಚು, ಹಾಗು ಉಷ್ಣಾಂಶದಲ್ಲಿ ತೀವ್ರ ಪ್ರಮಾಣದ ಕುಸಿತವುಂಟಾಗುತ್ತದೆ.

ಚಳಿಗಾಲ

ಮಳೆಗಾಲದ ಮಳೆಯ ಜೊತೆಗೆ ಚಿರಾಪುಂಜಿಯಲ್ಲಿ ಚಳಿಗಾಲದ ಚಳಿಯು ಸಹ ಕೊರೆಯುತ್ತದೆ. ಈ ಕಾಲವು ನವೆಂಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು 5 ಡಿಗ್ರಿ ಸೆಲ್ಶಿಯಸ್‍ವರೆಗೆ ಕುಸಿಯುತ್ತದೆ. ಇಲ್ಲಿನ ಸರಾಸರಿ ಉಷ್ಣಾಂಶವು ಈ ಕಾಲದಲ್ಲಿ 15 ಡಿಗ್ರಿ ಹಾಸು ಪಾಸಿನಲ್ಲಿರುತ್ತದೆ. ಚಳಿಗಾಲದಲ್ಲಿ ಇಲ್ಲಿ ಕಡಿಮೆ ಮಳೆ ಬೀಳುವುದರಿಂದ ಚಿರಾಪುಂಜಿಗೆ ಭೇಟಿ ನೀಡಲು ಇದು ಪ್ರಶಸ್ತವಾದ ಕಾಲವಾಗಿರುತ್ತದೆ.