Search
  • Follow NativePlanet
Share
» »ಬೆಂಗಳೂರಿನಲ್ಲೇ ಇರುವ ಈ ಆಕರ್ಷಣೆಗಳು ಗೊತ್ತಾ?

ಬೆಂಗಳೂರಿನಲ್ಲೇ ಇರುವ ಈ ಆಕರ್ಷಣೆಗಳು ಗೊತ್ತಾ?

By Vijay

ಸ್ವಲ್ಪ ಸಮಯವಿದೆಯೆ? ಅಥವಾ ಬೆಂಗಳೂರಿಗೆ ಹಾಗೆ ಸುಮ್ಮನೆ ಸುತ್ತಾಡಲು ಅಥವಾ ರಜೆಯ ಮಜೆಗೆಂದು ಬಂದಿರುವಿರಾ? ಏನೆಲ್ಲ ಬೆಂಗಳೂರಲ್ಲಿ ನೋಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗೆ ಒಮ್ಮೆ ಅಂತರ್ಜಾಲದಲ್ಲಿ ಬೆಂಗಳೂರು ಕುರಿತು ಹುಡುಕಿ ನೋಡಿ.

ಒಂದೆ ಕ್ಷಣದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಬೆಂಗಳೂರು ಕುರಿತು ಲಿಂಕುಗಳು ನಿಮಗೆ ಕಾಣಸಿಗುವುದರಲ್ಲಿ ಸಂಶಯವಿಲ್ಲ. ಯಾವುದಾದರೂ ಲಿಂಕ್ ತೆರೆದು ನೋಡಿ. ಬೆಂಗಳೂರಿನ ಪ್ರಮುಖ ಗುರುತರವಾದ ಪ್ರವಾಸಿ ಆಕರ್ಷಣೆಗಳಾದ ಲಾಲ್ ಬಾಗ್, ಕಬ್ಬನ್ ಪಾರ್ಕ್, ವಿಧಾನ ಸೌಧ, ಬಸವನಗುಡಿ, ಸಂಗ್ರಹಾಲಯ ಮುಂತಾದವುಗಳು ಕುರಿತು ಪ್ರತಿ ವೆಬ್ ತಾಣದಲ್ಲೂ ಮಾಹಿತಿ ಇದ್ದೆ ಇರುತ್ತದೆ.

ನಿಮಗಿಷ್ಟವಾಗಬಹುದಾದ ಲೇಖನ : ಮೈಸೂರಿನ ಸುಂದರ ಆಕರ್ಷಣೆಗಳು

ಆದರೆ ಬೆಂಗಳೂರು ಪ್ರವಾಸಕ್ಕೆಂದು ಬಂದ ಜನರಿಗೆ ಕೇವಲ ಗುರುತರವಾದ ಆಕರ್ಷಣೆಗಳ ಕುರಿತು ಮಾತ್ರ ತಿಳಿಯುತ್ತದೆ. ಇವುಗಳ ಹೊರತಾಗಿ ಅಷ್ಟೊಂದಾಗಿ ಕೇಳರಿಯದ/ಹೆಸರುವಾಸಿಯಾಗದ ಸ್ಥಳಗಳ ಕುರಿತಾಗಲಿ ಅಥವಾ ಆಫ್ ಬೀಟ್ ಎಂದು ಹೇಳಲಾಗುವ ಸ್ಥಳಗಳ ಬಗ್ಗೆ ಇಲ್ಲವೆ ಯಾವೆಲ್ಲ ಕೆಲವು ಅಹ್ಲಾದಕರ ಚಟುವಟಿಕೆಗಳನ್ನು ಬೆಂಗಳೂರಿನಲ್ಲಿ ಅನುಭವಿಸುವುದರ ಕುರಿತಾಗಲಿ ಒಂದೆ ತಾಣದಲ್ಲಿ ಮಾಹಿತಿ ಸಿಗುವುದು ಕಷ್ಟ.

ಈ ಅಂಶವನ್ನೆ ಗಣನೆಗೆ ತೆಗೆದುಕೊಂಡು ಪ್ರಸ್ತುತ ಲೇಖನದಲ್ಲಿ ಯಾವೆಲ್ಲ ಚಟುವಟಿಕೆಗಳನ್ನು ಅಥವಾ ಸ್ಥಳಗಳನ್ನು ನೀವು ಬೆಂಗಳೂರಿನಲ್ಲಿದ್ದಾಗ ಕ್ರಮವಾಗಿ ಮಾಡಬಹುದು ಹಾಗೂ ನೋಡಬಹುದು ಎಂಬುದರ ಕುರಿತು ತಿಳಿಸಲಾಗಿದೆ. ನೀವು ಬೆಂಗಳೂರಿಗೆ ಹೊಸಬರಾಗಿದ್ದರೆ ಅಥವಾ ಇದರ ಕುರಿತು ತಿಳಿದಿಲ್ಲವೆಂದರೆ ಸಮಯ ಸಿಕ್ಕಾಗ ನೀವೂ ಅನುಭವಿಸಿ. ಇದೊಂದು ಚುಟುಕು ಹಾಗೂ ಎಂದೂ ಮರೆಯಲಾಗದ ಪ್ರವಾಸವಾಗಬಹುದು.

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಇದು ಬೆಂಗಳೂರಿನ ಅಲಸೂರಿನಲ್ಲಿರುವ ರಾಮಕೃಷ್ಣ ಮಠ. 1906 ರ ನಂತರ ರಾಮಕೃಷ್ಣ ಪರಮಹಂಸರ ಕೆಲವು ಶಿಷ್ಯರು ಅಲಸೂರಿನಲ್ಲಿ ಜಾಗ ಭೋಗ್ಯಕ್ಕೆ ಪಡೆದು ಅಲ್ಲಿ ರಾಮಕೃಷ್ಣ ಮಿಷನ್ನಿನ ಕುರಿತು ಸಭೆ, ಧ್ಯಾನ, ಪ್ರಾರ್ಥನೆ ಮುಂತಾದವುಗಳನ್ನು ನಡೆಸುತ್ತಿದ್ದರು. ಇದು ಹೀಗೆ ಮುಂದುವರೆದು ಸ್ವಾಮಿ ವಿಮಲಾನಂದರು ಇದನ್ನು ಆಶ್ರಮವನ್ನಾಗಿ ಮಾಡಲು ಘೊಷಿಸಿದರು. ಅದರಂತೆ ಅಧಿಕೃತವಾಗಿ ನವಂಬರ್ 17, 1907 ರಂದು ಇದು ಉದ್ಘಾಟನೆಗೊಂಡಿತು. ಸಮಯವಿದ್ದಾಗ ಭೇಟಿ ನೀಡಲು ಯೋಗ್ಯವಾದ ಆಶ್ರಮ ಇದಾಗಿದೆ.

ಚಿತ್ರಕೃಪೆ: Ramashray

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಕೃ.ರಾ ಮಾರುಕಟ್ಟೆ : ಬೆಂಗಳೂರಿನ ಹೃದಯ ಭಾಗದಲ್ಲಿ ನೆಲೆಸಿರುವ ನಗರದ ಅತಿ ದೊಡ್ಡ ಮಾರುಕಟ್ಟೆ ಪ್ರದೇಶ ಇದಾಗಿದೆ. ಮೈಸೂರಿನ ಅರಸರಾದ ಕೃಷ್ಣರಾಜ ವಡೇಯರ್ ಅವರ ಗೌರವಾರ್ಥ ಇದಕ್ಕೆ ಕೃಷ್ಣರಾಜೇಂದ್ರ ಮಾರುಕಟ್ಟೆ ಎಂಬ ಹೆಸರನ್ನಿಡಲಾಗಿದೆ.

ಚಿತ್ರಕೃಪೆ: Nicolas Mirguet

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಸಾಂಪ್ರದಾಯಿಕ ಬೆಂಗಳೂರಿನ ಅದರಲ್ಲೂ ವಿಶೇಷವಾಗಿ ವೈವಿಧ್ಯಮಯ ಸಮುದಾಯಗಳ ಜೀವನಶೈಲಿಯ ಕುರಿತು ತಿಳಿಯುವ ಹಂಬಲವಿದ್ದಲ್ಲಿ ಈ ಮಾರುಕಟ್ಟೆಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ತರಕಾರಿಗಳಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳವರೆಗೆ ಎಲ್ಲ ರೀತಿಯ ಸಾಮಾನು ಸರಂಜಾಮುಗಳು ಸಿಗುವ ಮಾರುಕಟ್ಟೆಯಾಗಿದೆ ಇದು.

ಚಿತ್ರಕೃಪೆ: Pp391

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಕೃ.ರಾ ಮಾರುಕಟ್ಟೆ ಹೂವುಗಳಿಗೆ ಬಹಳವೆ ಪ್ರಸಿದ್ಧಿಯಾಗಿದೆ. ಎಲ್ಲ ರೀತಿಯ ವಿಧ ವಿಧದ ಹೂವು ಹಾರಗಳು ಇಲ್ಲಿ ದೊರೆಯುತ್ತವೆ. ಏಷಿಯಾ ಖಂಡದಲ್ಲೆ ಕೃ.ರಾ ಮಾರುಕಟ್ಟೆ ಅತಿ ದೊಡ್ಡ ಹೂವು ಮಾರುಕಟ್ಟೆ ಹೊಂದಿದ ಪ್ರದೇಶ ಎಂದು ಪರಿಗಣಿಸಲಾಗಿದೆ.

ಚಿತ್ರಕೃಪೆ: Seenatn

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಕೆ ಆರ್ ಮಾರುಕಟ್ಟೆಯ ಹತ್ತಿರದಲ್ಲೆ ಇರುವ ಟಿಪ್ಪು ಅರಮನೆ. ಇತಿಹಾಸದ ಪ್ರಕಾರ ಹಿಂದೆ ಟಿಪ್ಪು ಸುಲ್ತಾನನು ರಾಜ್ಯಾಭಾರ ಮಾಡುತ್ತಿದ್ದ ಸಮಯದಲ್ಲಿ ಈ ಅರಮನೆಯನ್ನು ತನ್ನ ಬೇಸಿಗೆಯ ರಜೆ ಕಳೆಯುವ ಉದ್ದೇಶದಿಂದ ಬಳಸುತ್ತಿದ್ದನಂತೆ. ಸುಂದರ ಹಾಗೂ ಸರಳವಾದ ಕಲಾತ್ಮಕತೆಯನ್ನು ಹೊಂದಿರುವ ಅರಮನೆ ಇಂದು ಒಂದು ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: wikipedia

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಲಾಲ್ ಬಾಗ್ ಬೆಂಗಳೂರಿನ ಒಂದು ಗುರುತರವಾದ ಆಕರ್ಷಣೆ. ಪ್ರಮುಖವಾಗಿ ಇದೊಂದು ಜೈವಿಕ ಸಸ್ಯೋದ್ಯಾನವಾಗಿದ್ದು ಅನೇಕ ರೀತಿಯ ಸಸ್ಯ, ಹೂವು ಹಾಗೂ ಗಿಡ ಮರಗಳನ್ನು ಇಲ್ಲಿ ಕಾಣಬಹುದು. ಆದರೆ ವಿಸ್ತಾರವಾದ ಈ ಉದ್ಯಾನದಲ್ಲಿ ಒಂದು ಸಣ್ಣ ಹಾಗೂ ಅಷ್ಟೆ ಆಕರ್ಷಕವಾದ ಕೆರೆಯೂ ಇರುವುದು ವಿಶೇಷ. ಸಾಕಷ್ಟು ಪಕ್ಷಿಗಳಿಗೆ ಜೀವನಾಧಾರವಾಗಿರುವ ಈ ಕೆರೆ ಭೇಟಿ ನೀಡುವವರಿಗೂ ಸಂತಸ ನೀಡುತ್ತದೆ.

ಚಿತ್ರಕೃಪೆ: Cyphor

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ನೆಹರೂ ತಾರಾಲಯ : ದೇಶದಲ್ಲಿರುವ ಐದು ನೆಹರೂ ತಾರಾಲಯಗಳ ಪೈಕಿ ಬೆಂಗಳೂರಿನ ಈ ತಾರಾಲಯವೂ ಸಹ ಒಂದಾಗಿದೆ. ಈ ತಾರಾಲಯವು ವರ್ಷಕ್ಕೆ ಲಕ್ಷಕ್ಕೂ ಅಧಿಕ ಜನರ ಭೇಟಿಯನ್ನು ಕಾಣುತ್ತದೆ. ಹಲವು ವಿಶೇಷ ಪ್ರಾಜೆಕ್ಟರುಗಳು ಇಲ್ಲಿದ್ದು ಖಗೋಳಶಾಸ್ತ್ರ ಹಾಗೂ ಬರಿಗಣ್ಣಿನಲ್ಲಿ ಆಕಾಶ ವಿಕ್ಷಣೆಗೆ ಸಹಾಯಕವಾಗಿವೆ.

ಚಿತ್ರಕೃಪೆ: Rajeshodayanchal

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಸ್ವಾತಂತ್ರ್ಯ ಉದ್ಯಾನವನ : ಫ್ರೀಡಮ್ ಪಾರ್ಕ್ ಎಂತಲೂ ಕರೆಯಲ್ಪಡುವ ಈ ಸ್ಥಳ ಬೆಂಗಳೂರಿನ ಮುಖ್ಯ ಗುರುತರ ಪ್ರದೇಶವಾದ ಕೆ ಆರ್ ವೃತ್ತದ ಬಳಿ ಸ್ಥಿತವಿದೆ. ಮೊದಲಿಗೆ ಈ ಸ್ಥಳವು ಒಂದು ಕೇಂದ್ರೀಯ ಸೆರೆಮನೆಯಾಗಿತ್ತು. 2008 ರಲ್ಲಿ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದ್ದು ಇದರ ಒಂದು ಭಾಗವನ್ನು ಶಾಂತಿಯುತ ಪ್ರತಿಭಟನೆಗಳಂತಹ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ.

ಚಿತ್ರಕೃಪೆ: Tbayer

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಕಹಳೆ ಬಂಡೆ : ಇದು ಬೆಂಗಳೂರಿನ ಪ್ರತಿಷ್ಠಿತ ಬಸವನಗುಡಿ ಬಡಾವಣೆಯಲ್ಲಿರುವ ಒಂದು ಸುಂದರ, ಸ್ವಚ್ಛ ಹಾಗೂ ಶಾಂತತೆಯಿಂದ ಕೂಡಿರುವ ಉದ್ಯಾನ. ದೊಡ್ಡ ಗಣಪತಿ ದೇಗುಲದ ಹಿಂಭಾಗ ಹಾಗೂ ಬಸವನಗುಡಿ ದೇವಾಲಯದ ಪಕ್ಕದಲ್ಲೆ ಇರುವ ಈ ಉದ್ಯಾನವು ಚಿಕ್ಕ ಬೆಟ್ಟವೊಂದರ ಮೇಲಿದ್ದು ಅಲ್ಲಲ್ಲಿ ಕಲ್ಲು ಬಂಡೆಗಳಿಂದ ತುಂಬಿ ಕೊಂಡಿರುವುದು ವಿಶೇಷ.

ಚಿತ್ರಕೃಪೆ: Sarvagnya

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಮೂಲತಃ ಇದೊಂದು ಕಲ್ಲು ಬೆಟ್ಟವೆ ಆಗಿದ್ದು ಭೂಮಟ್ಟದಿಂದ ವಿಲಕ್ಷಣವಾಗಿ ಏರಿದ ಸ್ಥಿತಿಯಲ್ಲಿದೆ. ಈ ಬೆಟ್ಟ ಕಲ್ಲಿನ ಆಯಸ್ಸು ಸುಮಾರು ಮೂರು ಸಾವಿರ ಮಿಲಿಯನ್ ವರ್ಷಗಳಾಗಿರಬಹುದೆಂಬ ವಿಚಾರವೆ ವೈಜ್ಞಾನಿಕ ವಲಯದಲ್ಲಿ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ.

ಚಿತ್ರಕೃಪೆ: Sarvagnya

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬೆಂಗಳೂರಿಗೆ ಮಿತಿಯನ್ನೊದಗಿಸುವ ನಿಟ್ಟಿನಲ್ಲಿ ನಿರ್ಮಿಸಿದ್ದ ನಾಲ್ಕು ಗೋಪುರಗಳ ಪೈಕಿ ಒಂದು ಈ ಕಹಳೆ ಬಂಡೆಯ ಉದ್ಯಾನದಲ್ಲಿರುವುದು ವಿಶೇಷ. ಇಂದು ಇಲ್ಲಿ ಸುಂದರವಾದ ಉದ್ಯಾನವೊಂದನ್ನು ಬಂಡೆಗಳ ಮಧ್ಯದಲ್ಲಿಯೆ ನಿರ್ಮಿಸಲಾಗಿದ್ದು ಕಾರಂಜಿಗಳ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ವಿರಾಮದ ಸಮಯವನ್ನು ಹಾಯಾಗಿ ಶಾಂತತೆಯಿಂದ ಕಳೆಯಲು ಆದರ್ಶಮಯವಾಗಿದೆ ಈ ಸ್ಥಳ. ಅಲ್ಲಲ್ಲಿ ಬೆಳೆದ ದೊಡ್ಡ ಗಿಡ ಮರಗಳಲ್ಲಿ ನೇತಾಡುವ ಬಾವಲಿಗಳನ್ನೂ ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: SChapman1982

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಅಲ್ಲದೆ ಉದ್ಯಾನದ ಒಂದು ಭಾಗದಲ್ಲಿ ಬೆಂಗಳೂರಿನ ಶ್ರೀಮಂತ ಸಂಸ್ಕೃತಿಯನ್ನು ಸದಾ ಉಳಿಸುವ ನಿಟ್ಟಿನಲ್ಲಿ ಹಲವು ಮಹನೀಯರ ಶಿಲ್ಪಗಳನ್ನು ನಿರ್ಮಿಸಲಾಗಿದ್ದು ನೋಡುಗರಿಗೆ ಆನಂದವನ್ನುಂಟು ಮಾಡುತ್ತದೆ. ಕೆಂಪೇಗೌಡರ, ಡಿ ವಿ ಗುಂಡಪ್ಪರವರ ಶಿಲ್ಗಲನ್ನು ಇಲ್ಲಿ ಕಾಣಬಹುದು. ಇದು "ಬ್ಯೂಗಲ್ ರಾಕ್ಸ್" ಎಂಬ ಹೆಸರಿನಿಂದಲೆ ಬೆಂಗಳೂರಿನಾದ್ಯಂತ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Sarvagnya

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಕಾರ್ನರ್ ಸ್ಟೋನ್ ಉದ್ಯಾನ : ಬೆಂಗಳೂರಿನ ಪ್ರತಿಷ್ಠಿತ ಸಿ ಎಂ ಎಚ್ ರಸ್ತೆ ಹಾಗೂ ನೂರು ಅಡಿ ಇಂದಿರಾನಗರ ರಸ್ತೆ ಸಮಾಗಮವಾಗುವ ಸ್ಥಳದಲ್ಲಿ ಸ್ಥಿತವಿದೆ ಈ ಸುಂದರ ಉದ್ಯಾನ. ಮಹಾನಗರ ಸಭೆ ಪಾಲಿಕೆಯ ಉದ್ಯಾನವಾದರೂ ಕಾರ್ನರ್ ಸ್ಟೋನ್ ಎಂಬ ಸಂಸ್ಥೆ ತನ್ನ ಸಮಾಜಿಕ ಜವಾಬ್ದಾರಿಯ ಅಂಗವಾಗಿ ಈ ಉದ್ಯಾನವನ್ನು 2012 ರಲ್ಲಿ ನವೀಕರಣಗೊಳಿಸಿದೆ. ಹಾಗೆ ಸಂಜೆಯ ಸಮಯವನ್ನು ಹಾಯಾಗಿ ಕಳೆಯಲು ಉತ್ತಮ ಸ್ಥಳವಾಗಿದೆ ಈ ಉದ್ಯಾನ.

ಚಿತ್ರಕೃಪೆ: Veritas77777

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಲುಂಬಿಣಿ ಉದ್ಯಾನ : ಬೆಂಗಳೂರಿನಲ್ಲಿರುವ ನಾಗಾವರ ಕೆರೆಯ ತಾಣದಲ್ಲಿರುವ ಸಾರ್ವಜನಿಕ ಉದ್ಯಾನವನ ಇದಾಗಿದೆ. ದೋಣಿ ವಿಹಾರದ ಸೌಲಭ್ಯವಿಲ್ಲಿದ್ದು ವಾರಾಂತ್ಯದ ರಜಾ ದಿನಗಳನ್ನು ಸುಮಧುರವಾಗಿ ಕಳೆಯಲು ಈ ಉದ್ಯಾನ ಆದರ್ಶಮಯವಾಗಿದೆ.

ಚಿತ್ರಕೃಪೆ: Rishabh Mathur

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಯಲಹಂಕಾದ ದಳವಾಯಿಯಾಗಿದ್ದ ಕೆಂಪೇಗೌಡರು ಇಂದಿನ ಬೆಂಗಳೂರಿನ ಪ್ರಮುಖ ನಿರ್ಮಾತೃ. ಅವರ ಕಾರ್ಯಾಭಾರ ಮಾಡುತ್ತಿದ್ದ ಸಮಯದಲ್ಲಿ ಅಂದರೆ 16 ನೇಯ ಶತಮಾನದ ಆರಂಭದ ಸಮಯದಲ್ಲಿ ಬೆಂಗಳೂರು ನಗರವು ಸಾಕಷ್ಟು ಕೆರೆ ತೊರೆಗಳಿಂದ ತುಂಬಿತ್ತು. ಅಂದಿನ ಬೆಂಗಳೂರಿನ ಶ್ರೀಮಂತ ಇತಿಹಾಸದ ಕುರಿತು ತಿಳಿಯುವ/ನೋಡುವ ಇಚ್ಛೆಯಿದ್ದಲ್ಲಿ ಒಂದೊಮ್ಮೆ ಕೆಂಪೇಗೌಡ ಸಂಗ್ರಹಾಲಯಕ್ಕೆ ಭೇಟಿ ನೀಡಿ. ಬೆಂಗಳೂರಿನ ಎಂಜಿ ರಸ್ತೆ ಬಳಿಯಿರುವ ಮೆಯೋ ಹಾಲಿನ ಮೊದಲ ಮಹಡಿಯಲ್ಲಿ ಈ ಸಂಗ್ರಹಾಲಯ ಸ್ಥಿತವಿದೆ.

ಚಿತ್ರಕೃಪೆ: Rameshng

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಸರ್ಕಾರಿ ವಸ್ತು ಸಂಗ್ರಹಾಲಯ : ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಈ ಸಂಗ್ರಹಾಲಯವಿದೆ. ಕರ್ನಾಟಕ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಈ ಸಂಗ್ರಹಾಲಯದಲ್ಲಿ ಪುರಾತನ ಕಾಲದ ಅನೇಕ ಅನನ್ಯ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಇತಿಹಾಸ ಪ್ರಿಯ ಪ್ರವಾಸಿಗರಿಗೆ ಇದೊಂದು ಅದ್ಭುತ ತಾಣವಾಗಿದೆ. ಪುರಾತನ ನಾಣ್ಯಗಳು, ವರ್ಣಚಿತ್ರಗಳು, ಶಾಸನಗಳು ಹೀಗೆ ಹತ್ತು ಹಲವು ವಸ್ತುಗಳನ್ನು ಇಲ್ಲಿ ಕಾನಬಹುದಾಗಿದೆ.

ಚಿತ್ರಕೃಪೆ: Arunram

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಬೆಂಗಳೂರಿನ ಹಳೆಯ ಹಾಗೂ ಜನನಿಬಿಡ ಬಡಾವಣೆಯಾದ ಚಿಕ್ಪೇಟೆಯಲ್ಲಿರುವ ಅವೆನ್ಯೂ ರಸ್ತೆ ಒಮ್ಮೆಯಾದರೂ ಭೇಟಿ ಕೋಡಲೇಬೇಕಾದ ವಿಶಿಷ್ಟ ರಸ್ತೆಯಾಗಿದೆ. ಚಿಕ್ಕದಾದ ರಸ್ತೆಯಾದರೂ ಸಹ ಇಲ್ಲಿ ಖರೀದಿಗೆಂದು ಬರುವ ಜನರ ಪ್ರಮಾಣವೇನೂ ಚಿಕ್ಕದಿಲ್ಲ. ವಿಶೇಷವಾಗಿ ಈ ರಸ್ತೆಯು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸ್ವರ್ಗವಾಗಿದೆ ಕಾರಣ ಇಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುವ ಎಲ್ಲ ರೀತಿಯ ಹಾಗು ಎಲ್ಲ ವಿಷಯಗಳ ಪಠ್ಯಪುಸ್ತಕಗಳು. ಅಲ್ಲದೆ ಹೂವು, ಹಣ್ಣು ತರಕಾರಿಗಳೂ ಸಹ ಇಲ್ಲಿ ಯಥೇಚ್ಚವಾಗಿ ದೊರೆಯುತ್ತವೆ.

ಚಿತ್ರಕೃಪೆ: Nvvchar

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಅದ್ಭುತ ಶಾಪಿಂಗ್ ಅನುಭವ, ರುಚಿಕರವಾದ ಹಾಗೂ ವೈವಿಧ್ಯಮಯವಾದ ಹಣ್ಣುಗಳನ್ನು ಸವಿಯುವ ಬಯಕೆಯಾದಲ್ಲಿ ಬೆಂಗಳೂರಿನ ಶಿವಾಜಿನಗರದ ಕಮರ್ಷಿಯಲ್ ಬೀದಿ ಹಾಗೂ ರಸೆಲ್ ಮಾರುಕಟ್ಟೆಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಕಮರ್ಷಿಯಲ್ ಬೀದಿ ಶಿವಾಜಿ ನಗರ ಬಸ್ಸು ನಿಲ್ದಾಣದಿಂದ ಬಹಳ ಹತ್ತಿರದಲ್ಲಿದ್ದು ಅದ್ಭುತವಾದ ಶಾಅಪಿಂಗ್ ಇಲ್ಲಿ ಮಾಡಬಹುದಾಗಿದೆ. ವೈವಿಧ್ಯಮಯ ಉಡುಪುಗಳು ಇಲ್ಲಿ ಮಿತವ್ಯಯ ಬೆಲೆಗೂ ಲಭ್ಯ ಆದರೆ ಕೊಂಚ ಚೌಕಾಸಿ ಮಾಡಬೇಕಷ್ಟೆ. ಅಲ್ಲದೆ ಮುಸ್ಲಿಮ್ ಸಮುದಾಯದವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಈದ್ ನಂತಹ ಸಂದರ್ಭದಲ್ಲಿ ಈ ಬೀದಿಯು ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುತ್ತದೆ.

ಚಿತ್ರಕೃಪೆ: Saad Faruque

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ವೈವಿಧ್ಯಮಯ, ಆಮದು ಮಾಡಿಕೊಂಡ ಹಲವು ವಿಶಿಷ್ಟ ಹಣ್ಣುಗಳು ದೊರೆಯುವ ಸ್ಥಳವೆ ರಸೆಲ್ ಮಾರುಕಟ್ಟೆ.

ಚಿತ್ರಕೃಪೆ: prashanthns

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಬೆಂಗಳೂರಿನ ತಿಗಳರಪೇಟೆಯ ಒ.ಟಿ.ಸಿ ರಸ್ತೆಯಲ್ಲಿರುವ ಧರ್ಮರಾಯ ದೇವಸ್ಥಾನವು ಐತಿಹಾಸಿಕವಾಗಿ ಒಂದು ವಿಶೀಷ್ಟವಾದ ದೇವಸ್ಥಾನವಾಗಿದೆ. ಭಾರತ ದೇಶದಲ್ಲೆ ಪಾಂಡವರಿಗೆ ಸಮರ್ಪಿಸಲಾದ ಅನನ್ಯ ದೇವಾಲಯ ಇದಾಗಿದೆ. ಈ ದೇವಾಲಯವು ಗಂಗ ಅರಸು ಜನಾಂಗದವರಿಂದ ನಿರ್ಮಿಸಲ್ಪಟ್ಟಿದೆ ಎಂದು ತಿಳಿಯಲಾಗಿದೆ. ಇವರು ಮೂಲತಃ ಉತ್ತರ ತಮಿಳುನಾಡಿನಿಂದ ದಕ್ಷಿಣ ಮೈಸೂರು ಪ್ರಾಂತ್ಯಕ್ಕೆ ವಲಸೆ ಬಂದವರಾಗಿದ್ದಾರೆ. ಪುರಾತತ್ವ ಇಲಾಖೆಯು ಈ ದೇಗುಲವು ಸುಮಾರು 800 ವರ್ಷಗಳಷ್ಟು ಪುರಾತನವಾದುದು ಎಂದು ದಾಖಲಿಸಿದೆ. ಈ ದೇವಸ್ಥಾನದಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವವೆಂದರೆ ಕರಗ. ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ ಆಕರ್ಷಣೆಯಾಗಿದೆ ಇದು.

ಚಿತ್ರಕೃಪೆ: Thigala4u alias Shri

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಮಾಸ್ಕ್ ರೋಡ್/ಮಸೀದಿ ರಸ್ತೆ : ನೀವು ಮಾಂಸಾಹಾರ ಪ್ರೀಯರೆ, ವಿಧ ವಿಧವಾದ ಮಾಂಸ ಭಕ್ಷ್ಯಗಳನ್ನು ತಿನ್ನಲು ಇಷ್ಟವಿದೆಯೆ? ಹಾಗಾದರೆ ಬೆಂಗಳೂರಿನ ಫ್ರೇಸರ್ ಟೌನ್ ನಲ್ಲಿರುವ ಮಸೀದಿ ರಸ್ತೆಗೊಮ್ಮೆ ಭೇಟಿ ನೀಡಿ. ರಸ್ತೆಯ ಎರಡೂ ಬದಿಗಳಲ್ಲಿ ಬಾಯಲ್ಲಿ ನೀರೂರಿಸುವಂತಹ ತಿಂಡಿ ಮಳಿಗೆಗಳು ನಿಮ್ಮನ್ನು ಕೈಬಿಸಿ ಕರೆಯುತ್ತವೆ. ಒಮ್ಮೊಮ್ಮೆ ಪ್ರೀತಿಯಿಂದ ಇದನ್ನು ತಿನ್ನುಬಡುಕರ ಸ್ವರ್ಗ ಎಂತಲೂ ಕರೆಯುತ್ತಾರೆ. ವಿಶೇಷವಾಗಿ ಇಫ್ತಾರ್ ಹಬ್ಬದ ಸಂದರ್ಭದಲ್ಲಿ ಇಲ್ಲಿ ಬಗೆ ಬಗೆಯಾದ ತಿನಿಸುಗಳು ಲಭ್ಯ. ವಿಶೇಷವಾಗಿ ಸಮೋಸಾ ಹಾಗೂ ಕಬಾಬ್ ಗಳು ಇಲ್ಲಿ ರುಚಿಕರವಾಗಿರುತ್ತವೆ.

ಚಿತ್ರಕೃಪೆ: Mohammed Muzammil

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಲಾಲ್ ಬಾಗ್ ರಾಕ್ : ಲಾಲ್ ಬಾಗ್ ಕುರಿತು ಬಹುಶಃ ಎಲ್ಲರಿಗೂ ತಿಳಿದೆ ಇದೆ. ಆದರೆ ಲಾಲ್ ಬಾಗ್ ದಕ್ಷಿಣಕ್ಕಿರುವ ಪುಟ್ಟ ಕಲ್ಲಿನ ಬೆಟ್ಟದ ಕುರಿತು ತಿಳಿದಿದೆಯೆ? ಹೌದ್ಯ್ ಕೆಂಪೇಗೌಡರ ಗೋಪುರವಿರುವ ಈ ಕಲ್ಲು ಬಂಡೆಗಳ ಬೆಟ್ಟ ಅಪರೂಪದ ತಾಣವಾಗಿದೆ. ಏಕೆಂದರೆ ಈ ಕಲ್ಲು ಏನಿಲ್ಲವೆಂದರೂ ಮೂರು ಬಿಲಿಯನ್ ವರ್ಷಗಳಷ್ಟು ಪುರಾತನವಾದುದು ಎಂದು ಹೇಳಲಾಗಿದೆ. ಇಂದಿಗೂ ಈ ಬೆಟ್ಟದ ಮೇಲೆ ಸಾಕಷ್ಟು ಪ್ರವಾಸಿಗರು ಬರುತ್ತಿರುತ್ತಾರೆ.

ಚಿತ್ರಕೃಪೆ: Melanie Molitor

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ನೃತ್ಯಗ್ರಾಮ : ಪ್ರವಾಸಿ ಆಕರ್ಷಣೆಯೂ ಆದ ನೃತ್ಯಗ್ರಾಮವು ಬೆಂಗಳೂರಿನ ಹೊರವಲಯದಲ್ಲಿ ಹಚ್ಚ ಹಸಿರಿನ ನಡುವೆ ನೆಲೆಸಿರುವ ಸುಂದರ ಗ್ರಾಮ. ಪ್ರೊತಿಮಾ ಗೌರಿ (ಪ್ರೊತಿಮಾ ಗೌರಿ ಬೇಡಿ) ಎಂಬ ಒಡಿಶಿ ನೃತ್ಯಗಾರ್ತಿಯಿಂದ ಮೇ 11, 1990 ರಲ್ಲಿ ಸ್ಥಾಪಿಸಲ್ಪಟ್ಟಿದೆ. ವಿವಿಧ ನೃತ್ಯಗಳ ಪ್ರಕಾರಗಳು ಹಾಗೂ ಪ್ರದರ್ಶನಗಳು ಇಲ್ಲಿ ಅವ್ಯಾಹತವಾಗಿ ಜರುಗುತ್ತಿರುತ್ತವೆ.

ಚಿತ್ರಕೃಪೆ: Tim Schapker

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಅಷ್ಟೆ ಅಲ್ಲ, ಹಳ್ಳಿಯ ನೈಜ ವಾತಾವರಣವನ್ನು ಬಿಂಬಿಸುವಂತಹ ಪರಿಸರವನ್ನು ಈ ನೃತ್ಯಗ್ರಾಮದಲ್ಲಿ ಕಾಣಬಹುದು. ಕೇವಲ ಪ್ರದರ್ಶನಗಳಲ್ಲದೆ ಒಡಿಶಿ, ಕಥಕ್ ಹಾಗೂ ಭರತನಾಟ್ಯಂ ನೃತ್ಯಗಳ ತರಬೇತಿಯನ್ನೂ ಸಹ ಇಲ್ಲಿ ನೀಡಲಾಗುತ್ತದೆ. ಬೆಂಗಳೂರು ನಗರ ವಲಯದಿಂದ ಸುಮಾರು 35 ಕಿ.ಮೀ ದೂರದಲ್ಲಿ ಹೆಸರಘಟ್ಟ ಪ್ರದೇಶದಲ್ಲಿ ಈ ನೃತ್ಯಗ್ರಾಮ ಸ್ಥಿತವಿದೆ.

ಚಿತ್ರಕೃಪೆ: Tim Schapker

ಆಹಾ..ಇದು ನಮ್ಮ ಬೆಂಗಳೂರು:

ಆಹಾ..ಇದು ನಮ್ಮ ಬೆಂಗಳೂರು:

ಸಂದರ್ಶಕರಿಗೆಂದು ಮಂಗಳವಾರದಿಂದ ರವಿವಾರದವರೆಗೆ ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ತೆರೆದಿರುತ್ತದೆ. ಬೆಂಗಳೂರಿನ ಕೆಂಪೇಗೌಡ ಬಸ್ಸು ನಿಲ್ದಾಣ ಹಾಗೂ ಕೆ.ಆರ್ ಮಾರುಕಟ್ಟೆಯಿಂದ ಹೆಸರಘಟ್ಟಕ್ಕೆ ಬಸ್ಸುಗಳು ಲಭ್ಯವಿದೆ. ಹೆಸರಘಟ್ಟದಿಂದ ನೃತ್ಯಗ್ರಾಮವು ಕೇವಲ ಐದು ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Tim Schapker

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X