Search
  • Follow NativePlanet
Share
» »ನೋಡಲೇಬೇಕಾದ 10 ದಕ್ಷಿಣ ಭಾರತದ ಬೆಟ್ಟಗಾಡು ಪ್ರದೇಶಗಳು

ನೋಡಲೇಬೇಕಾದ 10 ದಕ್ಷಿಣ ಭಾರತದ ಬೆಟ್ಟಗಾಡು ಪ್ರದೇಶಗಳು

ದಕ್ಷಿಣ ಭಾರತದಲ್ಲಿ ನಯನಮನೋಹರವಾದ ಸಾಕಷ್ಟು ಗಿರಿಧಾಮಗಳಿದ್ದು ಅವುಗಳಲ್ಲಿ ಕೆಲವು ಗಿರಿಧಾಮಗಳು ಸದಾ ಪ್ರವಾಸಿಗರನ್ನು ಆಕರ್ಷಿಸುತ್ತವೆ ಹಾಗೂ ಸಾಕಷ್ಟು ಪ್ರಸಿದ್ಧಿಗಳಿಸಿವೆ

By Mahesh Pallakki

ಮಂಜು ಮುಸುಕಿದ ವಾತಾವರಣ, ಎತ್ತ ನೋಡಿದರೂ ಹಚ್ಚ ಹಸಿರು, ಶುದ್ಧವಾದ ಗಾಳಿ, ಸಾಲು ಸಾಲು ಬೆಟ್ಟಸಾಲುಗಳು, ಮಳೆಗಾಲದಲ್ಲಿ ಬೆಟ್ಟದ ಮೇಲೆ ನಿಂತು ಮೋಡಗಳು ಮಳೆ ಸುರಿಸುವುದನ್ನುಕಣ್ತುಂಬಿಕೊಳ್ಳುವ ಆ ಆನಂದ, ಬೇಸಿಗೆಯಲ್ಲಿ ತಣ್ಣನೆಯ ಅನುಭವ ನೀಡುವ ವಾತಾವರಣ, ಚುಮುಚುಮು ಚಳಿಯಲ್ಲಿ ಗುಡ್ಡಗಳ ಬಿಸಿಲಲ್ಲಿ ಮೈ ಒಡ್ಡಿದರೆ ನಗರದ ಒತ್ತಡದ ಜೀವನ ಮರತೇ ಹೋಗುವಷ್ಟು ಸಿಗುವ ಸುಖ, ಎಷ್ಟು ದೂರ ಕಣ್ಣು ಹಾಯಿಸಿದರೂ ಮೋಡಗಳು ಬೆಟ್ಟಗಳನ್ನು ಚುಂಬಿಸುವ ಆ ದೃಶ್ಯ. ಬಿಸಿಯಾದ ಕಾಫಿ, ಜೊತೆಗೊಂದಿಷ್ಟು ಗೆಳೆಯರು-ಮನೆಯವರು ಇಷ್ಟು ಸಾಕಲ್ಲವೆ ನಮ್ಮ ಪ್ರವಾಸವನ್ನು ಸದಾ ನೆನಪಿನಲ್ಲಿಡಲು. ಇಂತಹ ಮರೆಯಲಾರದ ಪ್ರವಾಸಕ್ಕೆ ತಯಾರಾಗುವ ಮುನ್ನ ದಕ್ಷಿಣ ಭಾರತದ ಪ್ರಸಿದ್ದ ಪ್ರವಾಸಿ ತಾಣಗಳ ಕಡೆ ಒಮ್ಮೆ ಕಣ್ಣುಹಾಯಿಸಿದರೆ ಒಳ್ಳೆಯದು.

ವರ್ಷದ ಎಲ್ಲ ಋತುಮಾನಗಳಲ್ಲೂ ಪ್ರವಾಸಿಗರಿಂದ ತುಂಬಿತುಳುಕುವ ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶವು ಪ್ರವಾಸಿಗರಿಗೆ,ನಿಸರ್ಗ ಪ್ರಿಯರಿಗೆ ಅತ್ಯಂತ ಮೆಚ್ಚಿನ ತಾಣ. ಪಶ್ಚಿಮಘಟ್ಟ ಹಾಗೂ ಪೂರ್ವಘಟ್ಟ ಸಾಲುಗಳು ಅತ್ಯಂತ ಹೆಚ್ಚು ಭೇಟಿಕೊಡಲ್ಪಡಲಾಗುವ ಪ್ರದೇಶಗಳು. ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ದಕ್ಷಿಣದಲ್ಲಿ ಹಿಂದೂ ಮಹಾಸಾಗರದಿಂದ ಸುತ್ತುವರೆದು, ಗೋದಾವರಿ, ಕೃಷ್ಣ, ಕಾವೇರಿ, ತುಂಗಭದ್ರಾ, ವೈಗಾಯ್ ನದಿಗಳ ಉಗಮಸ್ಥಾನಗಳನ್ನು ಹೊಂದಿರುವ, ಎಲ್ಲ ರೀತಿಯಿಂದಲೂ ಪ್ರಾಕೃತಿಕವಾಗಿ ಅತ್ಯಂತ ಸುಂದರ ನಾಡು ಈ ದಕ್ಷಿಣ ಭಾರತ.ಬನ್ನಿ ದಕ್ಷಿಣ ಭಾರತದ ಕೆಲವು ಪ್ರಸಿದ್ದ ಬೆಟ್ಟಗಾಡು ಪ್ರದೇಶಗಳ
ಬಗ್ಗೆ ತಿಳಿದುಬರೋಣ.

ಶಿವಮೊಗ್ಗ

ಶಿವಮೊಗ್ಗ

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕುಂದಾದ್ರಿ ಬೆಟ್ಟಸಾಲುಗಳು ಕಂಡುಬರುತ್ತದೆ.ಶಿವಮೊಗ್ಗದಿಂದ 80 ಕಿ.ಮೀ ಹಾಗೂ ತೀರ್ಥಹಳ್ಳಿಯಿಂದ 18 ಕಿ.ಮೀ. ದೂರದಲ್ಲಿ ಕುಂದಾದ್ರಿ ಇದೆ. ಸಮುದ್ರ ಮಟ್ಟದಿಂದ 3200 ಅಡಿ ಎತ್ತರವಿರುವ ಈ ಬೆಟ್ಟವು ಅತ್ಯಂತ ಬೃಹತ್ ಗಾತ್ರದ ಹಲವಾರು ಏಕಶಿಲೆಗಳಿಂದ ಕೂಡಿದೆ. ಬೆಟ್ಟದ ತುದಿಯಲ್ಲಿ ಪುರಾತನ ಜೈನ ದೇವಾಲಯವೂ ಇದೆ. ಇದನ್ನು ಕುಂದಾಚಾರ್ಯನೆಂಬ ಜೈನ ಮುನಿಯು ತಪಸ್ಸು ಮಾಡಿದ ಜಾಗವೆಂದು ಹೇಳಲಾಗುತ್ತದೆ. ಆದ್ದರಿಂದಲೇ ಇದಕ್ಕೆ ಕುಂದಾದ್ರಿ ಎಂಬ ಹೆಸರು ಬಂದಿದೆ. ಕಲ್ಲು ಮಣ್ಣುಗಳಿಂದ ಕೂಡಿದ ಕಾಲುದಾರಿಯುಟ್ರೆಕ್ಕಿಂಗ್ ಮಾಡಲು ಅತ್ಯಂತ ಪ್ರಶಸ್ತವಾದ ಜಾಗ. ಹುಣ್ಣಿಮೆಯ ದಿನಗಳಲ್ಲಿ ಈ ಬೆಟ್ಟದ ಮೇಲೆ ನಿಂತು ಸೂರ್ಯ ಹುಟ್ಟುವುದನ್ನು ಹಾಗು ಚಂದ್ರ ಮುಳುಗುವುದನ್ನು ಏಕಕಾಲದಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ಮಳೆಗಾಲವು ಕುಂದಾದ್ರಿಯನ್ನು ನೋಡಲು ಪ್ರಶಸ್ತವಾದ ಸಮಯ.

ಚಿತ್ರಕೃಪೆ: Manjeshpv

ಕೇರಳ

ಕೇರಳ

ಕೇರಳದ ತ್ರಿವೆಂಕೂರ್ ನಲ್ಲಿ ವಾಗಮೋನ್ ಇದೆ. ಸ್ಕಾಟ್ ಲ್ಯಾಂಡ್ ಆಫ್ ಏಷ್ಯಾ ಎಂದೇ ಈ ಪ್ರದೇಶ ಖ್ಯಾತಿ ಗಳಿಸಿದೆ. ಹಸಿರಿನ ಹೊದ್ದಿಕೆಯನ್ನೇ ಹೊತ್ತಂತಿರುವ ಈ ವಾಗಮೋನ್ ಎಲ್ಲಿ ದೃಷ್ಟಿ ಹಾಯಿಸಿದರೂ ಹಸಿರಿನ ಬೆಟ್ಟಗಳು, ಹಸಿರಿನಿಂದ ಕೂಡಿದ ಬಯಲು ಪ್ರದೇಶಗಳು, ಆಳವಾದ ಕಂದಕಗಳು, ಅಚ್ಚ ಹಸಿರಿನ ಟೀ ತೋಟಗಳಿಂದ ಕಂಗೊಳಿಸುತ್ತದೆ. ಇದು ಸಮುದ್ರ ಮಟ್ಟದಿಂದ 1200 ಮೀ ಎತ್ತರದ ಸ್ಥಾನದಲ್ಲಿದೆ. ನ್ಯಾಷನಲ್ ಜಿಯೋಗ್ರಫಿ ಸಂಸ್ಥೆಯು ಪಟ್ಟಿ ಮಾಡಿರುವ ಭಾರತದಲ್ಲಿ ಭೇಟಿ ನೀಡಬಹುದಾದಂತಹ 50 ಅತ್ಯಂತ ಆಕರ್ಷಣೀಯ ತಾಣಗಳಲ್ಲಿ ಇದೂ ಸಹ ಒಂದು.

ಚಿತ್ರಕೃಪೆ: Bibin C.Alex

ಕೊಡಗು

ಕೊಡಗು

ಕೂರ್ಗ್ ಅಥವಾ ಮಡಿಕೇರಿಯ ಸೊಬಗಿನ ಬಗ್ಗೆ ಹೆಚ್ಚು ಹೇಳಬೇಕಾದ್ದೇನು ಇಲ್ಲ.ಪ್ರಪಂಚದಲ್ಲಿಯೇ ಅತ್ಯಂತ ಪ್ರಸಿದ್ದ ಸುಂದರ ತಾಣಗಳಲ್ಲಿ ಇದೂ ಸಹ ಒಂದು. ದಕ್ಷಿಣದ ಕಾಶ್ಮೀರ ಎಂದೇ ಇದು ಹೆಸರುವಾಸಿಯಾಗಿದೆ. ಇಲ್ಲಿನ ರಾಜಾ ಸೀಟ್, ಅಬ್ಬೀ ಜಲಪಾತ, ಇಲ್ಲಿನ ದೇವಸ್ಥಾನಗಳು ಅತ್ಯಂತ ಪ್ರಸಿದ್ಧವಾದವುಗಳು. ಮಡಿಕೇರಿಯ ಸಾಂಪ್ರದಾಯಿಕ ಉಡುಗೆಗಳು, ಅಲ್ಲಿನ ಸಾಂಪ್ರದಾಯಿಕ ನೃತ್ಯಶೈಲಿಗಳು ಅಲ್ಲಿನ ವಿಶೇಷತೆ. ಕೊಡಗು ಜಿಲ್ಲೆಯಲ್ಲಿರುವ ಮಡಿಕೇರಿಯ ಮುಖ್ಯ ಬೆಳೆ ಕಾಫಿ ಮತ್ತು ಟೀ. ಆದ್ದರಿಂದಲೇ ಇಲ್ಲಿ ಟೀ ಮತ್ತು ಕಾಫಿ ತೋಟಗಳನ್ನು ಹೆಚ್ಚಾಗಿ ನೋಡಬಹುದು. ಮಡಿಕೇರಿಯು ಸಮುದ್ರ ಮಟ್ಟದಿಂದ 3500 ಮೀ ಎತ್ತರವಿದೆ. ಜೂನ್,ಜುಲೈ,ಆಗಸ್ಟ್,ಸೆಪ್ಟಂಬರ್ ಹೊರತುಪಡಿಸಿ ವರ್ಷದ ಎಲ್ಲ ತಿಂಗಳುಗಳು ಮಡಿಕೇರಿಯ ಭೇಟಿಗೆ ಪ್ರಶಸ್ತವಾಗಿದೆ.

ಚಿತ್ರಕೃಪೆ: Jyotirmoy

ತಿರುವನಂತಪುರಂ

ತಿರುವನಂತಪುರಂ

ಕೇರಳದ ತಿರುವನಂತಪುರಂ ನಲ್ಲಿ ಪೊನ್ಮುಡಿ ಪ್ರವಾಸಿ ತಾಣವಿದೆ. ತಿರುವನಂತಪುರಂನಿಂದ 55.2 ಕಿ.ಮೀ. ದೂರವಿದೆ.ಪೊನ್ಮುಡಿ ಎಂದರೆ ದಿ ಗೋಲ್ಡನ್ ಪೀಕ್ ಎಂದರ್ಥ. ಪೊನ್ಮುಡಿ ಜಲಪಾತ, ಜಿಂಕೆ ಪಾಕರ್್, ಮೀನ್ಮುಟ್ಟಿ ಫಾಲ್ಸ್, ಪೆಪ್ಪರಾ ವನ್ಯಜೀವಿ ಅಭಯಾರಣ್ಯ ಹಾಗು ಪಕ್ಷಿಧಾಮ ಇಲ್ಲಿ ನಮಗೆ ನೋಡಲು ಸಿಗುವ ಪ್ರವಾಸಿ ತಾಣಗಳು. ಇಂತಹ ಪ್ರವಾಸಿ ತಾಣಗಳಲ್ಲದೆ ಪೊನ್ಮುಡಿಯು ಆಯುರ್ವೇದ ಚಿಕಿತ್ಸೆಗಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Arunelectra

ಆಂಧ್ರಪ್ರದೇಶ

ಆಂಧ್ರಪ್ರದೇಶ

ಹಾರ್ಸ್ಲೆ ಹಿಲ್ಸ್ ಇರುವುದು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ. ಅದಕ್ಕಿರುವ ಮತ್ತೊಂದು ಹೆಸರು "ಯೆನುಗು ಮಲ್ಲಮ ಕೊಂಡ".1870ರಲ್ಲಿ, ಅಂದಿನ ಬ್ರಿಟೀಷ್ ಕಲೆಕ್ಟರ್ ಆಗಿದ್ದಂತಹ
ಡಬ್ಲ್ಯೂ.ಡಿ.ಹಾರ್ಸ್ಲೆ ಎಂಬುವವ ಈ ಬೆಟ್ಟದ ಮೇಲೆ ತನ್ನ ಮನೆಯನ್ನು ಕಟ್ಟಿಕೊಂಡ ಪರಿಣಾಮವಾಗಿ ಈ ಬೆಟ್ಟಕ್ಕೆ ಹಾರ್ಸ್ಲೆ ಹಿಲ್ಸ್ ಎಂಬ ಹೆಸರು ಬಂದಿತು. ಯೂಕಲಿಪ್ಟ್ಸ್ ಪ್ರಭೇದಕ್ಕೆ ಸೇರಿದ ಮರಗಳ ಕಾಡು ಹಾಗೂ
ಹಲವಾರು ವಿದೇಶಿ ತಳಿಗಳ ಸಸಿಗಳು ಈ ಜಾಗದಲ್ಲಿ ಕಂಡುಬರುತ್ತವೆ.ಇದು ಅತ್ಯಂತ ಸುಂದರ ಹಾಗೂ ಅತ್ಯಂತ ತಂಪಾದ ಅನುಭವ ನೀಡುವ ಒಂದು ಗುಡ್ಡಗಾಡು ಪ್ರದೇಶವಾಗಿದೆ. ಟ್ರೆಕ್ಕಿಂಗ್ ಹಾಗೂ ಸಫಾರಿ ಮಾಡಬಯಸುವ ಪ್ರವಾಸಿಗರಿಗೆ ಇದು ಸೂಕ್ತವಾದ ಜಾಗವಾಗಿದೆ.

ಚಿತ್ರಕೃಪೆ: NAYASHA WIKI

ಸೇಲಂ

ಸೇಲಂ

ದಕ್ಷಿಣದ ಆಭರಣ ಸಾಲುಗಳು ಎಂದು ಕರೆಯುವ ಈ ಸುಂದರ ತಾಣವಿರುವುದು ತಮಿಳುನಾಡಿನ ಸೇಲಂ ನಲ್ಲಿ. ಇದರ ಮೂಲ ಹೆಸರು ಯೆರಿ(ಕೆರೆ) ಕಾಡು ಎಂದು.
ಈ ಪ್ರದೇಶವು ಕೆರೆಯಿಂದ ಆವೃತ್ತವಾಗಿದ್ದು ಸುತ್ತಲೂ ಕಾಡಿನಿಂದ ಕೂಡಿದೆ. ಯೆರಿ ಕಾಡು ಕಾಲಾನಂತರ ಯೆರ್ಕಾಡ್ ಆಗಿ ಪ್ರಸಿದ್ದಿಯಾಯಿತು. ಇಲ್ಲಿನ ವಾತಾವರಣವು 29ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ಏರುವುದಿಲ್ಲ
ಮತ್ತು 13 ಡಿಗ್ರಿ ಸೆಲ್ಸಿಯಸ್ ಗಿಂತ ಕೆಳಗಿಳಿಯುವುದಿಲ್ಲ.ಹೀಗಾಗಿ ಯೆರ್ಕಾಡ್ ಪ್ರದೇಶವು ತನ್ನ ತಂಪಾದ ವಾತಾವರಣದಿಂದ ಎಲ್ಲರನ್ನು ಸ್ವಾಗತಿಸುತ್ತದೆ. ಯೆರ್ಕಾಡ್ ಲೇಕ್, ಅಣ್ಣಾ ಪಾರ್ಕ್, ಲೇಡಿ ಸೀಟ್, ಪಗೋಡಾ ಪಾಯಿಂಟ್ ಇವೆಲ್ಲವೂ ಯೆರ್ಕಾಡ್ ನಲ್ಲಿ ನೋಡಲೇಬೇಕಾದಂತಹ ಜಾಗಗಳು.

ಚಿತ್ರಕೃಪೆ: Riju K

ಕರ್ನಾಟಕ

ಕರ್ನಾಟಕ

ಕರ್ನಾಟಕದ ಈ ಸುಪ್ರಸಿದ್ಧ ತಾಣ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಹೆಸರನ್ನು ಉಳಿಸಿಕೊಂಡಿದೆ. ಕರ್ನಾಟಕದ ಶಿವಮೊಗ್ಗದಲ್ಲಿರುವ ಕೊಡಚಾದ್ರಿ ಬೆಟ್ಟಸಾಲುಗಳು ಅತ್ಯಂತ ದಟ್ಟ ಅರಣ್ಯಪ್ರದೇಶದಿಂದ ಕೂಡಿದ್ದು ಟ್ರೆಕ್ಕಿಂಗ್ ಪ್ರಿಯರಿಗೆ ಅತ್ಯಂತ ಪ್ರಿಯವಾದ ತಾಣ. ಮೂಕಾಂಬಿಕಾ ದೇವಸ್ತಾನದ ಹಿನ್ನೆಲೆಯಲ್ಲಿ ಹರಡಿಕೊಂಡಿರುವ ಈ ಬೆಟ್ಟಸಾಲುಗಳು ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿದೆ. ಮೂಕಾಂಬಿಕಾ ವನ್ಯಧಾಮ, 12 ಕಿ.ಮೀ.ಗಳ ಚಾರಣ ದಾರಿ, ತುತ್ತತುದಿಯಿಂದ ನೋಡಲು ಸಿಗುವ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ, ಜಲಪಾತಗಳು, ಹಚ್ಚಹಸುರಿನ ಮೈದಾನಗಳು ಇಲ್ಲಿನ ಮುಖ್ಯ ಆಕರ್ಷಣೆ.

ಚಿತ್ರಕೃಪೆ: Chetan Annaji Gowda

ಪಾಲಕ್ಕಾಡ್

ಪಾಲಕ್ಕಾಡ್

ಕೇರಳದ ಪಾಲಕ್ಕಾಡ್ ನಿಂದ 60 ಕಿ.ಮೀ. ದೂರ ಕ್ರಮಿಸಿದರೆ ಸಿಗುವ ಪರ್ವತ ಪ್ರದೇಶವೇ ನೆಲ್ಲಿಯಾಂಪತಿ. 19ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುವ "ಪೋತುಂಡಿ ಡ್ಯಾಂ"ನಿಂದ ಆರಂಭವಾಗುವ ನೆಲ್ಲಿಯಾಂಪತಿ, ಟೀ ಮತ್ತು ಕಾಫೀ ತೋಟಗಳಿಂದ ಸುತ್ತುವರೆದಿದೆ. ಇಲ್ಲಿಂದ 8ಕಿ.ಮೀ ಹೋದರೆ ಸಿಗುವ ಸೀತಾರ್ಗುಂಡು ವ್ಯೂ ಪಾಯಿಂಟ್ ಎಂಬ ಹೆಸರಿನ ಜಾಗವು ಪುರಾಣ ಪ್ರಸಿದ್ದವಾದದ್ದು. ವನವಾಸದಲ್ಲಿದ್ದ ಶ್ರೀರಾಮ,ಲಕ್ಷ್ಮಣ ಹಾಗೂ ಸೀತಾದೇವಿಯು ಇಲ್ಲಿ ತಂಗಿದ್ದರೆಂದು ಹೇಳಲಾಗುತ್ತದೆ. ಇದೇ ರೀತಿಯ ಮತ್ತೊಂದು ಜಾಗ ಕೇಸವನ್ ರಾಕ್ ವ್ಯೂ ಪಾಯಿಂಟ್.

ಚಿತ್ರಕೃಪೆ: Kjrajesh

ವಿಶಾಖಾಪಟ್ಟಣ

ವಿಶಾಖಾಪಟ್ಟಣ

ಆಂಧ್ರಪ್ರದೇಶದ ವಿಶಾಖಾಪಟ್ಟಣದಲ್ಲಿರುವ ಸುಂದರ ಕಣಿವೆಗಳ ನಾಡು ಅರಕು ವ್ಯಾಲಿ. ಇದೊಂದು ಬುಡಕಟ್ಟು ಜನಾಂಗದವರು ವಾಸಮಾಡುವ ಜಾಗ. ಹಲವು ಜೀವವೈವಿಧ್ಯತೆಗಳಿಂದ ಕೂಡಿದ ಅನಂತಗಿರಿ ಮತ್ತು ಸುಂಕರಿಮೆಟ್ಟ ಅಭಯಾರಣ್ಯ ಪ್ರದೇಶವು ಇದೇ ಅರಕು ವ್ಯಾಲಿಗೆ ಸೇರುತ್ತದೆ. ಗಾಳಿಕೊಂಡ , ರಕ್ತಕೊಂಡ, ಸುಂಕರಿಮೆಟ್ಟ, ಚಿಟಮಗೊಂಡಿ ಕಣಿವೆಗಳು ಈ ಅರಕು ವ್ಯಾಲಿಯನ್ನು ಸುತ್ತುವರೆದು
ಅದರ ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ಚಿತ್ರಕೃಪೆ: Adityamadhav83

ಆಕರ್ಷಕ

ಆಕರ್ಷಕ

ಕೇರಳದ ಅವಿಭಾಜ್ಯ ಅಂಗವಾಗಿ ಬೆರೆತು ಹೋಗಿರುವ ಹಾಗೂ ಕೇರಳವೆಂದರೆ ಮೊದಲು ನೆನಪಾಗುವ ಸುಪ್ರಸಿದ್ದ ಪ್ರವಾಸಿ ತಾಣವೇ ಈ ಮುನ್ನಾರ್. ಇಲ್ಲಿ ನೋಡಲೇ ಬೇಕಾದ ಕೆಲವು ಜಲಪಾತಗಳು, ಪಲ್ಲಿವಸಲ್ ನ ಹೈಡ್ರೋ-ಎಲೆಕ್ಟ್ರಿಕ್ ಪ್ಲಾಂಟೇಶನ್, ಮಟ್ಟುಪೆಟ್ಟಿ ಡ್ಯಾಮ್ ಹಾಗೂ ಕೆರೆ, ಟೀ ಮ್ಯೂಸಿಯಂ,ಅಷ್ಟೇ ಅಲ್ಲದೇ ತನ್ನ ಅಪ್ರತಿಮ ಪ್ರಾಕೃತಿಕ ಸೌಂದರ್ಯತೆಯಿಂದ ದೇಶವಿದೇಶದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಮುನ್ನಾರ್ ಅನ್ನು ಭೇಟಿ ಮಾಡದೇ ಪರ್ವತ ಶ್ರೇಣಿಗಳ ಪ್ರವಾಸವು ಪೂರ್ಣಗೊಳ್ಳುವುದಿಲ್ಲ. ಮುದ್ರಪುಳ, ನಲ್ಲತನ್ನಿ, ಕುಂಡಲ ಬೆಟ್ಟಗಳ ಸಮುಚ್ಚಯವೇ ಮುನ್ನಾರ್. 12 ವರ್ಷಗಳಿಗೊಮ್ಮೆ ಇಲ್ಲಿ ಅರಳುವ
ಅಪರೂಪದ ಪುಷ್ಪ ನೀಲಕುರುಂಜಿ.ಇದು ಅರಳಿದಾಗ ಇಡೀ ಮುನ್ನಾರ್ ಪ್ರದೇಶವು ಸಂಪೂರ್ಣ ನೀಲಿ ಬಣ್ಣಗಳಿಂದ ಕಂಗೊಳಿಸುತ್ತದೆ. ಇದು ಮಂದೆ ಬರಲಿರುವ 2018 ರಲ್ಲಿ ಮತ್ತೊಮ್ಮೆ ಅರಳಲಿದೆ.

ಚಿತ್ರಕೃಪೆ: Kerala Tourism

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X