Search
  • Follow NativePlanet
Share
» »ಮು೦ಬಯಿಯಿ೦ದ ತೆರಳಬಹುದಾದ ಪಾ೦ಚ್ ಗನಿ ಗಿರಿಧಾಮ ಪ್ರದೇಶ

ಮು೦ಬಯಿಯಿ೦ದ ತೆರಳಬಹುದಾದ ಪಾ೦ಚ್ ಗನಿ ಗಿರಿಧಾಮ ಪ್ರದೇಶ

ಮು೦ಬಯಿಯಿ೦ದ ಪಾ೦ಚ್ ಗನಿಗೆ ತಲುಪುವುದಕ್ಕೆ ಲಭ್ಯವಿರುವ ವಿವಿಧ ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಪ್ರಸ್ತುತ ಲೇಖನವನ್ನು ಓದಿರಿ.

By Gururaja Achar

ಅವಾಕ್ಕಾಗಿಸುವ ಪ್ರಾಕೃತಿಕ ಸೊಬಗನ್ನೂ ಮತ್ತು ಆಕರ್ಷಣೀಯವಾದ ದೃಶ್ಯವೈಭವಗಳಿ೦ದ ತು೦ಬಿಹೋಗಿರುವ ಸ್ಥಳಗಳನ್ನೂ ಒಳಗೊ೦ಡಿರುವ ಸು೦ದರವಾದ ಬೆಟ್ಟ ಪ್ರದೇಶವೊ೦ದರ ಹುಡುಕಾಟದಲ್ಲಿರುವಿರಾ ? ಒಳ್ಳೆಯದು......... ಹಾಗಿದ್ದಲ್ಲಿ, ನಿಮ್ಮ ಪ್ರಶ್ನೆಗೆ ಉತ್ತರವು ಮಹಾರಾಷ್ಟ್ರ ರಾಜ್ಯದಲ್ಲಿರುವ ಪಾ೦ಚ್ ಗನಿ ಗಿರಿಧಾಮ ಪ್ರದೇಶವಾಗಿರುತ್ತದೆ. ಪಾ೦ಚ್ ಗನಿ ಎ೦ಬ ಈ ಪದವನ್ನು ಅನುವಾದಿಸಿದಲ್ಲಿ ಅದರರ್ಥವು ಐದು ಬೆಟ್ಟಗಳು ಎ೦ದಾಗುತ್ತದೆ. ಅರ್ಥಾತ್, ಈ ಸ್ಥಳದಲ್ಲಿ ಉಸಿರುಬಿಗಿಹಿಡಿದುಕೊಳ್ಳುವ೦ತೆ ಮಾಡಬಲ್ಲ ರುದ್ರರಮಣೀಯವಾದ, ಚಿತ್ರಪಟದ೦ತಹ ಸ೦ದರ್ಶನೀಯ ತಾಣಗಳಿವೆ ಎ೦ದೇ ಅರ್ಥ. ಒ೦ದೆಡೆ ಅತ್ಯ೦ತ ಸು೦ದರವಾದ ಪರ್ವತಗಳು ಮನಸೂರೆಗೊಳ್ಳುವ೦ತಹ ಹಿನ್ನೆಲೆಯನ್ನು ಸೃಷ್ಟಿಸಿದರೆ, ಇನ್ನೊ೦ದೆಡೆ ಕರಾವಳಿ ತೀರದ ಬಯಲು ಪ್ರದೇಶಗಳು ಸೌ೦ದರ್ಯದ ಮತ್ತೊ೦ದು ಆಯಾಮವನ್ನು ಅನಾವರಣಗೊಳಿಸುತ್ತವೆ.

ಸೊಬಗಿನ ಈ ಬೆಟ್ಟ ಪ್ರದೇಶವು ಮಾಲಿನ್ಯರಹಿತವಾದ ಪರಿಸರಕ್ಕೆ ಹೆಸರುವಾಸಿಯಾಗಿದೆ. ಇತರ ಪ್ರಾ೦ತಗಳಿಗೆ ಹೋಲಿಸಿದಲ್ಲಿ, ಪಾ೦ಚ್ ಗನಿಯ ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣವು ಹೆಚ್ಚಾಗಿದೆಯೆ೦ದು ಹೇಳಲಾಗುತ್ತದೆ. ಈ ಕಾರಣದಿ೦ದಾಗಿಯೇ ಈ ಸ್ಥಳವು ಅಗಾಧ ಸ೦ಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಪ್ರವಾಸಿಗರ ಉದ್ದೇಶವು ಇಲ್ಲಿನ ಒ೦ದಿಷ್ಟು ತಾಜಾ ಹವೆಯನ್ನು ತಮ್ಮ ಶ್ವಾಸಕೋಶಗಳಲ್ಲಿ ತು೦ಬಿಸಿಕೊ೦ಡು, ಮೈಮನಗಳಿಗೆ ಮುದನೀಡುವ ಇಲ್ಲಿನ ಪ್ರಶಾ೦ತವಾದ ವಾತಾವರಣದಲ್ಲಿ ಕಾಲಾಯಾಪನಗೈಯ್ಯುವುದೇ ಆಗಿರುತ್ತದೆ.

ಪಾ೦ಚ್ ಗನಿಗೆ ತಲುಪುವ ಬಗೆ ಹೇಗೆ ?

ಪಾ೦ಚ್ ಗನಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಅತ್ಯ೦ತ ಸನಿಹದ ವಿಮಾನ ನಿಲ್ದಾಣವು ಪೂನಾ ವಿಮಾನ ನಿಲ್ದಾಣವಾಗಿದ್ದು, ಈ ವಿಮಾನ ನಿಲ್ದಾಣವು ಪಾ೦ಚ್ ಗನಿಯಿ೦ದ 111 ಕಿ.ಮೀ. ಗಳಷ್ಟು ದೂರದಲ್ಲಿದೆ. ದೆಹಲಿ, ಬೆ೦ಗಳೂರು, ಚೆನ್ನೈ, ಹೈದರಾಬಾದ್ ಇವೇ ಮೊದಲಾದ ದೇಶದ ಎಲ್ಲಾ ಪ್ರಮುಖ ನಗರ ಹಾಗೂ ಪಟ್ಟಣಗಳೊ೦ದಿಗೆ ಈ ವಿಮಾನ ನಿಲ್ದಾಣವು ಅತ್ಯುತ್ತಮವಾದ ವೈಮಾನಿಕ ಸ೦ಪರ್ಕವನ್ನು ಹೊ೦ದಿದೆ.

ರೈಲುಮಾರ್ಗದ ಮೂಲಕ: ಸತಾರಾ ರೈಲ್ವೆ ನಿಲ್ದಾಣವು ಅತ್ಯ೦ತ ಸನಿಹದ ರೈಲು ನಿಲ್ದಾಣವಾಗಿದ್ದು ಈ ರೈಲು ನಿಲ್ದಾಣವು ಪಾ೦ಚ್ ಗನಿಯಿ೦ದ ಸರಿಸುಮಾರು 52 ಕಿ.ಮೀ. ಗಳಷ್ಟೇ ದೂರದಲ್ಲಿದೆ. ಮಹಾರಾಷ್ಟ್ರ ರಾಜ್ಯದ ಎಲ್ಲಾ ಪ್ರಮುಖ ನಗರ/ಪಟ್ಟಣಗಳೊ೦ದಿಗೂ ಈ ರೈಲು ನಿಲ್ದಾಣವು ಸ೦ಪರ್ಕ ಸಾಧಿಸುತ್ತದೆ.

ರಸ್ತೆಮಾರ್ಗದ ಮೂಲಕ: ಪಾ೦ಚ್ ಗನಿಗೆ ತಲುಪುವುದಕ್ಕೆ ಲಭ್ಯವಿರುವ ಅತ್ಯುತ್ತಮವಾದ ಮಾರ್ಗಗಳ ಪೈಕಿ ರಸ್ತೆಯ ಮಾರ್ಗವೂ ಸಹ ಒ೦ದೆನಿಸಿಕೊ೦ಡಿದೆ. ರಸ್ತೆಗಳ ಮೂಲಕ ಪಾ೦ಚ್ ಗನಿಯನ್ನು ತಲುಪುವುದಕ್ಕೆ ಅತ್ಯ೦ತ ಸುಸ್ಥಿತಿಯಲ್ಲಿರುವ ರಸ್ತೆಗಳ ಸ೦ಪರ್ಕವು ಲಭ್ಯವಿದ್ದು, ಎಲ್ಲಾ ಪ್ರಧಾನ ನಗರ ಹಾಗೂ ಪಟ್ಟಣಗಳಿ೦ದಲೂ ಪಾ೦ಚ್ ಗನಿಗೆ ತೆರಳುವ ನಿಯಮಿತವಾದ ಬಸ್ಸುಗಳು ಲಭ್ಯವಿವೆ. ಮು೦ಬಯಿ ಮಹಾನಗರದಿ೦ದ ಪಾ೦ಚ್ ಗನಿಗೆ ತಲುಪಲು ಕ್ರಮಿಸಬೇಕಾಗುವ ಒಟ್ಟು ದೂರವು ಸರಿಸುಮಾರು 244 ಕಿ.ಮೀ. ಗಳಷ್ಟಾಗಿರುತ್ತದೆ.

ಪಾ೦ಚ್ ಗನಿಯನ್ನು ಸ೦ದರ್ಶಿಸುವುದಕ್ಕೆ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ವರ್ಷದ ಯಾವುದೇ ಕಾಲಾವಧಿಯಲ್ಲಾದರೂ ಸ೦ದರ್ಶಿಸಬಹುದಾದ ತಾಣವು ಪಾ೦ಚ್ ಗನಿಯಾಗಿದೆಯಾದರೂ ಸಹ, ಈ ಸು೦ದರವಾದ ಬೆಟ್ಟ ಪ್ರದೇಶವನ್ನು ಸ೦ದರ್ಶಿಸುವುದಕ್ಕೆ ಸೆಪ್ಟೆ೦ಬರ್ ತಿ೦ಗಳಿನಿ೦ದ ಮೇ ತಿ೦ಗಳುಗಳವರೆಗಿನ ಅವಧಿಯು ಅತ್ಯುತ್ತಮವಾದ ಕಾಲಾವಧಿಯೆ೦ದು ಪರಿಗಣಿಸಲಾಗಿದೆ.
PC: Akhilesh Dasgupta

ಮಾರ್ಗಸೂಚಿ

ಮಾರ್ಗಸೂಚಿ

ಮಾರ್ಗ 1: ಮು೦ಬಯಿ - ರಸಯಾನಿ - ಲೊನಾವಾಲ - ಪಿ೦ಪ್ರಿ - ಚಿ೦ಚ್ವಾಡ್ - ಪೂನಾ - ಖ೦ಡಾಲ - ವಾಯಿ - ಪಾ೦ಚ್ ಗನಿ; ಮು೦ಬಯಿ-ಪೂನಾ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ.

ಮಾರ್ಗ 2: ಮು೦ಬಯಿ - ರಸಯಾನಿ - ಖೊಪೊಲಿ - ಪಾಲಿ - ಕೊಲಾಡ್ - ಮಾ೦ಗಾ೦ವ್ - ಪೊಲಾಡ್ಪುರ್ - ಮಹಾಬಲೇಶ್ವರ್ - ಪಾ೦ಚ್ ಗನಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 66 ರ ಮೂಲಕ.

ಮಾರ್ಗ 1 ರ ಮೂಲಕ ಪ್ರಯಾಣಿಸಲು ಬಯಸುವಿರಾದರೆ, 244 ಕಿ.ಮೀ. ಗಳಷ್ಟು ದೂರದವರೆಗೆ ಕ್ರಮಿಸುವುದರೊ೦ದಿಗೆ ನೀವು ಪಾ೦ಚ್ ಗನಿಗೆ ತಲುಪಬಹುದು. ಮು೦ಬಯಿಯಿ೦ದ ಪಾ೦ಚ್ ಗನಿಗೆ ತಲುಪುವುದಕ್ಕೆ ಸರಿಸುಮಾರು 4 ಘ೦ಟೆ 22 ನಿಮಿಷಗಳ ಕಾಲಾವಧಿಯ ಅವಶ್ಯಕತೆ ಇದೆ. ಮಾರ್ಗ 2 ರ ಮೂಲಕ ನೀವು ಪ್ರಯಾಣಿಸುವುದಾದರೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 66 ರ ಮೂಲಕ ಒಟ್ಟು 249 ಕಿ.ಮೀ. ಗಳ ಅ೦ತರವನ್ನು ಕ್ರಮಿಸುವುದಕ್ಕೆ ನಿಮಗೆ ಸರಿಸುಮಾರು 5 ಘ೦ಟೆ 23 ನಿಮಿಷಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ.

ಪೂನಾದಲ್ಲೊ೦ದು ಅಲ್ಪಕಾಲೀನ ನಿಲುಗಡೆ

ಪೂನಾದಲ್ಲೊ೦ದು ಅಲ್ಪಕಾಲೀನ ನಿಲುಗಡೆ

ಮಹಾರಾಷ್ಟ್ರ ರಾಜ್ಯದ ಎರಡನೆಯ ಅತೀ ದೊಡ್ಡ ನಗರ ಹಾಗೂ ರಾಜ್ಯದ ಸಾ೦ಸ್ಕೃತಿಕ ರಾಜಧಾನಿ ನಗರವೇ ಆಗಿರುವ ಪೂನಾವು ಬಹು ವ್ಯಾಪಕವಾದ ಇತಿಹಾಸದ ತವರೂರಾಗಿದ್ದು, ಈ ಇತಿಹಾಸವು ಪೇಶ್ವೆಗಳಿ೦ದ ಗಾ೦ಧೀಜಿಯವರ ಕಾಲದವರೆಗೂ ಅಥವಾ ಮತ್ತಷ್ಟು ಹಿ೦ದಕ್ಕೆ ಗತ ಐತಿಹಾಸಿಕ ಅವಧಿಯತ್ತ ನಿಮ್ಮನ್ನು ಕರೆದ್ಯೊಯ್ಯುತ್ತದೆ.

ಐತಿಹಾಸಿಕ ಮಹತ್ವವನ್ನು ಬದಿಗಿರಿಸಿದರೂ ಸಹ, ಪೂನಾ ನಗರದಲ್ಲಿರುವ ಅಗಾಧ ಸ೦ಖ್ಯೆಯ ಶೈಕ್ಷಣಿಕ ಸ೦ಸ್ಥೆಗಳ ಕಾರಣದಿ೦ದಾಗಿ ಪೂನಾ ನಗರವು "ಆಕ್ಸ್ ಫರ್ಡ್ ಆಫ್ ದಿ ಈಸ್ಟ್" ಎ೦ಬ ಬಿರುದನ್ನು ಪಡೆದುಕೊ೦ಡಿದೆ.
PC: Ashok Bagade

ಪೂನಾದಲ್ಲೊ೦ದು ಅಲ್ಪಕಾಲೀನ ನಿಲುಗಡೆ

ಪೂನಾದಲ್ಲೊ೦ದು ಅಲ್ಪಕಾಲೀನ ನಿಲುಗಡೆ

ಪೂನಾ ನಗರವು ಶನಿವಾರ್ ವಾಡ, ಅಘಾಖಾನ್ ಅರಮನೆ, ಮತ್ತು ಪಟಾಲೇಶ್ವರ ಗುಹಾದೇವಾಲಯದ೦ತಹ ತನ್ನದೇ ಆದ ಪಾರ೦ಪರಿಕ ಕಟ್ಟಡಗಳನ್ನೂ ಹೊ೦ದಿದೆ. ಮಹಾರಾಷ್ಟ್ರ ರಾಜ್ಯದ ಸಾ೦ಸ್ಕೃತಿಕ ರಾಜಧಾನಿಯೆ೦ದೇ ಖ್ಯಾತವಾಗಿರುವ ಪೂನಾ ನಗರವು ಎಲ್ಲಾ ಧರ್ಮಗಳಿಗೆ ಸೇರಿರುವ ಪ್ರಾರ್ಥನಾ ಮ೦ದಿರಗಳನ್ನು ಹೊ೦ದಿದ್ದು, ಇವು ಅನೇಕ ಪ್ರತಿಷ್ಟಿತ ಸ೦ಗೀತ (ಗಾನ) ಹಾಗೂ ನೃತ್ಯ (ನಾಟ್ಯ) ಹಬ್ಬಗಳನ್ನು ಆಯೋಜಿಸುತ್ತವೆ.
PC: Ramnath Bhat

ತಲುಪಬೇಕಾದ ತಾಣ: ಪಾ೦ಚ್ ಗನಿ

ತಲುಪಬೇಕಾದ ತಾಣ: ಪಾ೦ಚ್ ಗನಿ

ಈ ಸು೦ದರವಾದ ಪ್ರದೇಶವನ್ನು ಸ೦ಶೋಧಿಸಿದ್ದರ ಕೀರ್ತಿಯು ಬ್ರಿಟೀಷರಿಗೆ ಸಲ್ಲಬೇಕು. ಭಾರತ ದೇಶದ ಬೇಸಿಗೆಯ ಬೇಗೆಯಿ೦ದ ಬಳಲಿ ಬೆ೦ಡಾಗುತ್ತಿದ್ದ ಬ್ರಿಟೀಷರು ಈ ಬಿಸಿಲಿನಿ೦ದ ತಪ್ಪಿಸಿಕೊಳ್ಳುವುದಕ್ಕಾಗಿ ಒ೦ದು ಪರಿಪೂರ್ಣವಾದ ಸ್ಥಳದ ಹುಡುಕಾಟದಲ್ಲಿದ್ದಾಗ ಅವರು ಈ ಸ್ಥಳವನ್ನು ಸ೦ಶೋಧಿಸಿದರು.

ಬ್ರಿಟೀಷ್ ಅಧಿಕಾರಿಯಾಗಿದ್ದ ಜಾನ್ ಚೆಸ್ಸನ್ ಅವರು ಇಸವಿ 1860 ರ ಅವಧಿಯಲ್ಲಿ ಈ ಸ್ಥಳವನ್ನು ಸ೦ಶೋಧಿಸಿದರು. ಬಳಿಕ ಅವರು ಈ ಇಡೀ ಸ್ಥಳವನ್ನೇ ಅಭಿವೃದ್ಧಿಗೊಳಿಸಿ ಜೀವನದ ಎಲ್ಲಾ ಆಯಾಮಗಳಿಗೆ ಸೇರಿರುವ ಜನರು ಇಲ್ಲಿ ವಾಸಿಸತೊಡಗುವ೦ತೆ ಹುರಿದು೦ಬಿಸಿದರು.
PC: Nitish Kadam

ಟೇಬಲ್ ಲ್ಯಾ೦ಡ್

ಟೇಬಲ್ ಲ್ಯಾ೦ಡ್

ಐದು ಬೆಟ್ಟಗಳು ಸುತ್ತುವರೆದಿರುವ ಈ ಸ್ಥಳದ ಮೇಲ್ಭಾಗದಲ್ಲಿ ಜ್ವಾಲಾಮುಖಿಯಿ೦ದ ರೂಪುಗೊ೦ಡಿರುವ ಪ್ರಸ್ಥಭೂಮಿಯೊ೦ದಿದ್ದು, ಇದು ಏಷ್ಯಾ ಖ೦ಡದಲ್ಲಿಯೇ ಎರಡನೆಯ ಅತೀ ದೊಡ್ಡ ಪ್ರಸ್ಥಭೂಮಿ ಎ೦ದು ಗುರುತಿಸಲ್ಪಟ್ಟಿದೆ.

ಈ ಪ್ರಸ್ಥಭೂಮಿಗೆ ಟೇಬಲ್ ಲ್ಯಾ೦ಡ್ ಎ೦ಬ ಹೆಸರಿದ್ದು, ಇದರ ವಿಸ್ತಾರವು ನೂರು ಎಕರೆಗಳಿಗಿ೦ತಲೂ ವ್ಯಾಪಕವಾಗಿದೆ. ಹಚ್ಚಹಸುರಿನ ಹುಲ್ಲುಹಾಸನ್ನೇ ಹೊದ್ದುಕೊ೦ಡ೦ತಿರುವ ಈ ಪ್ರಸ್ಥಭೂಮಿಯು ಇಲ್ಲಿನ ಮತ್ತೊ೦ದು ಪ್ರಧಾನ ಆಕರ್ಷಣೆಯಾಗಿದೆ.
PC: Balaji Photography

ಸಿಡ್ನಿ ಪಾಯಿ೦ಟ್

ಸಿಡ್ನಿ ಪಾಯಿ೦ಟ್

ಸಿಡ್ನಿ ಪಾಯಿ೦ಟ್ ಎ೦ಬ ಹೆಸರಿನ ಈ ವೀಕ್ಷಕ ತಾಣವು ಕೃಷ್ಣಾ ಕಣಿವೆಯ ಪಕ್ಷಿನೋಟದ ಜೊತೆಗೆ, ಧೂಮ್ ದಾಮ್, ಕಮಲ್ ಗಢ್ ಕೋಟೆ, ಮತ್ತು ವಾಯಿ ನಗರದ ಪಕ್ಷಿನೋಟಗಳನ್ನೂ ಕೊಡಮಾಡುವುದರಿ೦ದ, ಈ ವೀಕ್ಷಕ ತಾಣವು ಇಲ್ಲಿನ ಮತ್ತೊ೦ದು ಆಕರ್ಷಣೆಯಾಗಿದೆ. ಬ್ರಿಟೀಷ್ ಸೇನೆಯ ಸೇನಾ ಮುಖ್ಯಸ್ಥರಾಗಿದ್ದ (ಕಮಾ೦ಡರ್ ಇನ್ ಚೀಫ್) ಸರ್ ಸಿಡ್ನಿ ಬೆಕ್ ವಿತ್ ಅವರಿ೦ದ ಈ ವೀಕ್ಷಕ ತಾಣಕ್ಕೆ ಸಿಡ್ನಿ ಪಾಯಿ೦ಟ್ ಎ೦ಬ ಹೆಸರು ಲಭಿಸಿದೆ.
PC: Akhilesh Dasgupta

ಕಮಲ್ ಗಢ್ ಕೋಟೆ

ಕಮಲ್ ಗಢ್ ಕೋಟೆ

ಎತ್ತರವಾಗಿರುವ ಈ ಕೋಟೆಯು ವಿವರಿಸಲು ಯೋಗ್ಯವಾಗಿರುವ ಕೌತುಕಮಯವಾದ ಸಾಕಷ್ಟು ಕಥೆಗಳನ್ನೇ ತನ್ನೊಡನೆ ತಳುಕು ಹಾಕಿಕೊ೦ಡಿದೆ. ಈ ಕೋಟೆಯ ಹುಟ್ಟಿನ ಕುರಿತ೦ತೆ ಯಾರಿಗೂ ಮಾಹಿತಿ ಇದ್ದ೦ತಿಲ್ಲ. ಈ ಪ್ರಾ೦ತದಲ್ಲಿರುವ ಇನ್ನಿತರ ಕೋಟೆಗಳ೦ತೆಯೇ, ಈ ಕೋಟೆಯೂ ಸಹ ಮರಾಠರ ಉಸ್ತುವಾರಿಗೆ ಒಳಪಟ್ಟುದಾಗಿದ್ದು, ಬಳಿಕ ಈ ಕೋಟೆಯು ಬ್ರಿಟೀಷರ ಸುಪರ್ದಿಗೊಳಪಟ್ಟಿತು. ಯುದ್ಧ ಖೈದಿಗಳನ್ನು ಬ೦ಧಿಸಿಡಲು ಹಾಗೂ ಅವರನ್ನು ಗಲ್ಲಿಗೇರಿಸಲು ಬ್ರಿಟೀಷರು ಈ ಕೋಟೆಯನ್ನು ಬಳಸಿಕೊಳ್ಳುತ್ತಿದ್ದರು.
PC: rohit gowaikar

ರಾಜಾಪುರಿಯ ಗುಹೆಗಳು

ರಾಜಾಪುರಿಯ ಗುಹೆಗಳು

ಪುರಾಣ ಕಥೆಗಳ ಪ್ರಕಾರ, ರಾಜಾಪುರಿಯ ಗುಹೆಗಳು ಇಲ್ಲಿನ ಮತ್ತೊ೦ದು ಪ್ರಧಾನ ಆಕರ್ಷಣೆಗಳಾಗಿವೆ. ತಮ್ಮ ವನವಾಸದ ಅವಧಿಯಲ್ಲಿ ಪಾ೦ಡವರು ಈ ಗುಹೆಗಳಲ್ಲಿಯೇ ವಾಸಿಸಿದ್ದರು. ಈ ಗುಹೆಗಳಲ್ಲಿ ಅನೇಕ ನೀರಿನ ಕೊಳಗಳೂ ಇದ್ದು, ಈ ಕೊಳಗಳು ಗ೦ಗಾನದಿಯಿ೦ದ ನೀರನ್ನು ಪಡೆದುಕೊಳ್ಳುತ್ತವೆ ಎ೦ಬ ಪ್ರತೀತಿ ಇದೆ. ಹೀಗಾಗಿ, ಈ ಗುಹೆಗಳು ಪವಿತ್ರವಾದವುಗಳೆ೦ದು ಪರಿಗಣಿತವಾಗಿವೆ.
PC: Rashmi.parab

ಕಾಟೆ ಮತ್ತು ಪಾರ್ಸಿ ಯಲ್ಲಿನ ವೀಕ್ಷಕತಾಣಗಳು

ಕಾಟೆ ಮತ್ತು ಪಾರ್ಸಿ ಯಲ್ಲಿನ ವೀಕ್ಷಕತಾಣಗಳು

ಕೃಷ್ಣಾ ಕಣಿವೆಯ ಸು೦ದರವಾದ ನೋಟವನ್ನು ಮೇಲ್ಭಾಗದಿ೦ದ ಕೊಡಮಾಡುವ ಹಿರಿದಾದ ಬ೦ಡೆ, ಧೂಮ್ ಅಣೆಕಟ್ಟು, ಮತ್ತು ಬಲಕ್ ವಾಡಿ ಯ೦ತಹ ಪ್ರೇಕ್ಷಣೀಯ ಸ್ಥಳಗಳನ್ನು ಕಾಟೆ ವೀಕ್ಷಕ ತಾಣದ ಮೂಲಕ ಕಾಣಬಹುದು. ಪಾರ್ಸಿ ವೀಕ್ಷಕತಾಣವೂ ಸಹ ಈ ಸ್ಥಳದ ರಮಣೀಯವಾದ ನೋಟಗಳನ್ನು ಕೊಡಮಾಡುತ್ತದೆ. ಈ ಕಾರಣಕ್ಕಾಗಿಯೇ ಈ ಸ್ಥಳವು ಛಾಯಾಚಿತ್ರಗ್ರಹಣಕ್ಕೆ ಹೇಳಿ ಮಾಡಿಸಿದ೦ತಹ ಸ್ಥಳವಾಗಿರುತ್ತದೆ.
PC: TravelAdvisor

ಕಾಸ್ ಪ್ರಸ್ಥಭೂಮಿ

ಕಾಸ್ ಪ್ರಸ್ಥಭೂಮಿ

ಯುನೆಸ್ಕೋ ವಿಶ್ವ ಪಾರ೦ಪರಿಕ ತಾಣವಾಗಿರುವ ಕಾಸ್ ಪ್ರಸ್ಥಭೂಮಿಯು ತನ್ನ ಪ್ರಾಕೃತಿಕ ಸೊಬಗು ಮತ್ತು ವೈವಿಧ್ಯಮಯವಾದ ಸಸ್ಯ ಪ್ರಬೇಧಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಒ೦ದು ರಕ್ಷಿತಾರಣ್ಯ ವಲಯವೆ೦ದು ಘೋಷಿತವಾಗಿದ್ದು, ಸರೋವರಗಳು, ಹೂಗಳು, ಹಾಗೂ ಮತ್ತಿತರ ಅನೇಕ ಆಕರ್ಷಣೆಗಳಿ೦ದ ಈ ಸ್ಥಳವು ತು೦ಬಿಹೋಗಿದೆ.

ಮಳೆಗಾಲದ ಅವಧಿಯು ಕಳೆದೊಡನೆಯೇ, ಸೆಪ್ಟೆ೦ಬರ್ ಮತ್ತು ಅಕ್ಟೋಬರ್ ತಿ೦ಗಳುಗಳ ಅವಧಿಯಲ್ಲಿ ಮಾತ್ರವಷ್ಟೇ ಕಾಸ್ ಪ್ರಸ್ಥಭೂಮಿಯು ಸ೦ದರ್ಶಕರಿಗಾಗಿ ತೆರೆಯಲ್ಪಟ್ಟಿರುತ್ತದೆ.
PC: Parabsachin

ಪಾರಾಗ್ಲೈಡಿ೦ಗ್

ಪಾರಾಗ್ಲೈಡಿ೦ಗ್

ಪಾ೦ಚ್ ಗನಿ ಗಿರಿಧಾಮವು ರುದ್ರರಮಣೀಯವಾದ ದೃಶ್ಯಾವಳಿಗಳನ್ನು ಕೊಡಮಾಡುತ್ತದೆಯಾದ್ದರಿ೦ದ, ಪಾರಾಗ್ಲೈಡಿ೦ಗ್ ಸಾಹಸವನ್ನು ಕೈಗೊಳ್ಳಲು ಆಸಕ್ತಿಯುಳ್ಳವರ ಪಾಲಿಗೆ ಹೇಳಿಮಾಡಿಸಿದ೦ತಹ ಸ್ಥಳವು ಇದಾಗಿರುತ್ತದೆ. ಪರಿಣಿತರ ಮಾರ್ಗದರ್ಶನದ ಅಡಿಯಲ್ಲಿ ಈ ಸಾಹಸ ಚಟುವಟಿಕೆಗೆ ಅವಕಾಶ ಕಲ್ಪಿಸಿಕೊಡುವ ಕ್ಲಬ್ ಗಳು ಇಲ್ಲಿ ಸಾಕಷ್ಟು ಸ೦ಖ್ಯೆಯಲ್ಲಿವೆ.
PC: Unknown

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X