Search
  • Follow NativePlanet
Share
» »ದೇವಭೂಮಿಯಲ್ಲಿರುವ ಪರಮ ಪಾವನ ದೇಗುಲಗಳು

ದೇವಭೂಮಿಯಲ್ಲಿರುವ ಪರಮ ಪಾವನ ದೇಗುಲಗಳು

ಉತ್ತರ ಭಾರತದ ಹಿಮಾಲಯ ಪರ್ವತ ಶ್ರೇಣಿಗಳ ಹಿನ್ನಿಲೆಯಲ್ಲಿ ನೆಲೆಸಿರುವ, ರಮಣೀಯವಾದ ಪರ್ವತ, ಕಣಿವೆ ಪ್ರದೇಶಗಳ ಭೂದೃಶ್ಯಾವಳಿಗಳನೊಳಗೊಂಡ, ಅನೇಕಾನೇಕ ಹಿಂದೂ ದೇವಸ್ಥಾನಗಳಿಗೆ ತವರಾಗಿರುವ ಉತ್ತರಾಖಂಡ ರಾಜ್ಯವನ್ನು "ದೇವಭೂಮಿ" ಎಂತಲೂ ಸಹ ಕರೆಯಲಾಗುತ್ತದೆ, ಕಾರಣ ಇಲ್ಲಿರುವ, ಪೌರಾಣಿಕ ಹಿನ್ನಿಲೆ ಹೊಂದಿರುವ ನೂರಾರು ಪವಿತ್ರ ದೇವಸ್ಥಾನಗಳು.

ಸಮುದ್ರಮಟ್ಟದಿಂದ ಬಹು ಎತ್ತರದಲ್ಲಿ ನೆಲೆಸಿರುವ ಈ ದೇವಭೂಮಿ ರಾಜ್ಯದಲ್ಲಿ ರೋಚಕ ಹಿನ್ನಿಲೆಯಿರುವ, ಅದ್ಭುತ ದಂತಕಥೆ ಹೊತ್ತಿರುವ ವಿಶಿಷ್ಟ ದೇವಾಲಯಗಳಿಗೇನು ಕಮ್ಮಿ ಇಲ್ಲ. ಅದರಂತೆ ಇಲ್ಲಿರುವ ಕೆಲವು ದೇವಸ್ಥಾನಗಳಿಗೂ ಭೇಟಿ ನೀಡುವುದು ಅಷ್ಟೊಂದು ಸುಲಭವಲ್ಲ. ವಿಪರೀತ ಹವಾಮಾನ, ಕಷ್ಟಕರ ಚಾರಣ ಮಾಡಿದಾಗ ಮಾತ್ರವೆ ಅಂತಹ ದೇಗುಲಗಳ ದರುಶನ ಲಭಿಸುತ್ತದೆ.

ವಿಶೇಷ ಲೇಖನ : ಮೈಸೂರು ಹಾಗೂ ಬೆಂಗಳೂರಿನಲ್ಲಿರುವ ಮುಖ್ಯ ದೇವಸ್ಥಾನಗಳು

ಮಿಕ್ಕಂತೆ ಉಳಿದ ಹಲವಾರು ದೇವಸ್ಥಾನಗಳು ಹಿಂದೂ ಸಂಸ್ಕೃತಿಯಲ್ಲಿ ಹೆಚ್ಚಿನ ಮಾನ್ಯತೆ ಪಡೆದಿದ್ದು ಜೀವನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕಾದ ಪುಣ್ಯ ತೀರ್ಥ ಕ್ಷೇತ್ರಗಳಾಗಿ ಹೆಸರುವಾಸಿಯಾಗಿವೆ. ಉತ್ತರದಿಂದಾಗಲಿ ಅಥವಾ ದಕ್ಷಿಣ ಭಾರತದಿಂದಾಗಲಿ ಪ್ರತಿಯೊಬ್ಬ ಹಿಂದೂ ಈ ರಾಜ್ಯದಲ್ಲಿನ ಕೆಲವು ಪ್ರಖ್ಯಾತ ದೇವಸ್ಥಾನಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕೆಂದೆ ಹಂಬಲಿಸುತ್ತಾನೆ.

ಪ್ರಸ್ತುತ ಲೇಖನದ ಮೂಲಕ ಉತ್ತರಾಖಂಡ ರಾಜ್ಯದಲ್ಲಿರುವ ಕೆಲವು ಪ್ರಖ್ಯಾತ ಹಾಗೂ ಆಯ್ದ ದೇವಸ್ಥಾನಗಳ ಕುರಿತು ತಿಳಿಯಿರಿ. ಗಡ ಗಡ ಚಳಿಯಲ್ಲಿ ಗರಿ ಗರಿಯಾಗಿ ರೋಮಗಳು ಸೆಟೆದು ನಿಲ್ಲುವಂತೆ ಮಾಡುವ ಅದ್ಭುತ ಭೂದೃಶ್ಯಾವಳಿಗಳ ಮಧ್ಯದಲ್ಲಿ ಫಳ ಫಳನೆ ಹೊಳೆವ ಈ ದೇವಸ್ಥಾನಗಳಿಗೆ ಅವಕಾಶ ದೊರೆತಾಗ ಸರ ಸರನೆ ಹೋಗಲು ಮರೆಯದಿರಿ.

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಧರಿ ದೇವಿ ದೇವಾಲಯ : ಉತ್ತರಾಖಂಡ ರಾಜ್ಯದ ಗಡ್ವಾಲ್ ಭಾಗದಲ್ಲಿ ಹರಿದಿರುವ ಅಲಕನಂದಾ ನದಿಯ ತಟದ ಮೇಲೆ ಶಕ್ತಿ ಸ್ವರೂಪಿಣಿಯಾದ ಧರಿ ದೇವಿಗೆ ಮುಡಿಪಾದ ಈ ದೇವಾಲಯವಿದೆ. ಶ್ರೀ ಮದ್ ಭಾಗವತದಲ್ಲಿ ಉಲ್ಲೇಖಿಸಿರುವಂತೆ ಈ ದೇವಾಲಯ ಭಾರತದ 108 ಶಕ್ತಿ ಪೀಠಗಳ ಪೈಕಿ ಒಂದಾಗಿದೆ. ಅಚ್ಚರಿ ಎಂದರೆ ಇಲ್ಲಿ ದೇವಿಯ ತಲೆಯ (ರುಂಡ) ಭಾಗ ಮಾತ್ರವಿದ್ದು ಮುಂಡ ಭಾಗವನ್ನು ಕಾಳಿ ದೇವಿಯಾಗಿ ಕಾಳಿಮಠದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ಇನ್ನೊಂದು ವಿಚಿತ್ರವೆಂದರೆ ಇಲ್ಲಿ ಧರಿ ದೇವಿಯು ಮುಂಜಾವಿನ ಸಮಯದಲ್ಲಿ ಚಿಕ್ಕ ಹುಡುಗಿಯ ಕಳೆ ಪಡೆದು ದಿನಗಳೆದಂತೆ ಹುಡುಗಿಯಾಗಿ, ಹೆಣ್ಣಾಗಿ ಕೊನೆಗೆ ರಾತ್ರಿಯಲ್ಲಿ ಹಿರಿಯಳಾಗಿ ಕಂಡುಬರುತ್ತಾಳೆನ್ನಲಾಗಿದೆ. ಉತ್ತರಾಖಂಡದ ಕಲ್ಯಾಸೌರದಲ್ಲಿರುವ ಈ ದೇವಾಲಯವು ಉತ್ತರಾಖಂಡದ ಶ್ರೀನಗರ-ಬದರಿನಾಥ ರಸ್ತೆಯ ಶ್ರೀನಗರದಿಂದ 15 ಕಿ.ಮೀ, ರುದ್ರಪ್ರಯಾಗದಿಂದ 20 ಕಿ.ಮೀ ಹಾಗೂ ದೆಹಲಿಯಿಂದ 360 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Aloak1

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಮಾಯಾ ದೇವಿ ದೇವಾಲಯ : ಉತ್ತರಾಖಂಡದ ಹರಿದ್ವಾರ ನಗರದಲ್ಲಿ ಮಾಯಾ ದೇವಿಯ ಈ ದೇವಸ್ಥಾನವಿದೆ. ದಂತ ಕಥೆಯ ಪ್ರಕಾರ, ಸತಿ ದೇವಿಯ ಹೃದಯ ಹಾಗೂ ಹೊಕ್ಕುಳ ಭಾಗಗಳು ಇಂದು ಇಲ್ಲಿ ನಿರ್ಮಿಸಲಾಗಿರುವ ದೇವಾಲಯದ ಸ್ಥಳದಲ್ಲಿ ಬಿದ್ದಿತ್ತೆನ್ನಲಾಅಗಿದೆ. ಅಂತೆಯೆ ಇದನ್ನೂ ಸಹ ಒಮ್ಮೊಮ್ಮೆ ಶಕ್ತಿಪೀಠವನ್ನಾಗಿ ಪರಿಗಣಿಸಲಾಗುತ್ತದೆ. ಮಾಯಾ ದೇವಿಯು ಹರಿದ್ವಾರ ನಗರದ ಆದಿಶಕ್ತಿ ದೇವಿಯ ಅವತಾರವಾಗಿದ್ದಾಳೆ.

ಚಿತ್ರಕೃಪೆ: World8115

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಮೂರು ತಲೆ, ನಾಲ್ಕು ಕೈಗಳನ್ನು ಹೊಂದಿರುವ ಈ ದೇವಿಯು ಶಕ್ತಿಯ ಅವತಾರವೆನ್ನಲಾಗುತ್ತದೆ. ಮಾಯಾ ದೇವಿಯಿಂದಾಗಿಯೆ ಹಿಂದೆ ಹರಿದ್ವಾರವು ಮಾಯಾಪುರಿ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. ಇದು ಹರಿದ್ವಾರದಲ್ಲಿರುವ ಮೂರು ಸಿದ್ಧಪೀಠಗಳ ಪೈಕಿ ಒಂದಾಗಿದೆ. ನಂಬಿಕೆಯಿಂದ ಬೇಡಿಕೊಳ್ಳುವ ಇಚ್ಛೆಗಳು ಫಲಪ್ರದವಾಗುವ ಪೀಠಗಳಿಗೆ ಸಾಮಾನ್ಯವಾಗಿ ಸಿದ್ಧಪೀಠಗಳೆನ್ನುತ್ತಾರೆ.

ಚಿತ್ರಕೃಪೆ: World8115

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಚಂಡಿ ದೇವಿ ದೇವಾಲಯ : ಹರಿದ್ವಾರದಲ್ಲಿರುವ ಮೂರು ಸಿದ್ಧಪೀಠಗಳ ಪೈಕಿ ಒಂದಾಗಿದೆ ಚಂಡಿ ದೇವಿ ದೇವಾಲಯ. ಹರಿದ್ವಾರದಲ್ಲಿರುವ ಶಿವಾಲಿಕ್ ಪರ್ವತ ಶ್ರೇಣಿಯಲ್ಲಿರುವ ನೀಲ್ ಪರ್ವತದ ಮೇಲೆ ಶಕ್ತಿ ಮಾತೆಯ ಈ ದೇವಾಲಯವನ್ನು ಕಾಣಬಹುದಾಗಿದೆ. ಚಂಡಿ ದೇವಿಯ ಮೂಲ ವಿಗ್ರಹವನ್ನು ಸುಮಾರು ಎಂಟನೆಯ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದಾರೆನ್ನಲಾಗಿದೆ. ಚಂಡಿ ದೇವಿಯ ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jonoikobangali

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಪ್ರಖ್ಯಾತ ತೀರ್ಥ ಕ್ಷೇತ್ರವಾದ ಹರಿದ್ವಾರದಲ್ಲಿರುವ ಹರ್ ಕಿ ಪೌರಿಯಿಂದ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿ ನೀಲ್ ಪರ್ವತದ ಮೇಲೆ ಈ ದೇವಾಲಯವಿದೆ. ಈ ದೇವಾಲಯವನ್ನು ತಲುಪಬಯಸುವವರು ಚಂಡಿಘಾಟ್ ನಿಂದ ಮೂರು ಕಿ.ಮೀ ಚಾರಣ ಮಾಡಿ, ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು ಇಲ್ಲವೆ ಇತ್ತೀಚಿಗಷ್ಟೆ ಭಕ್ತರ ಅನುಕೂಲಕ್ಕೆಂದು ಪ್ರಾರಂಭಿಸಲಾದ ಕೇಬಲ್ ಕಾರುಗಳ ಮೂಲಕ ತಲುಪಬಹುದು. ಕೇಬಲ್ ಕಾರಿನಲ್ಲಿ ಸುಮಾರು 682 ಅಡಿಗಳಷ್ಟು ಮೇಲೆ ಹಾಗೂ 2430 ಅಡಿಗಳಷ್ಟು ಉದ್ದವನ್ನು ಸಾಗುವಾಗ ಹರಿದ್ವಾರದ ಪ್ರಾಕೃತಿಕ ಸೊಬಗು, ಗಂಗೆಯ ಅದ್ಭುತ ನೋಟಗಳನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಬಹುದು.

ಚಿತ್ರಕೃಪೆ: Mahatma4711

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಮಾನಸಾ ದೇವಿ ದೇವಾಲಯ : ಹರಿದ್ವಾರದ ಮೂರು ಸಿದ್ಧಪೀಠಗಳ ಪೈಕಿ ಇದೂ ಒಂದಾಗಿದೆ. ಶಕ್ತಿಯ ಅವತಾರವೆನ್ನಲಾಗುವ ಮಾನಸಾ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಶಿವನ ಮನಸ್ಸಿನಿಂದ ರೂಪಗೊಂಡ ಶಕ್ತಿ ದೇವಿ ಇವಳಾಗಿರುವುದರಿಂದ ಇವಳಿಗೆ ಮಾನಸಾ ದೇವಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ. ಮಾನಸಾ ದೇವಿಯ ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jonoikobangali

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಹರಿದ್ವಾರದ ಶಿವಾಲಿಕ್ ಪರ್ವತ ಶ್ರೇಣಿಯ ಬಿಲ್ವ ಪರ್ವತದ ತುದಿಯಲ್ಲಿ ಈ ದೇವಿಯ ದೇವಾಲಯವಿದೆ. ಇದು ಬಿಲ್ವ ತೀರ್ಥ ಎಂತಲೂ ಕರೆಯಲ್ಪಡುತ್ತದೆ ಹಾಗೂ ಹರಿದ್ವಾರದ ಪಂಚತೀರ್ಥಗಳ ಪೈಕಿ ಒಂದಾಗಿದೆ. ಈ ದೇವಾಲಯ ಮತ್ತೊಂದು ಸಿದ್ಧಪೀಠವಾದ ಚಂಡಿ ದೇವಿ ದೇವಾಲಯದ ಸನೀಹದಲ್ಲೆ ಸ್ಥಿತವಿದೆ.

ಚಿತ್ರಕೃಪೆ: Ekabhishek

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ನೈನಾ ದೇವಿ ದೇವಾಲಯ : ಉತ್ತರಾಖಂಡದ ಪ್ರಖ್ಯಾತ ಗಿರಿಧಾಮ ಪಟ್ಟಣವಾದ ನೈನಿತಾಲ್ ನಲ್ಲಿ ಈ ದೇವಿಯ ದೇವಾಲಯವಿದೆ. ದಂತಕಥೆಯ ಪ್ರಕಾರ, ಶಿವನ ಮಡದಿ ಹಾಗೂ ದಕ್ಷ ಪ್ರಜಾಪತಿಯ ಪುತ್ರಿ ಸತಿಯು ತಿರಿದಾಗ ಅವಳ ದೇಹದ ನಾನಾ ಭಾಗಗಳು ನಾನಾ ಸ್ಥಳಗಳಲ್ಲಿ ಬಿದ್ದು ಶಕ್ತಿಪೀಠಗಳಾದವು. ಇಂದು ನೈನಿತಾಲ್ ನಲ್ಲಿರುವ ಪ್ರಸಿದ್ಧ ಆಕರ್ಷಣೆಯಾದ ನೈನಿತಾಲ್ ಕೆರೆಯ ಸ್ಥಳದಲ್ಲಿ ಸತಿಯ ನೈನಗಳು ಅಂದರೆ ಕಣ್ಣುಗಳು ಬಿದ್ದವು. ಅಂತೆಯೆ ಈ ಕೆರೆಯು 64 ಶಕ್ತಿಪೀಠಗಳಲ್ಲೊಂದಾಗಿದ್ದು ನೈನಾ ದೇವಿಗೆ ಮುಡಿಪಾದ ದೇವಾಲಯವನ್ನು ಈ ಕೆರೆಯ ತಟದಲ್ಲಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Vipin8169

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಸುರ್ಕಂದಾ ದೇವಿ ದೇವಾಲಯ : ಉತ್ತರಾಖಂಡದ ತೆಹ್ರಿ ಜಿಲ್ಲೆಯ ಧನೌಲ್ತಿ ಎಂಬ ಪುಟ್ಟ ಗ್ರಾಮದ ಬಳಿ ಈ ದೇವಿಯ ದೇವಾಲಯವಿದೆ.ಇದೂ ಸಹ ಶಕ್ತಿಪೀಠಗಳಲ್ಲಿ ಒಂದಾಗಿದೆ. ಕಥೆಯಂತೆ ಇಲ್ಲಿ ಸತಿ ತಲೆಯು ಬಿದ್ದಿತ್ತು. ಅಂತೆಯೆ ಇದು ಸರ್ಕಂದಾ ದೇವಿ ಎಂದಾಗಿ ಕ್ರಮೇಣ ಕಾಲ ಸರಿದಂತೆ ಉಚ್ಛಾರವು ಸುರ್ಕಂದಾ ಎಂದಾಗಿದೆ. ಧನೌಲ್ತಿ-ಚಂಬಾ ರಸ್ತೆಯಲ್ಲಿ ಸಿಗುವ ಕದ್ದುಖಾಲ್ ಎಂಬಲ್ಲಿಂದ ಒಂದು ಕಿ.ಮೀ ಎತ್ತರದ ಚಾರಣದ ಮೂಲಕ ಪರ್ವತದ ಮೇಲೆ ಸ್ಥಿತವಿರುವ ಈ ದೇವಾಲಯಕ್ಕೆ ತಲುಪಬಹುದು.

ಚಿತ್ರಕೃಪೆ: MatSwiki

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಮಹಾಸು ದೇವತಾ ದೇವಾಲಯ : ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಹನೋಲ್ ಎಂಬಲ್ಲಿ ಈ ಸುಂದರ ದೇವಾಲಯವು ಸ್ಥಿತವಿದೆ. ಸ್ಥಳೀಯರ ಅಧಿದೇವತೆಯಾಗಿ ಮಹಾಸು ದೇವನನ್ನು ಇಲ್ಲಿ ಪೂಜಿಸಲಾಗುತ್ತದೆ. ಟೋನ್ಸ್ (ತಮಸಾ ನದಿ) ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವನ್ನು ಮೂಲತಃ ಹುನಾ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದ್ದರೂ ಕಾಲಕ್ರಮೇಣ ವಿವಿಧ ರೀತಿಯಲ್ಲಿ ನವೀಕರಣಗೊಂಡು ಪ್ರಸ್ತುತ ಒಂದು ವಿಶಿಷ್ಟವಾದ ರಚನೆಯಾಗಿ ತೋರುತ್ತದೆ. ಇನ್ನೊಂದು ರೋಚಕ ವಿಷಯವೆಂದರೆ ಸ್ಥಳೀಯರು ನ್ಯಾಯ ಬಗೆಹರಿಯುವಿಕೆಗೆ ಪಾಲಿಸುತ್ತಿರುವ ರೂಢಿ. ಇಬ್ಬರು ಫಿರ್ಯಾದಿಗಳ ಮಧ್ಯೆ ಸಮಸ್ಯೆಯುಂಟಾದಾಗ ಇಬ್ಬರಿಗೂ ಟೋನ್ಸ್ ನದಿಯ ನೀರನ್ನು ಲೋಟದಲ್ಲಿ ಹಾಕಿ ಮಹಾಸು ದೇವತೆಯ ಹೆಸರು ಹೇಳಿ ಕುಡಿಯಲು ಹೇಳಲಾಗುತ್ತದೆ. ಅವರ ನಂಬಿಕೆಯಂತೆ ಯಾರು ತಪ್ಪು ಮಾಡಿರುವರೊ ಅವರು ನೀರನ್ನು ಸೇವಿಸಿದ ತರುವಾಯ ತೊಂದರೆಗೊಳಪಡುತ್ತಾರಂತೆ.

ಚಿತ್ರಕೃಪೆ: Abhishek Verma

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ದಕ್ಷೇಶ್ವರ ಮಹಾದೇವ ದೇವಾಲಯ : ಹರಿದ್ವಾರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಕಂಖಾಲ್ ಎಂಬಲ್ಲಿರುವ ದಕ್ಷೇಶ್ವರ ದೇವಾಯವು ಶಿವನಿಗೆ ಮುಡಿಪಾದ ದೇವಾಲಯವಾಗಿದೆ. ಹಿಂದೂ ಧರ್ಮವನ್ನು ಸಾರುವ ಹಾಗೂ ಲೋಕ ಪರಿಪಾಲಕರಾಗಿದ್ದ 14 ಜನ ಪ್ರಜಾಪತಿಗಳಲ್ಲಿ ದಕ್ಷ ಮಹಾರಾಜನು ಒಬ್ಬನು. ಇವನ ಪುತ್ರಿಯಾದ ಸತಿಯು ಮಹಾಶಿವನ ಮಡದಿ. ಕಥೆಯ ಪ್ರಕಾರ, ದಕ್ಷ ಪ್ರಜಾಪತಿ ನಡೆಸಿದ ಯಜ್ಞದ ಸಂದರ್ಭದಲ್ಲಿ ಅವಗಢವೊಂದು ನಡೆದು ಅದರಿಂದ ಸತಿಯು ತನ್ನ ಪ್ರಾಣ ತ್ಯಜಿಸುತ್ತಾಳೆ. ಇದರ ವಿಷಯ ತಿಳಿದ ಶಿವನು ವೀರಭದ್ರನನ್ನು ಸೃಷ್ಟಿಸಿ ಆ ಯಜ್ಞ ಧ್ವಂಸಗೊಳಿಸುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ದಕ್ಷನ ರುಂಡ ತೆಗೆಯುತ್ತಾನೆ. ಪ್ರಸ್ತುತ ದಕ್ಷನ ರುಂಡ ಬಿದ್ದ ಸ್ಥಳದಲ್ಲಿಯೆ ಇಂದು ಶಿವಲಿಂಗವಿರುವುದನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Aswani.chauhan

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ದಶ ಮಹಾವಿದ್ಯಾ ದೇವಾಲಯ : ದಕ್ಷೇಶ್ವರ ದೇವಾಲಯ ಆವರಣದಲ್ಲಿಯೆ ಈ ದೇವಾಲಯವನ್ನೂ ಸಹ ಕಾಣಬಹುದು. ಶಕ್ತಿ ಸ್ವರೂಪಿಣಿ ಪಾರ್ವತಿಯ ಹತ್ತು ವಿದ್ಯಾಗುಣಗಳಿಗೆ ಮುಡಿಪಾದ ದೇವಾಲಯ ಇದಾಗಿದೆ. ಹಿಂದೂ ಸ್ತ್ರೀಯರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುವ ಈ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಆ ಹತ್ತು ಗುಣ್ಣಗಳ ಅವತಾರಗಳಾಗಿ ಪಾರ್ವತಿ ದೇವಿಯನ್ನು ಕಾಳಿ, ತಾರಾ, ಶೋಡಷಿ, ಭುವನೇಶ್ವರಿ, ಭೈರವಿ, ಚಿನ್ನಮಸ್ತಾ, ಧೂಮವತಿ, ಬಾಗಲಮುಖಿ, ಮಾತಂಗಿ ಹಾಗೂ ಕಮಲಾಗಳೆಂದು ಪೂಜಿಸಲಾಗುತ್ತದೆ.

ಚಿತ್ರಕೃಪೆ: Ekabhishek

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ನೌಕುಚಿಯಾತಲ್ ಹನುಮಾನ್ ದೇವಾಲಯ : ಅಕ್ಷರಶಃ ಒಂಭತ್ತು ಮೂಲೆಗಳ ಕೆರೆ ಎಂದು ಅರ್ಥ ನೀಡುವ ನೌಕುಚಿಯಾತಲ್ ಒಂದು ಪುಟ್ಟ ಗಿರಿ ಪ್ರದೇಶವಾಗಿದ್ದು ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿದೆ. ಈ ತಾಣದ ಮುಖ್ಯ ಆಕರ್ಷಣೆ ಎಂದರೆ ನೌಕುಚಿಯಾತಲ್ ಕೆರೆ. ಈ ಕೆರೆಯು 983 ಮೀ. ಗಳಷ್ಟು ಉದ್ದ, 693 ಮೀ.ಗಳಷ್ಟು ಅಗಲ ಹಾಗೂ 175 ಅಡಿಗಳಷ್ಟು ಆಳವನ್ನು ಹೊಂದಿದೆ. ನೈನಿತಾಲ್ ನಲ್ಲೆ ಹೆಚ್ಚು ಆಳವಿರುವ ಕೆರೆ ಇದಾಗಿದೆ. ಇನ್ನೂ ನೌಕುಚಿಯಾತಲ್ ಗೆ ತೆರಳುವಾಗ ಕಂಡುಬರುವ ಸುಂದರ ದೇವಾಲಯವೆ ಹನುಮಾನ್ ದೇವಾಲಯ. ಈ ದೇವಾಲಯವು ಎತ್ತರದ ಆಂಜನೇಯನ ಪ್ರತಿಮೆ ಹೊಂದಿದ್ದು ಸುತ್ತಲಿಇನ ಪ್ರಾಕೃತಿಕ ಸೊಬಗಿನಲ್ಲಿ ಈ ದೇವಾಲಯವು ಮತ್ತಷ್ಟು ಆಕರ್ಷಕವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Aryan hindustan

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಗೋಲು ದೇವತಾ ದೇವಾಲಯ : ಉತ್ತರಾಖಂಡದ ಕುಮಾವೂನ್ ಭಾಗದಲ್ಲಿ ಕುಲದೇವನಾಗಿ ಗ್ವಾಲಾ ಅಥವಾ ಗೋಲು ದೇವನನ್ನು ಅತ್ಯಂತ ಭಕ್ತಿ, ಶೃದ್ಧೆಗಳಿಂದ ಪೂಜಿಸಲಾಗುತ್ತದೆ. ಸ್ಥಳೀಯರ ಪ್ರಕಾರ ಗೋಲು ದೇವ ಶಿವನ ಸ್ವರೂಪಿಯೆ ಆಗಿದ್ದು ಬೇಡಿಕೊಂಡು ಬಂದ ಭಕ್ತರಿಗೆ ನ್ಯಾಯಗಳನು ಅತಿ ಶೀಘ್ರದಲ್ಲಿ ಒದಗಿಸುತ್ತಾನೆ ಎಂದು ನಂಬಲಾಗುತ್ತದೆ. ಗೋಲು ದೇವನ ಕುರಿತು ಹಲವಾರು ದಂತಕಥೆಗಳು ಚಾಲ್ತಿಯಲ್ಲಿವೆ. ಒಂದು ಕಥೆಯ ಪ್ರಕಾರ ಇತ ರಾಜನೊಬ್ಬನು ಧೈರ್ಯವಂತೆ ಸ್ತ್ರೀಯೊಬ್ಬಳನ್ನು ಮೆಚ್ಚಿ ಮದುವೆಯಾಗಿ ಪಡೆದ ಸಂತಾನ. ಆದರೆ ಅದಾಗಲೆ ರಾಜನಿಗಿದ್ದ ಇತರೆ ರಾಣಿಯರು ಗೋಲು ಮಗುವಾಗಿದ್ದಗ ನೀರಿನಲ್ಲಿ ಎಸೆಯುತ್ತಾರೆ. ನಂತರ ಅವನು ಸ್ಥಳೀಯ ಮೀನುಗಾರರಿಂದ ರಕ್ಷಿಸಲ್ಪಟ್ಟು ಕೊನೆಗೆ ತನ್ನ ಸ್ಥಾನವನ್ನು ಪಡೆಯುತ್ತಾನೆ.

ಚಿತ್ರಕೃಪೆ: Enjoymusic nainital

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಕುಮಾವೂನ್ ಭಾಗದ ಹಲವಾರು ಪಟ್ಟಣಗಳಲ್ಲಿ ಗೋಲು ದೇವನಿಗೆ ಮುಡಿಪಾದ ಅನೇಕ ದೇವಾಲಯಗಳನ್ನು ಕಾಣಬಹುದಾದರೂ ಚಿತೈ, ಚಂಪಾವತ್ ಹಾಗೂ ಘೋರ್ಕಾಲ್ ನಲ್ಲಿರುವ ಗೋಲು ದೇವನ ದೇವಸ್ಥಾನಗಳು ಪುರಾತನವಾಗಿದ್ದು ಹೆಚ್ಚು ಜನಮನ್ನಣೆಯನ್ನುಗಳಿಸಿವೆ.

ಚಿತ್ರಕೃಪೆ: Ritesh Sagar

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಗೋಲು ದೇವನನ್ನು ವಾರ್ಷಿಅಕವಾಗಿ ಆದೂರಿಯಾಗಿ ಪೂಜಿಸಲಾಗುತ್ತದೆ. ಮೂರರಿಂದ ಒಂಭತ್ತು ದಿನಗಳ ಕಾಲ ಗೋಲು ದೇವತೆಯ ಉತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಗೋಲು ದೇವನಿಗೆ ಇಷ್ಟವಾದ ಹಾಲು, ಮೊಸರು, ತುಪ್ಪ, ಹಲ್ವಾ ಮುಂತಾದ ಪಕ್ವಾನಗಳನ್ನು ನೈವೇದ್ಯ ತೋರಿಸಲಾಗುತ್ತದೆ ಹಾಗೂ ಆಡಿನ ತಲೆಯನ್ನು ವಿಶೇಷವಾಗಿ ಬಲಿ ನೀಡಲಾಗುತ್ತದೆ.

ಚಿತ್ರಕೃಪೆ: Manoj.singh.mahar

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಇಂದಿಗೂ ಗೋಲು ದೇವ ತಮಗೆ ನ್ಯಾಯಗಳನ್ನು ಶೀಘ್ರವಾಗಿ ಕರುಣಿಸುತ್ತಾನೆಂಬ ನಂಬಿಕೆಯಿಂದ ಪ್ರತಿ ನಿತ್ಯ ಹಲವಾರು ಭಕ್ತರು ದೇವನನ್ನು ಕುರಿತು ತಮ್ಮ ಫಿರ್ಯಾದಿಗಳನ್ನು ಚೀಟಿಗಳಲ್ಲಿ ಬರೆದು ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ನ್ಯಾಯ ದೊರಕಿದ ತಕ್ಷಣ ತಮ್ಮ ಶಕ್ತ್ಯಾನುಸಾರ ವಿವಿಧ ಗಾತ್ರ, ಆಕಾರಗಳ ಘಂಟೆಗಳನ್ನು ದೇವಾಲಯಕ್ಕೆ ಸಮರ್ಪಿಸುತ್ತಾರೆ.

ಚಿತ್ರಕೃಪೆ: Ranveig

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಬಾಗನಾಥ ದೇವಾಲಯ : ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಬಾಗೇಶ್ವರ ಎಂಬಲ್ಲಿದೆ ಈ ಪುರಾತನ ಶಿವನಿಗೆ ಮುಡಿಪಾದ ಸುಂದರ ದೇವಾಲಯ. ಸರಯು ಹಾಗೂ ಗೋಮತಿ ನದಿಗಳು ಸಂಗಮ ಹೊಂದುವ ಸ್ಥಳದಲ್ಲಿ ಈ ದೇವಾಲಯ ಸ್ಥಿತವಿದೆ. ಶಿವರಾತ್ರಿಯ ಸಂದರ್ಭದಲ್ಲಿ ಜನಸಾಗರದಿಂದ ಈ ನಗರವು ತುಂಬಿ ತುಳುಕುತ್ತದೆ. ಅಲ್ಲದೆ ಪ್ರತಿ ಮಕರ ಸಂಕ್ರಾಂತಿಯಂದು ಇಲ್ಲಿ ಅದ್ದೂರಿಯಾಗಿ ಉತ್ಸವವನ್ನು ಆಚರಿಸಲಾಗುತ್ತದೆ. ಬಾಗೇಶ್ವರ ನಗರದ ಪಕ್ಷಿ ನೋಟ.

ಚಿತ್ರಕೃಪೆ: Chawlaharmeet

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಗಂಗೋತ್ರಿ ದೇವಾಲಯ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿ ಪಟ್ಟಣದಲ್ಲಿ ಈ ದೇವಾಲಯವಿದೆ. ಭಾರತದ ಪ್ರಮುಖ ಹಾಗೂ ಪವಿತ್ರ ನದಿ ಎಂದು ಪರಿಗಣಿಸಲ್ಪಡುವ ಗಂಗಾ ನದಿಗೆ ಮುಡಿಪಾದ ದೇವಾಲಯ ಇದಾಗಿದೆ. ಗಂಗೋತ್ರಿ ದೇವಾಲಯವು ಭಾಗೀರಥಿ ನದಿಯ ತಟದಲ್ಲಿ ನೆಲೆಸಿದೆ. ಸಮುದ್ರ ಮಟ್ಟದಿಂದ 3200 ಮೀ. ಎತ್ತರದಲ್ಲಿರುವ ಈ ದೇವಾಲಯವು ಗಂಗಾ ದೇವಿಗೆ ಸಮರ್ಪಿತವಾಗಿದೆ. ದೇಶದಲ್ಲಿ ಇರಬಹುದಾದ ಅನೇಕ ಗಂಗಾ ದೇವಿ ದೇವಸ್ಥಾನಗಳ ಪೈಕಿ ಈ ದೇವಾಲಯವು ಅತ್ಯಂತ ಮಹತ್ವವುಳ್ಳದ್ದಾಗಿದೆ.

ಚಿತ್ರಕೃಪೆ: Surohit

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಕೇದಾರನಾಥ ದೇವಾಲಯ : ಉತ್ತರಾಖಂಡ ರಾಜ್ಯದ ಕೇದಾರನಾಥ ಪರ್ವತದ ಸಾಲಿನಲ್ಲಿ ಕೇದಾರನಾಥ ದೇವಾಲಯ ಸ್ಥಾಪಿತವಾಗಿದೆ. ಇದೊಂದು ಶಾಶ್ವತ ಧಾರ್ಮಿಕ ಕೇಂದ್ರ ಹಾಗು ಪ್ರಖ್ಯಾತ ಜ್ಯೋತಿರ್ಲಿಂಗ. ಶಿವನ ಪ್ರಮುಖ 12 ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥವು ಅತ್ಯಂತ ಮಹತ್ವವುಳ್ಳದ್ದಾಗಿದೆ. 8ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯದ ಸನೀಹದಲ್ಲೆ ಮಂದಾಕಿನಿ ನದಿಯು ಹರಿದಿದೆ. ಈ ದೇವಾಲಯವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದಾರೆ. ಪಾಂಡವರು ನಿರ್ಮಿಸಿದ ಎನ್ನಲಾದ ಪುರಾತನ ದೇಗುಲವೊಂದರ ಪಕ್ಕದಲ್ಲೆ ಈ ದೇವಾಲಯವು ನೆಲೆಗೊಂಡಿದೆ. ಇಲ್ಲಿನ ದೇವಾಲಯದ ಸಮ್ಮೇಳನ ಸಭಾಂಗಣದ ಗೋಡೆ ಮೇಲೆ ಸಾಕಷ್ಟು ದೇವಾನುದೇವತೆಗಳ ಮುದ್ರೆ ಅಚ್ಚೊತ್ತಲ್ಪಟ್ಟಿದೆ. ಹಿಂದೂಗಳು ನಡೆದುಕೊಳ್ಳುವ ಒಂದು ಪ್ರಮುಖ ದೇವಾಲಯ ಇದಾಗಿದೆ.

ಚಿತ್ರಕೃಪೆ: Kmishra19

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ರುದ್ರನಾಥ ದೇವಾಲಯ : ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಭಾಗದಲ್ಲಿ ಈ ದೇವಾಲಯ ಸ್ಥಿತವಿದೆ. ಪಂಚ ಕೇದಾರಗಳ ಪೈಕಿ ಇದು ಒಂದಾಗಿದೆ. ರುದ್ರನಾಥ ದೇವಾಲಯ ಸಮುದ್ರ ಮಟ್ಟದಿಂದ 2286 ಮೀಟರ್ ಎತ್ತರದಲ್ಲಿದ್ದು ರುದ್ರನಾಥ ಪ್ರದೇಶದಲ್ಲಿದೆ. ರುದ್ರನಾಥ ದೇವಾಲಯದಲ್ಲಿ ನೀಲ ಕಂಠ ಮಹಾದೇವ ಎಂಬ ಹೆಸರಿನಲ್ಲಿ ಹಿಂದೂ ದೇವ ಶಿನನನ್ನು ಇಲ್ಲಿ ಪೂಜಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ದೇವಾಲಯವನ್ನು ಭಾರತೀಯ ಮಹಾಕಾವ್ಯ, ಮಹಾಭಾರತದ ಪೌರಾಣಿಕ ಪಾತ್ರಗಳಾದ ಪಾಂಡವರಿಂದ ನಿರ್ಮಿಸಲಾಗಿದೆ. ಪ್ರವಾಸಿಗರು ಸಾಗರ ಗ್ರಾಮ ಮತ್ತು ಜೋಶಿಮಠ್ ಮೂಲಕ ಈ ದೇವಸ್ಥಾನ ತಲುಪಬಹುದು. ಜೋಶಿಮಠ ಮಾರ್ಗದ ಉದ್ದ 45 ಕಿ. ಮಿಗಳು ಮಾತ್ರ. ಹಥಿ ಪರ್ವತ, ನಂದಾ ದೇವಿ, ನಂದ ಘುಂಟಿ ಮತ್ತು ತ್ರಿಶೂಲ್ ಮೊದಲಾದ ಸುಂದರ ಶಿಖರಗಳನ್ನು ಈ ದೇವಾಲಯದ ಸುತ್ತ ನೋಡಬಹುದು.

ಚಿತ್ರಕೃಪೆ: Redtigerxyz

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ತ್ರಿಯುಗಿನಾರಾಯಣ ದೇವಸ್ಥಾನ : ತ್ರಿಯುಗಿನಾರಾಯಣ, ರುದ್ರಪ್ರಯಾಗದಲ್ಲಿರುವ, ಭೇಟಿ ನೀಡಬಹುದಾದಂತಹ ಒಂದು ಪವಿತ್ರ ಸ್ಥಳ. ನಂಬಿಕೆಗಳ ಪ್ರಕಾರ, ಇದು ಹಿಂದೂ ದೇವರು ಶಿವನು ಈ ಸ್ಥಳದಲ್ಲಿ ಸತ್ಯಯುಗದಲ್ಲಿ ಪಾರ್ವತಿಯೊಂದಿಗೆ ವಿವಾಹವಾಗಿದ್ದನು ಹಾಗೂ ಈ ಸ್ಥಳವು ಹಿಮಾವತ್ ಪ್ರದೇಶದ ರಾಜಧಾನಿಯಾಗಿತ್ತು. ಇನ್ನೊಂದು ಕುತೂಹಲಕಾರಿಯಾದ ವಿಷಯವೆಂದರೆ ಶಿವ ಪಾರ್ವತಿಯರ ಮದುವೆಯಲ್ಲಿ ಬಳಸಲಾಗಿದ್ದ ಅಗ್ನಿ/ಹವನ ಕುಂಡ ಈಗಲೂ ಇಲ್ಲಿ ಉರಿಯುತ್ತಿದೆ! ಈ ಹವನ ಕುಂಡದ ಭಸ್ಮವನ್ನು ಹಚ್ಚಿಕೊಂಡರೆ ದೇವರೆ ವೈವಾಹಿಕ ಜಿವನಕ್ಕೆ ಹರಸುತ್ತಾರೆ ಎಂದು ಭಕ್ತರು ನಂಬುತ್ತಾರೆ.

ಚಿತ್ರಕೃಪೆ: Shaq774

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ರುದ್ರಪ್ರಯಾಗ ದೇವಾಲಯ : ರುದ್ರಪ್ರಯಾಗ ದೇವಾಲಯ, ಅಲಕನಂದಾ ಮತ್ತು ಮಂದಾಕಿನಿ ಎಂಬ ಎರಡು ನದಿಗಳ ಸಂಗಮದ ಸ್ಥಳದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ವಿನಾಶ ನಾಶಕ ದೇವ ಶಿವನನ್ನು ಪೂಜಿಸಲಾಗುವ ಈ ದೇವಸ್ಥಾನಕ್ಕೆ ಅನೇಕ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಪುರಾಣದ ಪ್ರಕಾರ, ಶಿವ 'ರುದ್ರ' ನ ಅವತಾರವನ್ನು ಹೊಂದಿ, ಸಂಗೀತದಲ್ಲಿ ಪರಿಣಿತಿಯನ್ನು ಪಡೆಯಬೇಕೆನ್ನುವ ಅಭಿಲಾಷೆಯಿಂದ ಇಲ್ಲಿ ತಪಸ್ಸು ಮಾಡಿದ್ದ ಹಾಗು ನಾರದ ಮುನಿಗೆ ಆಶೀರ್ವಾದ ಮಾಡಿದ್ದನು ಎಂದು ಹೇಳಲಾಗುತ್ತದೆ. ಈ ಸ್ಥಳದ ಹತ್ತಿರದಲ್ಲಿ ಜಗದಂಬಾ ದೇವಾಲಯವನ್ನೂ ಕಾಣಬಹುದು.

ಚಿತ್ರಕೃಪೆ: Ekabhishek

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ತುಂಗನಾಥ ದೇವಾಲಯ : ಕಲ್ಮಶರಹಿತ ವಾತಾವರಣದ, ತಾಜಾ ಹಸಿರಿನ ಛಾಯೆಗಳ, ರುದ್ರಮಯ ಪರ್ವತ ರಹದಾರಿಗಳ, ಗಡ ಗಡ ನಡುಗಿಸುವಂತಹ ಶಿತವಲಯದ ತುಂಗನಾಥದಲ್ಲಿ ನೆಲೆಸಿರುವ ಶಿವನು ವಿಶ್ವದ ಅತಿ ಎತ್ತರದಲ್ಲಿ ನೆಲೆಸಿರುವ ಶಿವನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಹೌದು, ಭೂಮಟ್ಟದಿಂದ ಇಷ್ಟೊಂದು ಎತ್ತರದಲ್ಲಿರುವ ಶಿವನ ಈ ದೇವಸ್ಥಾನವನ್ನು ಪ್ರಪಂಚದಲ್ಲೆಲ್ಲೂ ಕಾಣಲಾಗದು.

ಚಿತ್ರಕೃಪೆ: Varun Shiv Kapur

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ರಿಷಿಕೇಶ 'ದೇವಭೂಮಿ' ಎಂದೇ ಪ್ರಸಿದ್ದಿ ಪಡೆದಿದೆ. ಗಂಗಾ ನದಿ ದಂಡೆಯ ಮೇಲೆ ರಿಷಿಕೇಶ ನೆಲೆ ನಿಂತಿರುವ ಕಾರಣಕ್ಕೆ ಹಿಂದೂ ಧಾರ್ಮಿಕರಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಪ್ರತಿವರ್ಷ ಲಕ್ಷಾಂತರ ಭಕ್ತ ಮಹಾಶಯರು ರಿಷಿಕೇಶಕ್ಕೆ ಭೇಟಿ ನೀಡಿ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸುತ್ತಾರೆ. ಈ ಸ್ಥಳ ಹೆಚ್ಚು ಪ್ರಸಿದ್ದಿ ಪಡೆದಿರುವುದು ಪುರಾತನವಾದ ದೇವಸ್ಥಾನ ಹಾಗೂ ಆಶ್ರಮಗಳಿಂದ. ಹಲವಾರು ಯೋಗ ಮತ್ತು ಧ್ಯಾನ ಕೇಂದ್ರಗಳು ಇಲ್ಲಿದ್ದು ಅನುಭವಿ ಯೋಗ ಗುರುಗಳು ಇಲ್ಲಿ ತರಬೇತಿ ನೀಡುತ್ತಾರೆ. ಹಿಂದೂ ಪುರಾಣ ಕಥೆ ರಾಮಾಯಣದ ಪ್ರಕಾರ, ರಾವಣನ ಸಂಹಾರ ಮಾಡಿದ ನಂತರ ಶ್ರೀರಾಮ ಇದೇ ಸ್ಥಳದಲ್ಲಿ ಧ್ಯಾನಕ್ಕೆ ಕುಳಿತನಂತೆ.

ಚಿತ್ರಕೃಪೆ: Iqbal Mohammed

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ರಿಷಿಕೇಶದಲ್ಲಿರುವ ಲಕ್ಷ್ಮಣ ಝೂಲಾ 450 ಅಡಿ ಎತ್ತರದ ಸಸ್ಪೆನ್ಶನ್ ಸೇತುವೆಯಾಗಿದ್ದು ನದಿಗಳು, ದೇವಸ್ಥಾನಗಳು ಮತ್ತು ಆಶ್ರಮಗಳ ಮೋಹಕ ನೋಟ ಇಲ್ಲಿ ಸಿಗುತ್ತದೆ. ಮೂಲತಃ ಇದು ನಾರಿನ ಸೇತುವೆಯಾಗಿದ್ದು 1939 ರಲ್ಲಿ ಇದನ್ನು ತೂಗಾಡುವ ಕಬ್ಬಿಣದ ಸೇತುವೆಯಾಗಿ ಮಾರ್ಪಡಿಸಿ ಕಟ್ಟಲಾಗಿದೆ. ಶ್ರೀರಾಮನ ತಮ್ಮ ಲಕ್ಷ್ಮಣ ಒಮ್ಮೆ ಈ ಸೇತುವೆಯ ಮೂಲಕ ಗಂಗಾ ನದಿಯನ್ನು ದಾಟಿದನೆಂಬ ಕಥೆಯಿದೆ. ಹೀಗಾಗಿ ಈ ಸೇತುವೆಗೆ ಲಕ್ಷ್ಮಣ ಝೂಲಾ ಎನ್ನಲಾಗುತ್ತದೆ. ಪ್ರಸಿದ್ದ ಸ್ವರ್ಗ್ ಆಶ್ರಮ ಇಲ್ಲಿಂದ 2 ಕಿಲೋ ಮೀಟರ್ ಅಂತರದಲ್ಲಿದೆ. ಹತ್ತಿರದಲ್ಲಿರುವ ರಾಮ್ ಝೂಲಾ ಕೂಡ ಮತ್ತೊಂದು ಆಕರ್ಷಣೆ.

ಚಿತ್ರಕೃಪೆ: ellyjonez

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಮುನಿ ಕೀ ರೇತಿ ಎಂಬ ಸ್ಥಳವು ರಿಷಿಕೇಶ ಬಳಿಯಿರುವ ಒಂದು ಪ್ರಶಾಂತ ಸ್ಥಳವಾಗಿದೆ. ಇಲ್ಲಿ ಪ್ರಮುಖವಾಗಿ ಯೋಗ ಹಾಗೂ ಧ್ಯಾನ ಕೇಂದ್ರಗಳನ್ನು ಕಾಣಬಹುದು. ಮುಖ್ಯವಾಗಿ ಸ್ವಾಮಿ ಶಿವಾನಂದರು ಸ್ಥಾಪಿಸಿದ ಶಿವಾನಂದ ಆಶ್ರಮವು ಈ ಸ್ಥಳದಲ್ಲೆ ನೆಲೆಸಿದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ರಾಮನ ಸಹೋದರನಾಗಿದ್ದ ಭರತನು ಈ ಸ್ಥಳದಲ್ಲಿಯೆ ತಪಗೈದಿದ್ದನು. ಇಲ್ಲಿ ಹರಿದಿರುವ ಗಂಗಾ ನದಿ ತಟದ ಮರಳನ್ನು ಸಾಧು ಸಂತರು ಉಪಯೋಗಿಸುತ್ತಿದ್ದುದರಿಂದ ಈ ಸ್ಥಳಕ್ಕೆ "ಮುನಿ ಕೀ ರೇತಿ" ಎಂಬ ಹೆಸರು ಬಂದಿದೆ. ಹಿಂದಿ ಭಾಷೆಯಲ್ಲಿರುವ ಈ ವಾಕ್ಯದ ಅರ್ಥ ಕನ್ನಡದಲ್ಲಿ ಮುನಿಗಳ ಮರಳು ಎಂದಾಗುತ್ತದೆ.

ಚಿತ್ರಕೃಪೆ: Ajay Tallam

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ರಿಷಿಕೇಶದಲ್ಲಿರುವ ಪರಮಾರ್ಥ ನಿಕೇತನ ಒಂದು ಧಾರ್ಮಿಕ ಆಶ್ರಮವಾಗಿದ್ದು ಹೆಸರುವಾಸಿಯಾದ ತಾಣವಾಗಿದೆ. ಪರಮಾರ್ಥ ನಿಕೇತನದಲ್ಲಿ ಸುಮಾರು 1000 ಕ್ಕೂ ಹೆಚ್ಚು ರೂಮುಗಳಿವೆ. 1942 ರಲ್ಲಿ ಈ ಆಶ್ರಮವನ್ನು ಪೂಜ್ಯ ಸುಖದೇವಾನಂದಜಿ ಕಟ್ಟಿದರು. ಅಂತರಾಷ್ಟ್ರೀಯ ಯೋಗ ಉತ್ಸವವು ಇಲ್ಲಿ ಜರುಗುತ್ತಿರುತ್ತದೆ.

ಚಿತ್ರಕೃಪೆ: rajkumar1220

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡ ರಾಜ್ಯದಲ್ಲಿರುವ ಭಾರತದ ಅತಿ ಪುಣ್ಯ ಕ್ಷೇತ್ರಗಳ ಪೈಕಿ ಒಂದಾದ ಹರಿದ್ವಾರವು ದೆಹಲಿಯಿಂದ 212 ಕಿ.ಮೀ ಗಳಷ್ಟು ದೂರವಿದ್ದು ದೆಹಲಿಯಿಂದ ಶತಾಬ್ದಿ ರೈಲಿನ ಸೇವೆ ಹರಿದ್ವಾರಕ್ಕೆ ತೆರಳಲು ಲಭ್ಯವಿದೆ. ಹರಿದ್ವಾರವು ಒಂದು ಪ್ರಾಚೀನ ನಗರವಾಗಿದ್ದು ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯಲ್ಲಿದೆ. ಪವಿತ್ರ ಗಂಗಾನದಿಯು ಗಂಗೋತ್ರಿ (ಗೋಮುಖ )ಯಲ್ಲಿ ಉದ್ಭವಗೊಂಡು 253 ಕಿ.ಮೀ ಗಳಷ್ಟು ಕ್ರಮಿಸಿ ಉತ್ತರ ಭಾರತದಲ್ಲಿ ಹರಿದ್ವಾರದ ಮೂಲಕ ಪ್ರಥಮವಾಗಿ ಪ್ರವೇಶಿಸುತ್ತದೆ. ಆದ್ದರಿಂದಲೆ ಈ ನಗರವನ್ನು ಗಂಗಾದ್ವಾರಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Paul

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಹರ್ ಕಿ ಪೌರಿ : ಇದೊಂದು ಪವಿತ್ರ ಘಾಟ್ (ಸ್ನಾನ ಮಾಡುವ ಸ್ಥಳ) ಪ್ರದೇಶವಾಗಿದ್ದು ಒಂದನೆಯ ಶತಮಾನದಲ್ಲಿ ವಿಕ್ರಮಾದಿತ್ಯ ರಾಜನಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ. ಈ ಸ್ಥಳದಲ್ಲಿರುವ ಬ್ರಹ್ಮಕುಂಡವು ಹೆಚ್ಚಿನ ಪಾವಿತ್ರ್ಯತೆ ಪಡೆದಿದ್ದು ಶಿವನ ಹೆಜ್ಜೆ ಗುರುತಿನ ಸ್ಥಳ ಇದಾಗಿದೆ. ಸಂಜೆಯ ಸಮಯವು ಗಂಗೆಗೆ ಆರತಿ ಮಾಡಲಾಗುತ್ತದೆ ಹಾಗೂ ಸಾವಿರಾರು ಭಕ್ತರು ತಮ್ಮ ಪೂರ್ವಜರ ಶಾಂತಿಗಾಗಿ ದೀಪಗಳನ್ನು ತೇಲಿ ಬಿಡುತ್ತಾರೆ. ಈ ಒಂದು ಅನುಭವವು ಅತ್ಯಂತ ಸುಂದರಮಯವಾಗಿರುತ್ತದೆ.

ಚಿತ್ರಕೃಪೆ: Livefree2013

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಆನಂದಮೊಯಿ ಮಾತಾ ಆಶ್ರಮ : ಹರಿದ್ವಾರದ ಕಂಖಲ್ ನಲ್ಲಿ ಈ ಮಾತೆಯ ಆಶ್ರಮವನ್ನು ಕಾಣಬಹುದಾಗಿದೆ. ಪಶ್ಚಿಮ ಬಂಗಾಳದ ಮೂಲ ಹೊಂದಿರುವ ಈ ಮಾತೆಯು 1896 ರಿಂದ 1982 ರ ವರೆಗ್ಎ ಜೀವಿಸಿದ್ದರು ಹಾಗೂ ಸಾಕಷ್ಟು ಭಕ್ತರು ಇವರನ್ನು ಒಬ್ಬ ಸಂತೆಯಾಗಿ ಪರಿಗಣಿಸುತ್ತಾರೆ.

ಚಿತ್ರಕೃಪೆ: Naresh Balakrishnan

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಜೋಷಿಮಠ ಅಥವಾ ಜ್ಯೋತಿರ್ಮಠವು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಜೋಷಿಮಠ ಕ್ಷೇತ್ರವು ಪ್ರಮುಖವಾಗಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮೂಲ ಪೀಠಗಳಲ್ಲಿ ಒಂದೆನಿಸಿದೆ. ಶೃಂಗೇರಿ, ಪುರಿ ಮತ್ತು ದ್ವಾರಕಾ ಉಳಿದ ಮೂರು ಪೀಠಗಳು. ಜೋಷಿಮಠವು ಉತ್ತರಾಮ್ನಾಯ ಪೀಠವೆನಿಸಿದ್ದು ಆದಿ ಗುರು ಶಂಕರಾಚಾರ್ಯರು ಜ್ಯೋತಿರ್ಮಠದ ಪೀಠಕ್ಕೆ ಅಥರ್ವ ವೇದದ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದರೆನ್ನಲಾಗಿದೆ.

ಚಿತ್ರಕೃಪೆ: Raji.srinivas

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಜಾಗೇಶ್ವರ ಎನ್ನುವುದು ಉತ್ತರಾಖಂಡ ರಾಜ್ಯದಲ್ಲಿರುವ ಅಲ್ಮೋರಾ ಜಿಲ್ಲೆಯಲ್ಲಿರುವ ಒಂದು ಧಾರ್ಮಿಕ ಮಹತ್ವವನ್ನು ಹೊಂದಿರುವ ನಗರವಾಗಿದೆ. ದಟ್ಟವಾಗಿ ಬೆಳೆದಿರುವ ಹಚ್ಚಹಸಿರಿನ ದೇವದಾರು ಮರಗಳಿಂದ ಕೂಡಿರುವ ಈ ಪ್ರಾಂತ್ಯವು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈ ಸ್ಥಳದಲ್ಲಿ 12 ಜ್ಯೋರ್ತೀಲಿಂಗಗಳ ಪೈಕಿ ಎಂಟನೇಯ ಜ್ಯೋತಿರ್ಲಿಂಗವಾದ ನಾಗೇಶ್ ಜ್ಯೋರ್ತೀಲಿಂಗವನ್ನು ಕಾಣಬಹುದು. ಈ ಸ್ಥಳವು ತೀರ್ಥಕ್ಷೇತ್ರವೆಂದು ಸಹ ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ನಗರದ ಸುತ್ತಲು ಶಿವನಿಗಾಗಿ ನಿರ್ಮಿಸಲಾಗಿರುವ 124 ಸಣ್ಣ ಮತ್ತು ದೊಡ್ಡ ದೇವಾಲಯಗಳು ಇವೆ.

ಚಿತ್ರಕೃಪೆ: Apalaria

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡ್‌ನ ಟೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ್ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು. ಸಂಸ್ಕೃತದಲ್ಲಿ ದೇವಪ್ರಯಾಗ್‌ ಅಂದರೆ 'ಪವಿತ್ರ ಸಂಗಮ'. ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮವೂ ಹೌದು ಈ ಸ್ಥಳ. ಏಳನೇ ಶತಮಾನದಿಂದೀಚೆಗೆ ಈ ಪ್ರದೇಶ ಹಲವು ಹೆಸರುಗಳಿಂದ ಕರೆಸಿಕೊಂಡಿದೆ. ಮುಖ್ಯವಾಗಿ ಬ್ರಹ್ಮಪುರಿ, ಬ್ರಹ್ಮ ತೀರ್ಥ, ಶ್ರೀಖಂಡ ನಗರ ಮತ್ತು ಉತ್ತರಾಖಂಡದ ಜೆಮ್ ಅಂತಲೂ ಕರೆಯಲ್ಪಡುತ್ತಿತ್ತು. ಹಿಂದೂ ಧರ್ಮದ ಋಷಿ ದೇವ ಶರ್ಮಾ ಇಲ್ಲಿ ವಾಸಿಸುತ್ತಿದ್ದುದರಿಂದ ದೇವಪ್ರಯಾಗವೆಂಬ ಹೊಸ ಹೆಸರು ಬಂದು, ಅದೇ ಶಾಶ್ವತವಾಯಿತು. ಹಿಂದೂಗಳಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಪ್ರಕಾರ, ರಾಮ ಮತ್ತು ಆತನ ತಂದೆ ದಶರಥ ಮಹಾರಾಜ ಈ ಪ್ರದೇಶದಲ್ಲಿ ತಪಸ್ಸು ಕೈಗೊಂಡಿದ್ದರು.

ಚಿತ್ರಕೃಪೆ: Vvnataraj

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಉತ್ತರಾಖಂಡದ ಆಯ್ದ ದೇವಸ್ಥಾನಗಳು:

ಭಾರತದ ಉತ್ತರಾಖಂಡ್ ರಾಜ್ಯದಲ್ಲಿರುವ ಬದರಿನಾಥವು ನಾಲ್ಕು ಪವಿತ್ರ ಧಾಮಗಳ ಪೈಕಿ ಅತಿ ಪ್ರಮುಖವಾದ ಧಾಮವಾಗಿದೆ. ಬದರಿ ನಾರಾಯಣ ಎಂತಲೂ ಕರೆಯಲ್ಪಡುವ ಬದರಿನಾಥ ದೇವಾಲಯವು ವಿಷ್ಣು ಭಗವಾನನಿಗೆ ಮುಡಿಪಾದ ದೇವಾಲಯವಾಗಿದೆ. ಹಲವು ಪವಿತ್ರವಾದ ಧಾರ್ಮಿಕ ಆಕರ್ಷಣೆಗಳನ್ನು ಇದರ ಸುತ್ತಮುತ್ತಲು ನೋಡಬಹುದಾಗಿದೆ.

ಚಿತ್ರಕೃಪೆ: Vspriya33

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X