Search
  • Follow NativePlanet
Share
» »ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು!

ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು!

By Vijay

ಪ್ರವಾಸ ಮಾಡುವುದೆ ಒಂದು ಸುಂದರ ಅನುಭವ. ಅದರಲ್ಲೂ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಲೆತು ಪ್ರವಾಸ ಮಾಡಿದರಂತೂ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಒಮ್ಮೆ ಕಲ್ಪಿಸಿಕೊಳ್ಳಿ ಯಾವುದೊ ಹಬ್ಬ ಹರಿದಿನಗಳ ಪ್ರಯುಕ್ತ ಬಂಧುಗಳು/ಮಿತ್ರರು ಒಂದೆಡೆ ಸೇರಿದರೆಂದುಕೊಳ್ಳಿ, ಸಮಯವೂ ಕೃಪೆ ತೋರಿದೆ ಅಂದಾಗ ಒಬ್ಬರಿಗಾದರೂ ಸರಿ, ಪ್ರವಾಸ ಮಾಡಬೇಕೆನ್ನುವ ವಿಚಾರ ಮನದಲ್ಲಿ ಬರದೆ ಇರಲಾರದು.

ಅಂದರೆ ಸಾಮಾನ್ಯವಾಗಿ ಮನುಷ್ಯ ಸಂಘಜೀವಿಯಾಗಿದ್ದು ಇಂದಿನ ರಭಸದ ಜೀವನದಲ್ಲಿ ಏಕಾಂಗಿಯಾಗಿರುವಂತೆ ಭಾವಿಸಿರುತ್ತಾನೆ. ಮರಭೂಮಿಯಲ್ಲಿ ಓಯಸಿಸ್ ಕಂಡಾಗ ಆಗುವ ಆನಂದದಂತೆ ಉದ್ದನೇಯ ವಿಕೆಂಡ್ ರಜೆಗಳು ಅಥವಾ ಪ್ರಮುಖ ಹಬ್ಬಗಳು ಬಂದಾಗ ಎಲ್ಲರೊಂದಿಗೆ ಸಮಯ ಕಳೆಯ ಬಯಸುತ್ತಾನೆ. ಇನ್ನೂ ಈ ಸುಂದರ ಸಮಯವನ್ನು ಬಹು ಹೊತ್ತಿನವರೆಗೆ ಕಳೆಯಬೇಕೆಂದಿದ್ದರೆ ಪ್ರವಾಸ ಮಾಡುವುದು ಉತ್ತಮ ಆಯ್ಕೆಯಾಗಿ ಬಿಡುತ್ತದೆ.

ಇನ್ನೂ ಸಾಮಾನ್ಯವಾಗಿ ಕುಟುಂಬ ಬಳಗದಲ್ಲಿ ಸಾಕಷ್ಟು ಹಿರಿಯ, ಮಧ್ಯ ವಯಸ್ಕದವರಿದ್ದರೆ ಧಾರ್ಮಿಕ ಪ್ರವಾಸ ಮಾಡುವುದೆ ಎಲ್ಲರಿಗೂ ಆನಂದ ತರುವ ವಿಚಾರವಾಗಿಬಿಡುತ್ತದೆ. ನಿಮಗೂ ಸಹ ಕರ್ನಾಟಕದಲ್ಲೆ ಧಾರ್ಮಿಕ ಯಾತ್ರೆ ಮಾಡಬೇಕೆಂಬ ಇಚ್ಛೆ ಇದೆಯೆ? ಯಾವೆಲ್ಲ ಸ್ಥಳಗಳಿಗೆ ಕರ್ನಾಟಕದಲ್ಲಿ ಭೇಟಿ ನೀಡಬಹುದಾಗಿದೆ ಎಂಬುದರ ಕುರಿತು ತಿಳಿಯಬೇಕೆ? ಚಿಂತಿಸದಿರಿ. ಈ ಲೇಖನಾನ್ನೊಮ್ಮೆ ಓದಿ ನಿಮಗಿಷ್ಟವಾಗುವ ಧಾರ್ಮಿಕ ತಾಣಗಳ ಪ್ರವಾಸ ಯೋಜನೆ ರೂಪಿಸಿಕೊಳ್ಳಿ. ಈ ಲೇಖನದಲ್ಲಿ ಕರ್ನಾಟಕದಲ್ಲಿರುವ ಕೆಲವು ವಿಶೇಷ ಹಾಗೂ ಆಯ್ದ ಆಕರ್ಷಕ ಧಾರ್ಮಿಕ ಯಾತ್ರೆಯ ತಾಣಗಳ ಕುರಿತು ತಿಳಿಸಲಾಗಿದೆ.

ಎಲ್ಲಮ್ಮನ ದೇವಾಲಯ

ಎಲ್ಲಮ್ಮನ ದೇವಾಲಯ

ಶಕ್ತಿಯ ಅವತಾರ, ಪಾರ್ವತಿಯ ರೂಪವೆಂದೆ ಪರಿಗಣಿಸಲಾಗುವ ಎಲ್ಲಮ್ಮನು ನೆಲೆಸಿರುವ ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ ಸವದತ್ತಿ. ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿಯು ಬೆಳಗಾವಿ ನಗರ ಕೇಂದ್ರದಿಂದ ಸುಮಾರು 88 ಕಿ.ಮೀಗಳಷ್ಟು ದೂರವಿದ್ದು ತೆರಳಲು ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ದೊರೆಯುತ್ತವೆ. ಈ ಭಾಗದಲ್ಲಿ ಈ ಕ್ಷೇತ್ರವು ಎಲ್ಲಮ್ಮನ ಗುಡ್ಡ ಎಂಬ ಹೆಸರಿನಿಂದಲೆ ಪ್ರಖ್ಯಾತವಾಗಿದ್ದು ಪ್ರತಿ ವರ್ಷ ನವಂಬರ್-ಡಿಸೆಂಬರ್ ಸಮಯದಲ್ಲಿ ಜರುಗುವ ರೇಣುಕಾ ದೇವಿಯ ಉತ್ಸವ (ಜಾತ್ರೆ) ಅತ್ಯಂತ ಆಕರ್ಷಕವಾಗಿರುತ್ತದೆ. ರೇಣುಕಾ ಎಲ್ಲಮ್ಮನ ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Upadhye Guruji

ಗದಗ ಜಿಲ್ಲೆಯ ತಾಣ

ಗದಗ ಜಿಲ್ಲೆಯ ತಾಣ

ಉತ್ತರ ಕರ್ನಾಟಕದ ಪ್ರಮುಖ ಜಾತ್ರೆ ಉತ್ಸವಗಳ ಪೈಕಿ ಭೀಮಾಂಬಿಕಾ ಜಾತ್ರೆಯೂ ಸಹ ಒಂದು. ಪಾರ್ವತಿಯ ಅವತಾರ ಅಂಬಿಕೆಯು ಇಲ್ಲಿ ಭೀಮಾಂಬಿಕೆಯಾಗಿ ನೆಲೆಸಿರುವ ಈ ಕ್ಷೇತ್ರವೆ ಇಟಗಿ. ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮವಾಗಿದೆ ಇಟಗಿ. ಗಜೇಂದ್ರಗಡ್ ನಿಂದ 13 ಕಿ.ಮೀ ದೂರವಿರುವ ಇಟಗಿಗೆ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Manjunath Doddamani Gajendragad

ವನಶಂಕರಿಯೂ ಹೌದು!

ವನಶಂಕರಿಯೂ ಹೌದು!

ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ತಾಣ ಬಾದಾಮಿಯ ಚೋಳಚಗುಡ್ಡದಲ್ಲಿರುವ ಶಾಖಾಂಬರಿ, ವನವನ್ನೆ ನಡುಗಿಸುವ ವನಶಂಕರಿ ಹಾಗೂ ಪಾರ್ವತಿಯ ಅವತಾರವಾದ ಬನಶಂಕರಿ ಒಂದು ಸುಪ್ರಸಿದ್ಧ ದೇವಿಯಾಗಿದ್ದಾಳೆ. ಈ ದೇವಿಯ ಜಾತ್ರೆಯೂ ಸಹ ಸಾಮಾನ್ಯವಾಗಿ ಜನವರಿಯ ಸಂದರ್ಭದಲ್ಲಿ ಜರುಗುತ್ತದೆ ಹಾಗೂ ಈ ಸಂದರ್ಭದಲ್ಲಿ ಪಕ್ಕದ ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಬಾದಾಮಿ ಬೆಳಗಾವಿಯಿಂದ 150 ಹಾಗೂ ಬಾಗಲಕೋಟೆಯಿಂದ 38 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ತೆರಳಲು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಗಳಿಂದ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Nvvchar

ಗಾಣಗಾಪುರ

ಗಾಣಗಾಪುರ

ಗುರುಗಳಿಗೆ ಗುರುವಾದ ಶ್ರೀ ದತ್ತಾತ್ರೇಯರು ನೆಲೆಸಿರುವ ಪ್ರಭಾವಿ ಕ್ಷೇತ್ರವೆ ಗಾಣಗಾಪುರ. ಹಾಗಾಗಿ ಗಾಣಗಾಪುರವನ್ನು ದತ್ತಾತ್ರೇಯ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ. ಸ್ವತಃ ಸ್ವಾಮಿಯವರು ಹೇಳಿರುವಂತೆ ಇಂದಿಗೂ ಅವರು ಮುಂಜಾನೆಯ ವೇಳೆಗೆ ಸಂಗಮದಲ್ಲಿ ಮಿಂದು ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವಕರಿಸುತ್ತಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರು ವಿಶಿಷ್ಟವಾದ ಮಧುಕರಿ ಆಚರಣೆಯನ್ನು ಪಾಲಿಸುತ್ತಾರೆ. ಮಧುಕರಿ ಎಂದರೆ ಭೀಕ್ಷೆ ಬೇಡುವುದಾಗಿದೆ. ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಾಣಗಾಪುರದಲ್ಲಿರುವ ಮನೆಗಳ ಪೈಕಿ ಕನಿಷ್ಠ ಐದು ಮನೆಗಳಲ್ಲಿ ಭೀಕ್ಷೆ ಬೇಡಿ ನಂತರ ಪಾದುಕೆಯ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ. ಗಾಣಗಾಪುರ ಒಂದು ಹಳ್ಳಿಯಾಗಿದ್ದು ಉತ್ತರ ಕರ್ನಾಕ ಭಾಗದ ಕಲಬುರಗಿ (ಹಿಂದಿನ ಗುಲಬರ್ಗಾ) ಜಿಲ್ಲೆಯ ಅಫ್ಜಲಪುರ ತಾಲೂಕಿನಲ್ಲಿದೆ. ಕಲಬುರಗಿ ನಗರ ಕೇಂದ್ರದಿಂದ 40 ಕಿ.ಮೀ ಗಳಷ್ಟು ದೂರವಿರುವ ಗಾಣಗಾಪುರಕ್ಕೆ ತೆರಳಲು ಕಲಬುರಗಿಯಿಂದ ಸಾಕಷ್ಟು ಸರ್ಕಾರಿ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Satish-ansingkar

ಶಿರಸಿ ಮಾರಿಕಾಂಬ

ಶಿರಸಿ ಮಾರಿಕಾಂಬ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯು ಒಂದು ಉತ್ತಮ ಪ್ರವಾಸಿ ಪಟ್ಟಣವಾಗಿದೆ. ಬನವಾಸಿ, ಸೋಂದಾ, ಸಹಸ್ರಲಿಂಗ, ಯಾಣ ಮುಂತಾದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಿಗೆ ಹತ್ತಿರವಾಗಿರುವ ಈ ತಾಣವು ಪ್ರತಿ ಎರಡು ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ಜರುಗುವ ಸುಪ್ರಸಿದ್ಧ ಮಾರಿಕಾಂಬೆಯ ಜಾತ್ರೆಯಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಮಾರಿಕಾಂಬೆಯ ದೇವಸ್ಥಾನವು 17 ನೇಯ ಶತಮಾನದ್ದಾಗಿದ್ದು ಮುಖ್ಯವಾಗಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ದೇವಿಯನ್ನು ಆರಾಧಿಸುತ್ತಾರೆ. ಮಾರಿಕಾಂಬ ದೇವಿಯ ಸಾಂದರ್ಭಿಕ ಚಿತ್ರ

ಚಿತ್ರಕೃಪೆ: Vmjmalali

ಮೂಕಾಸುರ ಸಂಹಾರಿಣಿ ಕ್ಷೇತ್ರ

ಮೂಕಾಸುರ ಸಂಹಾರಿಣಿ ಕ್ಷೇತ್ರ

ಪಾರ್ವತಿಯ ಅವತಾರವಾದ ಶಕ್ತಿ, ದುರ್ಗೆ, ಕಾಳಿ, ಅಂಬಿಕೆ ಎಂತೆಲ್ಲ ಕರೆಯಲ್ಪಡುತ್ತಾಳೆ ಈ ದೇವಿ. ದಂತ ಕಥೆಯೊಂದರ ಪ್ರಕಾರ, ಈ ದೇವಿಯು ಬೆಳಿಗ್ಗೆಯ ಸಮಯದಲ್ಲಿ ಕೇರಳದ ಒಂದು ಪ್ರಸಿದ್ಧ ದೇವಾಲಯದಲ್ಲಿ ಭಕ್ತರನ್ನು ಹರಸಿ ನಂತರದ ಸಮಯದಲ್ಲಿ ಕರ್ನಾಟಕದಲ್ಲಿರುವ ತನ್ನ ತವರು ನೆಲೆಗೆ ಬಂದು ನೆಲೆಸುತ್ತಾಳೆ. ಈಕೆ ಮತ್ತಿನಾರೂ ಅಲ್ಲ, ದೇವಿ ಮೂಕಾಂಬಿಕೆ ಹಾಗೂ ಈಕೆ ನೆಲೆಸಿರುವ ಶ್ರೀಕ್ಷೇತ್ರವೆ ಕೊಲ್ಲೂರು. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿ ಕರ್ನಾಟಕದಲ್ಲೆ ಸಾಕಷ್ಟು ಪ್ರಸಿದ್ಧಿಯನ್ನು ಗಳಿಸಿದೆ.

ಚಿತ್ರಕೃಪೆ: Vedamurthy.j

ತುಮಕೂರಿನಲ್ಲಿರುವ ಶಕ್ತಿದೇವಿ

ತುಮಕೂರಿನಲ್ಲಿರುವ ಶಕ್ತಿದೇವಿ

ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಎಂಬ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ ಅಮ್ಮನವರ ದೇಗುಲವಿದೆ. ದಸರಿಘಟ್ಟ ಗ್ರಾಮವು ತಿಪಟೂರಿನಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿದೆ. ಇಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿಯು ಅಪಾರ ಶಕ್ತಿಶಾಲಿಯಾಗಿದ್ದು ನಂಬಿಕೊಂಡು ಬರುವ ಭಕ್ತರ ಕೈಬಿಡುವುದಿಲ್ಲವೆಂದು ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳ ಅಭಿಪ್ರಾಯ.

ಚಿತ್ರಕೃಪೆ: Bpdg

ಶಕ್ತಿಕ್ಷೇತ್ರ

ಶಕ್ತಿಕ್ಷೇತ್ರ

ಸಾಗರ ತಾಲೂಕಿನಲ್ಲಿರುವ ಸಿಗಂದೂರು ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಮೂರು ಸುತ್ತಲು ಆವೃತವಾಗಿರುವ ಚೌಡೇಶ್ವರಿ ದೇವಿ ನೆಲೆಸಿರುವ ಅದ್ಭುತ ಕ್ಶೇತ್ರ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆಯುತ್ತಾರೆ. ಈ ದೇವಿಯ ಕೃಪೆಯಿಂದ ಶೀಘ್ರದಲ್ಲಿ ಫಲ ಪ್ರಾಪ್ತಿಯಾಗುತ್ತದೆಂದು ನಂಬಲಾಗಿದೆ.

ಚಿತ್ರಕೃಪೆ: Bpdg

ಕೃಷ್ಣನ ನಿವಾಸ

ಕೃಷ್ಣನ ನಿವಾಸ

ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿಯೂ ಧಾರ್ಮಿಕ ಆಕರ್ಷಣೆಯಾಗಿಯೂ ಜನರನ್ನು ಆಕರ್ಷಿಸುವ ಉಡುಪಿ ಕ್ಷೇತ್ರವು ಸಾಕಷ್ಟು ಪ್ರ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಇಲ್ಲಿರುವ ಕೃಷ್ಣ ಮಠವು ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾದ ದೇವ ಸನ್ನಿಧಿಯಾಗಿದ್ದು ಅಪಾರ ಪ್ರಮಾಣದಲ್ಲಿ ಭಕ್ತಾದಿಗಳನ್ನು ಸೆಳೆಯುತ್ತದೆ.

ಚಿತ್ರಕೃಪೆ: Ashok Prabhakaran

ಶಂಕರರು ಸ್ಥಾಪಿಸಿದ ಪೀಠ

ಶಂಕರರು ಸ್ಥಾಪಿಸಿದ ಪೀಠ

ಅದ್ವೈತ ಮತದ ಸಂಸ್ಥಾಪಕರಾದ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಹಾ ಜಗತ್ಪೀಠಗಳಲ್ಲಿ ಒಂದಾಗಿರುವ ಶಾರದಾಪೀಠವು ಸ್ಥಿತವಿರುವ ಪುಣ್ಯ ಸ್ಥಳವೆ ತುಂಗಾ ನದಿ ತಟದಲ್ಲಿ ನೆಲೆಸಿರುವ ಶೃಂಗೇರಿ. ಇಂದಿಗೂ ಶೃಂಗೇರಿ ಅಪಾರ ಪ್ರಮಾಣದಲ್ಲಿ ಪ್ರವಾಸಿಗರನ್ನು/ಭಕ್ತರನ್ನು ಆಕರ್ಷಿಸುವ ತಾಣವಾಗಿದ್ದು ಬೆಂಗಳೂರಿನಿಂದ 330 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Ashok Prabhakaran

ಹಸಿವನ್ನು ದೂರ ಓಡಿಸುವಾಕೆ!

ಹಸಿವನ್ನು ದೂರ ಓಡಿಸುವಾಕೆ!

ಅನ್ನಪೂರ್ಣೆಗೆ ಮುಡಿಪಾದ ಒಂದು ಮುಖ್ಯ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಕ್ಕಮಗಳೂರಿನಿಂದ ಸುಮಾರು ನೂರು ಕಿ.ಮೀ ದೂರದಲ್ಲಿರುವ ಹೊರನಾಡು ಎಂಬ ಕ್ಷೇತ್ರದಲ್ಲಿದೆ. ಇದನ್ನು ಶ್ರೀಕ್ಷೇತ್ರ ಹೊರನಾಡು ಎಂದೂ ಸಹ ಕರೆಯಲಾಗುತ್ತದೆ. ಹೊರನಾಡು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿರುವುದರಿಂದ ಬೆಂಗಳೂರು, ಚಿಕ್ಕಮಗಳೂರು ಮುಂತಾದ ಸ್ಥಳಗಳಿಂದ ಇಲ್ಲಿಗೆ ಬಸ್ಸುಗಳು ದೊರೆಯುತ್ತವೆ ಅಲ್ಲದೆ ಬಾಡಿಗೆ ವಾಹನಗಳು ಸಹ ದೊರೆಯುತ್ತವೆ.

ಚಿತ್ರಕೃಪೆ: Gnanapiti

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಕಟೀಲು ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಮಂಗಳೂರು ನಗರ ಕೇಂದ್ರದಿಂದ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿರುವ ಕಟೀಲು ತನ್ನಲ್ಲಿರುವ ಅತಿ ಮುಖ್ಯವಾದ ದುರ್ಗಾ ಪರಮೇಶ್ವರಿ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Premnath Kudva

ಗೋಕರ್ಣ

ಗೋಕರ್ಣ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಗೋಕರ್ಣ ಕ್ಷೇತ್ರವು ತನ್ನಲ್ಲಿರುವ ಶಿವ ದೇವಾಲಯವಾದ ಮಹಾಬಲೇಶ್ವರ ದೇವಾಲಯ, ಕಡ ತೀರ ಹಾಗೂ ಪಾವಿತ್ರ್ಯತೆಯುಳ್ಳ ಕೋಟಿತೀರ್ಥಗಳಿಗಾಗಿ ಹೆಸರುವಾಸಿಯಾದ ಸ್ಥಳವಾಗಿದೆ.

ಚಿತ್ರಕೃಪೆ: John Cummings

ಮುರುಡೇಶ್ವರ

ಮುರುಡೇಶ್ವರ

ನೀಳ ವರ್ಣದ ನಯನ ಮನೋಹರ ಕಡಲ ಹಾಸಿಗೆಯ ಹಿನ್ನಿಲೆಯಲಿ ಗಾಢ ಪ್ರಭಾವ ಬೀರುವ ಧ್ಯಾನ ಮೊಗದ ಪರಶಿವನ ವಿಶಾಲ ಕಾಯ ನೋಡಿದಾಕ್ಷಣ ಮನದ ಒತ್ತಡಗಳೆಲ್ಲವೂ ನಿರ್ನಾಮವಾಗಿ ಅಧ್ಯಾತ್ಮಿಕತೆಯ ದಿವ್ಯ ಭಾವ ಉಕ್ಕಿ ಹರಿಯುವಂತೆ ಮಾಡುವಂತಿದೆ ಮುರುಡೇಶ್ವರ. ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಕೌಟುಂಬಿಕ ಯಾತ್ರಾ ಕೇಂದ್ರವಾಗಿದೆ. ಬೆಂಗಳೂರಿನಿಂದ ಮುರುಡೇಶ್ವರ ಸುಮಾರು 515 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಮುರುಡೇಶ್ವರ ತನ್ನದೆ ಆದ ರೈಲು ನಿಲ್ದಾಣ ಹೊಂದಿದ್ದು ಮಂಗಳೂರು-ಮುಂಬೈ ಕೊಂಕಣ ರೈಲು ಮಾರ್ಗದಲ್ಲಿ ನಿಲುಗಡೆ ಹೊಂದಿದೆ.

ಚಿತ್ರಕೃಪೆ: Vamshireddy

ನಂಜನಗೂಡು

ನಂಜನಗೂಡು

ಶ್ರೀಕಂಠೇಶ್ವರನ ರೂಪದಲ್ಲಿ ಕಾರ್ಕೋಟಕ ವಿಷವನ್ನು ಸೇವಿಸಿ ಲೋಕವನ್ನೆ ಅದರ ಮಾರಣಾಂತಿಕ ಪರಿಣಾಮದಿಂದ ಕಾಪಾಡಿದ ನೀಳ ಕಂಠದ ಸಾಂಬ ಶಿವನು ಪ್ರಶಾಂತವಾಗಿ ನೆಲೆಸಿ ಭಕ್ತರನ್ನು ಹರಸುತ್ತಿರುವ ಪುಣ್ಯ ಕ್ಷೇತ್ರವಾಗಿದೆ ಈ ನಂಜನಗೂಡು. ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಕಪಿಲಾ ನದಿಯ (ಕಬಿನಿ) ತಟದಲ್ಲಿ ನೆಲೆಸಿರುವ ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ಮೈಸೂರು ನಗರ ಕೇಂದ್ರದಿಂದ 25 ಕಿ.ಮೀ ಗಳಷ್ಟು ದೂರವಿರುವ ನಂಜನಗೂಡು, ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದ್ದು ಬೆಂಗಳೂರಿನಿಂದ ಸುಮಾರು 175 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Dineshkannambadi

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ

ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ.

ಚಿತ್ರಕೃಪೆ: rajesh_dangi

ಮೈಸೂರು

ಮೈಸೂರು

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಸಂಬೋಧಿಸಲಾಗುವ ಮೈಸೂರು ನಗರದಿಂದ ಸುಮಾರು ಹದಿನಾಲ್ಕು ಕಿ.ಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟ ಒಂದಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ತಾಯಿ ಚಾಮುಂಡೇಶ್ವರಿ ದೇವಿಯು ನೆಲೆಸಿರುವ ಪುಣ್ಯ ಕ್ಷೇತ್ರವಾಗಿದೆ. ಈ ಚಾಮುಂಡಿ ಬೆಟ್ಟವು ಮೈಸೂರಿನ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದ್ದು ಸಾಮಾನ್ಯವಾಗಿ ಮೈಸೂರಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಂದ ಭೆಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Sanath Kumar

ಕುಕ್ಕೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ

ಕೆಲ ಜ್ಯೋತಿಷಿಗಳ ಪ್ರಕಾರ, ಸರ್ಪ ದೋಷವು ಸಾಮಾನ್ಯವಾಗಿ ಬಹುತೇಕರಲ್ಲಿ ಕಂಡುಬರುತ್ತದೆಯಂತೆ. (ನಂಬಿಕೆಯ ಪ್ರಕಾರ, ಈ ದೋಷವು ತಿಳಿದೊ ತಿಳಿಯದೆಯೊ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿ ನಾನಾ ವಿಧಗಳ ಮೂಲಕ ಬರುವ ದೋಷ) ಈ ರೀತಿ ಹೇಳುವವರ ಉದ್ದೇಶ ಏನೆ ಇರಲಿ ಆದರೆ ಇದಕ್ಕೊಂದು ಪರಿಣಾಮಕಾರಿಯಾದ ಪರಿಹಾರ ಕರುಣಿಸುವಾತನೊಬ್ಬ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾನೆ ಎನ್ನುವುದು ನಮಗೆಲ್ಲ ಸಂತುಷ್ಟಿ ನೀಡುವ ವಿಷಯವಾಗಿದೆ. ಅದೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ಮಂಗಳೂರು ಜಿಲ್ಲೆಯ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ.

ಚಿತ್ರಕೃಪೆ: karthick siva

ಶ್ರೀ ಮಂಜುನಾಥ

ಶ್ರೀ ಮಂಜುನಾಥ

ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ ಎತ್ತರದ ಬಾಹುಬಲಿಯ ಪ್ರತಿಮೆಯೂ ಕೂಡ ಧರ್ಮಸ್ಥಳದಲ್ಲಿದೆ.

ಚಿತ್ರಕೃಪೆ: Dinesh Kumar (DK)

ಲಕ್ಷ್ಮಿದೇವಿ

ಲಕ್ಷ್ಮಿದೇವಿ

ತುಮಕೂರಿನಲ್ಲಿರುವ ದೇವರಾಯನದುರ್ಗದ ಈಶಾನ್ಯಕ್ಕೆ ಬ್ಯಾಚೇನಹಳ್ಳಿ, ಎ.ವೆಂಕಟಾಪುರದ ಮಾರ್ಗವಾಗಿ ಸುಮಾರು 26 ಕಿ.ಮೀ ಚಲಿಸಿದರೆ ಸಿಗುವ ಧಾರ್ಮಿಕ ಮಹತ್ವ ಪಡೆದಿರುವ ಕ್ಷೇತ್ರವೆ ಗೊರವನಹಳ್ಳಿ. ಮೂಲತಃ ಗೊರವನಹಳ್ಳಿಯು ಲಕ್ಷ್ಮಿ ದೇವಿಯ ದೇಗುಲದಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿನ ಲಕ್ಷ್ಮಿ ದೇವಿಯು ಐಶ್ವರ್ಯವಲ್ಲದೆ ಕಂಕಣ ಭಾಗ್ಯವನ್ನು ಕರುಣಿಸುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಾಗಿ ಮದುವೆ ಆಗ ಬಯಸುವ ಪುರುಷ ಹಾಗೂ ಮಹಿಳಾ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಿರುತ್ತಾರೆ. ಸಾಂದರ್ಭಿಕ ಚಿತ್ರ.

ರಾಯಚೂರು

ರಾಯಚೂರು

ಲಕ್ಷ್ಮಿ ದೇವಿಯು ವೆಂಕಟೇಶ್ವರನ ಸಮೇತನಾಗಿ ನೆಲೆಸಿರುವ ಒಂದು ಅಪರೂಪದ ಸ್ಥಳ ನಮ್ಮ ಕರ್ನಾಟಕದಲ್ಲಿ ಕಂಡುಬರುತ್ತದೆ. ಅದೆ ಕಲ್ಲೂರು ಶ್ರೀಕ್ಷೇತ್ರ. ಕಲ್ಲೂರು, ಕಲ್ಲೂರು ಮಹಾಲಕ್ಷ್ಮಿಯಿಂದಾಗಿಯೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿಯಾಗಿದೆ. ಈ ಲಕ್ಷ್ಮಿ ದೇವಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಾಕ್ಷಾತ್ ಅವತಾರವೆ ಆಗಿದ್ದಾಳೆ. ಸಾಣೆ ಕಲ್ಲಿನಲ್ಲಿ ಒಡಮೂಡಿದ ಲಕ್ಷ್ಮಿ ದೇವಿಯ ವಿಗ್ರಹವು ನೋಡಲು ಆಕರ್ಷಕವಾಗಿರುವುದಷ್ಟೆ ಅಲ್ಲದೆ ಅತ್ಯಂತ ಶಕ್ತಿಶಾಲಿಯೂ ಕೂಡ ಆಗಿದೆ. ಕಲ್ಲೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ರಾಯಚೂರು ನಗರದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಕಲ್ಲೂರು.

ರಾಯರ ನೆಚ್ಚಿನ ದೇವ

ರಾಯರ ನೆಚ್ಚಿನ ದೇವ

ದ್ವೈತ ಪಂಥವನ್ನು ಪರಿಪಾಲಿಸಿದ ಶ್ರೀ ಗುರು ರಾಘವೇಂದ್ರರಿಗೆ ಒಂದೊಮ್ಮೆ ತಪಸ್ಸನ್ನಾಚರಿಸುತ್ತಿರುವಾಗ ಹನುಮನು ಐದು ಮುಖಗಳ ಅವತಾರವನ್ನು ತಾಳಿ ದರ್ಶನ ಕೊಟ್ಟ. ತದನಂತರ ಗುರು ರಾಯರು ಆ ಪಂಚಮುಖಿ ಆಂಜನೇಯನ ವಿಗ್ರಹವನ್ನು ಅವರು ಧ್ಯಾನಿಸುತ್ತಿದ್ದ ಬೆಟ್ಟದ ಗುಹೆಯ ಬಂಡೆಯೊಂದರ ಮೇಲೆ ಚಿತ್ರಿಸಿದರು. ಅದೇ ಕ್ಷೇತ್ರ ಇಂದು ಪಂಚಮುಖಿ ಆಂಜನೇಯ ಕ್ಷೇತ್ರವಾಗಿ ಪ್ರಖ್ಯಾತವಾಗಿದೆ. ಈ ಕ್ಷೇತ್ರವಿರುವುದು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ.

ಕೋಟಿಲಿಂಗೇಶ್ವರ

ಕೋಟಿಲಿಂಗೇಶ್ವರ

ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿಯಲ್ಲಿರುವ ಕೋಟಿಲಿಂಗೇಶ್ವರ ದೇವಾಲಯವು ಸಾಕಷ್ಟು ಗಮನಸೆಳೆವ ದೇವಾಲಯವಾಗಿದೆ. ಈ ದೇವಾಲಯದಾವರಣದಲ್ಲಿ ಎಲ್ಲಿ ನೋಡಿದರಲ್ಲಿ ಬರಿ ಶಿವಲಿಂಗಗಳೆ. ಬೆಂಗಳೂರಿನಿಂದ 65 ಕಿ.ಮೀ ದೂರವಿರುವ ಕೋಲಾರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಕಮ್ಮಸಂದ್ರದಿಂದ ಸುಮಾರು ಐದು ಕಿ.ಮೀ ದೂರದಲ್ಲಿ ಈ ದೇವಾಲಯವಿದ್ದು ಸಾಕಷ್ಟು ವಾಹನಗಳು ಕೋಲಾರ ನಗರಕೇಂದ್ರ ಹಾಗೂ ಕೋಲಾರ್ ಗೋಲ್ಡ್ ಫೀಲ್ಡ್ ನಿಂದ ದೊರೆಯುತ್ತವೆ.

ಚಿತ್ರಕೃಪೆ: Pponnada

ಕೂಡಲಸಂಗಮ

ಕೂಡಲಸಂಗಮ

ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮವು ಲಿಂಗಾಯತ ಮತದವರ ಪಾಲಿಗೆ ಅದ್ವಿತೀಯ ತೀರ್ಥ ಕ್ಷೇತ್ರವಾಗಿದ್ದು, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಐಕ್ಯಗೊಂಡ ಪುಣ್ಯ ಸ್ಥಳವಾಗಿದೆ. ಮತ್ತೊಂದು ಪ್ರವಾಸಿ ಪ್ರಖ್ಯಾತಿಯ ತಾಣವಾದ ಆಲಮಟ್ಟಿ ಆಣೆಕಟ್ಟಿನಿಂದ ಸುಮಾರು 15 ಕಿ.ಮೀ ಗಳಷ್ಟು ದೂರವಿರುವ ಕೂಡಲಸಂಗಮವು ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದ ಸ್ಥಳವಾಗಿದೆ. ನಂತರದಲ್ಲಿ ಈ ಸಂಗಮದ ನದಿಯು ಮುಂದೆ ಆಂಧ್ರದ ಪುಣ್ಯ ಕ್ಷೇತ್ರವಾದ ಶ್ರೀಶೈಲಂ ಕಡೆಗೆ ಹರಿಯುತ್ತದೆ.

ಚಿತ್ರಕೃಪೆ: Mankalmadhu

ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯ

ಸರ್ಪ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಪ್ರಖ್ಯಾತ ಸರ್ಪ ಕ್ಷೇತ್ರವಾದರೆ, ಘಾಟಿ ಸುಬ್ರಹ್ಮಣ್ಯವು ಬೆಂಗಳೂರಿಗೆ ಬಲು ಹತ್ತಿರದಲ್ಲಿರುವ ಸರ್ಪ ಕ್ಷೇತ್ರವಾಗಿದೆ. ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ 10 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರಗಳ ಪೈಕಿ ಒಂದಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಪ ದೋಷ ನಿವಾರಣೆಗೆಂದು, ಸುಬ್ರಹ್ಮಣ್ಯನ ದರುಶನ ಪಡೆಯಲೆಂದು ಸಾಕಷ್ಟು ಜನ ಭಕ್ತಾದಿಗಳು ನಿತ್ಯ ಭೇಟಿ ನೀಡುತ್ತಾರೆ. ಸುಬ್ರಹ್ಮಣ್ಯನನ್ನು ನಾಗನ ರೂಪದಲ್ಲಿ ಇಲ್ಲಿ ಆರಾಧಿಸಲಾಗುತ್ತದೆ.

ಚಿತ್ರಕೃಪೆ: Rejenish

ಸಾಲಿಗ್ರಾಮ ಗುರುನರಸಿಂಹ

ಸಾಲಿಗ್ರಾಮ ಗುರುನರಸಿಂಹ

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವಿನ ಅವತಾರವಾದ ನರಸಿಂಹನನ್ನು ಕೂಟ ಬ್ರಾಹ್ಮಣರು ಗುರುವಾಗಿಯೂ, ಕುಲದೇವರಾಗಿಯೂ ಭಕ್ತಿಯಿಂದ ಪೂಜಿಸುತ್ತಾರೆ. ಈ ಸಮುದಾಯದವರ ಮುಖ್ಯ ಧಾರ್ಮಿಕ ಕ್ಷೇತ್ರವಾಗಿ ಸಾಲಿಗ್ರಾಮವು ಸಾಕಷ್ಟು ಮಹತ್ವ ಪಡೆದಿದೆ. ಸಾಲಿಗ್ರಾಮವು ತನ್ನಲ್ಲಿರುವ ಗುರು ನರಸಿಂಹ ದೇವಾಲಯದಿಂದಾಗಿಯೆ ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ಕ್ಷೇತ್ರವಾಗಿದೆ. ಮುಖ್ಯವಾಗಿ ಸಾಲಿಗ್ರಾಮದ ಕಲ್ಲಿನಲ್ಲಿ ನರಸಿಂಹನು ಎಡಗೈನಲ್ಲಿ ಶಂಖವನ್ನು ಅಲಗೈನಲ್ಲಿ ಹಾಗೂ ಚಕ್ರವನ್ನು ಹಿಡಿದು ಯೋಗ ಮುದ್ರೆಯಲ್ಲಿ ನಿಂತಿರುವುದು ವಿಶೇಷವಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Harshanti

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X