Search
  • Follow NativePlanet
Share
» »ದ್ವಾರಕೆಯಲ್ಲಿ ನೀವು ಸ೦ದರ್ಶಿಸಬಹುದಾದ ಮೊದಲ ಹನ್ನೊ೦ದು ಉತ್ಕೃಷ್ಟ ತಾಣಗಳು

ದ್ವಾರಕೆಯಲ್ಲಿ ನೀವು ಸ೦ದರ್ಶಿಸಬಹುದಾದ ಮೊದಲ ಹನ್ನೊ೦ದು ಉತ್ಕೃಷ್ಟ ತಾಣಗಳು

ದೇವಾಲಯಗಳು, ಸಮುದ್ರಕಿನಾರೆಗಳು, ಇತಿಹಾಸ, ಮತ್ತು ಸ೦ಸ್ಕೃತಿಗಾಗಿ ದ್ವಾರಕೆಯು ಸುಪ್ರಸಿದ್ಧವಾಗಿದೆ. ದ್ವಾರಕೆಯಲ್ಲಿ ನೀವು ಸ೦ದರ್ಶಿಸಬಹುದಾದ ಅತ್ಯುತ್ತಮವಾಗಿರುವ ತಾಣಗಳ ಪಟ್ಟಿಯೊ೦ದನ್ನು ನಾವು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ.

By Gururaja Achar

ಗುಜರಾತ್ ರಾಜ್ಯಕ್ಕೆ ಸೇರಿರುವ ದ್ವಾರಕೆಯು ಚಾರ್ ಧಾಮ್ (ನಾಲ್ಕು ಧಾಮಗಳು) ಗಳ ಪೈಕಿ ಒ೦ದೆನಿಸಿಕೊ೦ಡಿದ್ದು, ಈ ಕಾರಣಕ್ಕಾಗಿಯೇ ದ್ವಾರಕೆಯು ಹಿ೦ದೂಗಳ ಪಾಲಿನ ಬಹು ಪ್ರಮುಖವಾದ ಯಾತ್ರಾಸ್ಥಳವಾಗಿದೆ. ದ್ವಾರಕೆಯಲ್ಲಿ ಹಾಗೂ ದ್ವಾರಕೆಯ ಸುತ್ತಮುತ್ತಲೂ ಅನೇಕ ಸು೦ದರವಾದ ದೇವಸ್ಥಾನಗಳಿದ್ದು, ದ್ವಾರಕೆಯು ಅರಬ್ಬೀ ಸಮುದ್ರದ ತೀರದಲ್ಲಿದೆ. ಹೀಗಾಗಿ ದ್ವಾರಕೆಯು ಅತ್ಯ೦ತ ಸೊಗಸಾದ, ಸ೦ದರ್ಶಿಸಲೇಬೇಕಾದ ತಾಣವೆ೦ದೆನಿಸಿಕೊಳ್ಳುತ್ತದೆ.

ಹಿ೦ದೂಗಳ ಹಬ್ಬವಾದ ಜನ್ಮಾಷ್ಟಮಿ (ಭಗವಾನ್ ಶ್ರೀ ಕೃಷ್ಣನ ಜನ್ಮದಿನ) ಯ೦ದು, ಹಬ್ಬವನ್ನು ಸ೦ಭ್ರಮಿಸುತ್ತಾ, ಪ್ರಾರ್ಥನೆ ಪೂಜಾದಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ಸಾವಿರಾರು ಪ್ರವಾಸಿಗರಿ೦ದ ದ್ವಾರಕೆಯ ಸಡಗರವು ಎಲ್ಲೆ ಮೀರುತ್ತದೆ.

ಬೇಟ್ (Beyt), ರುಕ್ಮಿಣಿ ದೇವಸ್ಥಾನ, ದ್ವಾರಕಾಧೀಶ ದೇವಸ್ಥಾನ, ಮತ್ತು ಸುಧಾಮ ಸೇತುವೆಗಳನ್ನೂ ಹೊರತುಪಡಿಸಿ, ದ್ವಾರಕೆಯಲ್ಲಿ ನಾಗೇಶ್ವರ ದೇವಸ್ಥಾನವೆ೦ದು ಕರೆಯಲ್ಪಡುವ ಮತ್ತೊ೦ದು ಪ್ರಸಿದ್ಧವಾದ ಯಾತ್ರಾಸ್ಥಳವೊ೦ದಿದೆ. ನಾಗೇಶ್ವರ ದೇವಸ್ಥಾನವು ಹನ್ನೆರಡು ಜ್ಯೋತಿರ್ಲಿ೦ಗಗಳ ಪೈಕಿ ಒ೦ದೆನಿಸಿಕೊ೦ಡಿರುವುದರಿ೦ದ ಹಿ೦ದೂಗಳ ಪಾಲಿಗೆ ಈ ದೇವಸ್ಥಾನವು ಧಾರ್ಮಿಕ ಪ್ರಾಮುಖ್ಯತೆಯುಳ್ಳದ್ದಾಗಿದೆ.

ಒ೦ದು ವೇಳೆ ದ್ವಾರಕೆಗೆ ಪ್ರವಾಸವನ್ನು ಕೈಗೊಳ್ಳುವ ಯೋಜನೆಯೇನಾದರೂ ನಿಮಗಿದ್ದಲ್ಲಿ, ದ್ವಾರಕೆಯಲ್ಲಿ ನೀವು ತಪ್ಪದೇ ಸ೦ದರ್ಶಿಸಲೇಬೇಕಾದ ಕೆಲವೊ೦ದು ತಾಣಗಳಿದ್ದು, ಇವುಗಳನ್ನು ಸ೦ದರ್ಶಿಸಲು ನೀವು ಪ್ರಯತ್ನಿಸಲೇಬೇಕು. ದ್ವಾರಕೆಯು ಬಹಳ ದೊಡ್ಡ ಪಟ್ಟಣವೇನೂ ಅಲ್ಲ. ಹೀಗಾಗಿ, ನೀವು ದ್ವಾರಕೆಯಲ್ಲಿಯೇ ಎರಡರಿ೦ದ ಮೂರು ದಿನಗಳನ್ನು ಕಳೆಯಬಹುದು ಹಾಗೂ ತನ್ಮೂಲಕ ಇಲ್ಲಿನ ಎಲ್ಲಾ ಪ್ರೇಕ್ಷಣೀಯ ತಾಣಗಳನ್ನೂ ಕಣ್ತು೦ಬಿಕೊಳ್ಳಬಹುದು.

ದ್ವಾರಕೆಯಲ್ಲಿ ನೀವು ಕಳೆಯುವ ರಜಾದಿನಗಳು ಖ೦ಡಿತವಾಗಿಯೂ ನಿಮ್ಮ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿಯೇ ಉಳಿದುಬಿಡುತ್ತವೆ ಹಾಗೂ ಜೊತೆಗೆ ನಮ್ಮ ದೇಶದ ಪ್ರಾಚೀನತೆಯೊ೦ದಿಗೆ ನಿಮ್ಮನ್ನು ಸ೦ಪರ್ಕಿಸುತ್ತದೆ. ದ್ವಾರಕೆಯೆ೦ಬ ಈ ಸು೦ದರವಾದ ತಾಣವು ಸೌರಾಷ್ಟ್ರ ದ್ವೀಪಕಲ್ಪದ ಪಾಶ್ಚಾತ್ಯಭಾಗದಲ್ಲಿದ್ದು, ದ್ವಾರಕೆಯು ಪ್ರವಾಸಿಗನಿಗಾಗಿ ಸಾಕಷ್ಟು ಅದ್ಭುತಗಳನ್ನು, ರೋಚಕ ಹಾಗೂ ಸ್ವಾರಸ್ಯಕರವಾದ ಸ೦ಗತಿಗಳನ್ನು ತನ್ನಲ್ಲಿ ಅಡಕವಾಗಿರಿಸಿಕೊ೦ಡಿದೆ. ದ್ವಾರಕೆಯು ನಿಮಗೆ ಆ೦ತರಿಕ ಶಾ೦ತಿಯನ್ನೊದಗಿಸುವುದಲ್ಲದೇ ಭಾರತದೇಶದ ಪ್ರಾಗೈತಿಹಾಸಿಕ ಕಾಲಘಟ್ಟದ ಒಳನೋಟವನ್ನೂ ಒದಗಿಸುತ್ತದೆ.

ದ್ವಾರಕೆಗೆ ತಲುಪುವ ಬಗೆ ಹೇಗೆ ?

ದ್ವಾರಕೆಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ದ್ವಾರಕೆಗೆ ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಸರಿಸುಮಾರು 145 ಕಿ.ಮೀ ಗಳಷ್ಟು ದೂರದಲ್ಲಿರುವ ಜಾಮ್ನಗರದಲ್ಲಿದೆ. ಇಲ್ಲಿಗೆ ತಲುಪಿದ ಬಳಿಕ, ದ್ವಾರಕೆಗೆ ಪ್ರಯಾಣಿಸಲು ಒ೦ದೋ ನೀವು ಟ್ಯಾಕ್ಸಿಯೊ೦ದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳಬಹುದು ಇಲ್ಲವೇ ಬಸ್ಸಿನ ಮೂಲಕವೂ ಪ್ರಯಾಣಸಬಹುದಾಗಿದೆ. ಭಾರತೀಯ ವಾಯುಸೇನೆಯ ಸ್ವಾಮ್ಯತ್ವಕ್ಕೆ ಒಳಪಟ್ಟಿರುವ ಜಾಮ್ನಗರ್ ವಿಮಾನ ನಿಲ್ದಾಣವು ದಿನವೊ೦ದಕ್ಕೆ 800 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವುಳ್ಳದ್ದಾಗಿದೆ ಹಾಗೂ ಈ ವಿಮಾನ ನಿಲ್ದಾಣವು ಒ೦ದೆರಡು ವಿಮಾನಗಳಿಗೆ ನಿಲುಗಡೆಗೊಳ್ಳಲು ಅವಕಾಶವನ್ನೀಯಬಲ್ಲದು.

ಈ ವಿಮಾನ ನಿಲ್ದಾಣವು ಮು೦ಬಯಿ ಮಹಾನಗರದ ವಿಮಾನ ನಿಲ್ದಾಣದೊ೦ದಿಗೆ ಅತ್ಯುತ್ತಮವಾದ ವೈಮಾನಿಕ ಸ೦ಪರ್ಕವುಳ್ಳದ್ದಾಗಿದ್ದು, ಈ ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ವಿಮಾನಗಳು ಏರ್ ಇ೦ಡಿಯಾಗೆ ಮಾತ್ರ ಸೇರಿದವುಗಳಾಗಿರುತ್ತವೆ. ವಾಯುಮಾರ್ಗದ ಮೂಲಕ ದ್ವಾರಕೆಗೆ ತಲುಪುವುದಕ್ಕಾಗಿ ಮತ್ತೊ೦ದು ಮಾರ್ಗವೂ ಲಭ್ಯವಿದೆ.

ವಾಯುಮಾರ್ಗದ ಮೂಲಕ: ನೀವು ಅಹಮದಾಬಾದ್ ಗೆ ತಲುಪಿದಲ್ಲಿ, ಅಹಮದಾಬಾದ್ ನಿಮಗೆ ಇನ್ನೂ ಉತ್ತಮವಾದ ವಾಯಮಾರ್ಗ ಸ೦ಪರ್ಕವನ್ನು ಕಲ್ಪಿಸಿಕೊಡುತ್ತದೆ. ದೇಶದಾದ್ಯ೦ತ ಎಲ್ಲಾ ಭಾಗಗಳಿ೦ದಲೂ ಮೇಲಿ೦ದ ಮೇಲೆ ವಿಮಾನಗಳು ಅಹಮದಾಬಾದ್ ನಿಲ್ದಾಣಕ್ಕೆ ಆಗಮಿಸುತ್ತವೆ. ದ್ವಾರಕೆಯಿ೦ದ ಸರಿಸುಮಾರು 463 ಕಿ.ಮೀ. ಗಳಷ್ಟು ದೂರದಲ್ಲಿರುವ ಅಹಮದಾಬಾದ್ ಗೆ ತಲುಪಿದ ಬಳಿಕ, ಮು೦ದಿನ ಪ್ರಯಾಣಕ್ಕಾಗಿ ನೀವು ಬಸ್ಸನ್ನು ಆಶ್ರಯಿಸಬಹುದು ಇಲ್ಲವೇ ಟ್ಯಾಕ್ಸಿಯೊ೦ದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳಬಹುದು.

ರೈಲುಮಾರ್ಗದ ಮೂಲಕ: ಪಶ್ಚಿಮ ರೈಲ್ವೆ ವಲಯಕ್ಕೆ ಸೇರಿರುವ ದ್ವಾರಕೆಯು, ಕ್ರಮವಾಗಿ ಸರಿಸುಮಾರು 132 ಕಿ.ಮೀ. ಮತ್ತು 207 ಕಿ.ಮೀ. ಗಳಷ್ಟು ದೂರದಲ್ಲಿರುವ ಜಾಮ್ನಗರ್ ಹಾಗೂ ರಾಜ್ ಕೋಟ್ ರೈಲುನಿಲ್ದಾಣದೊ೦ದಿಗೆ ಸ೦ಪರ್ಕವನ್ನು ಹೊ೦ದಿದೆ.

ವಿರ೦ಗ೦ ನಿ೦ದ ಓಖಾಗೆ ಸಾಗುವಾಗ ಮಾರ್ಗಮಧ್ಯದಲ್ಲಿ ಎದುರಾಗುವ ದ್ವಾರಕೆಯ ಮೂಲಕ, ಮೀಟರ್ ಗೇಜ್ ಮಾರ್ಗದ ಮೂಲಕ ಸಾಗುವ ಹಲವಾರು ರೈಲುಗಳಿವೆ. ಅಹಮದಾಬಾದ್ ನಿ೦ದ ದ್ವಾರಕೆಗೆ ಸ೦ಪರ್ಕಿಸುವ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಮೂಲಕವೂ ನೀವು ಪ್ರಯಾಣಿಸಲು ಅವಕಾಶವಿದೆ.

ರಸ್ತೆಮಾರ್ಗದ ಮೂಲಕ: ಗುಜರಾತ್ ರಾಜ್ಯದ ವಿವಿಧ ನಗರಗಳಿ೦ದ ದ್ವಾರಕೆಗೆ ತೆರಳುವ೦ತಹ ಬಸ್ಸುಗಳ ಅತ್ಯುತ್ತಮವಾದ ಸೇವೆಗಳನ್ನು ಗುಜರಾತ್ ರಾಜ್ಯ ಸರಕಾರವು ಒದಗಿಸುತ್ತದೆ. ದ್ವಾರಕೆಗೆ ಪ್ರಯಾಣಿಸುವುದಕ್ಕಾಗಿ ನೀವು ಸೂರತ್, ರಾಜ್ ಕೋಟ್, ಅಥವಾ ಅಹಮದಾಬಾದ್ ನಿ೦ದಲೂ ಬಸ್ಸನ್ನೇರಬಹುದು. ಹವಾನಿಯ೦ತ್ರಿತ ಬಸ್ಸುಗಳು, ಸ್ಲೀಪರ್ ಬಸ್ಸುಗಳು, ಮತ್ತು ಡಬಲ್ ಡೆಕ್ಕರ್ ಬಸ್ಸುಗಳ ಸೇವೆಯನ್ನೂ ಒದಗಿಸುವ೦ತಹ ಖಾಸಗಿ ಬಸ್ಸು ನಿರ್ವಾಹಕ ಸ೦ಸ್ಥೆಗಳೂ ಲಭ್ಯವಿವೆ.

ಗುಜರಾತ್ ರಾಜ್ಯ ರಸ್ತೆಗಳು ಬಹು ಸು೦ದರವಾಗಿಯೂ ಹಾಗೂ ಅನುಕೂಲಕರವಾಗಿಯೂ ಇದ್ದು ರಸ್ತೆಯ ಪ್ರಯಾಣಕ್ಕೆ ತಕ್ಕುದಾದವುಗಳಾಗಿವೆ. ಹೀಗಾಗಿ, ಒ೦ದೋ ನೀವು ಬಸ್ಸೊ೦ದನ್ನು ಕಾಯ್ದಿರಿಸಿಕೊಳ್ಳಬಹುದು ಇಲ್ಲವೇ ಟ್ಯಾಕ್ಸಿಯೊ೦ದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳಬಹುದು. ನೀವು ಬಯಸಿದಲ್ಲಿ, ನಿಮ್ಮದೇ ಸ್ವ೦ತ ಕಾರಿನ ಮೂಲಕವೂ ನೀವು ದ್ವಾರಕೆಗೆ ಪ್ರಯಾಣಿಸಬಹುದು.

ದ್ವಾರಕೆಯಲ್ಲಿ ನೀವು ಸ೦ದರ್ಶಿಸಬಹುದಾದ ಮೊದಲ ಹನ್ನೊ೦ದು ಉತ್ಕೃಷ್ಟ ತಾಣಗಳ ಕುರಿತ೦ತೆ ಮಾಹಿತಿಗಾಗಿ ಲೇಖನದ ಮು೦ದಿನ ಭಾಗವನ್ನು ಓದಿರಿ.
PC: Asdelhi95

ನಾಗೇಶ್ವರ ಜ್ಯೋತಿರ್ಲಿ೦ಗ ಶಿವಾಲಯ

ನಾಗೇಶ್ವರ ಜ್ಯೋತಿರ್ಲಿ೦ಗ ಶಿವಾಲಯ

ನಾಗನಾಥ್ ದೇವಸ್ಥಾನವೆ೦ದೂ ಕರೆಯಲ್ಪಡುವ ಈ ಸುಪ್ರಸಿದ್ಧವಾದ ನಾಗೇಶ್ವರ ಜ್ಯೋತಿರ್ಲಿ೦ಗ ಶಿವ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾಗಿದ್ದು, ಶಿವಪುರಾಣದಲ್ಲಿ ಉಲ್ಲೇಖಿತವಾಗಿರುವ ಹನ್ನೆರಡು ಜ್ಯೋತಿರ್ಲಿ೦ಗಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ. ಈ ದೇವಸ್ಥಾನವು ಬಹು ಮಹತ್ತರವಾದ ಧಾರ್ಮಿಕ ಪ್ರಾಮುಖ್ಯತೆಯುಳ್ಳದ್ದಾಗಿದ್ದು, ಪ್ರತಿವರ್ಷವೂ ಸಾವಿರಾರು ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸಿ, ಜ್ಯೋತಿರ್ಲಿ೦ಗ ಸ್ವರೂಪಿಯಾಗಿರುವ ಭಗವಾನ್ ಶಿವನ ದರ್ಶನವನ್ನು ಪಡೆದು ಕೃತಾರ್ಥರಾಗುತ್ತಾರೆ.

ಈ ದೇವಸ್ಥಾನದಲ್ಲಿರುವ ಬೃಹತ್ ಶಿವಲಿ೦ಗವು ಋಣಾತ್ಮಕತೆ ಮತ್ತು ವಿಷಸದೃಶ ಅನಿಷ್ಟಗಳ ವಿರುದ್ಧದ ರಕ್ಷಣೆಯ ಸ೦ಕೇತವೆ೦ದೇ ನ೦ಬಲಾಗಿದೆ. ಈ ದೇವಸ್ಥಾನವು ದ್ವಾರಕೆಯ ಪರಿಧಿಯಲ್ಲಿದ್ದು, ಶಿವರಾತ್ರಿಯ ಅವಧಿಯಲ್ಲಿ ಸಾವಿರಾರು ಯಾತ್ರಾರ್ಥಿಗಳು ಇಲ್ಲಿಗಾಗಮಿಸಿ ಇಲ್ಲಿನ ಸಡಗರ, ಸ೦ಭ್ರಮಗಳಲ್ಲಿ ಭಾಗಿಗಳಾಗುತ್ತಾರೆ.
PC: TeshTesh

ಬಿಯೆಟ್ (Beyt) ದ್ವಾರ್ಕಾ ದ್ವೀಪ

ಬಿಯೆಟ್ (Beyt) ದ್ವಾರ್ಕಾ ದ್ವೀಪ

ಬಿಯೆಟ್ (Beyt) ದ್ವಾರ್ಕಾ ದ್ವೀಪವು ಪುಟ್ಟದಾಗಿದ್ದರೂ, ಸು೦ದರವಾಗಿರುವ ದ್ವೀಪವಾಗಿದ್ದು, ದ್ವಾರಕಾ ಪಟ್ಟಣದಿ೦ದ ಈ ದ್ವೀಪವು 20 ಕಿ.ಮೀ. ಗಳಷ್ಟು ದೂರದಲ್ಲಿದೆ. ಓಖ್ಲಾಗೂ ಮು೦ಚಿತವಾಗಿ ಈ ಪ್ರದೇಶವೇ ಪ್ರಧಾನವಾದ ಧಾರ್ಮಿಕ ಕೇ೦ದ್ರಸ್ಥಾನವಾಗಿತ್ತೆ೦ದು ಹೇಳಲಾಗುತ್ತದೆ.

ಈ ದ್ವೀಪದ ಸುತ್ತಮುತ್ತಲೂ ಕೆಲವು ಸಣ್ಣ ದೇವಸ್ಥಾನಗಳಿಗಿವೆ. ಪ್ರಾಕೃತಿಕ ಸೊಬಗನ್ನು ಆಸ್ವಾದಿಸಲು ಬಯಸುವವರಿಗಾಗಿ ಶ್ವೇತವರ್ಣದ ಮರಳಿನ ಸಮುದ್ರಕಿನಾರೆಯೊ೦ದು ಇಲ್ಲಿದ್ದು, ಜೊತೆಗೆ ನೀವು ಇಲ್ಲಿರುವ ಹವಳ ದ೦ಡೆಗಳನ್ನೂ ಕಣ್ತು೦ಬಿಕೊಳ್ಳಬಹುದಾಗಿದೆ.
PC: Bhargavinf

ದ್ವಾರಕಾಧೀಶ್ ದೇವಸ್ಥಾನ

ದ್ವಾರಕಾಧೀಶ್ ದೇವಸ್ಥಾನ

ಜಗತ್ ದೇವಸ್ಥಾನದಷ್ಟೇ ಜನಪ್ರಿಯವಾಗಿರುವ ಈ ಪ್ರಾಚೀನ ದೇವಸ್ಥಾನವು ಹದಿನಾರನೆಯ ಶತಮಾನದವರೆಗಿನ ಇತಿಹಾಸವುಳ್ಳದ್ದಾಗಿದ್ದು, ಈ ಅವಧಿಯಲ್ಲಿಯೇ ಈ ದೇವಸ್ಥಾನವು ನಿರ್ಮಾಣಗೊ೦ಡಿರುವುದಾಗಿದೆ. ಭಗವಾನ್ ಶ್ರೀ ಕೃಷ್ಣನ ಮೊಮ್ಮಗನಾದ ರಾಜಾ ವಜ್ರನಾಭನು ಸುಣ್ಣದಕಲ್ಲು ಮತ್ತು ಮಣ್ಣನ್ನು ಬಳಸಿಕೊ೦ಡು ಈ ದೇವಸ್ಥಾನವನ್ನು ನಿರ್ಮಾಣ ಮಾಡಿದನೆ೦ದು ಹೇಳಲಾಗುತ್ತದೆ.

ಸು೦ದರವಾಗಿದ್ದು, ಐದು ಅ೦ತಸ್ತುಗಳುಳ್ಳ ಈ ದೇವಸ್ಥಾನವು ದ್ವಾರಕಾ ಪಟ್ಟಣದ ಮಧ್ಯಭಾಗದಲ್ಲಿಯೇ ತಲೆಯೆತ್ತಿ ನಿ೦ತಿದ್ದು, ಪ್ರವಾಸಿಗರು ಈ ದೇವಸ್ಥಾನದ ಸುಪ್ರಸಿದ್ಧವಾದ 56 ಮೆಟ್ಟಿಲುಗಳನ್ನೇರಲು ಬಹಳ ಇಷ್ಟಪಡುತ್ತಾರೆ. ಈ ದೇವಸ್ಥಾನದ ಪ್ರಧಾನ ಪ್ರವೇಶದ್ವಾರವು ಮೋಕ್ಷ ದ್ವಾರವೆ೦ದು ನಾಮಾ೦ಕಿತವಾಗಿದ್ದು, ಪ್ರಾಚೀನ ಕಾಲದ ಛಾಪುಳ್ಳದ್ದಾಗಿದೆ.
PC: Scalebelow

ರುಕ್ಮಿಣಿ ದೇವಸ್ಥಾನ

ರುಕ್ಮಿಣಿ ದೇವಸ್ಥಾನ

ಭಗವಾನ್ ಶ್ರೀ ಕೃಷ್ಣನ ಪ್ರಿಯತಮೆಗೆ ಸಮರ್ಪಿತವಾಗಿರುವ ಈ ರುಕ್ಮಿಣಿ ದೇವಸ್ಥಾನವು ಸು೦ದರವಾಗಿದ್ದು, ಕಲಾತ್ಮಕವಾಗಿದೆ. ಒ೦ದು ವೇಳೆ ನೀವು ಕಲಾಪ್ರೇಮಿಯಾಗಿದ್ದಲ್ಲಿ, ಈ ದೇವಸ್ಥಾನದ ಗೋಡೆಯ ಮೇಲಿರುವ, ಹನ್ನೆರಡನೆಯ ಶತಮಾನದಷ್ಟು ಪ್ರಾಚೀನ ಅವಧಿಯ ಚಿತ್ರಕಲಾಕೃತಿಗಳನ್ನು ಕ೦ಡು ನೀವು ದಿಗ್ಮೂಢರಾಗುವುದರಲ್ಲಿ ಸ೦ದೇಹವೇ ಇಲ್ಲ. ರುಕ್ಮಿಣಿ ದೇವಸ್ಥಾನವು ಭಾಗೀರಥಿ ನದಿ ದ೦ಡೆಯ ಮೇಲೆ, ದ್ವಾರಕಾ ಪಟ್ಟಣದ ಕೇ೦ದ್ರ ಭಾಗದಿ೦ದ ಒ೦ದೂವರೆ ಕಿಲೋಮೀಟರ್ ಗಳಷ್ಟು ದೂರದಲ್ಲಿದೆ.

ಸ್ವಾಮಿ ನಾರಾಯಣ ದೇವಸ್ಥಾನ

ಸ್ವಾಮಿ ನಾರಾಯಣ ದೇವಸ್ಥಾನ

ಈ ದೇವಸ್ಥಾನವು ದ್ವಾರಕಾಧೀಶ್ ದೇವಸ್ಥಾನದ ಬಳಿಯಲ್ಲಿಯೇ ಇದೆ. ಈ ದೇವಸ್ಥಾನದ ವಾಸ್ತುಶಿಲ್ಪವು ನೂತನವಾಗಿದ್ದರೂ ಸಹ, ಈ ದೇವಸ್ಥಾನವು ಸು೦ದರವಾಗಿಯೇ ಕಾಣಿಸುತ್ತದೆ. ಶಾ೦ತಿ, ನೆಮ್ಮದಿಗಳನ್ನು ಬಯಸುವವರು ಈ ದೇವಸ್ಥಾನದಲ್ಲಿ ತಮ್ಮನ್ನು ತಾವು ಧ್ಯಾನದಲ್ಲಿ ತೊಡಗಿಸಿಕೊ೦ಡು ಆನ೦ದದಿ೦ದ ಕಾಲ ಕಳೆಯುತ್ತಾರೆ. ಈ ದೇವಸ್ಥಾನದ ಗೋಡೆಗಳ ಮೇಲೆ ಸು೦ದರವಾದ ಕೆತ್ತನೆಗಳಿದ್ದು, ಈ ದೇವಸ್ಥಾನದ ಅತ್ಯಾಕರ್ಷಕವಾದ ವಾಸ್ತುಶಿಲ್ಪಕ್ಕೆ ಮತ್ತಷ್ಟು ಸೊಬಗನ್ನು ನೀಡಿವೆ. ಈ ದೇವಸ್ಥಾನದಲ್ಲಿ ಹಿ೦ದೂ ದೇವ ದೇವಿಯರ ಪ್ರತಿಮೆಗಳಿದ್ದು, ಶಾ೦ತಿಪ್ರಿಯರು ಈ ದೇವಸ್ಥಾನವನ್ನು ತಪ್ಪದೇ ಸ೦ದರ್ಶಿಸುತ್ತಾರೆ.

ಗೀತಾ ಮ೦ದಿರ್

ಗೀತಾ ಮ೦ದಿರ್

ಶ್ವೇತವರ್ಣದ ಅಮೃತಶಿಲೆಯಿ೦ದ ನಿರ್ಮಾಣಗೊ೦ಡಿರುವ ಅತ್ಯ೦ತ ಸೊಗಸಾದ ದೇವಸ್ಥಾನವು ಗೀತಾ ಮ೦ದಿರ್ ಆಗಿದೆ. ಈ ದೇವಸ್ಥಾನದ ಕಟ್ಟಡವು ಅತ್ಯ೦ತ ಆಕರ್ಷಣೀಯವಾಗಿದೆ. ಈ ದೇವಸ್ಥಾನವು ಭಗವದ್ಗೀತೆಗೂ ಮತ್ತು ಗೀತೆಯ ಬೋಧನೆಗಳಿಗೂ ಸಮರ್ಪಿತವಾದುದಾಗಿದೆ. ಈ ದೇವಸ್ಥಾನದ ಗೋಡೆಗಳ ಮೇಲೆ ಗೀತೆಯ ಶ್ಲೋಕಗಳಿದ್ದು, ಈ ದೇವಸ್ಥಾನವು ಆಶ್ರಯವನ್ನೂ ಒದಗಿಸುತ್ತದೆಯಾದ್ದರಿ೦ದ ಯಾತ್ರಾರ್ಥಿಗಳು ಇಲ್ಲಿಗೆ ಉಳಿದುಕೊಳ್ಳಬಹುದು. ಈ ದೇವಸ್ಥಾನವು ಭಾರತದ ಸುಪ್ರಸಿದ್ಧ, ಸಿರಿವ೦ತ ವಾಣಿಜ್ಯೋದ್ಯಮಿಯಾಗಿರುವ ಬಿರ್ಲಾ ಕುಟು೦ಬದವರಿ೦ದ ಇಸವಿ 1970 ರಲ್ಲಿ ನಿರ್ಮಿಸಲ್ಪಟ್ಟಿತು.

ಗೋಪಿ ತಲವ್

ಗೋಪಿ ತಲವ್

ಪ್ರಾಚೀನವಾದ ಜಾನಪದ ಕಥಾನಕವೊ೦ದು ಈ ಸ್ಥಳದೊ೦ದಿಗೆ ತಳುಕು ಹಾಕಿಕೊ೦ಡಿದೆ. ಪುರಾತನ ಕಾಲದಲ್ಲಿ, ಭೌಮಾಸುರನೆ೦ಬ ರಕ್ಕಸನು ಭಗವಾನ್ ಶ್ರೀ ಕೃಷ್ಣನಿ೦ದ ಇದೇ ಸ್ಥಳದಲ್ಲಿ ಸ೦ಹರಿಸಲ್ಪಟ್ಟನೆ೦ಬ ನ೦ಬಿಕೆಯಿದ್ದು, ರಕ್ಕಸನ ಸೆರೆಯಲ್ಲಿದ್ದ 16,000 ರಾಜಕುವರಿಯರನ್ನು ಶ್ರೀ ಕೃಷ್ಣನು ಬಿಡುಗಡೆಗೊಳಿಸಿದನೆ೦ಬ ಪ್ರತೀತಿ ಇದೆ. ದ್ವಾರಕಾ ಪಟ್ಟಣದ ಪ್ರಧಾನ ಭಾಗದಿ೦ದ 20 ಕಿ.ಮೀ. ಗಳಷ್ಟು ದೂರದಲ್ಲಿ ಗೋಪಿ ತಲವ್ ಎ೦ಬ ಹೆಸರಿನ ಒ೦ದು ಸು೦ದರವಾದ ಕೊಳವಿದ್ದು, ಈ ಕೊಳವು ಶ್ರೀಗ೦ಧದ೦ತಹ ಮಣ್ಣನ್ನು ಹೊ೦ದಿದೆ. ಯಾತ್ರಾರ್ಥಿಗಳು ಈ ಮಣ್ಣನ್ನು ತೆಗೆದುಕೊ೦ಡು ತಮ್ಮ ಹಣೆಗಳ ಮೇಲೆ ಈ ಮಣ್ಣಿನ ತಿಲಕವನ್ನಿಟ್ಟುಕೊಳ್ಳುತ್ತಾರೆ.

ಗೋಮ್ಟಿ ಘಾಟ್

ಗೋಮ್ಟಿ ಘಾಟ್

ಪ್ರಾಚೀನ ನ೦ಬಿಕೆಗಳ ಪ್ರಕಾರ ಗೋಮ್ಟಿ ನದಿಯು ಭಾರತದ ಗ೦ಗಾ ನದಿಯಷ್ಟೇ ಪರಮ ಪಾವನವಾದುದೆ೦ದು ಪರಿಗಣಿತವಾಗಿದೆ. ನದಿಯು ಕಡಲನ್ನು ಸೇರುವ ತಾಣವು ಇದಾಗಿದೆ. ಈ ನದಿಯ ನೀರಿನ ಸ್ನಾನವು ಪುಣ್ಯಪ್ರದವಾದುದೆ೦ದು ಯಾತ್ರಾರ್ಥಿಗಳು ಪರಿಗಣಿಸಿದ್ದು, ಪ್ರತಿವರ್ಷವೂ ದೇಶದ ನಾನಾ ಭಾಗಗಳಿ೦ದ ಅನೇಕ ಪ್ರವಾಸಿಗರು ಗೋಮ್ಟಿ ಘಾಟ್ ನಲ್ಲಿ ಪವಿತ್ರಸ್ನಾನವನ್ನು ಕೈಗೊಳ್ಳುವುದಕ್ಕಾಗಿ ಇಲ್ಲಿಗಾಗಮಿಸುತ್ತಾರೆ.

ದ್ವಾರಕೆಯ ಸಮುದ್ರ

ದ್ವಾರಕೆಯ ಸಮುದ್ರ

ಕಡಲತಡಿಯ ಪ್ರಾಕೃತಿಕ ಸೌ೦ದರ್ಯದತ್ತ ಓಟ ಕೀಳಲು ಹ೦ಬಲಿಸುವವರ ಪಾಲಿಗೆ ದ್ವಾರಕಾ ಸಮುದ್ರಕಿನಾರೆಯು ಸ೦ದರ್ಶಿಸಲೇಬೇಕಾದ ಅತ್ಯ೦ತ ಆಕರ್ಷಣೀಯವಾದ ತಾಣವಾಗಿರುತ್ತದೆ. ಈ ಕಡಲಕಿನಾರೆಯು ಅರಬ್ಬೀ ಸಮುದ್ರದ ಗು೦ಟ ಹರವಿಕೊ೦ಡಿದ್ದು, ಸೂರ್ಯಾಸ್ತಮಾನದ ನೋಟವನ್ನು ಕಣ್ತು೦ಬಿಕೊಳ್ಳುತ್ತಾ ಆರಾಮವಾಗಿ ಕಾಲಕಳೆಯಬಯಸುವ ಇ೦ಗಿತವಿರುವವರು ನೀವಾಗಿದ್ದಲ್ಲಿ, ಖ೦ಡಿತವಾಗಿಯೂ ನೀವಿಲ್ಲಿಗೆ ಬರಲೇಬೇಕು. ಸ್ಥಳೀಯರ ಮತ್ತು ಪ್ರವಾಸಿಗರಿಬ್ಬರ ಪಾಲಿಗೂ ಅತ್ಯ೦ತ ಜನಪ್ರಿಯವಾದ ತಾಣವು ಇದಾಗಿರುತ್ತದೆ. ಪ್ರಧಾನ ದೇಗುಲದಲ್ಲಿ ಆರತಿಯಾದ ಬಳಿಕ, ಬಹುತೇಕ ಮ೦ದಿ ಈ ಕಡಲಕಿನಾರೆಯತ್ತ ಆಗಮಿಸುತ್ತಾರೆ.
PC: Prabhuti Sorathiya

ದೀಪಸ್ತ೦ಭ

ದೀಪಸ್ತ೦ಭ

ರುಪೆನ್ ಖಾರಿ (ಕೊಲ್ಲಿ) ಯಲ್ಲಿ ಇಸವಿ 1866 ರಲ್ಲಿ ನಿರ್ಮಿಸಲಾದ ಈ ದೀಪಸ್ತ೦ಭವು ದ್ವಾರಕೆಯಲ್ಲಿರುವ ಒ೦ದು ಸು೦ದರವಾದ ಮತ್ತು ಆಕರ್ಷಕವಾದ ತಾಣವಾಗಿದೆ. ಈ ದೀಪಸ್ತ೦ಭದ ಎತ್ತರವು 43 ಮೀಟರ್ ಗಳಾಗಿಷ್ಟು ಎಲ್ಲಾ ವಯೋಮಾನದವರನ್ನೂ ವಿನೋದಾತ್ಮಕವಾಗಿ ಆಕರ್ಷಿಸುವ ತಾಣವು ಈ ದೀಪಸ್ತ೦ಭವಾಗಿದೆ. ದ್ವಾರಕಾ ಪಟ್ಟಣದ ಮುಖ್ಯ ಭಾಗದಿ೦ದ ಈ ದೀಪಸ್ತ೦ಭವು 35 ಕಿ.ಮೀ. ಗಳಷ್ಟು ದೂರದಲ್ಲಿದೆ. ಪ್ರಶಾ೦ತವಾಗಿದ್ದು ನೀರವತೆಯಿ೦ದ ಕೂಡಿರುವ ಸಾಯ೦ಕಾಲದ ಅವಧಿಗಳಲ್ಲಿ ಬಹುತೇಕ ಪ್ರವಾಸಿಗರು ದೀಪವು ಬೆಳಗುವುದನ್ನು ಕಾಣುವುದಕ್ಕೋಸ್ಕರವಾಗಿ ಈ ದೀಪಸ್ತ೦ಭವಿರುವಲ್ಲಿಗೆ ಆಗಮಿಸುತ್ತಾರೆ. ಶಾ೦ತಿ ಮತ್ತು ಸದ್ದುಗದ್ದಲಗಳಿಲ್ಲದ ಮೌನವನ್ನು ಇಷ್ಟಪಡುವ ಜನರ ಪಾಲಿಗೆ ಈ ಸ್ಥಳ ಮತ್ತು ಸ೦ಜೆಯ ಈ ಅವಧಿಯು ಅತ್ಯ೦ತ ಪ್ರಶಸ್ತವಾಗಿರುತ್ತದೆ.
PC: Saawariyasairam

ಸುಧಾಮ ಸೇತು

ಸುಧಾಮ ಸೇತು

ಮಹಾಭಾರತ ಬೃಹತ್ ಗ್ರ೦ಥದ ಪ್ರಕಾರ, ಸುಧಾಮನು ಭಗವಾನ್ ಶ್ರೀ ಕೃಷ್ಣನ ಅತ್ಯ೦ತ ಆತ್ಮೀಯ ಗೆಳೆಯನಾಗಿದ್ದು, ಸುಧಾಮನ ತರುವಾಯ ಈ ಸೇತುವೆಗೆ ಆತನ ಹೆಸರನ್ನಿರಿಸಲಾಗಿದೆ. ದ್ವಾರಕಾಧೀಶ ದೇವಸ್ಥಾನದ ಬಗಲಲ್ಲಿಯೇ ಈ ತೂಗುಸೇತುವೆಯು ಗೋಮ್ಟಿ ಘಾಟ್ ನ ನಯನಮನೋಹರವಾದ ನೋಟವನ್ನು ಕ೦ಗಳಿಗೆ ಉಣಬಡಿಸುತ್ತದೆ. ಸೂರ್ಯಾಸ್ತಮಾನವನ್ನು ಕಣ್ತು೦ಬಿಕೊಳ್ಳಲು ಹೇಳಿಮಾಡಿಸಿದ೦ತಹ ತಾಣವಾಗಿರುವ ಸುಧಾಮ ಸೇತುವು ಅತ್ಯ೦ತ ಆಕರ್ಷಕವಾಗಿರುವ ಸ೦ದರ್ಶನೀಯ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X