Search
  • Follow NativePlanet
Share
» »ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

By Vijay

ಇದೊಂದು ಕುಗ್ರಾಮವೆಂದರೂ ತಪ್ಪಾಗಲಾರದು. ಇದರ ಕುರಿತು ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಹೊರತುಪಡಿಸಿ ಬಹುಶಃ ಯಾರಿಗೂ ತಿಳಿದಿಲ್ಲ. ಗ್ರಾಮವು ದಟ್ಟವಾದ ಕಾಡು ಹಾಗೂ ಬೆಟ್ಟದಿಂದ ಸುತ್ತುವರೆದಿದೆ. ಈ ಗ್ರಾಮದ ಹೆಸರು ಶಿರ್ವೆ ಹಾಗೂ ಇಲ್ಲಿಂದ ಕಂಡುಬರುವ ಆ ವಿಶಾಲವಾದ ಗುಡ್ಡವೆ ಶಿರ್ವೆ ಗುಡ್ಡ.

ದಂಗುಬಡಿಸುವ ರಹಸ್ಯಮಯ ಕಡಲ ತೀರಗಳು

ಶಿರ್ವೆ ಘಾಟ್ ಎಂತಲೂ ಕರೆಯಲ್ಪಡುವ ದಟ್ಟ ಕಾಡಿನ ಗಿಡ ಮರಗಳ ಮಧ್ಯದಲ್ಲಿ ಈ ಗ್ರಾಮವು ಸ್ಥಿತವಿದೆ. ಈ ತಾಣಕ್ಕೆ ಒಂದೊಮ್ಮೆ ಭೇಟಿ ನೀಡಿದರೆ ಸಾಕು ಅಗೋಚರ ಶಕ್ತಿಯೊಂದು ಇಲ್ಲಿರಬಹುದೆಂಬ ಅಚಲವಾದ ನಂಬಿಕೆಯೊಂದು ನಿಮ್ಮ ಮನದಾಳದಲ್ಲಿ ತೇಲಿ ಬಂದರೂ ತಪ್ಪಿಲ್ಲ. ಒಂದು ರೀತಿಯ ಭಯ ಮೂಡಿಸುವಂತಹ ಪ್ರಕೃತಿಯ ಅನುಭವ ನಿಮಗಾಗುತ್ತದೆ.

ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಶಿರ್ವೆ ಗುಡ್ಡ

ಈ ಗುಡ್ಡಕ್ಕೆ ಸಾಕಷ್ಟು ರೋಚಕವಾದ ಹಿನ್ನಿಲೆಯಿದ್ದು ಹಲವಾರು ರಹಸ್ಯಮಯ ಘಟನೆಗಳು ಇಲ್ಲಿ ನಡೆದಿರುವುದೆ ಇದಕ್ಕೆ ಸಾಕ್ಷಿಯಾಗಿದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಹೇರಳವಾದ ವನ್ಯ ಸಂಪತ್ತು ಹಾಗೂ ಪ್ರಾಣಿ ಸಂಪತ್ತುಗಳಿರುವುದನ್ನು ನೋಡಬಹುದು. ಆದರೆ ಎಚ್ಚರ, ಯಾರೂ ಈ ಪ್ರಾಣಿಗಳನ್ನು ಬೇಟೆಯಾಡುವುದಾಗಲಿ, ಹಿಂಸಿಸುವುದಾಗಲಿ ಮಾಡುವಂತಿಲ್ಲ. ಹಾಗೇನಾದರೂ ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆಯಿದೆ.

ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಶಿರ್ವೆ ಗುಡ್ಡ

ಇನ್ನೂ ಹೇಳಬೇಕೆಂದರೆ ಇಲ್ಲಿ ಗಿಡ-ಮರಗಳನ್ನು ಕಡಿಯುವ ಹಾಗಿಲ್ಲ. ಅಷ್ಟೆ ಏಕೆ ಯಕಶ್ಚಿತ್ ಇಲ್ಲಿನ ಒಂದು ಹುಲ್ಲು, ಕಡ್ಡಿ, ಕಲ್ಲುಗಳನ್ನೂ ಯಾರೂ ತಮ್ಮೊಡನೆ ಒಯ್ಯುವ ಹಾಗಿಲ್ಲ. ಹಾಗೇನಾದರೂ ಅಪ್ಪಿ ತಪ್ಪಿ ಯಾರಾದರೂ ಇಲ್ಲಿನ ಏನಾದರೂ ವಸ್ತುವನ್ನು ತಮ್ಮೊಡನೆ ಕೊಂಡೊಯ್ದರೆ ಅವರ ಗ್ರಹಚಾರ ಕೆಟ್ಟಿತೆಂದೆ ತಿಳಿಯಬೇಕು ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ. ಇದಕ್ಕೆ ಹಿಂದೆ ಹಲವಾರು ನೈಜ ಘಟನೆಗಳು ಇಲ್ಲಿ ನಡೆದಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Barn Images

ಇನ್ನೊಂದು ದಂಗುಬಡಿಸುವ ವಿಚಾರವೆಂದರೆ ಈ ಬೆಟ್ಟವನ್ನೇರುವಾಗ ಬರಿಗಾಲಿನಲ್ಲೆ ಏರಬೇಕು. ಹೌದು, ಭಯಂಕರವಾದ ಕಾಡು ಗಿಡ ಮ್ರಗಳಿರುವ, ಮುಳ್ಳು ಕಂಟಿಗಳಿರುವ, ಮೊನಚಾದ ಹಳ್ಳ, ಬಂಡೆಗಳಿರುವ ಈ ಬೆಟ್ಟವನ್ನು ಬರಿಗಾಲಿನಲ್ಲಿಯೆ ಏರಬೇಕು. ಮತ್ತೊಂದು ಮುಖ್ಯ ಸಂಗತಿಯೆಂದರೆ ಮಹಿಳೆಯರು ಈ ಬೆಟ್ಟವನ್ನು ಏರುವ ಹಾಗೆ ಇಲ್ಲ. ಇದೊಂದು ಕಟ್ಟು ನಿಟ್ಟಾದ ನಿಯಮವಾಗಿದ್ದು ತಲತಲಾಂತರದಿಂದ ನಡೆದುಕೊಂಡು ಬಂದಿದೆ ಎಂದು ಇಲ್ಲಿನ ಸ್ಥಳೀಯ ಹಿರಿಯರ ಅಭಿಪ್ರಾಯವಾಗಿದೆ.

ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Ashish Gupta

ಹಾಗಾದರೆ ಈ ಬೆಟ್ಟದ ರಹಸ್ಯವೇನು? ಎಂಬ ಕುತೂಹಲ ಮೂಡುವುದು ಸಹಜ. ಅದಕ್ಕುತ್ತರವೆಂಬಂತೆ ಗ್ರಾಮದಲ್ಲಿ ನೆಲೆಸಿರುವ ಪ್ರಮುಖ ಸಿದ್ಧರಾಮೇಶ್ವರ ಹಾಗೂ ಗುಡ್ಡ ಮೇಲೆ ನೆಲೆಸಿರುವ ಬಸವನ/ನಂದಿಯ ಜಾಗೃತ ಶಕ್ತಿಯ ವಿಗ್ರಹ. ಇವರು ಈ ಪ್ರದೇಶದ ರಕ್ಷಕರಾಗಿದ್ದಾರೆ ಎಂಬ ನಂಬಿಕೆಯಿದೆ. ಪ್ರತಿ ಜನವರಿ ತಿಂಗಳಿನಲ್ಲಿ ಇಲ್ಲೊಂದು ಉತ್ಸವ ನಡೆಯುತ್ತದೆ. ಆ ಸಂದರ್ಭದಲ್ಲಿ ರಾತ್ರಿಯ ಸಮಯದಲ್ಲಿ ಗ್ರಾಮದ ಸಿದ್ಧರಾಮೇಶ್ವರನನ್ನು ಪೂಜಿಸಲಾಗುತ್ತದೆ. ರಾತ್ರಿಯೆಲ್ಲ ಪೂಜೆ ನಡೆದು ನಸುಕಿನ ಸಮಯದಲ್ಲಿ ಈ ಬೆಟ್ಟವನ್ನು ಗ್ರಾಮದ ಕೇವಲ ಪುರುಷರಷ್ಟೆ ಏರಿ ಅಲ್ಲಿನ ಬಸವನಿಗೆ ಪೂಜೆ ಸಲ್ಲಿಸಿ ಮತ್ತೆ ಗ್ರಾಮಕ್ಕೆ ಮರಳುತ್ತಾರೆ.

ರಹಸ್ಯಮಯ ಹಾಗೂ ಪಿಶಾಚಗ್ರಸ್ಥ ಸ್ಥಳಗಳು

ಇನ್ನೂ ಐತಿಹಾಸಿಕವಾಗಿ ಈ ಬೆಟ್ಟದ ಮೇಲೆ ಬ್ರಿಟೀಷರ ಸಮಯದಲ್ಲಿ ನಿರ್ಮಿಸಲಾಗಿರುವ ಕೆಲವು ಕಟ್ಟಡಗಳ ರಚನೆಗಳು ಇಂದು ಅವಶೇಷಗಳಾಗಿ ಹೋಗಿರುವುದನ್ನು ಕಾಣಬಹುದು. ಅಲ್ಲದೆ ಬೆಟ್ಟದ ತುದಿಯಲ್ಲಿ ಅಚ್ಚರಿ ಎಂಬಂತೆ ಸಿಹಿ ನೀರಿನ ಬಾವಿಯಿದೆ. ವರ್ಷದ ಎಲ್ಲಾ ಕಾಲದಲ್ಲೂ ಈ ಬಾವಿಯಲ್ಲಿ ನೀರು ಹಾಗೆ ಇರುತ್ತದೆ ಹೊರತು ಒಂದಿಂಚು ಕಡಿಮೆಯಾಗುವುದಿಲ್ಲವಂತೆ! ಹಾಗಾದರೆ ಈ ಶಿರ್ವೆ ಗ್ರಾಮ ಇರುವುದೆಲ್ಲಿ ಎಂದು ತಿಳಿಯಬೇಕೆ? ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಕೇಂದ್ರದಿಂದ ಸುಮಾರು 35 ಕಿ.ಮೀ ಗಳಷ್ಟು ದೂರದಲ್ಲಿ ಈ ಶಿರ್ವೆ ಗ್ರಾಮವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X