Search
  • Follow NativePlanet
Share
» »ಮೂರು ವಿಚಿತ್ರ ಕಲ್ಲು ಗುಡ್ಡಗಳು !

ಮೂರು ವಿಚಿತ್ರ ಕಲ್ಲು ಗುಡ್ಡಗಳು !

ಇಳಿಕಲ್ ಕಲ್ಲು ಗುಡ್ಡ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಪ್ರಖ್ಯಾತ ಚಾರಣ ತಾಣವಾಗಿದ್ದು ಚಂದ್ರೋದಯ ಹಾಗೂ ಸೂರ್ಯಾಸ್ತಗಳ ಅದ್ಭುತ ನೋಟ ಕರುಣಿಸುವ ವಿಚಿತ್ರ ಆಕಾರದ ಗುಡ್ಡವಾಗಿದೆ

By Vijay

ಪ್ರವಾಸ ಮಾಡಬಯಸುವವರಿಗೆ, ಅನ್ವೇಷಕರಿಗೆ ಭಾರತ ಒಂದು ವಿಫುಲ ಅವಕಾಶ ಒದಗಿಸುವ ದೇಶವಾಗಿದೆ. ಇಲ್ಲಿನ ಪ್ರತಿ ರಾಜ್ಯಗಳೂ ಸಹ ಸಾಕಷ್ಟು ವಿಶೇಷವಾದ ಹಾಗೂ ವಿಸ್ಮಯಗೊಳಿಸುವಂತಹ ಪ್ರಾಕೃತಿಕ ತಾಣಗಳು ಹಾಗೂ ರಚನೆಗಳಿಂದ ಸಂಪದ್ಭರಿತವಾಗಿದೆ. ಆದರೆ ಅನ್ವೇಷಿಸ ಮನಸ್ಸಿರಬೇಕಷ್ಟೆ!

ಇಂದಿಗೂ ನಮ್ಮ ದೇಶದಲ್ಲಿ ಇನ್ನುವರೆಗೂ ಶೋಧಿಸಲಾಗದ ಅಥವಾ ಪ್ರವರ್ಧಮಾನಕ್ಕೆ ಬಾರದ ಸ್ಥಳಗಳಿರುವುದು ಅದೆಷ್ಟೊ. ಹಾಗಾಗಿ ಒಬ್ಬ ಪ್ರಬುದ್ಧ ಅನ್ವೇಷಕ ಪ್ರವಾಸಿಗನಾಗಿ ಹೊರಟಲ್ಲಿ ನೂರಾರು ಅಂತಹ ಸ್ಥಳಗಳು ನಮ್ಮ ಕಣ್ಣಿಗೆ ಬೀಳಬಹುದು. ಪ್ರಸ್ತುತ ಲೇಖನದಲ್ಲಿಯೂ ಸಹ ಅಮ್ತಹುದೆ ಒಂದು ವಿಸ್ಮಯಗೊಳಿಸುವ ತಾಣದ ಕುರಿತು ತಿಳಿಸಲಾಗಿದೆ.

ಮೂರು ವಿಚಿತ್ರ ಕಲ್ಲು ಗುಡ್ಡಗಳು !

ಚಿತ್ರಕೃಪೆ: Akhilan

ಈ ಸ್ಥಳವನ್ನು ಇಳಿಕಲ್ ಕಲ್ಲು ಎಂದು ಕರೆಯುತ್ತಾರೆ. ಇದು ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯಲ್ಲಿದೆ. ಅಷ್ಟೆ ಅಲ್ಲ, ಕೊಟ್ಟಾಯಂ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳ ಪೈಕಿಯೂ ಒಂದಾಗಿದೆ ಇಳಿಕಲ್ ಕಲ್ಲು. ಮೂಲತಃ ಇಲ್ಲಿ ಒಟ್ಟಾರೆಯಾಗಿ ಮೂರು ಗುಡ್ಡಗಳನ್ನು ಕಾಣಬಹುದು. ವಿಶೇಷವೆಂದರೆ ಮೂರು ಗುಡ್ಡಗಳೂ ಸಹ ತಮ್ಮದೆ ಆದ ವಿಶೇಷತೆಯನ್ನು ಹೊಂದಿರುವುದು.

ಇಲ್ಲಿನ ಮೂರು ಗುಡ್ಡಗಳು ವಿಚಿತ್ರಮಯವಾದ ಆಕಾರಗಳಲ್ಲಿರುವುದು ಇನ್ನೊಂದು ವಿಶೇಷ. ಒಂದು ಗುಡ್ಡವು ಅಣಬೆ ಅಥವಾ ಬಿಚ್ಚಿದ ಕೊಡೆಯ ಆಕಾರದಲ್ಲಿದ್ದು ಅದನ್ನು ಕೂಡ ಕಲ್ಲು ಎಂದು ಕರೆಯುತ್ತಾರೆ. ಇಲ್ಲಿ ನೀಲ ಕೊಡುವೇಲಿ ಎಂಬ ಔಷಧಿಯುಕ್ತ ಅಸಾಮಾನ್ಯ ಶಕ್ತಿ ಹೊಂದಿರುವ ಅತ್ಯಪರೂಪದ ಮೂಲಿಕೆ ಸಿಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಆರೋಗ್ಯ ವೃದ್ಧಿಸುವುದಲ್ಲದೆ ಸಂಪತ್ತು ಸಹ ಒಲಿದುಬರುವ ನಂಬಿಕೆಯಿದೆ.

ಮೂರು ವಿಚಿತ್ರ ಕಲ್ಲು ಗುಡ್ಡಗಳು !

ಚಿತ್ರಕೃಪೆ: Activedogs

ಇನ್ನೊಂದು ಗುಡ್ಡವು ಡುಬ್ಬದ ರೀತಿಯ ರಚನೆ ಹೊಂದಿದ್ದು ಇದನ್ನು ಕೂಣು ಕಲ್ಲು ಎಂದು ಕರೆಯುತ್ತಾರೆ. ಈ ಕಲ್ಲಿನ ಮೇಲೆ ಕೇವಲ ಒಂದುವರೆ ಅಡಿಗಳಷ್ಟು ಅಗಲದ ಸೇತುವೆ ಒಂದಿದ್ದು ಅದನ್ನು ನರಕ ಸೇತುವೆ ಎಂದು ಕರೆಯುತ್ತಾರೆ. ಏಕೆಂದರೆ ಇದರ ಅಗಲ ಅತಿ ಕಡಿಮೆಯಾಗಿದ್ದು ಆಯ ತಪ್ಪಿದಲ್ಲಿ ಪಾತಾಳವೆ ಗತಿ!

ಇನ್ನೂ ಮೂರನೇಯದಾಗಿ ಪ್ರಸಿದ್ಧವಾಗಿರುವ ಗುಡ್ಡವೆ ಇಳಿಕಲ್ಲು. ಇದರ ರಚನೆಯೂ ಸಹ ವಿಚಿತ್ರವಾಗಿದೆ. ಮೂಲತಃ ಇದೊಂದು ಹೆಬ್ಬಂಡೆಯಾಗಿದ್ದು ಅದರ ಅರ್ಧ ಭಾಗವು ಬಿದ್ದು ಹೋಗಿರುವುದರಿಂದ ಒಂದು ವಿಶೇಷವಾದ ರಚನೆಯಾಗಿ ಇದು ಆಕರ್ಷಿಸುತ್ತದೆ. ಹಾಗಾಗಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ ಈ ಇಳಿಕಲ್ಲು.

ಮೂರು ವಿಚಿತ್ರ ಕಲ್ಲು ಗುಡ್ಡಗಳು !

ಚಿತ್ರಕೃಪೆ: Kkraj08

ಸಮುದ್ರ ಮಟ್ಟದಿಂದ ಈ ಗುಡ್ಡವು ಮೂರುವರೆ ಸಾವಿರ ಅಡಿಗಳಷ್ಟು ಎತ್ತರವಾಗಿದ್ದು ಸುತ್ತಮುತ್ತಲಿನ ಪರಿಸರದ ರಮಣೀಯ ನೋಟವನ್ನು ನೋಡುಗರಿಗೆ ಕರುಣಿಸುತ್ತದೆ. ಮೂರು ಕಿ.ಮೀ ಗಳಷ್ಟು ಚಾರಣದ ಮೂಲಕವಾಗಿ ಈ ಗುಡ್ಡವನ್ನು ಏರಬಹುದಾಗಿದ್ದು ಒಂದು ರೀತಿಯ ರೋಮಾಂಚನ ಅನುಭವ ಈ ಗುಡ್ಡ ಒದಗಿಸುತ್ತದೆ.

ಇನ್ನೂ ಈ ಗುಡ್ಡದ ಮೇಲಿಂದ ಪಶ್ಚಿಮ ಘಟ್ಟಗಳ ಅನನ್ಯ ನೋಟವನ್ನು ಕಾಣಬಹುದಾಗಿದ್ದು ಚಳಿಗಾಲದ ಸಮಯದಲ್ಲಿ ಮಂಜಿನ ನರ್ತನವನ್ನು ಇಲ್ಲಿ ಕಾಣಬಹುದು. ಸೂರ್ಯೋದಯ ಹಾಗೂ ಸೂರ್ಯಾಸ್ತದ ಜೊತೆ ಜೊತೆಗೆ ಚಂದ್ರೋದಯದ ನೋಟವೂ ಸಹ ಇಲ್ಲಿಂದ ಅದ್ಭುತವಾಗಿ ಗೋಚರಿಸುತ್ತದೆ.

ಮೂರು ವಿಚಿತ್ರ ಕಲ್ಲು ಗುಡ್ಡಗಳು !

ಚಿತ್ರಕೃಪೆ: Hciteam1

ಕೊಟ್ಟಾಯಂ ಜಿಲ್ಲೆಯ ತಿಕೋಯಿ ಗ್ರಾಮದ ಬಳಿ ಸ್ಥಿತವಿದೆ. ಈ ಶಿಖರಕ್ಕೆ ಹೋಗುವ ಮಾರ್ಗವೂ ಸಹ ಬಲು ಸವಾಲೆಸೆಯುವಂತಿದೆ. ಮೊನಚಾದ ಸುರುಳಿಯಾಕಾರದ ರಸ್ತೆಯು ನಿಪುಣ ಹಾಗೂ ವೃತ್ತಿಪರ ಚಾಲಕರಿಗೂ ಬಲು ಕಷ್ಟವೆನಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

ಮೂರು ವಿಚಿತ್ರ ಕಲ್ಲು ಗುಡ್ಡಗಳು !

ಚಿತ್ರಕೃಪೆ: Activedogs

ಇಳಿಕಲ್ ಗುಡ್ಡದಲ್ಲಿ ಹಲವಾರು ನೈಸರ್ಗಿಕ ನೀರಿನ ಚಿಲುಮೆಗಳಿದ್ದು ಅವೆಲ್ಲವೂ ಸೇರಿ ಮೀನಚಲ್ ನದಿಯನ್ನು ಹುಟ್ಟು ಹಾಕಿವೆ. ಅಲ್ಲದೆ ಪ್ರವಾಸಿಗರು ಮೂರು ಕಿ.ಮೀ ಚಾರಣ ಮಾಡಿಯೆ ಈ ಗುಡ್ಡವನ್ನು ತಲುಪಬೇಕು. ಇಲ್ಲಿ ಯಾವುದೆ ಉಪಹಾರಗೃಹಗಳಾಗಲಿ ಇಲ್ಲ. ವಿದ್ಯುತ್ ಸೌಲಭ್ಯವೂ ಇಲ್ಲ. ಸಂಚಾರಿ ದೂರವಾಣಿಯ ಸಿಗ್ನಲ್ ಲಭಿಸುವುದು ಕಷ್ಟ. ಹಾಗಾಗಿ ಮುಂಚಿತವಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡು ಇಲ್ಲಿಗೆ ಟ್ರೆಕ್ ಹೋಗುವುದು ಉತ್ತಮ.

ನಿಮಗಿಷ್ಟವಾಗಬಹುದಾದ ಕೆಲವು ಇತರೆ ಲೇಖನಗಳು:

ಅದ್ಭುತ ಗಿರಿ ರಾಮಕ್ಕಾಲ್ಮೇಡು ನೋಡಲೇಬೇಕು!

ಕೇರಳ ಗುಡ್ಡಗಳಿಂದ ಕಾಣುವ ಅದ್ಭುತ ನೋಟಗಳು!

ಮೋಡಿ ಮಾಡುವ ಟಾಪ್ ಸ್ಟೇಷನ್ ನೋಡಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X