Search
  • Follow NativePlanet
Share
» »ತಮಿಳುನಾಡಿನ ಪ್ರಸಿದ್ಧ ಶಿವ ದೇವಾಲಯಗಳು!

ತಮಿಳುನಾಡಿನ ಪ್ರಸಿದ್ಧ ಶಿವ ದೇವಾಲಯಗಳು!

ದೇವಾಲಯಗಳ ರಾಜ್ಯ ಎಂದು ಜನಪ್ರೀಯತೆಗಳಿಸಿರುವ ತಮಿಳುನಾಡು ರಾಜ್ಯದಲ್ಲಿ ಸಾಕಷ್ಟು ಪ್ರಮುಖವಾದ ಹಾಗೂ ಹೆಚ್ಚು ಭೇಟಿ ನೀಡಲ್ಪಡುವ ದೇವಾಲಯಗಳಿವೆ

By Mahesh Kumar

ತಮಿಳುನಾಡು ಎಂದರೆ ಕೇಳಬೇಕೆ?..ಸಾಂಪ್ರದಾಯಿಕ ಆಚರಣೆಯಿಂದಾಗಲಿ, ಅದರ ಭೌಗೋಳಿಕ ಅಂಶಗಳಿಂದಾಗಲಿ ಅತ್ಯಂತ ಶ್ರೀಮಂತ ರಾಜ್ಯ.
ಬೆಟ್ಟಗುಡ್ಡಗಳು, ಕೋಟೆ ಕೊತ್ತಲುಗಳು, ಸಮುದ್ರ ತೀರಗಳು, ಪ್ರವಾಸಿ ತಾಣಗಳು, ಪರಂಪರಾಗತವಾಗಿ ಬಂದ ಸಂಗೀತ, ನೃತ್ಯ, ಹಾಗೂ ಕಲಾಚರಣೆಯ ವೈಶಿಷ್ಟ್ಯತೆಗಳು, ಅಲ್ಲಿನ ವಾಸ್ತುವಿನ್ಯಾಸಗಳು ಹೀಗೆ ಎಲ್ಲ ರೀತಿಯಿಂದಲೂ ಜನರನ್ನು ತನ್ನತ್ತ ಸೆಳೆಯುತ್ತಾ ಬಂದಿದೆ.

ಹಲವಾರು ಶತಮಾನಗಳು ಚೋಳರ, ಪಾಂಡ್ಯರ, ನಾಯಕರ ಮತ್ತು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ತಮಿಳುನಾಡು, ಆಗಿನಿಂದ ಈಗಿನವರೆಗೂ ತನ್ನ ವಿಶಿಷ್ಟ ವಾಸ್ತುಶಿಲ್ಪ ಶೈಲಿಯಿಂದ ದೇಶವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಾ ಪ್ರಸಿದ್ಧತೆಯನ್ನು ಪಡೆದಿದೆ.

ತಮಿಳುನಾಡಿನ ದೇವಿಗೆ ಮುಡಿಪಾದ ಪ್ರಮುಖ ದೇವಾಲಯಗಳು!

ಪ್ರಪಂಚದಲ್ಲಿಯೇ ಸಾಂಪ್ರದಾಯಿಕ ಮಟ್ಟದಲ್ಲಿ ಗುರುತಿಸಿಕೊಂಡ ಜಾಗಗಳಲ್ಲಿ ತಮಿಳುನಾಡು ಅಗ್ರಸ್ಥಾನವನ್ನು ಪಡೆದಿರುವುದಾಗಿ ಪ್ಯಾರೀಸ್‌ನ ಅಂತರರಾಷ್ಟ್ರೀಯ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ (UNESCO-United Nations Educational, Scientific andCultural Organization)ಹೆಗ್ಗಳಿಸಿಕೊಂಡಿದೆ. ದೇವಸ್ಥಾನಗಳ ವಾಸ್ತುಶಿಲ್ಪಕ್ಕೆ ಹೋಲಿಸಿದರೆ ಇಡೀ ಭಾರತದಲ್ಲಿಯೇ ಅತ್ಯಂತ ಮನೋಹರವಾದ ದೇವಾಲಯಗಳು ತಮಿಳುನಾಡಿನಲ್ಲಿ ಕಾಣಸಿಗುತ್ತವೆ.

ತಮಿಳುನಾಡಿನ ದೇವಾಲಯಗಳ ವಾಸ್ತುಶಿಲ್ಪ ಶೈಲಿಯು ಹಲವಾರು ವಾಸ್ತುಶಿಲ್ಪ ಸಂಶೋಧಕರ ಹಾಗು ವಾಸ್ತುಶಿಲ್ಪ ವಿದ್ಯಾರ್ಥಿಗಳ ಅಧ್ಯಯನಕ್ಕೆ ತವರುಮನೆ ಎಂದೇ ಹೇಳಬಹುದು. ದಕ್ಷಿಣಭಾರತದ ಬಹುಪಾಲು ಹೆಸರಾಂತ ಹಿಂದು ದೇವರುಗಳ ದೇವಾಲಯಗಳನ್ನು ತಮಿಳುನಾಡಿನಲ್ಲೇ ನೋಡಬಹುದು. ಇಲ್ಲಿ ಹೆಚ್ಚು ಆರಾಧಿಸಲ್ಪಡುವ ದೇವರುಗಳೆಂದರೆ ಶಿವ, ಮುರುಗ(ಷಣ್ಮುಖ), ಹಾಗೂ ವಿಷ್ಣು.

ಹೀಗೆ ತಮಿಳುನಾಡಿನಲ್ಲಿ ನೋಡಬಹುದಾದ ಸುಂದರ ವಾಸ್ತುಶಿಲ್ಪದಿಂದ ಕೂಡಿದ ಶಿವನ ದೇವಾಲಯಗಳ ಪಟ್ಟಿ ಈ ಕೆಳಕಂಡಂತಿದೆ.

ತಂಜಾವೂರು

ತಂಜಾವೂರು

ತಮಿಳುನಾಡಿನ ತಂಜಾವೂರಿನಲ್ಲಿರುವ ಈ ದೇವಸ್ಥಾನವು ಭಾರತದಲ್ಲಿಯೇ ಅತ್ಯಂತ ದೊಡ್ಡ ದೇವಾಲಯವಾಗಿದ್ದು ಸುಂದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಚೋಳರ ಕಾಲದಲ್ಲಿ ನಿರ್ಮಿತವಾದ ಈ ದೇವಾಲಯವನ್ನು ಸ್ಥಳೀಯರು "ತಂಜಾಯ್ ಪೆರಿಯ ಕೋವಿಲ್" ಎಂದು ಕರೆಯುತ್ತಾರೆ. ಇದನ್ನು ರಾಜರಾಜೇಶ್ವರ ದೇವಸ್ಥಾನವೆಂದೂ ಸಹ ಕರೆಯಲಾಗುತ್ತದೆ. ಕ್ರಿ.ಪೂ.1010 ರಲ್ಲಿ ಪೂರ್ಣಗೊಂಡ ಈ ದೇವಸ್ಥಾನವನ್ನು ಕಟ್ಟಿಸಿದ್ದು ರಾಜಾ ಅರುಳ್ ಮೋಳಿವರ್ಮನ್ ಎಂದು ಇಲ್ಲಿನವರು ಹೇಳುತ್ತಾರೆ. ಕುಂಜಾರ ಮಲ್ಲನ್ ರಾಜಾ ರಾಮಪರುಂತಾಚನ್ ಇದರ ವಾಸ್ತುಶಿಲ್ಪಿ.

ಚಿತ್ರಕೃಪೆ: Yuhamathi Balasubramanian

ರಾಮೇಶ್ವರಂ:

ರಾಮೇಶ್ವರಂ:

ಪಾಂಡ್ಯರ ಕಾಲದಲ್ಲಿ ನಿರ್ಮಿತವಾದ ಈ ಪುರಾಣ ಪ್ರಸಿದ್ಧ ದೇವಸ್ಥಾನ ತಮಿಳುನಾಡಿನ ರಾಮೇಶ್ವರಂ ಎಂಬ ದ್ವೀಪದಲ್ಲಿದೆ. ಶ್ರೀರಾಮನು ರಾವಣನ ಮೇಲೆ ಯುದ್ಧ ಮಾಡಿ, ರಾವಣನಂತಹ ಬ್ರಾಹ್ಮಣನನ್ನು ಕೊಂದು ಅದರಿಂದ ಪಾಪಮುಕ್ತನಾಗಲು ಇಲ್ಲಿನ ಶಿವಲಿಂಗವನ್ನು ಪೂಜಿಸುತ್ತಿದ್ದನೆಂಬುದು ಪ್ರತೀತಿ. ಈ ಶಿವಲಿಂಗವು ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇಲ್ಲಿ ಮುಖ್ಯವಾಗಿ ಸೀತೆಯಿಂದ ನಿರ್ಮಿಸಲ್ಪಟ್ಟದ್ದು ಎಂದು ಹೇಳಲಾಗುವ ಮಣ್ಣಿನ ಲಿಂಗ ಹಾಗೂ ಹನುಮಂತ ಕೈಲಾಸ ಪರ್ವತದಿಂದ ತಂದು ಸ್ಥಾಪಿಸಲ್ಪಟ್ಟಿದೆ ಎಂದು ಹೇಳಲಾಗುವ ವಿಶ್ವಲಿಂಗವನ್ನು ಪೂಜಿಸಲಾಗುತ್ತದೆ. ಅತ್ಯಂತ ದೊಡ್ಡ ಹೊರಾಂಗಣ, 22 ತೀರ್ಥ ಕೊಳಗಳು, ಕಲ್ಲು ಹಾಗೂ ಮರಳು ಮಿಶ್ರಿತ ಕಂಬ ಮತ್ತು ಮೇಲ್ಛಾವಣಿಗಳು, ತೆಪ್ಪೋತ್ಸವಗಳು ಇಲ್ಲಿನ ಬಹುಮುಖ್ಯ ಆಕರ್ಷಣೆಗಳು.

ಚಿತ್ರಕೃಪೆ: Ssriram mt

ದ್ರಾವಿಡ ಶೈಲಿ

ದ್ರಾವಿಡ ಶೈಲಿ

ದ್ರಾವಿಡ ಶೈಲಿಯ ವಾಸ್ತುಕೆತ್ತನೆ ಈ ದೇವಾಲಯದ ವಿಶೇಷ. ತಮಿಳುನಾಡಿನ ಕುಂಬಕೋಣಂ ಬಳಿಯಿರುವ ದರಾಸುರಂ ಎಂಬ ಪಟ್ಟಣದಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಶಿವನನ್ನು ಐರಾವತೇಶ್ವರ ಎಂದು ಕರೆಯುತ್ತಾರೆ. ದೂರ್ವಾಸ ಮುನಿಯ ಶಾಪದಿಂದ ಇಂದ್ರನ ವಾಹನವಾದ ಐರಾವತದ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗಿತು. ಈ ಶಾಪದಿಂದ ಮುಕ್ತನಾಗಿ ಮತ್ತೆ ತನ್ನ ಶ್ವೇತ ವರ್ಣವನ್ನು ಮರಳಿ ಪಡೆಯಲು ಐರಾವತವು ಇಲ್ಲಿನ ಶಿವನನ್ನು ಪೂಜಿಸಿ, ಇಲ್ಲಿರುವ ಪವಿತ್ರ ನೀರಿನಿಂದ ಸ್ನಾನ ಮಾಡಿದ್ದರಿಂದ ತನ್ನ ಶ್ವೇತವರ್ಣವನ್ನು ಮರಳಿ ಪಡೆಯಿತು. ಅಂದಿನಿಂದ ಇಲ್ಲಿನ ಶಿವ ಐರಾವತೇಶ್ವರನಾಗಿ ಪ್ರಸಿದ್ಧವಾಯಿತು. ಈ ದೇವಸ್ಥಾನದ ಕಲ್ಲಿನ ಕೆತ್ತನೆಗಳು ಹೆಚ್ಚು ನಿಖರವಾಗಿದ್ದು ನೃತ್ಯಕಲೆಯ ಶಿಲ್ಪಗಳು ಹೆಚ್ಚು ಕಾಣಸಿಗುತ್ತವೆ. ಹಿಂದೆ ಇಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತೆಂದು ದೇವಾಲಯದ ಮೂಲಗಳು ಹೇಳುತ್ತವೆ. ಇಲ್ಲಿರುವ "ನೃತ್ಯ ವಿನೋದ ಮಂಟಪ"ವು ಇದಕ್ಕೆ ಸಾಕ್ಷಿ.

ಚಿತ್ರಕೃಪೆ: Ravichandar

ವೆಲ್ಲೂರು

ವೆಲ್ಲೂರು

ಈ ದೇವಾಲಯವು ತಮಿಳುನಾಡಿನ ವೆಲ್ಲೂರಿನಲ್ಲಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ವೆಲ್ಲೂರಿನ ಕೋಟೆಯಲ್ಲಿದೆ. ಕ್ರಿ.ಪೂ.1550 ರಲ್ಲಿ ವೆಲ್ಲೂರು ಕೋಟೆಯ ದಳವಾಯಿಯಾಗಿದ್ದ ಚಿನ್ನಬೊಮ್ಮಿ ನಾಯಕನಿಂದ ಈ ದೇವಸ್ಥಾನವು ನಿರ್ಮಾಣಗೊಂಡಿತು. ಈ ದೇವಾಲಯವು ಸುತ್ತಲೂ ನೀರಿನಿಂದ ಆವೃತ್ತಗೊಂಡಿದೆ. ಇದರಿಂದಾಗಿಯೇ ಈ ದೇವಾಲಯಕ್ಕೆ ಜಲಕಂಠೇಶ್ವರ ದೇವಸ್ಥಾನವೆಂಬ ಹೆಸರು ಬಂದಿದೆ. ಈ ದೇವಸ್ಥಾನದ ಅತ್ಯದ್ಭುತ ಕೆತ್ತನೆಯ ಮೇಲ್ಛಾವಣಿ, ಶ್ರೇಷ್ಠ ಕೆತ್ತನೆಯ ಕಂಬಗಳು, ಬೃಹತ್ ಮರದ ಹೆಬ್ಬಾಗಿಲು, ಇಲ್ಲಿರುವ ಏಕಶಿಲಾ ಕೆತ್ತನೆಗಳು ಇದನ್ನು ಕಟ್ಟಿದ ಶಿಲ್ಪಕಾರರ ಅದ್ಭುತ ಪರಿಶ್ರಮವನ್ನು ಎತ್ತಿ ತೋರಿಸುತ್ತದೆ. ಇಲ್ಲಿನ ವಿಶೇಷವೆಂದರೆ ಇಲ್ಲಿರುವ ನಂದಿ ವಿಗ್ರಹ. ಇದರ ಬಳಿಯಿರುವ ಮಣ್ಣಿನ ದೀಪವು ಭಕ್ತರ ಬೇಡಿಕೆಗಳಿಗೆ ಅನುಗುಣವಾಗಿ ತಿರುಗುತ್ತದೆ.ಈ ಮಣ್ಣಿನ ದೀಪದ ಮೇಲೆ ಕೈ ಇಟ್ಟು ಬೇಡಿಕೊಂಡಾಗ ಅದು ತಿರುಗಿದರೆ ತಮ್ಮ ಬೇಡಿಕೆಗಳು ಈಡೇರುತ್ತದೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Bhaskaranaidu

ಕಾಂಚಿಪುರಂ

ಕಾಂಚಿಪುರಂ

ಏಕಾಂಬರೇಶ್ವರ ಅಥವಾ ಏಕಾಂಬರನಾಥ ಎಂದು ಕರೆಯಲ್ಪಡುವ ಈ ದೇವಾಲಯವು ತಮಿಳುನಾಡಿನ ಕಾಂಚಿಪುರಂ ನಲ್ಲಿದೆ. ಏಕಾಂಬರನಾತರ್ ತಿರುಕೋಯಿಲ್ ಎಂದು ಇಲ್ಲಿನ ಸ್ಥಳೀಯರು ಇದನ್ನು ಕರೆಯುತ್ತಾರೆ. 25 ಎಕರೆ ವಿಶಾಲ ಜಾಗದಲ್ಲಿ ಈ ದೇವಾಲಯ ವಿಸ್ತರಗೊಂಡಿದೆ. 180 ಅಡಿ ಎತ್ತರದ 11 ಮಹಡಿ ಗೋಪುರದ ಈ ದೇವಾಲಯ ಭಾರತದ ಅತಿ ದೊಡ್ಡ ಹಾಗೂ ಅತಿ ಎತ್ತರದ ದೇವಾಲಯಗಳಲ್ಲಿ ಒಂದು. ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಾಣಗೊಂಡ 1000 ಕಂಬಗಳುಳ್ಳ ಇಲ್ಲಿನ ಬೃಹತ್ ಹಜಾರವು ಇಲ್ಲಿನ ಮುಖ್ಯ ಆಕರ್ಷಣೆ. ಈ ದೇವಾಲಯದಲ್ಲಿರುವ ಪುರಾತನ ಮಾವಿನ ಮರದ ಕೆಳಗೆ ಪಾರ್ವತಿ ದೇವಿ ವ್ರತಾಚರಣೆ ಕೈಗೊಂಡು , ಮಣ್ಣಿನಿಂದ ಶಿವನ ಲಿಂಗ ನಿರ್ಮಿಸಿ ಶಿವನನ್ನು ಒಲಿಸಿಕೊಳ್ಳುತ್ತಾಳೆ. ಇದರಿಂದಾಗಿಯೇ ಈ ಜಾಗಕ್ಕೆ ಏಕಾಂಬರೇಶ್ವರ ದೇವಸ್ಥಾನವೆಂಬ ಹೆಸರು ಬಂದಿತೆಂದು ಇಲ್ಲಿನವರ ನಂಬಿಕೆ.

ಚಿತ್ರಕೃಪೆ: Ssriram mt

ತಾಮರಪರಣಿ

ತಾಮರಪರಣಿ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ತಾಮರಪರಣಿ ನದಿಯ ದಡದ 6 ಎಕರೆ ವಿಸ್ತಾರದ ಜಾಗದಲ್ಲಿ ಈ ದೇವಸ್ತಾನವಿದೆ. ನವರಾತ್ರಿ, ತಿರುಕಲ್ಯಾಣಂ, ಮತ್ತು ಆರುದ್ರ ದರ್ಶನ ಎಂಬ ಮೂರು ಮುಖ್ಯ ಹಬ್ಬವನ್ನು ಇಲ್ಲಿ ಆಚರಿಸಲಾಗುತ್ತದೆ.ಇಲ್ಲಿನ ಬ್ರಹೋತ್ಸವವನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ.

ಚಿತ್ರಕೃಪೆ: Ssriram mt

ಚೋಳರಿಂದ ನಿರ್ಮಿಸಲ್ಪಟ್ಟ

ಚೋಳರಿಂದ ನಿರ್ಮಿಸಲ್ಪಟ್ಟ

ಇದು ತಮಿಳುನಾಡಿನ ತಂಜಾವೂರಿನಲ್ಲಿ ಚೋಳರಿಂದ ನಿರ್ಮಿಸಲ್ಪಟ್ಟ ಮತ್ತೊಂದು ಶಿವನ ದೇವಾಲಯ.ಇದನ್ನು ರಾಜೇಂದ್ರ ಚೋಳನು 11 ನೇ ಶತಮಾನದಲ್ಲಿ ನಿರ್ಮಿಸಿದನು. ಬೃಹದೇಶ್ವರ ದೇವಾಲಯವನ್ನು ನಿರ್ಮಿಸಿದ ಚೋಳರಾಜನ ಮಗನೇ ರಾಜೇಂದ್ರ ಚೋಳ. ಈ ದೇವಾಲಯವನ್ನು ಬೃಹದೇಶ್ವರ ದೇವಸ್ಥಾನದ ಮುಂದುವರಿದ ಭಾಗವನ್ನಾಗಿ ನಿರ್ಮಿಸಲಾಗಿದ್ದು ಇದೂ ಸಹ ದಕ್ಷಿಣ ಭಾರತದ ಅತಿ ದೊಡ್ಡ ಶಿವ ಮಂದಿರಗಳಲ್ಲಿ ಒಂದು. ಮಾರ್ಬಲ್ ನಿಂದ ನಿರ್ಮಿತವಾದ ಈ ದೇವಾಲಯವು ಚೋಳರ ಶೈಲಿಯಲ್ಲಿ ನಿರ್ಮಾಣಗೊಂಡಿದ್ದ, ಇದರ ಶಿವಲಿಂಗವು 4 ಮೀಟರ್ ಎತ್ತರವಿದೆ. ಈ ದೇವಸ್ಥಾನದ ನಟರಾಜನ ಶಿಲ್ಪಕೆತ್ತನೆ ಹಾಗು ದೇವಿ ಸರಸ್ವತಿಯ ಕೆತ್ತನೆಯು ಶಿಲ್ಪಕಾರರ ಅದ್ಭುತ ಕುಶಲತೆಗೆ ಹಿಡಿದ ಕನ್ನಡಿಯಾಗಿದೆ.

ಚಿತ್ರಕೃಪೆ: Nandhinikandhasamy

ತಿರುಚೆಂಗೋಡೆ

ತಿರುಚೆಂಗೋಡೆ

ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ತಿರುಚೆಂಗೋಡೆಯಲ್ಲಿರುವ ಈ ದೇವಾಲಯ ಒಂದು ಭಿನ್ನ ಪ್ರಾಕಾರದ ಶಿವಾಲಯಗಳಲ್ಲಿ ಒಂದು. ತಿರುಚೆಂಗೋಡೆಯ ಗುಡ್ಡಗಾಡಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸಮುದ್ರಮಟ್ಟದಿಂದ 2000 ಅಡಿ ಎತ್ತರದಲ್ಲಿ ಹಾಗೂ 350 ಎಕರೆ ವಿಸ್ತೀರ್ಣದ ಬೆಟ್ಟಗಾಡಿನಲ್ಲಿ ತಿರುಚೆಂಗೋಡೆಯು ಹಬ್ಬಿದೆ. ಬೆಟ್ಟದ ದಾರಿಯಲ್ಲಿ ಈ ದೇವಾಲಯಕ್ಕೆ ಹೋಗುವಾಗ 11 ಮಂಟಪಗಳನ್ನು ದಾಟಿ ಹೋಗಬೇಕಾಗುತ್ತದೆ. ಕೊನೆಯ ಮಂಟಪವಾದ ಪಸುವನ್ ಮಂಟಪ್‌ನಲ್ಲಿ ಹಳ್ಳಿಯ ಜನರು ಭಕ್ತಾದಿಗಳಿಗೆ ಹಾಲು, ತುಪ್ಪಗಳನ್ನು ನೀಡಿ ಭಕ್ತಾದಿಗಳನ್ನು ತಣಿಸುತ್ತಾರೆ. ಹೀಗೆ ಹಾಲು ತುಪ್ಪವನ್ನು ನೀಡಿದರೆ ತಮ್ಮ ಮನೆಗಳಲ್ಲಿ ಹಾಲು ತುಪ್ಪದ ಅಭಾವ ಬಾರದು ಎಂದು ಅಲ್ಲಿನ ಜನ ನಂಬುತ್ತಾರೆ.

ಚಿತ್ರಕೃಪೆ: Booradleyp1

ಚಿದಂಬರಂ

ಚಿದಂಬರಂ

ತಮಿಳುನಾಡಿನ ಕಡಲೂರ್ ಜಿಲ್ಲೆಯ ಚಿದಂಬರಂನಲ್ಲಿ ಈ ದೇವಾಲಯವಿದೆ. ದ್ರಾವಿಡ ಶೈಲಿಯಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿದೆ. ಪಲ್ಲವರು, ಚೋಳರು, ಪಾಂಡ್ಯರು, ಹಾಗೂ ವಿಜಯನಗರ ಸಾಮ್ರಾಜ್ಯದ ಎಲ್ಲ ರಾಜರೂ ಇದರ ಮರು ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಚಿದಂಬರಂ ಅನ್ನು ನಟರಾಜನ ಹಿತ್ತಾಳೆಯ ಹಾಗೂ ಶಿಲ್ಪಮೂರ್ತಿಯ ಮೂಲಸ್ಥಾನವೆಂದೇ ಕರೆಯಬಹುದು. ಆದ್ದರಿಂದಲೇ ಈ ದೇವಸ್ಥಾನದಲ್ಲಿ ಹಿತ್ತಾಳೆಯಿಂದ ಮಾಡಲ್ಪಟ್ಟ ಹಲವಾರು ಶಿಲ್ಪಕೃತಿಗಳು ಇಲ್ಲಿ ಕಾಣಸಿಗುತ್ತವೆ. ತಿಲ್ಲೈ ನಟರಾಜ ದೇವಸ್ಥಾನವು ತಮಿಳುನಾಡಿನ ಪುರಾತನ ದೇವಾಲಯಗಳಲ್ಲೊಂದು.

ಚಿತ್ರಕೃಪೆ: Raghavendran

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X