Search
  • Follow NativePlanet
Share
» »ಅಕ್ಕಮಹಾದೇವಿಯ ಅಜ್ಞಾತ ಗುಹೆ

ಅಕ್ಕಮಹಾದೇವಿಯ ಅಜ್ಞಾತ ಗುಹೆ

By Vijay

ಶಿವ ಶರಣೆ ಅಕ್ಕಮಹಾದೇವಿ ನಮ್ಮೆಲ್ಲರಿಗೂ ಚಿರಪರಿಚಿತವಾದ ಹೆಸರು. 12 ನೇಯ ಶತಮಾನದಲ್ಲಿ ಜೀವಿಸಿದ್ದ ಈ ಶರಣೆಯು ಭಕ್ತಿ ಪರಂಪರೆಯ ಪ್ರಮುಖ ಶಿವ ಶರಣರುಗಳ ಪೈಕಿ ಒಂದಾಗಿದ್ದಾರೆ. ತಮ್ಮ ಜೀವನವನ್ನೆ ಶಿವನಿಗಾಗಿ, ಅರಿವು (ಮೋಕ್ಷ) ಪಡೆಯುವುದಕ್ಕಾಗಿ ಮೀಸಲಿಟ್ಟ ಮಹಾ ಸಾಧ್ವಿ ಅಕ್ಕ ಮಹಾದೇವಿ. ಜೀವನದ ಸತ್ಯವನ್ನು ಅರಿತುಕೊಳ್ಳಲು ಸಹಾಯಕವಾಗುವಂತಹ ಅನೇಕ ಹಿತ ವಚನಗಳನ್ನು ಅಕ್ಕ ಮಹಾದೇವಿಯು ಇಂದಿನ ಸಮಾಜಕ್ಕೆ ಕರುಣಿಸಿದ್ದಾಳೆ.

ಅಕ್ಕಮಹಾದೇವಿಯ ಅಜ್ಞಾತ ಗುಹೆ

ಚಿತ್ರಕೃಪೆ: రహ్మానుద్దీన్

ಒಂದು ಐತಿಹ್ಯದ ಪ್ರಕಾರ, ಅಕ್ಕ ಮಹಾದೇವಿಯು ಎಲ್ಲೆಡೆ ಸುತ್ತಾಡಿ, ವಚನಗಳನ್ನು ಪಸರಿಸುತ್ತ ಕೊನೆಗೆ ಶ್ರೀಶೈಲಂನ ಕಡಲಿ ಎಂಬ ದಟ್ಟಾರಣ್ಯದಲ್ಲಿ ಶಿವನನ್ನು ಆರಾಧಿಸುತ್ತ ಐಕ್ಯಗೊಂಡಳು. ಅದೇ ಸ್ಥಳವು ಇಂದು ಅಕ್ಕ ಮಹಾದೇವಿ ಗುಹೆಗಳು ಎಂಬ ಹೆಸರಿನಿಂದ ಪ್ರಚಲಿತದಲ್ಲಿದೆ. ಈ ಅಕ್ಕಮಹಾದೇವಿ ಗುಹೆ ಇರುವುದು ಶ್ರೀಶೈಲಂನಿಂದ ಕೇವಲ 18 ಕಿ.ಮೀ ದೂರದಲ್ಲಿ ಮಾತ್ರ. ವಿಶೇಷವೆಂದರೆ ಶ್ರೀಶೈಲಂನಲ್ಲೆ ಮತ್ತೊಬ್ಬ ಪರಮ ಶಿವ ಭಕ್ತೆಯಾದ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನವನ್ನೂ ಸಹ ಕಾಣಬಹುದಾಗಿದೆ.

ಅಕ್ಕಮಹಾದೇವಿಯ ಅಜ್ಞಾತ ಗುಹೆ

ಚಿತ್ರಕೃಪೆ: రహ్మానుద్దీన్

ಶ್ರೀಶೈಲಂ ಬಳಿಯಿರುವ ನಲ್ಲಮಲೈ ಪರ್ವತ ಶ್ರೇಣಿಗಳಲ್ಲಿ ಸಾಕಷ್ಟು ನೈಸರ್ಗಿಕವಾಗಿ ರೂಪಗೊಂಡಂತಹ ಗುಹೆಗಳನ್ನು ನೋಡಬಹುದಾಗಿದೆ. ಶಿಲಾಯುಗದಿಂದ ಮಾನವನ ವಾಸಕ್ಕೆ ಬಳಸಲ್ಪಡುತ್ತಿದ್ದ ಈ ಗುಹೆಗಳು ಕಾಲ ಜರಿದಂತೆ ವಿವಿಧೋದ್ದೇಶಗಳಿಗೆ ಬಳಕೆಯಾದವು ಎಂಬುದು ಇತಿಹಾಸದಿಂದ ತಿಳಿದುಬರುವ ಒಂದು ಅಂಶ. ಐತಿಹ್ಯದ ಪ್ರಕಾರ, ಅಕ್ಕ ಮಹಾದೇವಿಯ ಗುಹೆಯು ಒಂದೊಮ್ಮೆ ರಹಸ್ಯ ಶಕ್ತಿಯ ಚಟುವಟಿಗಳನ್ನು ನಡೆಸಲು ಕಾಪಾಲಿಕರಿಂದ ಬಳಸಲ್ಪಡುತ್ತಿತ್ತು ಎನ್ನಲಾಗಿದೆ.

ಅಕ್ಕಮಹಾದೇವಿಯ ಅಜ್ಞಾತ ಗುಹೆ

ಚಿತ್ರಕೃಪೆ: రహ్మానుద్దీన్

12 ನೇಯ ಶತಮಾನದಲ್ಲಿ ಅಕ್ಕಮಹಾದೇವಿಯು ಇಲ್ಲಿ ಬಂದು ವಾಸಿಸುತ್ತ, ಈ ಗುಹೆಯ ಒಳಗೆ ಕೊನೆಯಲ್ಲಿ ನೈಸರ್ಗಿಕವಾಗಿ ಉದ್ಭವಗೊಂಡ ಶಿವಲಿಂಗವನ್ನು[ವಿವಿಧ ಗಾತ್ರ ಆಕಾರಗಳ ಶಿವಲಿಂಗಗಳು] ಪೂಜಿಸುತ್ತ ಅಲ್ಲೆ ಐಕ್ಯಗೊಂಡ ನಂತರದ ಸಮಯದಿಂದ ಈ ಗುಹೆಗೆ ಅಕ್ಕಮಹಾದೇವಿ ಗುಹೆ ಎಂಬ ಹೆಸರು ಬಂದಿತು. ಪರ್ವತದ ಒಂದು ಬಂಡೆಯಲ್ಲಿ ರೂಪಿತವಾಗಿರುವ ಈ ಗುಹೆಯು ವಿಶೇಷವಾಗಿದ್ದು ನೈಸರ್ಗಿಕವಾದ ಕಲ್ಲಿನ ಕಮಾನು/ಆರ್ಚ್ ಏನಿಲ್ಲವೆಂದರೂ 200x16x4 ಅಳತೆಯನ್ನು ಹೊಂದಿದ್ದು, ಯಾವುದೆ ಆಧಾರ ಖಂಬವಿಲ್ಲದೆ ವೈಭವೋಪೇತವಾಗಿ ನಿಂತಿರುವುದನ್ನು ನೋಡಿದಾಗ ರೋಮಾಂಚನವುಂಟಾಗುತ್ತದೆ.

ಅಕ್ಕಮಹಾದೇವಿಯ ಅಜ್ಞಾತ ಗುಹೆ

ಚಿತ್ರಕೃಪೆ: రహ్మానుద్దీన్

ಕೃಷ್ಣಾ ನದಿಯ ಮೇಲ್ಭಾಗದಲ್ಲಿ ನೆಲೆಸಿರುವ ಈ ಗುಹೆಯ ಸುತ್ತಮುತ್ತಲು ಮಂತ್ರಮುಗ್ಧಗೊಳಿಸುವಂತಹ ಭೂದೃಶ್ಯಾವಳಿಗಳು ಕಂಡುಬರುತ್ತವೆ. ಶ್ರೀಶೈಲಂನಿಂದ ಈ ಗುಹೆಗೆ ಕೃಷ್ಣಾ ನದಿಯ ಮೂಲಕ ಮಾತ್ರವೆ ತೆರಳಬಹುದಾಗಿದೆ. ದೋಣಿಯ ಮೂಲಕ ಸುಮಾರು ಒಂದು ಘಂಟೆಯಷ್ಟು ಪ್ರಯಾಣ ಮಾಡಿ ನಂತರ ಕೊಂಚ ಟ್ರೆಕ್ ಮಾಡುತ್ತ ಈ ಗುಹೆಗಳನ್ನು ತಲುಪಬಹುದು.

ನಿಮಗಿಷ್ಟವಾಗಬಹುದಾದ ಇತರೆ ಲೇಖನಗಳು:

ಮಹಿಷಾಸುರ ಮರ್ದಿನಿ ಗುಹಾ ದೇವಾಲಯ

ಬೇಲಮ್ ಗುಹೆಗಳು : ಪ್ರಕೃತಿಯ ವಿಸ್ಮಯ

ಅರಕು ಕಣಿವೆ ಹಾಗೂ ಬೊರಾ ಗುಹೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X