Search
  • Follow NativePlanet
Share
» »ದಾರ್ಜೀಲಿಂಗ್ : ಸುವಾಸನೆಯುಕ್ತ ಚಹಾ ಅರಸುತ್ತ...

ದಾರ್ಜೀಲಿಂಗ್ : ಸುವಾಸನೆಯುಕ್ತ ಚಹಾ ಅರಸುತ್ತ...

By Vijay

ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಂಡುಬರುವ ಮಹಾಭಾರತ ಪರ್ವತ ಶ್ರೇಣಿ ಅಥವಾ ಲೆಸ್ಸರ್ ಹಿಮಾಲಯದಲ್ಲಿ ಸ್ಥಿತವಿರುವ ದಾರ್ಜೀಲಿಂಗ್ ಎಂಬ ಮುದ್ದಾದ ಪುಟಾಣಿ ಪ್ರದೇಶದಲ್ಲಿ ಸುವಾಸನೆಯುಕ್ತ ಬಿಸಿ ಬಿಸಿ ಚಹಾ ಕುಡಿದರೆ...ಸಾಕು ಒಂದೆ ಒಂದು ಕ್ಷಣದಲ್ಲಿ ನಿಮ್ಮ ಮನದ ಎಲ್ಲ ಒತ್ತಡಗಳು ಮಂಗಮಾಯ! ಹೇಗೆ ಅಂತಿರಾ? ಹೌದು ಇಲ್ಲಿ ಬೆಳೆಯಲಾಗುವ ಚಹಾ ಗಿಡಗಳ ಮಹಿಮೆಯೆ ಹಾಗೆ. ಅಷ್ಟೆ ಅಲ್ಲ ಈ ಗಿರಿಧಾಮದಲ್ಲಿ ಕೂ ಎಂದು ಕೂಗುತ್ತ, ಚುಕು ಬುಕು ಎಂದು ಚಲಿಸುವ ದಾರ್ಜೀಲಿಂಗ್ ಹಿಮಾಲಯನ್ ರೈಲು ಸಹ ಒಂದು ವಿನೂತನವಾದ ಆನಂದಮಯ ಅನುಭವವನ್ನು ಕರುಣಿಸುತ್ತದೆ.

ಇಲ್ಲಿ ಬೆಳೆಯಲಾಗುವ ಉತ್ತಮ ಗುಣಮಟ್ಟದ ಬ್ಲ್ಯಾಕ್ ಟೀ ಅಂತಾರಾಷ್ಟ್ರೀಯ ವಲಯದಲ್ಲೂ ಪ್ರಖ್ಯಾತಿಯನ್ನು ಪಡೆದಿದೆ. ಪಶ್ಚಿಮ ಬಂಗಾಳದ ಏಕೈಕ ಸುಂದರ ಗಿರಿಧಾಮ ಪ್ರದೇಶ ಇದಾಗಿದೆ. ಈ ಗಿರಿಧಾಮವನ್ನು ಸಂಚಾರದ ಪ್ರಮುಖ ಮೂರು ಮಾಧ್ಯಮಗಳಾದ ವಿಮಾನ, ರೈಲು ಹಾಗು ರಸ್ತೆ ಸಾರಿಗೆಯ ಮೂಲಕ ತಲುಪಬಹುದಾಗಿದೆ. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಬಗ್ಡೋಗ್ರಾ, ಇದು ಸುಮಾರು 88 ಕಿ.ಮೀ ದೂರದಲ್ಲಿದೆ. ರೈಲಿನ ಮೂಲಕ ಇಲ್ಲಿಗೆ ತೆರಳಬೇಕಾಗಿದ್ದರೆ ನಿವ್ ಜಲ್ಪೈಗುರಿ ರೈಲು ನಿಲ್ದಾಣಕ್ಕೆ ಬಂದಿಳಿಯಬೇಕು. ಇದು ಸಹ ದಾರ್ಜೀಲಿಂಗ್ ನಿಂದ ಸುಮಾರು 85 ಕಿ.ಮೀಗಳಷ್ಟು ಅಂತರದಲ್ಲಿದೆ. ಇನ್ನೂ ಬಸ್ ಮೂಲಕ ಪ್ರಯಾಣಿಸಬೇಕೆಂದಿದ್ದರೆ ಸಿಲಿಗುರಿಯ ತೆಂಜಿಂಗ್ ನಾರ್ಗೆ ಬಸ್ ನಿಲ್ದಾಣದಿಂದ ಬಸ್ ಗಳ ಸೇವೆಯನ್ನು ಪಡೆಯಬಹುದು. ಬಾಡಿಗೆ ವಾಹನಗಳನ್ನು ಪಡೆದು ಸಹ ಇಲ್ಲಿಂದ ದಾರ್ಜೀಲಿಂಗ್ ತಲುಪಬಹುದು. ಇದೊಂದು ಉತ್ತಮ ಆಯ್ಕೆಯಾಗಿದೆ.

ದಾರ್ಜೀಲಿಂಗ್ ಗಿರಿಧಾಮದಲ್ಲಿರುವ ಹಲವು ಆಕರ್ಷಣೆಗಳ ಕುರಿತು ಇಲ್ಲಿ ತಿಳಿಯಿರಿ.

ಚಹಾ ತೋಟ:

ಚಹಾ ತೋಟ:

ದಾರ್ಜೀಲಿಂಗ್ ತನ್ನಲ್ಲಿ ಬೆಳೆಯಲಾಗುವ ಬ್ಲ್ಯಾಕ್ ಟೀ ಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. 19 ನೆಯ ಶತಮಾನದ ಮಧ್ಯ ಕಾಲದಲ್ಲಿ ಬ್ರಿಟೀಷ್ ಆಡಳಿತವಿದ್ದಾಗ ಇಲ್ಲಿ ಸಾಕಷ್ಟು ತೋಟಗಳನ್ನು ಅಭಿವೃದ್ಧಿಪಡಿಸಲಾಯಿತು. ನಂತರ ಈ ಭಾಗದ ಚಹಾ ಬೆಳೆಗಾರರು ಹೈಬ್ರಿಡ್ ತಳಿಯ ಬ್ಲ್ಯಾಕ್ ಟೀ ಯನ್ನು ಅಭಿವೃದ್ಧಿಪಡಿಸಿದರು.

ಚಿತ್ರಕೃಪೆ: Royroydeb

ಟೈಗರ್ ಹಿಲ್:

ಟೈಗರ್ ಹಿಲ್:

ಸಮುದ್ರ ಮಟ್ಟದಿಂದ 8482 ಅಡಿಗಳಷ್ಟು ಎತ್ತರದಲ್ಲಿರುವ ಈ ಪರ್ವತವು ದಾರ್ಜೀಲಿಂಗ್ ಪಟ್ಟಣದಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ಕಂಚನಜುಂಗಾ ಹಾಗು ಪೂರ್ವ ಹಿಮಾಲಯ ಪರ್ವತಗಳ ಹಿಂಬದಿಯಲ್ಲಿ ಕಂಡುಬರುವ ಉತ್ಕೃಷ್ಟ ಮಟ್ಟದ ಸುಂದರ ಸೂರ್ಯೋದಯ ನೋಟ ಈ ಪರ್ವತದ ಮೇಲೆ ನಿಂತಾಗ ಕಾಣುವ ರೀತಿಯಿಂದಾಗಿ, ಟೈಗರ್ ಹಿಲ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದಿದೆ.

ಬತಾಸಿಯಾ ಲೂಪ್:

ಬತಾಸಿಯಾ ಲೂಪ್:

ಪಟ್ಟಣದಿಂದ ಐದು ಕಿ.ಮೀ ದೂರದಲ್ಲಿರುವ ಬತಾಸಿಯಾ ಲೂಪ್, 360 ಡಿಗ್ರಿ ವೃತ್ತಾಕಾರದಲ್ಲಿ ಚಾಚಿರುವ ಬೃಹತ್ ಟಾಯ್ ಟ್ರೈನ್ ಹಳಿಯಾಗಿದೆ. ಅತಿ ಎತ್ತರದ ಪ್ರದೇಶದಲ್ಲಿ ಮೇಲ್ಮುಖವಾಗಿ ಟ್ರೈನು ಚಲಿಸಬೇಕಾದ ಅನಿವಾರ್ಯತೆಯನ್ನು ನಿವಾರಿಸುವ ಉದ್ದೇಶದಿಂದ ಈ ರೀತಿಯಾಗಿ ವೃತ್ತಾಕಾರದಲ್ಲಿ ಈ ಮಾರ್ಗವನ್ನು ನಿರ್ಮಿಸಲಾಗಿದೆ. ಈ ಟಾಯ್ ಟ್ರೈನ್ ಮೂಲಕ ಚಲಿಸುವಾಗ ಕಂಚನಜುಂಗಾದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಚಿತ್ರಕೃಪೆ: SupernovaExplosion

ಯುದ್ಧ ಸ್ಮಾರಕ:

ಯುದ್ಧ ಸ್ಮಾರಕ:

ಬತಾಸಿಯಾ ಲೂಪ್ ಇರುವ ಸ್ಥಳದಲ್ಲೆ ಒಂದು ಸುಂದರವಾದ ಯುದ್ಧ ಸ್ಮಾರಕವನ್ನು ಕಾಣಬಹುದು. ಸ್ವಾತಂತ್ರ್ಯಾ ನಂತರದ ಹಲವು ಯುದ್ಧಗಳಲ್ಲಿ ಪ್ರಾಣ ತ್ಯಜಿಸಿದ ವೀರ ಯೋಧರ ಗೌರವಾರ್ಥವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Judith

ಚೌರಸ್ತಾ ಮತ್ತು ಮಾಲ್:

ಚೌರಸ್ತಾ ಮತ್ತು ಮಾಲ್:

ದಾರ್ಜೀಲಿಂಗ್ ಪಟ್ಟಣದ ಇದು ಹೃದಯ ಭಾಗವೆಂದರೆ ತಪ್ಪಾಗಲಾರದು. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೋಟೆಲುಗಳು, ಇತರೆ ವಸ್ತುಗಳ ಅಂಗಡಿ ಮುಗ್ಗಟ್ಟುಗಳನ್ನು ಕಾಣಬಹುದು. ಇಲ್ಲಿರುವ ಮಾಲ್ ಕೂಡ ಕೊಂಚ ಮಟ್ಟಿಗಿನ ರಭಸಮಯ ಜೀವನದ ಆಭಾಸವನ್ನು ಮೂಡಿಸುತ್ತದೆ. ಅಲ್ಲದೆ ಇಲ್ಲಿರುವ ಉದ್ಯಾನದಲ್ಲೂ ಕೂಡ ಶಾಂತವಾಗಿ ವಿರಮಿಸಬಹುದು. ಇದು ವಾಹನ ಸಂಚಾರದಿಂದ ಮುಕ್ತವಾಗಿದೆ.

ಚಿತ್ರಕೃಪೆ: P.K.Niyogi

ರಾಕ್ ಗಾರ್ಡನ್ ಮತ್ತು ಗಂಗಾ ಮಾಯಾ ಉದ್ಯಾನ:

ರಾಕ್ ಗಾರ್ಡನ್ ಮತ್ತು ಗಂಗಾ ಮಾಯಾ ಉದ್ಯಾನ:

ಪಟ್ಟಣದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿ ಈ ಆಕರ್ಷಣೆಗಳನ್ನು ಕಾಣಬಹುದು. ಇತ್ತೀಚಿನ ಕೆಲವು ವರ್ಷಗಳಿಂದ ಪ್ರಕೃತಿ ಸಹಜ ಜಲಪಾತವನ್ನೊಳಗೊಂಡಿರುವ ಈ ಉದ್ಯಾನವು ನೆಚ್ಚಿನ ಪಿಕ್ನಿಕ್ ಸ್ಪಾಟ್ ಆಗಿ ಹೆಸರುವಾಸಿಯಾಗಿದೆ. ಇದರೊಳಗೆ ಪ್ರವೇಶಿಸಲು ಹಾಗು ಛಾಯಾಚಿತ್ರಗಳನ್ನು ತೆಗೆಯಲು ಯಾವುದೆ ಶುಲ್ಕ ಕೊಡಬೇಕಾಗಿಲ್ಲ.

ಚಿತ್ರಕೃಪೆ: Shahnoor Habib Munmun

ಪೀಸ್ ಪಗೋಡಾ:

ಪೀಸ್ ಪಗೋಡಾ:

ಜಪಾನಿನ ಬೌದ್ಧ ಅನುಯಾಯಿಯಾದ ನಿಪ್ಪೊಂಜನ್ ಮ್ಯೊಹೋಜಿ ಎಂಬುವವರಿಂದ ದಾರ್ಜೀಲಿಂಗ್ ನಲ್ಲಿ ಈ ಬೌದ್ಧ ಮಂದಿರ ಸ್ಥಾಪಿಸಲ್ಪಟ್ಟಿದೆ. ಜಲಪಹಾಡ್ ಎಂಬ ಬೆಟ್ಟದ ಮೇಲೆ ಸ್ಥಿತವಿರುವ ಈ ಬೌದ್ಧ ಮಂದಿರಕ್ಕೆ ನಡೆಯುತ್ತ ಇಲ್ಲವೆ ಟ್ಯಾಕ್ಸಿಯ ಮೂಲಕವೂ ತಲುಪಬಹುದಾಗಿದೆ. ಬುದ್ಧನ ನಾಲ್ಕು ಅವತಾರಗಳನ್ನು ಈ ಮಂದಿರದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Shahnoor Habib Munmun

ಹಿಮಾಲಯನ್ ಮೌಂಟೇನಿಯರಿಂಗ್ ಇನ್ಸ್ಟಿಟ್ಯೂಟ್:

ಹಿಮಾಲಯನ್ ಮೌಂಟೇನಿಯರಿಂಗ್ ಇನ್ಸ್ಟಿಟ್ಯೂಟ್:

ಹಿಮಾಲಯನ್ ಪರ್ವತಾರೋಹಣ ತರಬೇತಿ ಸಂಸ್ಥೆಯು ಪರ್ವತಾರೋಹಣಪ್ರಿಯರ ಯಾತ್ರಾ ಕ್ಷೇತ್ರವೆಂದರೂ ತಪ್ಪಾಗಲಾರದು. ಸರ್ ಎಡ್ಮಂಡ್ ಹಿಲರಿ ಜೊತೆ 1953 ರಲ್ಲಿ ತೆಂಜಿಂಗ್ ನಾರ್ಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಗೌರವಾರ್ಥವಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ತರಬೇತಿಗೆ ಬೇಕಾಗಿರುವ ಎಲ್ಲ ಮೂಲಭೂತ ಸೌಕರ್ಯಗಳಿವೆ.

ಚಿತ್ರಕೃಪೆ: Shahnoor Habib Munmun

ದಾರ್ಜೀಲಿಂಗ್ ರೋಪ್ ವೇ:

ದಾರ್ಜೀಲಿಂಗ್ ರೋಪ್ ವೇ:

ರಂಗೀತ್ ಕಣಿವೆ ಪ್ರಯಾಣಿಕ ಕೇಬಲ್ ಕಾರ್ ಎಂತಲೂ ಕರೆಯಲ್ಪಡುವ ಈ ರೋಪ್ ವೇ ಒಂದು ವಿಶೀಷ್ಟವಾದ ಅನುಭವವನ್ನು ಒದಗಿಸುತ್ತದೆ. ಇದರಲ್ಲಿ ಪ್ರಯಾಣಿಸುವಾಗ ಕಂದಕಾದ ಅತಿ ಆಳ ಪ್ರದೇಶದ ತಲೆ ತಿರುಗಿಸುವಂತಹ ನೋಟವನ್ನು ಸವಿಯಬಹುದು. ಅಲ್ಲದೆ ಸುತ್ತಲ ಪರಿಸರದಲ್ಲಿರುವ ಚಹಾ ತೋಟಗಳ ಸುಂದರವಾದ ನೋಟವನ್ನು ಕೂಡ ಸವಿಯಬಹುದು.

ಆಬ್ಸರ್ವೇಟರಿ ಹಿಲ್ ಮತ್ತು ಮಹಾಕಾಲ ದೇವಾಲಯ:

ಆಬ್ಸರ್ವೇಟರಿ ಹಿಲ್ ಮತ್ತು ಮಹಾಕಾಲ ದೇವಾಲಯ:

ಸ್ಥಳೀಯವಾಗಿ "ಪವಿತ್ರ ಗುಡ್ಡ" ಎಂದು ಕರೆಯಲ್ಪಡುವ ಈ ಸ್ಥಳವು ಚೌರಸ್ತಾದಿಂದ ಕೇವಲ ಕೆಲವೆ ನಿಮಿಷಗಳ ಕಾಲ್ನಡಿಗೆಯ ದೂರದಲ್ಲಿದೆ. ಪಟ್ಟಣದ ಅತಿ ಎತ್ತರದ ಸ್ಥಳದಲ್ಲಿ ಇದು ಸ್ಥಿತವಿದೆ. ಈ ಬೆಟ್ಟದ ತುದಿಯಲ್ಲಿರುವ ಮಹಾಕಾಲ್ ದೇವಸ್ಥಾನದ ಬಲಿಪೀಠದಲ್ಲಿ ಹಿಂದು ಹಾಗು ಬೌದ್ಧ ಈ ಎರಡೂ ಧರ್ಮದವರ ಅರ್ಚಕರಿರುವುದು ಅಚ್ಚರಿಯ ಸಂಗತಿ.

ಚಿತ್ರಕೃಪೆ: Kailas98

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X