Search
  • Follow NativePlanet
Share
» »ಗಡ ಗಡ ನಡುಗಿಸುವ ವನಶಂಕರಿ ದೇವಿ!

ಗಡ ಗಡ ನಡುಗಿಸುವ ವನಶಂಕರಿ ದೇವಿ!

ಶಾಕಾಂಬರಿ, ವನಶಂಕರಿ ಎಂದೂ ಕರೆಯಲ್ಪಡುವ ಬನಶಂಕರಿ ದೇವಿ ದೇವಾಲಯವು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿಯಿರುವ ಚೋಳಚಗುಡ್ಡ ಎಂಬಲ್ಲಿ ಸ್ಥಿತವಿದೆ

By Vijay

ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರೀಯವಾಗಿ ಹೇಳುವಂತೆ ಜನವರಿ ಸಂದರ್ಭದಲ್ಲಿ ಬನದ ಹುಣ್ಣಿಮೆ ಬಂತೆಂದರೆ ಸಾಕು, ಗಡ ಗಡ ಎಂದು ಮೈ ನಡುಗಿಸುವಂತೆ ಮಾಡುವ ವನಶಂಕರಿ ದೇವಿಯ ಜಾತ್ರೆ ಬರುವ ಸಮಯವದು. ಹೌದು, ಅದೇ ಆ ಬಾದಾಮಿ ಜಾತ್ರೆ. ಬಾದಾಮಿಯ ಬನಶಂಕರಿ ದೇವಿಯ ಜಾತ್ರೆ ಅದು.

ಉತ್ತರ ಕರ್ನಾಟದಲ್ಲಿ ಬಲು ಜನಪ್ರೀಯವಾಗಿರುವ ಆ ಜಾತ್ರೆಗೆ ತಾಯಿ ಬನಶಂಕರಿಯ ದರ್ಶನ ಕೋರಿ ಆ ಭಾಗದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಾದಾಮಿಯತ್ತ ಪಯಣ ಬೆಳೆಸುತ್ತಾರೆ. ಇಲ್ಲಿರುವ ಬನಶಂಕರಿ ದೇವಿಯನ್ನು ವನಶಂಕರಿ, ಶಾಕಾಂಬರಿ ಎಂತಲೂ ಸಹ ಕರೆಯಲಾಗುತ್ತದೆ.

ಬನಶಂಕರಿ, ವನಶಂಕರಿ ಅಥವಾ ಶಾಕಾಂಬರಿ ದೇವಿಯು ಮೂಲತಃ ಒಂದೆಯಾಗಿದ್ದು ಪಾರ್ವತಿ ದೇವಿಯ ಇನ್ನೊಂದು ಅವತಾರವೆ ಆಕೆ ಎಂದು ನಂಬಲಾಗಿದೆ. ಬಾದಾಮಿ ಬಳಿಯಿರುವ ಚೋಳಚಗುಡ್ಡದಲ್ಲಿ ಈ ದೇವಿಗೆ ಮುಡಿಪಾದ ಪುರಾತನ ದೇವಾಲಯವಿದ್ದು ಸಾಕಷ್ಟು ಪ್ರಸಿದ್ಧಿಗಳಿಸಿದೆ. ಪ್ರಸ್ತುತ ಲೇಖನದ ಮೂಲಕ ಬನಶಂಕರಿ ದೇವಿ ದೇವಾಲಯದ ಕುರಿತು ತಿಳಿಯಿರಿ.

ಬಾದಾಮಿ

ಬಾದಾಮಿ

ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಬಾದಾಮಿಯ ಚೋಳಚಗುಡ್ಡ ಎಂಬಲ್ಲಿ ಈ ದೇವಿಯ ದೇವಾಲಯವಿದೆ. ತಿಲಕಾರಣ್ಯದ ವ್ಯಾಪ್ತಿಯಲ್ಲಿ ಈ ಶಂಕರಿ ದೇವಿಯ ದೇವಾಲಯವಿದ್ದುದರಿಂದ ಈಕೆಯನ್ನು ಬನ ಅಂದರೆ ವನ ಹಾಗಾಗಿ ಬನಶಂಕರಿ ಅಥವಾ ವನಶಂಕರಿ ದೇವಿ ಎಂದು ಕರೆಯಲಾಗುತ್ತದೆ. ವನಶಂಕರಿಯ ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Mihir Acharya

ಇನ್ನೊಂದು ಹೆಸರು

ಇನ್ನೊಂದು ಹೆಸರು

ಶಾಕಾಂಬರಿ ದೇವಿ ಎಂತಲೂ ಕರೆಯಲ್ಪಡುವ ಈ ದೇವಿಯ ಮೂಲ ದೇವಾಲಯವು ಏಳನೇಯ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲಾದ ಅತ್ಯಂತ ಪ್ರಾಚೀನ ದೇವಾಲಯವಾಗಿದೆ. ಕಲ್ಯಾಣಿ ಚಾಲುಕ್ಯರು ಶಾಕಾಂಬರಿಯನ್ನು ತಮ್ಮ ಕುಲದೇವಿಯನ್ನಾಗಿ ಆರಾಧಿಸುತ್ತಿದ್ದರು.

ಚಿತ್ರಕೃಪೆ: G41rn8

ಸಸ್ಯಾಹಾರಿ

ಸಸ್ಯಾಹಾರಿ

ಈ ದೇವಿಗಿರುವ ಇನ್ನೊಂದು ಜನಪ್ರೀಯವಾದ ಹೆಸರು ಶಾಕಾಂಬರಿ ದೇವಿ. ಈ ಪದವು ಸಸ್ಯಾಹಾರಿಯಾದ ಶಾಕಾಹಾರಿಯಿಂದ ಬಂದುದಾಗಿದೆ. ಅಂದರೆ ಇದರ ಗೂಡಾರ್ಥವು ಸಸ್ಯಾಹಾರದ ಪ್ರತೀಕವಾಗಿರುವ ಈ ದೇವಿಯು ತನ್ನನ್ನು ಅರಸಿ ಬರುವ ಪ್ರತಿಯೊಬ್ಬರಿಗೂ ಆಹಾರ ನೀಡದೆ ಇರಲಾರಳು ಎಂದು.

ಚಿತ್ರಕೃಪೆ: G41rn8

ಹೀಗಿದೆ

ಹೀಗಿದೆ

ಈ ಹೆಸರಿಗೆ ತಕ್ಕಂತೆ ರೋಚಕವಾದ ದಂತಕಥೆಯೊಂದಿದೆ. ಅದರ ಪ್ರಕಾರವಾಗಿ, ಹಿಂದೆ ದುರ್ಗಮಾಸುರ ಎಂಬ ರಕ್ಕಸನೊಬ್ಬನಿದ್ದ. ಅವನಿಗೊಮ್ಮೆ ಎಲ್ಲ ವೇದಗಳನ್ನು ತಾನೆ ವಶಪಡಿಸಿಕೊಳ್ಳಬೇಕೆಂಬ ಆಸೆಯುಂಟಾಗಿ ಅದನ್ನು ಪಡೆಯಲೆಂದು ಹಿಮಾಲಯಕ್ಕೆ ಹೋಗಿ ನೀರು,ಆಹಾರಗಳಿಲ್ಲದೆ ಕೇವಲ ಗಾಳಿಯನ್ನು ಸೇವಿಸುತ್ತ ಒಂದು ವರ್ಷಗಳ ಕಾಲ ಬ್ರಹ್ಮನ ಕುರಿತು ಕಠಿಣ ತಪಸ್ಸನ್ನು ಮಾಡಿದ.

ಚಿತ್ರಕೃಪೆ: Vinayak wiki

ಬ್ರಹ್ಮ ಪ್ರಸನ್ನ

ಬ್ರಹ್ಮ ಪ್ರಸನ್ನ

ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವರು ಅವನ ಮುಂದೆ ಪ್ರತ್ಯಕ್ಷನಾಗಿ ತನಗೆ ಬೇಕಾದ ವರವನ್ನು ಕೇಳಲು ಹೇಳಿದ. ಬ್ರಹ್ಮನನ್ನು ಕಂಡ ರಾಕ್ಷಸ ಅವನನ್ನು ಮತ್ತೆ ಶ್ಲೋಕಗಳಿಂದ ಪ್ರಸನ್ನಗೊಳಿಸಿ ತನ್ನ ಇಚ್ಛೆಯಾದ ವೇದಗಳನ್ನು ಪಡೆಯುವ ಆಸೆ ತಿಳಿಸಿದ ಹಾಗೂ ಬ್ರಹ್ಮನು ಇದಕ್ಕೆ ಒಪ್ಪಿ ಎಲ್ಲ ವೇದಗಳನ್ನು ಅವನ ವಶಕ್ಕೆ ಕೊಟ್ಟ.

ಚಿತ್ರಕೃಪೆ: Vishwas Koundinya

ಶಾಂತ

ಶಾಂತ

ಇದಾದ ತಕ್ಷಣವೆ ಪ್ರತಿನಿತ್ಯ ಭೂಲೋಕದಲ್ಲಿ ಎಂದಿನಂತೆ ನಡೆಯುವ ದೇವತಾ ಕಾರ್ಯಗಳು, ವಿಧಿ ವಿಧಾನಗಳು ನಿಂತು ಹೋದವು, ಕಾರಣ ಎಲ್ಲ ಋಷಿ ಮುನಿಗಳು, ಸಾಧು ಸಂತರು ವೇದಗಳು ಮಾಯವಾಗಿದ್ದರಿಂದ ಅದರಲ್ಲಿರುವ ಪ್ರತಿಯೊಂದನ್ನು ಮರೆತು ಹೋಗಿದ್ದರು. ಯಜ್ಞ ಯಾಗಾದಿಗಳು ನಿಂತವು.

ಚಿತ್ರಕೃಪೆ: Vishwas Koundinya

ದೇವತೆಗಳ ಬೇಸರ

ದೇವತೆಗಳ ಬೇಸರ

ಇದರಿಂದ ದೇವತೆಗಳಿಗೆ ಸಿಗುತ್ತಿದ್ದ ಹವಿಸ್ಸು ನಿಂತು, ಕ್ರಮೇಣ ದೇವತೆಗಳು ತಮ್ಮ ತಮ್ಮ ಶಕ್ತಿಗಳನ್ನು ಕಳೆದುಕೊಳ್ಳುತ್ತ ಅಶಕ್ತರಾಗತೊಡಗಿದರು. ಇದರ ಪರಿಣಾಮವಾಗಿ ಭುಲೋಕದೆಲ್ಲೆಡೆ ಅರಾಜಕತೆ ಉಂಟಾಯಿತು. ಒಂದು ಹನಿಯೂಮಳೆಯಾಗ ತೊಡಗಲಿಲ್ಲ. ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಪರಿಸ್ಥಿತಿ ಬಂದೊದಗಿತು.

ಚಿತ್ರಕೃಪೆ: Nvvchar

ಪ್ರಾಣಹಾನಿ

ಪ್ರಾಣಹಾನಿ

ಹಸಿವು ನೀರಿನಿಂದ ತತ್ತರಿಸತೊಡಗಿದ ಅದೆಷ್ಟೊ ಜನ ಹಾಗೂ ಪ್ರಾಣಿಗಳು ಪ್ರಾಣ ಬಿಡತೊಡಗಿದವು. ಇತ್ತ ದೇವತೆಗಳು ಆ ರಾಕ್ಷಸನ ಜೊತೆ ಹೋರಾಡಲೂ ಸ ಶಕ್ತಿ ಇಲ್ಲದವರಾಗಿ ಸಿಕ್ಕ ಸಿಕ್ಕ ದಿಕ್ಕುಗಳಿಗೆ ಓಡಿ ಗುಹೆಗಳಲ್ಲಿ ಅವಿತುಕೊಂಡರು. ಈ ದೃಶ್ಯವನ್ನು ನೋಡಿದ ಮುನಿಗಳು ಬೇಸರಗೊಂಡು, ಅಳಿದುಳಿದ ಶಕ್ತಿಯನ್ನು ಕ್ರೋಢಿಕರಿಸಿಕೊಂಡು ಹಿಮಾಲಯದತ್ತ ಪ್ರಯಾಣ ಬೆಳೆಸಿದರು.

ಚಿತ್ರಕೃಪೆ: Naane.naanu

ಘೋರ ತಪಸ್ಸು

ಘೋರ ತಪಸ್ಸು

ಹೀಗೆ ಹಿಮಾಲಯಕ್ಕೆ ಬಂದ ಮುನಿಗಳು ಎಲ್ಲರೂ ಒಟ್ಟಾಗಿ ಸಮಭಾವ, ಸಮಚಿತ್ತದಿಂದ ಆ ಶಕ್ತಿ ದೇವಿಯನ್ನು ಕುರಿತು ಅತಿ ಕಠಿಣ ತಪಸ್ಸನ್ನಾಚರಿಸ ತೊಡಗಿದರಿ. ಅನ್ನ ನೀರುಗಳನ್ನೂ ಸಹ ತ್ಯಜಿಸಿದರು. ಹೀಗೆ ಕೆಲ ಕಾಲದ ನಂತರ ಅವರ ಶ್ರಮಕ್ಕೆ ಫಲವೆಂಬಂತೆ ಆ ತಾಯಿ ಪಾರ್ವತಿಯು ಪ್ರಸನ್ನಳಾಗಿ ಪ್ರತ್ಯಕ್ಷಳಾದಳು.

ಚಿತ್ರಕೃಪೆ: Nvvchar

ಸ್ವತಃ ನೋಡಿದಳು

ಸ್ವತಃ ನೋಡಿದಳು

ಋಷಿಗಳು ವಿವರಿಸಿದಂತೆ ಪಾರ್ವತಿಯು ಭೂಲೋಕದ ನೈಜ ಸ್ಥಿತಿಯತ್ತ ತನ್ನ ದೃಷ್ಟಿಯನ್ನು ಹಾಕಿದಾಗ ಅದರ ವಸ್ತುಸ್ಥಿತಿ ಅವಳಿಗೆ ಅರಿವಾಯಿತು. ಹಸಿವಿನಿಂದ ಬಳಲುತ್ತಿದ್ದ, ಹಲುಬುತ್ತಿದ್ದ ಮನುಷ್ಯ ಹಾಗೂ ಪ್ರಾಣಿಗಳ ಆಕ್ರಂದನ ದೇವಿಯ ಮನಸ್ಸನ್ನು ಹಿಂಡಿದವು. ಇದರ ಪರಿಣಾಮವಾಗಿ ದೇವಿಯು ಅಗಾಧ ಸ್ವರೂಪ ಪಡೆದು ಕಣ್ಣಿರನ್ನು ಹರಿಸತೊಡಗಿದಳು.

ಚಿತ್ರಕೃಪೆ: Vishwas Koundinya

ಭೋರ್ಗೆರೆವ ಮಳೆ

ಭೋರ್ಗೆರೆವ ಮಳೆ

ಅವಳ ಆ ಕಣ್ಣೀರು ಎಷ್ಟು ಪ್ರಭಾವಶಾಲಿ ಆಗಿತೆಂದರೆ ಎಲ್ಲೆಡೆ ಧಾರಾಕಾರವಾಗಿ ಮಳೆಯು ಸುರಿಯತೊಡಗಿತು. ಎಲ್ಲ ಕೆರೆ-ತೊರೆ, ನದಿಗಳು ಮತ್ತೆ ಮೈದುಂಬಿ ಹರಿಯತೊಡಗಿದವು. ದೇವಿಯು ಪ್ರಕೃತಿಯ ರೂಪ ಧರಿಸಿ ಎಲ್ಲ ರೀತಿಯ ಸಸ್ಯ ಹಾಗೂ ಹಣ್ಣುಗಳನ್ನು ಚಿಗುರಿಸಿ ಎಲ್ಲರಿಗೂ ಆಹಾರ ನೀಡತೊಡಗಿದಳು.

ಚಿತ್ರಕೃಪೆ: Naane.naanu

ಶಾಕಾಂಬರಿ

ಶಾಕಾಂಬರಿ

ಹೀಗೆ ಪ್ರತಿಯೊಬ್ಬರಿಗೂ ಪ್ರಕೃತಿಯು ಒದಗಿಸುವ ಶಾಕಾಹಾರದ ಆಹಾರಗಳನ್ನು ಪ್ರತಿಯೊಬ್ಬರಿಗೂ ಹಸಿವು ನೀಗಿಸುವ ದೃಷ್ಟಿಯಿಂದ ಕೊಡುತ್ತಿದ್ದುದರಿಂದ ಆ ದೇವಿಗೆ ಶಾಕಾಂಬರಿ ದೇವಿ ಎಂಬ ಹೆಸರು ಬಂದಿತು.

ಚಿತ್ರಕೃಪೆ: Naane.naanu

ಏಳನೇಯ ಶತಮಾನ

ಏಳನೇಯ ಶತಮಾನ

ಇತಿಹಾಸಕಾರರ ಪ್ರಕಾರ, ಬಾದಾಮಿಯಲ್ಲಿರುವ ಈ ದೇವಾಲಯವು ಬಲು ಪುರಾತನವಾಗಿದ್ದು ಏಳನೇಯ ಶತಮಾನದಲ್ಲಿ ನಿರ್ಮಾವಾದುದೆನ್ನಲಾಗಿದೆ. ದೊರಕಿರುವ ಕೆಲವು ಶಾಸನಗಳ ಪ್ರಕಾರ ಕಲ್ಯಾಣಿ ಚಾಲುಕ್ಯ ದೊರೆಯಾದ ಒಂದನೇಯ ಜಗದೇಕಮಲ್ಲನಿಂದ ಸುಮಾರು ಕ್ರಿ.ಶ.650 ರಲ್ಲಿ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಚಿತ್ರಕೃಪೆ: Shashidhara halady

ಮರಾಠಾ ಮುಖಂಡ

ಮರಾಠಾ ಮುಖಂಡ

ಆದರೆ ಪ್ರಸ್ತುತ ದೇವಾಲಯ ರಚನೆಯು ಮರುನವೀಕರಣಗೊಂಡ ರಚನೆಯಾಗಿದ್ದು ಇದನ್ನು ಮರಾಠಾ ಸಾಮ್ರಾಜ್ಯದ ಮುಖಂಡನಾಗಿದ್ದ ಪರಶುರಾಮ ಅಗಳೆ ಎಂಬಾತನಿಂದ ಕ್ರಿ.ಶ. 1750 ರಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದು ಬರುತ್ತದೆ.

ಚಿತ್ರಕೃಪೆ: Vedamurthy J

ಪವಿತ್ರವಾಗಿತ್ತು

ಪವಿತ್ರವಾಗಿತ್ತು

ಚಾಲುಕ್ಯರ ನಂತರ ಈ ಪ್ರದೇಶವನ್ನಾಳಿದ ಸಾಮ್ರಾಜ್ಯದವರೂ ಸಹ ಈ ದೇವಿಯ ದೇವಾಲಯವನ್ನು ಪೋಷಿಸತೊಡಗಿದರು.ದೇವಿಯನ್ನು ಆರಾಧಿಸಿದ್ದರು. ಇದಕ್ಕೆ ಕುರುಹು ಎಂಬಂತೆ ಈ ದೇವಾಲಯದ ಉತ್ತರಕ್ಕಿರುವ ಖಂಬವೊಂದರ ಮೇಲೆ ರಾಷ್ಟ್ರಕೂಟ ದೊರೆಯಾದ ಭೀಮದೇವನ ಪ್ರಶಂಸೆಯನ್ನು ಮಾಡಿದ ವಿವರಣೆಯನ್ನು ಕಾಣಬಹುದು. ಬಾದಾಮಿಯ ಹೊಂಡ.

ಚಿತ್ರಕೃಪೆ: Dineshkannambadi

ಜನವರಿ ಸಂದರ್ಭ

ಜನವರಿ ಸಂದರ್ಭ

ಪ್ರಸ್ತುತ ಪ್ರತಿ ವರ್ಷ ಪುಷ್ಯ ಮಾಸದ ಹುಣ್ಣಿಮೆಯಂದು ಅಂದರೆ ಬನದ ಹುಣ್ಣಿಮೆಯಂದು ಇಲ್ಲಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ಜಾತ್ರೆಯು ಕಳೆದ ಎರಡು ನೂರು ವರ್ಷಗಳಿಂದ ಪ್ರಚಲಿತದಲ್ಲಿದೆ. ಈ ಜಾತ್ರೆಯು ಜನವರಿ ತಿಂಗಳಿನಲ್ಲಿರುತ್ತದೆ ಹಾಗೂ ಇದರಲ್ಲಿ ಪಾಲ್ಗೊಳ್ಳಲು ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ರಾಜ್ಯಗಳಿಂದಲೂ ಸಹ ಜನ ಬರುತ್ತಾರೆ. ಬಾದಾಮಿಯಲ್ಲಿರುವ ಭೂತನಾಥ ದೇವಾಲಯ.

ಚಿತ್ರಕೃಪೆ: Dineshkannambadi

ಜಾತ್ರೆ ಆರಂಭ

ಜಾತ್ರೆ ಆರಂಭ

ರಥ ಅಥವಾ ತೇರು ಎಳೆಯುವ ಕಾರ್ಯದಿಂದ ಆರಂಭವಾಗುವ ಜಾತ್ರೆಯು ಅದ್ದೂರಿ ಮೂರು ವಾರಗಳ ಪ್ರಕಾರ ನಡೆಯುತ್ತದೆ. ವಿವಿಧ ಜಾತಿಗಳ ಜನರು ಯಾವುದೆ ಅಡೆ ತಡೆಗಳಿಲ್ಲದೆ ದೇವಿಯ ದರ್ಶನಕ್ಕೆ ಈ ಸಂದರ್ಭದಲ್ಲಿ ಬರುತ್ತಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರುಗುತ್ತವೆ.

ಚಿತ್ರಕೃಪೆ: G41rn8

ವಿಶಿಷ್ಟತೆ

ವಿಶಿಷ್ಟತೆ

ವಿಶೇಷವೆಂದರೆ ಈ ಜಾತ್ರೆಯ ಸಂದರ್ಭದಲ್ಲಿ ಒಂದು ರೀತಿಯ ಧರ್ಮ ಸಾಮರಸ್ಯವನ್ನೆ ಇಲ್ಲಿ ಕಾಣಬಹುದು. ಏಕೆಂದರೆ ಪ್ರದೇಶದ ಅನೇಕ ಮುಸ್ಲಿಮ್ ವ್ಯಾಪಾರಿಗಳೂ ಸಹ ತಮ್ಮ ತಮ್ಮ ಅಂಗಡಿ ಮುಗ್ಗಟ್ಟುಗಳಲ್ಲಿ ದೇವಿಯ ಚಿತ್ರಪಟಗಳು ಹಾಗೂ ಇತರೆ ಧಾರ್ಮಿಕ ವಸ್ತುಗಳನ್ನು ಮಾರುವುದನ್ನು ಕಾಣಬಹುದು.

ಚಿತ್ರಕೃಪೆ: PROmertxe iturrioz

ಎಷ್ಟು ದೂರ?

ಎಷ್ಟು ದೂರ?

ಈ ರೀತಿಯಾಗಿ ಬನಶಂಕರಿಯು ವನಶಂಕರಿ, ಶಾಕಾಂಬರಿಯ ರೂಪದಲ್ಲಿ ಸಕಲ ಭಕ್ತಾದಿಗಳನ್ನು ಹರಸುತ್ತಾಳೆ. ಇನ್ನೂ ಬಾಗಲಕೋಟೆಯ ಬಾದಾಮಿಯಲ್ಲಿರುವ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದೆ. ಬಾಗಲಕೋಟೆಯಿಂದ ಬಾದಾಮಿಯು 40 ಕಿ.ಮೀ, ಹುಬ್ಬಳ್ಳಿಯಿಂದ 125 ಕಿ.ಮೀ ಹಾಗೂ ಬೆಂಗಳೂರಿನಿಂದ 495 ಕಿ.ಮೀ ಗಳಷ್ಟು ದೂರದಲ್ಲಿದೆ. ತೆರಳಲು ಬಾಗಲಕೋಟೆ ಹಾಗೂ ಹುಬ್ಬಳ್ಳಿಯಿಂದ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಬಾದಾಮಿಯಿಂದ ಗದಗಿಗೆ ಹೋಗುವ ಮಾರ್ಗದಲ್ಲಿ ಸುಮಾರು ಐದು ಕಿ.ಮೀ ದೂರದಲ್ಲಿ ಚೋಳಚಗುಡ್ಡವಿದ್ದು ಅಲ್ಲಿ ಈ ದೇವಾಲಯವಿದೆ. ಶಾಕಾಂಬರಿ ದೇವಿಯ ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jhunjhunwala.rajiv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X