Search
  • Follow NativePlanet
Share
» »ಇವು ದೇಶದ 4ನೇ ಅತಿದೊಡ್ಡ ಆಲದ ಮರಗಳು

ಇವು ದೇಶದ 4ನೇ ಅತಿದೊಡ್ಡ ಆಲದ ಮರಗಳು

ಮೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಆಲದ ಮರಗಳು ಸರಿ ಸುಮಾರು 400 ವರ್ಷಗಳಷ್ಟು ಪುರಾತನದ್ದು. ಇಲ್ಲಿರುವುದು ಬರೀ ಆಲದ ಮರಗಳೇ ಆಗಿದ್ದರೂ, ಒಂದಕ್ಕಿಂತ ಒಂದು ವಿಭಿನ್ನವಾಗಿವೆ.

By Divya

ವಾರದ ರಜೆ ಬರುತ್ತಿದ್ದಂತೆ ಏನೋ ಸಡಗರ, ಸಂಭ್ರಮ ಮನಸ್ಸಲ್ಲಿ ಮೂಡುತ್ತಿತ್ತು. ಆದರೆ ಕಳೆದ ವಾರ ಹಾಗಾಗಲಿಲ್ಲ. ಅದೇನೋ ನಿರಾಸೆ ಭಾವ, ಬೇಸರ ನನ್ನನ್ನು ಕಾಡುತ್ತಿತ್ತು. ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ಒಂಟಿಯಾಗಿ ಇರಬೇಕು ಅಥವಾ ಎಲ್ಲಾದರೂ ದೂರ ಹೋಗಬೇಕು ಅನಿಸುತ್ತಿತ್ತು... ಬೇಸರದಲ್ಲಿ ಪತ್ರಿಕೆಯೊಂದನ್ನು ನೋಡುತ್ತಿದ್ದೆ... ಆಗ ದೊಡ್ಡ ಆಲದ ಮರದ ಲೇಖನ ಓದಿದೆ. ಸುಮ್ಮನೆ ಆ ಕಡೆ ಹೋಗಿ ಬಿಡೋಣ ಅನಿಸಿತು... ಮನಸ್ಸು ಹೇಳಿದಂತೆ ಬಸ್ ಹತ್ತಿ, ದೊಡ್ಡ ಆಲದ ಮರದ ಕಡೆ ಹೋದೆ...

The Big Banyan Tree Bangalore

PC: wikimedia.org

ಬೆಂಗಳೂರಿನಂತಹ ಜನ ಜಂಗುಳಿಯ ಪ್ರದೇಶದಲ್ಲೂ ಅನೇಕ ಸುಂದರ ತಾಣಗಳಿವೆ. ಆದರೆ ಅದನ್ನು ಸರಿಯಾಗಿ ಯಾರು ಗುರುತಿಸುವುದಿಲ್ಲ. ಅದರಲ್ಲೂ ಸರ್ಕಾರಿ ಸ್ವತ್ತು ಎಂದರೆ ಅದೇನೋ ಒಂದು ಬಗೆಯ ತಾತ್ಸಾರ... ಹೀಗೆ ಯೋಚಿಸುತ್ತಾ ಹೋಗುತ್ತಿದ್ದೆ... ಒಂದು ತಾಸಿನಲ್ಲೆಲ್ಲಾ ಅಂದುಕೊಂಡ ಜಾಗಕ್ಕೆ ಬಂದು ತಲುಪಿದೆ. ಕೈಯಲ್ಲೊಂದಿಷ್ಟು ತಿಂಡಿ ನನ್ನ ಬಳಿಯಿತ್ತು... ಆಲದ ಉದ್ಯಾನದ ಒಳಗೆ ಹೋಗುತ್ತಿದ್ದಂತೆ ಒಂದಿಷ್ಟು ಕೋತಿಗಳು ಸ್ವಾಗತಿಸುತ್ತಾ, ನನ್ನ ಕೈಲಿದ್ದ ತಿಂಡಿಗೆ ಗುರಿ ಇಟ್ಟಿದ್ದವು. ವಿಚಾರ ಅರಿಯುತ್ತಿದ್ದ ಮರು ಕ್ಷಣವೇ ತಿಂಡಿಗಳನ್ನು ಅವರಿಗೆ ಕೊಟ್ಟು ಬಿಟ್ಟೆ...

The Big Banyan Tree Bangalore

PC: flickr.com

ವಿಶಾಲವಾದ ಈ ಉದ್ಯಾನದಲ್ಲಿ ತಂಪಾದ ವಾತಾವರಣ ಹಿತವಾದ ಅನುಭವ ನೀಡುತ್ತಿತ್ತು... ಅಲ್ಲಿಗೆ ಅನೇಕ ಪ್ರವಾಸಿಗರು ಬಂದಿದ್ದರು. ಅವರಲ್ಲಿ ಒಬ್ಬರು ಈ ಆಲದ ಮರದ ಬಗ್ಗೆ ವಿವರಣೆ ನೀಡುತ್ತಿದ್ದರು... ಆ ಸಮಯದಲ್ಲಿ ಕಲೆ ಹಾಕಿದ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ... ಬೆಂಗಳೂರಿನ ಹೃದಯ ಭಾಗದಿಂದ 32.9 ಕಿ.ಮೀ. ದೂರದಲ್ಲಿರುವ ಈ ತಾಣ ಭಾರತದ ನಾಲ್ಕನೇ ಅತಿದೊಡ್ಡ 'ಆಲದ ಮರಗಳ ತಾಣ' ಎಂದು ಗುರುತಿಸಲಾಗಿದೆ. ಇದು ಬೆಂಗಳೂರು ದಕ್ಷಿಣ ತಾಲೂಕು ಕೇತೋಹಳ್ಳಿಯಲ್ಲಿದೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ 8 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಬಸ್‍ಗಳ ವ್ಯವಸ್ಥೆಯೂ ಧಾರಾಳವಾಗಿವೆ.

The Big Banyan Tree Bangalore

PC: wikimedia.org

ಮೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಆಲದ ಮರಗಳು ಸರಿ ಸುಮಾರು 400 ವರ್ಷಗಳಷ್ಟು ಪುರಾತನದ್ದು. ಇಲ್ಲಿರುವುದು ಬರೀ ಆಲದ ಮರಗಳೇ ಆಗಿದ್ದರೂ, ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಮೊದಲು ಇನ್ನೂ ಅನೇಕ ಮರಗಳು ಕೂಡಿಕೊಂಡು ಇದ್ದವು. ಕೆಲವು ರೋಗಗಳಿಂದ ಮರದ ಬೇರುಗಳು ಸತ್ತು ಹೋದವು. ಹಾಗಾಗಿಯೇ ಮರಗಳ ಸಂಖ್ಯೆಯೂ ಕಡಿಮೆಯಾಗಿವೆ ಎಂದು ಹೇಳಲಾಗುತ್ತದೆ.

ಮರಗಳ ಮಧ್ಯೆ ಓಡಾಡಲು ಸೂಕ್ತವಾದ ದಾರಿ ವ್ಯವಸ್ಥೆ, ಕುಳಿತುಕೊಳ್ಳಲು ಕಲ್ಲಿನ ಮಂಚಗಳು, ಮನ ತಣಿಸಲು ಹಸಿರು ಗಿಡಗಳು ಇಲ್ಲಿವೆ. ವಾರದ ರಜೆಯಲ್ಲಿ ಹಾಗೂ ಸಂಜೆಯ ವಿಹಾರಕ್ಕೆ ಸೂಕ್ತ ತಾಣ. ಒಮ್ಮೆ ಇಲ್ಲಿಗೆ ಬಂದು ಕುಳಿತರೆ ವಿಭಿನ್ನ ಬಗೆಯ ಪ್ರವಾಸಿಗರು, ಆಲದ ಮರದ ಸೌಂದರ್ಯ ಹಾಗೂ ಕೋತಿಗಳ ಚೇಷ್ಟೆಯನ್ನು ನೋಡಿ ಆನಂದಿಸಬಹುದು.

The Big Banyan Tree Bangalore

PC: wikimedia.org

ಇಲ್ಲಿ ಒಂದು ಮುನೇಶ್ವರ ದೇವಾಲಯ ಇರುವುದು ಕಾಣಬಹುದು. ರಾತ್ರಿಯ ವೇಳೆ ಯಾರೋ ಈ ಮೂರ್ತಿಯನ್ನು ತಂದು ಇಟ್ಟಿದ್ದರು. ನಂತರ ಇಲ್ಲಿ ಗುಡಿಯನ್ನು ನಿರ್ಮಿಸಿದರು ಎನ್ನಲಾಗುತ್ತದೆ. ರಾತ್ರಿ 8 ಗಂಟೆಯ ನಂತರ ಯಾರೂ ಓಡಾಡುವುದಿಲ್ಲ. ಹಿಂದಿನ ಕಾಲದಲ್ಲಿ ಋಷಿಮುನಿಗಳು ಓಡಾಡುತ್ತಿದ್ದರು ಎನ್ನುವ ನಂಬಿಕೆಯಿದೆ. ಬೇಸರದ ಸಂಗತಿಯೆಂದರೆ ಇಲ್ಲಿಗೆ ಬರುವ ಕಿಡಿ ಗೇಡಿಗಳು ಹಾಗೂ ಪ್ರೇಮಿಗಳು ಮರದ ಮೇಲೆ, ಕಲ್ಲಿನ ಮೇಲೆ ಹೆಸರು ಹಾಗೂ ವ್ಯಂಗ್ಯ ಚಿತ್ರಗಳನ್ನು ಬಿಡಿಸಿರುವುದು.

The Big Banyan Tree Bangalore

PC: wikimedia.org

ನೆನಪಿನಲ್ಲಿ ಇಡಿ
* ಈ ತಾಣಕ್ಕೆ ಬಂದಾಗ ವಿಶಾಲವಾದ ಆಲದ ಮರದ ನೆರಳಲ್ಲಿ ಕುಳಿತು ಪರಿಸರವನ್ನು ಆನಂದಿಸಿ. ಅದನ್ನು ಬಿಟ್ಟು ಮರಗಳ ಕೊಂಬೆಗಳ ಮೇಲೆ ಚಿತ್ರ, ಬರಹಗಳನ್ನು ಕೆತ್ತಬೇಡಿ.
* ಜೊತೆಯಲ್ಲಿ ಒಯ್ದ ತಿಂಡಿಗಳ ಕಾಗದ, ಕವರ್ ಹಾಗೂ ಬಾಟಲ್‍ಗಳನ್ನು ಎಲ್ಲೆಂದರಲ್ಲಿ ಬಿಸಾಡದಿರಿ. ಕಸ ಹಾಕಲು ಎಂದು ಅಲ್ಲಲ್ಲಿ ಇರಿಸಿರುವ ಕಸದ ತೊಟ್ಟಿಯಲ್ಲಿಯೇ ಹಾಕಿ.
* ಒಳಗಡೆ ಹೋಗಿ ಅಲ್ಲಿರುವ ವಸ್ತುಗಳನ್ನು ಹಾಳುಮಾಡಬೇಡಿ. ಅಲ್ಲಿರುವ ಹೊಸ ವಿಚಾರವನ್ನು ತಿಳಿದು ಆನಂದಿಸಿ ಬನ್ನಿ.
* ಇಲ್ಲಿ ಕೋತಿಗಳು ಹೆಚ್ಚಾಗಿ ಇರುವುದರಿಂದ ಸ್ವಲ್ಪ ಜಾಗ್ರತೆ ಬೇಕು. ಕೋತಿಗಳಿಗೆ ತಿಂಡಿಯಲ್ಲಿ ಕಲ್ಲು, ಮುಳ್ಳುಗಳನ್ನು ಸೇರಿಸಿ ಹಾಕಬೇಡಿ. ಸಾಧ್ಯವಾದರೆ ತಿಂಡಿಯನ್ನು ನೀಡಿ ಇಲ್ಲವಾದರೆ ಸುಮ್ಮನಿದ್ದುಬಿಡಿ.

Read more about: ಬೆಂಗಳೂರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X