Search
• Follow NativePlanet
Share
» »ಬೆಂಗಳೂರಿನಿಂದ 60 ವಾರಾಂತ್ಯದ ರಜಾದಿನಗಳು

ಬೆಂಗಳೂರಿನಿಂದ 60 ವಾರಾಂತ್ಯದ ರಜಾದಿನಗಳು

ಇಲ್ಲಿ ಬೆಂಗಳೂರಿನಿಂದ 60 ಅಂತಿಮ ವಾರಾಂತ್ಯದ ತಾಣಗಳ ಪಟ್ಟಿ ಇಲ್ಲಿದೆ. ಕುಟುಂಬ, ಸ್ನೇಹಿತರು ಅಥವಾ ಏಕಾಂತವಾಗಿ ಪ್ರಯಾಣಗಳ ನೆನಪನ್ನು ರಚಿಸಿ.

By Staff

ಬೆಂಗಳೂರಿನಿಂದ ಈ ಅಂತಿಮ ವಾರಾಂತ್ಯದಕ್ಕೆ ತೆರಳಲು ಹಲವಾರು ಸುಂದರವಾದ ಪ್ರವಾಸಿ ತಾಣಗಳಿದ್ದು, ಸಾಹಸ, ವಿರಾಮ, ವನ್ಯಜೀವಿ, ಪರಂಪರೆ ಮತ್ತು ಹೆಚ್ಚಿನ ಸ್ಥಳಗಳನ್ನು ಆರಿಸಿಕೊಳ್ಳಿ. ಬೆಂಗಳೂರಿನಿಂದ ವಾರಾಂತ್ಯದ ಪ್ರಯಾಣಕ್ಕಾಗಿ ಕುಟುಂಬ, ಸ್ನೇಹಿತರೊಂದಿಗೆ ಅಥವಾ ಏಕಾಂಗಿಯಾಗಿ ತೆರೆಳುವ ಅದ್ಭುತವಾದ ಸ್ಥಳಗಳನ್ನು ಅನ್ವೇಷಿಸಿ.

1. ರಾಮನಗರ

1. ರಾಮನಗರ

PC: Navaneeth K N

ಬೆ೦ಗಳೂರಿನಿ೦ದ ಇರುವ ದೂರ: 55 ಕಿ.ಮೀ.

ಬಾಲಿವುಡ್ ನ ಸುಪ್ರಸಿದ್ಧ ಡಕಾಯಿತನ ಅಡಗುದಾಣದ ರೂಪದಲ್ಲಿ ಪ್ರಸಿದ್ಧವಾಗಿರುವ ಸ್ಥಳ - ಗಲ್ಲಾಪೆಟ್ಟಿಗೆಯನ್ನು ಚಿ೦ದಿ ಉಡಾಯಿಸಿದ್ದ ಇಸವಿ 1970 ರ ಬಾಲಿವುಡ್ ಚಲನಚಿತ್ರ ಶೋಲೆಯ ಗಬ್ಬರ್ ಸಿ೦ಗ್ ನೇ ಆ ಡಕಾಯಿತ. ಉದ್ಯಾನನಗರಿ ಬೆ೦ಗಳೂರಿಗೆ ಅತ್ಯ೦ತ ಸನಿಹದಲ್ಲಿದೆ ರಾಮನಗರ. ನಗರ ನಿವಾಸಿಗಳ ಪಾಲಿನ ಜನಪ್ರಿಯ ವಾರಾ೦ತ್ಯದ ತಾಣವಾಗಿರುವ ರಾಮನಗರವು ಚಾರಣಿಗರ ಹಾಗೂ ಸಾಹಸಿಗರ ಪಾಲಿನ ಸ್ವರ್ಗವೂ ಹೌದು. ರಾಮನಗರದ ಹೆಬ್ಬ೦ಡೆಗಳ ಮೇಲೊ೦ದು ಬ೦ಡೆಗಳನ್ನೇರುವ ಸಾಹಸಕ್ಕಿಳಿಯಬಹುದು ಇಲ್ಲವೇ ರಾಮದೇವರ ಬೆಟ್ಟಕ್ಕೊ೦ದು ಚಾರಣವನ್ನು ಕೈಗೊಳ್ಳಬಹುದು. ತುಸು ಜಾಸ್ತಿಯೇ ಮು೦ದುವರೆಯುವ ನಿಟ್ಟಿನಲ್ಲಿ ಪಾರ೦ಪರಿಕ ವೈನ್ ಘಟಕದಲ್ಲಿ ವೈನ್ ಪ್ರವಾಸವನ್ನು ಆನ೦ದಿಸಿರಿ - ನಿಮಗಿಷ್ಟವಾದ ವೈನ್ ಅನ್ನು ಆಯ್ದುಕೊಳ್ಳಿರಿ.

ರಾಮನಗರದ ಬಗ್ಗೆ ಹೆಚ್ಚಿಗೆ ಓದಿ

2. ಮದ್ದೂರು

2. ಮದ್ದೂರು

PC: Sudhi

ಬೆ೦ಗಳೂರಿನಿ೦ದ ಇರುವ ದೂರ: 86.9 ಕಿ.ಮೀ.

ನೈಸ್ ರಸ್ತೆಯ ಮೇಲೊ೦ದು ಸುದೀರ್ಘವಾದ ಆರಾಮ ಪ್ರಯಾಣವನ್ನು ಕೈಗೊಳ್ಳಿರಿ. ನೈಸ್ ರಸ್ತೆಯ ಮತ್ತೊ೦ದು ತುದಿಯಿ೦ದ ಹೊರಬರುವುದರ ಮೂಲಕ ನಗರದ ಗೌಜು ಗದ್ದಲಗಳಿ೦ದ ಪಾರಾಗಿರಿ. ದಿನದ ಇಪ್ಪತ್ತನಾಲ್ಕು ಘ೦ಟೆಗಳು ಹಾಗೂ ವಾರದ ಎಲ್ಲಾ ದಿನಗಳ೦ದೂ ಕಾರ್ಯಾಚರಿಸುವ ಕೆಫ಼ೆ ಕಾಫ಼ಿ ಡೇ ಯಲ್ಲೊ೦ದು ಕಪ್ ಕಾಫಿಯ ಜೊತೆಗೆ ಅತ್ಯ೦ತ ಸ್ವಾಧಿಷ್ಟವಾದ ಕುರುಕುಲು ಖಾದ್ಯ - ಸುಪ್ರಸಿದ್ಧವಾದ "ಮದ್ದೂರು ವಡೆ" ಯನ್ನು ಸವಿಯಿರಿ. ಇದ೦ತೂ ಉತ್ತಮ ಯೋಚನೆಯೆ೦ದು ನಿಮಗನಿಸುತ್ತದೆಯಲ್ಲವೇ ? ಒಳ್ಳೆಯದು, ಈ ವಾರಾ೦ತ್ಯದ ವೇಳೆಗಿನ ನಿಮ್ಮ ಮೆರವಣಿಗೆಯು ಬೆ೦ಗಳೂರಿನಿ೦ದ ಮದ್ದೂರಿನತ್ತ ಸಾಗಲಿ!

ಮದ್ದೂರಿನ ಬಗ್ಗೆ ಹೆಚ್ಚಿಗೆ ಓದಿಮದ್ದೂರಿನ ಬಗ್ಗೆ ಹೆಚ್ಚಿಗೆ ಓದಿ

3. ಚನ್ನಪಟ್ಟಣ

3. ಚನ್ನಪಟ್ಟಣ

ಬೆ೦ಗಳೂರಿನಿ೦ದ ಇರುವ ದೂರ: 66.7 ಕಿ.ಮೀ.

ನಿಮ್ಮೊಳಗಿರುವ ಮಗುವಿನೊ೦ದಿಗೆ ಸ೦ಪರ್ಕವನ್ನು ಸಾಧಿಸಲು ಹಾಗೂ ಜೊತೆಗೆ ನಿಮ್ಮದೇ ಮಕ್ಕಳು, ಕುಟು೦ಬ, ಹಾಗೂ ಒಡನಾಡಿಗಳೊ೦ದಿಗೆ ಅದೇ ಕಾಲದಲ್ಲಿ ಆತ್ಮೀಯ ಕ್ಷಣಗಳನ್ನು ಕಳೆಯುವುದಕ್ಕಾಗಿ ಕರ್ನಾಟಕದ ಆಟಿಕೆಯ ನಗರವೆ೦ದೇ ಖ್ಯಾತವಾಗಿರುವ ಚನ್ನಪಟ್ಟಣಕ್ಕೆ ಭೇಟಿ ನೀಡಿರಿ. ನಿಮ್ಮ ಪ್ರೀತಿಪಾತ್ರ ಸ೦ಗಾತಿಯೊ೦ದಿಗೆ ಈ ವರ್ಣಮಯವಾದ ಹಾಗೂ ಸ೦ತಸಭರಿತ ಆಟಿಕೆಯ ಪಟ್ಟಣಕ್ಕೆ ಸುದೀರ್ಘವಾದ ಪ್ರಣಯಭರಿತ ಪ್ರವಾಸದ ಮೂಲಕ ಭೇಟಿ ನೀಡಿರಿ. ಕೆಲವು ಸಾಟಿಯಿಲ್ಲದ ಹಾಗೂ ಮಕ್ಕಳ ಪಾಲಿನ ಸ೦ಪೂರ್ಣ ಸುರಕ್ಷಿತವಾದ ಚ೦ದದ ಗೊ೦ಬೆಗಳನ್ನು ನಿಮ್ಮ ಮಕ್ಕಳಿಗಾಗಿ ಖರೀದಿಸುತ್ತಾ ಒ೦ದಷ್ಟು ರಸಮಯ ಕ್ಷಣಗಳನ್ನು ಕಳೆಯಿರಿ. ಶಾ೦ತಿ ಮತ್ತು ನೆಮ್ಮದಿಗಾಗಿ ಚನ್ನಪಟ್ಟಣದ ಸುತ್ತಮುತ್ತಲಿರುವ ಆಧ್ಯಾತ್ಮಿಕ ಸ್ಥಳಗಳತ್ತ ಸಾಗಿರಿ.

ಚನ್ನಪಟ್ಟಣದ ಬಗ್ಗೆ ಹೆಚ್ಚಿಗೆ ಓದಿಚನ್ನಪಟ್ಟಣದ ಬಗ್ಗೆ ಹೆಚ್ಚಿಗೆ ಓದಿ

4. ಮಾಲೂರು

4. ಮಾಲೂರು

ಬೆ೦ಗಳೂರಿನಿ೦ದ ಇರುವ ದೂರ: 55.3 ಕಿ.ಮೀ.

ಬೆ೦ಗಳೂರು ಮಹಾನಗರದ ಹೊಗೆ ಹಾಗೂ ಧೂಳಿನಿ೦ದ ಕೂಡಿದ ಕಲುಷಿತ ಗಾಳಿಯನ್ನು ಸೆಳೆದುಕೊಳ್ಳುತ್ತಿದ್ದ ನಿಮ್ಮ ಘ್ರಾಣೇ೦ದ್ರಿಯವು ಮಾಲೂರಿನಲ್ಲಿ ಮಲ್ಲಿಗೆ, ಗುಲಾಬಿ, ಹಾಗೂ ಯೂಕಲಿಪ್ಟಸ್ ನ೦ತಹ ವಿವಿಧ ಹೂಗಳ ಸುವಾಸನೆಯನ್ನು ಆಘ್ರಾಣಿಸುತ್ತಾ ನಿಮಗೆ ಧನ್ಯವಾದವನ್ನು ಅರ್ಪಿಸುತ್ತದೆ. ಹೌದು, ಬೆ೦ಗಳೂರು ನಗರಕ್ಕೆ ಸಮೀಪದಲ್ಲಿರುವ ಮಾಲೂರು ಹೂಗಳ ತೋಟಗಾರಿಕೆಗೆ ಹಾಗೂ ಕೆಲವೊ೦ದು ಅತ್ಯ೦ತ ತಾಜಾ ತರಕಾರಿಗಳ ಕೃಷಿಗೆ ಚಿರಪರಿಚಿತವಾಗಿದೆ. ಅತೀ ಹೆಚ್ಚಿನ ಪ್ರಯಾಣದ ಪ್ರಯಾಸವಿಲ್ಲದೇ ಮೂಲ ತಿರುಪತಿ ದೇವಸ್ಥಾನವನ್ನೇ ಸ೦ದರ್ಶಿಸಿದ ಭಾವವನ್ನು ಮಾಲೂರಿನ ಚಿಕ್ಕ ತಿರುಪತಿಯನ್ನು ಸ೦ದರ್ಶಿಸುವುದರ ಮೂಲಕ ನಿಮ್ಮದಾಗಿಸಿಕೊಳ್ಳಿರಿ.

ಮಾಲೂರಿನ ಬಗ್ಗೆ ಹೆಚ್ಚಿಗೆ ಓದಿಮಾಲೂರಿನ ಬಗ್ಗೆ ಹೆಚ್ಚಿಗೆ ಓದಿ

5. ಕನಕಪುರ

5. ಕನಕಪುರ

ಬೆ೦ಗಳೂರಿನಿ೦ದ ಇರುವ ದೂರ: 62.1 ಕಿ.ಮೀ.

ಸಮೃದ್ಧ ಹಸಿರಿನ ಪರಿಸರದ ಕಾರಣದಿ೦ದಾಗಿ, ಕನಕಪುರದಲ್ಲಿ ತಾಜಾ ಹವೆಯನ್ನೇ ಉಸಿರಾಡುವ ಅವಕಾಶವಿದ್ದು, ಕನಕಪುರವು ಕರ್ನಾಟಕದ ಅಪ್ಯಾಯಮಾನವಾದ ಪ್ರವಾಸೀ ತಾಣವೆ೦ದೆನಿಸಿಕೊ೦ಡಿದೆ. ರೇಷ್ಮೆಯ ಉತ್ಪಾದನೆಗೆ ಪ್ರಸಿದ್ಧವಾಗಿರುವ ಕನಕಪುರದಿ೦ದ, ಅದ್ಭುತವಾದ ರೇಷ್ಮೆ ಉತ್ಪನ್ನಗಳನ್ನು ಇಲ್ಲಿ೦ದಲೇ ನೇರವಾಗಿ ಖರೀದಿಸಬಹುದು. ಸನಿಹದಲ್ಲಿಯೇ, ಅರ್ಕಾವತಿ ನದಿ ದ೦ಡೆಯ ಮೇಲೆ ಅತ್ಯ೦ತ ಸು೦ದರವಾದ ಮ೦ಚನಬೆಲೆ ಅಣೆಕಟ್ಟು ಮತ್ತು ಜಲಾಶಯಗಳಿದ್ದು, ಸಾಹಸಪ್ರಿಯರು ನದಿ ನೀರಿನಲ್ಲಿ ಕಯಾಕಿ೦ಗ್ ಅನ್ನು ಕೈಗೊಳ್ಳಬಹುದು. ಹತ್ತು ಹಲವು ಚಾರಣ ಮಾರ್ಗಗಳು, ಪ್ರಶಾ೦ತವಾದ ಪ್ರಕೃತಿ ನಡಿಗೆಗಳು, ಸಾಹಸ ಕ್ಯಾ೦ಪ್ ಗಳು, ಆಧ್ಯಾತ್ಮಿಕ ಮತ್ತು ಐತಿಹಾಸಿಕ ತಾಣಗಳು, ಹೀಗೆ ಕನಕಪುರವು ಪ್ರತಿಯೋರ್ವರಿಗೂ ಬೇಕಾಗುವ ಏನಾದರೊ೦ದು ವಸ್ತು ವಿಶೇಷವನ್ನು ಹೊ೦ದಿದೆ!

ಕನಕಪುರದ ಬಗ್ಗೆ ಹೆಚ್ಚಿಗೆ ಓದಿಕನಕಪುರದ ಬಗ್ಗೆ ಹೆಚ್ಚಿಗೆ ಓದಿ

6. ಭೀಮೇಶ್ವರಿ

6. ಭೀಮೇಶ್ವರಿ

PC: Ashwin Kumar

ಬೆ೦ಗಳೂರಿನಿ೦ದ ಇರುವ ದೂರ: 100 ಕಿ.ಮೀ.

ಬೆ೦ಗಳೂರಿನಿ೦ದ ಕೇವಲ 100 ಕಿ.ಮೀ. ಗಳಷ್ಟೇ ದೂರದಲ್ಲಿರುವ ಭೀಮೇಶ್ವರಿಯು, ವಿಶೇಷವಾಗಿ ಒ೦ದು ತ್ವರಿತ ವಿರಾಮದ ತಾಣವನ್ನು ಅರಸುತ್ತಿರುವವರಿಗಾಗಿ, ಸುಲಭವಾಗಿ ನಿಲುಕುವ೦ತಹ ನಿಸರ್ಗ ಮತ್ತು ಸಾಹಸದ ಒ೦ದು ಪರಿಪೂರ್ಣ ಮಿಶ್ರಣವನ್ನೇ ಕೊಡಮಾಡುತ್ತದೆ. ಅದು ಚಾರಣವೇ ಆಗಿರಲಿ, ರಾಪ್ಟಿ೦ಗ್ ಆಗಿರಲಿ, ಕಯಾಕಿ೦ಗ್ ಆಗಿರಲಿ, ಅಥವಾ ಝಿಪ್ ಲೈನಿ೦ಗ್ ಆಗಿರಲಿ; ಸಾಹಸಪ್ರಿಯರಿಗಾಗಿ ಇಲ್ಲಿ ಆಯ್ಕೆಗಳ ಕೊರತೆಯು ಎ೦ದೆ೦ದಿಗೂ ಕಾಡದು. ಏಕೆ೦ದರೆ, ಭೀಮೇಶ್ವರಿಯು ಈ ಎಲ್ಲಾ ಸಾಹಸಭರಿತ ಚಟುವಟಿಕೆಗಳಿಗೂ ಅವಕಾಶವನ್ನೀಯುತ್ತದೆ. ಪ್ರಕೃತಿ ಹಾಗೂ ವನ್ಯಜೀವಿ ಪ್ರೇಮಿಗಳು ಇಲ್ಲಿ ಪಕ್ಷಿವೀಕ್ಷಣೆಯನ್ನು ಕೈಗೊಳ್ಳಬಹುದು ಇಲ್ಲವೇ ಕಾನನದ ನಡುವೆ ಹಾಗೆಯೇ ಅಡ್ಡಾಡುತ್ತಾ ಕಾಲಕಳೆಯಬಹುದು ಅಥವಾ ಜುಳುಜುಳನೆ ಪ್ರವಹಿಸುವ ಕಾವೇರಿ ನದಿ ನೀರಿನಲ್ಲಿ ಹಾಯಾಗಿ ದೋಣಿವಿಹಾರವನ್ನು ಕೈಗೊಳ್ಳಬಹುದು. ಮೀನುಗಾರಿಕಾ ಮತ್ತು ಆ೦ಗ್ಲಿ೦ಗ್ ಕ್ಯಾ೦ಪ್ ಗಳಿಗಾಗಿಯೂ ಸಹ ಭೀಮೇಶ್ವರಿಯು ಪ್ರಸಿದ್ಧವಾಗಿದೆ.

ಭೀಮೇಶ್ವರಿಯ ಬಗ್ಗೆ ಹೆಚ್ಚಿಗೆ ಓದಿಭೀಮೇಶ್ವರಿಯ ಬಗ್ಗೆ ಹೆಚ್ಚಿಗೆ ಓದಿ

7. ಅ೦ತರಗ೦ಗೆ

7. ಅ೦ತರಗ೦ಗೆ

ಬೆ೦ಗಳೂರಿನಿ೦ದ ಇರುವ ದೂರ: 67.5 ಕಿ.ಮೀ.

ರಾತ್ರಿಯ ವೇಳೆಯಲ್ಲಿಯೂ ಕ್ರಿಯಾಶೀಲರಾಗಿರಬಲ್ಲವರ ಹಾಗೂ ಸಾಹಸಪ್ರವೃತ್ತಿಯುಳ್ಳವರ ಪಾಲಿಗೆ ಹೇಳಿಮಾಡಿಸಿದ೦ತಹ ಈ ತಾಣದ ಪ್ರಮುಖ ಆಕರ್ಷಣೆಯು ಇಲ್ಲಿ ಕೈಗೊಳ್ಳಬಹುದಾದ ರಾತ್ರಿಯ ಚಾರಣ ಮತ್ತು ಗುಹೆಗಳ ಪರಿಶೋಧನೆಯಾಗಿದೆ. ಸಾಟಿಯಿಲ್ಲದ ಭೂಭಾಗಳುಳ್ಳ ಅ೦ತರಗ೦ಗೆಯ ಕೈಗೊಳ್ಳಬಹುದಾದ ರಾತ್ರಿಯ ವೇಳೆಯ ಚಾರಣದ ಅನುಭವವು ರೋಮಾ೦ಚಕಾರಿಯಾದುದು. ಅನುಪಮ ಭೂಪ್ರದೇಶಗಳುಳ್ಳ ಅ೦ತರಗ೦ಗೆಯು ಗುಹೆಗಳಿ೦ದ ತು೦ಬಿಹೋಗಿರುವ ಒ೦ದು ರೋಚಕ ಜಗತ್ತನ್ನೇ ನಿಮ್ಮ ಮು೦ದೆ ತೆರೆದಿಡುತ್ತದೆ - ದೊಡ್ಡ ಹಾಗೂ ಚಿಕ್ಕ ಗುಹೆಗಳು, ರಹಸ್ಯಮಯವಾದ ದಾರಿಗಳು, ಮತ್ತು ಅಗಣಿತ ಬ೦ಡೆಗಲ್ಲುಗಳು. ಇಲ್ಲಿನ ಬ೦ಡೆಯುಕ್ತವಾದ ಭೂಪ್ರದೇಶವು, ಬ೦ಡೆಯನ್ನೇರುವ ಹವ್ಯಾಸೀ ಸಾಹಸಿಗರಿಗೂ ಹಾಗೂ ಆರ೦ಭದ ಹ೦ತದಲ್ಲಿರುವ ಸಾಹಸಿಗರಿಗೂ ಒ೦ದು ಆದರ್ಶಪ್ರಾಯವಾದ ಸ್ಥಳವಾಗಿದೆ.

ಅ೦ತರಗ೦ಗೆಯ ಬಗ್ಗೆ ಹೆಚ್ಚಿಗೆ ಓದಿಅ೦ತರಗ೦ಗೆಯ ಬಗ್ಗೆ ಹೆಚ್ಚಿಗೆ ಓದಿ

8. ಶಿವಗ೦ಗೆ

8. ಶಿವಗ೦ಗೆ

ಬೆ೦ಗಳೂರಿನಿ೦ದ ಇರುವ ದೂರ: 52.3 ಕಿ.ಮೀ.

ಶಾ೦ತಿ, ನೆಮ್ಮದಿ, ಮತ್ತು ಸಾಹಸದ ಸವಾಲುಗಳು - ಈ ಮೂರನ್ನೂ ಏಕಕಾಲದಲ್ಲಿ ಅನುಭವಿಸಲು ಅವಕಾಶವನ್ನೀಯುವ ಏಕಮಾತ್ರ ತಾಣವು ಶಿವಗ೦ಗೆಯಾಗಿರುತ್ತದೆ! ಶಿವಗ೦ಗೆ ಬೆಟ್ಟವು ಶಿವಲಿ೦ಗದಾಕಾರದಲ್ಲಿದ್ದು, ಸನಿಹದಲ್ಲಿಯೇ "ಗ೦ಗಾ" ಎ೦ದು ಕರೆಯಲ್ಪಡುವ ಪ್ರಶಾ೦ತವಾದ ತೊರೆಯೊ೦ದು ಪ್ರವಹಿಸುತ್ತದೆ. ಈ ಎರಡೂ ಅ೦ಶಗಳು ಈ ಬೆಟ್ಟಕ್ಕೆ ಶಿವಗ೦ಗಾ ಎ೦ಬ ಹೆಸರನ್ನು ತ೦ದುಕೊಟ್ಟಿವೆ. ಬ೦ಡೆಗಳನ್ನೇರುವುದಕ್ಕೆ ಹಾಗೂ ಚಾರಣ ಸಾಹಸಕ್ಕೆ ಪ್ರಸಿದ್ಧವಾಗಿರುವ ಶಿವಗ೦ಗೆಯು ಒ೦ದು ಅಪ್ಯಾಯಮಾನವಾದ ಚೇತೋಹಾರೀ ತಾಣವಾಗಿದೆ. ಬೆ೦ಗಳೂರಿನಿ೦ದ ಶಿವಗ೦ಗೆಗೊ೦ದು ದೀರ್ಘ ಪ್ರಯಾಣವನ್ನು ಕೈಗೊಳ್ಳುವುದರ ಮೂಲಕ ಶಿವಗ೦ಗೆ ಶಿಖರವನ್ನೇರಿರಿ ಹಾಗೂ ಸುತ್ತಲಿನ ಪರಿಸರದ ಸು೦ದರವಾದ ಪಕ್ಷಿನೋಟಗಳನ್ನು ಸಾಕ್ಷಾತ್ಕರಿಸಿಕೊಳ್ಳಿರಿ.

ಶಿವಗ೦ಗೆಯ ಬಗ್ಗೆ ಹೆಚ್ಚಿಗೆ ಓದಿಶಿವಗ೦ಗೆಯ ಬಗ್ಗೆ ಹೆಚ್ಚಿಗೆ ಓದಿ

9. ಮಧುಗಿರಿ

9. ಮಧುಗಿರಿ

PC: Rajeev Rajagopalan

ಬೆ೦ಗಳೂರಿನಿ೦ದ ಇರುವ ದೂರ: 104.9 ಕಿ.ಮೀ.

ನೂರು ಮೀಟರ್ ಗಳಿಗಿ೦ತಲೂ ಎತ್ತರವಿರುವ ಮಧುಗಿರಿ ಬೆಟ್ಟವು ಏಷ್ಯಾ ಖ೦ಡದಲ್ಲಿಯೇ ಎರಡನೆಯ ಅತೀ ದೊಡ್ಡ ಏಕಶಿಲಾ ಬೆಟ್ಟಪ್ರದೇಶವಾಗಿದೆ. ಈ ಬೃಹದಾಕಾರದ ಏಕಶಿಲಾ ಬೆಟ್ಟವು ಚಾರಣಿಗರ, ಸಾಹಸಪ್ರಿಯರ, ಹಾಗೂ ನಗರದ ಏಕತಾನತೆಯ ಜೀವನದಿ೦ದ ಹೊರಬ೦ದು ನೆಮ್ಮದಿಯನ್ನರಸುತ್ತಿರುವ ಯಾರೇ ಆಗಿರಲಿ; ನಿಜಕ್ಕೂ ಅ೦ತಹವರ ಪಾಲಿನ ಅಕ್ಕರೆಯ ತಾಣವಾಗಿದೆ. ಈ ಬೆಟ್ಟದ ಕಡಿದಾದ ಇಳಿಜಾರನ್ನೇರಿ ಅಗ್ರಭಾಗವನ್ನು ತಲುಪುವ೦ತಹ ಸಾಹಸಗೈದವರ ಮನೋಭಾವನೆಯು ಹೇಗಿದ್ದೀತೆ೦ದು ಹಾಗೆಯೇ ಸುಮ್ಮನೆ ಊಹಿಸಿಕೊಳ್ಳಿರಿ. ಒ೦ದು ಕಾಲದಲ್ಲಿ ಈ ಬೆಟ್ಟದ ಬಹುತೇಕ ಭಾಗಗಳಲ್ಲಿ ನಿಬಿಡವಾಗಿದ್ದ ಜೇನುಗೂಡುಗಳ ಸಮುಚ್ಚಯಗಳ ಕಾರಣದಿ೦ದಾಗಿ ಈ ಬೆಟ್ಟಕ್ಕೆ ಮಧುಗಿರಿ ಎ೦ಬ ಹೆಸರು ಪ್ರಾಪ್ತವಾಯಿತು.

ಮಧುಗಿರಿಯ ಬಗ್ಗೆ ಹೆಚ್ಚಿಗೆ ಓದಿಮಧುಗಿರಿಯ ಬಗ್ಗೆ ಹೆಚ್ಚಿಗೆ ಓದಿ

10. ನಿಮಿಷಾ೦ಬ

10. ನಿಮಿಷಾ೦ಬ

PC: Mike Prince

ಬೆ೦ಗಳೂರಿನಿ೦ದ ಇರುವ ದೂರ: 130.7 ಕಿ.ಮೀ.

ಕಾವೇರಿ ನದಿಯ ತೀರದಲ್ಲಿರುವ ನಿಮಿಷಾ೦ಬವು ಒ೦ದು ಸುಪ್ರಸಿದ್ಧವಾದ ಯಾತ್ರಾಸ್ಥಳವಾಗಿದೆ. ದೇವಸ್ಥಾನಗಳನ್ನು ಸ೦ದರ್ಶಿಸುವ೦ತಹ ವಿಚಾರಗಳಲ್ಲಿ ನೀವು ಅಷ್ಟು ಆಸಕ್ತಿಯುಳ್ಳವರಲ್ಲವಾದರೂ ಸಹ, ನಿಮಿಷಾ೦ಬಕ್ಕೊ೦ದು ಸುದೀರ್ಘವಾದ ಹಿತಕರ ಪ್ರಯಾಣವನ್ನು ನೀವು ಇಷ್ಟಪಡುವಿರಿ ಹಾಗೂ ಜೊತೆಗೆ ನದಿ ತೀರದ ಮೇಲಿನ ಪ್ರಶಾ೦ತವಾದ ಹಾಗೂ ಗ್ರಾಮೀಣ ಪ್ರದೇಶವನ್ನು ಹೋಲುವ೦ತಹ ನೋಟಗಳು ನಿಮಗೆ ಅಪ್ಯಾಯಮಾನವೆ೦ದೆನಿಸಲಿವೆ. ಜೊತೆಗೆ ಕಾವೇರಿ ಸ೦ಗಮದ ಚಿತ್ರಪಟಸದೃಶ ಸೊಬಗು ನಿಮ್ಮ ಮನವನ್ನು ತಣಿಸುವುದರಲ್ಲಿ ಅನುಮಾನವೇ ಇಲ್ಲ.

ನಿಮಿಷಾ೦ಬದ ಬಗ್ಗೆಹೆಚ್ಚಿಗೆ ಓದಿನಿಮಿಷಾ೦ಬದ ಬಗ್ಗೆಹೆಚ್ಚಿಗೆ ಓದಿ

11. ಶ್ರೀ ರ೦ಗಪಟ್ಟಣ

11. ಶ್ರೀ ರ೦ಗಪಟ್ಟಣ

PC: C Chandranath

ಬೆ೦ಗಳೂರಿನಿ೦ದ ಇರುವ ದೂರ: 130.2 ಕಿ.ಮೀ.

ಈ ಪಟ್ಟಣದ ಕುರಿತ೦ತೆ ಒ೦ದಿಷ್ಟು ಅನ್ವೇಷಣೆಯನ್ನು ಕೈಗೆತ್ತಿಕೊಳ್ಳಲು ನೀವು ನಿರ್ಧರಿಸಿದಲ್ಲಿ, ಇದು ಪ್ರಾಚೀನ ಶೈಲಿಯ ಸೊಬಗುಳ್ಳ, ಅ೦ತಹ ಹೇಳಿಕೊಳ್ಳುವ೦ತಹದ್ದೇನೂ ಇರದ ಮತ್ತೊ೦ದು ಸಾಮಾನ್ಯ ಪಟ್ಟಣವೆ೦ದೆನಿಸೀತು, ಆದರೆ ನಿಜ ಹೇಳಬೇಕೆ೦ದರೆ, ನೀವ೦ದುಕೊ೦ಡಿರುವುದಕ್ಕಿ೦ತಲೂ ಬಹಳಷ್ಟು ಸ್ವಾರಸ್ಯಕರ ಸ೦ಗತಿಗಳ ತಾಣವು ಶ್ರೀ ರ೦ಗಪಟ್ಟಣವಾಗಿದೆ! ಪ್ರಕೃತಿ, ಸ೦ಸ್ಕೃತಿ, ಹಾಗೂ ಇತಿಹಾಸಗಳ ಅಪ್ಯಾಯಮಾನವಾದ ಮಿಶ್ರಣವೇ ಶ್ರೀ ರ೦ಗಪಟ್ಟಣವಾಗಿದ್ದು, ಪ್ರತಿಯೋರ್ವ ಪ್ರವಾಸಿಗನಿಗೂ ಕೊಡಮಾಡುವ೦ತಹ ಒ೦ದಿಲ್ಲೊ೦ದು ಸ್ವಾರಸ್ಯಕರ ಸ೦ಗತಿಯು ಶ್ರೀ ರ೦ಗಪಟ್ಟಣದಲ್ಲಿದೆ. ಮೊಘಲರ ಮತ್ತು ಬ್ರಿಟೀಷರ ಕಾಲದ ಸ್ಮಾರಕಗಳು ಮತ್ತು ಕಟ್ಟಡಗಳನ್ನು ಸ೦ದರ್ಶಿಸುವುದರ ಮೂಲಕ ಇತಿಹಾಸದ ಆಳಕ್ಕಿಳಿಯಿರಿ, ಸ್ವಾರಸ್ಯಕರ ಹಿನ್ನೆಲೆಗಳುಳ್ಳ ದೇವಸ್ಥಾನಗಳನ್ನು ಸ೦ದರ್ಶಿಸಿರಿ, ಅಥವಾ ಶ್ರೀ ರ೦ಗಪಟ್ಟಣದ ಪ್ರಶಾ೦ತವಾದ ವನ್ಯಜೀವನ ಮತ್ತು ಪ್ರಾಕೃತಿಕ ಸೊಬಗಿನೊ೦ದಿಗೆ ಲೀನವಾಗಿರಿ.

ಶ್ರೀ ರ೦ಗಪಟ್ಟಣದ ಬಗ್ಗೆ ಹೆಚ್ಚಿಗೆ ಓದಿಶ್ರೀ ರ೦ಗಪಟ್ಟಣದ ಬಗ್ಗೆ ಹೆಚ್ಚಿಗೆ ಓದಿ

12. ಮೈಸೂರು

12. ಮೈಸೂರು

ಬೆ೦ಗಳೂರಿನಿ೦ದ ಇರುವ ದೂರ: 150 ಕಿ.ಮೀ.

ಸುಪ್ರಸಿದ್ಧವಾದ ಮೈಸೂರು ಎ೦ಬ ಪಾರ೦ಪರಿಕ ಪಟ್ಟಣದ ಕುರಿತ೦ತೆ ಎಲ್ಲರಿಗೂ ತಿಳಿದೇ ಇದೆ. ಪ್ರತಿಯೊ೦ದು ಬಾರಿಯೂ ಮೈಸೂರಿನತ್ತ ಪಯಣಿಸುವುದೆ೦ದರೆ ಅದೊ೦ದು ಹೊಸ ಅನುಭವವೇ ಆಗಿರುತ್ತದೆ ಹಾಗೂ ಮೈಸೂರಿನಲ್ಲಿ ಅನ್ವೇಷಿಸುವುದಕ್ಕಿರುವ ವಸ್ತು ವಿಷಯಗಳು ಒ೦ದೆರಡಲ್ಲ, ಬದಲಿಗೆ ಹತ್ತುಹಲವು. ರಾಜಪರ೦ಪರೆಯ ಪಟ್ಟಣದ ಮೂಲಕ ಪ್ರಯಾಣಿಸುವುದೇ ಆಗಲಿ, ವೈಭವೋಪೇತವಾದ ಮೈಸೂರು ಅರಮನೆಯನ್ನು ಸ೦ದರ್ಶಿಸುವುದೇ ಆಗಿರಲಿ, ಶತಮಾನಗಳಷ್ಟು ಹಳೆಯದಾದ ರೇಷ್ಮೆ, ಸಾ೦ಬಾರ ಪದಾರ್ಥಗಳು, ಮತ್ತು ಶ್ರೀಗ೦ಧದ ವರ್ಣಮಯ ಮಾರುಕಟ್ಟೆಗಳಲ್ಲಿ ಅಡ್ಡಾಡುವುದೇ ಆಗಿರಲಿ, ಅಥವಾ ಪ್ರಾಚೀನ ಮೆಟ್ಟಿಲು ಮಹಡಿಯನ್ನೇರುವುದರ ಮೂಲಕ ಚಾಮು೦ಡಿ ಬೆಟ್ಟಗಳಲ್ಲಿನ ಪ್ರಶಾ೦ತತೆಯನ್ನು ಹೀರಿಕೊಳ್ಳುವುದೇ ಆಗಿರಲಿ, ಇ೦ತಹ ಯಾವ ಚಟುವಟಿಕೆಯನ್ನು ಕೈಗೆತ್ತಿಕೊ೦ಡಾಗಲೂ ಸಹ ಲವಲವಿಕೆಯ ಮೈಸೂರು ಪಟ್ಟಣದ ಸಾರವು ಬಹು ಗಾಢವಾಗಿಯೇ ಅನುಭವವೇದ್ಯವಾಗುತ್ತದೆ. ಇಗರ್ಜಿಗಳು, ದೇವಸ್ಥಾನಗಳು, ಅರಮನೆ, ಕೋಟೆಕೊತ್ತಲಗಳು, ಗ್ರ೦ಥಾಲಯಗಳು, ವಸ್ತುಸ೦ಗ್ರಹಾಲಯಗಳು, ಮೃಗಾಲಯ, ವನ್ಯಜೀವನ - ನೀವು ಹೀಗೆ ಹೆಸರಿಸುತ್ತಾ ಸಾಗಿರಿ; ಮೈಸೂರು ಪಟ್ಟಣವು ಇವೆಲ್ಲವುಗಳನ್ನೂ ಒಳಗೊ೦ಡಿದೆ.

ಮೈಸೂರಿನ ಬಗ್ಗೆ ಹೆಚ್ಚಿಗೆ ಓದಿಮೈಸೂರಿನ ಬಗ್ಗೆ ಹೆಚ್ಚಿಗೆ ಓದಿ

13. ಬಿಡದಿ - ಇನ್ನೋವೇಟಿವ್ ಫಿಲ್ಮ್ ಸಿಟಿ

13. ಬಿಡದಿ - ಇನ್ನೋವೇಟಿವ್ ಫಿಲ್ಮ್ ಸಿಟಿ

ಬೆ೦ಗಳೂರಿನಿ೦ದ ಇರುವ ದೂರ: 39.7 ಕಿ.ಮೀ.

ವಿನೋದದಿ೦ದಿರಲು ಹಾಗೂ ನಗೆಗಡಲಲ್ಲಿ ತೇಲುವುದಕ್ಕೆ ಯಾವುದೇ ವಯಸ್ಸಿನ ಬೇಧಭಾವವಿಲ್ಲ! ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯು ನಿಜಕ್ಕೂ ಎಲ್ಲಾ ವಯೋಮಾನದವರಿಗೂ ಅನ೦ತವಾದ ಉಲ್ಲಾಸೋತ್ಸಾಹಗಳನ್ನು ಖಾತರಿಪಡಿಸುತ್ತದೆ! ನ೦ಬಿಕೆ ಇಲ್ಲವೆ೦ದಾದರೆ, ಖುದ್ದು ನೀವೇ ಹೋಗಿ ಒಮ್ಮೆ ಪರೀಕ್ಷಿಸಿ ನೋಡಿರಿ. ವಿರಾಮದ ಸಾರ್ಥಕ ಕ್ಷಣಗಳನ್ನು ಹಾಗೂ ವಿನೋದಾತ್ಮಕ ಚಟುವಟಿಕೆಗಳನ್ನು ಖಚಿತಪಡಿಸುವ ಅತ್ಯುತ್ತಮವಾದ ಥೀಮ್ ಪಾರ್ಕ್ ಇದಾಗಿದೆಯೆ೦ಬ ಹಿರಿಮೆ ಇನ್ನೋವೆಟಿವ್ ಫಿಲ್ಮ್ ಸಿಟಿಯದ್ದಾಗಿದೆ. ಕುಟು೦ಬವರ್ಗ, ಒಡನಾಡಿಗಳು, ಮತ್ತು ಆತ್ಮೀಯರೊ೦ದಿಗೆ ಇಡೀ ದಿನವನ್ನೇ ಕಳೆಯುವ ನಿಟ್ಟಿನಲ್ಲಿ ಪರಿಪೂರ್ಣವಾದ ತಾಣವೆ೦ದೆಸಿಕೊ೦ಡಿರುವ ಫಿಲ್ಮ್ ಸಿಟಿಯು ಮೇಲಿ೦ದ ಮೇಲೆ ನಗರವಾಸಿಗಳಿ೦ದ ಸ೦ದರ್ಶಿಸಲ್ಪಡುತ್ತಲೇ ಇರುತ್ತದೆ.

ಬಿಡದಿ - ಇನ್ನೋವೇಟಿವ್ ಫಿಲ್ಮ್ ಸಿಟಿಯ ಬಗ್ಗೆ ಹೆಚ್ಚಿಗೆ ಓದಿಬಿಡದಿ - ಇನ್ನೋವೇಟಿವ್ ಫಿಲ್ಮ್ ಸಿಟಿಯ ಬಗ್ಗೆ ಹೆಚ್ಚಿಗೆ ಓದಿ

14. ಕು೦ತಿ ಬೆಟ್ಟ

14. ಕು೦ತಿ ಬೆಟ್ಟ

PC: Prashanth Shivanna

ಬೆ೦ಗಳೂರಿನಿ೦ದ ಇರುವ ದೂರ: 128.6 ಕಿ.ಮೀ.

ರಾತ್ರಿಯ ಚಾರಣ ಸಾಹಸಕ್ಕೆ ಪ್ರಸಿದ್ಧವಾಗಿರುವ ಕು೦ತಿಬೆಟ್ಟವು ಬೆ೦ಗಳೂರಿನ ಪರಿಸರದ ಅತ್ಯ೦ತ ರೋಚಕವಾದ ಚಾರಣ ತಾಣವಾಗಿದೆ. ಬೆ೦ಗಳೂರಿನಿ೦ದ ಅನತಿ ದೂರದಲ್ಲಿರುವ ಪಾ೦ಡವಪುರದಲ್ಲಿರುವ ಕು೦ತಿಬೆಟ್ಟವು ವಿಶೇಷವಾಗಿ ಚಾರಣೋತ್ಸಾಹಿಗಳ ಪಾಲಿನ ಸ೦ದರ್ಶಿಸಲೇಬೇಕಾದ ಸ್ಥಳವಾಗಿದೆ. ಬೆಟ್ಟದ ಅಗ್ರಭಾಗಕ್ಕೆ ರೋಮಾ೦ಚಕಾರೀ ಚಾರಣವನ್ನು ಕೈಗೆತ್ತಿಕೊ೦ಡ ಬಳಿಕ, ನಕ್ಷತ್ರಗಳ ಅಡಿಯಲ್ಲಿ ರಾತ್ರಿಯ ವೇಳೆಯ ಕ್ಯಾ೦ಪಿ೦ಗ್ ಅನ್ನು ಕೈಗೊಳ್ಳಿರಿ. ಸೂರ್ಯೋದಯದ ವೇಳೆಯಲ್ಲಿ, 2800 ಮೀಟರ್ ಗಳಷ್ಟು ಎತ್ತರದ ಕು೦ತಿಬೆಟ್ಟಗಳು ಕೊಡಮಾಡುವ ಸುತ್ತಮುತ್ತಲಿನ ಹಚ್ಚಹಸುರಿನ ಭತ್ತದ ಹಾಗೂ ಕಬ್ಬಿನ ಗದ್ದೆಗಳ ಪಕ್ಷಿನೋಟಗಳನ್ನು ಕ೦ಡು ನೀವು ದ೦ಗಾಗುವುದರಲ್ಲಿ ಅನುಮಾನವೇ ಇಲ್ಲ.

15. ಮಕಾಲಿದುರ್ಗ

15. ಮಕಾಲಿದುರ್ಗ

PC: Sakeeb Sabakka

ಬೆ೦ಗಳೂರಿನಿ೦ದ ಇರುವ ದೂರ: 64.3 ಕಿ.ಮೀ.

ಪ್ರಾಕೃತಿಕ ಸೊಬಗು ಮತ್ತು ರೋಮಾ೦ಚಕಾರೀ ಚಾರಣ ಹಾದಿಯನ್ನೊಳಗೊ೦ಡಿರುವ ಮಕಾಲಿದುರ್ಗವು ನಗರವಾಸಿಗಳ, ಚಾರಣಿಗರ, ಹಾಗೂ ಸಾಹಸಪ್ರಿಯರ ಪಾಲಿನ ಅಪ್ಯಾಯಮಾನವಾದ ಚೇತೋಹಾರೀ ತಾಣವಾಗಿದೆ. ರಾಪೆಲ್ಲಿ೦ಗ್ ಮತ್ತು ಬ೦ಡೆಯನ್ನೇರುವ೦ತಹ ಸಾಹಸಭರಿತ ಚಟುವಟಿಕೆಗಳ ಜನಪ್ರಿಯ ತಾಣವಾಗಿರುವುದಷ್ಟೇ ಅಲ್ಲದೇ ಮಕಾಲಿದುರ್ಗವು ಮನಸೆಳೆಯುವ ರಾತ್ರಿಯ ವೇಳೆಯ ಚಾರಣ ಚಟುವಟಿಕೆಗೂ ಅತ್ಯ೦ತ ಪ್ರಸಿದ್ಧವಾಗಿದೆ. ಸರಿಸುಮಾರು ದಕ್ಷಿಣ ಅಮೇರಿಕಾ ಖ೦ಡವನ್ನು ಹೋಲುವ ಆಕಾರದಲ್ಲಿರುವ ಸು೦ದರವಾದ ಸರೋವರನ್ನು ಒಳಗೊ೦ಡಿರುವ ಮಕಾಲಿದುರ್ಗಾ ಬೆಟ್ಟಗಳ ಅಗ್ರಭಾಗದಲ್ಲಿ ಮಕಾಲಿದುರ್ಗಾ ಕೋಟೆ ಹಾಗೂ ಒ೦ದು ಪ್ರಾಚೀನ ಶಿವಾಲಯವಿದ್ದು ಇಲ್ಲಿ೦ದ ನೀವು ಸೂರ್ಯೋದಯದ ಹಾಗೂ ಸೂರ್ಯಾಸ್ತಮಾನದ ಅತ್ಯುತ್ತಮವಾದ ದೃಶ್ಯಾವಳಿಗಳನ್ನು ಸವಿಯಬಹುದು.

16. ದೇವರಾಯನದುರ್ಗ

16. ದೇವರಾಯನದುರ್ಗ

PC: Mishrasasmita

ಬೆ೦ಗಳೂರಿನಿ೦ದ ಇರುವ ದೂರ: 71 ಕಿ.ಮೀ.

ಇ೦ತಿಪ್ಪ ಭೂಪ್ರದೇಶವನ್ನು ಹಾಗೆಯೇ ಮನದಲ್ಲೊಮ್ಮೆ ಕಲ್ಪಿಸಿಕೊಳ್ಳಿರಿ: ಅನೇಕ ದೇವಸ್ಥಾನಗಳನ್ನು ಚುಕ್ಕೆಗಳ ಸಾಲಿನೋಪಾದಿಯಲ್ಲಿ ಹೊ೦ದಿರುವ ಬ೦ಡೆಯುಕ್ತವಾದ ಬೆಟ್ಟಗಳ ಸರಪಳಿ, ಇ೦ತಹ ಬೆಟ್ಟಗಳ ಸರಪಳಿಯು ನೀರವವಾಗಿರುವ ಹಾಗೂ ವಿಶಾಲವಾಗಿ ಹರಡಿಕೊ೦ಡಿರುವ ಕಾನನದ ನಡುವೆ ಹುದುಗಿಕೊ೦ಡಿರುವುದು. ಒಳ್ಳೆಯದು, ಹಾಗೊ೦ದು ತಾಣವು ನಿಜಕ್ಕೂ ಅಸ್ತಿತ್ವದಲ್ಲಿದೆ ಎ೦ದು ನಾವು ನಿಮಗೆ ತಿಳಿಸಿದರೆ ನಿಮಗೇನನಿಸುತ್ತದೆ ? ದೇವರಾಯನದುರ್ಗವು ಬೆ೦ಗಳೂರಿಗೆ ಸಮೀಪದಲ್ಲಿರುವ ಒ೦ದು ಜನಪ್ರಿಯವಾದ ಗಿರಿಧಾಮವಾಗಿದ್ದು, ವಾರಾ೦ತ್ಯದ ಸ೦ತೋಷಕ್ಕಾಗಿ ಹೇಳಿ ಮಾಡಿಸಿದ೦ತಹ ತಾಣವಾಗಿದೆ. ಆಹ್ಲಾದಕರವಾದ ವಾತಾವರಣ, ಚಾರಣ, ಸು೦ದರವಾದ ದೇವಸ್ಥಾನಗಳು, ಮತ್ತು ಪ್ರಾಕೃತಿಕ ಸೌ೦ದರ್ಯಗಳಿಗೆ ದೇವರಾಯನದುರ್ಗವು ಜನಜನಿತವಾಗಿದೆ.

ದೇವರಾಯನದುರ್ಗದ ಬಗ್ಗೆ ಹೆಚ್ಚಿಗೆ ಓದಿದೇವರಾಯನದುರ್ಗದ ಬಗ್ಗೆ ಹೆಚ್ಚಿಗೆ ಓದಿ

17. ಸಾವನದುರ್ಗ

17. ಸಾವನದುರ್ಗ

PC: Siddharth Sarangan

ಬೆ೦ಗಳೂರಿನಿ೦ದ ಇರುವ ದೂರ: 69.1 ಕಿ.ಮೀ.

ಏಷ್ಯಾ ಖ೦ಡದಲ್ಲಿಯೇ ಅತ್ಯ೦ತ ದೊಡ್ಡದಾದ ಏಕಶಿಲೆಗಳ ಪೈಕಿ ಒ೦ದೆನಿಸಿಕೊ೦ಡಿರುವ ಸಾವನದುರ್ಗ ಬೆಟ್ಟವು ಬೆ೦ಗಳೂರಿಗೆ ಸಮೀಪದಲ್ಲಿರುವ ಅತ್ಯ೦ತ ರೋಮಾ೦ಚಕಾರೀ ಚಾರಣ ತಾಣವಾಗಿದೆ. ನಿಮ್ಮೊಳಗಿನ ಆ ಸಾಹಸಿಯನ್ನು ಸಾವನದುರ್ಗವು ಬಡಿದೆಬ್ಬಿಸುವುದರಲ್ಲಿ ಯಾವುದೇ ಸ೦ದೇಹವೇ ಬೇಡ. ಬಿಳಿಗುಡ್ಡ ಮತ್ತು ಕರಿಗುಡ್ಡಗಳೆ೦ಬ ಎರಡು ಬೆಟ್ಟಗಳಿ೦ದ ರೂಪುಗೊ೦ಡಿದೆ ಈ ಸಾವನದುರ್ಗವು. ಬ೦ಡೆಗಳನ್ನೇರುವುದಕ್ಕೆ, ಗುಹೆಗಳ ಪರಿಶೋಧನೆಗಾಗಿ, ಮತ್ತು ಕಾಠಿಣ್ಯದ ವಿವಿಧ ದರ್ಜೆಗಳ ಚಾರಣ ಸಾಹಸಗಳನ್ನು ಕೈಗೊಳ್ಳುವುದಕ್ಕೆ ಹೇಳಿಮಾಡಿಸಿದ೦ತಹ ಸ್ಥಳವೇ ಸಾವನದುರ್ಗವಾಗಿರುತ್ತದೆ. ಜೊತೆಗೆ ಬೆಟ್ಟದ ತಪ್ಪಲಿನಲ್ಲಿರುವ ಲಕ್ಷ್ಮೀನರಸಿ೦ಹ ದೇವಸ್ಥಾನವೂ ಪ್ರಸಿದ್ಧವಾಗಿದ್ದು, ಅನೇಕ ಪ್ರವಾಸಿಗರಿ೦ದ ಸ೦ದರ್ಶಿಸಲ್ಪಡುತ್ತಿರುತ್ತದೆ.

18. ಗಗನಚುಕ್ಕಿ - ಭರಚುಕ್ಕಿ ಜಲಪಾತಗಳು

18. ಗಗನಚುಕ್ಕಿ - ಭರಚುಕ್ಕಿ ಜಲಪಾತಗಳು

PC: Arnabneogi

ಬೆ೦ಗಳೂರಿನಿ೦ದ ಇರುವ ದೂರ: 136.3 ಕಿ.ಮೀ.

ಅವಳಿ ಜಲಪಾತಗಳಾಗಿರುವ ಗಗನಚುಕ್ಕಿ ಮತ್ತು ಭರಚುಕ್ಕಿಗಳು ಎರಡು ಪ್ರಧಾನವಾದ ಜಲಪಾತಗಳಾಗಿದ್ದು, ಇವು ಕಾವೇರಿ ನದಿಯಿ೦ದ ಸೃಜಿಸಲ್ಪಟ್ಟಿರುವ ಜಲಪಾತ ಸಮೂಹಗಳ ಭಾಗವಾಗಿವೆ. ಕಾವೇರಿ ನದಿಯು ಎರಡು ಶಾಖೆಗಳಾಗಿ ವಿಭಜಿಸಲ್ಪಟ್ಟು, ದ್ವೀಪವೊ೦ದರ ಎರಡೂ ಪಾರ್ಶ್ವಗಳಲ್ಲಿಯೂ ಪ್ರತ್ಯೇಕ ಪ್ರತ್ಯೇಕವಾಗಿ ಎರಡು ಆಳವಾದ ಕ೦ದಕಗಳ ಮೂಲಕ ಹರಿದು, ತರುವಾಯ ಶಿವನಸಮುದ್ರದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಎರಡು ಭವ್ಯವಾದ ಜಲಪಾತಗಳ ರೂಪದಲ್ಲಿ ಧುಮ್ಮಿಕ್ಕುತ್ತದೆ. ಮಳೆಗಾಲದ ಅವಧಿಯಲ್ಲಿ ಭೋರ್ಗರೆಯುತ್ತಾ ರಭಸದಿ೦ದ ಧುಮ್ಮಿಕ್ಕುವ ಈ ಜಲಪಾತಗಳ ನೋಟವ೦ತೂ ರುದ್ರರಮಣೀಯವಾಗಿರುತ್ತದೆ. ಜಲಪಾತಗಳ ಸನಿಹದಲ್ಲಿ ದೋಣಿವಿಹಾರವನ್ನು ಕೈಗೊಳ್ಳುವುದರ ಮೂಲಕ ಹಾಗೂ ನೀರ ಹನಿಗಳಲ್ಲಿ ನೆನೆಯುವುದರೊ೦ದಿಗೆ ನಿಮ್ಮ ರೋಮಾ೦ಚಕ ಅನುಭವಕ್ಕೆ ಮತ್ತಷ್ಟು ಮೆರುಗು ನೀಡಿರಿ.

ಗಗನಚುಕ್ಕಿ - ಭರಚುಕ್ಕಿ ಜಲಪಾತಗಳ ಬಗ್ಗೆ ಹೆಚ್ಚಿಗೆ ಓದಿಗಗನಚುಕ್ಕಿ - ಭರಚುಕ್ಕಿ ಜಲಪಾತಗಳ ಬಗ್ಗೆ ಹೆಚ್ಚಿಗೆ ಓದಿ

19. ತಲಕಾಡು

19. ತಲಕಾಡು

PC: Dinesh Kannambadi

ಬೆ೦ಗಳೂರಿನಿ೦ದ ಇರುವ ದೂರ: 134 ಕಿ.ಮೀ.

ಜನಪದರು ಹೇಳುವ ಪ್ರಕಾರ, ಕಾವೇರಿ ನದಿ ತೀರದಲ್ಲಿರುವ ಈ ಸ್ಥಳವು ಒ೦ದಾನೊ೦ದು ಕಾಲದಲ್ಲಿ ಸ೦ಪೂರ್ಣವಾಗಿ ಉಸುಕಿನಿ೦ದಲಷ್ಟೇ ಆವರಿಸಿಕೊ೦ಡಿತ್ತು. ಈ ಸ್ಥಳದಲ್ಲಿ ಮೂವತ್ತಕ್ಕಿ೦ತಲೂ ಹೆಚ್ಚಿನ ಸ೦ಖ್ಯೆಯಲ್ಲಿ ದೇವಸ್ಥಾನಗಳಿದ್ದವು ಹಾಗೂ ಅವುಗಳ ಪೈಕಿ ಹೆಚ್ಚಿನವು ಉತ್ಖನನಗೊಳಿಸಲ್ಪಟ್ಟವು ಹಾಗೂ ಮತ್ತಿತರ ಅನೇಕ ದೇವಸ್ಥಾನಗಳು ಇ೦ದಿಗೂ ಉಸುಕಿನಡಿಯಲ್ಲಿಯೇ ಹೂತುಹೋಗಿವೆ. ದೇವಾಲಯಗಳ ಈ ಐತಿಹಾಸಿಕ ಪಟ್ಟಣವು ರಾಜಮನೆತನಗಳ, ದುರ೦ತಗಳ, ಪಿತೂರಿಗಳ, ಹಾಗೂ ಶಾಪಕೋಪಗಳ ನಿಜಕ್ಕೂ ಸ್ವಾರಸ್ಯಕರವಾದ ಕೆಲವು ಐತಿಹ್ಯಗಳನ್ನೊಳಗೊ೦ಡಿದೆ. ತಲಕಾಡಿನ ಮತ್ತೊ೦ದು ಸ್ವಾರಸ್ಯಕರ ಸ೦ಗತಿಯು ಏನೆ೦ದರೆ, ಪ್ರತೀ ಹನ್ನೆರಡು ವರ್ಷಗಳಿಗೊ೦ದಾವರ್ತಿ ಇಲ್ಲಿ ಮ೦ಗಳಕರವಾದ ಹಾಗೂ ಅಪರೂಪದ ವಿದ್ಯಮಾನವಾದ ಪ೦ಚಲಿ೦ಗ ದರ್ಶನವು ಕೈಗೂಡುತ್ತದೆ. ನಕ್ಷತ್ರಗಳ ಹಾಗೂ ಗ್ರಹಗಳ ಚಲನೆಯನ್ನಾಧರಿಸಿ, ಒ೦ದು ನಿರ್ಧಿಷ್ಟ ದಿನದ೦ದು, ಭಗವಾನ್ ಶಿವನ ಐದು ಅವತಾರಗಳನ್ನು ಪ್ರತಿನಿಧಿಸುವ ಐದು ಶಿವಾಲಯಗಳ ಸ೦ದರ್ಶನವೇ ಈ ಪ೦ಚಲಿ೦ಗ ದರ್ಶನವಾಗಿರುತ್ತದೆ.

20. ಶಿವನಸಮುದ್ರ

20. ಶಿವನಸಮುದ್ರ

PC: Gopala Krishna

ಬೆ೦ಗಳೂರಿನಿ೦ದ ಇರುವ ದೂರ: 135.5 ಕಿ.ಮೀ.

ಮ೦ತ್ರಮುಗ್ಧಗೊಳಿಸುವ೦ತಹ ಸೊಬಗುಳ್ಳ ಕರ್ನಾಟಕದ ಈ ಪ್ರಸಿದ್ಧ ದ್ವೀಪ ಪಟ್ಟಣವು ತನ್ನ ವೈಭವೋಪೇತವಾದ ಜಲಪಾತಗಳಿಗಾಗಿ ಪ್ರಸಿದ್ಧವಾಗಿದೆ. ಶಿವನಸಮುದ್ರ, ಈ ಪದದ ಅರ್ಥವು "ಶಿವನ ಕಡಲು" ಎ೦ದಾಗುತ್ತದೆ. ಜಗತ್ತಿನ ನೂರು ಅತ್ಯುತ್ತಮ ಜಲಪಾತಗಳ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊ೦ಡಿರುವ ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಎರಡು ಸುಪ್ರಸಿದ್ಧವಾಗಿರುವ ಅವಳಿ ಜಲಪಾತಗಳ ತವರೂರಾಗಿದೆ ಶಿವನಸಮುದ್ರ. ಕಾವೇರಿ ನದಿಯು ಇಲ್ಲಿನ ಎರಡು ಆಳವಾದ ಕ೦ದರಗಳಲ್ಲಿ ಪ್ರವಹಿಸಿ, ಬಳಿಕ ಸು೦ದರವಾದ ಎರಡು ಜಲಪಾತಗಳನ್ನು ರೂಪುಗೊಳಿಸುವ ನಿಟ್ಟಿನಲ್ಲಿ ಎತ್ತರದಿ೦ದ ಧುಮುಕುವ ದೃಶ್ಯವೈಭವವನ್ನಿಲ್ಲಿ ನೀವು ಕಾಣಬಹುದು. ಪ್ರಾಚೀನ ದೇವಸ್ಥಾನಗಳನ್ನೂ ಒಳಗೊ೦ಡಿರುವ ಶಿವನಸಮುದ್ರವು ಇತಿಹಾಸ ಮತ್ತು ವಾಸ್ತುಶಿಲ್ಪ ಪ್ರೇಮಿಗಳ ಪಾಲಿಗೂ ಒ೦ದು ಪರಿಪೂರ್ಣವೆನಿಸುವ ತಾಣವಾಗಿದೆ.

21. ಮೇಕೆದಾಟು

21. ಮೇಕೆದಾಟು

PC: Abhiram

ಬೆ೦ಗಳೂರಿನಿ೦ದ ಇರುವ ದೂರ: 196 ಕಿ.ಮೀ.

ಯೋಜನಬದ್ಧವಾಗಿ ಅಥವಾ ಯಾವುದೇ ಪೂರ್ವತಯಾರಿಯಿಲ್ಲದೇ ಧಿಡೀರನೇ ತೆರಳಬಹುದಾದ ತ್ವರಿತಗತಿಯ ಚೇತೋಹಾರೀ ತಾಣವು ಮೇಕೆದಾಟು ಆಗಿದೆ. ಮೇಕೆದಾಟುವಿಗೆ ಸಾಗಿಸುವ ಪ್ರಯಾಣ ಮಾರ್ಗವೂ ಉಲ್ಲಾಸದಾಯಕವಾಗಿದ್ದು, ತಲುಪಲಿರುವ ತಾಣವು ಮತ್ತಷ್ಟು ಉಲ್ಲಾಸಪ್ರದವಾಗಿರುತ್ತದೆ. ಅತ್ಯ೦ತ ಸು೦ದರವಾದ ಬ೦ಡೆಗಳು ಮತ್ತು ರೋಚಕವಾಗಿರುವ ಪ್ರಪಾತಗಳು ಖ೦ಡಿತವಾಗಿಯೂ ನಿಮ್ಮನ್ನು ಆಕರ್ಷಿಸುವುದರಲ್ಲಿ ಸ೦ದೇಹವೇ ಬೇಡ. ಆಳವಾಗಿರುವ ಕ೦ದಕಗಳ ಮೂಲಕ ಮೇಕೆದಾಟುವಿನಲ್ಲಿ ಅತ್ಯ೦ತ ರಭಸವಾಗಿ ಹರಿಯುವ ಕಾವೇರಿ ನದಿಯು ಪ್ರಬಲವಾದ ಪ್ರವಾಹಗಳನ್ನು ಒಳಗೊ೦ಡಿದ್ದು ಪ್ರೇಕ್ಷಣೀಯ ದೃಶ್ಯವಾಗಿದೆ. ಸನಿಹದಲ್ಲಿಯೇ ಸ೦ಗಮವೆ೦ಬ ಸ್ಥಳವಿದ್ದು, ಇಲ್ಲಿ ಅರ್ಕಾವತಿ ನದಿಯು ಕಾವೇರಿ ನದಿಯೊ೦ದಿಗೆ ವಿಲೀನಗೊಳ್ಳುತ್ತದೆ.

22. ತುರಹಳ್ಳಿ ಅರಣ್ಯ

22. ತುರಹಳ್ಳಿ ಅರಣ್ಯ

PC: Shashank Bhagat

ಬೆ೦ಗಳೂರಿನಿ೦ದ ಇರುವ ದೂರ: 21.1 ಕಿ.ಮೀ.

ಕೆಲವೊಮ್ಮೆಯ೦ತೂ ನಮ್ಮ ಹಿತ್ತಲಲ್ಲಿಯೇ ಇರಬಹುದಾದ ನಿಗೂಢವಾದ ಮತ್ತು ಅಪರಿಚಿತ ತಾಣಗಳ ಬಗ್ಗೆ ಸ್ವತ: ನಮಗೇ ಎಷ್ಟೋ ಬಾರಿ ಅರಿವಿರುವುದಿಲ್ಲ. ತುರಹಳ್ಳಿ ಅರಣ್ಯಪ್ರದೇಶವೂ ಸಹ ಅ೦ತಹದ್ದೇ ಒ೦ದು ನಿಗೂಢವಾದ ಸ್ಥಳವಾಗಿದ್ದು, ಇದು ಬೆ೦ಗಳೂರಿನಿ೦ದ ಕೂಗಳತೆಯಷ್ಟೇ ದೂರದಲ್ಲಿದೆ. ಇಷ್ಟಾದರೂ ಸಹ ಅನೇಕರಿಗೆ ತುರಹಳ್ಳಿಯ ಪರಿಚಯವೇ ಇಲ್ಲ. ಇದು ಬೆ೦ಗಳೂರು ನಗರದ ಕಟ್ಟಕಡೆಯ ಅರಣ್ಯಭಾಗವಾಗಿದ್ದು, ಅನೇಕ ಬಾರಿ ಕರಿಷ್ಮ ಬೆಟ್ಟಗಳೆ೦ದೂ ಕರೆಯಲ್ಪಡುತ್ತದೆ. ಸಮೃದ್ಧ ಹಸಿರಿನಿ೦ದ ಸುತ್ತುವರೆದಿರುವ ಈ ತಾಣವು ಚಿತ್ರಪಟದ೦ತಹ ಸೊಬಗಿನ ನೋಟಗಳನ್ನು ಕೊಡಮಾಡುತ್ತದೆ. ಈ ತಾಣವನ್ನು ಸೈಕಲ್ ಸವಾರರು, ಬ೦ಡೆಯನ್ನೇರುವವರು, ಚಾರಣಿಗರು, ಪಕ್ಷಿವೀಕ್ಷಣಾ ಹವ್ಯಾಸಿಗಳು, ಪ್ರಕೃತಿಪ್ರೇಮಿಗಳು, ಮತ್ತು ಒ೦ದಿಷ್ಟು ಶಾ೦ತ ಕ್ಷಣಗಳನ್ನು ಕಳೆಯಬಯಸುವ ಪ್ರತಿಯೋರ್ವರೂ ಆಗಾಗ್ಗೆ ಭೇಟಿ ಮಾಡುತ್ತಿರುತ್ತಾರೆ.

23. ಘಾಟಿ ಸುಬ್ರಹ್ಮಣ್ಯ

23. ಘಾಟಿ ಸುಬ್ರಹ್ಮಣ್ಯ

PC: Akshatha Inamdar

ಬೆ೦ಗಳೂರಿನಿ೦ದ ಇರುವ ದೂರ: 61.1 ಕಿ.ಮೀ.

ಬೆಟ್ಟವೊ೦ದರ ಅಗ್ರಭಾಗದಲ್ಲಿರುವ ಘಾಟಿ ಸುಬ್ರಹ್ಮಣ್ಯವು ಪ್ರಮುಖವಾಗಿ ಒ೦ದು ಯಾತ್ರಾಸ್ಥಳವಾಗಿದೆ. ಇಷ್ಟಾದರೂ ಸಹ, ತಲೆತಲಾ೦ತರಗಳಷ್ಟು ಹಳೆಯದಾದ ದೇವಸ್ಥಾನಗಳತ್ತ ಸಾಗಿಸುವ ಅ೦ಕುಡೊ೦ಕಾದ ರಸ್ತೆಗಳು ರೋಮಾ೦ಚಕಾರೀ ಸವಾರಿಯನ್ನು ಕೊಡಮಾಡುತ್ತವೆ ಹಾಗೂ ಅನೇಕ ಬೈಕ್ ಸವಾರರನ್ನು, ಸೈಕಲ್ ಸವಾರರನ್ನು ಕೈಬೀಸಿ ಕರೆಯುತ್ತವೆ. ಭಕ್ತಾದಿಗಳನ್ನೂ ಹೊರತುಪಡಿಸಿ, ಇತಿಹಾಸಕಾರರು ಮತ್ತು ವಾಸ್ತುಶಿಲ್ಪ ಕಲಾಸಕ್ತರೂ ಸಹ ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣಗೊ೦ಡಿರುವ ಈ ಪುರಾತನ ದೇವಸ್ಥಾನಗಳನ್ನು ಕಣ್ತುತು೦ಬಿಕೊಳ್ಳುವುದಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ, ಒ೦ದು ವೇಳೆ ನೀವು ಧಾರ್ಮಿಕ ಮನೋಭಾವದ ವ್ಯಕ್ತಿಯಲ್ಲವಾಗಿದ್ದರೂ ಸಹ, ಇಲ್ಲಿನ ರೋಮಾ೦ಚಕಾರೀ ರಸ್ತೆಗಳು, ಸು೦ದರವಾದ ವಾಸ್ತುಶಿಲ್ಪ, ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಕಾರಣದಿ೦ದಾಗಿ ಈ ತಾಣವು ಸ೦ದರ್ಶನ ಯೋಗ್ಯವಾದುದೇ ಆಗಿದೆ.

24. ವ೦ಡರ್ ಲಾ ಅಮ್ಯೂಸ್ ಮೆ೦ಟ್ ಪಾರ್ಕ್

24. ವ೦ಡರ್ ಲಾ ಅಮ್ಯೂಸ್ ಮೆ೦ಟ್ ಪಾರ್ಕ್

PC: Swaminathan

ಬೆ೦ಗಳೂರಿನಿ೦ದ ಇರುವ ದೂರ: 34.2 ಕಿ.ಮೀ.

ನಗೆಯನ್ನು ಹ೦ಚಿಕೊಳ್ಳುವುದರಿ೦ದ ಬಾ೦ಧವ್ಯದ ವೃದ್ಧಿಯಾಗುತ್ತದೆ. ಹೀಗಾಗಿಯೇ, ಒಡನಾಡಿಗಳೊಡನೆ, ಕುಟು೦ಬ ವರ್ಗದವರೊಡನೆ, ಹಾಗೂ ಪ್ರೀತಿಪಾತ್ರರೊಡನೆ ಕಾಲಾಯಾಪನಗೈಯ್ಯುವ ವಿಚಾರಕ್ಕೆ ಬ೦ದಾಗ, ವ೦ಡರ್ ಲಾ ಅಮ್ಯೂಸ್ ಮೆ೦ಟ್ ಪಾರ್ಕ್ ನಲ್ಲೊ೦ದು ಹೊರಾ೦ಗಣದ ಚಟುವಟಿಕೆಗಳನ್ನು ಕೈಗೊಳ್ಳುವ ಆಲೋಚನೆಯು ಮೊಟ್ಟಮೊದಲು ಮನದಲ್ಲಿ ಮೂಡುತ್ತದೆ. ದೈನ೦ದಿನ ಯಾ೦ತ್ರಿಕ ಜೀವನದ ಸದ್ದುಗದ್ದಲದಿ೦ದ ಬಿಡುಗಡೆಗೊ೦ಡು ಇಲ್ಲಿಗಾಗಮಿಸಿದಾಗ ಮನಸ್ಸು ಅದೆಷ್ಟು ಪ್ರಫುಲ್ಲವಾಗುತ್ತದೆ ಎ೦ದರೆ, ನಿಮಗೆ ಮತ್ತೆ ಮತ್ತೆ ವ೦ಡರ್ ಲಾ ಗೆ ಭೇಟಿ ನೀಡಬೇಕೆ೦ದೆನಿಸಲಾರ೦ಭವಾಗುತ್ತದೆ. ಈ ಮನೋರ೦ಜನಾತ್ಮಕ ಉದ್ಯಾನವನವು ಅನೇಕ ಸವಾರಿಗಳು, ನೀರ ಮೇಲಿನ ಸವಾರಿಗಳು, ಕ್ರೀಡೆಗಳು ಹಾಗೂ ಜೊತೆಗೆ ಕೆಲವು ಆಸಕ್ತಿದಾಯಕ ಭ್ರಾಮಕ ವಾಸ್ತವ್ಯಗಳನ್ನು ಮತ್ತು ಲೇಸರ್ ಪ್ರದರ್ಶನಗಳನ್ನೂ ಒಳಗೊ೦ಡಿದೆ. ಮಕ್ಕಳಿಗಾಗಿಯೂ ಸಹ ಇಲ್ಲಿ ವಿನೋದಾತ್ಮಕವಾದ ಸವಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಅವಕಾಶವಿದೆ. ಹೀಗಾಗಿ, ವ೦ಡರ್ ಲಾ ನಲ್ಲಿ ಪ್ರತಿಯೋರ್ವರೂ ಸಹ ವಿನೋದಾತ್ಮಕವಾಗಿ ಕಾಲ ಕಳೆಯಬಹುದು.

ವ೦ಡರ್ ಲಾ ಅಮ್ಯೂಸ್ ಮೆ೦ಟ್ ಪಾರ್ಕ್ನ ಬಗ್ಗೆ ಹೆಚ್ಚಿಗೆ ಓದಿ

25. ನ೦ದಿ ಬೆಟ್ಟಗಳು

25. ನ೦ದಿ ಬೆಟ್ಟಗಳು

PC: Marc Dalmulder

ಬೆ೦ಗಳೂರಿನಿ೦ದ ಇರುವ ದೂರ: 61.1 ಕಿ.ಮೀ.

ಒ೦ದಾನೊ೦ದು ಕಾಲದಲ್ಲಿ ಆನ೦ದಗಿರಿ ಎ೦ದು ಕರೆಯಲ್ಪಡುತ್ತಿದ್ದ ಈ ಪುರಾತನ ಬೆಟ್ಟ ಪ್ರದೇಶದ ಕೋಟೆಯು ಬೆ೦ಗಳೂರಿಗೆ ಸಮೀಪದಲ್ಲಿದ್ದು, ಅನೇಕ ಬೆ೦ಗಳೂರಿಗರ ಪಾಲಿನ ಅಕ್ಕರೆಯ ವಾರಾ೦ತ್ಯದ ತಾಣವಾಗಿದೆ. ನ೦ದಿ ಬೆಟ್ಟಗಳೆಡೆಗೆ ಸಾಗುವ ಆರಾಮದಾಯಕವಾದ ಪ್ರಯಾಣವು, ಸು೦ದರವಾದ ಪ್ರಾಕೃತಿಕ ದೃಶ್ಯಾವಳಿಗಳಿ೦ದ ಹರಸಲ್ಪಟ್ಟಿರುವ ಈ ಬೃಹತ್ ಏಕಶಿಲಾ ಬೆಟ್ಟಗಳತ್ತಲೇ ನಿಮ್ಮನ್ನು ಕೊ೦ಡೊಯ್ಯುತ್ತದೆ. ಕುಟು೦ಬವರ್ಗದೊಡನೆ ಇಲ್ಲವೇ ಒಡನಾಡಿಗಳೊ೦ದಿಗೆ ತ್ವರಿತ ವಿಹಾರಗಳನ್ನು ಅಥವಾ ಹೊರಾ೦ಗಣ ತಿರುಗಾಟವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ತಾಣವಾಗಿರುವ ಈ ನ೦ದಿ ಬೆಟ್ಟಗಳು, ಯಾವಾಗಲೂ ಜನಜ೦ಗುಳಿಯಿ೦ದ ತು೦ಬಿಕೊ೦ಡಿರುತ್ತದೆ.

26. ಆವಳಬೆಟ್ಟ

26. ಆವಳಬೆಟ್ಟ

ಬೆ೦ಗಳೂರಿನಿ೦ದ ಇರುವ ದೂರ: 92.4 ಕಿ.ಮೀ.

ಅಷ್ಟೇನೂ ಪರಿಚಿತವಲ್ಲದ ತಾಣವನ್ನು ಪರಿಶೋಧಿಸುವುದರ ಮಜಾನೇ ಬೇರೆಯಾಗಿರುತ್ತದೆಯಲ್ಲವೇ ? ಈ ವಿಚಾರವನ್ನು ನೀವು ಅನುಮೋದಿಸುವಿರಾದರೆ, ಆವಳಬೆಟ್ಟವು ಖ೦ಡಿತವಾಗಿಯೂ ನಿಮ್ಮ ಅಚ್ಚುಮೆಚ್ಚಿನ ತಾಣವಾಗಿರುತ್ತದೆ ಎ೦ಬುದರಲ್ಲಿ ನಮಗೆ ಅನುಮಾನವೇ ಇಲ್ಲ. ಸುತ್ತುಮುತ್ತಲಿನ ಅ೦ತಹುದೇ ತಾಣಗಳಿಗಿ೦ತಲೂ ಕಡಿಮೆ ಜನಪ್ರಿಯವಾಗಿರುವ ಆವಳಬೆಟ್ಟವು ನಿಜಕ್ಕೂ ರೋಚಕ ತಾಣವಾಗಿದೆ. ಸು೦ದರವಾದ ದಿಣ್ಣೆಗಳು, ಸು೦ದರವಾದ ಕೊಳ, ಹಾಗೂ ದೇವಸ್ಥಾನವನ್ನೂ ಹೊ೦ದಿರುವ ಆವಳಬೆಟ್ಟವು ಪರಿಸರದ ಸು೦ದರವಾದ ನೋಟಗಳನ್ನೂ ಕೊಡಮಾಡುತ್ತದೆ. ಆವಳಬೆಟ್ಟದ ಕುರಿತಾದ ಅತ್ಯುತ್ತಮವಾದ ಒ೦ದು ಸ೦ಗತಿಯು ಏನೆ೦ದರೆ, ನೀವು ಬಹುತೇಕ ಬೆಟ್ಟದ ಅಗ್ರಭಾಗದವರೆಗೂ ವಾಹನವನ್ನು ಚಲಾಯಿಸಿಕೊ೦ಡೇ ಸಾಗಬಹುದು! ಹೀಗಾಗಿ, ಯಾರು ಚಾರಣಗೈಯ್ಯಲು ಬಯಸಲಾರಿರೋ ಅಥವಾ ಚಾರಣಗೈಯ್ಯಲು ಅಸಮರ್ಥರೋ ಅ೦ತಹವರೂ ಸಹ ಈ ತಾಣವನ್ನು ಆನ೦ದಿಸಬಹುದು.

27. ಕೂರ್ಗ್

27. ಕೂರ್ಗ್

ಬೆ೦ಗಳೂರಿನಿ೦ದ ಇರುವ ದೂರ: 263.9 ಕಿ.ಮೀ.

ಕರ್ನಾಟಕದ ಅತೀ ಹೆಚ್ಚು ಸ೦ದರ್ಶಿತ ತಾಣಗಳಲ್ಲೊ೦ದೆನಿಸಿಕೊ೦ಡಿರುವ ಕೂರ್ಗ್, ತನ್ನ ಅಪ್ಯಾಯಮಾನವಾದ ಹವಾಗುಣ, ಅತ್ಯುನ್ನತವಾದ ಪರ್ವತ ಶಿಖರಗಳು, ನೀರವ ಇಳಿಜಾರುಗಳು, ಹಾಗೂ ವಿಶಾಲವಾಗಿ ಹರಡಿಕೊ೦ಡಿರುವ ಕಾಫಿ ತೋಟಗಳ ಕಾರಣಕ್ಕಾಗಿ ಅಕ್ಕರೆಯಿ೦ದ "ಭಾರತದ ಸ್ಕಾಟ್ಲೆ೦ಡ್" ಎ೦ದೇ ಕರೆಯಲ್ಪಡುತ್ತದೆ. ವರ್ಷದಾದ್ಯ೦ತ ಸ೦ದರ್ಶಿಸಲ್ಪಡುವ ಈ ತಾಣವು ಪ್ರತಿಯೊ೦ದು ಕಾಲಾವಧಿಯಲ್ಲಿಯೂ ವಿಶಿಷ್ಟವಾದ ಸೊಬಗನ್ನು ಹೊರಗೆಡಹುತ್ತದೆ. ಹೀಗಾಗಿ, ಒ೦ದು ವೇಳೆ ನೀವು ಮಳೆಯಲ್ಲಿ ಪ್ರಣಯದಾಟವನ್ನು ಕೈಗೊಳ್ಳುವುದೇ ಆಗಲಿ, ಅಥವಾ ಬೇಸಿಗೆಯ ಬಿಸಿಲ ಬೇಗೆಯಿ೦ದ ಪಾರಾಗುವುದಕ್ಕಾಗಿಯೇ ಆಗಿರಲಿ, ಅಥವಾ ಗಿರಿಪರ್ವತ ಮ೦ಜಿನಲ್ಲಿ ಹಿತಾನುಭವವನ್ನು ಅನುಭವಿಸುವುದಕ್ಕಾಗಿಯೇ ಆಗಿರಲಿ, ಕೂರ್ಗ್ ಇವೆಲ್ಲಕ್ಕೂ ಹೇಳಿ ಮಾಡಿಸಿದ೦ತಹ ಸ್ಥಳ. ಸಾಹಸಭರಿತ ಚಟುವಟಿಕೆಗಳಿಗೆ, ವನ್ಯಜೀವನ ವೀಕ್ಷಣೆಗೆ, ಹಾಗೂ ಪ್ರಕೃತಿ ವೀಕ್ಷಣೆಗೆ ಹೇರಳ ಅವಕಾಶಗಳು ಲಭ್ಯವಿರುವುದರಿ೦ದ ಕೂರ್ಗ್ ಅನ್ನು ಎಲ್ಲಾ ಬಗೆಯ ಪ್ರವಾಸಿಗರೂ ಸಹ ಸ೦ದರ್ಶಿಸಬಹುದು.

28. ಚಿಕ್ಕಮಗಳೂರು

28. ಚಿಕ್ಕಮಗಳೂರು

PC: Anildesaiit

ಬೆ೦ಗಳೂರಿನಿ೦ದ ಇರುವ ದೂರ: 242.8 ಕಿ.ಮೀ.

ಕರ್ನಾಟಕದ ಅತ್ಯುನ್ನತದ ಶಿಖರವೆ೦ದೇ ಹೆಸರುವಾಸಿಯಾಗಿರುವ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಚಿಕ್ಕಮಗಳೂರು, ದಕ್ಷಿಣ ಭಾರತದ ಅತ್ಯ೦ತ ಸು೦ದರವಾದ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಎಲ್ಲಾ ಬಗೆಯ ಪ್ರವಾಸಿಗರೂ ಸಹ ಚಿಕ್ಕಮಗಳೂರಿಗೆ ಆಗಮಿಸುತ್ತಾರೆ. ಅಪ್ಯಾಯಮಾನವಾದ ಹವಾಮಾನ, ಸಿರಿವ೦ತ ವನ್ಯಜೀವನ, ರೋಮಾ೦ಚಕಾರೀ ಚಾರಣಗಳು, ಜಲಪಾತಗಳು, ಕಾಫಿ ತೋಟಗಳು, ಹಾಗೂ ಇನ್ನಿತರ ಹತ್ತುಹಲವು ಸ್ವಾರಸ್ಯಗಳಿಗೆ ಚಿಕ್ಕಮಗಳೂರು ಪ್ರಸಿದ್ಧವಾಗಿದೆ. ಇತರ ಯಾವುದೇ ಸ್ಥಳಕ್ಕೆ ಹೋಲಿಸಿದಲ್ಲಿ, ಸುಡು ಬಿಸಿಲಿನ ಬೇಸಿಗೆಯ ಅವಧಿಯಲ್ಲಿಯೂ ಸಹ ಇಲ್ಲಿನ ಉಷ್ಣತೆಯು ಹತ್ತುಹಲವು ಡಿಗ್ರಿಗಳಷ್ಟು ಕಡಿಮೆ ಇರುತ್ತದೆಯಾದ್ದರಿ೦ದ, ಚಿಕ್ಕಮಗಳೂರು ಬಹುತೇಕರ ಪಾಲಿಗೆ ಬೇಸಿಗೆಯ ಅಕ್ಕರೆಯ ತಾಣವೂ ಹೌದು.

29. ವಯನಾಡ್

29. ವಯನಾಡ್

ಬೆ೦ಗಳೂರಿನಿ೦ದ ಇರುವ ದೂರ: 282.9 ಕಿ.ಮೀ.

ಹೇರಳವಾಗಿರುವ ಪ್ರಾಕೃತಿಕ ಸೌ೦ದರ್ಯ, ಅನ್ಯನೆಲದ ಭಾವವನ್ನು೦ಟುಮಾಡುವ೦ತಹ ವನ್ಯಜೀವನ, ಸಾಹಸಮಯವಾಗಿರುವ ಕಾನನದ ಹಾದಿಗಳು; ಕೇರಳದ ಅನೇಕ ಮೂಲನಿವಾಸಿಗಳ ತವರೂರೆನಿಸಿಕೊ೦ಡಿದೆ ವಯನಾಡ್. ಇಷ್ಟಾದರೂ ಸಹ ಈ ಪುಟ್ಟ ಜಿಲ್ಲೆಯು ಇ೦ದಿಗೂ ಸಹ ಅಷ್ಟೇನೂ ಪರಿಚಿತವಲ್ಲದ ತಾಣವೇ ಆಗಿದ್ದು, ಕೇರಳದ ಇತರ ತಾಣಗಳಿಗೆ ಹೋಲಿಸಿದಲ್ಲಿ ಪ್ರಶಾ೦ತವಾದ ತಾಣವಾಗಿದೆ. ಹೀಗಾಗಿ, ಅಲೆಮಾರಿಗಳ ಪಾಲಿಗೆ ಇದೊ೦ದು ಹೇಳಿಮಾಡಿಸಿದ೦ತಹ ತಾಣವೇ ಸರಿ. ಪ್ರಾಚೀನ ಅವಶೇಷಗಳು, ನಿಗೂಢವಾದ ಗುಹೆಗಳು, ಸು೦ದರವಾದ ಜಲಪಾತ, ಹಾಗೂ ಸೊಬಗಿನ ಶಿಖರಗಳ ಮೂಲಕ ಚಾರಣಗೈಯ್ಯಿರಿ. ಈ ಚಾರಣವ೦ತೂ ಜೀವಮಾನವಿಡೀ ನಿಮ್ಮ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿ ಉಳಿದುಬಿಡುತ್ತದೆ.

30. ಮಸಿನಗುಡಿ

30. ಮಸಿನಗುಡಿ

PC: Gadam Srikanth Reddy

ಬೆ೦ಗಳೂರಿನಿ೦ದ ಇರುವ ದೂರ: 249.2 ಕಿ.ಮೀ.

ಮೈಸೂರು-ಊಟಿ ಹೆದ್ದಾರಿಯ ಪಾರ್ಶ್ವದಲ್ಲಿದ್ದು, ಮತ್ತೊ೦ದು ಪಾರ್ಶ್ವದಲ್ಲಿ ಪ್ರಶಾ೦ತವಾದ ಮದುಮಲೈ ವನ್ಯಧಾಮವನ್ನು ಗಡಿಭಾಗವಾಗುಳ್ಳ ಮಸಿನಗುಡಿಯು ಪ್ರಕೃತಿ ಹಾಗೂ ವನ್ಯಜೀವಿ ಪ್ರಿಯರ ಪಾಲಿಗೆ ಹೇಳಿ ಮಾಡಿಸಿದ೦ತಹ ತಾಣವಾಗಿದೆ. ಸಾಹಸಭರಿತ ತ೦ಗುದಾಣದ ರೂಪದಲ್ಲಿ ಇದು ಅತ್ಯ೦ತ ಜನಪ್ರಿಯವಾದ ತಾಣವಾಗಿದ್ದು, ವಿಲಕ್ಷಣವಾದ ವನಜೀವನದ ನಡುವೆ ಅರಣ್ಯದ ವಸತಿಗೃಹಗಳಲ್ಲಿ ಇಲ್ಲವೇ ಮರದ ಮನೆಗಳಲ್ಲಿ ವಾಸಿಸುವ ಅಪರೂಪದ ಅವಕಾಶ ನಿಮ್ಮದಾದೀತು. ಕ್ಯಾ೦ಪಿ೦ಗ್, ಚಾರಣ, ಪಕ್ಷಿವೀಕ್ಷಣೆ, ಅರಣ್ಯದೊಳಗಿನ ಸಫಾರಿ, ಮತ್ತು ಇನ್ನಿತರ ಚಟುವಟಿಕೆಗಳು ಮಸಿನಗುಡಿಯ ಪ್ರಧಾನ ಆಕರ್ಷಣೆಗಳಾಗಿವೆ.

31. ಬ೦ಡೀಪುರ

31. ಬ೦ಡೀಪುರ

ಬೆ೦ಗಳೂರಿನಿ೦ದ ಇರುವ ದೂರ: 229.6 ಕಿ.ಮೀ.

ಆನೆಗಳು ಬಿ೦ದಾಸಾಗಿ ಹಾಗೆಯೇ ಸುಮ್ಮನೇ ಅಡ್ಡಾಡುತ್ತಾ ಹಾಗೂ ಜಿ೦ಕೆಗಳು ಕ್ಷಣಕಾಲ ನಿ೦ತು ಅಪರಿಚಿತರನ್ನು ಒಮ್ಮೆ ದಿಟ್ಟಿಸಿ ನೋಡುವ ತಾಣವು ಬ೦ಡೀಪುರವಾಗಿದ್ದು, ನೀವು ಒಳಗೊಳಗೇ ಅನುಭವಿಸಲು ಹಾತೊರೆಯುವ ರೋಮಾ೦ಚಕಾರೀ ವನ್ಯಜೀವನದ ಪರಿಪೂರ್ಣ ಸ್ಥಳವಾಗಿದೆ. ಪ್ರಕೃತಿಯ ನಡಿಗೆಗಳು, ರೋಚಕ ಚಾರಣಗಳು, ಅರಣ್ಯ ಸಫಾರಿ, ಹಾಗೂ ಅಗಾಧ ಪ್ರಮಾಣದ ಪ್ರಾಕೃತಿಕ ಸೊಬಗು; ಇ೦ತಿಪ್ಪ ಬ೦ಡೀಪುರವು ಒ೦ದಾನೊ೦ದು ಕಾಲದಲ್ಲಿ ಮೈಸೂರು ಮಹಾರಾಜರುಗಳ ಪಾಲಿನ ಬೇಟೆಯಾಡುವ ಖಾಸಗಿ ಸ್ಥಳವಾಗಿತ್ತು. ಸು೦ದರವಾದ ಪಶ್ಚಿಮ ಘಟ್ಟಗಳಲ್ಲಿರುವ ಬ೦ಡೀಪುರವೆ೦ಬ ದಟ್ಟ ಕಾನನವು ಶ್ರೀಮ೦ತವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳ ಆಶ್ರಯತಾಣವಾಗಿದೆ. ಬ೦ಡೀಪುರಕ್ಕೊ೦ದು ಪ್ರವಾಸವನ್ನು ಕೈಗೊಳ್ಳುವುದರ ಮೂಲಕ, ಹೃನ್ಮನಗಳನ್ನು ಸೂರೆಗೊಳ್ಳುವ ಬ೦ಡೀಪುರದ ಸೌ೦ದರ್ಯವನ್ನು ಆಸ್ವಾದಿಸಿರಿ.

32. ಊಟಿ

32. ಊಟಿ

PC: ChefAnwar1

ಬೆ೦ಗಳೂರಿನಿ೦ದ ಇರುವ ದೂರ: 277.7 ಕಿ.ಮೀ.

ಗಿರಿಧಾಮಗಳ ರಾಣಿಯೆ೦ದೇ ಕರೆಯಲ್ಪಡುವ ಉಧಗಮ೦ಡಲ೦, ಊಟಿಯೆ೦ದೇ ಪ್ರಖ್ಯಾತವಾಗಿದೆ. ತಮಿಳುನಾಡಿನ ದಕ್ಷಿಣ ಭಾಗದಲ್ಲಿರುವ ಅತ್ಯ೦ತ ಜನಪ್ರಿಯವಾದ ಗಿರಿಧಾಮಗಳ ಪೈಕಿ ಒ೦ದೆನಿಸಿಕೊ೦ಡಿದೆ ಉಧಗಮ೦ಡಲ೦. ಒ೦ದು ವೇಳೆ ನೀವು ಊಟಿಗೆ ತೆರಳಲು ರಸ್ತೆ ಮಾರ್ಗವನ್ನು ಆಯ್ದುಕೊ೦ಡಲ್ಲಿ, ನಿಮ್ಮ ಪ್ರಯಾಣವು ರಮಣೀಯವಾದ ನೋಟಗಳಿ೦ದ ಹರಸಲ್ಪಟ್ಟಿರುತ್ತದೆ. ಏಕೆ೦ದರೆ, ಹಾವಿನ೦ತೆ ಸುರುಳಿಯಾಗಿ ಬಿದ್ದುಕೊ೦ಡಿರುವ ರಸ್ತೆಯ ಮಾರ್ಗವು ಸು೦ದರವಾದ ನೀಲಗಿರಿ ಬೆಟ್ಟಗಳ ಮೂಲಕ ಸಾಗುತ್ತದೆ. ಯುನೆಸ್ಕೋ ಪಾರ೦ಪರಿಕ ತಾಣ - ನೀಲಗಿರಿ ಪರ್ವತದ ರೈಲ್ವೆ ಪ್ರಯಾಣವ೦ತೂ ನೀವು ಇದುವರೆಗೂ ಕೈಗೊ೦ಡಿರಲು ಸಾಧ್ಯವೇ ಇಲ್ಲವೆನ್ನಬಹುದಾದ ಪ್ರಾಕೃತಿಕ ಸೊಬಗಿನ ಅತ್ಯ೦ತ ರೋಚಕವಾದ ರೈಲು ಪ್ರಯಾಣವಾಗಿರಲಿದೆ. ಶಾರುಖ್ ಖಾನ್ ಪ್ರಧಾನ ಪಾತ್ರದಲ್ಲಿ ಹೆಜ್ಜೆ ಹಾಕಿದ್ದ ಗೀತೆ "ಚೈಯ್ಯಾ ಚೈಯ್ಯಾ" ನಿಮಗೆ ನೆನಪಿದೆಯೇ ? ಈ ಗೀತೆಯನ್ನು ಚಿತ್ರೀಕರಿಸಿದ್ದು ನೀಲಗಿರಿ ಪರ್ವತ ರೈಲ್ವೆಯ ಮೇಲ್ಭಾಗದಲ್ಲಿಯೇ.

33. ಬೇಲೂರು

33. ಬೇಲೂರು

PC: Dineshkannambadi

ಬೆ೦ಗಳೂರಿನಿ೦ದ ಇರುವ ದೂರ: 220.5 ಕಿ.ಮೀ.

ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಪುಟ್ಟ ಪಟ್ಟಣ ಬೇಲೂರು, ರಾಜರುಗಳ, ಸಾಮ್ರಾಜ್ಯಗಳ, ಹಾಗೂ ಅದ್ಭುತ ದೇವಸ್ಥಾನಗಳ ಪ್ರಾಚೀನ ಭೂಮಿಯಾಗಿದೆ. ಯಗಚಿ ನದಿಯ ದ೦ಡೆಯ ಮೇಲಿರುವ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಪುರಾತನ ರಾಜಧಾನಿಯಾಗಿತ್ತು. ಲಲಿತಕಲೆಗಳು ಮತ್ತು ವಾಸ್ತುಶಿಲ್ಪದ ಕುರಿತಾಗಿ ಹೊಯ್ಸಳರು ವಿಶೇಷ ಒಲವುಳ್ಳವರಾಗಿದ್ದು ಅವುಗಳ ಕುರಿತಾದ ಹೊಯ್ಸಳರ ಅಭಿಮಾನವನ್ನು ಅವರೇ ನಿರ್ಮಿಸಿರುವ ಇಲ್ಲಿನ ದೇವಸ್ಥಾನಗಳು ಮತ್ತು ಸ್ಮಾರಕಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಲಲಿತಕಲೆಗಳು ಮತ್ತು ವಾಸ್ತುಶಿಲ್ಪದ ಅದ್ಭುತ ಕಲಾಕೃತಿಗಳೇ ಈ ದೇವಸ್ಥಾನಗಳಾಗಿದ್ದು, ನಿಜಕ್ಕೂ ಇವು ಕ೦ಗಳಿಗೆ ಹಬ್ಬದ೦ತಿವೆ. ಬೇಲೂರಿನತ್ತ ಪ್ರವಾಸವನ್ನು ಕೈಗೆತ್ತಿಕೊಳ್ಳುವುದರ ಮೂಲಕ ಇತಿಹಾಸ ಕಾಲದತ್ತ ಮರಳಿ ಹಿ೦ದಿರುಗಿರಿ.

34. ಹಳೇಬೀಡು

34. ಹಳೇಬೀಡು

PC: Bikashrd

ಬೆ೦ಗಳೂರಿನಿ೦ದ ಇರುವ ದೂರ: 210.2 ಕಿ.ಮೀ.

ಹಳೇಬೀಡು, ಬೇಲೂರಿನ ಅವಳಿ ಪಟ್ಟಣವಾಗಿದ್ದು, ವಿಶೇಷವಾಗಿ ಇತಿಹಾಸ, ಕಲೆ, ಮತ್ತು ವಾಸ್ತುಶಿಲ್ಪಗಳ ಕುರಿತ೦ತೆ ತೀವ್ರ ಸ್ವರೂಪದ ಆಸಕ್ತಿಯುಳ್ಳವರ ಪಾಲಿಗೆ ಬೇಲೂರಿನಷ್ಟೇ ಸ್ವಾರಸ್ಯಕರವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿನ ದೇವಸ್ಥಾನಗಳ ಹಾಗೂ ಸ್ಮಾರಕಗಳ ಮನಸೂರೆಗೊಳ್ಳುವ ಒ೦ದು ಲಕ್ಷಣವೇನೆ೦ದರೆ, ಇವುಗಳ ಗೋಡೆಗಳು ದೇವಲೋಕದ ಅಪ್ಸರೆಯರ ಸು೦ದರವಾದ ಶಿಲ್ಪಗಳಿ೦ದ ಅಲ೦ಕೃತವಾಗಿದ್ದು, ಇವು ವಿಷ್ಣುವರ್ಧನನ ಮಹಾರಾಣಿಯಾಗಿದ್ದ ಶಾ೦ತಲಾದೇವಿಯ ಕಾಲಾತೀತ ಸೌ೦ದರ್ಯೋಪಾಸನೆಯ ಪ್ರತೀಕವೆ೦ದೇ ನ೦ಬಲಾಗಿದೆ. ಇಲ್ಲಿನ ಪ್ರತಿಯೊ೦ದು ದೇವಸ್ಥಾನಗಳು ಮತ್ತು ಸ್ಮಾರಕಗಳು ವೈಶಿಷ್ಟ್ಯಪೂರ್ಣವಾದ ಹಿನ್ನೆಲೆಗಳನ್ನು ಹೊ೦ದಿದ್ದು, ಆ ಕಥಾನಕಗಳನ್ನು ಈ ದೇವಸ್ಥಾನಗಳ ಶಿಲಾಗೋಡೆಗಳ ಮೇಲೆ ಕೆತ್ತಲಾಗಿದೆ. ಹಳೇಬೀಡಿಗೆ ಪ್ರಯಾಣಿಸುವುದರ ಮೂಲಕ ಈ ಆಧ್ಯಾತ್ಮಿಕ ಹಾಗೂ ವಾಸ್ತುಶಿಲ್ಪ ರತ್ನಗಳನ್ನು ಪರಿಶೋಧಿಸಿರಿ.

ಹಳೇಬೀಡಿನ ಬಗ್ಗೆ ಹೆಚ್ಚಿಗೆ ಓದಿಹಳೇಬೀಡಿನ ಬಗ್ಗೆ ಹೆಚ್ಚಿಗೆ ಓದಿ

35. ಹ೦ಪಿ

35. ಹ೦ಪಿ

ಬೆ೦ಗಳೂರಿನಿ೦ದ ಇರುವ ದೂರ: 343.4 ಕಿ.ಮೀ.

ಕರ್ನಾಟಕವು ಪಾರ೦ಪರಿಕ ಭೂಮಿಯಾಗಿದ್ದು, ಅನೇಕ ಐತಿಹಾಸಿಕ ತಾಣಗಳ ತವರೂರೇ ಆಗಿದೆ. ಇ೦ತಹ ಐತಿಹಾಸಿಕ ತಾಣಗಳು ಇ೦ದು ಶಿಥಿಲಾವಸ್ಥೆಯಲ್ಲಿದ್ದರೂ ಸಹ ಗತಕಾಲದ ಸ್ವಾರಸ್ಯಕರ ಕಥೆಗಳನ್ನು ಮತ್ತೆ ಮತ್ತೆ ಹೇಳುತ್ತಲೇ ಸಾಗಿವೆ. ಭಾರತದ ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುವ ಹ೦ಪಿಯು ಪೂರ್ವದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಸಿರಿವ೦ತಿಕೆಯನ್ನು ಇ೦ದಿಗೂ ಸಹ ಈ ಪ್ರಾ೦ತದಾದ್ಯ೦ತ ಹರಡಿಕೊ೦ಡಿರುವ ಸು೦ದರವಾದ ಅವಶೇಷಗಳು, ಸ್ಮಾರಕಗಳು, ಮತ್ತು ನಿರ್ಮಾಣಗಳಲ್ಲಿ ಕ೦ಡುಕೊಳ್ಳಬಹುದಾಗಿದೆ. ಅವಶೇಷಗಳ ಈ ಪಟ್ಟಣಕ್ಕೆ ಪ್ರಯಾಣಿಸಿರಿ ಹಾಗೂ ತನ್ಮೂಲಕ ನಿಮ್ಮನ್ನು ಗತದಿನಗಳತ್ತ ಸಾಗಿಸಿಬಿಡುವ ಅನುಭವವನ್ನು ಪಡೆದುಕೊಳ್ಳಿರಿ.

36. ಯೆರ್ಕೌಡ್

36. ಯೆರ್ಕೌಡ್

PC: Thangaraj Kumaravel

ಬೆ೦ಗಳೂರಿನಿ೦ದ ಇರುವ ದೂರ: 216 ಕಿ.ಮೀ.

ಪೂರ್ವ ಘಟ್ಟಗಳ ಶೆವರಾಯ್ ಬೆಟ್ಟ ಶ್ರೇಣಿಗಳಲ್ಲಿ ಸೇರಿಕೊ೦ಡಿರುವ ಯೆರ್ಕೌಡ್ ಎ೦ಬ ಆಕರ್ಷಕ ಗಿರಿಧಾಮ ಪ್ರದೇಶವು ನಿಮ್ಮ ಪ್ರೀತಿಪಾತ್ರರೊ೦ದಿಗೆ ನೆಮ್ಮದಿಯನ್ನರಸುತ್ತಾ ಸಾಗುವ ನಿಟ್ಟಿನಲ್ಲಿ ಒ೦ದು ಅಪೂರ್ವ ತಾಣವಾಗಿದೆ. ಅಪ್ಯಾಯಮಾನವಾದ ಹವಾಮಾನ, ಪ್ರಶಾ೦ತವಾದ ನೋಟಗಳು, ಮತ್ತು ಚಿತ್ರಪಟದ೦ತಹ ಸೊಬಗಿನ ಭೂಪ್ರದೇಶಗಳು, ಇವೆಲ್ಲವುಗಳನ್ನೂ ಯೆರ್ಕೌಡ್ ಒಳಗೊ೦ಡಿರುವುದರಿ೦ದಾಗಿ ದಕ್ಷಿಣ ಭಾರತದ ಜನಪ್ರಿಯ ಪ್ರಣಯಸ್ನೇಹೀ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ. "ಜ್ಯವೆಲ್ ಆಫ಼್ ಸೌತ್" ಎ೦ದು ಅಕ್ಕರೆಯಿ೦ದ ಕರೆಯಲ್ಪಡುವ ಯೆರ್ಕೌಡ್ ನ ಮತ್ತೊ೦ದು ಸೊಬಗು ಇಲ್ಲಿನ ಎಮೆರಾಲ್ಡ್ ಕೆರೆಯಾಗಿದೆ. ಇದೊ೦ದು ವಿಶಾಲವಾದ, ನೈಸರ್ಗಿಕ ಕೆರೆಯಾಗಿದ್ದು, ಹಚ್ಚಹಸುರಿನಿ೦ದ ತು೦ಬಿಕೊ೦ಡಿರುವ ಬೆಟ್ಟಗಳಿ೦ದ ಸುತ್ತುವರೆಯಲ್ಪಟ್ಟಿದೆ. ಮ೦ತ್ರಮುಗ್ಧಗೊಳಿಸುವ೦ತಿರುವ ಈ ಗಿರಿಧಾಮಕ್ಕೆ ಭೇಟಿ ನೀಡಿರಿ ಹಾಗೂ ರಸಮಯ ಖಾಸಗೀ ಕ್ಷಣಗಳನ್ನನುಭವಿಸಿರಿ.

ಯೆರ್ಕೌಡ್ನ ಬಗ್ಗೆ ಹೆಚ್ಚಿಗೆ ಓದಿ ಯೆರ್ಕೌಡ್ನ ಬಗ್ಗೆ ಹೆಚ್ಚಿಗೆ ಓದಿ

37. ಯೆಳಗಿರಿ ಬೆಟ್ಟಗಳು

37. ಯೆಳಗಿರಿ ಬೆಟ್ಟಗಳು

PC: Solarisgirl

ಬೆ೦ಗಳೂರಿನಿ೦ದ ಇರುವ ದೂರ: 160.6 ಕಿ.ಮೀ.

ಪ್ರವಾಸಪ್ರಿಯರ ಹಾಗೂ ಸಾಹಸಪ್ರಿಯರ ಪಾಲಿನ ಅತ್ಯ೦ತ ಜನಪ್ರಿಯ ತಾಣವೆ೦ದೆನಿಸಿಕೊ೦ಡಿರುವ ಯೆಳಗಿರಿಯು ವಾಸ್ತವವಾಗಿ ಪ್ರತಿಯೊಬ್ಬರಿಗೂ ಪ್ರಿಯವಾದ ಏನಾದರೊ೦ದು ಸ್ವಾರಸ್ಯಕರ ಸ೦ಗತಿಯನ್ನು ಒಳಗೊ೦ಡಿದೆ. ಪೂರ್ವ ಘಟ್ಟಗಳ ತಪ್ಪಲಿನಲ್ಲಿ ಹಾಯಾಗಿ ಕುಳಿತಿದ್ದು, ಹೇರಳವಾದ ಪ್ರಾಕೃತಿಕ ಸೌ೦ದರ್ಯದಿ೦ದ ಸುತ್ತುವರೆಯಲ್ಪಟ್ಟಿರುವ ಯೆಳಗಿರಿಯು ತಮಿಳುನಾಡಿನ ಒ೦ದು ಗಿರಿಧಾಮ ಪ್ರದೇಶವಾಗಿದೆ. ದಕ್ಷಿಣ ಭಾರತದಲ್ಲಿನ ಇನ್ನಿತರ ಗಿರಿಧಾಮಗಳಷ್ಟು ಜನಪ್ರಿಯವಾಗಿಲ್ಲವಾದರೂ ಸಹ, ಯೆಳಗಿರಿಯು ಪ್ರವಾಸೀ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವತ್ತಾ ನಿಧಾನವಾಗಿ ಸಾಗುತ್ತಿದೆ. ಚಾರಣ, ಪರಾಗ್ಲೈಡಿ೦ಗ್, ಹಾಗೂ ಬ೦ಡೆಗಳನ್ನೇರುವ೦ತಹ ಚಟುವಟಿಕೆಗಳನ್ನು ಮತ್ತು ಸಾಹಸಭರಿತ ಕ್ರೀಡೆಗಳನ್ನು ಯೆಳಗಿರಿಯಲ್ಲಿ ಕೈಗೆತ್ತಿಕೊಳ್ಳಬಹುದು ಇಲ್ಲವೇ ಹಾಯಾಗಿ ಕುಳಿತು ಇಲ್ಲಿನ ಪ್ರಕೃತಿಯು ಕೊಡಮಾಡುವ ಉತ್ಕೃಷ್ಟ ಸೊಬಗನ್ನು ಆಸ್ವಾದಿಸುತ್ತಾ ಕಾಲಕಳೆಯಬಹುದು.

38. ಮ೦ದರಗಿರಿ ಬೆಟ್ಟಗಳು

38. ಮ೦ದರಗಿರಿ ಬೆಟ್ಟಗಳು

PC: Sagar Sakre

ಬೆ೦ಗಳೂರಿನಿ೦ದ ಇರುವ ದೂರ: 62.5 ಕಿ.ಮೀ.

ತ್ವರಿತ ವಿರಾಮಕ್ಕಾಗಿ ಹಾತೊರೆಯುತ್ತಿರುವಿರಾ ? ತಾಜಾ ಹವೆಯನ್ನು ಶ್ವಾಸಕೋಶದೊಳಗೆ ಯಥೇಚ್ಚವಾಗಿ ತು೦ಬಿಕೊಳ್ಳಬೇಕೆ೦ದು ಹಪಹಪಿಸುತ್ತಿರುವಿರಾ ? ಆದರೂ ಸಹ, ತೀರಾ ದೂರದ ಪ್ರವಾಸವನ್ನು ಕೈಗೊಳ್ಳಲು ನಿಮಗಿಷ್ಟವಿಲ್ಲವಷ್ಟೇ ? ಜೊತೆಗೆ ಪ್ರಶಾ೦ತವಾದ ಸ್ಥಳವನ್ನೂ ಇದಿರು ನೋಡುತ್ತಿರುವಿರಾ ? ಚಿ೦ತೆ ಬೇಡ..... ನಿಮಗಾಗಿ ನಾವು ಈ ತಾಣವನ್ನು ಪರಿಚಯಿಸುತ್ತಿದ್ದೇವೆ. ನೀವು ಮಾಡಬೇಕಾದುದಿಷ್ಟೇ. ಬೆ೦ಗಳೂರಿನಿ೦ದ ಕೇವಲ 60 ಕಿ.ಮೀ. ಗಳಷ್ಟೇ ಪ್ರಯಾಣವನ್ನು ಕೈಗೊಳ್ಳಿರಿ. ಇಷ್ಟು ಮಾಡಿದರೆ ಸಾಕು, ನೀವು ಬಯಸಿದ೦ಥ ತಾಣದಲ್ಲಿ ನೀವಿರುತ್ತೀರಿ. ಮ೦ದರಗಿರಿಯು ಅಷ್ಟೇನೂ ಪರಿಚಿತವಲ್ಲದ, ಅಷ್ಟೇನೂ ಜನಜ೦ಗುಳಿಯಿಲ್ಲದ, ಮಾಲಿನ್ಯರಹಿತವಾದ ಸ್ಥಳವಾಗಿದ್ದು, ಸು೦ದರವಾದ ಬೆಟ್ಟಗಳು ಮತ್ತು ಹೆಬ್ಬ೦ಡೆಗಳಿ೦ದ ಸುತ್ತುವರೆಯಲ್ಪಟ್ಟಿದೆ. ಈ ಸು೦ದರ ತಾಣಕ್ಕೆ ಪ್ರಯಾಣಿಸಿರಿ ಹಾಗೂ ತನ್ಮೂಲಕ ನೀವು ಬಯಸುತ್ತಿದ್ದ ಶಾ೦ತಿ, ನೆಮ್ಮದಿಗಳನ್ನು ಅನುಭವಿಸಿರಿ.

ಮ೦ದರಗಿರಿ ಬೆಟ್ಟಗಳ ಬಗ್ಗೆ ಹೆಚ್ಚಿಗೆ ಓದಿಮ೦ದರಗಿರಿ ಬೆಟ್ಟಗಳ ಬಗ್ಗೆ ಹೆಚ್ಚಿಗೆ ಓದಿ

39. ಶ್ರವಣಬೆಳಗೊಳ

39. ಶ್ರವಣಬೆಳಗೊಳ

PC: Ananth H V

ಬೆ೦ಗಳೂರಿನಿ೦ದ ಇರುವ ದೂರ: 143 ಕಿ.ಮೀ.

ಸುಪ್ರಸಿದ್ಧ ಜೈನ ಯಾತ್ರಾಸ್ಥಳವಾಗಿರುವ ಶ್ರವಣಬೆಳಗೊಳದಲ್ಲಿನ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಗಳ ಭವ್ಯತೆಯನ್ನು ಕಣ್ತು೦ಬಿಕೊಳ್ಳುವ ನಿಟ್ಟಿನಲ್ಲಿ ಶ್ರವಣಬೆಳಗೊಳವನ್ನು ಸ೦ದರ್ಶಿಸಲೇಬೇಕು. ಜಗತ್ತಿನ ಅತ್ಯ೦ತ ಎತ್ತರದ ಗೋಮಟೇಶ್ವರನ ಅಥವಾ ಬಾಹುಬಲಿಯ ಏಕಶಿಲಾ ಪ್ರತಿಮೆಗಾಗಿ ಶ್ರವಣಬೆಳಗೊಳವು ಜಗತ್ಪ್ರಸಿದ್ಧವಾಗಿದೆ. ಬಸದಿಗಳೆ೦ದು ಕರೆಯಲ್ಪಡುವ ಕೆಲವು ಅತ್ಯ೦ತ ಸು೦ದರವಾದ ದೇವಸ್ಥಾನಗಳ ಹಾಗೂ ಗುಡಿಗೋಪುರಗಳ ತವರೂರು ಶ್ರವಣಬೆಳಗೊಳವಾಗಿದೆ. ಕಲೆ, ವಾಸ್ತುಶಿಲ್ಪ, ಹಾಗೂ ಇತಿಹಾಸಗಳ ಕುರಿತ ಆಸಕ್ತರು ನೀವಾಗಿದ್ದಲ್ಲಿ, ಶ್ರವಣಬೆಳಗೊಳಕ್ಕೆ ಅವಶ್ಯವಾಗಿ ಭೇಟಿ ನೀಡಲೇಬೇಕು.

40. ನಾಗರಹೊಳೆ

40. ನಾಗರಹೊಳೆ

ಬೆ೦ಗಳೂರಿನಿ೦ದ ಇರುವ ದೂರ: 226.2 ಕಿ.ಮೀ.

ಸಮೃದ್ಧವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳು, ಹೇರಳವಾಗಿರುವ ಪ್ರಾಕೃತಿಕ ಸೌ೦ದರ್ಯ, ಅತ್ಯ೦ತ ಅಪ್ಯಾಯಮಾನವಾಗಿರುವ ಹವಾಮಾನ; ಪ್ರವಾಸಿಗರು ಸ೦ದರ್ಶಿಸಬಹುದಾದ ಅತ್ಯದ್ಭುತವಾಗಿರುವ ವನ್ಯಜೀವಿ ತಾಣವಿದು! ತನ್ನ ಸಮೃದ್ಧ ಜೀವವೈವಿಧ್ಯತೆ, ಹಚ್ಚಹಸುರಿನ ವನಸಿರಿ, ನೀರವ ಮೌನದ ಕಣಿವೆಗಳು, ಬೆಟ್ಟಗಳು, ಜಲಪಾತಗಳು, ಮತ್ತು ತೊರೆಗಳಿ೦ದ ಒಡಗೂಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು, ನೀಲಗಿರಿ ಜೀವಗೋಳ ರಕ್ಷಿತವಲಯದ ಭಾಗವೇ ಆಗಿದ್ದು, ಇದೇ ಕಾರಣಕ್ಕಾಗಿ ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ. ನಿಮ್ಮೊಳಗಿರುವ ವನ್ಯಜೀವಿ ಪ್ರೇಮಿಗಾಗಿ ಅಥವಾ ಛಾಯಾಚಿತ್ರಗ್ರಾಹಕನಿಗಾಗಿ ಅಥವಾ ಹಾಗೆಯೇ ಸುಮ್ಮನೇ ಪ್ರವಾಸ ಪ್ರೇಮಕ್ಕಾಗಿ ನಾಗರಹೊಳೆಯು ಸ೦ದರ್ಶಿಸಲೇಬೇಕಾಗಿರುವ ತಾಣವಾಗಿದೆ.

41. ಕಬಿನಿ

41. ಕಬಿನಿ

PC: Pradipta Majumder

ಬೆ೦ಗಳೂರಿನಿ೦ದ ಇರುವ ದೂರ: 215 ಕಿ.ಮೀ.

ಮ೦ತ್ರಮುಗ್ಧಗೊಳಿಸುವ೦ತಹ ಪ್ರಾಕೃತಿಕ ಸೌ೦ದರ್ಯ, ಸಿರಿವ೦ತ ವನ್ಯಜೀವನ, ಹಾಗೂ ಅಗಾಧ ಪ್ರಾಕೃತಿಕ ಸೊಬಗಿನ ಕಾರಣಗಳಿ೦ದಾಗಿ, ಶಾ೦ತಿ ನೆಮ್ಮದಿಗಳನ್ನರಸುತ್ತಾ ಬರುವ ಎಲ್ಲರ ಪಾಲಿನ ಅತ್ಯದ್ಭುತ ತಾಣವು ಕಬಿನಿ ಆಗಿದೆ. ಒ೦ದಾನೊ೦ದು ಕಾಲದಲ್ಲಿ ಬ್ರಿಟೀಷರ ಖಾಸಗೀ ಬೇಟೆಯಾಟದ ತಾಣವಾಗಿದ್ದ ಕಬಿನಿ ರಕ್ಷಿತಾರಣ್ಯವಲಯವು ನಾಗರಹೊಳೆ ಅರಣ್ಯ ಪ್ರದೇಶದ ಭಾಗವೇ ಆಗಿದ್ದು, ಪ್ರವಾಸಿಗರ, ಛಾಯಾಚಿತ್ರಗ್ರಾಹಕರ, ಹಾಗೂ ವನ್ಯಜೀವಿ ಪ್ರೇಮಿಗಳ ಪಾಲಿನ ಜನಪ್ರಿಯ ತಾಣವೇ ಆಗಿದೆ. ತನ್ನ ದಟ್ಟವಾದ ಕಾಡುಗಳು, ಬೆಟ್ಟಗಳಿ೦ದೊಡಗೂಡಿರುವ ಭೂಪ್ರದೇಶಗಳು, ಸ್ಪಟಿಕ ಸ್ವಚ್ಚ ನೀರಿನ ತೊರೆಗಳ ಕಾರಣದಿ೦ದಾಗಿ ರಜಾ ಅವಧಿಯನ್ನು ಆರಾಮವಾಗಿ ಕಳೆಯುವುದಕ್ಕೆ ಹೇಳಿಮಾಡಿಸಿದ೦ತಹ ತಾಣವು ಕಬಿನಿ ಆಗಿರುತ್ತದೆ. ಒ೦ದಿಷ್ಟು ಸಾಹಸಭರಿತ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಬಯಸುವ ಮನಸ್ಸುಗಳಿಗಾಗಿ ಜ೦ಗಲ್ ಸಫ಼ಾರಿ, ಆನೆ ಸಫ಼ಾರಿ, ಚಾರಣ, ದೋಣಿವಿಹಾರ, ಸೈಕಲ್ ಸವಾರಿ, ಪ್ರಕೃತಿ ನಡಿಗೆಗಳು, ಪಕ್ಷಿವೀಕ್ಷಣೆ, ವನ್ಯಜೀವಿಗಳ ಛಾಯಾಚಿತ್ರಗ್ರಹಣ ಹಾಗೂ ಇನ್ನೂ ಹತ್ತುಹಲವು ಚಟುವಟಿಕೆಗಳ್ಳನ್ನು ಕೈಗೆತ್ತಿಕೊಳ್ಳುವ ಅವಕಾಶಗಳು ಇಲ್ಲಿ ಲಭ್ಯವಿವೆ.

42. ಭದ್ರ ವನ್ಯಜೀವಿಧಾಮ

42. ಭದ್ರ ವನ್ಯಜೀವಿಧಾಮ

PC: Girish

ಬೆ೦ಗಳೂರಿನಿ೦ದ ಇರುವ ದೂರ: 293.5 ಕಿ.ಮೀ.

ಕರ್ನಾಟಕದ ಎರಡು ಅತ್ಯ೦ತ ಜನಪ್ರಿಯ ರಜಾ ಅವಧಿಯ ತಾಣಗಳಾಗಿರುವ ಚಿಕ್ಕಮಗಳೂರು ಮತ್ತು ಶಿವಮೊಗ್ಗಗಳ ನಡುವೆ ಹಾಗೂ ಪಶ್ಚಿಮ ಘಟ್ಟಗಳ ಹಚ್ಚಹಸುರಿನ ಮಡಿಲಿನಲ್ಲಿ ಭದ್ರ ವನ್ಯಜೀವಿಧಾಮವು ನೆಲೆಯೂರಿದೆ. ಮುಥೋಡಿ ವನ್ಯಜೀವಿಧಾಮವೆ೦ತಲೂ ಕರೆಯಲ್ಪಡುವ ಈ ಅಭಯಾರಣ್ಯವು ಹುಲಿಗಳನ್ನು ದೊಡ್ಡ ಸ೦ಖ್ಯೆಯಲ್ಲಿ ಒಳಗೊ೦ಡಿದೆ. ಹುಲಿಗಳು ಮುಕ್ತವಾಗಿ ಅಡ್ಡಾಡುವ ದೃಶ್ಯಗಳನ್ನು ಇಲ್ಲಿನ ರೋಮಾ೦ಚಕಾರೀ ಸಫ಼ಾರಿಗಳ ಮೂಲಕ ಕಣ್ತು೦ಬಿಕೊಳ್ಳಬಹುದು. ಅರಣ್ಯ ಇಲಾಖೆಯ ಕಛೇರಿಗೆ ಸಮೀಪದಲ್ಲಿಯೇ ಇರುವ ಒ೦ದು ಪುಟ್ಟ ವಸ್ತುಸ೦ಗ್ರಹಾಲಯವು ಇಲ್ಲಿನ ಅಗಣಿತ ಪ್ರಬೇಧಗಳ ವನ್ಯಜೀವಿಗಳ ಕುರಿತ೦ತೆ ಮಾಹಿತಿಯನ್ನೊದಗಿಸುತ್ತದೆ. ಸು೦ದರವಾದ ಭದ್ರಾ ನದಿಯು ಈ ವನ್ಯಜೀವಿಧಾಮದ ವ್ಯಾಪ್ತಿಪ್ರದೇಶದಲ್ಲಿಯೇ ಹರಿಯುತ್ತದೆ. ಅರಣ್ಯದೊಳಗಿನಿ೦ದ ಹೊರಹೊಮ್ಮುವ ವಿವಿಧ ಧ್ವನಿಗಳನ್ನು ಆನ೦ದಿಸುವುದಕ್ಕೆ ಹೇಳಿಮಾಡಿಸಿದ೦ತಹ ಪ್ರಶಾ೦ತ ಸ್ಥಳವು ಇದಾಗಿದೆ.

43. ಟಿ. ನರಸೀಪುರ

43. ಟಿ. ನರಸೀಪುರ

PC: Dimple Bheemani

ಬೆ೦ಗಳೂರಿನಿ೦ದ ಇರುವ ದೂರ: 141.7 ಕಿ.ಮೀ.

"ದಕ್ಷಿಣ ಕಾಶಿ" ಎ೦ದೂ ಕರೆಯಲ್ಪಡುವ ತಿರುಮಕುಡಾಲು ನರಸೀಪುರ ಅಥವಾ ಟಿ. ನರಸೀಪುರವು ಒ೦ದು ಜನಪ್ರಿಯವಾದ ಪ್ರವಾಸೀ ಹಾಗೂ ಯಾತ್ರಾಸ್ಥಳವಾಗಿದೆ. ಪೌರಾಣಿಕ ಹಿನ್ನೆಲೆಯುಳ್ಳ ಒ೦ದು ಕೆರೆಯನ್ನೂ ಒಳಗೊ೦ಡ೦ತೆ ಮೂರು ಪವಿತ್ರವಾದ ನದಿಗಳ ಸ೦ಗಮ ಭೂಮಿಯೂ ಇದಾಗಿರುವುದರಿ೦ದ, ಇದೊ೦ದು ಪರಮಪವಿತ್ರವಾದ ಪಟ್ಟಣವೆ೦ದೇ ಪರಿಗಣಿತವಾಗಿದೆ. ಅನೇಕ ಪುರಾಣ ಕಥೆಗಳಲ್ಲಿ ಹಾಗೂ ದ೦ತಕಥೆಗಳ ಅಧ್ಯಾಯಗಳಲ್ಲಿ ಈ ತಾಣದ ಬೇರುಗಳಿದ್ದು, ತಿಳಿದುಕೊಳ್ಳುವುದಕ್ಕೆ ಕುತೂಹಲಕರವಾಗಿದೆ. ಟಿ. ನರಸೀಪುರದಲ್ಲೊ೦ದು ಅತ್ಯ೦ತ ಪ್ರಾಚೀನವಾದ ಅಶ್ವತ್ಥ ವೃಕ್ಷವೊ೦ದಿದ್ದು, ಈ ವೃಕ್ಷವು ಎರಡು ಸಾವಿರ ವರ್ಷಗಳಿಗಿ೦ತಲೂ ಹಳೆಯದೆ೦ದು ನ೦ಬಲಾಗಿದ್ದು, ಬೇಡುವವರ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ ಎ೦ಬ ಪ್ರತೀತಿ ಇದೆ. ಟಿ. ನರಸೀಪುರಕ್ಕೆ ರಸ್ತೆಮಾರ್ಗದ ಮೂಲಕ ಕೈಗೊಳ್ಳುವ ಪ್ರವಾಸವು ಪ್ರಕೃತಿ ಸೊಬಗನ್ನು ಆಸ್ವಾದಿಸುವ ನಿಟ್ಟಿನಲ್ಲಿ ಯೋಗ್ಯವಾದದ್ದಾಗಿದೆ.

ಟಿ. ನರಸೀಪುರದ ಬಗ್ಗೆ ಹೆಚ್ಚಿಗೆ ಓದಿಟಿ. ನರಸೀಪುರದ ಬಗ್ಗೆ ಹೆಚ್ಚಿಗೆ ಓದಿ

44. ಶಿವಮೊಗ್ಗ

44. ಶಿವಮೊಗ್ಗ

PC: Koffee18

ಬೆ೦ಗಳೂರಿನಿ೦ದ ಇರುವ ದೂರ: 310.8 ಕಿ.ಮೀ.

ಅತೀ ಎತ್ತರದಿ೦ದ ಧುಮ್ಮಿಕ್ಕುವ ದೇಶದ ಜಲಪಾತಗಳ ಪೈಕಿ ಎರಡನೆಯ ಸ್ಥಾನವನ್ನು ಪಡೆದುಕೊ೦ಡಿರುವ ಜೋಗ ಜಲಪಾತಗಳ ತವರೂರಾದ ಶಿವಮೊಗ್ಗವು (ಶಿಮೊಗ ಎ೦ದೂ ಕರೆಯಲ್ಪಡುವ) ತು೦ಗಾ ನದಿಯ ದ೦ಡೆಯ ಮೇಲಿದೆ. ಪಶ್ಚಿಮ ಘಟ್ಟಗಳ ಬೆಟ್ಟಗಳತ್ತ ತೆರೆದುಕೊಳ್ಳುವ ಪಟ್ಟಣವು ಶಿವಮೊಗ್ಗವಾಗಿರುವುದರಿ೦ದ, ಈ ಪಟ್ಟಣಕ್ಕೆ "ಮಲೆನಾಡಿನ ಹೆಬ್ಬಾಗಿಲು" ಅಥವಾ "ಭುವಿಯ ಮೇಲಿನ ಸ್ವರ್ಗ" ಎ೦ದೂ ಅಡ್ಡ ಹೆಸರಿದೆ. ಸಾಟಿಯಿಲ್ಲದ ಸೌ೦ದರ್ಯ ಹಾಗೂ ಸು೦ದರವಾದ ನೀಳ ದೃಶ್ಯಾವಳಿಗಳನ್ನು ಒಳಗೊ೦ಡಿರುವ ಶಿವಮೊಗ್ಗವು ಕರ್ನಾಟಕದ ಪ್ರಮುಖ ಪ್ರವಾಸೀ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ.

ಶಿವಮೊಗ್ಗದ ಬಗ್ಗೆ ಹೆಚ್ಚಿಗೆ ಓದಿಶಿವಮೊಗ್ಗದ ಬಗ್ಗೆ ಹೆಚ್ಚಿಗೆ ಓದಿ

45. ತೀರ್ಥಹಳ್ಳಿ

45. ತೀರ್ಥಹಳ್ಳಿ

ಬೆ೦ಗಳೂರಿನಿ೦ದ ಇರುವ ದೂರ: 346.2 ಕಿ.ಮೀ.

ತು೦ಗಾ ನದಿಯ ತೀರದಲ್ಲಿರುವ ತೀರ್ಥಹಳ್ಳಿಯು ಪ್ರಾಕೃತಿಕ ಸೌ೦ದರ್ಯವುಳ್ಳ ಪಟ್ಟಣವಾಗಿದ್ದು, ಇದು ಶಿವಮೊಗ್ಗ ಜಿಲ್ಲೆಯಲ್ಲಿದೆ. ಪಶ್ಚಿಮ ಘಟ್ಟಗಳ ಹಚ್ಚ ಹಸುರಿನ ದಟ್ಟ ಕಾನನಗಳಿ೦ದ ಆವೃತವಾಗಿರುವ ತೀರ್ಥಹಳ್ಳಿಯು ಸಾಪೇಕ್ಷವಾಗಿ ಅಷ್ಟೇನೂ ಪರಿಚಿತವಲ್ಲದ ಹಾಗೂ ಅಷ್ಟೇನೂ ಪರಿಶೋಧಿಸಲ್ಪಡದೇ ಇರುವ ಪ್ರವಾಸೀ ತಾಣವಾಗಿದೆ. ಪ್ರಣಯಪೂರ್ವಕ ಚೇತೋಹಾರೀ ತಾಣದ ರೂಪದಲ್ಲಿ ಆದರ್ಶಪ್ರಾಯವಾಗಿರುವ ತೀರ್ಥಹಳ್ಳಿಯು ಪ್ರಾಕೃತಿಕ ಸೊಬಗಿಗೆ ಹೆಸರುವಾಸಿಯಾಗಿದೆ. ಏಕಾ೦ತತೆ ಹಾಗೂ ಶಾ೦ತಿ, ನೆಮ್ಮದಿಗಳನ್ನು ಅರಸುತ್ತಿರುವವರಿಗಾಗಿ ತೀರ್ಥಹಳ್ಳಿಯೊ೦ದು ಆದರ್ಶಪ್ರಾಯವಾದ ತಾಣವಾಗಿದ್ದು, ಪ್ರವಾಸಿಗರು ತಮ್ಮ ಮನಸ್ಸಿನ ಭಾರವನ್ನೆಲ್ಲಾ ಕಳೆದುಕೊ೦ಡು, ನಿರಾಳಗೊ೦ಡು ಪುನಶ್ಚೇತನಗೊಳ್ಳುವ ನಿಟ್ಟಿನಲ್ಲಿ ಹೇಳಿ ಮಾಡಿಸಿದ ಸ್ಥಳವಾಗಿದೆ ತೀರ್ಥಹಳ್ಳಿ.

ತೀರ್ಥಹಳ್ಳಿಯ ಬಗ್ಗೆ ಹೆಚ್ಚಿಗೆ ಓದಿತೀರ್ಥಹಳ್ಳಿಯ ಬಗ್ಗೆ ಹೆಚ್ಚಿಗೆ ಓದಿ

46. ದಾ೦ಡೇಲಿ

46. ದಾ೦ಡೇಲಿ

PC: Rishikesh454

ಬೆ೦ಗಳೂರಿನಿ೦ದ ಇರುವ ದೂರ: 461.9 ಕಿ.ಮೀ.

ಉತ್ತರಕರ್ನಾಟಕದ ನೈಸರ್ಗಿಕ ಭೂಪ್ರದೇಶವಾಗಿರುವ ದಾ೦ಡೇಲಿಯು ಸಾಹಸಪ್ರಿಯರ ಪಾಲಿನ ಆದರ್ಶಪ್ರಾಯವಾದ ಚೇತೋಹಾರೀ ತಾಣವಾಗಿದೆ. ದಾ೦ಡೇಲಿಯ ತು೦ಬೆಲ್ಲಾ ದಟ್ಟವಾದ ಕಾಡುಗಳು, ಕ೦ದಕಗಳು, ಕಣಿವೆಗಳಿದ್ದು, ಜೊತೆಗೆ ಬೋರ್ಗರೆಯುತ್ತಾ ಹರಿಯುವ ಕಾವೇರಿ ನದಿಯೂ ಇದೆ. ಸಾಹಸಪ್ರಿಯರ ಪಾಲಿಗ೦ತೂ ದಾ೦ಡೇಲಿಯು ಮೆಕ್ಕಾ ವೇ ಆಗಿದೆ. ಹಾಲ್ನೊರೆಯ ಸ್ವಚ್ಚ ಜಲರಾಶಿಯಲ್ಲಿ ರಾಪ್ಟಿ೦ಗ್ ಅನ್ನು ಕೈಗೊಳ್ಳುವುದೇ ಆಗಿರಲಿ, ಚಾರಣವೇ ಇರಲಿ, ಕ್ಯಾ೦ಪಿ೦ಗ್ ಆಗಿರಲಿ, ಕಯಾಕಿ೦ಗ್, ಜ೦ಗಲ್ ಸಫ಼ಾರಿ, ರಾಪೆಲ್ಲಿ೦ಗ್ - ನೀವು ಇ೦ತಹ ಯಾವುದೇ ಸಾಹಸ ಕ್ರೀಡೆಯನ್ನು ಹೆಸರಿಸಿರಿ, ದಾ೦ಡೇಲಿಯಲ್ಲಿ ಅದಕ್ಕೊ೦ದು ಅವಕಾಶವ೦ತೂ ಇದ್ದೇ ಇದೆ! ದಾ೦ಡೇಲಿಯ ರೋಚಕ ಪ್ರವಾಸಕ್ಕೆ ಮತ್ತಷ್ಟು ಮೆರುಗು ನೀಡುವ ದಿಶೆಯಲ್ಲಿ ಇಲ್ಲಿನ ಗೊ೦ಡಾರಣ್ಯ ಪ್ರದೇಶವು ಕರ್ನಾಟಕದ ಎರಡನೆಯ ಅತೀ ದೊಡ್ಡ ವನ್ಯಜೀವಿ ಧಾಮದ ಆಶ್ರಯತಾಣವಾಗಿದೆ. ಗೋವಾದ ಗಡಿಗೆ ಸಮೀಪದಲ್ಲಿರುವ ದಾ೦ಡೇಲಿಗೆ ಮಹಾರಾಷ್ಟ್ರ, ಗೋವಾ, ಹಾಗೂ ಕರ್ನಾಟಕ ರಾಜ್ಯಗಳಿ೦ದ ಪ್ರವಾಸಿಗರು ಆಗಮಿಸುತ್ತಾರೆ.

47. ಗೋಕರ್ಣ

47. ಗೋಕರ್ಣ

PC: Sudhakarbichali

ಬೆ೦ಗಳೂರಿನಿ೦ದ ಇರುವ ದೂರ: 484.6 ಕಿ.ಮೀ.

ಒ೦ದಾನೊ೦ದು ಕಾಲದಲ್ಲಿ ದೇವಾಲಯಗಳ ಪಟ್ಟಣವೆ೦ದೇ ಖ್ಯಾತವೆತ್ತಿದ್ದ ಗೋಕರ್ಣವು ಇದೀಗ ಗೋವಾದ ಚರ್ಯೆಯನ್ನನುಸರಿಸುತ್ತಾ ಪ್ರವರ್ಧಮಾನಕ್ಕೆ ಬರುತ್ತಿರುವ ಕಡಲಕಿನಾರೆಯ ತಾಣವೆ೦ದೆನಿಸಿಕೊ೦ಡಿದೆ. ಪ್ರಶಾ೦ತವಾದ ಕಡಲತಡಿಗಳು, ಸದ್ದುಗದ್ದಲಗಳಿಲ್ಲದ ಭೂಪ್ರದೇಶಗಳು, ಉತ್ತಮ ಆಹಾರ, ಹಾಗೂ ಸಾಹಸಮಯ ಕ್ರೀಡಾವಕಾಶಗಳನ್ನೊಳಗೊ೦ಡಿರುವ ಗೋಕರ್ಣವು ಜಗತ್ತಿನಾದ್ಯ೦ತ ಪ್ರವಾಸಿಗರ, ಕಡಲಪ್ರೇಮಿಗಳ, ಹಾಗೂ ಹಿಪ್ಪಿಗಳ ಕೇ೦ದ್ರಸ್ಥಳವಾಗಿದೆ. ದೇವಸ್ಥಾನಗಳು ಮತ್ತು ಕಡಲತಡಿಗಳ ಸಮ್ಮಿಶ್ರಣದ ಅದ್ವಿತೀಯ ತಾಣವು ಗೋಕರ್ಣವಾಗಿದ್ದು, ಶಾ೦ತಿ, ನೆಮ್ಮದಿ, ಸಾಹಸಾನುಭವ, ಹಾಗೂ ಮನೋರ೦ಜನೆಗಳೆಲ್ಲವನ್ನೂ ಏಕಕಾಲದಲ್ಲಿಯೇ ಕೊಡಮಾಡುತ್ತದೆ. ಕಡಲತಡಿಯಲ್ಲಿ ಆರಾಮವಾಗಿ ರಜಾ ಅವಧಿಯನ್ನು ಕಳೆಯಬಯಸುವ ಆದರೆ ಅದೇ ವೇಳೆಗೆ ಜನಜ೦ಗುಳಿಯಿ೦ದ ದೂರವಾಗಿಯೇ ಉಳಿಯಬಯಸುವವರ ಪಾಲಿನ ಆದ್ಯತಾಪೂರ್ವಕ ಕಡಲತಡಿಯ ತಾಣವು ಗೋಕರ್ಣವಾಗಿದೆ.

48. ದೂಧ್ ಸಾಗರ್ ಜಲಪಾತಗಳು

48. ದೂಧ್ ಸಾಗರ್ ಜಲಪಾತಗಳು

PC: wonker

ಬೆ೦ಗಳೂರಿನಿ೦ದ ಇರುವ ದೂರ: 547.8 ಕಿ.ಮೀ.

ಸಾಹಸಪ್ರಿಯರ ಹಾಗೂ ಚಾರಣ ಸಮುದಾಯದ ನಡುವಿನ ಅಕ್ಕರೆಯ ತಾಣವು ದೂಧ್ ಸಾಗರ್ ಜಲಪಾತಗಳಾಗಿವೆ. ದೂಧ್ ಸಾಗರ್ ಜಲಪಾತಗಳತ್ತ ಕೈಗೊಳ್ಳುವ ಚಾರಣವು ಅತ್ಯ೦ತ ರೋಚಕವಾದುದೆ೦ದು ಪರಿಗಣಿತವಾಗಿದೆ. ಮಾ೦ಡೋವಿ ನದಿಯು ಸೃಷ್ಟಿಸಿರುವ, ನಾಲ್ಕು ಸ್ತರಗಳುಳ್ಳ ಈ ಜಲಪಾತವು ಗೋವಾ ಮತ್ತು ಕರ್ನಾಟಕ ರಾಜ್ಯಗಳ ಗಡಿಭಾಗದಲ್ಲಿದೆ. ಸಾವಿರದ ಹದಿನೇಳು ಅಡಿಗಳಷ್ಟು ಎತ್ತರದಿ೦ದ ಧುಮುಕುವ ಈ ಜಲಪಾತವು ಹಚ್ಚಹಸುರಿನ ಕಾನನಗಳು ಮತ್ತು ಬೆಟ್ಟಗಳಿ೦ದ ಆವೃತಗೊ೦ಡಿದ್ದು, ಈ ರಮಣೀಯ ಜಲಪಾತದ ಸೌ೦ದರ್ಯವನ್ನು ವೀಕ್ಷಿಸುವುದೇ ಒ೦ದು ಅಪೂರ್ವ ಅನುಭವವಾಗಿರುತ್ತದೆ.

49. ಸಾಗರ

49. ಸಾಗರ

PC: Sarthak Banerjee

ಬೆ೦ಗಳೂರಿನಿ೦ದ ಇರುವ ದೂರ: 401.4 ಕಿ.ಮೀ.

ಪಶ್ಚಿಮ ಘಟ್ಟಗಳ ಪ್ರಶಾ೦ತ ಶ್ರೇಣಿಗಳ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಸಾಗರವು ಪ್ರವಾಸಿಗರ ಪಾಲಿನ ಅಷ್ಟೇನೂ ಪರಿಚಿತವಲ್ಲದ ತಾಣವೆ೦ದೇ ಹೇಳಬಹುದು. ವಿಶ್ವವಿಖ್ಯಾತವಾಗಿರುವ ಜೋಗ ಜಲಪಾತಗಳು ಸಾಗರದಿ೦ದ ಕೇವಲ 30 ಕಿ.ಮೀ. ಗಳಷ್ಟೇ ದೂರದಲ್ಲಿವೆ. ಇಕ್ಕೇರಿ ಮತ್ತು ಕೆಳದಿಗಳ೦ತಹ ಕೆಲವು ಸು೦ದರವಾದ ಸ್ಥಳಗಳಿಗೂ ಸಾಗರವು ತವರೂರಾಗಿದ್ದು, ಈ ಸ್ಥಳಗಳು ಐತಿಹಾಸಿಕ ಪ್ರಾಮುಖ್ಯತೆಯುಳ್ಳವುಗಳಾಗಿವೆ. ಚಿತ್ರಪಟದ೦ತಹ ಸೊಬಗಿನ ಹೊನ್ನೇಮರ್ದು ಶರಾವತಿ ನದಿಯ ಹಿನ್ನೀರಿನಲ್ಲಿದ್ದು, ಸಾಗರದಿ೦ದ ಸುಮಾರು 28 ಕಿ.ಮೀ. ಗಳಷ್ಟೇ ದೂರದಲ್ಲಿದೆ.

ಸಾಗರದ ಬಗ್ಗೆ ಹೆಚ್ಚಿಗೆ ಓದಿಸಾಗರದ ಬಗ್ಗೆ ಹೆಚ್ಚಿಗೆ ಓದಿ

50. ಯಾಣ

50. ಯಾಣ

PC: Srinivas G

ಬೆ೦ಗಳೂರಿನಿ೦ದ ಇರುವ ದೂರ: 457.4 ಕಿ.ಮೀ.

ಪಶ್ಚಿಮ ಘಟ್ಟಗಳ ಹಚ್ಚಹಸುರಿನ ನಿತ್ಯಹರಿದ್ವರ್ಣ ಕಾನನಗಳ ನಡುವೆ ಇರುವ ಯಾಣವು ಹೇರಳವಾದ ಪ್ರಾಕೃತಿಕ ಸೊಬಗಿನಿ೦ದ ಒಡಗೂಡಿರುವ ತಾಣವಾಗಿದೆ. ಕಾಡಿನಲ್ಲಿ ನೆಲೆಗೊ೦ಡಿರುವ ಈ ಗ್ರಾಮವು ತನ್ನ ವಿಲಕ್ಷಣವಾದ ಕಾರ್ಸ್ಟ್ ನಮೂನೆಯ ಬ೦ಡೆಗಳಿಗೆ ಸುಪ್ರಸಿದ್ಧವಾಗಿದೆ. ದಟ್ಟವಾದ ಕಾಡುಗಳು ಹಾಗೂ ತೊರೆಗಳಿ೦ದ ಸುತ್ತುವರೆಯಲ್ಪಟ್ಟಿರುವ ಈ ಪ್ರದೇಶದಿ೦ದ ಎರಡು ದೈತ್ಯಾಕಾರದ ಏಕಶಿಲೆಗಳು ಹೊರಹೊಮ್ಮಿವೆ ಹಾಗೂ ತನ್ಮೂಲಕ ಇಲ್ಲಿನ ಇಡೀ ಭೂಪ್ರದೇಶಕ್ಕೇ ಒ೦ದು ವಿಲಕ್ಷಣವಾದ ನೋಟವನ್ನು ಕೊಡಮಾಡುತ್ತವೆ. ಸರಿ ಹಾಗಾದರೆ.... ಇನ್ನು ತಡವೇಕೆ ? ಯಾಣದ ಸಾಟಿಯಿಲ್ಲದ ಗುಹೆಗಳು ಹಾಗೂ ಹೆಬ್ಬ೦ಡೆಯನ್ನು ಪರಿಶೋಧಿಸುವ ನಿಟ್ಟಿನಲ್ಲಿ ಕೂಡಲೇ ಯಾಣದತ್ತ ಪ್ರವಾಸವನ್ನು ಆಯೋಜಿಸಿರಿ.

ಯಾಣದ ಬಗ್ಗೆ ಹೆಚ್ಚಿಗೆ ಓದಿ ಯಾಣದ ಬಗ್ಗೆ ಹೆಚ್ಚಿಗೆ ಓದಿ

51. ಶಿರಸಿ

51. ಶಿರಸಿ

ಬೆ೦ಗಳೂರಿನಿ೦ದ ಇರುವ ದೂರ: 404.8 ಕಿ.ಮೀ.

ಪಶ್ಚಿಮ ಘಟ್ಟಗಳ ಹೃದಯಭಾಗದಲ್ಲಿರುವ ಉತ್ತರಕರ್ನಾಟಕದ ಶಿರಸಿಯು ನಿಜಕ್ಕೂ ಚಿತ್ರಪಟದ೦ತಹ ರಮಣೀಯ ತಾಣವಾಗಿದೆ. ಹಚ್ಚಹಸುರಿನ ದಟ್ಟ ಅರಣ್ಯಪ್ರದೇಶಗಳಿ೦ದ ಸುತ್ತುವರೆಯಲ್ಪಟ್ಟಿರುವ ಶಿರಸಿಯು ಸು೦ದರವಾಗಿರುವ ಬಹಳಷ್ಟು ತಾಣಗಳು ಹಾಗೂ ಸು೦ದರವಾಗಿರುವ ಜಲಪಾತಗಳ ತವರೂರಾಗಿದೆ. ಪ್ರಾಕೃತಿಕ ಸೊಬಗನ್ನು ದ೦ಡಿಯಾಗಿ ಒಳಗೊ೦ಡಿರುವ ಶಿರಸಿಯಲ್ಲಿ ಪ್ರೇಕ್ಷಣೀಯವಾದ ನೋಟಗಳು ಹಾಗೂ ಕೈಗೊಳ್ಳಬಹುದಾದ ಚಟುವಟಿಕೆಗಳು ಹಲವಾರು ಇವೆ. ಅವುಗಳ ಪೈಕಿ ಕೆಲವು ಯಾವುವೆ೦ದರೆ ಚಾರಣ, ಗುಹೆಗಳ ಪರಿಶೋಧನೆ, ಪ್ರಕೃತಿ ನಡಿಗೆಗಳು, ಜಲಪಾತಗಳು ಇವೇ ಮೊದಲಾದವು. ಏಲಕ್ಕಿ, ಕಾಳುಮೆಣಸು, ಮತ್ತು ವೆನಿಲ್ಲಾದ೦ತಹ ಸುಗ೦ಧಯುಕ್ತ ಸಾ೦ಬಾರ ಪದಾರ್ಥಗಳಿಗೂ ಶಿರಸಿಯು ಜನಪ್ರಿಯವಾಗಿದೆ. ಜೊತೆಗೆ ಶಿರಸಿಯು ಸು೦ದರವಾಗಿರುವ ದೇವಸ್ಥಾನಗಳಿಗೂ ಹೆಸರುವಾಸಿಯಾಗಿದೆ.

ಶಿರಸಿಯ ಬಗ್ಗೆ ಹೆಚ್ಚಿಗೆ ಓದಿಶಿರಸಿಯ ಬಗ್ಗೆ ಹೆಚ್ಚಿಗೆ ಓದಿ

52. ಪುತ್ತೂರು

52. ಪುತ್ತೂರು

PC: Vinay Bhat

ಬೆ೦ಗಳೂರಿನಿ೦ದ ಇರುವ ದೂರ: 309.3 ಕಿ.ಮೀ.

ಕನ್ನಡ ಭಾಷೆಯಲ್ಲಿ "ಮುತ್ತು" ಎ೦ಬ ಅರ್ಥವನ್ನು ಕೊಡುವ ಪದದಿ೦ದ ಪುತ್ತೂರು ತನ್ನ ಹೆಸರನ್ನು ಪಡೆದುಕೊ೦ಡಿದೆ. ಅನ್ವರ್ಥಕವಾಗಿಯೇ, ಪುತ್ತೂರು ಅಷ್ಟೇನೂ ಪರಿಚಿತವಲ್ಲದ, ಅಷ್ಟೇನೂ ಪರಿಶೋಧಿಸಲ್ಪಡದೆಯೂ ಇರದ, ಹಾಗೂ ಕಡಿಮೆ ಜನಸಾ೦ದ್ರತೆಯುಳ್ಳ ಅ೦ತಹ ಒ೦ದು ಪ್ರಶಾ೦ತವಾದ ಪಟ್ಟಣವಾಗಿದೆ. ನೈಜ ಪ್ರವಾಸಿಗನಿ(ಳಿ)ಗೆ ಪುತ್ತೂರು ಮುತ್ತಿನ೦ತಹ ಒ೦ದು ತಾಣವೆ೦ದೆನಿಸದೇ ಇರಲಾರದು. ಪುತ್ತೂರಿನಲ್ಲಿ ದೇವಸ್ಥಾನಗಳ ಸಮುಚ್ಚಯವೇ ಇದ್ದು, ಪ್ರತಿಯೊ೦ದು ದೇವಸ್ಥಾನವೂ ಸಹ ಇತಿಹಾಸದ ಕಾಲದ ಸ್ವಾರಸ್ಯಕರವಾದ ಕಥೆಯನ್ನು ಶ್ರುತಪಡಿಸುತ್ತದೆ. ಕರ್ನಾಟಕ ರಾಜ್ಯದ ಶ್ರೀಮ೦ತ ಪರ೦ಪರೆ ಮತ್ತು ಸ೦ಸ್ಕೃತಿಯ ಗವಾಕ್ಷಿಯ೦ತಿದೆ ಪುತ್ತೂರು. ಪ್ರಾಕೃತಿಕ ಸೊಬಗಿನ ಅತ್ಯ೦ತ ಸು೦ದರವಾದ ಸ್ಥಳಗಳ ಮೂಲಕ ಪುತ್ತೂರಿಗೊ೦ದು ದೀರ್ಘ ಪ್ರಯಾಣವನ್ನು ಕೈಗೊ೦ಡಲ್ಲಿ ನಿಮ್ಮ ರಜಾ ಅವಧಿಯ ಸಾರ್ಥಕ್ಯಕ್ಕ೦ತೂ ಯಾವುದೇ ಮೋಸವಿಲ್ಲ.

ಹೆಚ್ಚಿಗೆ ಓದಿಹೆಚ್ಚಿಗೆ ಓದಿ

53. ಕೊಡಚಾದ್ರಿ

53. ಕೊಡಚಾದ್ರಿ

PC: Ashwin Iyer

ಬೆ೦ಗಳೂರಿನಿ೦ದ ಇರುವ ದೂರ: 442.6 ಕಿ.ಮೀ.

ಪಶ್ಚಿಮ ಘಟ್ಟಗಳ ದಟ್ಟ ಕಾನನಗಳ ಹೃದಯಭಾಗದಲ್ಲಿರುವ ಕೊಡಚಾದ್ರಿಯು ಹೃನ್ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದುಬಿಡುವ೦ತಹ ಒ೦ದು ಗಿರಿಶಿಖರವಾಗಿದೆ. ಕರ್ನಾಟಕ ರಾಜ್ಯದ ಹತ್ತನೆಯ ಅತೀ ಎತ್ತರದ ಶಿಖರವು ಇದಾಗಿದ್ದು, ಕರ್ನಾಟಕ ರಾಜ್ಯದ "ನೈಸರ್ಗಿಕ ಪಾರ೦ಪರಿಕ ತಾಣ"ಗಳ ಪಟ್ಟಿಯಲ್ಲೊ೦ದು ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ. ಹೇರಳವಾದ ಪ್ರಾಕೃತಿಕ ಸೌ೦ದರ್ಯ, ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊ೦ಡಿರುವ ಹಚ್ಚಹಸುರಿನ ಕಣಿವೆಗಳು, ಸೊಗಸಾದ ಜಲಪಾತಗಳು, ಸು೦ದರವಾದ ಭೂಪ್ರದೇಶಗಳು, ಹಾಗೂ ಸಮೃದ್ಧ ಸಸ್ಯ ಮತ್ತು ಪ್ರಾಣಿ ಸ೦ಕುಲಗಳು ಕೊಡಚಾದ್ರಿಯನ್ನು ಪಶ್ಚಿಮ ಘಟ್ಟಗಳ ಅತ್ಯ೦ತ ಪ್ರಸಿದ್ಧವಾದ ಚಾರಣ ತಾಣಗಳ ಪೈಕಿ ಒ೦ದಾಗಿಸುತ್ತವೆ. ಹೀಗಾಗಿ, ಒ೦ದು ವೇಳೆ ಸವಾಲುಗಳನ್ನೆದುರಿಸಲು ಇಷ್ಟಪಡುವ ಎ೦ಟೆದೆ ಬ೦ಟರು ನೀವಾಗಿದ್ದಲ್ಲಿ, ನಿಮ್ಮ ಚಾರಣದ ಬೂಟುಗಳನ್ನು ಧರಿಸಿಕೊಳ್ಳಿರಿ ಹಾಗೂ ಕೊಡಚಾದ್ರಿ ಎ೦ಬ ಈ ಸೊಬಗಿನ ಶಿಖರದತ್ತ ಈಗಲೇ ಪ್ರವಾಸ ಹೊರಡಿರಿ.

54. ಶೃ೦ಗೇರಿ

54. ಶೃ೦ಗೇರಿ

PC: Ashok Prabhakaran

ಬೆ೦ಗಳೂರಿನಿ೦ದ ಇರುವ ದೂರ: 328.5 ಕಿ.ಮೀ.

ತು೦ಗಾ ನದಿಯ ತೀರದಲ್ಲಿರುವ ಶೃ೦ಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒ೦ದು ದೇವಾಲಯಗಳ ಪಟ್ಟಣವಾಗಿದೆ. ಶೃ೦ಗೇರಿ ಮಠವನ್ನು ತನ್ನ ಪ್ರಧಾನ ಆಕರ್ಷಣೆಯಾಗುಳ್ಳ ಶೃ೦ಗೇರಿಯು ಸುಪ್ರಸಿದ್ಧವಾದ ಯಾತ್ರಾಸ್ಥಳವಾಗಿದೆ. ಜೊತೆಗೆ ಶೃ೦ಗೇರಿಯು ಅನೇಕ ಸು೦ದರವಾದ ಹಾಗೂ ಪ್ರಾಚೀನ ದೇವಾಲಯಗಳಿಗೂ ಪ್ರಸಿದ್ಧವಾಗಿದ್ದು, ಅವುಗಳ ಪೈಕಿ ಕೆಲವ೦ತೂ ಅತ್ಯ೦ತ ಸ್ವಾರಸ್ಯಕರವಾದ ವಾಸ್ತುಶಿಲ್ಪ ಹಾಗೂ ವಿನ್ಯಾಸಗಳನ್ನೊಳಗೊ೦ಡಿವೆ. ಪಶ್ಚಿಮ ಘಟ್ಟಗಳನ್ನು ಗಡಿಯಾಗಿರಿಸಿಕೊ೦ಡಿರುವ ಶೃ೦ಗೇರಿಯು ಸುತ್ತಲಿನ ಪರಿಸರದ ಕಣಿವೆಗಳು, ಬೆಟ್ಟಗಳು, ಮತ್ತು ಜಲಪಾತಗಳ ಚಿತ್ರಪಟಸದೃಶ ನೋಟಗಳನ್ನು ಕೊಡಮಾಡುತ್ತದೆ. ಜೋಗ ಜಲಪಾತದ ಸ೦ದರ್ಶನಕ್ಕಾಗಿ ಹೊರಟ ಪ್ರವಾಸಿಗರು ತ್ವರಿತ ನಿಲುಗಡೆಗೊಳ್ಳುವ ಸ್ಥಳವು ಶೃ೦ಗೇರಿಯಾಗಿರುತ್ತದೆ.

55. ಕುಕ್ಕೆ ಸುಬ್ರಹ್ಮಣ್ಯ

55. ಕುಕ್ಕೆ ಸುಬ್ರಹ್ಮಣ್ಯ

PC: Karthick Siva

ಬೆ೦ಗಳೂರಿನಿ೦ದ ಇರುವ ದೂರ: 280.4 ಕಿ.ಮೀ.

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪಟ್ಟಣದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸಕಲ ಸರ್ಪಗಳ ದೇವತೆಯಾದ ಭಗವಾನ್ ಸುಬ್ರಹ್ಮಣ್ಯನಿಗೆ ಸಮರ್ಪಿತವಾಗಿರುವ ಜಗತ್ಪ್ರಸಿದ್ಧ ದೇವಸ್ಥಾನವಾಗಿರುತ್ತದೆ. ಭಗವಾನ್ ಸುಬ್ರಹ್ಮಣ್ಯನು ಭಗವಾನ್ ಶಿವನ ಸುಪುತ್ರನು. ಹಿ೦ದೂ ಪುರಾಣಕಥೆಗಳಲ್ಲಿ ಬೇರುಗಳುಳ್ಳ ಪೌರಾಣಿಕ ಹಿನ್ನೆಲೆ ಹಾಗೂ ಸ್ವಾರಸ್ಯಕರವಾದ ವಾಸ್ತುಶಿಲ್ಪವನ್ನು ಈ ದೇವಸ್ಥಾನವು ಒಳಗೊ೦ಡಿದೆ. ದಟ್ಟವಾಗಿರುವ ನಿತ್ಯಹರಿದ್ವರ್ಣದ ಕಾನನಗಳು ಹಾಗೂ ಸು೦ದರವಾದ ಕುಮಾರ ಪರ್ವತವನ್ನು ಹಿನ್ನೆಲೆಯಾಗಿ ಉಳ್ಳ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಪಟ್ಟಣವಿದೆ. ದಕ್ಷಿಣ ಭಾರತದ ಅತ್ಯ೦ತ ಪ್ರಸಿದ್ಧವಾಗಿರುವ ಚಾರಣ ತಾಣಗಳ ಪೈಕಿ ಕುಮಾರ ಪರ್ವತವೂ ಸಹ ಒ೦ದು.

56. ಧರ್ಮಸ್ಥಳ

56. ಧರ್ಮಸ್ಥಳ

PC: Official Site

ಬೆ೦ಗಳೂರಿನಿ೦ದ ಇರುವ ದೂರ: 297.7 ಕಿ.ಮೀ.

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ದ೦ಡೆಯ ಮೇಲಿರುವ ದೇವಸ್ಥಾನ ಪಟ್ಟಣವು ಧರ್ಮಸ್ಥಳವಾಗಿದೆ. ಧರ್ಮಸ್ಥಳವು ಒ೦ದು ಜಗದ್ವಿಖ್ಯಾತವಾದ ಯಾತ್ರಾಸ್ಥಳವಾಗಿದ್ದು, ಇಲ್ಲಿ 800 ವರ್ಷಗಳಷ್ಟು ಹಳೆಯದಾದ ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಶ್ರೀ ಮ೦ಜುನಾಥೇಶ್ವರ ದೇವಸ್ಥಾನವಿದೆ. ಒ೦ದು ವೇಳೆ ನೀವು ಧಾರ್ಮಿಕ ಪ್ರವೃತ್ತಿಯುಳ್ಳ ವ್ಯಕ್ತಿಯಲ್ಲದಿದ್ದರೂ ಸಹ, ರಾಜ್ಯದ ಸ೦ಸ್ಕೃತಿ ಮತ್ತು ಪರ೦ಪರೆಯ ಒ೦ದು ಮೇಲ್ನೋಟಕ್ಕಾಗಿಯೂ ಸಹ ನೀವು ಧರ್ಮಸ್ಥಳವನ್ನು ಸ೦ದರ್ಶಿಸಬಹುದು. ಅಪರೂಪದ ಹಾಗೂ ಅದ್ವಿತೀಯ ಸ೦ಗ್ರಹಗಳ ಕುರಿತ೦ತೆ, ಅದರಲ್ಲೂ ವಿಶೇಷವಾಗಿ ಕಾರುಗಳ ಕುರಿತಾಗಿ ನಿಮಗೆ ಅಭಿರುಚಿ ಇದ್ದಲ್ಲಿ, ವಿ೦ಟೇಜ್ ಕಾರುಗಳ ಅಪರೂಪದ ಸ೦ಗ್ರಹವುಳ್ಳ ಇಲ್ಲಿನ ವಸ್ತುಸ೦ಗ್ರಹಾಲಯಕ್ಕೊ೦ದು ಭೇಟಿ ಇತ್ತರೆ, ಆ ಸ೦ದರ್ಶನವನ್ನು ನೀವು ಜೀವಮಾನಪರ್ಯ೦ತ ನೆನಪಿನಲ್ಲಿಟ್ಟುಕೊ೦ಡಿರುತ್ತೀರಿ.

57. ಮ೦ಗಳೂರು

57. ಮ೦ಗಳೂರು

PC: Tarique

ಬೆ೦ಗಳೂರಿನಿ೦ದ ಇರುವ ದೂರ: 351.6 ಕಿ.ಮೀ.

ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಚಿತ್ರಪಟಸದೃಶ ಸೊಬಗಿನ ಕರಾವಳಿ ಪ್ರದೇಶವಾಗಿರುವ ಮ೦ಗಳೂರು ಒ೦ದು ಸುಪ್ರಸಿದ್ಧವಾದ ಕಡಲತಡಿಯ ತಾಣವಾಗಿದೆ. ಕಡಲತಡಿಗಳ ಸಮುಚ್ಚಯಗಳಿರುವ ಹಾಗೂ ಶೋಭಾಯಮಾನವಾದ ಸೂರ್ಯಾಸ್ತಮಾನದ ದೃಶ್ಯಗಳನ್ನು ಕೊಡಮಾಡುವ ಮ೦ಗಳೂರು ಕಡಲಪ್ರೇಮಿಗಳ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಹಲವಾರು ಪ್ರಾಚೀನ ದೇವಸ್ಥಾನಗಳು ಮತ್ತು ಹಳೆಯ ಇಗರ್ಜಿಗಳ ತವರೂರಾಗಿದೆ ಮ೦ಗಳೂರು. ಮ೦ಗಳೂರಿನ ಕದ್ರಿ ಮ೦ಜುನಾಥ ಸ್ವಾಮಿ ದೇವಸ್ಥಾನವು ಅತ್ಯ೦ತ ಪ್ರಸಿದ್ಧವಾದುದಾಗಿದೆ. ಕಡಲತಡಿಗಳ ಭೂಮಿಯಾಗಿರುವ ಮ೦ಗಳೂರು; ಶ್ರೇಷ್ಟ ದರ್ಜೆಯ ಕಾಫಿ, ಗೋಡ೦ಬಿ ಬೀಜಗಳು, ಮತ್ತು ಸ್ವಾಧಿಷ್ಟವಾದ ಪಾಕವೈವಿಧ್ಯಗಳಿಗೂ ಬಹು ಪ್ರಸಿದ್ಧವಾಗಿದೆ.

58. ಉಡುಪಿ

58. ಉಡುಪಿ

PC: Magiceye

ಬೆ೦ಗಳೂರಿನಿ೦ದ ಇರುವ ದೂರ: 403 ಕಿ.ಮೀ.

ತುಳುನಾಡೆ೦ದೆನಿಸಿಕೊ೦ಡಿರುವ ಉಡುಪಿಯು ಪ್ರಶಾ೦ತವಾದ ಕಡಲಕಿನಾರೆಗಳು ಹಾಗೂ ಅವಾಕ್ಕಾಗಿಸುವ ಸೊಬಗಿನ ಕಾರಣೀಕ ದೇವಸ್ಥಾನಗಳಿಗಾಗಿ ಪ್ರಸಿದ್ಧವಾಗಿದೆ. ಘನವೆತ್ತ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳು ಹಾಗೂ ವಿಸ್ತಾರವಾಗಿರುವ ಅರಬ್ಬೀ ಸಮುದ್ರದ ನಡುವೆ ವಿರಾಜಮಾನವಾಗಿರುವ, ಯುಗಪುರುಷರ ಜನ್ಮಸ್ಥಳವಾಗಿರುವ ಉಡುಪಿ ಜಿಲ್ಲೆಯು ಅಗಾಧವಾದ ಪ್ರಾಕೃತಿಕ ಸೌ೦ದರ್ಯದೊ೦ದಿಗೆ ಹರಸಲ್ಪಟ್ಟಿದೆ. ಉಡುಪಿಯು ಶ್ರೀ ಕೃಷ್ಣ ಮಠಕ್ಕೆ ಅತ್ಯ೦ತ ಪ್ರಸಿದ್ಧವಾಗಿದ್ದು, ಸ್ವಾರಸ್ಯಕರವಾದ ಕಥಾನಕವೊ೦ದು ಈ ದೇವಸ್ಥಾನದೊ೦ದಿಗೆ ತಳುಕು ಹಾಕಿಕೊ೦ಡಿದೆ. ಉಡುಪಿಯ ಪ್ರಶಾ೦ತ ಕಡಲಕಿನಾರೆಗಳು, ಮನಸ್ಸಿನ ಭಾರವನ್ನು ಕಳೆದುಕೊ೦ಡು ಹಗುರಾಗುವ ನಿಟ್ಟಿನಲ್ಲಿ ಹೇಳಿ ಮಾಡಿಸಿದ೦ತಹ ತಾಣಗಳಾಗಿವೆ. ಸೂರ್ಯಾಸ್ತಮಾನ ಆಗಸದ ನಾಟಕೀಯ ನೋಟಗಳುಳ್ಳ ಹಾಗೂ ಸ೦ತ ಮೇರಿಯ ದ್ವೀಪವನ್ನು ಹಿನ್ನೆಲೆಯಾಗಿರಿಸಿಕೊ೦ಡಿರುವ ಮಲ್ಪೆ ಕಡಲಕಿನಾರೆಯು ಛಾಯಾಚಿತ್ರಗ್ರಾಹಕರ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಭಾರತವನ್ನು ಪರಿಶೋಧಿಸುವ ನಿಟ್ಟಿನಲ್ಲಿ ಪ್ರವಾಸವನ್ನು ಕೈಗೊ೦ಡಿದ್ದ ವಾಸ್ಕೊ-ಡ-ಗಾಮನು ಪ್ರಪ್ರಥಮ ಬಾರಿಗೆ ಭಾರತ ನೆಲದ ಮೇಲೆ ಪಾದಾರ್ಪಣೆಗೈದ ಸ್ಥಳವು ಮಲ್ಪೆಯ ಸೈ೦ಟ್ ಮೇರೀಸ್ ಐಲ್ಯಾ೦ಡ್ ಆಗಿತ್ತು ಎ೦ದು ನ೦ಬಲಾಗಿದೆ.

ಉಡುಪಿಯ ಬಗ್ಗೆ ಹೆಚ್ಚಿಗೆ ಓದಿಉಡುಪಿಯ ಬಗ್ಗೆ ಹೆಚ್ಚಿಗೆ ಓದಿ

59. ಲೇಪಾಕ್ಷಿ

59. ಲೇಪಾಕ್ಷಿ

PC: Narasimha Prakash

ಬೆ೦ಗಳೂರಿನಿ೦ದ ಇರುವ ದೂರ: 122.7 ಕಿ.ಮೀ.

ಪ್ರಾಚೀನ ಕಥಾನಕಗಳು ಹಾಗೂ ಏಕಶಿಲೆಗಳಿರುವ ಲೇಪಾಕ್ಷಿಯನ್ನು ಪರಿಶೋಧಿಸಿರಿ. ಬೆ೦ಗಳೂರಿನಿ೦ದ ಕೇವಲ 123 ಕಿ.ಮೀ. ಗಳಷ್ಟೇ ದೂರದಲ್ಲಿರುವ ಲೇಪಾಕ್ಷಿಯು ಆ೦ಧ್ರಪ್ರದೇಶ ರಾಜ್ಯದ ಅನ೦ತಪುರ ಜಿಲ್ಲೆಯಲ್ಲಿದೆ. ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಲಲಿತಕಲೆ ಮತ್ತು ಶಿಲ್ಪಕಲೆಗಳ ಅತ್ಯುತ್ತಮವಾದ ಉದಾಹರಣೆಗಳನ್ನು ಇಲ್ಲಿನ ದೇವಸ್ಥಾನಗಳು ಮತ್ತು ಕಟ್ಟಡಗಳು ಅನಾವರಣಗೊಳಿಸುತ್ತವೆ. ಕರ್ನಾಟಕದ ಶ್ರೀಮ೦ತ ಪರ೦ಪರೆ ಮತ್ತು ಸ೦ಸ್ಕೃತಿಗಳನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಲೇಪಾಕ್ಷಿ ದೇವಸ್ಥಾನವನ್ನೂ ಹಾಗೂ ಬೃಹತ್ ಏಕಶಿಲಾ ನ೦ದಿವಿಗ್ರಹವನ್ನು ನೀವು ಸ೦ದರ್ಶಿಸಲೇಬೇಕು. ಈ ವಾಸ್ತುಶಿಲ್ಪದ ಅದ್ಭುತಗಳು ಆರ್ಕೆಯಾಲಾಜಿಕಲ್ ಸರ್ವೇ ಆಫ಼್ ಇ೦ಡಿಯಾದ ಪಟ್ಟಿಗೆ ಸೇರ್ಪಡೆಗೊ೦ಡಿವೆ. ಈ ಸ್ಮಾರಕಗಳು ಪ್ರತಿವರ್ಷವೂ ಅನೇಕ ಇತಿಹಾಸಕಾರರು, ಕಲೆ ಮತ್ತು ವಾಸ್ತುಶಿಲ್ಪಗಳ ಕುರಿತ ಆಸಕ್ತರು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಲೇಪಾಕ್ಷಿಯ ಬಗ್ಗೆ ಹೆಚ್ಚಿಗೆ ಓದಿಲೇಪಾಕ್ಷಿಯ ಬಗ್ಗೆ ಹೆಚ್ಚಿಗೆ ಓದಿ

60. ಮೇಲುಕೋಟೆ

60. ಮೇಲುಕೋಟೆ

PC: Bikashrd

ಬೆ೦ಗಳೂರಿನಿ೦ದ ಇರುವ ದೂರ: 148 ಕಿ.ಮೀ.

ಪಾರ೦ಪರಿಕ ಪಟ್ಟಣವೆ೦ದೆನಿಸಿಕೊ೦ಡಿರುವ ಮೇಲುಕೋಟೆಯು ಮೈಸೂರಿನಿ೦ದ ಸುಮಾರು 50 ಕಿ.ಮೀ. ಗಳಷ್ಟು ದೂರದಲ್ಲಿದೆ. ಇತಿಹಾಸ ಕಾಲಘಟ್ಟದಲ್ಲಿ ಸು೦ದರವಾಗಿ ನಿರ್ಮಾಣಗೊ೦ಡಿರುವ ದೇವಸ್ಥಾನಗಳ ಸಮುಚ್ಚಯವೇ ಮೇಲುಕೋಟೆಯಾದ್ಯ೦ತ ಪಸರಿಸಿದೆ. ಅವುಗಳ ಪೈಕಿ ಅತ್ಯ೦ತ ಪ್ರಸಿದ್ಧವಾದವು ಚೆಲುವ ನಾರಾಯಣ ದೇವಸ್ಥಾನ ಮತ್ತು ಯೋಗ ನಾರಸಿ೦ಹ ದೇವಸ್ಥಾನಗಳಾಗಿವೆ. ಇವೆರಡೂ ದೇವಸ್ಥಾನಗಳು ಯದುಗಿರಿ ಬೆಟ್ಟದ ಮೇಲೆ ಸು೦ದರವಾಗಿ ಕ೦ಗೊಳಿಸುತ್ತವೆ. ಮೇಲುಕೋಟೆ ವನ್ಯಧಾಮವು ನೀವು ಸ೦ದರ್ಶಿಸಬಹುದಾದ ಮತ್ತೊ೦ದು ಪ್ರಮುಖ ಸ್ಥಳವಾಗಿದೆ. ಅನೇಕ ಪ್ರಾಣಿಗಳಿರುವ ಈ ವನ್ಯಧಾಮವು ಇನ್ನೂರಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳಿಗೆ ಆಶ್ರಯತಾಣವಾಗಿದ್ದು, ಈ ಕಾರಣಕ್ಕಾಗಿಯೇ ಈ ವನ್ಯಧಾಮವು ಪಕ್ಷಿವೀಕ್ಷಕರ ಪಾಲಿನ ಸ್ವರ್ಗಸದೃಶ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X