Search
  • Follow NativePlanet
Share
» »ಭೋಗಾಪುರೇಶ ಹಣುಮಂತನ ಮಹಿಮೆ ಅಪಾರ!

ಭೋಗಾಪುರೇಶ ಹಣುಮಂತನ ಮಹಿಮೆ ಅಪಾರ!

ಆಂಜನೇಯನ ಜಾಗೃತ ಹಾಗೂ ಶಕ್ತಿಶಾಲಿ ಕ್ಷೇತ್ರಗಳ ಪೈಕಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿಯಲ್ಲಿರುವ ಭೋಗಾಪುರೇಶ ಆಂಜನೇಯನ ದೇವಾಲಯವೂ ಒಂದಾಗಿದೆ

By Vijay

ಮುಖ್ಯ ಪ್ರಾಣ ದೇವರು, ಶಿವನ ಅವತಾರ ಎಂತಲೂ ನಂಬಲಾಗುವ, ರಾಮಾಯಣ ಹಾಗೂ ಮಹಾಭಾರತದಲ್ಲೂ ತನ್ನ ಪ್ರಭಾವ ಬೀರಿರುವ ವಾಯುಪುತ್ರ, ಶಕ್ತಿ ಸಾಮರ್ಥ್ಯಗಳ ಅಧಿ ದೇವತೆ, ಭೂತ-ಪಿಶಾಚಿಗಳೂ ಸಹ ಇವನ ಹೆಸರನ್ನು ಕೇಳಿದ ಮರು ಕ್ಷಣವೆ ಓಡಿ ಹೋಗುವ, ರಾಮನ ಬಂಟ, ಪ್ರಚಂಡ ಭಕ್ತ ಆಂಜನೇಯ ಅರ್ಥಾತ್ ಹನುಮನ ಮಹಿಮೆ ಅಪಾರ.

ಭಯ ನಿವಾರಕ, ಧೈರ್ಯ ವಿತರಕನಾದ ಆಂಜನೇಯನಿಗೆ ಮುಡಿಪಾದ ಸಾವಿರ ಸಾವಿರ ಸಂಖ್ಯೆಯಲ್ಲಿ ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದಾಗಿದೆ. ಅಂತೆಯೆ ಕೋಟಿ ಕೋಟಿ ಸಂಖ್ಯೆಯಲ್ಲಿ ಹಿಂದುಗಳು ಹನುಮನ ಅನುಯಾಯಿಗಳಾಗಿದ್ದಾರೆ. ಹಲವು ಸ್ಥಳಗಳಲ್ಲಿ ಹನುಮನು ವಿವಿಧ ರೂಪಗಳಲ್ಲಿ, ವಿವಿಧ ಹಿನ್ನೆಲೆಯಲ್ಲಿ ನೆಲೆಸಿದ್ದು ಭಕ್ತರ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಿದ್ದಾನೆ.

ಶ್ರೀಕ್ಷೇತ್ರ ಕಲ್ಲೂರು ಮಹಾಲಕ್ಷ್ಮಿ ದರ್ಶನ

ಅದೆಷ್ಟೊ ಸ್ಥಳಗಳು ಹನುಮನ ಉಪಸ್ಥಿತಿಯಿಂದಾಗಿ ಶಕ್ತಿಶಾಲಿ ಅಥವಾ ಜಾಗೃತ ಕ್ಷೇತ್ರಗಳಾಗಿ ಎಲ್ಲೆಡೆಯಿಂದ ಹನುಮನ ಭಕ್ತರನ್ನು ಆಕರ್ಷಿಸುತ್ತವೆ. ಆ ಕ್ಷೇತ್ರಗಳ ಮಹಿಮೆಯೆ ಹಾಗೆ. ಅಲ್ಲಿ ಬರುವ ಭಕ್ತಾದಿಗಳನ್ನು ಆಂಜನೇಯನು ಖಂಡಿತವಾಗಿಯೂ ಕೈಬಿಡುವುದಿಲ್ಲವೆಂಬ ನಂಬಿಕೆ ರಕ್ತಗತವಾಗಿ ಮೂಡಿ ಬಂದಿದೆ.

ಅಂತಹ ಕೆಲವು ಪ್ರಭಾವಶಾಲಿ ಕ್ಷೇತ್ರಗಳನ್ನು ಅರಸಿ ಹೋದಾಗ ಕರ್ನಾಟಕದಲ್ಲಿ ಕಂಡುಬರುವ ಒಂದು ಅದ್ಭುತ ಕ್ಷೇತ್ರವೆ ಭೋಗಾಪುರೇಶ ಹಣುಮಂತನ ಸನ್ನಿಧಿ. ಅತ್ಯಂತ ಶಕ್ತಿಶಾಲಿ ಹಾಗೂ ಹನುಮನ ಬಲು ಜಾಗೃತ ದೇವಾಲಯ ಇದಾಗಿದೆ ಎಂದು ಇಲ್ಲಿಗೆ ಭೇಟಿ ನೀಡುವ ಭಕ್ತರ ಬಲವಾದ ನಂಬಿಕೆ. ಅದರಂತೆ ಇಲ್ಲಿ ಬಂದು ಶೀಘ್ರದಲ್ಲೆ ಒಳಿತು ಕಂಡವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಬನ್ನಿ ಪ್ರಸ್ತುತ ಲೇಖನದ ಮೂಲಕ ಭೋಗಾಪುರೇಶ ಹಣುಮಂತನ ಕುರಿತು ಸಮಗ್ರ ಮಾಹಿತಿ ತಿಳಿಯಿರಿ. ನೀವು ಆಂಜನೇಯನ ಭಕ್ತರಾಗಿದ್ದಲ್ಲಿ ಒಂದೊಮ್ಮೆಯಾದರೂ ಈ ಕ್ಷೇತ್ರಕ್ಕೆ ಪ್ರವಾಸ ಮಾಡಿ ಅವನ ಸತ್ಕೃಪೆಗೆ ಪಾತ್ರರಾಗಿ.

ದೇವಾಲಯ ಪರಿಚಯಿಸಿದವರು ನಮ್ಮ ಓದುಗರಾದ : ಶಾಲಿನಿ ಕುಲಕರ್ಣಿ

ದೇವಾಲಯದ ಮಾಹಿತಿಗೆ ಹಾಗೂ ಲೇಖನದಲ್ಲಿ ಬಳಸಲಾದ ಚಿತ್ರಗಳಿಗೆ ಕೃಪೆ: bhogapuresha.org

ಏಕೆ ಪ್ರಮುಖ?

ಏಕೆ ಪ್ರಮುಖ?

ಕ್ಷೇತ್ರದ ಪರಿಚಯಕ್ಕಿಂತ ಮುಂಚೆ, ಆಂಜನೇಯ ಏಕೆ ಪ್ರಸಿದ್ಧ ದೇವ ಎಂಬುದರ ಕುರಿತು ಚುಟುಕಾಗಿ ತಿಳಿಯುವುದು ಉತ್ತಮ. ಕೆಲವು ಧಾರ್ಮಿಕ ಗ್ರಂಥಗಳಲ್ಲಿ ಆಂಜನೆಯನು ಸ್ವತಃ ಶಿವನ ಅವತಾರ ಎಂದು ಹೇಳಲಾಗಿದೆ. ಸನಾತನ ಧರ್ಮದ ಪ್ರಕಾರ ದೇವರಿಗಿಂತಲೂ ಅತಿ ದೊಡ್ಡ ಶಕ್ತಿ ಭಕ್ತಿ ಹಾಗೂ ನಂಬಿಕೆಗಳೆಂದು ವಿವರಿಸಲಾಗಿದೆ. ಇದರ ಪ್ರತೀಕನಾಗಿರುವವನೆ ಆಂಜನೇಯನು.

ಚಿತ್ರಕೃಪೆ: Ekadashmukhihanumanji

ಕಾಟವಿಲ್ಲ!

ಕಾಟವಿಲ್ಲ!

ಒಂದು ದಂತಕಥೆಯ ಪ್ರಕಾರ, ಶನಿ ದೇವರನ್ನು ರಾವಣನು ಒಮ್ಮೆ ಬಂಧಿಸಿದ್ದ. ಅವನ ಕಪಿಮುಷ್ಟಿಯಿಂದ ಶನಿ ದೇವರನ್ನು ಕಾಪಾಡಿದ್ದು ಆಂಜನೇಯನೆ. ಇದಕ್ಕೆ ಪ್ರತಿಯಾಗಿ ಶನಿಯು ತನ್ನ ಪ್ರಭಾವ ಎಂದಿಗೂ ಹನುಮನಿಗೆ ಬಾಧಿಸುವುದಿಲ್ಲವೆಂದೂ ಅಲ್ಲದೆ ಹನುಮನನ್ನು ಪೂಜಿಸುವವರಿಗೆ ತನ್ನ ಪ್ರಭಾವ ಅಷ್ಟೊಂದು ಕೆಡುಕು ಮಾಡುವುದಿಲ್ಲವೆಂತಲೂ ಮಾತು ನೀಡಿದ್ದಾನೆ.

ಚಿತ್ರಕೃಪೆ: Naidu.gopal

ಜಾಗೃತ ದೇವರು

ಜಾಗೃತ ದೇವರು

ಇನ್ನೂ ಭೋಗಾಪುರೇಶ ಹಣುಮಂತನ ಕುರಿತು ತಿಳಿಯಿರಿ. ಭೋಗಾಪುರೇಶ ಹನುಮನ ದೇವಾಲಯವು ಸಾಕಷ್ಟು ಪುರಾತನವಾದ ದೇವಾಲಯವಾಗಿದೆ. ಇಲ್ಲಿ ಹನುಮನ ವಿಗ್ರಹವನ್ನು ಪ್ರತಿಷ್ಠಾಪಿಸಿದವರು ಜನಮೇಜಯ ರಾಜನು. ಮಹಾಭಾರತದ ಕುರುವಂಶದ ಅರಸನಾಗಿ ಸಾಕಷ್ಟು ಪ್ರಸಿದ್ಧಿಗಳಿಸಿರುವ ಜನಮೇಜಯನು ಪಾಂಡವ ಅರ್ಜುನನ ಮೊಮ್ಮಗನಾದ ಪರೀಕ್ಷಿತ ರಾಜನ ಮಗ.

ಜನಮೇಜಯ ರಾಜ

ಜನಮೇಜಯ ರಾಜ

ಜನಮೇಜಯನು 4,500 ವರ್ಷಗಳ ಹಿಂದೆ ಭೋಗಾಪುರೇಶ ಆಂಜನೇಯನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದನೆಂಬ ಪ್ರತೀತಿಯಿದೆ. ಹಾಗಾಗಿ ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯಿರುವ ದೇವಾಲಯ ಕ್ಷೇತ್ರ ಇದಾಗಿದೆ.

ಬರಿಗೈನಲ್ಲಿ ಮರಳುವುದಿಲ್ಲ

ಬರಿಗೈನಲ್ಲಿ ಮರಳುವುದಿಲ್ಲ

ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾರೆ ಆಗಲಿ ಇಲ್ಲಿಗೆ ಭೇಟಿ ನೀಡಿ ಶೃದ್ಧೆ-ಭಕ್ತಿಗಳಿಂದ ಸ್ವಾಮಿಗೆ ತಮ್ಮ ಸೇವೆ ಸಲ್ಲಿಸುತ್ತಾರೊ ಅವರು ಎಂದಿಗೂ ಬರಿಗೈನಿಂದ ಮರಳಲಾರರು ಎಂದು ಹೇಳಲಾಗುತ್ತದೆ. ಅಷ್ಟೊಂದು ಜಾಗೃತವಾಗಿದೆಯಂತೆ ಈ ಹನುಮ ಕ್ಷೇತ್ರ.

ಭಿನ್ನ ವಿಗ್ರಹ

ಭಿನ್ನ ವಿಗ್ರಹ

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಎಲ್ಲಕ್ಕಿಂತ ಅತೀವವಾಗಿ ಕುತೂಹಲ ಕೆರಳಿಸುವ ವಿಷಯವೆಂದರೆ ಇಲ್ಲಿ ಪ್ರತಿಷ್ಠಾಪಿತವಾಗಿರುವ ಆಂಜನೇಯನ ಭಿನ್ನ ವಿಗ್ರಹ. ಅಂದರೆ ಸೀಳಿರುವ ವಿಗ್ರಹ. ಹಿಂದುಗಳಲ್ಲಿ ಸೀಳಿರುವ, ಕುರೂಪಗೊಂಡಿರುವ ವಿಗ್ರಹಗಳನ್ನು ಆರಾಧಿಸುವ ಹಾಗಿಲ್ಲ.

ಏನದರ ಹಿನ್ನೆಲೆ

ಏನದರ ಹಿನ್ನೆಲೆ

ಆದಾಗ್ಯೂ ಇಲ್ಲಿ ಸೀಳಿರುವ ಹನುಮನ ವಿಗ್ರಹವನ್ನು ಪೂಜಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕುತೂಹಲಕರ ಕಥೆಯೂ ಇದೆ. ಅದರ ಪ್ರಕಾರವಾಗಿ, 1822 ರ ಸಂದರ್ಭದಲ್ಲಿ ಕೆಲವು ಕಳ್ಳರು ಭೋಗಾಪುರೇಶ ದೇವಾಲಯವು ವಿಜಯನಗರದ ಕೃಷ್ಣದೇವರಾಯರಿಂದ ಹಿಂದೆ ಸಾಕಷ್ಟು ನವೀಕರಣಗೊಂಡಿದ್ದರಿಂದ ಇಲ್ಲಿ ಅಪಾರವಾದ ನಿಧಿ ಅಡಗಿರಬಹುದೆಂದು ಊಹಿಸಿದ್ದರು.

ಏನೂ ಇಲ್ಲ

ಏನೂ ಇಲ್ಲ

ಅದರಂತೆ ಅವರಿಗೆ ಮೂಲ ವಿಗ್ರಹದ ಒಳಗೆ ಸಂಪತ್ತನ್ನಿರಿಸಲಾಗಿದೆ ಎಂಬ ಅನುಮಾನವಿತ್ತು. ಆ ಕಾರಣವಾಗಿ ಅವರು ಸಂದರ್ಭವೊಂದನ್ನು ಬಳಸಿಕೊಂಡು ದೇವಾಲಯ ಪ್ರವೇಶಿಸಿ ಹನುಮನ ವಿಗ್ರವನ್ನು ತುಂಡು ತುಂಡು ಮಾಡಿ ನೋಡಿದರು. ಆದರೆ ಯಾವ ಸಂಪತ್ತು ಅವರಿಗೆ ಲಭಿಸಲಿಲ್ಲ.

ಹಿಂಭಾಗದ ಕೆರೆ

ಹಿಂಭಾಗದ ಕೆರೆ

ಬೇಸರದಿಂದ ಕೋಪಿಸಿಕೊಂಡ ಅವರು ಆ ದೇವಾಲಯದ ಹಿಂಭಾಗದಲ್ಲಿದ್ದ ಕೆರೆಯಲ್ಲಿ (ಇಂದು ಆ ಕೆರೆ ಕಂಡುಬರುವುದಿಲ್ಲ) ಆ ವಿಗ್ರಹದ ತುಂಡುಗಳನ್ನು ಎಸೆದು ಹೋದರು. ಇದೆ ಸಂದರ್ಭದಲ್ಲಿ ದೇವಾಲಯದ ಅರ್ಚಕರಿಗೆ ಕನಸಿನಲ್ಲಿ ಭೋಗಾಪುರೇಶ ಹನುಮನು ದರ್ಶನ ನೀಡಿ ಸೂಚನೆಯೊಂದನ್ನು ನೀಡಿದ.

ಏನು ಹೇಳಿದ?

ಏನು ಹೇಳಿದ?

ಹನುಮನು ಹೇಳಿದಂತೆ ಅರ್ಚಕನು ಕೆರೆಗೆ ಭೇಟಿ ನೀಡಿ ಅಲ್ಲಿ ಬಿದ್ದಿರುವ ವಿಗ್ರಹದ ತುಂಡುಗಳನ್ನು ಸಂಗ್ರಹಿಸಿ ಅದನ್ನು ಮತ್ತೆ ಪೂರ್ಣ ರೂಪದಲ್ಲಿ ತುಪ್ಪ ಹಾಗೂ ಜೇನನ್ನು ಬಳಸಿಕೊಂಡು ಜೋಡಿಸಿ ದೇವಾಲಯದಲ್ಲಿ ಮತ್ತೆ ಪ್ರತಿಷ್ಠಾಪಿಸ ಬೇಕಾಗಿತ್ತು.

ಪಾಲಿಸಬೆಕಾಗಿತ್ತು

ಪಾಲಿಸಬೆಕಾಗಿತ್ತು

ಹೀಗೆ ಒಂದೊಮ್ಮೆ ಮೂರ್ತಿಯನ್ನು ಜೋಡಿಸಿ ದೇವಾಲಯದಲ್ಲಿರಿಸಿದ ನಂತರ ಹನ್ನೊಂದು ದಿನಗಳ ಕಾಲ ದೇವಾಲಯದ ಬಾಗಿಲು ಮುಚ್ಚಿ, ಏನೆ ಪೂಜಾ ವಿಧಿ ವಿಧಾನಗಳಿದ್ದರೂ ಹೊರಗಿನಿಂದಲೇ ನೆರವೇರಿಸಿ ಹನ್ನೊಂದು ದಿನಗಳ ಬಳಿಕ ಮತ್ತೆ ಬಾಗಿಲನ್ನು ತೆರೆಯಬೇಕಾಗಿತ್ತು.

ಹಾಗೆಯೆ ಇತ್ತು

ಹಾಗೆಯೆ ಇತ್ತು

ಅದರಂತೆ ಅರ್ಚಕನು ಮರು ದಿನ ಭಕ್ತರ ಸಮೇತ ಆ ಕೆರೆಗೆ ಭೇಟಿ ನೀಡಿದಾಗ ಪವಾಡ ಎಂಬಂತೆ ಆ ವಿಗ್ರಹದ ತುಂಡುಗಳು ನೀರಿನಲ್ಲಿ ತೇಲುತ್ತಿದ್ದವು! ಬಳಿಕ ಎಲ್ಲ ತುಂಡುಗಳನ್ನು ತೆಗೆದುಕೊಂಡು ಅರ್ಚಕನು ಹನುಮನು ಸೂಚಿಸಿದ ಹಾಗೆ ಮಾಡಿ ದೇವಾಲಯದ ಬಾಗಿಲನ್ನು ಮುಚ್ಚಿದನು.

ಭೋಗಾಪುರೇಶನ ದರ್ಶನ

ಭೋಗಾಪುರೇಶನ ದರ್ಶನ

ಹೀಗಿರುವ ಸಂದರ್ಭದಲ್ಲಿ ಪಕ್ಕದ ಗ್ರಾಮದ ಹನುಮನ ಭಕ್ತರೊಬ್ಬರು ಮೂರು ದಿನಗಳಿಂದ ಉಪವಾಸ ಮಾಡಿ ಭೋಗಾಪುರೇಶನ ದರ್ಶನ ಬಯಸಿ ಬಂದಿದ್ದರು. ಆಹಾರ-ನೀರುಗಳಿಲ್ಲದೆ ಅವರ ದೇಹ ಕೃಶವಾಗಿತ್ತು. ಆದರೆ ಅವರು ತಾವು ದರ್ಶನ ಮಾಡಲು ಭೋಗಾಪುರೇಶ ದೇವಾಲಯಕ್ಕೆ ಬಂದಿದ್ದಾಗ ಅಂದಿಗೆ ಅರ್ಚಕರು ದೇವಾಲಯದ ಬಾಗಿಲು ಮುಚ್ಚು ಹತ್ತು ದಿನಗಳಾಗಿದ್ದವು.

ತೆರೆಯಬೆಕಾಯಿತು

ತೆರೆಯಬೆಕಾಯಿತು

ಆದರೆ ಉಪವಾಸವಿದ್ದ ಭಕ್ತನ ಚಿಂತಾಜನಕ ಸ್ಥಿತಿಯನ್ನು ನೋಡಲಾಗದೆ ಅರ್ಚಕ ಹಾಗೂ ನೆರೆದವರು ಹತ್ತನೇಯ ದಿನಕ್ಕೆಯೆ ದೇವಾಲಯದ ಬಾಗಿಲು ತೆರದರು. ಆವಾಗ ಕಂಡುಬಂದ ದೃಶ್ಯವೆಂದರೆ ತುಂಡು ತುಂಡುಗಳನ್ನು ಜೋಡಿಸಿ ನಿಲ್ಲಿಸಲಾಗಿದ್ದ ವಿಗ್ರಹವು ಏನೂ ಆಗೆ ಇಲ್ಲ ಎಂಬಂತೆ ಕೂಡಿಕೊಂಡಿತ್ತು ಆದರೆ ಇನ್ನೊಂದು ದಿನ ಬಾಕಿ ಇದ್ದಿದುದರಿಂದ ಒಂದೆ ಒಂದು ಸೀಳು ಮಾತ್ರ ಉಳಿದುಕೊಂಡಿತ್ತು.

ಆದರೂ ಉಪಸ್ಥಿತನಿದ್ದಾನೆ

ಆದರೂ ಉಪಸ್ಥಿತನಿದ್ದಾನೆ

ಇದರಿಂದ ಎಲ್ಲರಿಗೂ ಬೇಸರವಾಯಿತಾದರೂ ಹನುಮನ ಕೃಪೆಯಿಂದ ಆ ಸೀಳಿದ ವಿಗ್ರಹವೆ ತನ್ನ ಸನ್ನಿಧಿಯಾಗಿರುವುದರಿಂದ ತಾನು ಸದಾ ಅಲ್ಲಿ ನೆಲೆಸಿರುತ್ತೇನೆ ಎಂಬ ಅಭಯವು ಎಲ್ಲರಿಗೆ ದೊರಕಿತು. ಅಂದಿನಿಂದ ಇದೊಂದು ಹನುಮನ ಭಿನ್ನ ವಿಗ್ರಹವಾಗಿ ಬಲು ಅಪರೂಪವಾಗಿದೆ. ಅಲ್ಲದೆ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹಿಂದೆ ಹಲವಾರು ಪಂಡಿತರು, ಮಾಹಾಪುರುಷರು ಹನುಮನ ಸಾಕ್ಷಾತ್ ಪವಾಡಗಳನ್ನು ಕಂಡಿದ್ದಾರೆ.

ಭೇಟಿ ನೀಡಿದ್ದಾರೆ

ಭೇಟಿ ನೀಡಿದ್ದಾರೆ

ಸಾಕಷ್ಟು ಜನ ಪೀಠಾಧಿಪತಿಗಳು, ದಾಸರು, ದಾರ್ಶನಿಕರು, ಸಾಧು ಸಂತರು ಈ ದೇವಾಲಯಕ್ಕೆ ಭೇಟಿ ನೀಡಿರುವ ಕುರಿತು ಪ್ರತೀತಿಯಿದೆ. ಹಾಗಾಗಿ ಸಾಕಷ್ಟು ಧಾರ್ಮಿಕ ಮಹತ್ವವುಳ್ಳ ಪ್ರಭಾವಿ ಕ್ಷೇತ್ರವಾಗಿ ಭೋಗಾಪುರೇಶ ದೇವಾಲಯ ಭಕ್ತಾದಿಗಳ ಗಮನಸೆಳೆಯುತ್ತದೆ.

ತಲುಪುವ ಬಗೆ

ತಲುಪುವ ಬಗೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ ಎಂಬ ಊರಿನಲ್ಲಿ ಈ ಶಕ್ತಿಶಾಲಿ ಭೋಗಾಪುರೇಶ ದೇವಾಲಯವಿದೆ. ಬೆಂಗಳೂರಿನಿಂದ ನವಲಿ ಸುಮಾರು 400 ಕಿ.ಮೀ ಗಳಷ್ಟು ದೂರದಲ್ಲಿದೆ. ಕರ್ನಾಟಕದ ವಿವಿಧ ಮೂಲೆಗಳಿಂದ ಬರುವವರು ಮೊದಲು ಗಂಗಾವತಿಗೆ ತಲುಪುವುದು ಉತ್ತಮ. ಬೆಂಗಳೂರಿನಿಂದ ಗಂಗಾವತಿಗೆ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ದೊರೆಯುತ್ತವೆ.

ಕಾರಟಗಿ

ಕಾರಟಗಿ

ಗಂಗಾವತಿಯಿಂದ ನವಲಿಯು 40 ಕಿ.ಮೀ ಗಳಷ್ಟು ದೂರವಿದ್ದು ಹೇಳಿಕೊಳ್ಳುವಷ್ಟು ಬಸ್ಸುಗಳ ಸೇವೆಯಿಲ್ಲ. ಹಾಗಾಗಿ ಕಾರಟಗಿಗೆ ತಲುಪಿ ಅಲ್ಲಿಂದ ನವಲಿಯನ್ನು ತಲುಪಬಹುದಾಗಿದೆ. ಗಂಗಾವತಿಯಿಂದ ಕಾರಟಗಿಗೆ ಬಸ್ಸುಗಳು ದೊರೆಯುತ್ತವೆ ಮತ್ತು ಕಾರಟಗಿಯಿಂದ ನವಲಿವರೆಗೆ ರಿಕ್ಷಾಗಳು, ಬಾಡಿಗೆ ಜೀಪುಗಳು ಹಾಗೂ ಬಸ್ಸುಗಳು ದೊರೆಯುತ್ತವೆ. ನವಲಿಯು ಕಾರಟಗಿಯಿಂದ 17 ಕಿ.ಮೀ ಗಳಷ್ಟು ದೂರದಲ್ಲಿದೆ.

ಹೊಸಪೇಟೆ

ಹೊಸಪೇಟೆ

ರೈಲುಗಳಲ್ಲಿ ಪ್ರಯಾಣಲಿಚ್ಛಿಸುವವರು ಹೊಸಪೇಟೆವರೆಗೆ ರೈಲಿನಲ್ಲಿ ಬಂದು ಅಲ್ಲಿಂದ ಕಾರಟಗಿಗೆ ದೊರಕುವ ಬಸ್ಸುಗಳನ್ನು ಹಿಡಿದು ನವಲಿಗೆ ಹೊರಡಬಹುದು. ಹೊಸಪೇಟೆಯಿಂದ ಬಸ್ಸುಗಳು ಕಾರಟಗಿಗೆ ಗಂಗಾವತಿಯ ಮೇಲಿನಿಂದಲೆ ಹೋಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X