Search
  • Follow NativePlanet
Share
» »ವೆಂಗುರ್ಲಾ : ಖಂಡಿತ ನಿರಾಸೆ ಮಾಡದ ಕಡಲಪಟ್ಟಣ!

ವೆಂಗುರ್ಲಾ : ಖಂಡಿತ ನಿರಾಸೆ ಮಾಡದ ಕಡಲಪಟ್ಟಣ!

ಮಹಾರಾಷ್ಟ್ರ ರಾಜ್ಯದ ದಕ್ಷಿಣದಲ್ಲಿರುವ ಕೊಂಕಣ ಕರಾವಳಿಯ ಸಿಂಧುದುರ್ಗ ಜಿಲ್ಲೆಯಲ್ಲಿರುವ ವೆಂಗುರ್ಲಾ ಒಂದು ಪ್ರಸಿದ್ಧ, ಕಡಲ ತೀರದ ಗಮ್ಯ ಪ್ರವಾಸಿ ತಾಣವಾಗಿದೆ

By Vijay

ಮಹಾರಾಷ್ಟ್ರ ರಾಜ್ಯದ ದಕ್ಷಿಣದಲ್ಲಿರುವ ಕೊಂಕಣ ಕರಾವಳಿಯ ಸಿಂಧುದುರ್ಗ ಜಿಲ್ಲೆಯಲ್ಲಿರುವ ವೆಂಗುರ್ಲಾ ಒಂದು ಪ್ರಸಿದ್ಧ, ಕಡಲ ತೀರದ ಗಮ್ಯ ಪ್ರವಾಸಿ ತಾಣವಾಗಿದೆ. ಉತ್ತರ ಗೋವಾದಿಂದ ಕೇವಲ ನೂರು ಕಿ.ಮೀ ಗಳಷ್ಟು ದೂರದಲ್ಲಿ ಈ ಆಕರ್ಷಕ ಪಟ್ಟಣ ನೆಲೆಸಿದೆ.

ಇದರ ವಿಶೇಷತೆ ಎಂದರೆ ಪ್ರಶಾಂತಮಯ ವಾತಾವರಣ ಹಾಗೂ ಶಾಂತ ಕಡಲ ತೀರಗಳು. ಅದರಲ್ಲೂ ವಿಶೇಷವಾಗಿ ಸ್ವಚ್ಛತೆಯಿಂದ ಕೂಡಿರುವ, ಶ್ವೇತ ವರ್ಣದ ಮರಳಿನ ಹಾಗೆಯ ಮೇಲೆ ಸುಂದರವಾಗಿ ಚಾಚಿರುವ ಕಡಲ ತೀರಗಳು.

ವೆಂಗುರ್ಲಾ : ಖಂಡಿತ ನಿರಾಸೆ ಮಾಡದ ಕಡಲಪಟ್ಟಣ!

ಚಿತ್ರಕೃಪೆ: cprogrammer

ಮರಾಠರ ಛತ್ರಪತಿ ಶಿವಾಜಿಯು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ವೆಂಗುರ್ಲಾ ಹೆಚ್ಚು ಜನಪ್ರೀಯತೆ ಪಡೆದಿದ್ದ ಬಂದರು ಪ್ರದೇಶವಾಗಿತ್ತು. ಅಲ್ಲದೆ ವಾಣಿಜ್ಯ ಕೇಂದ್ರವಾಗಿಯೂ ಸಾಕಷ್ಟು ಗಮನಸೆಳೆದಿತ್ತು. ಭೌಗೋಳಿಕವಾಗಿ ವೆಂಗುರ್ಲಾ ಬಲು ವಿಶಿಷ್ಟವಾಗಿ ಕಂಡುಬರುತ್ತದೆ.

ಒಂದೆಡೆ ಅಂದರೆ ಪಶ್ಚಿಮಕ್ಕೆ ವಿಶಾಲವಾದ ಅರಬ್ಬಿ ಸಮುದ್ರವಿದ್ದರೆ ಅದರ ವಿರುದ್ಧ ದಿಕ್ಕಿನಲ್ಲಿ ಕೊಂಕಣ ಭಾಗದಲ್ಲಿ ಬರುವ ಗಿರಿ-ಪರ್ವತಗಳಿಂದ ಇದು ಆವರಿಸಿದೆ. ಹಾಗಾಗಿ ಅದ್ಭುತವಾದ ಪ್ರಾಕೃತಿಕ ಸಮ್ಪತ್ತನ್ನೂ ಸಹ ವೆಂಗುರ್ಲಾ ವರದಾನವಾಗಿ ಪಡೆದಿದೆ ಎಮ್ದರೆ ತಪ್ಪಾಗಲಾರದು.

ವೆಂಗುರ್ಲಾ : ಖಂಡಿತ ನಿರಾಸೆ ಮಾಡದ ಕಡಲಪಟ್ಟಣ!

ಸಾಗರೇಶ್ವರ್ ತೀರ, ಚಿತ್ರಕೃಪೆ: Ankur P

ವಿವಿಧ ಬೆರ್‍ರಿ ಗಿಡಗಳು, ಗೋಡಂಬಿ, ತೆಂಗು, ದ್ರಾಕ್ಷಿ ಹಾಗೂ ಮಾವಿನ ಹಣ್ಣುಗಳಿಗಾಗಿ ವೆಂಗುರ್ಲಾ ಬಲು ಜನಪ್ರೀಯ ತಾಣವೆಂಬುದು ನಿಮಗೆ ಗೊತ್ತಿರಲಿ. ವೆಂಗುರ್ಲಾದ ಉತ್ತರಕ್ಕೆ ದಾಬೋಲಿ, ಪೂರ್ವಕ್ಕೆ ತುಲಾ ಹಾಗೂ ದಕ್ಷಿಣಕ್ಕೆ ಮೋಚೆಮಡ್ ಪರ್ವತಗಳು ಆವರಿಸಿದ್ದು ಅದ್ಭುತ ಹಿನ್ನೆಲೆಯನ್ನು ಪಟ್ಟಣಕ್ಕೆ ಒದಗಿಸಿವೆ.

ಮರಾಠಿಯ ಉಪಭಾಷೆಯಾದ ಮಾಲ್ವಾನಿಯನ್ನು ವೆಂಗುರ್ಲಾದಲ್ಲಿ ಮಾತನಾಡಲಾಗುತ್ತದೆ. ಅಲ್ಲದೆ ಮರಾಠಿ, ಕೊಂಕಣಿ ಹಾಗೂ ಹಿಂದಿ ಭಾಷೆಯೂ ಸಹ ಬಳಕೆಯಲ್ಲಿವೆ. ಅಲ್ಲದೆ ಇಲ್ಲಿನ ಮಾಲ್ವಾನಿ ಸಂಸ್ಕೃತಿಯು ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದ್ದು ಸಾಂಪ್ರದಾಯಿಕವಾಗಿ ಶ್ರೀಮಂತವಾಗಿದೆ.

ವೆಂಗುರ್ಲಾ : ಖಂಡಿತ ನಿರಾಸೆ ಮಾಡದ ಕಡಲಪಟ್ಟಣ!

ಮಾಲ್ವಾನಿ ಸಮುದ್ರ ಖಾದ್ಯ, ಚಿತ್ರಕೃಪೆ: Ankur P

ಶ್ರೀ ಸಾತೇರಿ, ನವದುರ್ಗಾ, ವಿಠೋಬ, ಗಣೇಶ ಹಾಗೂ ರಾವಲನಾಥರಿಗೆ ಮುಡಿಪಾದ ಕೆಲವು ವಿಶೇಷ ದೇವಾಲಯಗಳನ್ನು ವೆಂಗುರ್ಲಾ ಪಟ್ಟಣ ಹಾಗೂ ಅದರ ಆಸು ಪಾಸಿನ ಸ್ಥಳಗಳಲ್ಲಿ ಕಾಣಬಹುದಾಗಿದೆ. ಚಳಿಗಾಲವು ವೆಂಗುರ್ಲಾಗೆ ಭೇಟಿ ನೀಡಲು ಅತ್ಯಂತ ಪ್ರಶಸ್ತ ಸಮಯವಾಗಿದ್ದು ಈ ಸಮ್ದರ್ಭದಲ್ಲಿ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ನಿವಾತಿ, ಶಿರೋಡಾ (ವೇಲಾಗರ್), ಮೋಚೆಮಡ್, ಸಾಗರೇಶ್ವರ್ ಹಾಗೂ ವಯಂಗಾನಿ ಇಲ್ಲಿ ಕಂಡುಬರುವ ಕೆಲವು ಅದ್ಭುತ ಕಡಲ ತೀರಗಳು. ಇವುಗಳಲ್ಲಿ ವಿಶೇಷವಾಗಿ ಶಿರೋಡಾ ಹಾಗೂ ನಿವಾತಿಗೆ ಖಂಡಿತವಾಗಿಯೂ ಭೇಟಿ ನೀಡಲೇಬೇಕು. ಏಕೆಂದರೆ ಇಲ್ಲಿನ ನೀರು ಅತಿ ಸ್ಪಷ್ಟ ಹಾಗೂ ಅಷ್ಟೆ ಸ್ವಚ್ಛವಾಗಿದೆ.

ವೆಂಗುರ್ಲಾ : ಖಂಡಿತ ನಿರಾಸೆ ಮಾಡದ ಕಡಲಪಟ್ಟಣ!

ನಿವಾತಿ ತೀರ, ಚಿತ್ರಕೃಪೆ: Ankur P

ವೆಂಗುರ್ಲಾ ಕೊಲ್ಹಾಪುರದಿಂದ 170 ಕಿ.ಮೀ, ಉತ್ತರ ಗೋವಾದಿಂದ 110 ಕಿ.ಮೀ ಹಾಗೂ ಪುಣೆ ನಗರದಿಂದ 400 ಕಿ.ಮೀ ಗಳಷ್ಟು ದೂರವಿದ್ದು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಕೊಲ್ಹಾಪುರದಿಂದ ಸಾವಂತವಾಡಿಯ ಮಾರ್ಗವಾಗಿಯೂ ವೆಂಗುರ್ಲಾ ತಲುಪಬಹುದು.

ರತ್ನದಂತಹ ಆಕರ್ಷಣೆಗಳ ರತ್ನಾಗಿರಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X