Search
  • Follow NativePlanet
Share
» »"ಟ್ರೆಕ್" ಮೂಲಕವೆ ತಲುಪಬೇಕಾಗಿರುವ ದೇವಾಲಯಗಳು

"ಟ್ರೆಕ್" ಮೂಲಕವೆ ತಲುಪಬೇಕಾಗಿರುವ ದೇವಾಲಯಗಳು

By Vijay

ಭಾರತದಂತಹ ದೇಶದಲ್ಲಿ ಅಸಂಖ್ಯಾತ ಧಾರ್ಮಿಕ ತಾಣಗಳು, ದೇವಸ್ಥಾನಗಳಿದ್ದು ವರ್ಷಪೂರ್ತಿ ಇಂತಹ ಸ್ಥಳಗಳಿಗೆ ಜನರು ಭೇಟಿ ನೀಡುತ್ತಲೆ ಇರುತ್ತಾರೆ. ಮೊದಲಿನಿಂದಲೂ ಭಾರತೀಯರಿಗೆ ದೇವರು, ದೇವಸ್ಥಾನಗಳ ಮೇಲೆ ಅಪಾರವಾದ್ ಶೃದ್ಧಾ ಭಕ್ತಿಗಳಿರುವುದರಿಂದ ಬಹುತೇಕ ಎಲ್ಲ ದೇವಸ್ಥನಗಳಿಗೂ ತೆರಳಲು ಸೌಲಭ್ಯಗಳಿರುವುದನ್ನು ಕಾಣಬಹುದು.

ಮೇಕ್ ಮೈ ಟ್ರಿಪ್ ವತಿಯಿಂದ ಸ್ಥಳೀಯ ಹೋಟೆಲ್ ಬುಕ್ಕಿಂಗ್ ಮೇಲೆ 2000 ರೂ. ಹಣ ಮರಳಿ ಪಡೆಯಿರಿ*

ಇದರ ಹೊರತಾಗಿಯೂ ಕೆಲವು ದೇವಸ್ಥಾನಗಳನ್ನು ನಡೆದುಕೊಂಡು ಅಥವಾ ಟ್ರೆಕ್ ಮಾಡುತ್ತ ಮಾತ್ರವೆ ತಲುಪಲು ಸಾಧ್ಯವಿದೆ. ಇದಕ್ಕೆ ಮುಖ್ಯ ಕಾರಣ ಈ ದೇವಸ್ಥಾನಗಳು ಅತ್ಯಂತ ಎತ್ತರದ ಭೂಭಾಗದಲ್ಲಿ ಸ್ಥಿತವಿರುವುದು ಮಾತ್ರವಲ್ಲದೆ ವಿಪರೀತ ಎನ್ನಬಹುದಾದ ಹವಾಗುಣವಿರುವ ಪ್ರದೇಶಗಳಲ್ಲಿ ನೆಲೆಸಿವೆ. ಅಲ್ಲದೆ, ಕಡಿದಾದ ದಾರಿ ಉಬ್ಬು ತೆಗ್ಗುಗಳೆ ಈ ಪ್ರದೇಶಕ್ಕೆ ವಾಹನಗಳನ್ನು ಸಹಜವಾಗಿ ನಿಶೀದ್ಧಿಸಿವೆ.

ವಿಶೇಷ ಲೇಖನ : ಎತ್ತರದಲ್ಲಿ ನೆಲೆಸಿರುವ ತುಂಗನಾಥ

ಮತ್ತೊಂದು ವಿಷಯವೆಂದರೆ ದೇವರ ದರ್ಶನಕ್ಕಾಗಿ ಎಷ್ಟು ಕಷ್ಟ ಪಡುತ್ತೇವೊ ಅಷ್ಟೆ ಬೇಗನೆ ಆ ಪರಮಾತ್ಮನ ಕೃಪೆಗೆ ಪಾತ್ರರಾಗುತ್ತೇವೆ ಎಂಬ ವಿಶ್ವಾಸವು ಹಿಂದೂ ಭಕ್ತರಲ್ಲಿ ನೆಲೆಯೂರಿದೆ. ಪ್ರಸ್ತುತ ಲೇಖನದ ಮೂಲಕ ಭಾರತದ ಕೆಲವು ಕಷ್ಟಕರವಾಗಿ ನಡೆಯುತ್ತ ತಲುಪಬಹುದಾದ ದಿವ್ಯ ದೇವಸ್ಥಾನಗಳ ಕುರಿತು ತಿಳಿಯಿರಿ.

ವಿಶೇಷ ಲೇಖನ : ಚಾರ್ ಧಾಮ್ ಯಾತ್ರೆ ಎಂದರೇನು?

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಈ ಪಟ್ಟಿಯಲ್ಲಿ ಮೊದಲಿಗೆ ಬರುವುದು ಅಮರನಾಥ. ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಮಹತ್ವದ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿರುವ ಈ ಗುಹಾ ದೇವಾಲಯವು ಸುತ್ತಲೂ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದ್ದು, ಸಮುದ್ರ ಮಟ್ಟದಿಂದ 3,888 ಮೀ (12,756 ಅಡಿಗಳು) ಗಳಷ್ಟು ಎತ್ತರದಲ್ಲಿ ಸ್ಥಿತವಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸ್ಥಿತವಿರುವ ಅಮರನಾಥವು ರಾಜಧಾನಿ ಶ್ರೀನಗರದಿಂದ ಸುಮಾರು 141 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಕ್ಷೇತ್ರವನ್ನು ಪಹಲ್ಗಾಮ್ ಪಟ್ಟಣದ ಮೂಲಕ ಚಾರಣ ಮಾಡುತ್ತ ತಲುಪಬಹುದಾಗಿದೆ.

ಚಿತ್ರಕೃಪೆ: Nittin sain

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಗಂಗೋತ್ರಿ : ಉತ್ತರಾಖಂಡ ರಾಜ್ಯದ ಉತ್ತರಕಾಶಿ ಎಂಬ ಜಿಲ್ಲೆಯಲ್ಲಿ ನೆಲೆಸಿರುವ ಗಂಗೋತ್ರಿ ಎಂಬ ಕ್ಷೇತ್ರವು ಹಿಂದೂ ಧರ್ಮದವರ ಪಾಲಿಗೆ ಅತಿ ಮಹತ್ವ ಪಡೆದಿರುವ ಸ್ಥಳವಾಗಿದೆ. ಭಾಗೀರಥಿ ನದಿಯ ಉಗಮ ಸ್ಥಾನವಾದ ಗೌಮುಖ (ಗೋಮುಖ) ಹಿಮನದಿಯು ಗಂಗೋತ್ರಿಯಿಂದ ಕೇವಲ 18 ಕಿ.ಮೀ ದೂರದಲ್ಲಿದ್ದು, ನಡಿಗೆಯಿಂದ ಮಾತ್ರವೆ ಇಲ್ಲಿ ತಲುಪಬಹುದಾಗಿದೆ.

ಚಿತ್ರಕೃಪೆ: envybalki

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಉತ್ತರಾಖಂಡ ರಾಜ್ಯವನ್ನು "ದೇವ ಭೂಮಿ" ಎಂಬ ಹೆಸರಿನಿಂದಲೂ ಸಹ ಸಂಭೋದಿಸಲಾಗುತ್ತದೆ. ಈ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ತುಂಗನಾಥವು ಶಿವನ ದೇವಸ್ಥಾನಕ್ಕೆ ಬಹು ಪ್ರಖ್ಯಾತವಾಗಿದೆ. ಕಲ್ಮಶರಹಿತ ವಾತಾವರಣದ, ತಾಜಾ ಹಸಿರಿನ ಛಾಯೆಗಳ, ರುದ್ರಮಯ ಪರ್ವತ ರಹದಾರಿಗಳ, ಗಡ ಗಡ ನಡುಗಿಸುವಂತಹ ಶಿತವಲಯದ ತುಂಗನಾಥದಲ್ಲಿ ನೆಲೆಸಿರುವ ಶಿವನು ವಿಶ್ವದ ಅತಿ ಎತ್ತರದಲ್ಲಿ ನೆಲೆಸಿರುವ ಶಿವನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಹೌದು, ಭೂಮಟ್ಟದಿಂದ ಇಷ್ಟೊಂದು ಎತ್ತರದಲ್ಲಿರುವ ಶಿವನ ಈ ದೇವಸ್ಥಾನವನ್ನು ಪ್ರಪಂಚದಲ್ಲೆಲ್ಲೂ ಕಾಣಲಾಗದು. ಹರಿದ್ವಾರದಿಂದ ಚೊಪ್ಟಾ ತಲುಪಿ ಅಲ್ಲಿಂದ ಐದು ಕಿ.ಮೀ ಮೊನಚಾದ ಚಾರಣದ ಮೂಲಕ ತುಂಗನಾಥ ತಲುಪಬಹುದಾಗಿದೆ.

ಚಿತ್ರಕೃಪೆ: Varun Shiv Kapur

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಹೇಮಕುಂಡ : ಹೇಮಕುಂಟ ಎಂತಲೂ ಸಹ ಕರೆಯಲ್ಪಡುವ ಈ ತಾಣವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದ್ದು ಸಿಖ್ ಧರ್ಮದವರ ಪಾಲಿಗೆ ಪವಿತ್ರ ಕ್ಷೇತ್ರವಾಗಿ ಸೆಳೆಯುತ್ತದೆ. ಹಿಮನದಿಯೊಂದರ ಬಳಿ ಈ ಕ್ಷೇತ್ರವು ನೆಲೆಸಿದ್ದು ಸುತ್ತಲೂ ಏಳು ಪರ್ವತ ಶಿಖರಗಳಿಂದ ಆವರಿಸಿದೆ. ಸಮುದ್ರ ಮಟ್ಟದಿಂದ ಸುಮಾರು 15200 ಅಡಿ ಎತ್ತರದಲ್ಲಿದ್ದು ಇದನ್ನು ರಿಷಿಕೇಶ-ಬದ್ರಿನಾಥ್ ಹೆದ್ದಾರಿಯಲ್ಲಿರುವ ಗೋಬಿಂದಘಾಟ್ ಮೂಲಕ ಚಾರಣದಿಂದ ಮಾತ್ರವೆ ತಲುಪಬಹುದಾಗಿದೆ.

ಚಿತ್ರಕೃಪೆ: Panesar00888

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಕಾರ್ತಿಕ ಸ್ವಾಮಿ ದೇವಸ್ಥಾನ : ಉತ್ತರಾಖಂಡದ ರುದ್ರಪ್ರಯಾಗ್ ಕ್ಷೇತ್ರದ ಬಳಿ ಶಿವನ ಮಗನಾದ ಕಾರ್ತಿಕೇಯನಿಗೆ ಮುಡಿಪಾದ ಈ ದೇವಾಲಯವಿರುವುದನ್ನು ಕಾಣಬಹುದು. ರುದ್ರಪ್ರಯಾಗ್-ಪೊಖ್ರಿ ಮಾರ್ಗದಲ್ಲಿರುವ ಕನಕ್ ಚೌರಿ ಎಂಬ ಗ್ರಾಮದಿಂದ ಮೂರಿ ಕಿ.ಮೀ ಗಳಷ್ಟು ನಡಿಗೆಯಿಂದ ಮಾತ್ರವೆ ಈ ದೇವಸ್ಥಾನವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: commons.wiki

"ಟ್ರೆಕ್" ದೇವಾಲಯಗಳು/ಸ್ಥಳಗಳು:

ನೀಲಕಂಠ ಮಹಾದೇವ ದೇವಾಲಯ : ಉತ್ತರಾಖಂಡದ ರಿಶಿಕೇಶದಿಂದ 32 ಕಿ.ಮೀ ಗಳಷ್ಟು ದೂರದಲ್ಲಿ ಪಂಕಜಾ ಹಾಗೂ ಮಧುಮತಿ ನದಿಗಳು ಸಂಗಮ ಹೊಂದುವ ಸ್ಥಳದ ಬಳಿ ಶಿವನಿಗೆ ಮುಡಿಪಾದ ಈ ಸುಂದರ ದೇವಾಲಯವಿದೆ. ಸುತ್ತಲೂ ದಟ್ಟವಾದ ಗಿಡ ಮರಗಳ ಕಾಡಿದ್ದು ಭಕ್ತಾದಿಗಳು ಚಾರಣದ ಮೂಲಕ ಈ ದೇವಸ್ಥಾನಕ್ಕೆ ತೆರಳುತ್ತಾರೆ. ದೇವಾಲಯ ಆವರಣದಲ್ಲಿ ನೈಸರ್ಗಿಕ ನೀರಿನ ಬುಗ್ಗೆಯಿದ್ದು ಅದರಲ್ಲಿ ಪವಿತ್ರ ಸ್ನಾನ ಮಾಡಿ ದೇವಸ್ಥಾನ ಪ್ರವೇಶಿಸುತ್ತಾರೆ. ವರ್ಷದಲ್ಲಿ ಎರಡು ಬಾರಿ ಅಂದರೆ ಮಹಾ ಶಿವರಾತ್ರಿ ಹಾಗೂ ಶ್ರಾವಣದ ಶಿವರಾತ್ರಿಯನ್ನು ಇಲ್ಲಿ ಸಡಗರದಿಂದ ಆಚರಿಸಲಾಗುತ್ತದೆ.

ಚಿತ್ರಕೃಪೆ: Rahuldewangan

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಪಂಚ ಕೇದಾರಗಳ ಪೈಕಿ ಒಂದಾಗಿರುವ ಹಾಗೂ ಕ್ರಮವಾಗಿ ನಾಲ್ಕನೇಯದಾಗಿ ಭೇಟಿ ನೀಡಲಾಗುವ ಮಧ್ಯ ಮಹೇಶ್ವರ ಅಥವಾ ಮಧ್ ಮಹೇಶ್ವರ ದೇವಸ್ಥಾನವನ್ನು ಚಾರಣದ ಮೂಲಕ ತಲುಪಬಹುದಾಗಿದ್ದು, ಇದು ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಪ್ರದೇಶದ ಮನಸೂನಾ ಹಳ್ಳಿಯಲ್ಲಿದೆ.

ಚಿತ್ರಕೃಪೆ: Bodhisattwa

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಪಂಚ ಕೇದಾರಗಳ ಪೈಕಿ ಮೂರನೇಯ ಸ್ಥಳವಾಗಿ ಭೇಟಿ ನೀಡಲ್ಪಡುವ ರುದ್ರನಾಥ ದೇವಾಲಯವನ್ನು ಕೆಲವೊಮ್ಮೆ ಕಷ್ಟಕರ ಚಾರಣ ಎಂದೆ ಹೇಳಲಾಗುತ್ತದೆ. ಗಡ್ವಾಲ್ ಉತ್ತರಾಖಂಡದ ಪದೇಶದಲ್ಲಿ ಬರುವ ಈ ದೇವಾಲಯ ಸುತ್ತಲೂ ಕಡಿದಾದ ಬೆಟ್ಟ ಮಾರ್ಗಗಳು, ದಟ್ಟ ಮರಗಳಿಂದ ಆವೃತವಾಗಿದೆ. ಗೋಪೇಶ್ವರ ಪಟ್ಟಣದಿಂದ ಸಾಗರ ಎಂಬ ಗ್ರಾಮದವರೆಗೆ ಮಾತ್ರವೆ ವಾಹನ ಸೌಲಭ್ಯವಿದ್ದು, ಮುಂದೆ ಸಾಗರದಿಂದ ಸುಮಾರು 20 ಕಿ.ಮೀ ಗಳಷ್ಟು ನಡಿಗೆಯ ಮೂಲಕ ಮಾತ್ರವೆ ಈ ದೇವಾಲಯವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Redtigerxyz

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಚಂಡಿ ದೇವಿ ದೇವಾಲಯ : ಉತ್ತರಾಖಂಡದ ಪವಿತ್ರ ಕ್ಷೇತ್ರವಾದ ಹರಿದ್ವಾರದ ಬಳಿಯಿರುವ ಈ ದೇವಾಲಯವು ಚಂಡಿ ದೇವಿಗೆ ಸಮರ್ಪಿತವಾಗಿದೆ. ಈ ದೇವಾಲಯದ ನಿರ್ಮಾಣ 1929 ರಲ್ಲಾಯಿತಾದರೂ, ದೇವಿಯ ಮೂಲ ವಿಗ್ರಹವು ಎಂಟನೇಯ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಬೇಡಿದ ಮನೋಕಾಮನೆಗಳನ್ನು ಪೂರೈಸುವ ದೇವಾಲಯಗಳ ಪೈಕಿ ಇದೂ ಒಂದು ಎನ್ನಲಾಗುತ್ತದೆ. ದೇವಸ್ಥಾನವು ಪೂರ್ವ ಶಿವಾಲಿಕ್ ಬೆಟ್ಟ ಶ್ರೇಣಿಗಳ ನೀಲ್ ಪರ್ವತ ಎಂಬ ಬೆಟ್ಟದ ತುದಿಯಲ್ಲಿ ಸ್ಥಿತವಿದ್ದು ಟ್ರೆಕ್ ಮೂಲಕ ತಲುಪಬಹುದಾಗಿದೆ. ಹರಿದ್ವಾರದ ಹರ್ ಕಿ ಪೌರಿಯಿಂದ ನಾಲ್ಕು ಕಿ.ಮೀ ದೂರವಿದ್ದು ಚಾರಣವನ್ನು ಚಂಡಿ ಘಾಟ್ ಎಂಬಲ್ಲಿಂದ ಆರಂಭಿಸಬೇಕು.

ಚಿತ್ರಕೃಪೆ: World8115

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಇತ್ತೀಚೆಗಷ್ಟೆ ಭಕ್ತರ ಅನುಕೂಲಕ್ಕೆಂದು ಕೇಬಲ್ ಕಾರುಗಳನ್ನು ಸ್ಥಾಪಿಸಲಾಗಿದ್ದು ಅದರ ಮುಖಾಂತರವೂ ಸಹ ದೇವಸ್ಥಾನ ತಲುಪಬಹುದು. ಅದರಲ್ಲೂ ವಿಶೇಷವಾಗಿ ಹಿರಿಯ, ವಯಸ್ಸಾದ ಭಕ್ತರು ಸುಲಭವಾಗಿ ದೇವಸ್ಥಾನ ತಲುಪಬಹುದು. ಈ ಕೇಬಲ್ ಕಾರುಗಳು ನೆಲದಿಂದ ಸುಮಾರು 680 ಅಡಿಗಳಷ್ಟು ಎತ್ತರವಿದ್ದು ಸುಮಾರು 2,430 ಅಡಿಗಳಷ್ಟು ಉದ್ದವನ್ನು ಕ್ರಮಿಸಿ ದೇವಸ್ಥಾನ ತಲುಪುತ್ತವೆ. ದೇವಾಲಯದ ಸುತ್ತಮುತ್ತ ದಟ್ಟವಾದ ಅರಣ್ಯಗಳಿದ್ದು ಸುಂದರ ದೃಶ್ಯಾವಳಿಗಳನ್ನು ಕರುಣಿಸುತ್ತವೆ. ಅಲ್ಲದೆ ದೂರದಲ್ಲಿ ಪ್ರಶಾಂತವಾಗಿ ಹರಿದಿರುವ ಗಂಗಾ ನದಿಯ ನೋಟವು ಸಂತಸ ನೀಡುತ್ತದೆ.

ಚಿತ್ರಕೃಪೆ: Mahatma4711

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಪಂಚ ಕೇದಾರಗಳ ಪೈಕಿ ಮೊದಲನೇಯದಾಗಿ ಭೇಟಿ ನೀಡಲಾಗುವ ಕೇದಾರನಾಥ ದೇವಸ್ಥಾನವನ್ನು ಸುಲಭವಾಗಿ ತಲುಪಲು ಸಾಧ್ಯವಿಲ್ಲ. ಉತ್ತರಾಖಂಡದ ಕೇದಾರನಾಥ ಪಟ್ಟಣದ ಬಳಿ ಮಂದಾಕಿನಿ ನದಿಯ ತಟದಲ್ಲಿ ನೆಲೆಸಿರುವ ಈ ದೇವಸ್ಥಾನವನ್ನು ಸುಮಾರು 14 ಕಿ.ಮೀ ಗಳಷ್ಟು ಚಾರಣ ಮಾಡಿಯೆ ತಲುಪಬೇಕು. ಈ ದೇವಸ್ಥಾನವು ವಿಪರೀತ ವಾತಾವರಣವಿರುವ ಪ್ರದೇಶದಲ್ಲಿರುವುದರಿಂದ ವರ್ಷದಲ್ಲಿ ಆರು ತಿಂಗಳು ಅಂದರೆ ಅಕ್ಷಯ ತೃತಿಯಾ(ಏಪ್ರಿಲ್) ನಿಂದ ಕಾರ್ತಿಕ ಪೂರ್ಣಿಮೆಯವರೆಗೂ(ನವಂಬರ್) ಮಾತ್ರವೆ ತೆರೆದಿರುತ್ತದೆ.

ಚಿತ್ರಕೃಪೆ: wikipedia

"ಟ್ರೆಕ್" ದೇವಾಲಯಗಳು/ಸ್ಥಳಗಳು:

ನಂತರದಲ್ಲಿ, ಇದು ಗಡ್ವಾಲ್ ಹಿಮಾಲಯದ ವ್ಯಾಪ್ತಿಗೆ ಒಳಪಡುವುದರಿಂದ ಅತಿಯಾದ ಹಿಮಪಾತ ಉಂಟಾಗಿ ತಲುಪಲು ಬಹುತೇಕ ಅಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನದ ಶಿವನ ಮೂಲ ಹಾಗೂ ಇತರೆ ಮುಖ್ಯ ವಿಗ್ರಹಾದಿಗಳನ್ನು ಉಖಿಮಠಕ್ಕೆ ತಂದು ಮುಂದಿನ ಆರು ತಿಂಗಳುಗಳವರೆಗೆ ಪೂಜಿಸಲಾಗುತ್ತದೆ. ಕೇದಾರನಾಥನ ದೇವಸ್ಥಾನವನ್ನು ಗೌರಿಕುಂಡದಿಂದ ಚಾರಣ ಮಾಡುತ್ತ ತಲುಪಬೇಕು.

ಚಿತ್ರಕೃಪೆ: Naresh Balakrishnan

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಪಂಚ ಕೇದಾರಗಳ ಪೈಕಿ ಕೊನೆಯದಾಗಿ ದರ್ಶನ ಪಡೆಯಬೇಕಾಗಿರುವ ದೇವಸ್ಥಾನವೆ ಕಲ್ಪೇಶ್ವರ ದೇವಸ್ಥಾನ. ಮೂಲವಾಗಿ ಪಂಚ ಅಂದರೆ ಐದು ಕೇದಾರಗಳು ಶಿವನ ದೇಹದ ಐದು ವಿವಿಧ ಅಂಗಗಳನ್ನು ಸೂಚಿಸುತ್ತವೆ. ಅದರಲ್ಲಿ ಕಲ್ಪೇಶ್ವರವು ಜಟೆಯನ್ನು ಸೂಚಿಸುತ್ತದೆ. ರಿಶಿಕೇಶ-ಬದರಿನಾಥ ರಸ್ತೆಯಲ್ಲಿ ಬರುವ ಹಿಲಾಂಗ್ ಎಂಬ ಸ್ಥಳದಿಂದ 12 ಕಿ.ಮೀ ನಡಿಗೆಯಿಂದ ಈ ದೇವಸ್ಥಾನವನ್ನು ತಲುಪಬಹುದಾಗಿದೆ. ಉಗ್ರಂ ಎಂಬ ಕಣಿವೆಯಲ್ಲಿರುವ ಉಗ್ರಂ ಹಳ್ಳಿಯಿಂದ ಈ ದೇವಸ್ಥಾನ ಕೇವಲ ಎರಡು ಕಿ.ಮೀ ಅಷ್ಟೆ ದೂರ. ಇತ್ತೀಚೆಗೆ ಹಿಲಾಂಗ್ ನಿಂದ ಉಗ್ರಂವರೆಗೆ ಜೀಪು, ಕಾರುಗಳಂತಹ ವಾಹನಗಳು ಓಡಾಡಬಹುದಾದ ರಸ್ತೆ ನಿರ್ಮಿಸಲಾಗಿದ್ದು. ಮೊದಲಿಗೆ ಉಗ್ರಂ ಹಳ್ಳಿಗೆ ತೆರಳಿ ಅಲ್ಲಿಂದ ಎರಡು ಕಿ.ಮೀ ಟ್ರೆಕ್ ಮಾಡಿ ಈ ದೇವಸ್ಥಾನ ತಲುಪಬಹುದು.

ಚಿತ್ರಕೃಪೆ: Str4nd

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಶಬರಿಮಲೆ : ಸ್ವಾಮಿ ಅಯ್ಯಪ್ಪನಿಗೆ ಮುಡಿಪಾದ ಕೇರಳದ ಹಾಗೂ ದಕ್ಷಿಣ ಭಾರತದ ಅತಿ ದೊಡ್ಡ ತೀರ್ಥ ಕ್ಷೇತ್ರಗಳ ಪೈಕಿ ಒಂದಾದ ಸಹಬರಿಮಲೆ ದೇವಸ್ಥಾನವನ್ನೂ ಸಹ ಚಾರಣದ ಮುಖಾಂತರವಷ್ಟೆ ತಲುಪಬಹುದಾಗಿದೆ. ಎರುಮೇಲಿ ಎಂಬ ಸ್ಥಳದಿಂದ ಸಂಪ್ರದಾಯದಂತೆ ಇಂದಿಗೂ ಅನೇಕ ಅಯ್ಯಪ್ಪನ ಭಕ್ತರು ಸುಮಾರು 61 ಕಿ.ಮೀ ಗಳಷ್ಟು ಬೆಟ್ಟಗುಡ್ಡಗಳ ಚಾರಣ ಕೈಗೊಂಡು ಶಬರಿಮಲೆ ದೇವಸ್ಥಾನಕ್ಕೆ ತಲುಪುತ್ತಾರೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಉದ್ದವನ್ನು ಇನ್ನಷ್ಟು ಕಡಿಮೆಗೊಳಿಸುವ ನಿಟ್ಟಿನಿಂದ ಪಂಬಾ ನದಿಯವರೆಗೂ ಸಾರಿಗೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಪಂಬಾ ನದಿಯಿಂದ ನೀಲಿ ಬೆಟ್ಟದಲ್ಲಿ ನೆಲೆಸಿರುವ ಅಯ್ಯಪ್ಪನ ದರುಶನ ಪಡೆಯಲು ಹತ್ತಿಕೊಂಡೆ ಸಾಗಬೇಕು. ಶಬರಿಮಲೆ ಕುರಿತು ತಿಳಿಯಿರಿ.

ಚಿತ್ರಕೃಪೆ: vinod kannery

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಯಮುನೋತ್ರಿ ದೇವಾಲಯ : ಉತ್ತರಾಖಂಡದ ಉತ್ತರಕಾಶಿ ನಗರದಲ್ಲಿರುವ ಯಮುನೋತ್ರಿ ದೇವಾಲಯವು ದೇವಿ ಯಮುನೆಗೆ ಮುಡಿಪಾದ ದೇವಾಲಯವಾಗಿದ್ದು ನಡಿಗೆಯ ಮೂಲಕ ಮಾತ್ರವೆ ತಲುಪಬಹುದಾಗಿದೆ. ಇಷ್ಟವಿದ್ದಲ್ಲಿ ತೆರಳಲು ಕುದುರೆಗಳು ಬಾಡಿಗೆಗೆ ದೊರೆಯುತ್ತವೆ. ಆದರೆ ಸಾಕಷ್ಟು ಭಕ್ತಾದಿಗಳು ನಡೆಯುವುದನ್ನೆ ಹೆಚ್ಚು ಇಷ್ಟಪಡುತ್ತಾರೆ. ಮೊದಲಿ ಹನುಮನ್ ಚಟ್ಟಿ ಅಥವಾ ಜಾನಕಿ ಚಟ್ಟಿಯನ್ನು ತಲುಪಿ ಅಲ್ಲಿಂದ ಚಾರಣ ಕೈಗೊಳ್ಳಬೇಕು. ಹನುಮಾನ್ ಚಟ್ಟಿಯಿಂದ ಮಾಡುವ ಚಾರಣವು ಅತ್ಯಂತ ಅದ್ಭುತವಾಗಿದ್ದು ಪ್ರಕೃತಿಯ ಸುಂದರ ದೃಶ್ಯಾವಳಿಗಳನ್ನು ಕರುಣಿಸುತ್ತವೆ.

ಚಿತ್ರಕೃಪೆ: Atarax42

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಉತ್ತರಾಖಂಡದ ದೇವಪ್ರಯಾಗ್-ಪ್ರತಾಪನಗರ ತಾಲೂಕುಗಳ ಸರಹದ್ದಿನಲ್ಲಿರುವ ಪರ್ವತವೊಂದರ ಮೇಲೆ ಸ್ಥಿತವಿರುವ ಚಂದ್ರಬದನಿ ದೇವಾಲಯ ಟ್ರೆಕ್ ಮೂಲಕ ತಲುಪಬಹುದಾದ ಚಿಕ್ಕದಾದ ಆದರೆ ವಿಶೀಷ್ಟವಾದ ದೇವಾಲಯವಾಗಿದೆ. ದಂತಕಥೆಯ ಪ್ರಕಾರ ಸತಿಯ ಮುಂಡ ಭಾಗವು ಇಲ್ಲಿ ಬಿದ್ದಿತ್ತೆನ್ನಲಾಗಿದೆ. ದೇವಪ್ರಯಾಗದಿಂದ ಜಮಿನಿಖಾಲ್ ಎಂಬಲ್ಲಿಗೆ ತಲುಪಿ ಅಲ್ಲಿಂದ ಚಾರಣದ ಮೂಲಕ ಈ ದೇವಸ್ಥಾನವನ್ನು ತಲುಪಬಹುದು. ಈ ದೇವಸ್ಥಾನದ ಆವರಣದಿಂದ ಸುರಖಂಡ, ಬದರಿ ಹಾಗೂ ಕೇದಾರ ಶಿಖರ ಶೃಂಗಗಳ ಅದ್ಭುತ ನೋಟವನ್ನು ಸವಿಯಬಹುದು.

ಚಿತ್ರಕೃಪೆ: ramesh Iyanswamy

"ಟ್ರೆಕ್" ದೇವಾಲಯಗಳು/ಸ್ಥಳಗಳು:

ಧರಿ ದೇವಿ ದೇವಾಲಯ : ಉತ್ತರಾಖಂಡ ಧರಿ ಎಂಬ ಹಳ್ಳಿಯಲ್ಲಿರುವ ಧರಿ ದೇವಿಯು ಪ್ರದೇಶದ ಮುಖ್ಯ ದೇವತೆಯಾಗಿದ್ದಾಳೆ. ದಿನ ಕಳೆದಂತೆ ದೇವಿಯು ಹುಡುಗಿಯಿಂದ ಮಹಿಳೆಯಾಗಿ ನಂತರ ಮುದುಕಿಯ ಹಾಗೆ ಗೋಚರಿಸುತ್ತಾಳೆಂದು ಹೇಳಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಧರಿ ದೇವಿಯ ಕೇವಲ ತಲೆ ಭಾಗವನ್ನು ಮಾತ್ರ ಇಲ್ಲಿ ಕಾಣಬಹುದು. ಇನ್ನುಳಿದ ಭಾಗವು ರುದ್ರಪ್ರಯಾಗ ಬಳಿಯಿರುವ ಕಾಳಿ ಮಠದಲ್ಲಿ ಕಾಳಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಕಾಲಿಯಾ ಸೌರ್ ಎಂಬ ಪ್ರದೇಶದಿಂದ ಟ್ರೆಕ್ ಮೂಲಕ ಈ ದೇವಸ್ಥಾನವನ್ನು ತಲುಪಬಹುದಾಗಿದೆ. ಅಲಕನಂದಾ ನದಿಗೆ ಕಟ್ಟಲಾಗಿರುವ ಸೇತುವೆಯ ಮೇಲಿಂದ ಧರಿ ಹಳ್ಳಿಗೆ ತಲುಪಿ ದೇವಸ್ಥಾನ ತಲುಪಬಹುದು. ಇನ್ನೂ ಕಾಲಿಯಾ ಸೌರ್ ಉತ್ತರಾಖಂಡ ಶ್ರೀನಗರ - ಬದರಿ ರಸ್ತೆಯಲ್ಲಿದ್ದು ತಲುಪಲು ಸಾರಿಗೆ ವ್ಯವಸ್ಥೆಯಿದೆ.

ಚಿತ್ರಕೃಪೆ: Aloak1

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X