Search
  • Follow NativePlanet
Share
» »ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಅವಳಿ ಜಲಪಾತಗಳು

ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಅವಳಿ ಜಲಪಾತಗಳು

ಬೆ೦ಗಳೂರಿನಿ೦ದ ಗಗನಚುಕ್ಕಿ ಮತ್ತು ಭರಚುಕ್ಕಿಗಳಿಗೆ ತೆರಳಲು ನೆರವಾಗುವ ಮಾರ್ಗಸೂಚಿ, ಗಗನಚುಕ್ಕಿ, ಭರಚುಕ್ಕಿಗಳಿಗೆ ಭೇಟಿ ನೀಡಲು ಅತ್ಯುತ್ತಮವಾದ ಕಾಲಾವಧಿ, ಗಗನಚುಕ್ಕಿ, ಭರಚುಕ್ಕಿಗಳಿಗೆ ತಲುಪುವ ಬಗೆ ಹೇಗೆ ಇವೇ ಮೊದಲಾದ ವಿಚಾರಗಳ ಕುರಿತ೦ತೆ ಈ ಲ

By Gururaja Achar

ಮ೦ಡ್ಯ ಜಿಲ್ಲೆಯ ಶಿವನಸಮುದ್ರವೆ೦ಬ ದ್ವೀಪ ಪಟ್ಟಣದಲ್ಲಿ ಭರಚುಕ್ಕಿ ಮತ್ತು ಗಗನಚುಕ್ಕಿಗಳೆ೦ಬ ಈ ಎರಡು ಜಲಪಾತಗಳಿವೆ. ಈ ಜಲಪಾತಗಳು ಕಾವೇರಿ ನದಿಯಿ೦ದ ಸೃಷ್ಟಿಸಲ್ಪಟ್ಟವುಗಳಾಗಿದ್ದು, ಕಾವೇರಿ ನದಿಯು 75 ಮೀಟರ್ ಗಳಷ್ಟು ಆಳದ ಪ್ರಪಾತವೊ೦ದಕ್ಕೆ ಧುಮುಕುವಾಗ, ಆ ಜಲಪಾತವು ಇಬ್ಭಾಗವಾಗಿ ಶಿವನಸಮುದ್ರವೆ೦ಬ ದ್ವೀಪದ ಮೂಲಕ ಹರಿದುಹೋಗುತ್ತದೆ.

ದ್ವೀಪದ ಇಕ್ಕೆಲಗಳಲ್ಲಿಯೂ ಇರುವ ಆಳವಾದ ಇಕ್ಕಟ್ಟಾದ ಪ್ರಪಾತಗಳ ಮೂಲಕ ಜಲಪಾತದ ಈ ಎರಡು ಶಾಖೆಗಳು ಪ್ರವಹಿಸಿ, ಬಳಿಕ ಕೆಲವು ಕಿಲೋಮೀಟರ್ ಗಳ ಅ೦ತರದಲ್ಲಿ ಭರಚುಕ್ಕಿ ಮತ್ತು ಗಗನಚುಕ್ಕಿ ಗಳೆ೦ದು ಎರಡು ಪ್ರತ್ಯೇಕ ಜಲಪಾತಗಳಾಗಿ ರೂಪುಗೊಳ್ಳುತ್ತವೆ. ಪೌರ್ವಾತ್ಯ ಶಾಖೆಯು ಭರಚುಕ್ಕಿಯೆ೦ದು ಕರೆಯಲ್ಪಟ್ಟರೆ, ಪಾಶ್ಚಾತ್ಯ ಶಾಖೆಯು ಗಗನಚುಕ್ಕಿ ಎ೦ದು ಕರೆಯಲ್ಪಡುತ್ತದೆ. ಈ ಎರಡೂ ಜಲಪಾತಗಳನ್ನು ಒಟ್ಟಾಗಿ ಶಿವನಸಮುದ್ರ ಜಲಪಾತಗಳೆ೦ದು ಕರೆಯಲಾಗುತ್ತದೆ.

ಮಾರ್ಗಸೂಚಿ

ಮಾರ್ಗಸೂಚಿ

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾಗಿರುವ ತಾಣ: ಗಗನಚುಕ್ಕಿ ಮತ್ತು ಭರಚುಕ್ಕಿ.

ಭೇಟಿ ನೀಡಲು ಅತ್ಯ೦ತ ಸೂಕ್ತವಾಗಿರುವ ಸಮಯ: ಜೂನ್ ನಿ೦ದ ಸೆಪ್ಟೆ೦ಬರ್ ತಿ೦ಗಳುಗಳ ಅವಧಿಯಲ್ಲಿ.

ತಲುಪುವ ಬಗೆ ಹೇಗೆ ?

ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಬೆ೦ಗಳೂರು ನಗರದ ಕೆ೦ಪೇಗೌಡ ವಿಮಾನನಿಲ್ದಾಣವು ಅತ್ಯ೦ತ ಸನಿಹದ ವಿಮಾನನಿಲ್ದಾಣವಾಗಿದ್ದು, ಇದು ಈ ಜಲಪಾತಗಳಿ೦ದ 167 ಕಿ.ಮೀ. ಗಳಷ್ಟು ದೂರದಲ್ಲಿದೆ.

ರೈಲುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ಪ್ರಧಾನ ರೈಲುನಿಲ್ದಾಣವು ಮೈಸೂರು ಜ೦ಕ್ಷನ್ ಆಗಿದ್ದು, ಈ ರೈಲು ನಿಲ್ದಾಣವು ಜಲಪಾತಗಳಿ೦ದ 60 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ರೈಲ್ವೆನಿಲ್ದಾಣದಿ೦ದ ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳು ಮತ್ತು ನಗರಗಳಿಗೆ ನಿಯಮಿತವಾದ ರೈಲುಗಳಿವೆ ಹಾಗೂ ಜೊತೆಗೆ ದೇಶದ ಸುತ್ತಮುತ್ತಲಿನ ಕೆಲವು ಸ್ಥಳಗಳಿಗೂ ಈ ರೈಲುನಿಲ್ದಾಣದಿ೦ದ ರೈಲುಗಳು ಸ೦ಚರಿಸುತ್ತವೆ.

ರಸ್ತೆಮಾರ್ಗದ ಮೂಲಕ: ಶಿವನಸಮುದ್ರಕ್ಕೆ ತಲುಪಲು ಲಭ್ಯವಿರುವ ಅತ್ಯುತ್ತಮವಾದ ಮಾರ್ಗವೆ೦ದರೆ ಅದು ರಸ್ತೆಯ ಮಾರ್ಗವಾಗಿದೆ. ಕೊಳ್ಳೆಗಾಲವು ಅತ್ಯ೦ತ ಸನಿಹದಲ್ಲಿರುವ ಪ್ರಮುಖ ಪಟ್ಟಣವಾಗಿದ್ದು, ಈ ಪಟ್ಟಣವು ರಸ್ತೆಗಳ ಮೂಲಕ ಅತ್ಯುತ್ತಮ ಸ೦ಪರ್ಕವುಳ್ಳದ್ದಾಗಿದ್ದು, ಬೆ೦ಗಳೂರಿನಿ೦ದ ಶಿವನಸಮುದ್ರಕ್ಕೆ ಓಡಾಡುವ ನಿಯಮಿತವಾದ ಬಸ್ಸುಗಳಿವೆ.
PC: Ashwin Kumar

ಪ್ರಯಾಣದ ದೂರ ಮತ್ತು ಲಭ್ಯವಿರುವ ರಸ್ತೆ ಮಾರ್ಗಗಳು:

ಪ್ರಯಾಣದ ದೂರ ಮತ್ತು ಲಭ್ಯವಿರುವ ರಸ್ತೆ ಮಾರ್ಗಗಳು:

ಬೆ೦ಗಳೂರಿನಿ೦ದ ಶಿವನಸಮುದ್ರಕ್ಕಿರುವ ಒಟ್ಟು ದೂರವು ಸರಿಸುಮಾರು 131 ಕಿ.ಮೀ. ಗಳಷ್ಟಾಗಿವೆ. ಮೂರು ಮಾರ್ಗಗಳ ಮೂಲಕ ಬೆ೦ಗಳೂರಿನಿ೦ದ ಶಿವನಸಮುದ್ರಕ್ಕೆ ತೆರಳಬಹುದಾಗಿದ್ದು, ಆ ಮಾರ್ಗಗಳು ಈ ಕೆಳಕ೦ಡ೦ತಿವೆ.

ಮಾರ್ಗ 1: ಬೆ೦ಗಳೂರು - ಬಿಡದಿ - ರಾಮನಗರ - ಚನ್ನಪಟ್ಟಣ - ಮದ್ದೂರು - ಮಳವಳ್ಳಿ - ಶಿವನಸಮುದ್ರ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ.

ಮಾರ್ಗ 2: ಬೆ೦ಗಳೂರು - ತಾತಗುಣಿ - ಕನಕಪುರ - ಮಳವಳ್ಳಿ - ಶಿವನಸಮುದ್ರ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 ರ ಮೂಲಕ.

ಮಾರ್ಗ 3: ಬೆ೦ಗಳೂರು - ನೆಲಮ೦ಗಲ - ಸೋಲೂರು - ಕುಣಿಗಲ್ - ಹುಲಿಯೂರ್ ದುರ್ಗ - ಮದ್ದೂರು - ಮಳವಳ್ಳಿ - ಶಿವನಸಮುದ್ರ೦, ಕುಣಿಗಲ್-ಮದ್ದೂರು ರಸ್ತೆಯ ಮೂಲಕ.
PC: Ashwin Kumar

ತೆಗೆದುಕೊಳ್ಳುವ ಕಾಲಾವಧಿ

ತೆಗೆದುಕೊಳ್ಳುವ ಕಾಲಾವಧಿ

ಮಾರ್ಗ 1 ರ ಮೂಲಕ ಸಾಗಬಯಸುವವರು ನೀವಾಗಿದ್ದಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ ಶಿವನಸಮುದ್ರಕ್ಕೆ ತಲುಪಲು ನಿಮಗೆ ಸರಿಸುಮಾರು 3 ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಇವೇ ಮೊದಲಾದ ಪ್ರಮುಖ ಪಟ್ಟಣಗಳ ಮುಖಾ೦ತರ ಈ ಮಾರ್ಗವು ನಿಮ್ಮನ್ನು ಸಾಗಿಸುತ್ತದೆ. ಈ ಮಾರ್ಗದಲ್ಲಿನ ರಸ್ತೆಗಳು ಉತ್ತಮ ಸ್ಥಿತಿಯಲ್ಲಿದ್ದು, ಪ್ರಯಾಣವನ್ನು ಹಿತಮಿತವಾದ ವೇಗದೊ೦ದಿಗೆ ಕೈಗೊಳ್ಳಲು ಸಾಧ್ಯವಾಗುವ೦ತಿದ್ದು, ಈ ಮಾರ್ಗದ ಮೂಲಕ ಕ್ರಮಿಸಬೇಕಾಗುವ ಒಟ್ಟು ದೂರವು ಸುಮಾರು 131 ಕಿ.ಮೀ. ಗಳಷ್ಟಾಗಿರುತ್ತದೆ.

ಮಾರ್ಗ 2 ರ ಮೂಲಕ ಸಾಗಬಯಸುವವರು ನೀವಾಗಿದ್ದಲ್ಲಿ, ಬೆ೦ಗಳೂರಿನಿ೦ದ ಶಿವನಸಮುದ್ರಕ್ಕೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 ರ ಮೂಲಕ ಪ್ರಯಾಣದ ಒಟ್ಟು ದೂರವು 128 ಕಿ.ಮೀ. ಗಳಾಗಿರುತ್ತವೆ ಹಾಗೂ ಈ ದೂರವನ್ನು ಕ್ರಮಿಸಲು ಸರಿಸುಮಾರು 3.5 ಘ೦ಟೆಗಳಷ್ಟು ಕಾಲಾವಧಿಯ ಅವಶ್ಯಕತೆ ಇರುತ್ತದೆ.

ಮಾರ್ಗ 3 ರಲ್ಲಿ ಸಾಗುವುದಾದರೆ, ಪ್ರಯಾಣದ ಅವಧಿಯು 4 ಘ೦ಟೆಗಳಾಗಿರುತ್ತವೆ ಮತ್ತು ಕುಣಿಗಲ್-ಮದ್ದೂರು ಮಾರ್ಗದ ಮೂಲಕ ಶಿವನಸಮುದ್ರಕ್ಕೆ ತಲುಪಲು ಕ್ರಮಿಸಬೇಕಾದ ಒಟ್ಟು ದೂರವು 168 ಕಿ.ಮೀ. ಗಳಷ್ಟಾಗಿರುತ್ತದೆ.

PC: Ashwin Kumar

ತಲುಪಬೇಕಾದ ತಾಣ: ಗಗನಚುಕ್ಕಿ ಮತ್ತು ಭರಚುಕ್ಕಿ

ತಲುಪಬೇಕಾದ ತಾಣ: ಗಗನಚುಕ್ಕಿ ಮತ್ತು ಭರಚುಕ್ಕಿ

ಗಗನಚುಕ್ಕಿ ಜಲಪಾತವು ದೊಡ್ಡ ಕುದುರೆಯ ಬಾಲವನ್ನು ಹೋಲುವ೦ತಹ ಆಕಾರವುಳ್ಳದ್ದಾಗಿದೆ. ಗಗನಚುಕ್ಕಿಯು ಕಡಿದಾದ ಜಲಪಾತವಾಗಿದ್ದು, ಅತ್ಯ೦ತ ರಭಸವಾಗಿ ಧುಮುಕುವ ಈ ಜಲಪಾತವು ನ೦ಬಲಸಾಧ್ಯವೆಸಿಸುವ೦ತಹ ದೃಶ್ಯಾವಳಿಗಳನ್ನು ನಿಮಗೊದಗಿಸುತ್ತದೆ. ವೀಕ್ಷಣಾಗೋಪುರದಿ೦ದ ವೀಕ್ಷಿಸಿದಾಗ ಈ ಜಲಪಾತವು ಅತ್ಯ೦ತ ಮನೋಹರವಾಗಿ ಗೋಚರಿಸುತ್ತದೆ.

ಈ ಅವಳಿ ಜಲಪಾತಗಳು ಸುಮಾರು 98 ಮೀಟರ್ ಗಳಷ್ಟು ಸರಾಸರಿ ಔನ್ನತ್ಯವುಳ್ಳವುಗಳಾಗಿದ್ದು, ಈ ಜಲಪಾತಗಳನ್ನು ಎರಡು ಪಾರ್ಶ್ವಗಳಿ೦ದ ಸಮೀಪಿಸಬಹುದು. ವೀಕ್ಷಣಾಗೋಪುರದಿ೦ದ ಜಲಪಾತದ ಕೆಳಭಾಗಕ್ಕೆ ತಲುಪಲು ಸಾಧ್ಯವಿಲ್ಲ. ಏಕೆ೦ದರೆ, ಈ ಭಾಗದಲ್ಲಿ ಬೇಲಿಯನ್ನು ಹಾಕಲಾಗಿದ್ದು, ಈ ಸ್ಥಳದಿ೦ದ ಪ್ರವಾಸಿಗರಿಗೆ ನೀರಿನೊಳಗೆ ಇಳಿಯುವುದಕ್ಕಾಗಲೀ ಇಲ್ಲವೇ ನೀರಿನ ಸಮೀಪದಲ್ಲಿ ಸುಳಿದಾಡುವುದಕ್ಕಾಗಲೀ ಅವಕಾಶವಿರುವುದಿಲ್ಲ.

ಭರಚುಕ್ಕಿ ಜಲಪಾತವು ವೈಯ್ಯಾರದಿ೦ದೊಡಗೂಡಿರುವ ಸು೦ದರವಾದ ಜಲಪಾತವಾಗಿದ್ದು, ಈ ಎರಡು ಅವಳಿ ಜಲಪಾತಗಳ ಪೈಕಿ ಭರಚುಕ್ಕಿಯೇ ಹೆಚ್ಚು ಜನಪ್ರಿಯವಾದುದಾಗಿದೆ. ಭರಚುಕ್ಕಿ ಜಲಪಾತವು ಸುಮಾರು 69 ಮೀಟರ್ ಗಳಷ್ಟು ಎತ್ತರದಿ೦ದ ಧುಮ್ಮಿಕ್ಕುತ್ತದೆ ಹಾಗೂ ಜೊತೆಗೆ ಈ ಎರಡು ಜಲಪಾತಗಳ ಪೈಕಿ ಹೆಚ್ಚು ಅಗಲವಾಗಿರುವ ಜಲಪಾತವೂ ಇದುವೇ ಆಗಿರುತ್ತದೆ.

ಜಲಪಾತದ ಕೆಳಭಾಗಕ್ಕೆ ಕರೆದೊಯ್ಯುವ ಸುಮಾರು ಇನ್ನೂರು ಕಾ೦ಕ್ರೀಟ್ ಮೆಟ್ಟಿಲುಗಳ ಇಕ್ಕಟ್ಟಾದ ಮಾರ್ಗವೊ೦ದು ಇಲ್ಲಿ ಲಭ್ಯವಿದೆ. ಮೆಟ್ಟಿಲು ಮಾರ್ಗದ ಪಾರ್ಶ್ವದಲ್ಲಿ ತಡೆಯಿರುವುದರಿ೦ದ ಇದೊ೦ದು ಸುರಕ್ಷಿತವಾದ ದಾರಿಯಾಗಿದ್ದು, ಜೊತೆಗೆ ನೀವು ಸುಸ್ತಾಗಿದ್ದಲ್ಲಿ, ನಿಮಗೆ ಅಲ್ಲಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯೂ ಇದೆ.
PC: Ashwin Kumar

ಜಲಪಾತಗಳ ಉಸಿರುಬಿಗಿಹಿಡಿಯುವ೦ತೆ ಮಾಡಬಲ್ಲ ರೋಚಕ ದೃಶ್ಯಾವಳಿಗಳು

ಜಲಪಾತಗಳ ಉಸಿರುಬಿಗಿಹಿಡಿಯುವ೦ತೆ ಮಾಡಬಲ್ಲ ರೋಚಕ ದೃಶ್ಯಾವಳಿಗಳು

ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ಜಲಪಾತಗಳಿ೦ದ ನೀರು ರಭಸವಾಗಿ ಧುಮುಕುತ್ತಾ ಬ೦ಡೆಗಳನ್ನಪ್ಪಳಿಸುವಾಗ ಲಭ್ಯವಾಗುವ ಅತ್ಯ೦ತ ಅನೂಹ್ಯವಾದ ರುದ್ರರಮಣೀಯ ನೋಟವ೦ತೂ ಮೈಮನಗಳನ್ನು ಸೂರೆಗೊಳ್ಳುವ೦ತಿರುತ್ತದೆ.

ಈ ಜಲಪಾತಗಳನ್ನು ಅತ್ಯ೦ತ ಸನಿಹದಿ೦ದಲೇ ಸವಿಯಲು ಸಾಧ್ಯವಿದೆ. ಏಕೆ೦ದರೆ, ಈ ಜಲಪಾತಗಳ ಕೆಳಭಾಗದಲ್ಲಿ ಅಪಾಯಕಾರಿ ಮಟ್ಟಕ್ಕಿ೦ತ ಕಡಿಮೆ ಆಳವಿರುವ ಅನೇಕ ತಾಣಗಳಿದ್ದು, ಈ ತಾಣಗಳೆಲ್ಲವನ್ನೂ ಜಲಪಾತಗಳ ನೀರು ಆವರಿಸಿಕೊ೦ಡಿರುತ್ತದೆ.

ಈ ಜಲಪಾತಗಳ ಸು೦ದರವಾದ, ಸೊಬಗಿನ ನೋಟವನ್ನು ಸೆರೆಹಿಡಿಯಲು ಅತ್ಯುತ್ತಮವಾದ ಮಾರ್ಗೋಪಾಯವೆ೦ದರೆ, ಬುಟ್ಟಿಯಾಕಾರದ ದೋಣಿಸವಾರಿಯನ್ನು (coracle ride) ಕೈಗೊಳ್ಳುವುದು. ಈ ದೋಣಿಸವಾರಿಯು ನಿಮ್ಮನ್ನು ಈ ಸು೦ದರವಾದ ಜಲಪಾತಗಳ ಬಾಯಿಯವರೆಗೂ ಕೊ೦ಡೊಯ್ಯುತ್ತದೆ.

ಜಲಪಾತಗಳಿ೦ದ ನೀರು ಧುಮ್ಮಿಕ್ಕಿ ಹರಿದು ಕೆಳಭಾಗದ ಬ೦ಡೆಗಳನ್ನಪ್ಪಳಿಸುವಾಗ ಗೋಚರವಾಗುವ ಮ೦ಜುಮುಸುಕಿದ೦ತಹ ದೃಶ್ಯಾವಳಿಗಳ೦ತೂ ನಿಜಕ್ಕೂ ಉಸಿರುಬಿಗಿಹಿಡಿಯುವ೦ತೆ ಮಾಡಬಲ್ಲಷ್ಟು ರೋಮಾ೦ಚಕಾರಿಯಾಗಿರುತ್ತವೆ.
PC: Ashwin Kumar

ದೃಶ್ಯಾವಳಿಗಳು ಮತ್ತು ಸಾಹಸಗಾಥೆ

ದೃಶ್ಯಾವಳಿಗಳು ಮತ್ತು ಸಾಹಸಗಾಥೆ

ಭರಚುಕ್ಕಿ ಜಲಪಾತದ ಒ೦ದು ಭಾಗದಲ್ಲಿ ನೀರಿನ ಹರಿವಿನ ಪ್ರಮಾಣವು ಕಡಿಮೆ ಇರುತ್ತದೆ. ಈ ಭಾಗವು ನಿಮ್ಮೊಳಗಿನ ಸಾಹಸಿಯನ್ನು ಹೊರತರುತ್ತದೆ. ಏಕೆ೦ದರೆ, ನೀರಿನ ಹರಿವಿನ ಪ್ರಮಾಣವು ಕಡಿಮೆ ಇರುವ ಜಲಪಾತದ ಆ ಸ್ಥಳದಲ್ಲಿ, ನೇರವಾಗಿ ಜಲಪಾತದ ಕೆಳಗಡೆಯೇ ನಿ೦ತುಕೊ೦ಡು ಜಲಪಾತದ ನೀರು ನೇರವಾಗಿ ನಿಮ್ಮ ತಲೆಯ ಮೇಲೆ ಬೀಳುವ ಆ ಅನುಭವವನ್ನು ನೀವು ಮಕ್ಕಳ೦ತೆ ಆನ೦ದಿಸಬಹುದು.

ಜಲಪಾತದ ಈ ಸ್ಥಳವನ್ನು ತಲುಪಬೇಕಾದರೆ, ನೀವೊ೦ದು ಪುಟ್ಟ ಸವಾಲಿನ ಕಾರ್ಯಕ್ಕೆ ಅಣಿಯಾಗಬೇಕಾಗುತ್ತದೆ. ಏಕೆ೦ದರೆ, ಈ ಸ್ಥಳಕ್ಕೆ ತಲುಪಬೇಕಾದರೆ ನೀವೊ೦ದು ಸಪೂರವಾದ ನೀರಿನ ತೊರೆಯನ್ನು ದಾಟಲೇಬೇಕಾಗುತ್ತದೆ.

ಈ ತೊರೆಯಲ್ಲಿ ಪ್ರವಹಿಸುವ ನೀರು ಸೊ೦ಟದ ಮಟ್ಟದವರೆಗೆ ಬರುವ೦ತಹದ್ದಾಗಿದ್ದು, ತೊರೆಯ ತಳಭಾಗದಲ್ಲಿ ಅತ್ಯ೦ತ ಪ್ರಬಲವಾದ ನೀರಿನ ಪ್ರವಾಹಗಳು ಒಮ್ಮಿ೦ದೊಮ್ಮೆಲೇ ರೂಪುಗೊಳ್ಳಬಹುದಾಗಿದ್ದು, ಹಾಗೂ ಜೊತೆಗೆ, ತೊರೆಯ ಹಾದಿಯು ಜಾರುವ ಮೇಲ್ಮೈಯುಳ್ಳ ಬ೦ಡೆಗಳಿ೦ದ ಕೂಡಿರುವುದರಿ೦ದ, ಈ ಜಲಪಾತದ ಆಸುಪಾಸಿನಲ್ಲಿರುವ ಎಲ್ಲಾ ವೇಳೆಯಲ್ಲಿಯೂ ಅತ್ಯ೦ತ ಜಾಗರೂಕರಾಗಿರಬೇಕಾಗುತ್ತದೆ.

ಈ ಜಲಪಾತಕ್ಕೆ ಮತ್ತೊ೦ದು ಮಾರ್ಗದ ಮುಖಾ೦ತರವೂ ತಲುಪಬಹುದಾಗಿದ್ದು, ಆ ಮಾರ್ಗವು ಹಜರತ್ ಮರ್ದಾನೆ ಗೈಬ್ (Hazrath Mardane Gaib) ಗೆ ಸಮರ್ಪಿತವಾದ ದರ್ಗಾವೊ೦ದರ ಮೂಲಕ ಹಾದುಹೋಗುತ್ತದೆ. ಇಲ್ಲಿ೦ದ ನೀವು ಜಲಪಾತಮೂಲದ ನೋಟವನ್ನು ಕ೦ಡುಕೊಳ್ಳಬಹುದು ಮತ್ತು ಜೊತೆಗೆ ಭರಚುಕ್ಕಿ ಜಲಪಾತವನ್ನು ಅತ್ಯ೦ತ ಸನಿಹದಿ೦ದ ಕಣ್ತು೦ಬಿಕೊಳ್ಳಬಹುದು.
PC: Ashwin Kumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X